ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು
ಚಿತ್ರ: ಆಕಸ್ಮಿಕ. ಸಾಹಿತ್ಯ ಮತ್ತು ಸಂಗೀತ: ಹಂಸಲೇಖ
ಗಾಯನ: ಡಾ. ರಾಜ್‌ಕುಮಾರ್
ಹೇ ಹೇ ಬಾಜೋ. ಟಾಣ ಟಕಟಕಟ.. ಟಾಣ ಟಕಟಕಟ.. ಹೇ ಹೇ..
ಹುಟ್ಟಿದರೇ ಕನ್ನಡ ನಾಡಲ್ ಹುಟ್ಟಬೇಕು
ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು
ಬದುಕಿದು ಜಟಕಾ ಬಂಡಿ,
ಇದು ವಿ ಓಡಿಸುವ ಬಂಡಿ
ಬದುಕಿದು ಜಟಕಾ ಬಂಡಿ
ವಿ ಅಲೆದಾಡಿಸುವಾ ಬಂಡಿ… ||ಪ||
ಕಾಶಿಲಿ ಸ್ನಾನ ಮಾಡು, ಕಾಶ್ಮೀರ ಸುತ್ತಿ ನೋಡು
ಜೋಗದ ಗುಂಡಿ ಒಡೆಯ ನಾನೆಂದು ಕೂಗಿ ಹಾಡು
ಅಜಂತ ಎಲ್ಲೋರವ ಬಾಳಲ್ಲಿ ಒಮ್ಮೆ ನೋಡು
ಬಾದಾಮಿ ಐಹೊಳೆಯ ಚೆಂದಾನ ತೂಕಮಾಡು
ಕಲಿಯೋಕೆ ಕೋಟಿ ಭಾಷೆ, ಆಡೋಕ್ಕೆ ಒಂದೇ ಭಾಷೆ…
ಕನ್ನಡಾ… ಕನ್ನಡಾ… ಕಸ್ತೂರಿ ಕನ್ನಡಾ ||೧||
ಧ್ಯಾನಕ್ಕೆ ಭೂಮಿ ಇದು, ಪ್ರೇಮಕ್ಕೆ ಸ್ವರ್ಗ ಇದು
ಸ್ನೇಹಕ್ಕೆ ಶಾಲೆ ಇದು, ಜ್ಞಾನಕ್ಕೆ ಪೀಠ ಇದು
ಕಾವ್ಯಕ್ಕೆ ಕಲ್ಪ ಇದು, ಶಿಲ್ಪಕ್ಕೆ ತಲ್ಪ ಇದು
ನಾಟ್ಯಕ್ಕೆ ನಾಡಿ ಇದು, ನಾದಾಂತರಂಗವಿದು
ಕುವೆಂಪು ಬೇಂದ್ರೆಯಿಂದ, ಕಾರಂತ ಮಾಸ್ತಿಯಿಂದ
ಧನ್ಯವೀ ಕನ್ನಡ… ಗೋಕಾಕಿನ ಕನ್ನಡಾ. ||೨||
ಬಾಳಿನ ಬೆನ್ನು ಹತ್ತಿ ನೂರಾರು ಊರು ಸುತ್ತಿ
ಏನೇನೋ ಕಂಡ ಮೇಲೂ ನಮ್ಮೂರೇ ನಮಗೆ ಮೇಲು
ಕೈಲಾಸಂ ಕಂಡ ನಮಗೆ ಕೈಲಾಸ ಯಾಕೆ ಬೇಕು?
ದಾಸರ ಕಂಡ ನಮಗೆ ವೈಕುಂಠ ಯಾಕೆ ಬೇಕು?
ಮುಂದಿನ ನನ್ನ ಜನ್ಮ ಬರೆದಿಟ್ಟನಂತೆ ಬ್ರಹ್ಮ
ಇಲ್ಲಿಯೇ… ಇಲ್ಲಿಯೇ…. ಈ ಮಣ್ಣಿನಲ್ಲಿಯೇ
ಎಂದಿಗೂ ನಾನಿಲ್ಲಿಯೇ…. ||೩||
ಇದು ಸಮಸ್ತ ಕನ್ನಡಿಗರ ನೆಚ್ಚಿನ ಹಾಡು, ಮೆಚ್ಚಿನ ಹಾಡು. ಕರುನಾಡ ಪ್ರಭಾವಳಿಗೆ ಸಾಕ್ಷಿ ಹೇಳುವ ಹಾಡು. ಹಸು ಕಂದಮ್ಮಗಳೂ ತಾಳ ಹಾಕುವಂತೆ, ಮುಪ್ಪಾನು ಮುದುಕರನ್ನೂ ಕುಣಿಯುವಂತೆ ಮಾಡುವ ಹಾಡು. ಹೌದು. ಈ ಹಾಡಿನ ಪ್ರತಿ ಅಕ್ಷರದಲ್ಲಿ ಕನ್ನಡದ ಕಂಪಿದೆ. ಕನ್ನಡದ ಇಂಪಿದೆ. ಜನಪದ ಕುಣಿತದ ವೈಭವವಿದೆ. ಈ ಕಾರಣದಿಂದಲೇ, ನಾಡಗೀತೆ ಪಡೆದುಕೊಂಡಷ್ಟೇ ಜನಪ್ರಿಯತೆಯನ್ನು ಈ ಚಿತ್ರಗೀತೆಯೂ ಪಡೆದುಕೊಂಡಿದೆ. ನಿದ್ದೆ ಯಲ್ಲಿ ನಗುವ ಕಂದನ ಮೊಗದಷ್ಟ ಚೆಂದಕ್ಕಿರುವ ಈ ಹಾಡು ಶುರು ವಾಗುವುದು ಹೀಗೆ: ‘ ಹುಟ್ಟಿದರೇ ಕನ್ನಡ ನಾಡಲ್ ಹುಟ್ಟಬೇಕು, ಮೆಟ್ಟಿ ದರೇ ಕನ್ನಡ ಮಣ್ಣ ಮೆಟ್ಟಬೇಕು….’
೧೯೯೩ರಲ್ಲಿ ಡಾ. ರಾಜ್ ಕುಮಾರ್ ಅಭಿನಯದ ‘ ಆಕಸ್ಮಿಕ’ ಚಿತ್ರ ತೆರೆ ಕಂಡ ಸಂದರ್ಭದಲ್ಲಿ ಈ ಹಾಡು ಸೃಷ್ಟಿಸಿದ ಸಂಚಲನದ ಬಗ್ಗೆ ಹೇಳಲೇಬೆಕು. ಉತ್ತರ ಕರ್ನಾಟಕದ ಸೀಮೆಯ ಜನ ಥಿಯೇಟರಿನಲ್ಲಿ ಈ ಹಾಡು ಬಂದಾಕ್ಷಣ ಭಾವುಕರಾಗುತ್ತಿದ್ದರು. ಬೆಳ್ಳಿತೆರೆಗೆ ಪೂಜೆ ಮಾಡಿಸುತ್ತಿದ್ದರು. ತೆರೆಯ ಮೇಲೆ ಥೇಟಾನುಥೇಟ್ ಉತ್ತರ ಕರ್ನಾಟಕದ ಆಸಾಮಿಯಂತೆ ಕುಣಿಯುತ್ತಿದ್ದ ಅಣ್ಣಾವ್ರಿಗೆ ‘ದೃಷ್ಟಿ’ ತೆಗೆಯುತ್ತಿದ್ದರು. ನಂತರ, ಹಾಡಿನುದ್ದಕ್ಕೂ ತಾವೂ ಕುಣಿಯುತ್ತಿದ್ದರು. ಅಷ್ಟೇ ಅಲ್ಲ, ಈ ಹಾಡನ್ನೇ ಇನ್ನೊಂದ್ಸಲ ತೋರಿಸಿ ಎಂದು ಥಿಯೇಟರ್ ಮಾಲೀಕರಿಗೆ ದುಂಬಾಲು ಬೀಳುತ್ತಿದ್ದರು.
ಇಂಥದೊಂದು ಅಪರೂಪದ, ಅಕ್ಕರೆಯ ಹಾಡು ಹುಟ್ಟಿದ್ದಾದರೂ ಹೇಗೆ? ಹಂಸಲೇಖ ಎಂಬ ಅಣ್ಣಯ್ಯನಿಗೆ ಗುಲಾಬಿ ಪಕಳೆಯಂಥ ಪದಗಳು ಹೊಳೆದಿದ್ದಾದರೂ ಹೇಗೆ? ಈ ಹಾಡಿನ ಹಿಂದೆಯೂ ಒಂದು ಕತೆ ಇರಬಹುದೇ? ಇಂಥ ಪ್ರಶ್ನೆಗಳ ಸುತ್ತಲೂ ಗಿರಕಿ ಹೊಡೆಯುತ್ತಿದ್ದಾಗ ‘ಆಕಸ್ಮಿಕ’ವಾಗಿ ಸಾಕ್ಷಾತ್ ಹಂಸಲೇಖ ಅವರೇ ಮಾತಿಗೆ ಸಿಕ್ಕಿಬಿಟ್ಟರು. ಈ ಹಾಡಿನ ಹಿಂದಿರುವ ಕಥೆಯನ್ನು ಅವರು ವಿವರಿಸಿದ್ದು ಹೀಗೆ:
ತ.ರಾ.ಸು. ಅವರ ಆಕಸ್ಮಿಕ-ಅಪರಾ-ಪರಿಣಾಮ ಈ ಮೂರು ಕಾದಂಬರಿಗಳನ್ನು ಆಧರಿಸಿ ತಯಾರಾದ ಚಿತ್ರ ‘ಆಕಸ್ಮಿಕ’. ಅದಕ್ಕೆ ನಾಗಾಭರಣ ಅವರ ನಿರ್ದೇಶನವೆಂಬುದು ಖಚಿತವಾಗಿತ್ತು. ಸಂಗೀತ, ಸಾಹಿತ್ಯ ಒದಗಿಸಲು ನನಗೆ ಕರೆ ಬಂತು. ಚಿ. ಉದಯಶಂಕರ್ ಅವರು ಇದ್ದಾಗಲೂ ಅಣ್ಣಾವ್ರ ಚಿತ್ರಕ್ಕೆ ಹಾಡು ಬರೆಯಲು ಎರಡನೇ ಬಾರಿ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಅಂದುಕೊಂಡೆ. ಆ ಕಥೆಗೆ ತಿಂಗಳಾನುಗಟ್ಟಲೆ ಸ್ಕ್ರಿಪ್ಟ್ ವರ್ಕ್ಸ್ ನಡೆಯಿತು. ಸದಾಶಿವನಗರದಲ್ಲಿದ್ದ ಶಿವರಾಜ್‌ಕುಮಾರ್ ಅವರ ಮನೆಯಲ್ಲಿ ಎಲ್ಲ ಚರ್ಚೆಗಳೂ ನಡೆಯು ತ್ತಿದ್ದವು. ಚರ್ಚೆಯಲ್ಲಿ ಅಣ್ಣಾವ್ರು, ಪಾರ್ವತಮ್ಮ, ವರದಪ್ಪ, ನಾಗಾ ಭರಣ, ಉದಯಶಂಕರ್, ನಾನು, ಸಹಾಯಕ ನಿರ್ದೇಶಕರಾಗಿದ್ದ ಪಿ. ಶೇಷಾದ್ರಿ, ರಾಜಶೇಖರ್, ನರಸಿಂಹನ್…. ಹೀಗೆ ಎಲ್ರೂ ಸೇರಿ ಕೊಳ್ತಿದ್ವಿ. ಆಫೀಸ್ ಟೈಮಿಂಗ್ ಥರಾ ಬೆಳಗ್ಗೆ ಒಂಬತ್ತೂವರೆಯಿಂದ ಸಂಜೆಯವರೆಗೆ ತುಂಬ ಶ್ರದ್ಧೆ, ಶಿಸ್ತಿನಿಂದ ಕೆಲಸ ನಡೀತಿತ್ತು. ಊಟೋಪ ಚಾರದ ಸಂದರ್ಭದಲ್ಲಿ ಅಣ್ಣಾವ್ರೇ ಆತಿಥ್ಯಕ್ಕೆ ನಿಂತುಬಿಡ್ತಿದ್ರು. ಒಂದೊಂದೇ ತಿಂಡಿಯನ್ನು ಮುಂದಿಟ್ಟು- ‘ಇದು ತುಂಬಾ ಚನ್ನಾಗಿರ್‍ತದೆ. ಸ್ವಲ್ಪ ಟೇಸ್ಟ್ ನೋಡಿ. ಸಿನಿಮಾದಲ್ಲಿ ಇಂಟರ್‌ವೆಲ್ ಬಿಟ್ಟಾಗ ಕುರುಕಲು ತಿಂಡಿ ತಗೊಳ್ತೀವಲ್ಲ? ಹಾಗೆ ಇದೂನೂ’ ಎಂದು ನಗುತ್ತಿದ್ದರು.
ಚರ್ಚೆಯ ಸಂದರ್ಭದಲ್ಲಿಯೇ ಯಾವ್ಯಾವ ಸಂದರ್ಭದಲ್ಲಿ ಹಾಡುಗಳು ಬರಬೇಕು ಹಾಗೂ ಅವು ಹೇಗಿರಬೇಕೆಂದು ವರದಪ್ಪ ಹಾಗೂ ನಾಗಾಭರಣ ನನಗೆ ಹೇಳಿದ್ದರು. ಕೆಲವೇ ದಿನಗಳಲ್ಲಿ ಹಾಡು ಬರೆದಿದ್ದಾಯ್ತು. ಟ್ಯೂನ್ ಮಾಡಿದ್ದೂ ಆಯ್ತು. ಭಾವ ಪ್ರಧಾನವಾದ ಆ ಟ್ಯೂನ್ ಹಾಡುಗಳು ಎಲ್ಲರಿಗೂ ಇಷ್ಟವಾದವು. ಆದರೆ, ವರದಪ್ಪ ನವರ ತಲೇಲಿ ಬೇರೊಂದು ಯೋಚನೆ ಓಡಾಡ್ತಾ ಇತ್ತು ಅನ್ಸುತ್ತೆ. ಅದೊಂದು ದಿನ ನಾನು ಚರ್ಚೆಗೆಂದು ಹೋಗುತ್ತಿದ್ದಂತೆಯೇ ಕರೆದು ವರದಪ್ಪ ಹೇಳಿದ್ರು: ‘ಹಂಸ ಲೇಖಾ ಅವ್ರೆ, ಈ ಸಿನಿಮಾಕ್ಕೆ ಒಂದು ಮಾಸ್ ಹಾಡು ಬೇಕು. ಬೇಕೇಬೇಕು. ಅದು ಹೇಗಿರ ಬೇಕು, ಹೇಗಿದ್ರೆ ಚೆಂದ, ಯಾವ ಸಂದರ್ಭದಲ್ಲಿ ಬಳಸಿದ್ರೆ ಚೆಂದ ಅನ್ನೋದನ್ನೆಲ್ಲ ಯೋಚಿಸಿ ಮಾಸ್ ಸಾಂಗ್ ಮಾಡಿಬಿಡಿ. ಅದು ಚಿತ್ರದ ಉಳಿದ ಎಲ್ಲ ಹಾಡುಗಳನ್ನು ಮೀರಿಸುವಂಥ ಹಾಡಾಗಬೇಕು…’
ಈ ಸಿನಿಮಾದಲ್ಲಿ ಮಾಸ್ ಸಾಂಗ್‌ನ ಹೇಗೆ ಸೇರಿಸೋದು? ಅಣ್ಣಾವ್ರಿಗೂ ಕಥೆಗೂ ಸೂಟ್ ಆಗೋ ಹಾಗೆ, ಕಥೆಯ ಓಟಕ್ಕೆ ಧಕ್ಕೆ ಬಾರದ ಹಾಗೆ ಇದನ್ನು ಪ್ಲೇಸ್ ಮಾಡುವುದು ಹೇಗೆ ಎಂದು ಯೋಚಿಸ್ತಾನೇ ಇದ್ದೆ. ಏನೂ ಹೊಳೆದಿರಲಿಲ್ಲ. ಆದರೆ, ವರದಪ್ಪನವರು ಮಾತ್ರ ಬಿಡಲಿಲ್ಲ. ದಿನವೂ ಮಾಸ್ ಸಾಂಗ್ ಬಗ್ಗೆ ಕೇಳ್ತಾನೇ ಇದ್ರು…
ಹೀಗಿದ್ದಾಗಲೇ ಅದೊಂದು ದಿನ ಸ್ವಲ್ಪ ಬೇಗನೇ ಶಿವಣ್ಣನ ಮನೆಗೆ ಹೋದೆ. ವರದಪ್ಪ ಹಾಗೂ ಉದಯಶಂಕರ್ ಆಗಲೇ ಚರ್ಚೆಗೆ ಕೂತಿದ್ರು. ನಾನು ಹೋದ ಸ್ವಲ್ಪ ಹೊತ್ತಿಗೇ ರಾಜಶೇಖರ್ ಹಾಗೂ ನರಸಿಂಹನ್ ಬಂದರು. ಈ ಇಬ್ಬರಿಗೂ ರಾತ್ರಿ ಗುಂಡು ಹಾಕುವ ಅಭ್ಯಾ ಸವಿತ್ತು. ಅವತ್ತು ಅದೇಕೋ ರಾತ್ರಿಯ ಹ್ಯಾಂಗೋವರ್‌ನಲ್ಲೇ ಬಂದು ಬಿಟ್ಟಿದ್ರು. ಮುಖದಲ್ಲಿ ಕಳೆಯೇ ಇರಲಿಲ್ಲ. ಪಕ್ಕದಲ್ಲಿ ಕೂತ ಅವರನ್ನು ಕಡೆಗಣ್ಣಲ್ಲೇ ಗಮನಿಸಿದೆ. ತಲೆಯ ತುಂಬಾ ಮಾಸ್‌ಗೀತೆಯ ಟ್ಯೂನ್ ಮತ್ತು ಸಾಹಿತ್ಯದ ಯೋಚನೆಯೇ ತುಂಬಿತ್ತು. ಅದೇ ಗುಂಗಿನಲ್ಲಿ ಹಾರ್ಮೋನಿಯಂ ಮೇಲೆ ಕೈ ಇಟ್ಟು ಏನೋ ಗುನುಗುತ್ತಿದ್ದೆ.
ಅಣ್ಣಾವ್ರು, ಆಗಷ್ಟೇ ಯೋಗ, ಸ್ನಾನ, ಪೂಜೆ ಮುಗಿಸಿ ಶುಭ್ರ ಬಿಳಿ ಷರ್ಟು ಧರಿಸಿ, ಫುಲ್ ಕೈ ತೋಳನ್ನು ಮಡಿಸುತ್ತಾ ಅದ್ಭುತ ಎಂಬಂಥ ಸ್ಟೈಲ್‌ನಲ್ಲಿ ಹಾಲ್‌ನ ಆ ಕಡೆಯಿಂದ ಬಂದು ನಿಂತರು. ವಾಹ್… ಆ ಪ್ರೊಫೈಲ್ ಆಂಗಲ್‌ನಲ್ಲಿ ಅವರನ್ನು ನೋಡ್ತಿದ್ರೆ ಯಾರಿಗೂ ರೆಪ್ಪೆ ಬಡಿಯಲೂ ಮನಸ್ಸಾಗ್ತಿರಲಿಲ್ಲ. ಅಣ್ಣಾವ್ರ ಆ ಚಿತ್ರವನ್ನು ಕಣ್ಣ ಕ್ಯಾಮೆರಾ ದೊಳಗೆ ಇಟ್ಟುಕೊಂಡೇ ನರಸಿಂಹನ್ ಕಡೆ ತಿರುಗಿ ಮೆಲ್ಲಗೆ ಉದ್ಗರಿಸಿದೆ: ನೋಡಯ್ಯ ಆ ಕಡೆ. ನಾವು ಏನಂತ ಹುಟ್ತೀವೋ… ಹುಟ್ಟಿದ್ರೆ ಅಣ್ಣಾವ್ರ ಥರಾ ಹುಟ್ಟಬೇಕು.
ತಕ್ಷಣವೇ ಮ್ಯಾಜಿಕ್ ನಡೆದೇ ಹೋಯ್ತು. ಮಾಸ್ ಹಾಡಿನ ಗುಂಗ ಲ್ಲಿದ್ದ ನನಗೆ ಅಣ್ಣಾವ್ರ ಆ ಲುಕ್ಕೇ ಸೂರ್ತಿ ಆಗಿಬಿಡ್ತು. ಎಫ್ ಶಾರ್ಪ್ (ನಾಲ್ಕೂವರೆ ಮನೆ ಶ್ರುತಿ) ನನ್ನ ಫೇವರಿಟ್. ಅದರಲ್ಲಿ ಟ್ಯೂನ್‌ನ ಪ್ರಯತ್ನಿಸ್ತಿದ್ದೆ. ಆ ಕ್ಷಣದಲ್ಲೇ ಅದಕ್ಕೆ ಹೊಂದುವಂಥ ಮೊದಲ ಸಾಲು ಹೊಳೆದೇ ಬಿಡ್ತು: ‘ಹುಟ್ಟಿದರೇ ಕನ್ನಡ ನಾಡಲ್ ಹುಟ್ಟಬೇಕು…’ ಅದರ ಹಿಂದೆಯೇ ‘ಮೆಟ್ಟಿದರೇ ಕನ್ನಡ ಮಣ್ಣ ಮೆಟ್ಟಬೇಕು’ ಎಂಬ ಇನ್ನೊಂದು ಸಾಲು ಕೂಡ ತಂತಾನೇ ಬಂದುಬಿಡ್ತು. ವರದಪ್ಪ ಹಾಗೂ ಅಣ್ಣಾವ್ರ ಮುಂದೆ ಆ ಎರಡು ಸಾಲುಗಳನ್ನೇ ಮತ್ತೆ ಮತ್ತೆ ಹೇಳ್ತಾ ಹೋದೆ.
ವಿಲನ್‌ನನ್ನು ಹಿಡಿಯುವ ನೆಪದಲ್ಲಿ ನಾಯಕ ವೇಷ ಮರೆಸಿಕೊಂಡು ಹುಬ್ಬಳ್ಳಿಗೆ ಹೋಗ್ತಾನೆ ಎಂದು ವರದಪ್ಪ ಹಾಗೂ ನಾಗಾಭರಣರು ಹೇಳಿದ್ದ ಮಾತು ಆಗಲೇ ನೆನಪಿಗೆ ಬಂತು. ಆ ಸಂದರ್ಭಕ್ಕೇ ಈ ಹಾಡು ಹಾಕಿದ್ರೆ ಹೇಗೆ ಅನ್ನಿಸ್ತು. ಅದನ್ನೇ ವರದಪ್ಪ ನವರಿಗೆ ಹೇಳುತ್ತಾ- ‘ಸಾರ್, ಹುಬ್ಬಳ್ಳಿಯ ಸಂದರ್ಭದಲ್ಲಿ ಮಾರುವೇಷ, ಜಟಕಾಗಾಡಿ ಎಲ್ಲವನ್ನೂ ಹಾಡಿನ ಮೂಲಕ ತರಬಹುದು. ಅದಕ್ಕೆ ತಕ್ಕಂತೆ ಹಾಡಾಗುತ್ತೆ’ ಅಂದೆ.
ಪಲ್ಲವಿಯ ಮುಂದಿನ ಸಾಲು ಹುಟ್ಟಿದ್ದು ಕೂಡಾ ಸ್ವಾರಸ್ಯಕರವೇ. ‘ಆಕಸ್ಮಿಕ’ ಸಿನಿಮಾದಲ್ಲಿ ವಿ ನಾಯಕನ ಬದುಕಲ್ಲಿ ಏನೆಲ್ಲಾ ಆಟವಾ ಡುತ್ತೆ. ಚಿತ್ರ ತಂಡದವರೆಲ್ಲ ಅದನ್ನೇ ಮತ್ತೆ ಮತ್ತೆ ನೆನಪಿಸಿಕೊಂಡು ಡಿವಿಜಿಯವರ ಬದುಕು ಜಟಕಾ ಬಂಡಿ, ವಿ ಅದರ ಸಾಹೇಬ ಎಂಬ ಸಾಲುಗಳನ್ನೇ ಉದ್ಗರಿಸ್ತಾ ಇದ್ರು. ಪಲ್ಲವಿ ಮುಂದುವರಿಸುವಾಗ ಅಚಾನಕ್ಕಾಗಿ ಎಲ್ಲರ ಮಾತೂ ನೆನಪಾಯ್ತು. ತಕ್ಷಣವೇ ಮತ್ತೇನೋ ಹೊಳೆದಂತಾಗಿ… ‘ಬದುಕಿದು ಜಟಕಾ ಬಂಡಿ, ಇದು ವಿಯೋಡಿ ಸುವಾ ಬಂಡಿ’ ಎಂದು ಹಾಡಿಬಿಟ್ಟೆ. ತಕ್ಷಣವೇ ಅಣ್ಣಾವ್ರು ಫಟ್ಟಂತ ಉದ್ಗರಿಸಿದರು. ‘ತಗುಲ್‌ಕೊಳ್ತಲಾ ನನ್‌ಮಗಂದು..’
ಮುಂದೆ ಸವಾಲು ಅನ್ನಿಸಲೇ ಇಲ್ಲ. ನೋಡನೋಡುತ್ತಲೇ ಆರು ಚರಣಗಳು ರೆಡಿಯಾದವು. ಅದರಲ್ಲಿ ಮೂರನ್ನು ವರದಪ್ಪ ಆಯ್ದುಕೊಂಡರು. ಮುಂದೆ ರೆಕಾರ್ಡಿಂಗ್ ಸಮಯದಲ್ಲಿ ಒಂದು ಮ್ಯಾಜಿಕ್ ನಡೀತು. ನನ್ನ ಹೆಗಲು ತಟ್ಟಿದ ಅಣ್ಣಾವ್ರು-‘ಹಂಸಲೇಖಾ ಅವರೇ, ಒಂದು ಪುಟ್ಟ ಸಲಹೆ. ಹಾಡು ಹೀಗೆ ನೇರವಾಗಿ ಶುರು ಆದ್ರೆ ಜೋಶ್ ಇರೋದಿಲ್ಲ. ಇದಕ್ಕೊಂದು ಭರ್ಜರಿ ಸ್ಟಾರ್ಟ್ ಬೇಕು. ಕುದುರೆ ಓಡಿಸುವಾಗ ಜಟಕಾ ಸಾಬಿಗಳು ದಾರಿ ಬಿಡಿ ಅನ್ನೋಕೆ ‘ಬಾಜೋ’ ಅಂತಾರೆ. ಕುದುರೆಗೆ ಜೋಶ್ ಬರಿಸಲಿಕ್ಕೆ ಅಂತಾನೇ ಚಾವಟಿಯ ಕೋಲನ್ನು ಚಕ್ರಕ್ಕೆ ಕೊಟ್ಟು ಕಟಗುಟ್ಟಿಸ್ತಾರೆ. ಅದನ್ನೂ ಹಾಡಿನ ಭಾಗವಾಗಿ ಬಳಸಿಕೊಂಡ್ರೆ ಹೇಗೆ? ಅಂದರು. ಅಣ್ಣಾವ್ರ ಆ ಆಪ್ತ ಸಲಹೆಯ ಕಾರಣದಿಂದಲೇ ಪಲ್ಲವಿಗೂ ಮೊದಲು ‘ಹೇ ಹೇ ಬಾಜೋ… ಟಾಣ ಟಕಟಕಟ.’ ಎಂಬ ಅನನ್ಯ ಸಾಲು ಸೇರಿ ಕೊಂಡಿತು…’ ನಾಲ್ಕೂವರೆ ನಿಮಿಷದ ಈ ಹಾಡಿಗೆ ಹುಬ್ಬಳ್ಳಿಯ ರಾಣಿ ಚನ್ನಮ್ಮ ಸರ್ಕಲ್ ಹಾಗೂ ಸಿದ್ಧಾ ರೂಢ ಮಠದ ಆವರಣದಲ್ಲಿ ಐದು ದಿನಗಳ ಕಾಲ ಶೂಟಿಂಗ್ ನಡೀತು…’
ಹೀಗೆ ಹಾಡಿನ ಕಥೆ ಹೇಳಿದ ಹಂಸಲೇಖ ಮಾತು ಮುಗಿಸುವ ಮುನ್ನ ಹೇಳಿದರು: ‘ಇದು ನವೆಂಬರ್ ಅಲ್ಲ. ಕನ್ನಡ ಮಾಸ. ಇದನ್ನು ಸಮಸ್ತ ಕನ್ನಡಿಗರಿಗೂ ನೆನಪಿಸಿ…!’
Tumba channagide.
Dhanyavadagalu