ಒಂದೇ ಒಂದು ಕಣ್ಣ ಬಿಂದು…
ಚಿತ್ರ: ಬೆಳ್ಳಿ ಕಾಲುಂಗುರ. ಸಾಹಿತ್ಯ-ಸಂಗೀತ: ಹಂಸಲೇಖ.
ಗಾಯನ: ಎಸ್.ಪಿ. ಬಾಲಸುಬ್ರಮಣ್ಯಂ, ಚಿತ್ರಾ
ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ
ನಿನ್ನ ನೋವ ಜತೆ ಎಂದೂ ನಾನಿರುವೆ ನಿನ್ನಾಣೆ
ರಾತ್ರಿಯ ಬೆನ್ನಿಗೆ ಬೆಳ್ಳನೆ ಹಗಲು
ಚಿಂತೆಯ ಹಿಂದೆಯೇ ಸಂತಸ ಇರಲು ||ಪ||
ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ
ಚಿಂತೆಯಲ್ಲಿ ನಿನ್ನ ಮನ ದೂಡಿದರೆ ನನ್ನಾಣೆ
ನೋವಿನ ಬಾಳಿಗೆ ಧೈರ್ಯವೆ ಗೆಳೆಯ
ಪ್ರೇಮದ ಜೋಡಿಗೆ ತಾಕದು ಪ್ರಳಯ ||ಅ.ಪ||
ದಾಹ ನೀಗೋ ಗಂಗೆಯೇ ದಾಹ ಎಂದು ಕುಂತರೆ
ಸುಟ್ಟು ಹಾಕೊ ಬೆಂಕಿಯೇ ತನ್ನ ತಾನೇ ಸುಟ್ಟರೆ
ದಾರಿ ತೊರೋ ನಾಯಕ, ಒಂಟಿ ಎಂದು ಕೊಂಡರೆ
ಧೈರ್ಯ ಹೇಳೊ ಗುಂಡಿಗೆ ಮೂಕವಾಗಿ ಹೋದರೆ
ಸೂರ್ಯನಿಲ್ಲ ಪೂರ್ವದಲ್ಲಿ ಚಂದ್ರನಿಲ್ಲ ರಾತ್ರಿಯಲ್ಲಿ
ದಾರಿ ಇಲ್ಲ ಕಾಡಿನಲ್ಲಿ ಆಸೆ ಇಲ್ಲ ಬಾಳಿನಲ್ಲಿ
ನಂಬಿಕೆ ತಾಳುವ ಅಂಜಿಕೆ ನೀಗುವ
ಶೋಧನೆ ಸಮಯ ಚಿಂತಿಸಿ ಗೆಲ್ಲುವ ||೧||
ಮೂಡಣದಿ ಮೂಡಿ ಬಾ ಸಿಂಧೂರವೆ ಆಗಿ ಬಾ
ಜೀವಧಾರೆ ಆಗಿ ಬಾ ಪ್ರೇಮಪುಷ್ಪ ಸೇರು ಬಾ
ಬಾನಗಲ ತುಂಬಿ ಬಾ ಆಸೆಗಳ ತುಂಬು ಬಾ
ಸಿಂಗಾರವೆ ತೇಲಿ ಬಾ ಸಂತೋಷವ ನೀಡು ಬಾ
ಪ್ರೇಮದಾಸೆ ನನ್ನ ನಿನ್ನ ಬಂಸಿದೆ ನನ್ನಾಣೆ
ಸಂತಸದ ಕಣ್ಣ ರಪ್ಪೆ ಸಂಸಿದೆ ನನ್ನಾಣೆ
ದೇವರ ಗುಡಿಗು ಭಿನ್ನಗಳಿರಲು ಬಾಳಿನ ನಡೆಗೂ ಅಡ್ಡಿಗಳಿರಲು
ಭೂಮಿಯಾಗಿ ನಾನಿರುವೆ ಚಿಂತೆ ಬೇಡ ನನ್ನಾಣೆ
ನಿನ್ನ ನೋವ ಮೇರುಗಿರಿಯ ನಾ ಹೊರುವೆ ನಿನ್ನಾಣೆ ||೨|
‘ಪತ್ರಿಕೆ’ಯ ಓದುಗರೂ, ಈ ಅಂಕಣದ ಅಭಿಮಾನಿಯೂ ಆದ ರಾಘವೇಂದ್ರ ಉಡುಪ ಅವರು ಚಿತ್ರರಂಗಕ್ಕೆ ಸಂಬಂಸಿದಂತೆ ಮೂರು ಕುತೂಹಲಕರ ಪ್ರಶ್ನೆಗಳನ್ನು ಕೇಳಿದ್ದಾರೆ. ಅವು ಹೀಗಿವೆ:
೧. ಕನ್ನಡದ ಅತ್ಯುತ್ತಮ ಸಂಗೀತ ನಿರ್ದೇಶಕರಲ್ಲಿ ವಿಜಯ ಭಾಸ್ಕರ್ ಒಬ್ಬರು. ಪುಟ್ಟಣ್ಣ ಕಣಗಾಲ್ ಅವರ ಅತಿ ಹೆಚ್ಚು ಸಿನಿಮಾಗಳಿಗೆ ಸಂಗೀತ ನೀಡಿದ್ದು ಅವರ ಹೆಗ್ಗಳಿಕೆ. ಅವರಿಗೆ ಸುರ್‌ಸಿಂಗಾರ್ ಎಂಬ ಬಿರುದೂ ಇತ್ತು. ಇಷ್ಟಾದರೂ, ರಾಜ್ ಕುಮಾರ್ ಸಂಸ್ಥೆಯ ಯಾವುದೇ ಚಿತ್ರಕ್ಕೂ ವಿಜಯಭಾಸ್ಕರ್ ಅವರು ಸಂಗೀತ ನೀಡಲಿಲ್ಲವಲ್ಲ ಏಕೆ? ವಿಜಯ ಭಾಸ್ಕರ್ ಅವರ ಸಂಗೀತ ನಿರ್ದೇಶನದಲ್ಲಿ ರಾಜ್‌ಕುಮಾರ್ ಅವರು ಒಂದೇ ಒಂದು ಚಿತ್ರ ಗೀತೆಯನ್ನೂ ಹಾಡಲಿಲ್ಲವಲ್ಲ ಏಕೆ?
೨. ಆಯಾ ಕ್ಷೇತ್ರದ ಪ್ರತಿಭಾವಂತರನ್ನು ಹುಡುಕಿ, ಅವರಿಂದ ಅತ್ಯುತ್ತಮ ಕೆಲಸ ತೆಗೆಯುತ್ತಿದ್ದವರು ನಿರ್ದೇಶಕ ಪುಟ್ಟಣ್ಣ ಕಣಗಾಲ್. ಆದರೆ ಕನ್ನಡ ಚಿತ್ರರಂಗ ಕಂಡ ಮಹಾನ್ ಸಂಗೀತ ನಿರ್ದೇಶಕರಾದ ಜಿ.ಕೆ. ವೆಂಕಟೇಶ್ ಹಾಗೂ ರಾಜನ್-ನಾಗೇಂದ್ರ ಅವರಿಗೆ ಒಂದೇ ಒಂದು ಸಿನಿಮಾದಲ್ಲೂ ಪುಟ್ಟಣ್ಣನವರು ಅವಕಾಶ ಕೊಡಲಿಲ್ಲವಲ್ಲ ಯಾಕೆ? ಈ ಮಹಾನ್ ಪ್ರತಿಭೆಗಳ ಜತೆ ಕೈಜೋಡಿಸಿದ್ದರೆ ಇನ್ನೂ ಅತಿಮಧುರ ಗೀತೆಗಳನ್ನು ಕೊಡಬಹುದಿತ್ತು. ಆದರೆ ಪುಟ್ಟಣ್ಣ ಕಣಗಾಲ್ ಅವರಂಥ ಮಹಾನ್ ನಿರ್ದೇಶಕ ಕೂಡ ಈ ಬಗ್ಗೆ ಯೋಚಿಸಲಿಲ್ಲವಲ್ಲ ಏಕೆ?
೩. ಕನ್ನಡದ ಶ್ರೇಷ್ಠ ಗೀತೆರಚನೆಕಾರರ ಪೈಕಿ ವಿಜಯ ನಾರಸಿಂಹ ಕೂಡ ಒಬ್ಬರು. ಹಾಗಿದ್ದರೂ ಅವರು ರಾಜ್‌ಕುಮಾರ್ ಸಂಸ್ಥೆಯ ಚಿತ್ರಕ್ಕೆಂದು ಬರೆದದ್ದು ಒಂದೇ ಹಾಡು-ಅದು ‘ಪ್ರೇಮದ ಕಾಣಿಕೆ’ ಚಿತ್ರಕ್ಕೆ. (ಓಹಿಲೇಶ್ವರ ಚಿತ್ರಕ್ಕೆ ವಿಜಯ ನಾರಸಿಂಹ ಹಾಡು ಬರೆದಿದ್ದಾರೆ ನಿಜ. ಆದರೆ ಅದು ರಾಜ್ ಕಂಪನಿ ತಯಾರಿಸಿದ ಚಿತ್ರವಲ್ಲ.) ಯಾಕೆ ಹೀಗೆ? ಈ ವಿಷಯಗಳಿಗೆ ಸಂಬಂಸಿದಂತೆ ಏನಾದರೂ ‘ಕಥೆಗಳು’ ಇವೆಯೋ ಹೇಗೆ?
ಚಿತ್ರರಂಗದ ‘ಹಳೆಯ ಪುಟಗಳನ್ನು’ ತಿರುವಿ ಹಾಕಿದರೆ ಇಂಥವೇ ಹತ್ತಾರು ಪ್ರಶ್ನೆಗಳು ಹುಟ್ಟುತ್ತಾ ಹೋಗುತ್ತವೆ. ಒಂದೊಂದು ಸಂದರ್ಭದಲ್ಲಿ ಇಂಥ ಪ್ರಶ್ನೆಗಳಲ್ಲೇ ತಪ್ಪುಗಳಿರಬಹುದು! ಈ ಪ್ರಶ್ನೆಗಳಿಗೆಲ್ಲ ‘ಇದಮಿತ್ಥಂ’ ಎಂದು ಉತ್ತರ ಹೇಳಲು ಸಾಧ್ಯವೇ ಇಲ್ಲ. ಇಂಥ ವಿಷಯಗಳ ಬಗ್ಗೆ ಸಂಬಂಧಪಟ್ಟವರೇ ಉತ್ತರ ಹೇಳಬೇಕು, ಸ್ಪಷ್ಟನೆ ನೀಡಬೇಕು,… ಅಷ್ಟೇ….
***
ರಾಘವೇಂದ್ರ ಉಡುಪ ಅವರ ಪ್ರಶ್ನೆಗಳ ಕುರಿತು ಯೋಚಿಸುತ್ತಿದ್ದಾಗಲೇ ಕೇಳಿಬಂದದ್ದು-‘ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ’ ಎಂಬ ಹಾಡು… ಒಮ್ಮೆ ಎಸ್ಪಿ, ಬಾಲಸುಬ್ರಹ್ಮಣ್ಯಂ, ಇನ್ನೊಮ್ಮೆ ಎಸ್, ಜಾನಕಿ ಹಾಡಿರುವ ಈ ಸೋಲೊ ಹಾಡು ‘ಬೆಳ್ಳಿ ಕಾಲುಂಗುರ’ ಚಿತ್ರದ್ದು. ಪ್ರೀತಿಯ ಮಹತ್ವ ಸಾರುವ, ಪ್ರೀತಿಸಿದ ಜೀವಕ್ಕೆ ಸಮಾಧಾನ ಹೇಳುವ, ಧೈರ್ಯ ತುಂಬುವ, ಮಧುರ ಪ್ರೀತಿಗೆ ಸಾಕ್ಷಿಯಾಗುವ ಈ ಹಾಡು ಬರುವ ಎರಡು ಸಂದರ್ಭಗಳೂ ಆಪ್ತವಾಗಿವೆ. ಆ ಸನ್ನಿವೇಶಗಳ ವಿವರಣೆ ಹೀಗೆ:
ಸಂಶೋಧನೆಯ ನೆಪದಲ್ಲಿ ಹಂಪಿಗೆ ಬರುವ ನಾಯಕ, ಅಲ್ಲಿಯೇ ನಾಯಕಿಯನ್ನು ನೋಡುತ್ತಾನೆ. ಮೊದಲ ಭೇಟಿಯೇ ಪ್ರೀತಿಗೂ ಕಾರಣವಾಗುತ್ತದೆ. ಆದರೆ, ನಾಯಕಿಯ ಮನೆಯಲ್ಲಿ ಇವರ ಪ್ರೀತಿಗೆ, ಪಿಸುಮಾತಿಗೆ, ಭೇಟಿಗೆ ತೀವ್ರ ವಿರೋಧ ವ್ಯಕ್ತವಾಗುತ್ತದೆ. ನಾಯಕಿಯ ನೆರಳಿನಂತಿದ್ದ ಆ ಮನೆಯ ಕಾವಲುಗಾರ- ‘ನಮ್ಮ ಹುಡುಗಿಯ ತಂಟೆಗೆ ಬಂದರೆ ಹುಶಾರ್’ ಎಂದು ನಾಯಕನನ್ನು ಎಚ್ಚರಿಸುತ್ತಾನೆ. ಈ ಎಚ್ಚರಿಕೆಯನ್ನೂ ಮೀರಿ ನಾಯಕ ಮುಂದುವರಿದಾಗ ಅವನಿಗೆ ಚನ್ನಾಗಿ ಬಾರಿಸುತ್ತಾನೆ. ಇಷ್ಟಾದರೂ ನಾಯಕ-ನಾಯಕಿಯ ಪ್ರೀತಿ ಮುಂದುವರಿಯುತ್ತದೆ. ಯಾರು ಏನೇ ಅಂದರೂ ಸರಿ, ನಾವು ಜತೆಯಾಗಿರೋಣ ಎಂದು ನಿರ್ಧರಿಸುವ ಈ ಜೋಡಿ ನಿರ್ಧರಿಸುತ್ತದೆ. ಈ ಸಂದರ್ಭದಲ್ಲಿ ಹೇಳಿದ ಮಾತು ಮೀರಿ ನಡೆದ ಕಾರಣಕ್ಕೆ ನಾಯಕಿಯ ಕಾಲಿಗೆ ‘ಬರೆ’ ಹಾಕಲಾಗುತ್ತದೆ. ಇಷ್ಟೆಲ್ಲ ರಗಳೆಯ ನಂತರವೂ ಸೀದಾ ಕಾಡಿಗೆ ಹೋಗುತ್ತದೆ. ಕಾಡಲ್ಲಿ ನಡೆದೂ ನಡೆದು ನಾಯಕಿಯ ಕಾಲಲ್ಲಿ ಗಾಯವಾಗುತ್ತದೆ. ಈ ಸಂದರ್ಭದಲ್ಲಿ ನಾಯಕನೇ ತನ್ನ ಗೆಳತಿಯ ಸೇವೆಗೆ ನಿಲ್ಲುತ್ತಾನೆ.
ಪ್ರೀತಿಯ ಹುಡುಗ ತನ್ನ ಸೇವೆಗೆ ನಿಂತದ್ದು ಕಂಡು ನಾಯಕಿಗೆ ಕಣ್ತುಂಬಿ ಬರುತ್ತದೆ. ಅವಳು -‘ಛೆ ಛೆ, ನಾನು ನಿಮ್ಮ ಸೇವೆ ಮಾಡಬೇಕೇ ವಿನಃ ನೀವು ನನ್ನ ಸೇವೆಗೆ ನಿಲ್ಲಬಾರದು’ ಅನ್ನುತ್ತಾಳೆ. ಆಗ ನಾಯಕ- ‘ನಾನು ಬೇರೆ, ನೀನು ಬೇರೆಯಲ್ಲ. ನಾವಿಬ್ರೂ ಒಂದೇ. ನಮ್ಮದು ಜೋಡಿ ಜೀವ…’ ಎನ್ನುತ್ತಾ ಅವಳ ಸೇವೆಗೆ ನಿಲ್ಲುತ್ತಾನೆ. ಈ ಪ್ರೀತಿಯ ಮಾತು ಕೇಳಿ ಭಾವುಕಳಾದ ಆಕೆ ಕಣ್ತುಂಬಿಕೊಂಡರೆ, ತಕ್ಷಣ ನಾಯಕ ಹಾಡುತ್ತಾನೆ: ‘ ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ…’
ಮುಂದೆ ಕಥೆ ಬೇರೊಂದು ತಿರುವಿಗೆ ಹೊರಳಿಕೊಳ್ಳುತ್ತದೆ. ಆಸ್ತಿಯ ಆಸೆಯಿಂದ ಸ್ವಂತ ಅಕ್ಕ- ಭಾವನೂ, ನಾಯಕಿಯ ಮೇಲಿನ ಆಸೆಯಿಂದ ಪ್ರೀತಿಯ ಗೆಳೆಯನೂ ನಾಯಕನಿಗೆ ಮೋಸ ಮಾಡುತ್ತಾರೆ. ಗೆಳೆಯ ಮತ್ತು ಅವನ ‘ಕಡೆಯವರಿಂದ’ ನಾಯಕನಿಗೆ ವಿಪರೀತ ಏಟೂ ಬೀಳುತ್ತದೆ. ಆತ ಆಸ್ಪತ್ರೆಯಲ್ಲಿದ್ದಾಗ ನಾಯಕಿ ಬರುತ್ತಾಳೆ. ಈ ಸಂದರ್ಭದಲ್ಲಿ ತನ್ನ ದುರಾದೃಷ್ಟ ಹಾಗೂ ಅಸಹಾಯಕ ಸ್ಥಿತಿಯನ್ನು ನೆನೆದು ನಾಯಕ ಕಣ್ತುಂಬಿಕೊಳ್ಳಬೇಕು… ಅಷ್ಟರಲ್ಲಿಯೇ ಗೆಳೆಯನ ಹಳೆಯ ಮಾತನ್ನು ಅವನಿಗೇ ನೆನಪಿಸುವಂತೆ ಥೇಟ್ ಅಮ್ಮನ ದನಿಯಲ್ಲಿ ನಾಯಕಿ ಹಾಡುತ್ತಾಳೆ: ‘ ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ…’
ಈ ಹಾಡು ಕೇಳುತ್ತಿದ್ದಂತೆ ಯಾಕೋ ಖುಷಿಯಾಗುತ್ತದೆ. ಹಾಡಿನ ಒಂದೊಂದೇ ಸಾಲು ಮುಗಿಯುತ್ತಾ ಹೋದಂತೆಲ್ಲ ಹಳೆಯ ಗೆಳತಿ(ಳೆಯ), ಹಳೆಯ ಪ್ರೇಮ, ಹಳೆಯ ಮಾತು, ಆಗ ನೀಡಿದ ಭಾಷೆ-ಎಲ್ಲವೂ ನೆನಪಾಗುತ್ತದೆ ಮತ್ತು ಎಷ್ಟೇ ತಡೆದುಕೊಂಡರೂ ಕಣ್ಣೀರ ಹನಿಯೊಂದು ಕೆನ್ನೆ ತೋಯಿಸಿ ಬಿಡುತ್ತದೆ.
ಆಣೆ -ಪ್ರಮಾಣದ ಈ ಹಾಡನ್ನು ಹೇಗೆ, ಎಲ್ಲಿ ಬರೆದರು ಹಂಸಲೇಖ? ಈ ಹಾಡು ಬರೆವ ಸಂದರ್ಭದಲ್ಲಿ ಅವರ ಕಣ್ಮುಂದೆ ಇದ್ದ ಚಿತ್ರ ಯಾವುದು? ಎಲ್ಲ ಪ್ರೇಮಿಗಳೂ ತಾವು ಪ್ರೀತಿಸುವ ವ್ಯಕ್ತಿಗೆ ಸಮಾಧಾನ ಹೇಳುವ ಧಾಟಿಯಲ್ಲಿದೆ ಈ ಹಾಡು. ಅಂದಹಾಗೆ, ಈ ಹಾಡಿನ ಹಿಂದಿರುವ ಕಥೆ ಯಾರದು? ಯಾವುದನ್ನೂ ಸುಲಭವಾಗಿ ಒಪ್ಪದ ನಿರ್ದೇಶಕ ಕೆ.ವಿ. ರಾಜು ಈ ಹಾಡನ್ನು ಹೇಗೆ ಬರೆಸಿದರು?
ಇಂಥವೇ ಹತ್ತಾರು ಪ್ರಶ್ನೆಗಳನ್ನು ಮುಂದಿಟ್ಟಾಗ ಹಂಸಲೇಖಾ ಉತ್ತರಿಸಿದ್ದು ಹೀಗೆ: ‘ಬೆಳ್ಳಿ ಕಾಲುಂಗುರ ಚಿತ್ರದ ನಿರ್ದೇಶಕ ಕೆ.ವಿ. ರಾಜು. ಆತ ಚಿತ್ರರಂಗದ ಜೀನಿಯಸ್. ಸಿನಿಮಾದ ಎಲ್ಲ ವಿಭಾಗವೂ ಅವರಿಗೆ ಅಂಗೈ ಗೆರೆಯಷ್ಟೇ ಚನ್ನಾಗಿ ಪರಿಚಯವಿತ್ತು. ಸಿನಿಮಾ ಅಂದರೆ ಸಾಕು, ಎಲ್ಲವನ್ನೂ ಮರೆತು ಬಿಡುತ್ತಿದ್ದ ರಾಜುಗೆ ಕನ್ನಡದಲ್ಲಿ ಮಾತ್ರವಲ್ಲ, ಬಾಲಿವುಡ್‌ನಲ್ಲೂ ಗೌರವವಿತ್ತು. ಆತನ ಸಿನಿಮಾದಲ್ಲಿ ನಟಿಸಿದ್ದ ಅಮಿತಾಭ್ ಬಚ್ಚನ್, ರಾಜು ಪ್ರತಿಭೆಯನ್ನು ಮುಕ್ತವಾಗಿ ಕೊಂಡಾಡಿದ್ದರು.
ರಾಜುವಿನ ಯೋಚನೆ ಹಾಗೂ ಸಿನಿಮಾ, ಪ್ರೀತಿ ನನಗೆ ತುಂಬ ಇಷ್ಟವಾಗಿತ್ತು. ಆತ ತನ್ನ ಮನಸನ್ನೇ ನನ್ನೆದುರು ತೆರೆದಿಡುತ್ತಿದ್ದ ತನ್ನ ಸಿನಿಮಾ ಪ್ರತಿಯೊಂದು ವಿಭಾಗದಲ್ಲೂ ಸೂಪರ್ ಆಗಿರಬೇಕು ಎಂದು ಆತ ಆಸೆ ಪಡುತ್ತಿದ್ದ. ಗುಣಮಟ್ಟದ ದೃಷ್ಟಿಯಲ್ಲಿ ಯಾವ ರಾಜಿಗೂ ಆತ ಒಪ್ಪುತ್ತಿರಲಿಲ್ಲ. ನನ್ನ ಸಿನಿಮಾಕ್ಕೆ ಇಂಥದೇ ಹಾಡು ಬೇಕೆಂದು ಕೇಳುತ್ತಿದ್ದ. ಒಂದು ಹಾಡು ಬರೆದುಕೊಟ್ಟರೆ, ಯಾಕೋ ಮನಸ್ಸಿಗೆ ಸಮಾಧಾನ ಆಗಿಲ್ಲ. ಇದಕ್ಕಿಂತ ಚನ್ನಾಗಿರೊದನ್ನು ಬರೆದು ಕೊಡಿ ಗುರುಗಳೇ ಎಂದು ದುಂಬಾಲು ಬೀಳುತ್ತಿದ್ದ. ಆತನ ಒತ್ತಾಯ ಕಂಡು ನನಗೂ ಖುಷಿಯಾಗುತ್ತಿತ್ತು. ಕೆ.ವಿ. ರಾಜು-ಹಂಸಲೇಖಾ ಕಾಂಬಿನೇಷನ್‌ನಲ್ಲಿ ಹಿಟ್ ಹಾಡುಗಳು ಬಂದಿರುವುದಕ್ಕೆ ಇದೂ ಒಂದು ಕಾರಣ ಅನ್ಕೋತೀನಿ ನಾನು…
ಪರಿಸ್ಥಿತಿ ಹೀಗಿದ್ದಾಗಲೇ ಸಾ.ರಾ. ಗೋವಿಂದು ನಿರ್ಮಾಣದ ‘ಬೆಳ್ಳಿ ಕಾಲುಂಗುರ’ ಚಿತ್ರದ ನಿರ್ದೇಶನಕ್ಕೆ ರಾಜು ಆಯ್ಕೆಯಾದ. ಬೆಂಗಳೂರಿನ ಮೋತಿ ಮಹಲ್ ಹೋಟೆಲಿನಲ್ಲಿ ಸಿನಿಮಾದ ಕೆಲಸ ಆರಂಭವಾಯಿತು. ಈ ಸಂದರ್ಭದಲ್ಲಿಯೇ ಅದೊಮ್ಮೆ ನನ್ನನ್ನು ಕರೆಸಿಕೊಂಡ ರಾಜು ಕಥೆ ಹೇಳಿದ. ಹಾಡುಗಳು ಯಾವ್ಯಾವ ಸಂದರ್ಭದಲ್ಲಿ ಬೇಕು ಎಂಬುದನ್ನೂ ಹೇಳಿದ. ಕಡೆಗೆ ಒಂದು ದಿನವನ್ನು ‘ಫಿಕ್ಸ್’ ಮಾಡಿ- ‘ಅವತ್ತು ನೀವು ನನ್ನೆದುರೇ ಕೂತು ಹಾಡಿನ ಟ್ಯೂನ್ ಮತ್ತು ಸಾಹಿತ್ಯವನ್ನು ಕೊಡಬೇಕು ಗುರುಗಳೇ…’ ಅಂದ.
ನಿಗಯಾಗಿದ್ದ ದಿನ ಬಂದೇ ಬಂತು. ಅವತ್ತು ಹೋಟೆಲಿಗೆ ಹೋದೆ. ಹಾರ್‍ಮೋನಿಯಂ ಮುಂದಿಟ್ಟುಕೊಂಡು ಕೂತೆ. ಸಿನಿಮಾದ ಕಥೆಯನ್ನು ಕಣ್ಮುಂದೆ ತಂದುಕೊಂಡೆ. ನಾಯಕ, ನಾಯಕಿ ಇಬ್ಬರೂ ತುಂಬ ಕಷ್ಟದಲ್ಲಿದ್ದಾಗ ಕೇಳಿಬರುವ ಹಾಡಿದು. ಹಾಡು ಬರೆಯಬೇಕು ಅಂದುಕೊಂಡಾಗ ನನ್ನ ಕಣ್ಮುಂದೆ ಬಂದದ್ದು ಕೇವಲ ನಾಯಕ- ನಾಯಕಿಯ ಚಿತ್ರವಲ್ಲ. ಬದಲಿಗೆ ಸಮಸ್ತ ಪ್ರೇಮಿಗಳದ್ದು. ತನ್ನ ಬದುಕಿನ ನಾವೆ ಮುಳುಗಿಹೋಯಿತು ಎಂಬಂಥ ಸಂದರ್ಭದಲ್ಲಿ ಆಕಸ್ಮಿಕವಾಗಿ ಒಲಿದು ಬಂದವನು(ಳು) ಕಾಣಿಸಿಕೊಂಡರೆ ಪ್ರೇಯಸಿ/ ಪ್ರಿಯಕರನಿಗೆ ದುಃಖ ಉಮ್ಮಳಿಸಿ ಬರುತ್ತದೆ. ಅಂಥ ಸಂದರ್ಭದಲ್ಲಿ ಒಲಿದು ಬಂದವನು(ಳು)-‘ ಉಹುಂ, ನೀನೀಗ ಅಳಬಾರ್‍ದು. ಹೀಗೆಲ್ಲ ಅತ್ತರೆ ನನ್ನ ಮೇಲಾಣೆ’ ಎಂದು ಬಿಡುತ್ತಾರೆ. ಈ ‘ಆಣೆ’ಗೆ ಮೀರಿ ನಡೆದುಕೊಂಡರೆ ಒಲಿದವರಿಗೆ ಕೆಡುಕಾಗಬಹುದು ಎಂಬ ಒಂದೇ ಕಾರಣಕ್ಕೆ ಕಣ್ಣೀರೇ ಬತ್ತಿ ಹೋಗುವಂತೆ ಮಾಡುವ ಪ್ರೇಮಿಗಳು ಎಲ್ಲ ಕಡೆಯೂ ಇದ್ದಾರೆ…
ನಾನು ಕಂಡಿದ್ದ, ಕೇಳಿದ್ದ ಹಲವಾರು ಪ್ರೇಮಿಗಳ ನೆನಪು ಒಂದರ ಹಿಂದೊಂದರಂತೆ ಕಣ್ಮುಂದೆ ಬರುತ್ತಿದ್ದಂತೆಯೇ ಹಾಡಿನ ಮೊದಲ ಸಾಲು ಹೊಳೆದುಬಿಟ್ಟಿತು. ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ…’ ಮೊದಲ ಸಾಲು ಮುಗಿಸುವುದರೊಳಗೆ ನಾನೇ ಭಾವುಕನಾಗಿದ್ದೆ. ಈ ಸಾಲಲ್ಲಿ ಏನೋ ಆಕರ್ಷಣೆ ಇದೆ ಅನಿಸಿದ್ದೇ ಆಗ. ನಂತರದ್ದೆಲ್ಲ ಸರಾಗ. ತುಂಬ ಸುಲಭದಲ್ಲಿ ಮೊದಲ ಚರಣ ಮುಗಿದು ಹೋಯಿತು. ನಾನು ಸರಸರನೆ ಬರೀತಾ ಇದ್ದುದು ನೋಡಿದ ರಾಜು- ‘ಆಯ್ತಾ ಗುರುಗಳೇ?’ ಎಂದರು.
ಯಾವುದೇ ಹಾಡು ಕೊಟ್ಟರೂ-ಇದಕ್ಕಿಂತ ಸೂಪರ್ ಆಗಿರೋದು ಕೊಡಿ ಎನ್ನುತ್ತಿದ್ದ ರಾಜು ಮಾತು ನೆನಪಿಗೆ ಬಂತು. ನಂತರದ ಹದಿನೈದು ನಿಮಿಷದಲ್ಲಿ ಅದೇ ಟ್ಯೂನ್‌ಗೆ ಇನ್ನೂ ನಾಲ್ಕು ಹಾಡು ಬರೆದೆ. ನಂತರ, ಮೊದಲು ಬರೆದಿದ್ದ ಹಾಡನ್ನು ಎತ್ತಿಟ್ಟುಕೊಂಡು, ಬಾಕಿ ನಾಲ್ಕು ಹಾಡುಗಳನ್ನು ಒಂದರ ನಂತರ ಒಂದನ್ನು ಕೇಳಿಸಿದೆ. ಆ ಪುಣ್ಯಾತ್ಮ ನಾಲ್ಕನ್ನೂ ಒಪ್ಪಲಿಲ್ಲ. ‘ಗುರುಗಳೇ ನನಗೆ ಇದೆಲ್ಲಕ್ಕಿಂತ ಚನ್ನಾಗಿರೋದು ಬೇಕು. ಬೇರೆಯದು ಕೊಡಿ’ ಅಂದ!
ಆಗ ಮೆಲ್ಲಗೆ ಮೊದಲೇ ಬರೆದಿಟ್ಟಿದ್ದ ‘ಒಂದೇ ಒಂದು ಕಣ್ಣ ಬಿಂದು’ ಹಾಡು ಹೊರತೆಗೆದೆ. ಹಾರ್‍ಮೋನಿಯಂ ಬಾರಿಸುತ್ತಾ ಅದರ ಪಲ್ಲವಿಯನ್ನು ಹಾಡಿದೆ ನೋಡಿ- ಅವನ್ನು ಕೇಳಿ, ಕೆ.ವಿ. ರಾಜು ಮುಖ ಊರಗಲವಾಯಿತು. ಆತ ಸಂಭ್ರಮದಿಂದ-‘ಗುರುಗಳೇ, ಈ ಹಾಡು ಸೂಪರ್’ ಎಂದು ಉದ್ಗರಿಸಿದ. ಮುಂದೆ ಸಿನಿಮಾ ಬಿಡುಗಡೆಯಾದಾಗ ರಾಜು ತೆಗೆದ ಉದ್ಗಾರವನ್ನೇ ಪ್ರೇಕ್ಷಕರೂ ರಿಪೀಟ್ ಮಾಡಿದರು….’
ಹಳೆಯ ನೆನಪೊಂದು ಥೇಟ್ ಹಾಡಿನಂತೆಯೇ ತಮ್ಮ ಕೈ ಹಿಡಿದು ಕಾಡಿದ ಸೊಗಸಿಗೆ ತಾವೇ ಒಮ್ಮೆ ಬೆರಗಾಗಿ ನಗುತ್ತಾ ಮಾತು ಮುಗಿಸಿದರು ಹಂಸಲೇಖ.
***
ಇವತ್ತು ಎಲ್ಲರೂ ಮಾತು ಮಾತಿಗೂ ಪಾಸಿಟಿವ್ ಥಿಂಕಿಂಗ್ ಎನ್ನುತ್ತಾರೆ. ಅಂಥದೇ ಭಾವ ಹೊಮ್ಮಿಸುವ ಹಾಡನ್ನು ಹಂಸಲೇಖ ದಶಕಗಳ ಹಿಂದೆಯೇ ಬರೆದಿದ್ದರಲ್ಲ? ಆ ಕಾರಣಕ್ಕಾಗಿ ಎಲ್ಲ ಪ್ರೇಮಿಗಳ ಪರವಾಗಿ ಅವರಿಗೆ ಅಭಿನಂದನೆ.
ನಿಮ್ಮದೊಂದು ಉತ್ತರ