ನೀನು ನೀನೆ… ಇಲ್ಲಿ ನಾನು ನಾನೆ…
ಚಿತ್ರ: ಗಡಿಬಿಡಿ ಗಂಡ . ಸಾಹಿತ್ಯ, ಸಂಗೀತ: ಹಂಸಲೇಖ
ಗಾಯನ: ಎಸ್.ಪಿ. ಬಾಲಸುಬ್ರಹ್ಮಣ್ಯಂ
ನೀನು ನೀನೆ… ಇಲ್ಲಿ ನಾನು ನಾನೆ
ನೀನು ಎಂಬುವನಿಲ್ಲಿ ನಾದವಾಗಿರುವಾಗ
ನಾನೇನು ಹಾಡಲಯ್ಯ ದಾಸಾನುದಾಸ ||ಪ||
ನಾದದ ಶೃತಿ ನೀಡಿ ತುಂಬುರ ಸ್ಮೃತಿ ಹಾಡಿ
ಕೈಲಾಸವೆಲ್ಲ ನಾದೋಪಾಸನೆಯಾಗಿ
ಷಣ್ಮುಖಪ್ರಿಯ ರಾಗ ಮಾರ್ಗ ಹಿಂದೋಳವಾಗಿ
ನಡೆಸಿದೆ ದರಬಾರು ನೋಡು
ಹಾಡುವೆಯ ಪಲ್ಲವಿಯ, ಕೇಳುವೆಯ, ಮೇಲೆ ಎಳುವೆಯ
ನೀನು ಎಂಬುವನಿಲ್ಲಿ ನಾದವಾಗಿರುವಾಗ
ನಾನೇನು ಹಾಡಲಯ್ಯ ದಾಸಾನುದಾಸ ||೧||
ಈ ಸ್ವರವೆ ವಾದ ಈಶ್ವರನೆ ನಾದ
ಗತಿಗತಿಯ ಕಾಗುಣಿತ ವೇದ ಶಿವಸ್ಮರಣೆ ಸಂಗೀತ ಸ್ವಾದ
ಗಮಕಗಳ ಪಾಂಡಿತ್ಯ ಶೋಧ ಸುಮತಿಗಳ ಸುಜ್ಞಾನ ಬೋಧ
ಬದುಕುಗಳ ವಿಚಾರಣೆ ಕ್ಷಮಾಪಣೆ ವಿಮೋಚನೆ
ಗೆಲುವುಗಳ ಆಲೋಚನೆ ಸರಸ್ವತಿ ಸಮರ್ಪಣೆ
ನವರಸ ಅರಗಿಸಿ ಪರವಶ ಪಳಗಿಸಿ
ಅಪಜಯ ಅಡಗಿಸಿ ಜಯಿಸಲು ಇದು
ಶಕುತಿಯ ಯುಕುತಿಯ ವಿಷಯಾರ್ಥ
ಗಣಗಣ ಶಿವಗಣ ನಿಜಗುಣ ಶಿವಮನ
ನಲಿದರೆ ಒಲಿದರೆ ಕುಣಿದರೆ ಅದೆ
ಭಕುತಿಯ ಮುಕುತಿಯ ಪರಮಾರ್ಥ ||೨||
೧೯೯೩ರಲ್ಲಿ ಜಯಭೇರಿ ಹೊಡೆದ ಚಿತ್ರ- ಗಡಿಬಿಡಿ ಗಂಡ. ತೆಲುಗಿನ ‘ಅಲ್ಲರಿ ಮೊಗುಡು’ ಚಿತ್ರದ ರಿಮೇಕ್ ಆದ ಈ ಚಿತ್ರದಲ್ಲಿ ರವಿಚಂದ್ರನ್, ಜಗ್ಗೇಶ್, ರಮ್ಯಕೃಷ್ಣ, ರೋಜಾ ತಾರಾಗಣವಿತ್ತು. ರವಿಚಂದ್ರನ್‌ಗೆ ಎದುರಾಳಿಯಂತಿದ್ದ ಹಿರಿಯ ಸಂಗೀತಗಾರನ ಪಾತ್ರದಲ್ಲಿ ತಮಿಳಿನ ಜನಪ್ರಿಯ ನಟ ತಾಯ್‌ನಾಗೇಶ್ ಅಭಿನಯಿಸಿದ್ದರು. ಈ ಚಿತ್ರದಲ್ಲಿ ತಮ್ಮಿಬ್ಬರ ಪರಿಚಯ ಹೇಳಿಕೊಳ್ಳುವ ಸಂದರ್ಭದಲ್ಲಿ ರವಿಚಂದ್ರನ್-‘ನಾನು ಹಾರ್ಮೋನಿಯಂ ಸರಸ್ವತಿ. ಇವನು ತಬಲಾ ಸರಸ್ವತಿ’ ಎಂದೇ ಹೇಳುತ್ತಾರೆ. ಈ ಡೈಲಾಗ್ ಕೇಳಿಸಿದಾಕ್ಷಣ ಥಿಯೇಟರಿನ ತುಂಬಾ ಕಿಲಕಿಲ ನಗು, ಶಿಳ್ಳೆ, ಚಪ್ಪಾಳೆ…
ಆ ಚಿತ್ರದ ಒಂದು ಸಂದರ್ಭ ಹೀಗಿದೆ: ಆಕಾಶ್ ಆಡಿಯೋ ಹೆಸರಿನ ಸಂಸ್ಥೆ ಸಂಗೀತ ಸ್ಪರ್ಧೆಯೊಂದನ್ನು ಹಮ್ಮಿಕೊಂಡಿರುತ್ತದೆ. ನಾಡಿನ ಪ್ರಖ್ಯಾತ ಸಂಗೀತಗಾರ ಎಂದೇ ಹೆಸರಾದ ತಾಯ್‌ನಾಗೇಶ್ ಅದರಲ್ಲಿ ಭಾಗವಹಿಸಿರುತ್ತಾರೆ. ಅವರಿಗೆ ಪ್ರತಿರ್ಸ್ಪಯಾಗಿ ಸೆಣೆಸಲು ರವಿಚಂದ್ರನ್-ಜಗ್ಗೇಶ್ ಜೋಡಿ ನಾನಾ ಪ್ರಯತ್ನ ಮಾಡಿ ಸೋತಿರುತ್ತದೆ. ಕಡೆಗೆ ಅದೇ ಆಕಾಶ್ ಆಡಿಯೋದ ಮಾಲೀಕನ ಮಗಳು ರಮ್ಯಕೃಷ್ಣಳ ಶಿಫಾರಸಿನ ಕಾರಣದಿಂದಾಗಿ, ಸ್ಪರ್ಧೆಯಲ್ಲಿ ಕಡೆಯ ಅಭ್ಯರ್ಥಿಗಳಾಗಿ ಈ ಇಬ್ಬರ ಹೆಸರೂ ಸೇರ್ಪಡೆಯಾಗುತ್ತದೆ. ಸ್ಪರ್ಧೆಗೆ ಬಂದ ಎಲ್ಲರನ್ನೂ ಸೋಲಿಸುವ ತಾಯ್‌ನಾಗೇಶ್, ಈ ಇಬ್ಬರನ್ನು ‘ಅಯ್ಯೋ ಪಾಪ’ ಎಂಬಂತೆ ನೋಡುತ್ತಾನೆ. ‘ನನ್ನ ಪಾಂಡಿತ್ಯದ ಮುಂದೆ ನೀವು ತರಗೆಲೆಗಳು. ನಿಮ್ಮನ್ನು ಚಿಟಿಕೆ ಹೊಡೆಯುವಷ್ಟರಲ್ಲಿ ಸೋಲಿಸಬಲ್ಲೆ’ ಅನ್ನುತ್ತಾನೆ. ಅಷ್ಟಕ್ಕೇ ಸುಮ್ಮನಾಗದೆ- ‘ಈ ಸ್ಪರ್ಧೆಯಲ್ಲಿ ನೀವೇನಾದ್ರೂ ಸೋತರೆ ಮುಂದೆಂದೂ ಸಂಗೀತ ಹಾಡುವಂತಿಲ್ಲ. ಒಂದು ವೇಳೆ ನಾನೇ ಸೋತು ಹೋದರೆ, ನಿಮ್ಮ ಪಾದ ತೊಳೆದು ನನ್ನ ಕಡಗವನ್ನು ನಿಮಗೆ ತೊಡಿಸುತ್ತೇನೆ’ ಅನ್ನುತ್ತಾನೆ.
ಈ ಸವಾಲಿನ ಮುಂದುವರಿದ ಭಾಗವಾಗಿ ಶುರುವಾಗುತ್ತದೆ: ‘ನೀನು ನೀನೆ… ಇಲ್ಲಿ ನಾನು ನಾನೆ/- ನೀನು ಎಂಬುವನಿಲ್ಲಿ ನಾದವಾಗಿರುವಾಗ…’
ಚಿತ್ರದಲ್ಲಿ, ಇಬ್ಬರು ಸಂಗೀತಗಾರರ ಗಾಯನ ಶಕ್ತಿ ಪ್ರದರ್ಶನಕ್ಕೆ ಈ ಹಾಡು ಬಳಕೆಯಾಗಿದೆ ನಿಜ. ಆದರೆ, ನಿಜವಾಗಿ ಈ ಹಾಡು ಸೃಷ್ಟಿಯಾದ ಸಂದರ್ಭದ ಹಿಂದೆ ಸ್ವಾರಸ್ಯವಿದೆ, ಪ್ರೀತಿಯಿದೆ. ಕೊಂಚ ಅಸಮಧಾನವಿದೆ. ರವಷ್ಟು ಸಿಡಿಮಿಡಿಯಿದೆ. ಬೊಗಸೆ ತುಂಬುವಷ್ಟು ಭಾವುಕತೆಯಿದೆ. ವಿಶೇಷವೇನೆಂದರೆ, ಈ ಹಾಡಿನ ಒಂದೊಂದು ಸಾಲೂ ಗಾನಗಾರುಡಿಗ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರನ್ನು ಉದ್ದೇಶಿಸಿಯೇ ಬರೆದಿದ್ದಾಗಿದೆ!
ಬಹುತ್ ಪಸಂದ್ ಹೈ ಎಂಬಂತಿರುವ ಈ ಹಾಡ ಹಿಂದಿನ ಕಥೆಯನ್ನು ಹಂಸಲೇಖ ಅವರು ವಿವರಿಸಿದ್ದು ಹೀಗೆ: ‘ರವಿಚಂದ್ರನ್-ಹಂಸಲೇಖಾ-ಎಸ್.ಪಿ.ಬಿ. ಕಾಂಬಿನೇಷನ್ ಇದ್ದರೆ ಸಾಕು, ಆ ಸಿನಿಮಾದ ಹಾಡುಗಳು ಸೂಪರ್ ಹಿಟ್ ಆಗ್ತವೆ’ ಎಂದು ಗಾಂ ನಗರ ಮಾತಾಡಿಕೊಳ್ಳುತ್ತಿದ್ದ ಕಾಲ ಅದು. ಆ ಸಂದರ್ಭದಲ್ಲಿಯೇ ನನ್ನ ಏಳಿಗೆಯನ್ನು ಸಹಿಸದ ಒಂದು ಗುಂಪು ಹುಟ್ಟಿಕೊಂಡಿತು. ಹಂಸಲೇಖಾ ಅವರಿಗೆ ಜಂಭ ಬಂದಿದೆ. ಅವರು, ಹತ್ತಿದ ನಡೆದು ಬಂದ ದಾರೀನ ಮರೆತಿದ್ದಾರೆ. ಹತ್ತಿದ ಏಣಿಯನ್ನು ಒದೆಯುತ್ತಿದ್ದಾರೆ. ಎಸ್.ಪಿ.ಬಿ. ಅವರನ್ನು ಬೇಕೆಂದೇ ನಿರ್ಲಕ್ಷಿಸುತ್ತಿದ್ದಾರೆ. ಅವರಿಗೆ ಪರ್‍ಯಾಯ ಆಗಬಲ್ಲ ಗಾಯಕರನ್ನು ತಯಾರು ಮಾಡ್ತಾ ಇದ್ದಾರೆ’ ಎಂದೆಲ್ಲ ಆ ಗುಂಪು ಸುದ್ದಿ ಹಬ್ಬಿಸಿತು. ಈ ಸುದ್ದಿ ಎಸ್.ಪಿ. ಅವರಿಗೂ ತಲುಪುವಂತೆ ನೋಡಿಕೊಂಡಿತು.
ನಾನು ಆತ್ಮಸಾಕ್ಷಿಯಾಗಿ ಹೇಳಬೇಕಾದ ಮಾತೊಂದಿದೆ. ಏನೆಂದರೆ, ಈಗಲೂ ಮನುಷ್ಯತ್ವಕ್ಕೆ, ಸಹನೆ-ತಾಳ್ಮೆಗೆ, ಸಮಚಿತ್ತಕ್ಕೆ, ಶಿಸ್ತಿಗೆ ನನಗೆ ಮಾದರಿಯಾಗಿರುವವರು ಡಾ. ರಾಜ್‌ಕುಮಾರ್ ಮತ್ತು ಎಸ್.ಪಿ.ಬಿ. ನನ್ನ ಆಲ್ ಟೈಂ ಫೇವರಿಟ್ ಹಾಗೂ ನನ್ನ ಸಂಗೀತ ನಿರ್ದೇಶನದಲ್ಲಿ ಅತಿ ಹೆಚ್ಚು ಗೀತೆ ಹಾಡಿರುವ ಗಾಯಕ ಕೂಡ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರೇ. ವಾಸ್ತವ ಹೀಗಿದ್ದಾಗ ಎಸ್ಪೀಬಿ ಅವರನ್ನು ವಿರೋಸುವಂಥ ಯೋಚನೆಯನ್ನಾದ್ರೂ ಹೇಗೆ ಮಾಡಲಿ ನಾನು?
ಆದರೆ, ಶತಾಯಗತಾಯ ನನ್ನನ್ನು ಹಣಿಯಬೇಕು ಎಂಬ ಹಟಕ್ಕೆ ಬಿದ್ದಿದ್ದ ಗುಂಪು ಸುಳ್ಳು ಸುದ್ದಿಗಳನ್ನು ಮೇಲಿಂದ ಮೇಲೆ ಎಸ್ಪಿ ಅವರಿಗೆ ತಲುಪಿಸುವಲ್ಲಿ ಯಶಸ್ವಿಯಾಯಿತು. ಬಹುಶಃ ಈ ಸಂದರ್ಭದಲ್ಲಿ ಎಸ್ಪಿ ಮನಸ್ಸನ್ನು ಕಹಿ ಮಾಡಿಕೊಂಡರು ಅನಿಸುತ್ತೆ.
ಈ ಸಂದರ್ಭದಲ್ಲೇ ರವಿಚಂದ್ರನ್ ಎಕ್ಸ್‌ಪ್ರೆಸ್ ವೇಗದಲ್ಲಿ ‘ರಾಮಾಚಾರಿ’ ತೆಗೆಯುತ್ತಿದ್ದರು. ಸತತ ಸೋಲುಗಳಿಂದ ಕಂಗೆಟ್ಟಿದ್ದ ಅವರಿಗೆ ತಕ್ಷಣಕ್ಕೆ ಒಂದು ಹಿಟ್ ಸಿನಿಮಾ ಬೇಕಿತ್ತು. ಈ ಚಿತ್ರಕ್ಕೆ ಹಾಡುವಂತೆ ಕೇಳಿಕೊಳ್ಳಲು ನಾವು ಮೇಲಿಂದ ಮೇಲೆ ಎಸ್ಪಿ ಅವರಿಗೆ ಫೋನ್ ಮಾಡುತ್ತಲೇ ಇದ್ದೆವು. ಫೋನ್ ರಿಸೀವ್ ಮಾಡುತ್ತಿದ್ದ ಅವರ ಸಹಾಯಕರು-‘ಸರ್‌ಗೆ ಹುಶಾರಿಲ್ಲ. ಗಂಟಲು ನೋವಿನ ತೊಂದರೆ. ಅವರು ಚಿಕಿತ್ಸೆಗಾಗಿ ಲಂಡನ್‌ಗೆ ಹೋಗಿದ್ದಾರೆ’ ಎನ್ನುತ್ತಿದ್ದರು. ಹದಿನೈದು ದಿನಗಳ ನಂತರವೂ ಇದೇ ಉತ್ತರ ರಿಪೀಟ್ ಆದಾಗ ಅನಿವಾರ್ಯವಾಗಿ ಮನು ಹಾಗೂ ಯೇಸುದಾಸ್ ಅವರಿಂದ ಹಾಡಿಸಿದೆ. ನನ್ನ ಈ ನಿರ್ಧಾರ ಮತ್ತಷ್ಟು ಗುಸುಗುಸುಗಳಿಗೆ ಕಾರಣವಾಯ್ತು. ಗಾಳಿ ಸುದ್ದಿಗಳಿಗೆ ರೆಕ್ಕೆ ಪುಕ್ಕ ಅಂಟಿಕೊಂಡಿತು. ಪರಿಣಾಮ, ಎಸ್ಪಿ ಹಾಗೂ ನನ್ನ ಮಧ್ಯೆ ನಮಗೇ ಗೊತ್ತಿಲ್ಲದ ಹಾಗೆ ಒಂದು ಅಂತರ ಬೆಳೆದುಬಿಡ್ತು.
ನಂತರದ ದಿನಗಳಲ್ಲಿ ಬಂದದ್ದೇ ಗಡಿಬಿಡಿ ಗಂಡ. ಮೂಲ ತೆಲುಗು ಚಿತ್ರದಲ್ಲಿ ಎಸ್ಪಿ ಹಾಡಿದ್ದ ಎಲ್ಲ ಹಾಡುಗಳೂ ಹಿಟ್ ಆಗಿದ್ದವು. ಹಾಗಾಗಿ ಕನ್ನಡದಲ್ಲೂ ಅವರಿಂದಲೇ ಹಾಡಿಸಬೇಕೆಂಬ ಹಂಬಲ ನಿರ್ಮಾಪಕ ರಾಘವೇಂದ್ರರಾವ್ ಅವರದಿತ್ತು. ಅವರಿಗೆ ನಮ್ಮ ಮಧ್ಯೆ ಬೆಳೆದಿರುವ ‘ಅಂತರ’ದ ಬಗ್ಗೆ ತಿಳಿಸಿದೆ. ರಾಘವೇಂದ್ರರಾವ್ ಅವರ ಸಿನಿಮಾ ಪ್ರೀತಿ ದೊಡ್ಡದು. ಅವರು ಎಸ್ಪಿ ಅವರೊಂದಿಗೆ ಮಾತಾಡಿದರು. ಎಲ್ಲ ಸಂಗತಿ ವಿವರಿಸಿದರು. ತಮ್ಮ ಸಿನಿಮಾಕ್ಕೆ ಹಾಡಲು ಒಪ್ಪಿಸಿಯೂ ಬಿಟ್ಟರು. ನಂತರ ನನ್ನ ಬಳಿ ಬಂದು-ಎಸ್ಪಿ ಹಾಡಲು ಒಪ್ಪಿದ್ದಾರೆ. ನಾಳೆಯೇ ಬರ್‍ತಾರಂತೆ. ಹಾಡಿನ ಸಾಹಿತ್ಯ ಹಾಗೂ ಟ್ಯೂನ್ ರೆಡಿ ಮಾಡಿಕೊಳ್ಳಿ’ ಎಂದರು.
ಆವೇಳೆಗಾಗಲೇ ಹಿಂಧೋಳ ರಾಗದಲ್ಲಿ ಟ್ಯೂನ್ ಮಾಡಿದ್ದೆ. ಎಸ್ಪಿ ಬರುವ ದಿನವೇ ಬೆಳ್ಳಂಬೆಳಗ್ಗೆಯೇ ಹಾಡು ಬರೆಯಲು ಕೂತೆ. ಹಾಡು ಬರಬೇಕಿದ್ದ ಸಂದರ್ಭ ನೆನಪಿತ್ತು. ಹಾಡು ಬರೆಯಲು ಶುರುಮಾಡಿದಾಗ ಮನದಲ್ಲಿ ಯಾವ್ಯಾವ ಯೋಚನೆಗಳು ಸರಿದಾಡುತ್ತಿದ್ದವು ಎಂಬುದು ನನ್ನ ಪಾಲಿಗೂ ನಿಗೂಢ. ಹಾಡಿನ ಸಾಲುಗಳು ತಂತಾನೇ ಸೇರಿಕೊಳ್ಳುತ್ತಾ ಹೋದವು.
ಕೆಲ ಸಮಯದ ನಂತರ ರೆಕಾರ್ಡಿಗ್ ರೂಂ ಗೆ ಬಂದರು ಎಸ್ಪಿ. ನನ್ನನ್ನು ನೋಡಿದವರೇ ತೆಲುಗಿನಲ್ಲಿ- ‘ನಿಮ್ಮ ಮೇಲೆ ಬೇಜಾರಾಗಿತ್ತು’ ಅಂದ್ರು. ನಾನೂ ಅದೇ ತೆಲುಗಿನಲ್ಲಿ ‘ನನ್ನಗೂ ನಿಮ್ಮ ಮೇಲೆ ಬೇಜಾರಾಗಿತ್ತು’ ಅಂದೆ. ತಕ್ಷಣವೇ ನನ್ನತ್ತ ನೋಡಿ ನಸುನಕ್ಕ ಎಸ್ಪಿ, -‘ಹಳೆಯದನ್ನೆಲ್ಲ ಮರೆತು ಬಿಡೋಣ ಗುರುಗಳೇ’ ಎಂಬರ್ಥದ ಮಾತಾಡಿದರು. ಅವರ ಮಾತಿಗೆ ತಕ್ಷಣವೇ ಒಪ್ಪಿಕೊಂಡೆ.
ಎರಡು ನಿಮಿಷದ ನಂತರ ಸಾಹಿತ್ಯ ಬರೆದುಕೊಳ್ಳಲು ರೆಡಿಯಾದರು ಎಸ್ಪಿ. ಮೊದಲ ಸಾಲೆಂದು-‘ನೀನು ನೀನೆ… ಇಲ್ಲಿ ನಾನು ನಾನೆ’ ಎಂದೆ ನೋಡಿ? ಆ ಸಾಲು ಓದಿದ ನನ್ನನ್ನೇ ತೀಕ್ಷ್ಣವಾಗಿ ನೋಡಿದರು ಎಸ್ಪಿ. ಇದೆಂಥ ಅಹಂಕಾರ ನಿಮ್ಮದು ಎಂಬಂತಿತ್ತು ಆ ನೋಟ, ನಾನು ಅದನ್ನು ಕಂಡೂ ಕಾಣದವನಂತೆ ನಿರ್ಲಿಪ್ತ ಭಾವದಲ್ಲಿ ಎರಡನೇ ಸಾಲು ಓದಿದೆ: ನೀನು ಎಂಬುವನಿಲ್ಲಿ ನಾದವಾಗಿರುವಾಗ! ನಾನೇನು ಮಾಡಲಯ್ಯಾ ದಾಸಾನುದಾಸ..!
ಈ ಸಾಲುಗಳನ್ನು ಕೇಳುತ್ತಿದ್ದಂತೆಯೇ ಎಸ್ಪಿ ಭಾವುಕರಾದರು. ಛಕ್ಕನೆ ನನ್ನ ಕೈ ಹಿಡಿದುಕೊಂಡು-‘ನಿಮ್ಮನ್ನು ಅಪಾರ್ಥ ಮಾಡಿಕೊಂಡಿದ್ದೆ. ಸಾರಿ’ ಎಂದರು. ಅವರ ಮಾತಲ್ಲಿ ತಾಯ್ತನದ ಸ್ಪರ್ಶವಿತ್ತು. ಪ್ರೀತಿಯಿತ್ತು. ಗೆಳೆತನವಿತ್ತು. ಸಂತೋಷವಿತ್ತು. ಅವರ ಮಾತು ಕೇಳಿ ನನಗೂ ಮನಸು ತುಂಬಿ ಬಂದಿತ್ತು. ಪುನರ್ ಮಿಲನದ ಈ ಸಡಗರದ ಮಧ್ಯೆಯೇ ತಾಯ್ ನಾಗೇಶ್ ಹಾಗೂ ರವಿಚಂದ್ರನ್ ಇಬ್ಬರಿಗೂ ಹೊಂದುವಂಥ ಭಿನ್ನ ಧ್ವನಿಯಲ್ಲಿ ಅದ್ಭುತವಾಗಿ ಹಾಡಿದರು ಬಾಲು…’
***
ದೇಶ ಕಂಡ ಮಹಾನ್ ಗಾಯಕ ಎಸ್ಪಿ. ಅಂಥ ಹಾಡುಗಾರನ ಮನಸನ್ನು ಒಂದು ಹಾಡಿಂದಲೇ ಗೆದ್ದವರು ಹಂಸಲೇಖ. ಅವರಿಗೆ ಪ್ರೀತಿ, ನಮಸ್ಕಾರ, ಕೃತಜ್ಞತೆ, ಅಭಿನಂದನೆ…
ನಿಮ್ಮದೊಂದು ಉತ್ತರ