ಪ್ರೇಮವಿದೆ ಮನದೆ…
ಚಿತ್ರ: ಅಂತ ಗೀತೆರಚನೆ: ಗೀತಪ್ರಿಯ
ಸಂಗೀತ: ಜಿ.ಕೆ. ವೆಂಕಟೇಶ್, ಗಾಯನ: ಎಸ್. ಜಾನಕಿ
ಪ್ರೇಮವಿದೆ ಮನದೆ ನಗುತಾ ನಲಿವಾ ಹೂವಾಗಿ
ಬಂದೇ ಇಲ್ಲಿಗೆ ನಾ ಸಂಜೆ ಮಲ್ಲಿಗೆ
ನಾ ಸಂಜೇ ಮಲ್ಲಿಗೆ ||ಪ||
ಕಣ್ಣಲ್ಲಿ ನಿನ್ನ ನಾ ಕಂಡೆ ನನ್ನ
ದಿನದಿನವ ಎಣಿಸಿ, ಮನದಿ ಗುಣಿಸಿ, ಬಿಡುವ ಬಯಸಿ
ಸೋಲು ಈ ದಿನ, ಗೆಲುವೂ ಈ ಕ್ಷಣಾ ಹಾ… ಎಂಥಾ ಬಂಧನ ||೧|
ಹೊಂಗನಸ ಕಂಡೆ ನನಗಾಗಿ ನೀನು
ಬಗೆಬಗೆಯ ಆಸೆ ಮನದೆ ಇರಿಸಿ, ನೆನಪ ಉಳಿಸಿ,
ದೂರ ಸಾಗಿದೆ, ದಾಹ ತೀರದೆ, ತೀರ ಸೇರುವೆ ||೨||
ಪ್ರೀತಿ-ಪ್ರೇಮದ ಹಾಡು, ಸ್ನೇಹದ ಹಾಡು, ಸೇಡಿನ ಹಾಡು, ಸಂತೋಷದ ಹಾಡು, ಸಂಕಟದ ಹಾಡು, ಸಂಗೀತದ ಹಾಡು, ಮದುವೆಯ ಹಾಡು, ಹುಟ್ಟು ಹಬ್ಬದ ನೆಪದಲ್ಲಿ ಕೇಳುವ ಹಾಡು, ಆರತಕ್ಷತೆಯ ಸಂದರ್ಭಕ್ಕೆಂದೇ ಬರೆಯುವ ಹಾಡು, ದೇವರನ್ನು ಪ್ರಾರ್ಥಿಸುವ ಹಾಡು, ಅದೇ ದೇವರಿಗೆ ಆವಾಜ್ ಹಾಕುವ ಹಾಡು… ಹೀಗೆ, ಸಿನಿಮಾಗಳಲ್ಲಿ ಬಳಕೆಯಾಗುವ ಹಾಡುಗಳ ವೆರೈಟಿ ದೊಡ್ಡದು. ಪ್ರೇಮ, ಸ್ನೇಹ, ವಿರಸ, ವಿರಹ, ಸಂತೋಷ, ಸಂಕಟ ಮುಂತಾದ ಭಾವಗಳು ಗೀತೆರಚನೆಕಾರನನ್ನೂ ಆಗಿಂದಾಗ್ಗೆ ತಟ್ಟಿರುತ್ತವೆ. ಹಾಗಾಗಿ, ಮೇಲೆ ವಿವರಿಸಿದ ವೆರೈಟಿಯ ಹಾಡುಗಳನ್ನು ಬರೆಯುವ ಸಂದರ್ಭದಲ್ಲಿ ತನ್ನ ಅನುಭವವನ್ನೆಲ್ಲ ಆತ ಹಾಡಲ್ಲಿ ತರಬಹುದು. ಆ ಮೂಲಕ ಹಾಡಿನ ಹಾಗೂ ಸಂದರ್ಭದ ತೀವ್ರತೆಯನ್ನು ಹೆಚ್ಚಿಸಬಹುದು.
ಆದರೆ, ಕ್ಯಾಬರೆ ಹಾಡು ಬರೆಯುವ ಸಂದರ್ಭದಲ್ಲಿ ಮಾತ್ರ ಗೀತೆರಚನೆಕಾರ ಸವಾಲು ಎದುರಿಸಬೇಕಾಗುತ್ತದೆ. ಏಕೆಂದರೆ ಕ್ಯಾಬರೆ ಹಾಡಿನ ಸಂದರ್ಭದಲ್ಲಿ ಒಂದೊಂದು ಪದದಲ್ಲೂ ವಯ್ಯಾರ, ನಾಚಿಕೆ, ಬಿಗುಮಾನ, ವಿಪರೀತದ ಆಸೆ, ಒಂದಿಷ್ಟು ನಿರಾಸೆ… ಇತ್ಯಾದಿ ಇತ್ಯಾದಿಗಳನ್ನು ತರಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ಗೀತೆರಚನೆಕಾರ ಶಬ್ದಗಳನ್ನು ಅದು ಹೇಗೆ ಆವಾಹಿಸಿಕೊಳ್ಳುತ್ತಾನೆ? ಕೇಳುವವರು ಮತ್ತು ನೋಡುವವರಿಗೆ ಅಮಲೇರಿಸುವಂಥ ಹಾಡನ್ನು ಹೇಗೆ ಬರೆಯುತ್ತಾನೆ?
ಇದು, ಹಲವರ ಕುತೂಹಲದ ಪ್ರಶ್ನೆ.
ಈ ಪ್ರಶ್ನೆಗೆ ‘ಇದಮಿತ್ಥಂ’ ಎಂಬಂಥ ಉತ್ತರವಿಲ್ಲ. ಏಕೆಂದರೆ, ಒಬ್ಬೊಬ್ಬ ಚಿತ್ರಸಾಹಿತಿಯ ಗೀತೆರಚನೆಯ ಶೈಲಿ ಒಂದೊಂದು ರೀತಿಯದ್ದಾಗಿರುವುದು. ಆದರೆ, ಕ್ಯಾಬರೆ ಹಾಡುಗಳ ಸೃಷ್ಟಿಯ ಸಂದರ್ಭ ತಿಳಿಯಲು ಹೊರಟರೆ ಒಂದಿಷ್ಟು ಸ್ವಾರಸ್ಯಕರ ಸಂಗತಿಗಳಂತೂ ಖಂಡಿತ ಸಿಗುತ್ತವೆ.
ಅದಕ್ಕೊಂದು ಉದಾಹರಣೆ ಕೇಳಿ: ಅಬ್ಬಯ್ಯನಾಯ್ಡು ನಿರ್ಮಾಣದ ‘ಚೆಲ್ಲಿದ ರಕ್ತ’ ಸಿನಿಮಾದ ಕೆಲಸ ಆರಂಭವಾಗಿತ್ತು. ಅದಕ್ಕೆ ಗೀತೆರಚನೆಯ ಹೊಣೆ ಹೊತ್ತಿದ್ದವರು ಚಿ. ಉದಯಶಂಕರ್. ಸಿನಿಮಾ ಆರಂಭವಾದ ಕೆಲವೇ ನಿಮಿಷಗಳ ನಂತರ ‘ಶಿವಸ್ತುತಿಯ ಒಂದು ಹಾಡು ಬೇಕು’ ಎಂದರಂತೆ ಅಬ್ಬಯ್ಯನಾಯ್ಡು ಮತ್ತು ಆ ಚಿತ್ರದ ನಿರ್ದೇಶಕ ಸುಬ್ಬರಾವ್. ‘ಸರಿ, ನಾಳೆ ಸಂಜೆ ಜನಾರ್ದನ ಹೋಟೆಲಿಗೆ ಬನ್ನಿ. ಹಾಡು ಬರೆದು ಇಟ್ಟಿರ್‍ತೇನೆ’ ಎಂದರಂತೆ ಉದಯಶಂಕರ್. ಮರುದಿನ, ನಿಗದಿತ ಸಮಯಕ್ಕೆ ಸರಿಯಾಗಿ ಅಬ್ಬಯ್ಯ-ಸುಬ್ಬರಾವ್ ಜೋಡಿ ಜನಾರ್ದನ ಹೋಟೆಲಿಗೆ ಹೋಗಿದೆ. ಇವರನ್ನು ಕಂಡ ಉದಯಶಂಕರ್- ‘ಐದು ನಿಮಿಷ ಕೂತಿರಿ. ಹಾಡು ಬರೆದು ಕೊಡ್ತೇನೆ’ ಎಂದವರು-ನಂತರದ ಐದೇ ನಿಮಿಷದಲ್ಲಿ ‘ಶಿವನೊಲಿದರೆ ಭಯವಿಲ್ಲಾ’ ಎಂಬ ಹಾಡು ಬರೆದುಕೊಟ್ಟರಂತೆ.
ಉದಯಶಂಕರ್ ಅವರಿಂದ ಮತ್ತೊಂದು ಹಾಡು ಬರೆಸಿಕೊಂಡು ಹೋಗೋಣ ಎಂದು ಮಾತಾಡಿಕೊಂಡೇ ಬಂದಿದ್ದರು ಅಬ್ಬಯ್ಯನಾಯ್ಡು-ಸುಬ್ಬರಾವ್. ಶಿವಸ್ತುತಿಯ ಹಾಡನ್ನು ಉದಯಶಂಕರ್ ಕೊಟ್ಟ ಮರುಕ್ಷಣವೇ -‘ಸಾರ್, ಒಂದು ಕ್ಯಾಬರೆ ಹಾಡು ಬೇಕಾಗಿದೆ. ಅದನ್ನೂ ಬರೆದು ಕೊಡಿ. ಖಳನಾಯಕನ ಅಡಗುದಾಣದಲ್ಲಿ ಕ್ಯಾಬರೆ ಹಾಡು ಹಾಕೋಣ ಅನ್ಕೊಂಡಿದೀವಿ. ಆ ಸಂದರ್ಭಕ್ಕೆ ಒಂದು ಹಾಡು ಬೇಕು’ ಈಗಲೇ ಬೇಕು ಎಂದರಂತೆ.
ಬಹುಶಃ ಅವತ್ತು ಉದಯಶಂಕರ್ ಅವರಿಗೆ ಇನ್ನೊಂದು ಹಾಡು ಬರೆವ ‘ಮೂಡ್’ ಇರಲಿಲ್ಲವೆಂದು ಕಾಣುತ್ತದೆ. ಅವರು- ‘ನೋಡ್ರಿ, ಈಗಷ್ಟೇ ಶಿವಸ್ತುತಿಯ ಹಾಡು ಬರೆದಿದ್ದೇನೆ. ಅದರ ಹಿಂದೆಯೇ ಒಂದು ಕ್ಯಾಬರೆ ಹಾಡು ಬರೆದುಕೊಡಿ ಅಂದ್ರೆ ಹ್ಯಾಗೆ? ಅದನ್ನು ನಾಳೆ ಬರೀತೇನೆ’ ಅಂದಿದ್ದಾರೆ. ಈ ಮಾತು ಒಪ್ಪದ ಅಬ್ಬಯ್ಯನಾಯ್ಡು-ಸುಬ್ಬರಾವ್ ಜೋಡಿ-‘ಸಾರ್, ನಮಗೆ ಹಾಡು ಈಗಲೇ ಬೇಕು. ಬೇಕೇ ಬೇಕು’ ಎಂದು ಪ್ರೀತಿಯಿಂದಲೇ ಒತ್ತಾಯಿಸಿದ್ದಾರೆ. ಅಷ್ಟಕ್ಕೇ ಸುಮ್ಮನಾಗದೆ-‘ನೀವು ಏನು ಬರೆದ್ರೂ ಚೆನ್ನಾಗಿರುತ್ತೆ. ಬರೆದು ಕೊಡಿ ಸಾರ್ ಎಂದು ಪಟ್ಟು ಹಿಡಿದಿದ್ದಾರೆ. ಇವರ ಒತ್ತಾಯ ‘ಅತೀ’ ಅನ್ನಿಸಿದಾಗ, ಉದಯಶಂಕರ್ ಅವರಿಬ್ಬರ ಹೆಸರು ಹಾಗೂ ಅವರಿಗೆ ತಾನು ಮಾತುಗಳನ್ನೇ ಜತೆಗಿಟ್ಟುಕೊಂಡು, ಕಚಗುಳಿ ಇಡುವಂಥ ಒಂದು ಕ್ಯಾಬರೆ ಹಾಡು ಬರೆದುಬಿಟ್ಟರಂತೆ. ಆ ಹಾಡು ಹೀಗೆ ಶುರುವಾಗುತ್ತದೆ.
ಅಯ್ಯೊ ಅಬ್ಬಯ್ಯಾ ಬೇಡ ಸುಬ್ಬಯ್ಯಾ
ನಾಳೆ ಬಾರಯ್ಯಾ , ನಾಳೆ ಬಾರಯ್ಯಾ ಹೋ ಹೋ…
‘ಅಂತ’ ಚಿತ್ರದ ಸೂಪರ್ ಹಿಟ್ ಗೀತೆ ‘ಪ್ರೇಮವಿದೆ ಮನದೆ ನಗುತಾ ನಲಿವಾ ಹೂವಾಗಿ…’ ಹಾಡನ್ನು ಗೀತಪ್ರಿಯ ಹೇಗೆ ಬರೆದರು ಎಂದು ಸುಮ್ಮನೇ ಯೋಚಿಸಿದಾಗ ಅದಕ್ಕೊಂದು ಪೂರಕ ಮಾಹಿತಿಯಂತೆ ಉದಯಶಂಕರ್ ಬರೆದ ಅಯ್ಯೋ ಅಬ್ಬಯ್ಯಾ ಬೇಡ ಸುಬ್ಬಯ್ಯಾ ಹಾಡು ಮತ್ತು ಆ ಹಾಡು ಸೃಷ್ಟಿಯಾದ ಸಂದರ್ಭ ನೆನಪಾಯಿತು.
‘ಇದೇನ ಸಂಸ್ಕೃತಿ, ಇದೇನ ಸಭ್ಯತೆ’, ‘ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು’, ‘ಬೆಳುವಲದಾ ಮಡಿಲಲ್ಲಿ ಬೆವರು ಹನಿ ಬಿದ್ದಾಗ…’, ‘ನೀನೆಲ್ಲಿ ನಡೆವೆ ದೂರ ಎಲ್ಲೆಲ್ಲೂ ಶೋಕವೇ…’, ‘ಗೋಪಿಲೋಲ ಹೇ ಗೋಪಾಲ, ಈ ಜಗವೆಲ್ಲಾ ನಿನದೇ ಜಾಲ…’ ಮುಂತಾದ ಮಾಧುರ್ಯದ ಗೀತೆಗಳನ್ನು ಬರೆದವರು ಗೀತಪ್ರಿಯ. ಅವರಿಂದ ಕ್ಯಾಬರೆ ಹಾಡು ಬರೆಸಿದ ಖ್ಯಾತಿ ರಾಜೇಂದ್ರಸಿಂಗ್ ಬಾಬು ಅವರದ್ದು. ಆ ಸಂದರ್ಭವನ್ನು ಗೀತಪ್ರಿಯ ಅವರು ನೆನಪಿಸಿಕೊಂಡದ್ದು ಹೀಗೆ:
ಇದು ೧೯೮೧-೮೨ರ ಮಾತು. ತನ್ನ ಜೀವದ ಗೆಳೆಯ ಅಂಬರೀಷ್ ಅವರನ್ನು ಹೀರೊ ಮಾಡಬೇಕು ಎಂಬ ಆಸೆಯಿಂದ ರಾಜೇಂದ್ರಸಿಂಗ್ ಬಾಬು ‘ಅಂತ’ ಚಿತ್ರದ ತಯಾರಿಗೆ ಸಿದ್ಧತೆ ನಡೆಸಿದ್ದರು. ಆ ಚಿತ್ರಕ್ಕೆ ನನ್ನಿಂದ ಒಂದು ಹಾಡು ಬರೆಸಬೇಕೆಂಬುದು ಅವರ ಆಸೆಯಾಗಿತ್ತು. ನನ್ನನ್ನು ಸಂಪರ್ಕಿಸಿ ಹೇಳಿದರು: ‘ಸಾರ್, ನಮ್ಮ ಹೊಸ ಸಿನಿಮಾದಲ್ಲಿ ಹೀಗೊಂದು ಸನ್ನಿವೇಶ. ನಾಯಕ ಮತ್ತು ಅವನ ಸೋದರಿ ಚಿಕ್ಕಂದಿನಲ್ಲಿಯೇ ಬೇರೆ ಬೇರೆಯಾಗಿರುತ್ತಾರೆ. ಮುಂದೆ ನಾಯಕ ತಂಗಿಯನ್ನು ಹುಡುಕಲೆಂದೇ ಪೊಲೀಸ್ ಇನ್‌ಸ್ಪೆಕ್ಟರ್ ಆಗುತ್ತಾನೆ. ಹಲವಾರು ಕಡೆ ಹುಡುಕಿದರೂ. ಆಕೆ ಸಿಕ್ಕುವುದಿಲ್ಲ. ಮುಂದೆ ನಾಯಕನ ವೃತ್ತಿ ಬದುಕಿನಲ್ಲಿ ಹಲವಾರು ಏರುಪೇರುಗಳಾಗುತ್ತವೆ. ಈತ ವೇಷ ಮರೆಸಿಕೊಂಡು ಖಳನಾಯಕರ ಅಡ್ಡೆಗೇ ಬರುತ್ತಾನೆ. ಖಳನಾಯಕರ ಜೊತೆಯಲ್ಲಿದ್ದುಕೊಂಡೇ ಅವರನ್ನು ನಿರ್ಮೂಲನ ಮಾಡುವ ಹವಣಿಕೆ ಅವನದು. ಕನ್ವರ್‌ಲಾಲ್ ಹೆಸರಿನ ಈತ ತಮ್ಮೊಂದಿಗೆ ಸೇರಿಕೊಂಡ ಖುಷಿಗೆ, ಆತನ ಹಿನ್ನೆಲೆ ಗೊತ್ತಿಲ್ಲದ ಖಳರೇ ಒಂದು ಕ್ಯಾಬರೆ ಡ್ಯಾನ್ಸ್ ಏರ್ಪಡಿಸುತ್ತಾರೆ. ಆಗ ನರ್ತಿಸಲು ಬಂದಾಕೆ ನಾಯಕನ ಸೋದರಿಯೇ ಆಗಿರುತ್ತಾಳೆ.
ಈ ಸಂದರ್ಭದಲ್ಲಿ ಅಣ್ಣ-ತಂಗಿಗೆ ಪರಸ್ಪರರ ಗುರುತು ಸಿಕ್ಕುತ್ತದೆ. ಆದರೆ ಇಬ್ಬರೂ ಪರಿಚಯ ಹೇಳಿಕೊಳ್ಳದ ಪರಿಸ್ಥಿತಿಯಲ್ಲಿರುತ್ತಾರೆ. ತಂಗಿಯನ್ನು ಆ ವೇಷದಲ್ಲಿ, ಅಂಥ ಜಾಗದಲ್ಲಿ ನೋಡಿ ನಾಯಕನಿಗೆ ಶಾಕ್ ಆಗುತ್ತದೆ. ಕ್ಯಾಬರೆ ಡ್ಯಾನ್ಸರ್ ಆಗಿದ್ದ ತಂಗಿಯದೂ ಅದೇ ಸ್ಥಿತಿ. ಇಂಥ ಸಂದರ್ಭದಲ್ಲಿ ಮನದ ಸಂಕಟವೆಲ್ಲಾ ಹಾಡಾಗಿ ಬರಬೇಕು… ಅದು ಕ್ಯಾಬರೆ ಹಾಡಿನಂತೆಯೂ ಭಾಸವಾಗಬೇಕು. ಅಣ್ಣ-ತಂಗಿಯ ಮನದ ನೋವು ಪ್ರೇಕ್ಷಕರನ್ನು ತಾಕಬೇಕು, ಅಂಥದೊಂದು ಹಾಡು ಬರೆದು ಕೊಡಿ’ ಎಂದಿದ್ದರು ರಾಜೇಂದ್ರಸಿಂಗ್ ಬಾಬು.
ಅದುವರೆಗೂ ಮೃದು, ಮಧುರ ಹಾಡು ಬರೆಯುತ್ತಿದ್ದವ ನಾನು. ಈಗ ಕ್ಯಾಬರೆ ಹಾಡಿಗೆ ಪೆನ್ ತಿರುಗಿಸಬೇಕಿತ್ತು. ‘ಇರಲಿ, ಇಂಥ ಸವಾಲುಗಳು ಆಗಿಂದಾಗ್ಗೆ ಎದುರಾಗಬೇಕು. ಆಗಲೇ ಬಾಳಿಗೊಂದು ಅರ್ಥ’ ಎಂದು ಕೊಂಡೆ. ಸ್ವಲ್ಪ ಹೊತ್ತಿನ ನಂತರ ಜಿ.ಕೆ. ವೆಂಕಟೇಶ್ ಅವರು ಟ್ಯೂನ್ ಕೇಳಿಸಿದರು. ಈ ಹಾಡು ಮುಗಿಯುತ್ತಿದ್ದಂತೆಯೇ ಪ್ರೀತಿಯ ಅಣ್ಣನ ಮುಂದೆ ಕ್ಯಾಬರೆ ಡ್ಯಾನ್ಸ್ ಮಾಡಬೇಕಾಯ್ತಲ್ಲ ಎಂಬ ಸಂಕಟದಿಂದ, ಆ ನರ್ತಕಿ ಮಹಡಿ ಮೇಲಿಂದ ಜಿಗಿದು ಪ್ರಾಣ ಬಿಡುತ್ತಾಳೆ ಎಂದೂ ಹೇಳಿದ್ದರು ಸಿಂಗ್ ಬಾಬು. ಈ ಮಾತು ನನ್ನ ಮನದಲ್ಲಿ ಗಟ್ಟಿಯಾಗಿ ಉಳಿದುಹೋಗಿತ್ತು. ಅಂದರೆ ನಾಯಕನ ತಂಗಿಯ ಪಾತ್ರ ಸ್ವಲ್ಪ ಸಮಯ ಮಾತ್ರ ಕಾಣಿಸಿಕೊಂಡು ಮರೆಯಾಗುವಂಥಾದ್ದು. ಹೀಗೆ ಕಾಣಿಸಿಕೊಂಡು ಹಾಗೆ ಕಣ್ಮರೆಯಾಗುವ ಪಾತ್ರಕ್ಕೆ ಹೇಗೆ ಹಾಡು ಬರೆಯುವುದು? ಆ ಪಾತ್ರವನ್ನು ಯಾವ ವಸ್ತುವಿಗೆ ಹೋಲಿಸುವುದು ಎಂದು ಚಿಂತಿಸಿದೆ. ಈ ಸಂದರ್ಭದಲ್ಲಿಯೇ ಹೆಣ್ಣನ್ನು ಹೂವಿಗೆ ಹೋಲಿಸುವುದು ನೆನಪಿಗೆ ಬಂತು. ಆದರೆ ಈ ಸಿನಿಮಾದಲ್ಲಿ ಬರುತ್ತಿದ್ದ ಹೆಣ್ಣು ಕೆಲವೇ ಹೊತ್ತು ಕಾಣಿಸಿಕೊಂಡು ಕಣ್ಮರೆಯಾಗುವಾಕೆ. ಅವಳನ್ನು ಯಾವ ಹೂವಿಗೆ ಹೋಲಿಸಬಹುದು ಎಂದು ಯೋಚಿಸುತ್ತಾ ಕೂತೆ.
ಆಗ ಕಣ್ಮುಂದೆ ಕಂಡ ಚಿತ್ರವೇ ಸಂಜೆಮಲ್ಲಿಗೆಯದ್ದು!
ಸಾಮಾನ್ಯವಾಗಿ ಎಲ್ಲ ಹೂಗಳೂ ಮುಂಜಾನೆ ಅರಳುತ್ತವೆ. ಅವುಗಳನ್ನು ಮಂಗಳ ಕಾರ್ಯಗಳಿಗೆ, ದೇವರ ಪೂಜೆಗೆ ಬಳಸುತ್ತಾರೆ. ಹೆಂಗಳೆಯರು ಅವುಗಳನ್ನು ಮುಡಿಗೇರಿಸಿಕೊಳ್ಳುತ್ತಾರೆ. ಹೆಚ್ಚಿನ ಹೂಗಳು ಬೆಳಗಿಂದ ಸಂಜೆಯವರೆಗೂ ಫ್ರೆಶ್ ಆಗಿರುವಂಥ ಗುಣ ಹೊಂದಿರುತ್ತವೆ. ಆದರೆ, ಸಂಜೆ ಮಲ್ಲಿಗೆಯದು ಹಾಗಲ್ಲ. ಇನ್ನೇನು ಸೂರ್ಯ ಮುಳುಗುತ್ತಾನೆ ಎನ್ನುವ ಹೊತ್ತಿನಲ್ಲಿ ಅದು ಅರಳುತ್ತದೆ. ಕತ್ತಲಾಗುತ್ತಿದ್ದಂತೆಯೇ ಬಾಡಿ ಹೋಗುತ್ತದೆ. ಈ ಹೂವಿನ ಅರಳುವ ಮುದುಡುವ ಪ್ರಕ್ರಿಯೆ ಕೆಲವೇ ಗಂಟೆಗಳ ಕಾಲ. ಚಿಕ್ಕಂದಿನಲ್ಲಿ ನಾನು ಈ ಹೂವುಗಳನ್ನೇ ಆಸೆಯಿಂದ, ಪ್ರೀತಿ, ಬೆರಗಿನಿಂದ ನೋಡುತ್ತಿದ್ದೆ. ಅದನ್ನು ಬಿಡಿಸಿಕೊಂಡೂ ಹೋಗುತ್ತಿದ್ದೆ. ‘ಅಯ್ಯೋ, ಅದು ಸಂಜೆ ಮಲ್ಲಿಗೆ. ಅದನ್ನು ದೇವರಿಗೆ ಮುಡಿಸಬಾರ್‍ದು’ ಎಂದು ಅಮ್ಮ ಎಚ್ಚರಿಸುತ್ತಿದ್ದಳು. ಹೊರಗೆ ಸಿಕ್ಕ ಗೆಳೆಯರು, ಬಂಧುಗಳೂ ಇದೇ ಮಾತು ಹೇಳುತ್ತಿದ್ದರು. ಇಂಥ ಮಾತುಗಳನ್ನು ಕೇಳಿದಾಗ-‘ಬೇರೆಲ್ಲ ಹೂಗಳೂ ಅರಳಿ, ಮಂಗಳ ಕಾರ್ಯಗಳಿಗೆ ತಮ್ಮನ್ನು ಸಮರ್ಪಿಸಿಕೊಂಡು ಪುನೀತವಾಗುವ ಸಂದರ್ಭದಲ್ಲಿ ಈ ಸಂಜೆಮಲ್ಲಿಗೆಗೆ ಕೆಲವೇ ಕ್ಷಣಗಳಲ್ಲಿ ಅರಳಿ ಬಾಡುವ ಅನಿವಾರ್‍ಯತೆ. ಏಕೆ ಎಂದು ನನ್ನಷ್ಟಕ್ಕೆ ನಾನೇ ಅಂದುಕೊಳ್ಳುತ್ತಿದ್ದೆ.
ಹೀಗೆ, ಸಂಜೆ ಮಲ್ಲಿಗೆಯ ಬಗ್ಗೆ ಯೋಚಿಸುತ್ತಿದ್ದಾಗಲೇ ನರ್ತಕಿಯರ ಬದುಕು ನೆನಪಾಯಿತು. ಯೌವನವಿದ್ದಾಗ ಎಲ್ಲರೂ ನರ್ತಕಿಯರನ್ನು ಪ್ರೀತಿಸುತ್ತಾರೆ, ಆರಾಸುತ್ತಾರೆ, ಆಸೆಗಣ್ಣಿಂದ ನೋಡುತ್ತಾರೆ. ಬಯಸುತ್ತಾರೆ. ಆದರೆ, ಮುಪ್ಪು ಸಮೀಪಿಸಿದರೆ ಸಾಕು, ಅವರನ್ನು ಯಾರೂ ತಿರುಗಿಯೂ ನೋಡುವುದಿಲ್ಲ. ಅವರ ಬದುಕೂ ಥೇಟ್ ಸಂಜೆ ಮಲ್ಲಿಗೆಯ ಥರವೇ ಮುಗಿದು ಹೋಗುತ್ತದೆ…
ಹೀಗೊಂದು ಯೋಚನೆ ಬರುತ್ತಿದ್ದಂತೆಯೇ ಒಂದೊಂದೇ ಹೊಸ ಪದಗಳು ಹಾಡಿನ ಸಾಲುಗಳಾಗಿ ಜತೆಯಾಗತೊಡಗಿದವು. ಅಣ್ಣನಿಗೆ ತನ್ನ ಬದುಕಿನ ಸಂಕಟ ಹೇಳಲೆಂದು ಆ ಕ್ಯಾಬರೆ ನರ್ತಕಿ ತನ್ನನ್ನು ತಾನು ‘ಸಂಜೆ ಮಲ್ಲಿಗೆ’ ಎಂದು ಕರೆದುಕೊಂಡರೆ ಚೆಂದ ಅನ್ನಿಸಿತು. ಹಾಗೇ ಬರೆದೆ. ಆ ನಂತರದಲ್ಲಿ ಒಂದೊಂದೇ ಹೊಸ ಪದ, ಒಂದೊಂದೇ ಹೊಸ ಸಾಲು ಸೇರಿಕೊಳ್ಳುತ್ತಾ ಹಾಡು ಸಿದ್ಧವಾಗಿಹೋಯಿತು. ಅಣ್ಣ-ತಂಗಿಯಾಗಿ ತಮ್ಮ ಅಸಹಾಯಕತೆಯನ್ನು ಮುಖಭಾವದಲ್ಲಿ ಪ್ರದರ್ಶಿಸುವ ಸಂದರ್ಭದಲ್ಲಿ ಅಂಬರೀಷ್- ಜಯಮಾಲಾ ಪೈಪೋಟಿಗೆ ಬಿದ್ದು ನಟಿಸಿದರು. ಈ ಹಾಡಿನ ದೃಶ್ಯೀಕರಣ ಎಲ್ಲರ ಮನಸ್ಸಿಗೂ ನಾಟುವಂತಿತ್ತು. ಜತೆಗೆ, ಎಸ್. ಜಾನಕಿಯವರ ದನಿಯಲ್ಲಿನ ಮಾದಕತೆ, ಜಿ.ಕೆ. ವೆಂಕಟೇಶ್ ಅವರ ಮಧುರ ಸಂಗೀತ ಈ ಗೀತೆಯನ್ನು ಸೂಪರ್ ಹಿಟ್ ಹಾಡಾಗಿಸಿತು.
ಇಷ್ಟೇ ನೋಡಿ ಆ ಹಾಡಿನ ಕಥೆ ಎನ್ನುತ್ತಾ ಮಾತು ಮುಗಿಸಿದರು ಗೀತಪ್ರಿಯ.
Tumba chennagide.
ಬಲು ಸುಂದರವಾದ ಕವನ ಮತ್ತು ರಾಗ ಸಂಯೋಜನೆ.
ಹಾಡಿನ ಹಿಂದಿನ ಕಥೆ ಚೆನ್ನಾಗಿದೆ.
ಓದು ಮುದ ನೀಡಿತು.
Hi Sir,
Nimma blog tumba chennagidhe. ee melina haadu, Sirivantanaadaroo, Ene kelu kodove…. muntaada haadu huttidaa kshanagalu akshara roopadalli adbhutavaagi moodibandive. ‘Savi Savi Preethi’ enno parishuddha premada patrike nadusuttiddene. Adara ‘cinema preethi’ ankanadalli, thaavu appane ittare, ee nimma lekhanagalannu prakatisuve. Nanna e-ID manikya.satish@gmail.com.
Vandanegalu