ಏನೇ ಕೇಳು ಕೊಡುವೆ ನಿನಗೆ ನಾನೀಗ
ಚಿತ್ರ: ಗೀತಾ. ಗೀತೆರಚನೆ: ಚಿ. ಉದಯಶಂಕರ್
ಸಂಗೀತ: ಇಳಯರಾಜ. ಗಾಯನ: ಎಸ್ಪೀಬಿ-ಎಸ್. ಜಾನಕಿ
ಮಾತು: ‘ಹಲೋ, ಈಸ್ ಇಟ್ ೨೬೨೬೬?’
‘ಯೆಸ್’
‘ಹಾಯ್ ಸಂಜು…’
‘ಹಾಯ್ ಗೀತಾ…’
‘ಸಂಜು, ನಾ ಊಟಿಗೆ ಹೋಗ್ತಿದೀನಿ’
‘ಕಂಗ್ರಾಜುಲೇಷನ್ಸ್, ಯಾವಾಗ?’
‘ನಾಳೆ ಬರ್‍ತೀಯ ತಾನೇ?’
ಹಾಡು: ಏನೇ ಕೇಳು ಕೊಡುವೆ ನಿನಗೆ ನಾನೀಗ
ನಿನ್ನ ಬಯಕೆ ಏನು ಮನದಾಸೆ ಏನು
ಬಾ ಹೇಳು ಕಿವಿಯಲ್ಲಿ
ಏನೇ ಕೇಳು ಕೊಡುವೆ ನಿನಗೆ ನಾನೀಗ ||ಪ||
‘ಬಾಳು ಒಂದಾಟ ದಿನವೂ ಹೊಸ ನೋಟ
ಒಲಿದ ಹುಡುಗ ಜತೆಯಾಗಿರಲು ಸಂತೋಷ’
‘ಬಾಳು ಒಂದಾಟ ದಿನವೂ ಹೊಸನೋಟ
ಒಲಿದ ಹುಡುಗಿ ಜತೆಯಾಗಿರಲು ಸಂತೋಷ’
ಪುಟ್ಟದೊಂದು ಮಾತು ಹೇಳೋ ಆಸೆ ಬಂತು
ಹಗಲು ಇರುಳು ಹೀಗೆ ಸೇರಿ ಜೋಡಿಯಾಗಿ ಹಾಡೋಣ
ಬೇರೆ ಏನು ಬೇಕು ನೀನು ಇರುವಾಗ
ನಿನ್ನ ಜತೆಯೇ ಸಾಕು…ಸವಿನುಡಿಯೇ ಸಾಕು, ಸಾಕು ನಿನ್ನೊಲುಮೆ
ಬೇರೆ ಏನು ಬೇಕು ನೀನು ಇರುವಾಗ? ||೧||
ಹಾ… ಕಣ್ಣುಗಳು ಕಲೆತಾಗ ಮನಸೆರಡು ಬೆರೆತಾಗ
ಮಿಂಚೊಂದು ಮೈಯಲ್ಲಿ ಸಂಚರಿಸಿದಾಗ
ಹೃದಯದಲಿ ಬಿರುಗಾಳಿ ಬೀಸಿಬಂದಂತಾಗಿ
ವಿರಹದುರಿ ಒಡಲಲ್ಲಿ ಸುಡುತಲಿರುವಾಗ
ನಿನ್ನ ಸೇರಿ ಹಾಯಾಗಿರಲು ನಾ ಬಂದೆ
ನಿನ್ನ ಬಯಕೆ ಅರಿತೆ, ಮನದಾಸೆ ತಿಳಿದೆ, ಬಾ ಇನ್ನೂ ಹತ್ತಿರಕೆ ||೨||
ಒಂದು ನೆನಪಾಗಿ, ಒಂದು ನಗುವಾಗಿ, ಒಂದು ಕನಸಾಗಿ, ಒಂದು ಪಾತ್ರವಾಗಿ, ಮರೆಯಲಾಗದ ‘ಚಿತ್ರ’ವಾಗಿ ಕನ್ನಡಿಗರನ್ನು ಬಿಟ್ಟೂ ಬಿಡದೆ ಕಾಡುವ ವ್ಯಕ್ತಿತ್ವ ನಟ ಶಂಕರ್‌ನಾಗ್ ಅವರದು. ಶಂಕರ್‌ನಾಗ್ ಅಂದರೆ ಸಾಕು- ಮನಸು ಮೂಕವಾಗುತ್ತದೆ. ಹೃದಯ ಭಾರವಾಗುತ್ತದೆ. ಹೆಸರೇ ಗೊತ್ತಿಲ್ಲದ ಕೆಲವರು ಶಂಕರ್‌ನಾಗ್ ಕುರಿತು ಮಾತಿಗೆ ನಿಂತಿದ್ದರೆ ಅದನ್ನು ಕೇಳುತ್ತಲೇ ನಿಂತುಬಿಡುವ ಆಸೆಯಾಗುತ್ತದೆ. ಅಂಥ ಸಂದರ್ಭದಲ್ಲೆಲ್ಲ ಮನಸು ಮಾತಾಡುವುದು ಹೀಗೆ: ’Uಛಿ ಞಜಿoo qsಟ್ಠ oeZhZ Zಜ..’
ಶಂಕರ್‌ನಾಗ್ ಸಿನಿಮಾದ ಹಾಡುಗಳ ಹಿಂದಿರುವ ಕಥೆಯನ್ನು ಈ ಅಂಕಣದಲ್ಲಿ ಬರೆಯಲೇಬೇಕು ಎಂದು ಕನಸು ಕಂಡಿದ್ದು ವರ್ಷದ ಹಿಂದೆ. ಆದರೆ ಕನಸು ನನಸಾದದ್ದು ಮಾತ್ರ ಮೊನ್ನೆ ಮೊನ್ನೆ- ಹೊಸ ವರ್ಷದ ಮುಸ್ಸಂಜೆ. ಅವತ್ತು ಆಕಸ್ಮಿಕವಾಗಿ ಸಿಕ್ಕವರು ಶಂಕರ್‌ನಾಗ್ ಅವರ ಜೀವದ ಗೆಳೆಯ ರಮೇಶ್ ಭಟ್. ಭಟ್ಟರು ಅವತ್ತು ಮಾತಾಡುವ ಮೂಡ್‌ನಲ್ಲಿದ್ದರು. ‘ಸಾರ್ ಹಾಡಿನ ಕಥೆ..’ ಅನ್ನುತ್ತಿದ್ದಂತೆಯೇ ‘ಗೀತಾ’ ಸಿನಿಮಾದ ಒಂದು ಹಾಡಿನ ಕಥೆ ಹೇಳಲಾ? ಎಂದವರೇ ಶುರುಮಾಡಿಯೇ ಬಿಟ್ಟರು. ಮಾತು ಮುಂದುವರಿದಿದ್ದು ಹೀಗೆ:
***
ಆಗಷ್ಟೇ ‘ಮಿಂಚಿನ ಓಟ’ ಸಿನಿಮಾ ಬಿಡುಗಡೆಯಾಗಿ ಪ್ರಚಂಡ ಯಶಸ್ಸು ಕಂಡಿತ್ತು. ಆಗಲೇ ಒಂದು ಕಮರ್ಷಿಯಲ್ ಸಿನಿಮಾ ನಿರ್ದೇಶಿಸುವ ಯೋಚನೆಯಲ್ಲಿದ್ದ ಶಂಕರ್. ಅದಕ್ಕೆ ಕಥೆ-ಚಿತ್ರಕಥೆಯ ಕೆಲಸವೂ ಮುಗಿದಿತ್ತು. ರಾಜ್‌ಕುಮಾರ್ ಚಿತ್ರಗಳನ್ನು ನಿರ್ಮಿಸುತ್ತಿದ್ದ ದ್ವಾರಕಾನಾಥ್ ಮತ್ತು ಭಕ್ತವತ್ಸಲಂ ನಿರ್ಮಾಣದ ಜವಾಬ್ದಾರಿ ಹೊರಲು ಮುಂದೆ ಬಂದಿದ್ದರು. ಹೊಸ ಚಿತ್ರಕ್ಕೆ ‘ಗೀತಾ’ ಎಂದು ಹೆಸರಿಟ್ಟಿದ್ದ ಶಂಕರ್‌ನಾಗ್, ಅದಕ್ಕೆ ಇಳಯರಾಜಾ ಅವರಿಂದಲೇ ಸಂಗೀತ ನಿರ್ದೇಶನ ಮಾಡಿಸಲು ನಿರ್ಧರಿಸಿದ್ದ. ಈ ಸಂಬಂಧವಾಗಿ ಚರ್ಚಿಸಲೆಂದೇ ಶಂಕರ್‌ನಾಗ್ ಮತ್ತು ಅರುಂಧತಿ ಮದ್ರಾಸ್‌ಗೆ ತೆರಳಿದ್ದರು. ಜತೆಗೆ ನನ್ನನ್ನೂ ಕರೆದೊಯ್ದಿದ್ದರು.
ಆಗೆಲ್ಲ ಈಗಿನಂತೆ ಪೆನ್‌ಡ್ರೈವ್, ಮೊಬೈಲ್ ರೆಕಾರ್ಡಿಂಗ್ ವ್ಯವಸ್ಥೆ ಇರಲಿಲ್ಲ. ಹಾಗಾಗಿ ಹಾಡಿನ ಟ್ಯೂನ್‌ಗಳನ್ನು ಟೇಪ್ ರೆಕಾರ್ಡರ್‌ನಲ್ಲಿ ಧ್ವನಿಮುದ್ರಿಸಿಕೊಳ್ಳಬೇಕಿತ್ತು. ಅದಕ್ಕೆಂದೇ ಬೆಂಗಳೂರಿನ ಬರ್ಮಾ ಬಜಾರ್‌ನಲ್ಲಿ ಒಂದು ಟೇಪ್ ರೆಕಾರ್ಡರ್ ಖರೀದಿಸಿಯೇ ನಾವು ಮದ್ರಾಸ್ ತಲುಪಿದ್ದೆವು. ಇಳಯರಾಜ ಹಾಗೂ ಶಂಕರ್‌ನಾಗ್ ಮಧ್ಯೆ ಒಳ್ಳೆಯ ಅಂಡರ್‌ಸ್ಟ್ಯಾಂಡಿಂಗ್ ಇತ್ತು. ಯಾವ ಯಾವ ಸಂದರ್ಭದಲ್ಲಿ ಹಾಡುಗಳಿರಬೇಕು ಎಂಬ ಮಾಹಿತಿ ಪಡೆದುಕೊಂಡ ಇಳಯ ರಾಜ, ಕೆಲವೇ ನಿಮಿಷದಲ್ಲಿ ಒಂದು ಟ್ಯೂನ್ ಕೇಳಿಸಿದರು. ಅದನ್ನು ರೆಕಾರ್ಡ್ ಮಾಡಿಕೊಂಡದ್ದಾಯಿತು. ನಂತರ- ‘ಶಂಕರ್, ಎಸ್ಪೀಬಿ-ಎಸ್.ಜಾನಕಿ ಇಬ್ರೂ ನನಗೆ ನಾಡಿದ್ದಿಗೆ ಕಾಲ್ ಶೀಟ್ ಕೊಟ್ಟಿದ್ದಾರೆ. ಅಷ್ಟರೊಳಗೆ ಒಂದು ಹಾಡು ಬರೆಸಿದ್ರೆ ರೆಕಾರ್ಡಿಂಗ್ ಮಾಡಬಹುದು’ ಅಂದರು. ಒಂದು ಹಾಡನ್ನು ಹಾಡಿಸಿ, ಚಿತ್ರದ ರೆಕಾರ್ಡಿಂಗ್‌ಗೆ ಚಾಲನೆ ನೀಡಬೇಕೆಂಬುದು ಶಂಕರ್‌ನಾಗ್ ನಿರ್ಧಾರವೂ ಆಗಿತ್ತು.
ಆ ದಿನಗಳಲ್ಲಿ ಗೀತೆರಚನೆಗೆ ಹೆಸರಾಗಿದ್ದವರೆಂದರೆ ಚಿ. ಉದಯಶಂಕರ್, ಆರ್.ಎನ್. ಜಯಗೋಪಾಲ್ ಮತ್ತು ವಿಜಯ ನಾರಸಿಂಹ. ‘ಗೀತಾ’ ಚಿತ್ರಕ್ಕೆ ಉದಯಶಂಕರ್ ಅವರಿಂದಲೇ ಹಾಡು ಬರೆಸಬೇಕೆಂಬುದು ಶಂಕರ್‌ನಾಗ್ ಆಸೆಯಾಗಿತ್ತು. ಸಾಮಾನ್ಯವಾಗಿ ಮದ್ರಾಸ್‌ನಲ್ಲಿ ಉಳಿದಿದ್ದರೆ ಪಾಮ್‌ಗ್ರೋವ್ ಹೋಟೆಲಿನ ರೂಂ. ನಂಬರ್ ೨೧೩ರಲ್ಲಿ ಎಂ. ರಂಗರಾವ್, ಅಥವಾ ಸ್ವಾಗತ್ ಹೋಟೆಲಿನ ರೂಂ. ನಂ. ೧೦೮ರಲ್ಲಿ ಇರುತ್ತಿದ್ದರು ಉದಯಶಂಕರ್. ಈ ಎರಡೂ ಕಡೆಗಳಲ್ಲಿ ಇಲ್ಲ ಎಂದಾದರೆ ರಾಜ್‌ಕುಮಾರ್ ಬ್ಯಾನರ್‌ನ ಸಿನಿಮಾದ ಕಥೆ-ಚಿತ್ರಕಥೆ- ಸಂಭಾಷಣೆ- ಗೀತೆರಚನೆಯ ಕೆಲಸದಲ್ಲಿ ಅವರು ಬ್ಯುಸಿಯಾಗಿದ್ದಾರೆ ಎಂದು ನಂಬಲಾಗುತ್ತಿತ್ತು.
‘ಗೀತಾ’ ಚಿತ್ರಕ್ಕೆ ಅರ್ಜೆಂಟಾಗಿ ಹಾಡು ಬರೆಸಬೇಕು ಅನ್ನಿಸಿದಾಗ ನಾವು ಪಾಮ್‌ಗ್ರೋಮ್ ಹಾಗೂ ಸ್ವಾಗತ್ ಹೋಟೆಲ್‌ಗಳಲ್ಲಿ ವಿಚಾರಿಸಿ ನೋಡಿದೆವು. ಚಿ.ಉ. ಅಲ್ಲಿರಲಿಲ್ಲ. ಅವರು ಎಲ್ಲಿರಬಹುದು ಎಂದು ವಿಚಾರಿಸಿದಾಗ ಮೈಸೂರಿನಲ್ಲಿ ರಾಜ್ ಅಭಿನಯದ ಚಿತ್ರವೊಂದರ ಶೂಟಿಂಗ್ ನಡೆಯುತ್ತಿದೆಯೆಂದೂ, ಉದಯ ಶಂಕರ್ ಅಲ್ಲಿದ್ದಾರೆಂದೂ ಗೊತ್ತಾಯಿತು. ‘ಭಟ್ರೆ, ನೀವು ಈಗಿಂದೀಗಲೇ ಮೈಸೂರಿಗೆ ಹೊರಡಿ. ಉದಯಶಂಕರ್ ಅವರನ್ನು ನಾಳೆ ಬೆಳಗ್ಗೇನೇ ಭೇಟಿ ಮಾಡಿ ಟ್ಯೂನ್ ಕೇಳಿಸಿ. ಕನಿಷ್ಠ ಒಂದು ಹಾಡನ್ನಾದ್ರೂ ಬರೆಸಿಕೊಂಡು ರಾತ್ರಿ ೧೧ ಗಂಟೆಗೆ ಮೈಸೂರು ಬಿಡಿ. ಹಾಗೆ ಮಾಡಿದ್ರೆ ಮರುದಿನ ಬೆಳಗಿನ ಜಾವಕ್ಕೇ ಮದ್ರಾಸಿಗೆ ಬಂದಿರ್‍ತೀರಿ. ಆನಂತರ ನಾವು ಹಾಡಿನ ರೆಕಾರ್ಡಿಂಗ್ ಮುಗಿಸೋಣ’ ಅಂದ ಶಂಕರ್. ನಾನು ಟೇಪ್ ರೆಕಾರ್ಡರ್ ತಗೊಂಡು ತರಾತುರಿಯಲ್ಲೇ ಮೈಸೂರಿಗೆ ಹೊರಟೆ.
ಬೆಳಗಿನ ಜಾವಕ್ಕೇ ಮೈಸೂರು ತಲುಪಿ, ರಾಜ್ ಸಿನಿಮಾ ಚಿತ್ರೀಕರಣವಾಗುತ್ತಿದ್ದ ಜಾಗಕ್ಕೆ ಹೋದೆ. ಆದರೆ ಅಲ್ಲಿ ಉದಯಶಂಕರ್ ಸಿಗಲಿಲ್ಲ. ಸಂಜೆಯವರೆಗೆ ನಾನು ಹುಡುಕಿದ್ದೇ ಹುಡುಕಿದ್ದು. ಆದರೂ ಉದಯಶಂಕರ್ ಸಿಗಲಿಲ್ಲ. ಈ ಹುಡುಕಾಟದ ವೇಳೆಯಲ್ಲೇ ಉದಯಶಂಕರ್ ಅವರು ಮೈಸೂರಿನ ಸುಜಾತಾ ಹೋಟೆಲಿನಲ್ಲಿ ಉಳಿದುಕೊಂಡಿದ್ದಾರೆ ಎಂದು ತಿಳಿದು ಬಂತು. ಸಂಜೆಯಾಗುತ್ತಿದ್ದಂತೆಯೇ ಆ ಹೋಟೆಲಿಗೆ ಹೋಗಿ ವಿಚಾರಿಸಿದೆ. ‘ಸಾರ್, ಉದಯಶಂಕರ್ ಅವರು ಇಲ್ಲಿ ಉಳ್ಕೊಂಡಿರೋದು ನಿಜ. ಆದರೆ ಈಗ ಅವರು ಹೊರಗೆ ಹೋಗಿದ್ದಾರೆ. ಅವರು ಎಲ್ಲಿಯೇ ಇದ್ರೂ ರಾತ್ರಿ ಒಂಭತ್ತು ಗಂಟೆಗೆ ಬಂದೇ ಬರ್‍ತಾರೆ. ಕಾದು ನೋಡಿ’ ಎಂದರು ಆ ಹೋಟೆಲಿನ ಮ್ಯಾನೇಜರ್.
ರಾತ್ರಿ ಒಂಭತ್ತು ಗಂಟೆಗೆ ಮತ್ತೆ ಆ ಹೋಟೆಲಿಗೆ ಹೋದೆ. ಅಲ್ಲಿ ಉದಯ ಶಂಕರ್ ಇದ್ದರು. ತಕ್ಷಣವೇ ಅವರ ಬಳಿ ಧಾವಿಸಿ ಎಲ್ಲ ವಿಷಯ ಹೇಳಿದೆ. ‘ಈಗ ೧೧.೩೦ಗೆ ಮದ್ರಾಸಿಗೆ ಬಸ್ಸಿದೆ. ನಾನು ಹೋಗಲೇಬೇಕು ಸಾರ್. ಅಷ್ಟರೊಳಗೆ ನೀವು ಒಂದು ಹಾಡನ್ನಾದ್ರೂ ಬರೆದು ಕೊಡಲೇಬೇಕು. ಏಕೆಂದರೆ ನಾಳೆ ರೆಕಾರ್ಡಿಂಗ್‌ಗೆ ಎಸ್ಪೀಬಿ ಹಾಗೂ ಎಸ್. ಜಾನಕಿಯವರ ಕಾಲ್‌ಶೀಟ್ ತಗೊಂಡಿದೀವಿ. ನಿಮ್ಮ ಹಾಡಿಗಾಗಿ ಮದ್ರಾಸಿನಲ್ಲಿ ಇಳಯರಾಜ, ಶಂಕರ್ ಹಾಗೂ ಅರುಂಧತಿ ಕಾಯ್ತಾ ಇದ್ದಾರೆ’ ಅಂದೆ.
ನನ್ನ ಅವಸರದ ಮಾತುಗಳನ್ನೆಲ್ಲ ಕೇಳಿ, ಒಮ್ಮೆ ಮಗುವಿನಂತೆ ನಕ್ಕರು ಉದಯಶಂಕರ್. ನಂತರ-‘ಅಲ್ಲಪ್ಪಾ, ಈಗಾಗ್ಲೇ ರಾತ್ರಿ ೯ ಗಂಟೆ ಆಗಿದೆ. ೧೧.೩೦ಕ್ಕೆ ಮದ್ರಾಸ್ ಬಸ್ ಹತ್ತಬೇಕು. ಅಷ್ಟರೊಳಗೇ ಹಾಡು ಬೇಕು ಅಂತಿದ್ದೀರ. ನಿಮಗೆ ಹಾಡು ಕೊಡಲು ನಾನು ರೆಡಿ. ಆದರೆ ಈಗ ನನ್ನ ಜೇಬೊಳಗೆ ಯಾವ ಹಾಡೂ ಇಲ್ವಲ್ಲ, ಏನು ಮಾಡಲಿ?’ ಎಂದರು. ಕ್ಷಣ ಕಾಲದ ನಂತರ -‘ಗಾಬರಿಯಾಗಬೇಡಿ. ನಿಮ್ಗೆ ಖಂಡಿತ ಒಂದು ಹಾಡು ಬರೆದುಕೊಡ್ತೀನಿ. ಅದ್ರೆ ನೀವು ನನಗೇನು ಕೊಡ್ತೀರಾ?’ ಎಂದು ಕೇಳಿಬಿಟ್ಟರು.
ಈ ಪ್ರಶ್ನೆ ನನಗೆ ಅನಿರೀಕ್ಷಿತವಾಗಿತ್ತು. ‘ಉದಯ ಶಂಕರ್ ಅವರಿಗೆ ಮೊದಲು ಟ್ಯೂನ್ ಕೇಳಿಸು. ಇದೊಂದು ಪ್ರೇಮಗೀತೆ, ಯುಗಳಗೀತೆ ಎಂದು ಹೇಳು. ನಂತರ ಅವರು ಹಾಡು ಕೊಡ್ತಾರೆ. ತಗೊಂಡು ಬಾ…’ ಇಷ್ಟು ಮಾತ್ರ ಹೇಳಿದ್ದ ಶಂಕರ. ಆದರೆ ಹಾಡು ಬರೆದ್ರೆ ಏನು ಕೊಡ್ತೀರಿ ಎಂಬ ಪ್ರಶ್ನೆ ಹಾಕಿದ್ದರು ಉದಯಶಂಕರ್. ‘ಆದದ್ದಾಗಲಿ’ ಎಂದುಕೊಂಡು ‘ಏನು ಕೊಡಬೇಕು ಅಂತ ನೀವೇ ಹೇಳಿಬಿಡಿ ಸಾರ್’ ಅಂದೇಬಿಟ್ಟೆ.
ಈ ಮಾತು ಕೇಳಿ ನನ್ನನ್ನೇ ವಾರೆನೋಟದಿಂದ ನೋಡಿದ ಉದಯಶಂಕರ್-ಹಾಗಾಗೊಲ್ಲ ಭಟ್ರೇ. ಈಗ ಹಾಡು ಕೊಟ್ರೆ ಏನು ಕೊಡ್ತಾನೆ ಅಂತ ಒಮ್ಮೆ ಶಂಕರ್‌ನಾಗ್‌ನನ್ನೇ ಕೇಳಿಬಿಡಿ’ ಅಂದವರೇ, ಒಂದು ಖಾಲಿ ಹಾಳೆ ತಗೊಂಡು ಅದರ ಮೇಲೆ ‘ಓಂ’ ಎಂದು ಬರೆದರು.
ಉದಯಶಂಕರ್ ಮಾತಿಗೆ ಪ್ರತಿ ಹೇಳುವ ಹಾಗಿರಲಿಲ್ಲ. ನಾನು ಸರಸರನೆ ರಿಸೆಪ್ಶನ್‌ಗೆ ಬಂದೆ. ಅಲ್ಲಿಂದ ಮದ್ರಾಸಿಗೆ ಫೋನ್ ಮಾಡಿ ಶಂಕರ್‌ನಾಗ್‌ಗೆ ಎಲ್ಲವನ್ನೂ ವಿವರವಾಗಿ ಹೇಳಿದೆ. ಈಗ ಹಾಡು ಬರೆದುಕೊಟ್ರೆ ಏನು ಕೊಡ್ತಾರೋ ಕೇಳ್ಕೊಂಡು ಬನ್ನಿ ಅಂದಿದಾರೆ. ನಾನು ಏನೆಂದು ಉತ್ತರ ಹೇಳಲಿ ಶಂಕರ್?’ ಎಂದು ಗಾಬರಿಯಿಂದ ಪ್ರಶ್ನಿಸಿದೆ.
ನನ್ನ ಮಾತು ಕೇಳಿ ಒಮ್ಮೆ ಜೋರಾಗಿ ನಕ್ಕ ಶಂಕರ್‌ನಾಗ್-‘ ಅವರು ಏನು ಕೇಳಿದ್ರೂ ಕೊಡ್ತಾರೆ’ ಅಂತ ಹೇಳು ‘ ಅಂದುಬಿಟ್ಟ. ನಾನು ಸರ್ರನೆ ಉದಯ ಶಂಕರ್ ರೂಮಿಗೆ ಬಂದು-‘ಸಾರ್, ನೀವು ಏನು ಕೇಳಿದ್ರೂ ಕೊಡ್ತಾನಂತೆ ಶಂಕರ್‌ನಾಗ್’ ಎಂದೆ. ನನ್ನ ಮಾತು ಕೇಳಿ ಒಮ್ಮೆ ಖುಷಿಯಿಂದ ಕಣ್ಣರಳಿಸಿದರು ಉದಯಶಂಕರ್. ನಂತರ, ‘ಹೌದಾ? ಏನು ಕೇಳಿದ್ರೂ ಕೊಡ್ತೀನಿ ಅಂದಿದಾನಾ ಶಂಕರ್‌ನಾಗ್? ಸರಿ ಸರಿ. ಸ್ವಲ್ಪ ಹೊತ್ತು ಇಲ್ಲೇ ಕುಳಿತಿರಿ. ಹಾಡು ಬರೆದುಕೊಡ್ತೀನಿ’ ಅಂದರು. ನಂತರದ ಇಪ್ಪತ್ತನೇ ನಿಮಿಷಕ್ಕೆ ನನ್ನ ಕೈಲಿ ಹಾಡಿನ ಹಾಳೆಯಿತ್ತು. ಮೊದಲೆರಡು ಸಾಲು ನೋಡಿದೆನೋ ಇಲ್ಲವೋ; ನನಗೇ ಗೊತ್ತಿಲ್ಲದಂತೆ ಕಣ್ತುಂಬಿಕೊಂಡಿತು. ಏಕೆಂದರೆ-‘ಏನು ಕೇಳಿದ್ರೂ ಕೊಡ್ತೇನೆ’ ಎಂದು ಶಂಕರ್‌ನಾಗ್ ಹೇಳಿದ್ದನಲ್ಲ? ಆ ಸಾಲನ್ನೇ ಇಟ್ಟುಕೊಂಡು-‘ ಏನೇ ಕೇಳು ಕೊಡುವೆ ನಿನಗೆ ನಾನೀಗ/ ನಿನ್ನ ಬಯಕೆ ಏನು, ಮನದಾಸೆ ಏನು/ ಹೇಳು ಬಾ ಕಿವಿಯಲ್ಲಿ’ ಎಂದು ಬರೆದಿದ್ದರು.
ನಾನು ಮಾತೇ ಹೊರಡದೆ ನಿಂತುಬಿಟ್ಟಿದ್ದೆ. ಆಗಲೇ ಉದಯಶಂಕರ್ ಮೆಲ್ಲಗೆ ನನ್ನ ಮೈ ತಟ್ಟಿ ಹೇಳಿದರು: ಇನ್ನೂ ಸಮಯವಿದೆ. ಈ ಹಾಡಲ್ಲಿ ಏನಾದ್ರೂ ಬದಲಾವಣೆ ಬೇಕಿದ್ರೆ ಹೇಳಿ, ಬದಲಿಸಿ ಕೊಡ್ತೇನೆ…’
ಅವರ ಸರಳತೆ, ದೊಡ್ಡ ಮನಸ್ಸು ಕಂಡು ಮತ್ತಷ್ಟು ಖುಷಿಯಾಯಿತು. ಹಾಡು ಅದ್ಭುತವಾಗಿದೆ ಸಾರ್. ನಾನು ಹೋಗಿಬರ್‍ತೀನಿ ಎನ್ನುತ್ತಾ ತಕ್ಷಣ ಹೊರಟೆ. ಹಾಡಿನ ಸಾಹಿತ್ಯ ಕಂಡು ಶಂಕರ್‌ನಾಗ್, ಇಳಯರಾಜಾ ತುಂಬಾ ಖುಷಿಪಟ್ಟರು. ಎಸ್ಪೀಬಿ- ಎಸ್. ಜಾನಕಿ ಅದ್ಭುತವಾಗಿ ಹಾಡಿದರು. ಪರಿಣಾಮ, ಅದು ಎಂದೂ ಮರೆಯದ ಹಾಡಾಯಿತು!’
***
ಹಾಡಿನ ನೆಪದಲ್ಲಿ ಇಬ್ಬರು ‘ಶಂಕರ’ರನ್ನೂ ಮತ್ತೆ ಮತ್ತೆ ನೆನೆಯುವಂತೆ ಮಾಡಿದ ರಮೇಶ್‌ಭಟ್ ಅವರಿಗೆ -‘ಸಾರ್, ಇನ್ನೊಂದೆರಡು ಕಥೆ ಹೇಳಿ’ ಎಂದು ಬೇಡಿಕೊಂಡರೆ -ಅವರು ‘ತಥಾಸ್ತು’ ಅಂದೇ ಬಿಟ್ಟರು!
ಮಣಿ ಸರ್, ನಿಜಕ್ಕೂ ಒಳ್ಳೆಯ ಬರಹ ನಮಗೆ ಕೊಟ್ಟಿದೀರಿ. ಈ ಹಾಡು ಕೇಳಿದಾಗಲೆಲ್ಲ ಹಾಡಿನ ಸಾಲಿನಲ್ಲಿ ನನಗೆ ಒಂದು ಸಣ್ಣ ತುಂಟತನದ ಭಾವ ಭಾಸವಾಗುತಿತ್ತು. ಅದಕ್ಕೆ ಕಾರಣ ನಿಮ್ಮ ಓದಿದ ಮೇಲೆ ಪರಿಹಾರವಾಯಿತು. ಹಾಗೆ ರಮೇಶ್ ರವರಿಗೂ ತಮ್ಮ ಅನುಭವವ ಹಂಚಿಕೊಂಡಿದಕ್ಕೆ ಧನ್ಯವಾದ ತಿಳಿಸಿ
— ವಿನಯ್
[…] Ene Kelu Koduve Ninage Naaneega yene naneega […]