ಕಣ್ಮುಂದೆ ಇರೋದು ಇನ್ನು ಒಂದೇ ದಿನ. ಒಂದು ದಿನ ಕಳೆಯಿತೆಂದರೆ- ಚಿಯರ್‍ಸ್! ಅದು ಹೊಸ ವರ್ಷದ ಮೊದಲ ದಿನ. ಪ್ರತಿಬಾರಿಯೂ ಅಷ್ಟೆ. ಡಿಸೆಂಬರ್ ಬಂದಾಕ್ಷಣವೇ ನಮಗೆ ಹೊಸ ವರ್ಷ ನೆನಪಾಗುತ್ತದೆ. ಸರಿದು ಹೋಗುತ್ತಿರುವ ವರ್ಷದಲ್ಲಿ ಒಂದು ಸೋಲಿಗೆ, ಸಂಕಟಕ್ಕೆ, ಅವಮಾನಕ್ಕೆ, ಯಾತನೆಗೆ ಸಿಕ್ಕಿಕೊಂಡವರು ಹೊಸ ವರ್ಷದಲ್ಲಾದರೂ ನನಗೆ ನೆಮ್ಮದಿ ಸಿಗಲಿ ಎಂದು ಆಸೆ ಪಡುತ್ತಾರೆ. ಅದೇ ರೀತಿ, ಈಗಾಗಲೇ ಯಶಸ್ಸಿನ ಕುದುರೆ ಮೇಲಿರುವ ಜನ, ಅದೇ ಯಶಸ್ಸು ಹೊಸ ವರ್ಷದಲ್ಲೂ ಮುಂದುವರಿಯಲಿ ಎಂದು ಬಯಸುತ್ತಾರೆ. ಅದಕ್ಕಾಗಿ ಪ್ರಾರ್ಥಿಸುತ್ತಾರೆ. ಪೂಜೆ ಮಾಡುತ್ತಾರೆ. ಹರಕೆ ಕಟ್ಟಿಕೊಳ್ಳುತ್ತಾರೆ. ಹೋಮ ಮಾಡಿಸುತ್ತಾರೆ. ಜ್ಯೋತಿಷ್ಯದ ಮೊರೆ ಹೋಗುತ್ತಾರೆ…
ಇಂಥ ಸಂದರ್ಭದಲ್ಲಿಯೇ ಕೆಲವರು ಬೇರೆಯದೇ ಧಾಟಿಯಲ್ಲಿ ಮಾತಾಡಲು ಶುರು ಮಾಡುತ್ತಾರೆ. ಅವರ ಪ್ರಕಾರ- ‘ಗೆಲುವು ಎಂಬುದು ಕೇವಲ ಅದೃಷ್ಟದ ಆಟ. ಅದು ಹಣೆಬರಹ. ಅದು ದೈವಕೃಪೆ! ಅದೊಂಥರಾ ಲಾಟರಿ ಇದ್ದ ಹಾಗೆ! ಯಶಸ್ಸು ಎಂಬುದು ಯಾವತ್ತೂ ಶ್ರೀಮಂತರ ಪಕ್ಷಪಾತಿ. ಹಾಗಾಗಿ, ಆಕಾಶಕ್ಕೆ ಏಣಿ ಹಾಕುವ ಕೆಲಸ ಮಾಡಲೇಬಾರದು. ‘ಬಡವಾ, ನೀ ಮಡಗಿದಹಾಂಗಿರು’ ಎಂದು ಗಾದೆಯೇ ಇದೆ. ಅದರಂತೆ ಇದ್ದು ಬಿಡಬೇಕು. ಅದೇ ಸರಿ….’
ವಿಪರಾಸ್ಯವೆಂದರೆ, ಇಂಥ ಪೆದ್ದು ಪೆದ್ದು ಮಾತುಗಳನ್ನೇ ನಂಬುವ, ಅದನ್ನು ಅನುಮೋದಿಸುವ, ಅದನ್ನೇ ಅನುಸರಿಸಿ ಬದುಕುವ ಮಂದಿ ಕೂಡಾ ನಮ್ಮ ಮಧ್ಯೆ ಇದ್ದಾರೆ.
ಒಂದು ಮಾತು ನೆನಪಿರಲಿ : ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ, ಅಲ್ಲೆಲ್ಲ ಮಹಾನ್ ವ್ಯಕ್ತಿಗಳ ಸಾಧನೆಯ ಬದುಕಿನ ಕಥೆಗಳು ಕಣ್ಣು ಕುಕ್ಕುತ್ತವೆ. ಸ್ವಾರಸ್ಯವೇನೆಂದರೆ, ಒಂದು ಗೆಲುವಿನ ಮೆಟ್ಟಿಲು ಹತ್ತಿ ನಿಲ್ಲುವ ಮುನ್ನ ಅದೇ ಸಾಧಕ ಹತ್ತಕ್ಕೂ ಹೆಚ್ಚು ಬಾರಿ ಸೋಲಿನ ಮೆಟ್ಟಿಲು ಮೇಲೆ ಹೊರಳಾಡಿರುತ್ತಾನೆ ಮತ್ತು ಆತ ಕೂಡ ನಮ್ಮ ನಿಮ್ಮೆಲ್ಲರಂತೆಯೇ ಜನ ಸಾಮಾನ್ಯನೇ ಆಗಿರುತ್ತಾನೆ. ಈ ಮಾತಿಗೆ ಉದಾಹರಣೆಯಾಗಿ ಒಂದು ಕಥೆ ಕೇಳಿ :
ಅವನು ಅಮೆರಿಕನ್. ಆತ ನಮ್ಮ ನಿಮ್ಮಂತೆಯೇ ಇದ್ದ ಮನುಷ್ಯ. ಬದುಕಲ್ಲಿ ಏನಾದರೂ ಸಾಸಬೇಕು ಎಂದು ಅವನಿಗೆ ಆಸೆಯಿತ್ತು. ಕನಸುಗಳಿದ್ದವು. ಛಲವಿತ್ತು, ಆತ್ಮವಿಶ್ವಾಸವಿತ್ತು. ‘ಸಾಧನೆ’ ಮಾಡಲು ಹಣ ಬೇಕು ಅನ್ನಿಸಿದಾಗ ಈತ ಚಿಕ್ಕಂದಿನಲ್ಲೇ ದುಡಿಯಲು ನಿಂತ. ವರ್ಷ ವರ್ಷವೂ ಇಷ್ಟಿಷ್ಟೇ ದುಡ್ಡು ಸೇರಿಸಿಕೊಂಡ. ಹಣದ ಗಂಟು ಒಂದಿಷ್ಟು ದೊಡ್ಡದಾಗುವ ವೇಳೆಗೆ ಅವನಿಗೆ ೨೧ ವರ್ಷವಾಯ್ತು. ಗಂಟಿನ ಹಣದ ಬಲದಿಂದಲೇ ಆತ ವ್ಯಾಪಾರ ಶುರು ಮಾಡಿದ. ಒಂದು ವರ್ಷ ಬಿಸಿನೆಸ್ ಮಾಡಿದ. ಲಾಭದ ಮಾತು ಹಾಗಿರಲಿ, ಹಾಕಿದ ಬಂಡವಾಳವೂ ಬರಲಿಲ್ಲ. ಈ ಸೋಲು ಮರೆಯುವ ಸಲುವಾಗಿ, ಮುಂದಿನ ವರ್ಷ ಆತ ಜಿಲ್ಲಾ ಮಟ್ಟದ ಚುನಾವಣೆಯಲ್ಲಿ ರ್ಸ್ಪಸಿದ. ಅಲ್ಲೂ ಸೋತ. ಛೆ, ಯಾಕೋ ನನ್ನ ನಸೀಬು ನೆಟ್ಟಗಿಲ್ಲ ಎಂದು ಗೊಣಗಿಕೊಂಡು ಮತ್ತೆ ದುಡಿಮೆಗೆ ನಿಂತ. ಭರ್ತಿ ಎರಡು ವರ್ಷ ಹಗಲಿರುಳೂ ದುಡಿದ. ಪರಿಣಾಮ, ಒಂದಿಷ್ಟು ದುಡ್ಡು ಜತೆಯಾಯಿತು. ವ್ಯಾಪಾರದಲ್ಲಿ ಹಿಂದೊಮ್ಮೆ ಸೋತಿದ್ದನಲ್ಲ? ಆ ತಪ್ಪುಗಳನ್ನೆಲ್ಲ ನೆನಪಿಟ್ಟುಕೊಂಡೇ ಮತ್ತೆ ವ್ಯಾಪಾರ ಆರಂಭಿಸಿದ. ಅದೇ ಸಂದರ್ಭದಲ್ಲಿ ಮದುವೆಯಾದ. ಮೊದಲ ವರ್ಷ ವ್ಯವಹಾರ ಮತ್ತು ದಾಂಪತ್ಯ ಚೆನ್ನಾಗಿಯೇ ಇತ್ತು. ಆದರೆ ಈ ಮಹಾರಾಯನ ೨೬ನೇ ವರ್ಷದಲ್ಲಿ ಮತ್ತೊಂದು ಆಘಾತವಾಯಿತು. ಒಂದೆಡೆ ವ್ಯಾಪಾರದಲ್ಲಿ ಲಾಸ್ ಆಯಿತು. ಆ ಬಗ್ಗೆ ಯೋಚಿಸುತ್ತಿದ್ದ ಸಂದರ್ಭದಲ್ಲಿಯೇ ನ್ಯುಮೋನಿಯಾಕ್ಕೆ ತುತ್ತಾಗಿ ಆತನ ಹೆಂಡತಿಯೂ ತೀರಿಹೋದಳು. ಹೀಗೆ, ಒಂದರ ಹಿಂದೊಂದರಂತೆ ಸೋಲು, ಸಂಕಟಗಳಿಂದ ಆತ ಮನೋರೋಗಿಯೇ ಆಗಿ ಹೋದ. ಓಹ್, ಇನ್ನು ಇವನ ಕಥೆ ಮುಗೀತು. ಇವನು ಹುಚ್ಚ ಆಗೋದು ಗ್ಯಾರಂಟಿ ಎಂದು ಗೆಳೆಯರು, ಬಂಧುಗಳೆಲ್ಲ ನಿರ್ಧರಿಸಿದ್ದರು. ಆದರೆ, ಪವಾಡ ನಡೆದೇ ಹೋಯಿತು. ಒಂದು ವರ್ಷದ ಅವಯಲ್ಲಿ ಈತ ವೈದ್ಯರೇ ಬೆರಗಾಗುವಂತೆ ಚೇತರಿಸಿಕೊಂಡ.
ಮುಂದಿನ ಏಳು ವರ್ಷಗಳ ಕಾಲ ಆತ ಎಲ್ಲಿದ್ದ, ಏನು ಮಾಡುತ್ತಿದ್ದ ಎಂಬುದು ಹೆಚ್ಚಿನವರಿಗೆ ಗೊತ್ತಾಗಲೇ ಇಲ್ಲ. ಆತ ಕ್ಷಣಕ್ಷಣವೂ ಒಂದು ಗೆಲುವಿಗಾಗಿ ಕಾತರಿಸುತ್ತಲೇ ಬದುಕಿದ. ಅವನಿಗೆ ೩೪ ವರ್ಷವಾಗಿದ್ದಾಗ ಮತ್ತೊಂದು ಮಹಾಚುನಾವಣೆ ಬಂತು. ಪಕ್ಷವೊಂದರ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತ. ಸೋತ. ಅದುವರೆಗೂ ಈತನ ಹಲವಾರು ವಿಫಲ ಸಾಹಸಗಳನ್ನು ನೋಡಿದ್ದ ಜನ ನಕ್ಕರು. ಗೇಲಿ ಮಾಡಿದರು. ‘ಏನಪ್ಪಾ ನಿನ್ನ ಆಟ, ಹೀಗೆಲ್ಲ ಆಡುವ ಬದಲು ತೆಪ್ಪಗಿರಬಾರದಾ?’ ಎಂದು ಬುದ್ಧಿ ಹೇಳಿದರು.
ಎಲ್ಲರ ಬುದ್ಧಿಮಾತನ್ನೂ ತಾಳ್ಮೆಯಿಂದ ಕೇಳಿಸಿಕೊಂಡ ಈತ, ತನ್ನ ೪೫ನೇ ವಯಸ್ಸಿನಲ್ಲಿ ಸೆನೆಟ್ ಸಭೆಯ ಚುನಾವಣೆಗೆ ನಿಂತು ಸೋತ. ಇಷ್ಟಾದ ಮೇಲಾದರೂ ಸುಮ್ಮನಿರಬಾರದೆ? ಅವನು ಸುಮ್ಮನಿರಲಿಲ್ಲ. ಎರಡು ವರ್ಷಗಳ ನಂತರ, ಅಂದರೆ ತನ್ನ ೪೭ನೇ ವಯಸ್ಸಿನಲ್ಲಿ ಅದೇ ಅಮೆರಿಕದ ಉಪಾಧ್ಯಕ್ಷ ಸ್ಥಾನಕ್ಕೇ ರ್ಸ್ಪಸಿದ. ಯಥಾಪ್ರಕಾರ ಸೋತ. ಈ ಮತ್ತೊಂದು ಮಹಾಸೋಲೂ ಅವನನ್ನು ಧೃತಿಗೆಡಿಸಲಿಲ್ಲ. ಎರಡು ವರ್ಷ ಸುಮ್ಮನಿದ್ದವನು ಮತ್ತೆ ಸೆನೆಟ್ ಚುನಾವಣೆಗೆ ರ್ಸ್ಪಸಿ ಅಲ್ಲಿಯೂ ಸೋತ!
ಇದನ್ನು ಕಂಡ ಅಮೆರಿಕದ ಜನ ತಲೆಗೊಂದು ಮಾತಾಡಿದರು. ಇವನನ್ನು ಗೇಲಿ ಮಾಡಿದರು. ಮರುಕದಿಂದ ನೋಡಿದರು. ಸೋಲಿನ ದೊರೆ ಎಂದು ಹೀಯಾಳಿಸಿದರು. ಸೋಲುವುದರಲ್ಲಿ ಗಿನ್ನಿಸ್ ರೆಕಾರ್ಡ್ ಸೇರೋ ಆಸಾಮಿ ಎಂದರು. ಯಾರು ಅದೆಷ್ಟೇ ಟೀಕಿಸಿದರೂ ಈತ ಅದನ್ನು ಕಂಡೂ ಕಾಣದವನಂತೆ ಮುನ್ನಡೆದ ಮತ್ತು ತನ್ನ ೫೨ನೇ ವಯಸ್ಸಿನಲ್ಲಿ ಅಮೆರಿಕದ ಅಧ್ಯಕ್ಷ ಪದವಿಗೆ ರ್ಸ್ಪಸಿ ಪ್ರಚಂಡ ಬಹುಮತದಿಂದ ಗೆದ್ದ!
ಅಂದಹಾಗೆ, ನೂರಾರು ಸೋಲುಗಳ ಮಧ್ಯೆಯೇ ಗೆಲುವಿನ ಅರಮನೆಗೆ ನಡೆದು ಬಂದ ಆತ ಯಾರು ಗೊತ್ತೆ?
ಅಬ್ರಹಾಂ ಲಿಂಕನ್!
೮
ಈಗ ಯೋಚಿಸಿ. ಹಣೆಬರಹವನ್ನೋ, ವಿಯಾಟವನ್ನೋ, ಅದೃಷ್ಟವನ್ನೋ ಹಳಿದುಕೊಂಡು ಅಬ್ರಹಾಂ ಲಿಂಕನ್ನನೂ ಸುಮ್ಮನೇ ಉಳಿದಿದ್ದರೆ ಏನಾಗುತ್ತಿತ್ತು ಹೇಳಿ? ಆತನೂ ಜಗತ್ತಿನ ಕೋಟ್ಯಂತರ ಸೋತು ಹೋದವರ, ಕನಸನ್ನೇ ಕಾಣದವರ ಪಟ್ಟಿಗೆ ಸೇರಿ ಹೋಗುತ್ತಿದ್ದ. ಆದರೆ, ನನ್ನಿಂದ ಏನೂ ಆಗುವುದಿಲ್ಲ ಎಂದು ಯೋಚಿಸುವ ಬದಲಿಗೆ ನನ್ನಿಂದ ಎಲ್ಲವೂ ಸಾಧ್ಯ ಎಂದು ಅವನು ಸೋಲಿನ ಹಾದಿಯಲ್ಲೂ ಒಂದೊಂದೇ ದಿಟ್ಟ ಹೆಚ್ಚೆ ಇಟ್ಟಿದ್ದರಿಂದ ಆಕಾಶಕ್ಕೇ ಏಣಿ ಹಾಕುವುದು ಅವನಿಂದ ಸಾಧ್ಯವಾಯಿತು.
ಗೆಳೆಯರೆ, ಸಾಧನೆಗೆ ಅಸಾಧ್ಯವಾದುದು ಉಹುಂ- ಇಲ್ಲ, ಇಲ್ಲ, ಇಲ್ಲ. ಲಿಂಕನ್‌ನ ಗೆಲುವಿನ ಬದುಕು ಎಲ್ಲರಿಗೂ ಮಾದರಿಯಾಗಿರಲಿ. ಅವನಿಗೆ ಸಿಕ್ಕಂಥ ಹೆಸರು, ಯಶಸ್ಸು ಈ ಹೊಸ ವರ್ಷದಲ್ಲಿ ಎಲ್ಲರದೂ ಆಗಲಿ ಎಂಬ ಶುಭಾಕಾಂಕ್ಷೆಯೊಂದಿಗೆ- ಒಂದು ದಿನ ಮುಂಚಿತವಾಗಿ ಹೊಸ ವರ್ಷದ ಶುಭಾಶಯಗಳು.
“ಬದುಕಿನಲ್ಲಿ ಸಾಧಿಸಿದವರ ಬಗ್ಗೆನೆ ಎಲ್ಲಾರು ಬರೀತಾರೆ ಆದರೆ ಅದರ ಹಿಂದಿರುವ ನೋವಿನ ಬಗ್ಗೆ ಯಾರು ಹೇಳಲ್ಲ” ಅಂತ ನಾನು ನನ್ನ ಗೆಳೆಯರು ಮಾತಾಡಿತಿದ್ವೀ ನೀವು ಅದಕ್ಕೆ ಅಪವಾದ ಸರ್ ನಿಮ್ಮ ಬರಹಗಳು ಯಾಕೋ ಎನೋ ತುಂಬ ಚೆನ್ನಾಗಿರ್ತಾವೆ
ಮಣಿಕಾಂತ್ ಸರ್,
ಉನ್ನತ ವ್ಯಕ್ತಿಯೊಬ್ಬರ ಬದುಕಿನ ಬಗ್ಗೆ ವಿವರಣೆಗಳನ್ನು ನೀಡಿದ್ದೀರಾ, ಮಾಹಿತಿಗೆ ಧನ್ಯವಾದಗಳು.
ಛಲವೊಂದಿದ್ದರೆ ಏನು ಬೇಕಿದ್ದರೂ ಸಾಧ್ಯ ಎನ್ನುವುದಕ್ಕೆ ಅಬ್ರಹಾಂ ಲಿಂಕನ್ ಪ್ರತ್ಯಕ್ಷ ಸಾಕ್ಷಿ.
ನಿಮಗೂ ಹಾಗೊ ಕುಟುಂಬಕ್ಕೂ ಹೊಸವರ್ಷದ ಶುಭಾಶಯಗಳು.