ಕೇಳು ಸಂಸಾರದಲ್ಲಿ ರಾಜಕೀಯ
ಚಿತ್ರ: ಮಾತೃದೇವೋಭವ. ಸಂಗೀತ: ಹಂಸಲೇಖ.
ಗಾಯಕ: ಸಿ. ಅಶ್ವತ್ಥ್. ರಚನೆ: ಸು. ರುದ್ರಮೂರ್ತಿ ಶಾಸ್ತ್ರಿ
ಕೇಳು ಸಂಸಾರದಲ್ಲಿ ರಾಜಕೀಯ
ತಾನು ತನ್ನ ಮನೆಯಲ್ಲೆ ಪರಕೀಯ
ಇಲ್ಲಿ ಅತ್ತಿಯ ಹಣ್ಣು ಬಿಚ್ಚಿ ನೋಡಿದರೆ
ಬರಿ ಹುಳುಕು ತುಂಬಿಹುದು ಕೇಳೊ ದೊರೆ ||ಪಲ್ಲವಿ||
ಎಲ್ಲರು ಒಟ್ಟಿಗೆ ಓಟನು ನೀಡಿ, ಕೊಡುವರು ನಾಯಕ ಪಟ್ಟ
ನಂತರ ಅವನನೆ ಕಿತ್ತು ತಿನ್ನುತ, ಹಿಡಿವರು ಆತನ ಜುಟ್ಟ;
ನಾನೊಂದು ಲೆಕ್ಕದ ಬುಕ್ಕು, ನೂರೆಂಟು ವೆಚ್ಚದ ಚೆಕ್ಕು
ಸೋಮಾರಿ ಮಕ್ಕಳ ‘ಕುಕ್ಕು’, ನನಗೀಗ ದೇವರೆ ದಿಕ್ಕು ||೧||
ಮಮತೆಯ ತುಂಬಿದ ನೀರು ಉಣಿಸಿದೆ, ಬೆಳಸಿದೆ ಹೂವಿನ ತೋಟ
ಅರಳಿದ ಸುಂದರ ಹೂವುಗಳೆಲ್ಲ, ಗಾಳಿಗೆ ತೂಗುವ ಆಟ;
ನೋಡುತಾ ಸಂತಸಗೊಂಡೆ, ಜೀವನವು ಸಾರ್ಥಕವೆಂದೆ
ಹೂವುಗಳೆ ಮುಳ್ಳುಗಳಾಗಿ, ಚುಚ್ಚಿದರೆ ನೋವನು ತಿಂದೆ
ಬಾಳು ಮೆತ್ತನೆ ಹುತ್ತದಂತೆ ಅಲ್ಲವೇನು
ಅಲ್ಲಿ ಮುಟ್ಟಲು ಹಾವು ಕಚ್ಚಿ ನೊಂದೆ ನೀನು||೨||
ಹಾಸಿಗೆಯನ್ನು ಪಡೆದವರೆಲ್ಲರು, ಕೊಟ್ಟರು ಮುಳ್ಳಿನ ಚಾಪೆ
ಮಕ್ಕಳ ಪಡೆದ ಒಂದೇ ತಪ್ಪಿಗೆ, ಜೀವನ ಚಿಂದಿಯ ತೇಪೆ;
ಭಾಷಣವ ಮಾಡುವರೆಲ್ಲ, ನನಗಂತು ಬಾಯೇ ಇಲ್ಲ
ಅದರೂ ನಾ ಯಜಮಾನ, ಹೇಗಿದೆ ನನ್ನಯ ಮಾನ ||೩||
ಚಿನ್ನದ ಸೂಜಿಯು ಕಣ್ಣು ಚುಚ್ಚಿತು, ಚಿಮ್ಮಿತು ನೆತ್ತರ ನೀರು
ಮೆತ್ತನೆ ಕತ್ತಿಯು ಎದೆಯ ಇರಿದರೆ, ನೋವನು ಅಳೆಯುವರಾರು?
ಅಕ್ಕರೆಯ ಸಕ್ಕರೆ ತುಂಬಿ, ಮಕ್ಕಳನು ಸಾಕಿದೆ ನಂಬಿ
ಸಿಹಿಯೆಲ್ಲ ಕಹಿಯಾದಾಗ, ಬಾಳೊಂದು ದುಃಖದ ರಾಗ!
ಅಂದು ಮುತ್ತಿನ ಮಾತುಗಳ ಹೇಳಿದರು
ಇಂದು ಮಾತಿನ ಈಟಿಯಿಂದ ಮೀಟಿದರು||೪||
ನಟರಾದ ಜೈ ಜಗದೀಶ್ ಹಾಗೂ ಶ್ರೀನಿವಾಸಮೂರ್ತಿ ಸೇರಿ ಕೊಂಡು ಆರಂಭಿಸಿದ ನಿರ್ಮಾಣ ಸಂಸ್ಥೆ ಜೈಶ್ರೀ ಕಂಬೈನ್ಸ್. ಈ ಸಂಸ್ಥೆ ತಯಾರಿಸಿದ ಮೊದಲ ಸಿನಿಮಾ-ಮಾತೃದೇವೋಭವ. ಮಕ್ಕಳಿಂದ ನಿರ್ಲಕ್ಷ್ಯಕ್ಕೆ ಒಳಗಾದ ತಂದೆ-ತಾಯಿಗಳ ಸಂಕಟವನ್ನು ವಿವರಿಸುವ ಗೀತೆಯೊಂದು ಈ ಚಿತ್ರದಲ್ಲಿದೆ. ಅದೇ-‘ಕೇಳು ಸಂಸಾರ ವೊಂದು ರಾಜಕೀಯ, ತಾನು ತನ್ನ ಮನೆಯಲ್ಲೆ ಪರಕೀಯ…’ ಗಾಯಕ ಸಿ. ಅಶ್ವತ್ಥ್ ತಮ್ಮ ವಿಶಿಷ್ಟ ದನಿಯಲ್ಲಿ ಹಾಡಿರುವ ಈ ಗೀತೆ ಮಾತೃದೇವೋಭವ ಚಿತ್ರಕ್ಕೆ ಒಂದು ವಿಲಕ್ಷಣ ಮೆರುಗು ತಂದು ಕೊಟ್ಟಿದ್ದು ನಿಜ. ಈಗ ಹೇಳಲಿರುವುದು ಹಾಡು ಹುಟ್ಟಿದ ಕಥೆಯಲ್ಲ; ಈ ಸಿನಿಮಾದ ಕಥೆ ನಿರ್ಮಾಪಕರಿಗೆ ಹೇಗೆ ದಕ್ಕಿತು ಎಂಬ ವಿವರ! ವಿಶೇಷ ಏನೆಂದರೆ, ಈ ಸಿನಿಮಾ ಕಥೆ ಸಿಕ್ಕಿದ ವಿವರಣೆಯೂ ಈ ಹಾಡಿನ ಸೃಷ್ಟಿಗೆ ಪರೋಕ್ಷವಾಗಿ ಕಾರಣವಾಯಿತು!
ಈ ಸಿನಿಮಾ ಕಂ ಹಾಡಿನ ಕಥೆಯನ್ನು ವಿವರಿಸಿದವರು ನಟ ಶ್ರೀನಿವಾಸಮೂರ್ತಿ. ಅದು ಹೀಗೆ: ‘ಚಿತ್ರನಟ ಅನ್ನಿಸಿಕೊಳ್ಳುವ ಮೊದಲು ನಾನು ಗುರುರಾಜಲು ನಾಯ್ದು ಅವರ ಹರಿಕಥೆ ತಂಡ ದಲ್ಲಿದ್ದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿದ್ದ ಬಿ.ಸಿ. ವೆಂಕಟಪ್ಪ ಕೂಡ ನಾಯ್ಡು ಅವರ ಹರಿಕಥೆ ತಂಡದಲ್ಲಿದ್ರು. ನಾವು ಆಗ ಆರ್.ಡಿ. ಕಾಮತ್ ಅವರ ‘ಮಾತೃ ದೇವೋಭವ ಎಂಬ ಸಾಂಸಾರಿಕ ನಾಟಕ ಆಡುತ್ತಿದ್ದೆವು. ನಮ್ಮದೇ ನಿರ್ಮಾಣದಲ್ಲಿ ಸಿನಿಮಾ ತಯಾರಿಸಬೇಕು ಅಂದುಕೊಂಡಾಗ ತಕ್ಷಣವೇ ನೆನಪಾದದ್ದು ‘ಮಾತೃದೇವೋಭವ’. ಅದರಲ್ಲಿ ಫ್ಯಾಮಿಲಿ ಸೆಂಟಿಮೆಂಟ್ ಇತ್ತು. ಸದಭಿರುಚಿಯೂ ಇತ್ತು. ಹಾಗಾಗಿ ಅದನ್ನೇ ಸಿನಿಮಾ ಮಾಡೋಣ ಅಂದುಕೊಂಡೆ. ನಟ ಜೈಜಗದೀಶ್ಗೆ ಕಥೆ ಹೇಳಿದೆ. ಅವರು- ‘ತುಂಬಾ ಚೆನ್ನಾಗಿದೆ. ಇದನ್ನೇ ಸಿನಿಮಾ ಮಾಡುವಾ’ ಅಂದರು. ಚಿತ್ರಕ್ಕೆ ನಟ-ನಟಿಯರು, ತಂತ್ರಜ್ಞರ ಆಯ್ಕೆಯೂ ಮುಗಿಯಿತು. ಸಂಗೀತ ನಿರ್ದೇಶನದ ಜವಾಬ್ದಾರಿ ಯನ್ನು ಹಂಸಲೇಖಾ ಹೊತ್ತುಕೊಂಡರು. ಕಥೆ ನನಗೇ ಗೊತ್ತಿತ್ತಲ್ಲ? ಅದನ್ನೇ ಸಿನಿಮಾಕ್ಕೆ ಒಗ್ಗುವಂತೆ ಮಾರ್ಪಡಿಸಿಕೊಂಡೆವು. ಚಿತ್ರಕಥೆ ಸಂಭಾಷಣೆಯೂ ಸಿದ್ಧವಾಯಿತು. ಕಂಠೀರವ ಸ್ಟುಡಿಯೋದಲ್ಲಿ ಸೆಟ್ ಹಾಕಿಸಿ ಚಿತ್ರೀಕರಣ ನಡೆಸುವುದೆಂದೂ ನಿರ್ಧಾರವಾಯಿತು.
ಎಲ್ಲವೂ ರೆಡಿಯಾಗೇ ಇತ್ತು. ಆದರೆ, ನಾಟಕವನ್ನು ಸಿನಿಮಾ ಮಾಡಲು ಕಾಮತ್ ಅವರಿಂದ ಒಪ್ಪಿಗೆ ಪತ್ರ ಪಡೆಯಬೇಕಿತ್ತು. ನನಗೆ ಗೊತ್ತಿದ್ದಂತೆ ಕಾಮತ್ರು ಬಾಂಬೆಯಲ್ಲಿದ್ರು. ಆದರೆ ನನ್ನಲ್ಲಿ ಅವರ ವಿಳಾಸವಾಗಲಿ, ಫೋನ್ ನಂಬರ್ ಆಗಲಿ ಇರಲಿಲ್ಲ. ಮಂಗಳೂರಿನಲ್ಲಿ ಕಾಮತ್ರ ಮಗಳು ಇರುವುದು ಗೊತ್ತಿತ್ತು. ಆಕೆಯನ್ನು ಸಂಪರ್ಕಿಸಿ ವಿಷಯ ತಿಳಿಸಿದೆ. ನಿಮ್ಮ ತಂದೆಯವರಿಂದ ನಾಟಕದ ರೈಟ್ಸ್ ತಗೋಬೇಕು ಅಂತಾನೇ ಬಾಂಬೆಗೆ ಹೋಗಲು ಸಿದ್ಧನಾಗಿದ್ದೀನಿ. ಅಡ್ರೆಸ್ ಕೊಡ್ತೀರಾ ಮೇಡಂ?’ ಎಂದೆ.
‘ ಕ್ಷಮಿಸಿ ಸಾರ್. ನಮ್ಮ ತಂದೆ ಈಗ ಬಾಂಬೆಯಲ್ಲಿಲ್ಲ. ಅಂಕೋಲಾ ದಲ್ಲಿ ಇದ್ದಾರೆ. ಅಪ್ಪನ ಜತೆಗೆ ಅಮ್ಮನೂ ಅಂಕೋಲಾದಲ್ಲಿ ಇದ್ದಾರೆ. ಆದರೆ ಅಂಕೋಲೆಯಲ್ಲಿ ಎಲ್ಲಿದ್ದಾರೆ ಅಂತ ನನಗೆ ಗೊತ್ತಿಲ್ಲ. ಅಂಕೋಲಾ ಚಿಕ್ಕ ಊರು. ಹಾಗಾಗಿ ಅವರನ್ನು ಹುಡುಕೋದು ಕಷ್ಟ ಆಗಲಾರದು’ ಎಂದು ಕಾಮತ್ರ ಮಗಳು ಹೇಳಿದ್ರು.
ನಾನು ಕಾಮತ್ರನ್ನು ಪ್ರತ್ಯಕ್ಷ ನೋಡಿರಲಿಲ್ಲ. ಆದರೆ ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾಗಿದ್ದ ವೆಂಕಟಪ್ಪ ಅವರಿಗೆ ಕಾಮತ್ರ ಪರಿಚಯವಿತ್ತು. ಅವರೊಂದಿಗೆ ಸಲುಗೆಯೂ ಇತ್ತು. ನಾನೂ ಬರ್ತೀನಿ ನಡೀರಿ ಮೂರ್ತಿಗಳೇ ಅಂದ್ರು ವೆಂಕಟಪ್ಪ. ಅವರನ್ನೂ ಕರೆದುಕೊಂಡೇ ನಾನು ಅಂಕೋಲಾ ಬಸ್ ಹತ್ತಿದೆ.
ಅಂಕೋಲದಲ್ಲಿ ನನಗಾಗಲಿ, ಶಂಕರಪ್ಪ ಅವರಿಗಾಗಲಿ ಅತ್ಯಾಪ್ತ ರೆಂದು ಹೇಳಿಕೊಳ್ಳಲು ಯಾರೂ ಇರಲಿಲ್ಲ. ಆದರೂ ನಾನು ಭಂಡ ಧೈರ್ಯದಿಂದ ಅಲ್ಲಿಗೆ ಹೋಗಿದ್ದೆವು. ಅಲ್ಲಿ ಒಂದು ತಮಾಷೆ ನಡೆಯಿತು. ಬಸ್ನಲ್ಲಿ ಅಂಕೋಲದವರೇ ಆಗಿದ್ದ ಮೋಹನ್ ಬಾಸ್ಕೋಡ್ ಎಂಬಾತ ತಾವಾಗಿಯೇ ಬಂದು ಪರಿಚಯ ಹೇಳಿಕೊಂಡ್ರು. ಅವರ ಸೋದರ ಮಾವ, ಥೇಟ್ ನನ್ನ ಥರಾನೇ ಇದ್ದರಂತೆ. ಆ ಸೆಂಟಿಮೆಂಟ್ನ ಮೇಲೆ-‘ನೀವು ನಮ್ಮ ಮನೆಗೆ ಬರಬೇಕು. ನಮ್ಮಲ್ಲೇ ಉಳಿಯಬೇಕು’ ಎಂದು ಒತ್ತಾಯಿಸಿದರು ಮೋಹನ್. ಅಪರಿಚಿತ ಜಾಗ ದಲ್ಲಿ ಪರಿಚಿತರೊಬ್ಬರು ಸಿಕ್ಕಿದ್ರಲ್ಲ ಎನಿಸಿ ನಾವೂ ಒಪ್ಪಿದೆವು. ನಾವು ಬಂದಿರುವ ಉದ್ದೇಶವನ್ನೂ ವಿವರಿಸಿದೆವು. ಆಗ ಮೋಹನ್ ಬಾಸ್ಕೋಡ್ ಹೇಳಿದ್ರು: ‘ನಂದು ಜೀಪ್ ಇದೆ. ನಾಳೆ ಇಡೀ ದಿನ ಅವರನ್ನು ಹುಡುಕೋಣ’.
ಮರುದಿನ ಬೆಳಗ್ಗೆಯೇ ಕಾಮತ್ರ ವಿವರಗ ಳನ್ನು ಶಂಕರಪ್ಪ ಅವರು ಮೋಹನ್ರಿಗೆ ಹೇಳಿ ದರು. ಮೋಹನ್ ಅದನ್ನು ತಮ್ಮ ಪರಿಚಿತರೆಲ್ಲ ರಿಗೂ ತಿಳಿಸಿದರು. ಇಂಥ ಮುಖ ಚಹರೆಯ ವ್ಯಕ್ತಿಯನ್ನು ನೀವು ಕಂಡಿರಾ ಎಂದು ಸಿಕ್ಕವರನ್ನೆಲ್ಲ ಕೇಳುತ್ತಲೇ ಹೋದೆವು. ಕಡೆಗೆ ಒಬ್ಬರು ಹೇಳಿದರು. ಇಲ್ಲಿಂದ ೧೫ ಕಿ.ಮೀ ದೂರದಲ್ಲಿ ಒಂದು ದೇವಸ್ಥಾನ ಇದೆ. ಅಲ್ಲಿ ನೀವು ಹೇಳಿದಂಥ ಒಬ್ರು ಇದ್ದಾರೆ…’
ಬಾಸ್ಕೋಡ್ ಅವರ ಜೀಪಿನಲ್ಲಿ ನಾವೆಲ್ಲಾ ಆ ದೇವಸ್ಥಾನದ ಬಳಿಗೆ ಹೋದಾಗ ಬೆಳಗಿನ ೧೧ ಗಂಟೆ. ಬಿಸಿಲು ಚುರುಗುಡುತ್ತಿತ್ತು. ಆ ಪ್ರದೇಶದಲ್ಲಿ ಒಂದು ದೇವಾಲಯವಿತ್ತು. ಎದುರಿಗೇ ಒಂದು ಹಳೆಯ ಬಾವಿ. ಅಲ್ಲಿಂದ ಕೂಗಳತೆ ದೂರದಲ್ಲಿ ಒಂದು ಗುಡಿಸಲಿತ್ತು. ಅಷ್ಟು ಬಿಟ್ಟರೆ ಇಡೀ ಪ್ರದೇಶ ಬಟಾಬಯಲು! ಇಂಥ ಜಾಗದಲ್ಲಿ ನನ್ನ ಪ್ರೀತಿಯ ನಾಟಕಕಾರ ಹೇಗಿರಲು ಸಾಧ್ಯ? ನಮಗೆ ಸಿಕ್ಕಿದ ಮಾಹಿ ತಿಯೇ ತಪ್ಪಿರಬೇಕು ಅಂದುಕೊಂಡೆ ನಾನು. ಈ ಸಂದರ್ಭದಲ್ಲೇ ತುಂಡು ಪಂಚೆ ಉಟ್ಟ ವ್ಯಕ್ತಿಯೊಬ್ಬರು ದೇವಾಲಯದ ಮುಂದೆ ಬಂದರು ನೋಡಿ, ಆ ಕ್ಷಣವೇ ನನ್ನ ಜತೆಗಿದ್ದ ಶಂಕರಪ್ಪನವರು-
‘ರೀ ಸ್ವಾಮಿ ಕಾಮತ್ರೇ, ನಿಂತ್ಕೊಳ್ಳಿ, ನಿಂತ್ಕೊಳ್ಳಿ’ ಅಂದರು!
ಈ ಮಾತು ಕೇಳಿದ ಕಾಮತ್ ಗಕ್ಕನೆ ನಿಂತರು. ಎರಡೇ ನಿಮಿಷ ದಲ್ಲಿ ಗೆಳೆಯನ ಗುರುತು ಹಿಡಿದು ಬಾಚಿ ತಬ್ಬಿಕೊಂಡರು. ‘ಸ್ವಲ್ಪ ಮಾತಾಡಲಿಕ್ಕಿದೆ ಕಾಮತ್ರೇ. ನೀವಿರುವ ಗುಡಿಸಲಿಗೆ ಹೋಗೋಣ ನಡೀರಿ’ ಎಂದರು ಶಂಕರಪ್ಪ. ಎಲ್ಲರೂ ಗುಡಿಸಲಿಗೆ ಬಂದೆವು. ಅಲ್ಲಿ ಕಾಮತರ ಪತ್ನಿ ಇದ್ದರು. ಅವರು ಹೇಳಿದ ವಿಷಯ ಕೇಳಿ ನಾನು ಕೂತಲ್ಲೇ ನಡುಗಿದೆ. ಏನೆಂದರೆ ಕಾಮತ್ ಮತ್ತು ಅವರ ಪತ್ನಿ ಇದ್ದ ಗುಡಿಸಲು ಅವರದಾಗಿರಲಿಲ್ಲ. ಅವರಿಗೆ ಅಲ್ಲಿ ಜಮೀನೂ ಇರಲಿಲ್ಲ. ಯಾರದೋ ಗುಡಿಸಲು. ಯಾರದೋ ಜಮೀನು. ಅಲ್ಲಿದ್ದ ಭತ್ತದ ಗದ್ದೆಯ ಬದುವಿನಲ್ಲಿ ಸಿಗುತ್ತಿದ್ದ ಗೆಡ್ಡೆ-ಗೆಣಸು ತಿಂದೇ ಈ ದಂಪತಿ ಬದುಕ್ತಾ ಇದ್ರು. ಬಹುಶಃ ಏನೋ ಆರ್ಥಿಕ ತೊಂದರೆ ಇತ್ತೆಂದು ಕಾಣುತ್ತೆ. ವಿಷಯ ತಿಳಿಸಿದ್ದರೆ ಮಂಗಳೂರಿನಲ್ಲಿದ್ದ ಮಗಳು ಸಹಾಯ ಮಾಡ್ತಿದ್ದಳು. ಆದರೆ, ಮಹಾಸ್ವಾಭಿಮಾನಿಯಾದ ಕಾಮತ್ ಯಾರಿಗೂ ಏನೂ ಹೇಳದೆ ದೇಶಾಂತರ ಹೊರಟವರಂತೆ ಬಂದುಬಿಟ್ಟಿದ್ರು. ಗುಡಿಸಲಿನಲ್ಲಿದ್ದ ಪಾತ್ರೆ ಪಗಡಗಳೆಲ್ಲ ಖಾಲಿ ಖಾಲಿ! ಅವರು ಊಟ ಮಾಡಿ ನಾಲ್ಕು ದಿನ ಆಗಿತ್ತು ಎಂಬ ವಿಷಯ ಕೂಡ ಆಗಲೇ ಗೊತ್ತಾಯ್ತು. ನನ್ನ ಪ್ರೀತಿಯ ನಾಟಕಕಾರ ಇದ್ದ ಸ್ಥಿತಿ ಕಂಡು ಕರುಳು ಕಿವಿಚಿದ ಹಾಗಾಯ್ತು. ತಕ್ಷಣವೇ ಬಾಸ್ಕೋಡ್ ಅವರನ್ನು ಹೊರಡಿಸಿಕೊಂಡು ಅಂಕೋಲಾಕ್ಕೆ ಬಂದೆ. ಅಲ್ಲಿ, ಒಂದು ತಿಂಗಳಿಗೆ ಆಗುವಷ್ಟು ದಿನಸಿ ಸಾಮಾನು ಖರೀದಿಸಿ ವಾಪಸ್ ಕಾಮತರ ಗುಡಿಸಲಿಗೆ ಹೋದೆವು. ಕಾಮತರ ಪತ್ನಿ, ನಮ್ಮನ್ನೇ ಬೆರಗಿನಿಂದ ನೋಡಲು ಶುರು ಮಾಡಿದ್ರು. ಆಗ ಹೇಳಿದೆ. ‘ಅಮ್ಮಾ, ಅಡುಗೆ ಮಾಡಿ. ಎಲ್ರೂ ಜತೇಲಿ ಊಟ ಮಾಡೋಣ…’
ಊಟಕ್ಕೆ ಕೂತ ಕಾಮತ್ರು ಸಂತೋಷ, ಭಾವೋದ್ವೇಗ ತಡೆಯ ಲಾಗದೆ ಬಿಕ್ಕಳಿಸಿ ಅಳಲು ಶುರು ಮಾಡಿದ್ರು. ಅವರನ್ನು ಸಮಾಧಾನಿ ಸಿದೆ. ನಂತರ ಹತ್ತು ಸಾವಿರ ರೂಪಾಯಿ ಕೊಟ್ಟು ನಮಸ್ಕಾರ ಮಾಡಿ ಹೇಳಿದೆ: ‘ನಿಮ್ಮ ನಾಟಕವನ್ನು ಸಿನಿಮಾ ಮಾಡ್ತಿದೀನಿ. ಒಪ್ಪಿಗೆ ಕೊಡಿ ಸಾರ್’. ತಕ್ಷಣವೇ ಎರಡು ಬಾಕ್ಸ್ಗಳನ್ನು ತಂದ ಕಾಮತರು-‘ಒಪ್ಪಿಗೆ ಕೊಟ್ಟಿದೀನಿ. ಜತೆಗೆ, ಅಲ್ಲಿರೋ ಎಲ್ಲಾ ಪುಸ್ತಕಗಳೂ ನಿಮಗೇ. ತಗೊಂಡು ಹೋಗಿ’ ಎಂದರು.
‘ಶೂಟಿಂಗ್ ನೋಡಲು ಬನ್ನಿ ಸಾರ್’ ಎಂದು ಆಹ್ವಾನಿಸಿದೆ. ಕಾಮತ್ರೂ ಒಪ್ಪಿದ್ದರು. ಆದರೆ ದುರಂತ ನೋಡಿ, ಶೂಟಿಂಗ್ಗೆ ಒಂದು ವಾರ ಬಾಕಿ ಇದೆ ಅನ್ನುವಾಗ ಹೃದಯಾಘಾತದಿಂದ ಕಾಮತರು ತೀರಿಕೊಂಡ ಸುದ್ದಿ ಬಂತು. ಈ ಬೇಸರದ ಮಧ್ಯೆಯೇ ಗೀತೆರಚನೆಯ ಕೆಲಸ ಶುರುವಾಯ್ತು. ಅದಕ್ಕೆಂದೇ ಶಿವಾನಂದ ಸರ್ಕಲ್ ಬಳಿಯ ಪ್ರಣಾಮ್ ಹೋಟೆಲಿನಲ್ಲಿ ರೂಂ ಮಾಡಿದ್ವಿ. ಈ ಸಂದರ್ಭದಲ್ಲಿಯೇ ದೊಡ್ಡರಂಗೇಗೌಡರ ಮೂಲಕ ಪರಿಚಯ ವಾದವರು ಸು. ರುದ್ರಮೂರ್ತಿ ಶಾಸ್ತ್ರಿ. ‘ಶಾಸ್ತ್ರಿಗಳು ಚೆನ್ನಾಗಿ ಬರೀ ತಾರೆ. ಅವರಿಂದಲೂ ಒಂದು ಹಾಡು ಬರೆಸಿ’ ಅಂದರು ದೊ.ರಂ. ಗೌಡ. ‘ಸರಿ’ ಎಂದು ಶಾಸ್ತ್ರಿಗಳಿಗೆ ಸಿನಿಮಾದ ಸನ್ನಿವೇಶ ವಿವರಿಸಿದೆ. ಅದೇ ಸಂದರ್ಭದಲ್ಲಿ ಕಾಮತ್ರನ್ನು ಭೇಟಿ ಮಾಡಿ ಬಂದ ಕಥೆ ಯನ್ನೂ ಹೇಳಿದೆ. ಈ ವೇಳೆಗಾಗಲೇ ದೊಡ್ಡರಂಗೇಗೌಡರ ಕವಿತೆಯ ಮೊದಲ ಎರಡು ಸಾಲು ಬಳಸಿ ಹಂಸಲೇಖಾ ರಾಗ ಸಂಯೋಜನೆ ಮುಗಿಸಿದ್ರು. ಆ ಟ್ಯೂನ್ ಕೇಳಿಸಿಕೊಂಡು ಥೀಮ್ ಸಾಂಗ್ ಬರೆಯ ಬೇಕಿತ್ತು. ಶಾಸ್ತ್ರಿಗಳು ಇಡೀ ಸಂದರ್ಭವನ್ನು ಅನುಭವಿಸಿದವರಂತೆ ಹಾಡು ಬರೆದರು. ಸ್ವಾರಸ್ವವೆಂದರೆ-ಆ ಹಾಡಲ್ಲಿ ಸಿನಿಮಾದ ಸಂದರ್ಭವಿರಲಿಲ್ಲ. ಬದಲಿಗೆ-ಇಡೀ ಭರತ ಖಂಡದ ಮನೆಮನೆಯ ತಾಯ್ತಂದೆಯರ ವಿಷಾದ ಗೀತೆಯಿತ್ತು ಮತ್ತು ಅದೇ ಕಾರಣಕ್ಕೆ ಹಾಡು ಎಂದೆಂದಿಗೂ ಪ್ರಸ್ತುತ ಎಂಬಂತೆ ಆಗಿಹೋಯ್ತು…’
ಇಷ್ಟು ಹೇಳಿ ಹಾಡಿನ ಕಥೆಗೆ ‘ಶುಭಂ’ ಹೇಳಿದರು ಶ್ರೀನಿವಾಸಮೂರ್ತಿ.
touching
ಈ ಚಲನಚಿತ್ರದ ಅಸಲಿ ಸಿಡಿ ಎಲ್ಲಿ ಸಿಗಬಹುದು? ನನಗೆ ಗೊತ್ತಿದ್ದಲ್ಲೆಲ್ಲಾ ಕೇಳಿ ನೋಡಿದೆ. ಎಲ್ಲೂ ದೊರೆಯುತ್ತಿಲ್ಲ… 😦
jayanagara da calipso cd shop li ide.dayamaadi gamanisi…
manikanth