Archive for the ‘ಉಭಯ ಕುಶಲೋಪರಿ’ Category

ಸಾಧನೆಗೆ ಅಸಾಧ್ಯವಾದುದು ಇಲ್ಲ, ಇಲ್ಲ, ಇಲ್ಲ !

ಡಿಸೆಂಬರ್ 30, 2010

 

 

 

 

 

 

 

ಕಣ್ಮುಂದೆ ಇರೋದು ಇನ್ನು ಒಂದೇ ದಿನ. ಒಂದು ದಿನ ಕಳೆಯಿತೆಂದರೆ- ಚಿಯರ್‍ಸ್! ಅದು ಹೊಸ ವರ್ಷದ ಮೊದಲ ದಿನ. ಪ್ರತಿಬಾರಿಯೂ ಅಷ್ಟೆ. ಡಿಸೆಂಬರ್ ಬಂದಾಕ್ಷಣವೇ ನಮಗೆ ಹೊಸ ವರ್ಷ ನೆನಪಾಗುತ್ತದೆ. ಸರಿದು ಹೋಗುತ್ತಿರುವ ವರ್ಷದಲ್ಲಿ ಒಂದು ಸೋಲಿಗೆ, ಸಂಕಟಕ್ಕೆ, ಅವಮಾನಕ್ಕೆ, ಯಾತನೆಗೆ ಸಿಕ್ಕಿಕೊಂಡವರು ಹೊಸ ವರ್ಷದಲ್ಲಾದರೂ ನನಗೆ ನೆಮ್ಮದಿ ಸಿಗಲಿ ಎಂದು ಆಸೆ ಪಡುತ್ತಾರೆ. ಅದೇ ರೀತಿ, ಈಗಾಗಲೇ ಯಶಸ್ಸಿನ ಕುದುರೆ ಮೇಲಿರುವ ಜನ, ಅದೇ ಯಶಸ್ಸು ಹೊಸ ವರ್ಷದಲ್ಲೂ ಮುಂದುವರಿಯಲಿ ಎಂದು ಬಯಸುತ್ತಾರೆ. ಅದಕ್ಕಾಗಿ ಪ್ರಾರ್ಥಿಸುತ್ತಾರೆ. ಪೂಜೆ ಮಾಡುತ್ತಾರೆ. ಹರಕೆ ಕಟ್ಟಿಕೊಳ್ಳುತ್ತಾರೆ. ಹೋಮ ಮಾಡಿಸುತ್ತಾರೆ. ಜ್ಯೋತಿಷ್ಯದ ಮೊರೆ ಹೋಗುತ್ತಾರೆ…
ಇಂಥ ಸಂದರ್ಭದಲ್ಲಿಯೇ ಕೆಲವರು ಬೇರೆಯದೇ ಧಾಟಿಯಲ್ಲಿ ಮಾತಾಡಲು ಶುರು ಮಾಡುತ್ತಾರೆ. ಅವರ ಪ್ರಕಾರ- ‘ಗೆಲುವು ಎಂಬುದು ಕೇವಲ ಅದೃಷ್ಟದ ಆಟ. ಅದು ಹಣೆಬರಹ. ಅದು ದೈವಕೃಪೆ! ಅದೊಂಥರಾ ಲಾಟರಿ ಇದ್ದ ಹಾಗೆ! ಯಶಸ್ಸು ಎಂಬುದು ಯಾವತ್ತೂ ಶ್ರೀಮಂತರ ಪಕ್ಷಪಾತಿ. ಹಾಗಾಗಿ, ಆಕಾಶಕ್ಕೆ ಏಣಿ ಹಾಕುವ ಕೆಲಸ ಮಾಡಲೇಬಾರದು. ‘ಬಡವಾ, ನೀ ಮಡಗಿದಹಾಂಗಿರು’ ಎಂದು ಗಾದೆಯೇ ಇದೆ. ಅದರಂತೆ ಇದ್ದು ಬಿಡಬೇಕು. ಅದೇ ಸರಿ….’
ವಿಪರಾಸ್ಯವೆಂದರೆ, ಇಂಥ ಪೆದ್ದು ಪೆದ್ದು ಮಾತುಗಳನ್ನೇ ನಂಬುವ, ಅದನ್ನು ಅನುಮೋದಿಸುವ, ಅದನ್ನೇ ಅನುಸರಿಸಿ ಬದುಕುವ ಮಂದಿ ಕೂಡಾ ನಮ್ಮ ಮಧ್ಯೆ ಇದ್ದಾರೆ.
ಒಂದು ಮಾತು ನೆನಪಿರಲಿ : ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ, ಅಲ್ಲೆಲ್ಲ ಮಹಾನ್ ವ್ಯಕ್ತಿಗಳ ಸಾಧನೆಯ ಬದುಕಿನ ಕಥೆಗಳು ಕಣ್ಣು ಕುಕ್ಕುತ್ತವೆ. ಸ್ವಾರಸ್ಯವೇನೆಂದರೆ, ಒಂದು ಗೆಲುವಿನ ಮೆಟ್ಟಿಲು ಹತ್ತಿ ನಿಲ್ಲುವ ಮುನ್ನ ಅದೇ ಸಾಧಕ ಹತ್ತಕ್ಕೂ ಹೆಚ್ಚು ಬಾರಿ ಸೋಲಿನ ಮೆಟ್ಟಿಲು ಮೇಲೆ ಹೊರಳಾಡಿರುತ್ತಾನೆ ಮತ್ತು ಆತ ಕೂಡ ನಮ್ಮ ನಿಮ್ಮೆಲ್ಲರಂತೆಯೇ ಜನ ಸಾಮಾನ್ಯನೇ ಆಗಿರುತ್ತಾನೆ. ಈ ಮಾತಿಗೆ ಉದಾಹರಣೆಯಾಗಿ ಒಂದು ಕಥೆ ಕೇಳಿ :
ಅವನು ಅಮೆರಿಕನ್. ಆತ ನಮ್ಮ ನಿಮ್ಮಂತೆಯೇ ಇದ್ದ ಮನುಷ್ಯ. ಬದುಕಲ್ಲಿ ಏನಾದರೂ ಸಾಸಬೇಕು ಎಂದು ಅವನಿಗೆ ಆಸೆಯಿತ್ತು. ಕನಸುಗಳಿದ್ದವು. ಛಲವಿತ್ತು, ಆತ್ಮವಿಶ್ವಾಸವಿತ್ತು. ‘ಸಾಧನೆ’ ಮಾಡಲು ಹಣ ಬೇಕು ಅನ್ನಿಸಿದಾಗ ಈತ ಚಿಕ್ಕಂದಿನಲ್ಲೇ ದುಡಿಯಲು ನಿಂತ. ವರ್ಷ ವರ್ಷವೂ ಇಷ್ಟಿಷ್ಟೇ ದುಡ್ಡು ಸೇರಿಸಿಕೊಂಡ. ಹಣದ ಗಂಟು ಒಂದಿಷ್ಟು ದೊಡ್ಡದಾಗುವ ವೇಳೆಗೆ ಅವನಿಗೆ ೨೧ ವರ್ಷವಾಯ್ತು. ಗಂಟಿನ ಹಣದ ಬಲದಿಂದಲೇ ಆತ ವ್ಯಾಪಾರ ಶುರು ಮಾಡಿದ. ಒಂದು ವರ್ಷ ಬಿಸಿನೆಸ್ ಮಾಡಿದ. ಲಾಭದ ಮಾತು ಹಾಗಿರಲಿ, ಹಾಕಿದ ಬಂಡವಾಳವೂ ಬರಲಿಲ್ಲ. ಈ ಸೋಲು ಮರೆಯುವ ಸಲುವಾಗಿ, ಮುಂದಿನ ವರ್ಷ ಆತ ಜಿಲ್ಲಾ ಮಟ್ಟದ ಚುನಾವಣೆಯಲ್ಲಿ ರ್ಸ್ಪಸಿದ. ಅಲ್ಲೂ ಸೋತ. ಛೆ, ಯಾಕೋ ನನ್ನ ನಸೀಬು ನೆಟ್ಟಗಿಲ್ಲ ಎಂದು ಗೊಣಗಿಕೊಂಡು ಮತ್ತೆ ದುಡಿಮೆಗೆ ನಿಂತ. ಭರ್ತಿ ಎರಡು ವರ್ಷ ಹಗಲಿರುಳೂ ದುಡಿದ. ಪರಿಣಾಮ, ಒಂದಿಷ್ಟು ದುಡ್ಡು ಜತೆಯಾಯಿತು. ವ್ಯಾಪಾರದಲ್ಲಿ ಹಿಂದೊಮ್ಮೆ ಸೋತಿದ್ದನಲ್ಲ? ಆ ತಪ್ಪುಗಳನ್ನೆಲ್ಲ ನೆನಪಿಟ್ಟುಕೊಂಡೇ ಮತ್ತೆ ವ್ಯಾಪಾರ ಆರಂಭಿಸಿದ. ಅದೇ ಸಂದರ್ಭದಲ್ಲಿ ಮದುವೆಯಾದ. ಮೊದಲ ವರ್ಷ ವ್ಯವಹಾರ ಮತ್ತು ದಾಂಪತ್ಯ ಚೆನ್ನಾಗಿಯೇ ಇತ್ತು. ಆದರೆ ಈ ಮಹಾರಾಯನ ೨೬ನೇ ವರ್ಷದಲ್ಲಿ ಮತ್ತೊಂದು ಆಘಾತವಾಯಿತು. ಒಂದೆಡೆ ವ್ಯಾಪಾರದಲ್ಲಿ ಲಾಸ್ ಆಯಿತು. ಆ ಬಗ್ಗೆ ಯೋಚಿಸುತ್ತಿದ್ದ ಸಂದರ್ಭದಲ್ಲಿಯೇ ನ್ಯುಮೋನಿಯಾಕ್ಕೆ ತುತ್ತಾಗಿ ಆತನ ಹೆಂಡತಿಯೂ ತೀರಿಹೋದಳು. ಹೀಗೆ, ಒಂದರ ಹಿಂದೊಂದರಂತೆ ಸೋಲು, ಸಂಕಟಗಳಿಂದ ಆತ ಮನೋರೋಗಿಯೇ ಆಗಿ ಹೋದ. ಓಹ್, ಇನ್ನು ಇವನ ಕಥೆ ಮುಗೀತು. ಇವನು ಹುಚ್ಚ ಆಗೋದು ಗ್ಯಾರಂಟಿ ಎಂದು ಗೆಳೆಯರು, ಬಂಧುಗಳೆಲ್ಲ ನಿರ್ಧರಿಸಿದ್ದರು. ಆದರೆ, ಪವಾಡ ನಡೆದೇ ಹೋಯಿತು. ಒಂದು ವರ್ಷದ ಅವಯಲ್ಲಿ ಈತ ವೈದ್ಯರೇ ಬೆರಗಾಗುವಂತೆ ಚೇತರಿಸಿಕೊಂಡ.
ಮುಂದಿನ ಏಳು ವರ್ಷಗಳ ಕಾಲ ಆತ ಎಲ್ಲಿದ್ದ, ಏನು ಮಾಡುತ್ತಿದ್ದ ಎಂಬುದು ಹೆಚ್ಚಿನವರಿಗೆ ಗೊತ್ತಾಗಲೇ ಇಲ್ಲ. ಆತ ಕ್ಷಣಕ್ಷಣವೂ ಒಂದು ಗೆಲುವಿಗಾಗಿ ಕಾತರಿಸುತ್ತಲೇ ಬದುಕಿದ. ಅವನಿಗೆ ೩೪ ವರ್ಷವಾಗಿದ್ದಾಗ ಮತ್ತೊಂದು ಮಹಾಚುನಾವಣೆ ಬಂತು. ಪಕ್ಷವೊಂದರ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತ. ಸೋತ. ಅದುವರೆಗೂ ಈತನ ಹಲವಾರು ವಿಫಲ ಸಾಹಸಗಳನ್ನು ನೋಡಿದ್ದ ಜನ ನಕ್ಕರು. ಗೇಲಿ ಮಾಡಿದರು. ‘ಏನಪ್ಪಾ ನಿನ್ನ ಆಟ, ಹೀಗೆಲ್ಲ ಆಡುವ ಬದಲು ತೆಪ್ಪಗಿರಬಾರದಾ?’ ಎಂದು ಬುದ್ಧಿ ಹೇಳಿದರು.
ಎಲ್ಲರ ಬುದ್ಧಿಮಾತನ್ನೂ ತಾಳ್ಮೆಯಿಂದ ಕೇಳಿಸಿಕೊಂಡ ಈತ, ತನ್ನ ೪೫ನೇ ವಯಸ್ಸಿನಲ್ಲಿ ಸೆನೆಟ್ ಸಭೆಯ ಚುನಾವಣೆಗೆ ನಿಂತು ಸೋತ. ಇಷ್ಟಾದ ಮೇಲಾದರೂ ಸುಮ್ಮನಿರಬಾರದೆ? ಅವನು ಸುಮ್ಮನಿರಲಿಲ್ಲ. ಎರಡು ವರ್ಷಗಳ ನಂತರ, ಅಂದರೆ ತನ್ನ ೪೭ನೇ ವಯಸ್ಸಿನಲ್ಲಿ ಅದೇ ಅಮೆರಿಕದ ಉಪಾಧ್ಯಕ್ಷ ಸ್ಥಾನಕ್ಕೇ ರ್ಸ್ಪಸಿದ. ಯಥಾಪ್ರಕಾರ ಸೋತ. ಈ ಮತ್ತೊಂದು ಮಹಾಸೋಲೂ ಅವನನ್ನು ಧೃತಿಗೆಡಿಸಲಿಲ್ಲ. ಎರಡು ವರ್ಷ ಸುಮ್ಮನಿದ್ದವನು ಮತ್ತೆ ಸೆನೆಟ್ ಚುನಾವಣೆಗೆ ರ್ಸ್ಪಸಿ ಅಲ್ಲಿಯೂ ಸೋತ!
ಇದನ್ನು ಕಂಡ ಅಮೆರಿಕದ ಜನ ತಲೆಗೊಂದು ಮಾತಾಡಿದರು. ಇವನನ್ನು ಗೇಲಿ ಮಾಡಿದರು. ಮರುಕದಿಂದ ನೋಡಿದರು. ಸೋಲಿನ ದೊರೆ ಎಂದು ಹೀಯಾಳಿಸಿದರು. ಸೋಲುವುದರಲ್ಲಿ ಗಿನ್ನಿಸ್ ರೆಕಾರ್ಡ್ ಸೇರೋ ಆಸಾಮಿ ಎಂದರು. ಯಾರು ಅದೆಷ್ಟೇ ಟೀಕಿಸಿದರೂ ಈತ ಅದನ್ನು ಕಂಡೂ ಕಾಣದವನಂತೆ ಮುನ್ನಡೆದ ಮತ್ತು ತನ್ನ ೫೨ನೇ ವಯಸ್ಸಿನಲ್ಲಿ ಅಮೆರಿಕದ ಅಧ್ಯಕ್ಷ ಪದವಿಗೆ ರ್ಸ್ಪಸಿ ಪ್ರಚಂಡ ಬಹುಮತದಿಂದ ಗೆದ್ದ!
ಅಂದಹಾಗೆ, ನೂರಾರು ಸೋಲುಗಳ ಮಧ್ಯೆಯೇ ಗೆಲುವಿನ ಅರಮನೆಗೆ ನಡೆದು ಬಂದ ಆತ ಯಾರು ಗೊತ್ತೆ?
ಅಬ್ರಹಾಂ ಲಿಂಕನ್!

ಈಗ ಯೋಚಿಸಿ. ಹಣೆಬರಹವನ್ನೋ, ವಿಯಾಟವನ್ನೋ, ಅದೃಷ್ಟವನ್ನೋ ಹಳಿದುಕೊಂಡು ಅಬ್ರಹಾಂ ಲಿಂಕನ್ನನೂ ಸುಮ್ಮನೇ ಉಳಿದಿದ್ದರೆ ಏನಾಗುತ್ತಿತ್ತು ಹೇಳಿ? ಆತನೂ ಜಗತ್ತಿನ ಕೋಟ್ಯಂತರ ಸೋತು ಹೋದವರ, ಕನಸನ್ನೇ ಕಾಣದವರ ಪಟ್ಟಿಗೆ ಸೇರಿ ಹೋಗುತ್ತಿದ್ದ. ಆದರೆ, ನನ್ನಿಂದ ಏನೂ ಆಗುವುದಿಲ್ಲ ಎಂದು ಯೋಚಿಸುವ ಬದಲಿಗೆ ನನ್ನಿಂದ ಎಲ್ಲವೂ ಸಾಧ್ಯ ಎಂದು ಅವನು ಸೋಲಿನ ಹಾದಿಯಲ್ಲೂ ಒಂದೊಂದೇ ದಿಟ್ಟ ಹೆಚ್ಚೆ ಇಟ್ಟಿದ್ದರಿಂದ ಆಕಾಶಕ್ಕೇ ಏಣಿ ಹಾಕುವುದು ಅವನಿಂದ ಸಾಧ್ಯವಾಯಿತು.
ಗೆಳೆಯರೆ, ಸಾಧನೆಗೆ ಅಸಾಧ್ಯವಾದುದು ಉಹುಂ- ಇಲ್ಲ, ಇಲ್ಲ, ಇಲ್ಲ. ಲಿಂಕನ್‌ನ ಗೆಲುವಿನ ಬದುಕು ಎಲ್ಲರಿಗೂ ಮಾದರಿಯಾಗಿರಲಿ. ಅವನಿಗೆ ಸಿಕ್ಕಂಥ ಹೆಸರು, ಯಶಸ್ಸು ಈ ಹೊಸ ವರ್ಷದಲ್ಲಿ ಎಲ್ಲರದೂ ಆಗಲಿ ಎಂಬ ಶುಭಾಕಾಂಕ್ಷೆಯೊಂದಿಗೆ- ಒಂದು ದಿನ ಮುಂಚಿತವಾಗಿ ಹೊಸ ವರ್ಷದ ಶುಭಾಶಯಗಳು.

ಮಾತು ನಿಂತರೂ ಅವನು ಮಹಾಸೇತುವೆ ಕಟ್ಟಿದ !

ನವೆಂಬರ್ 10, 2010

 

 

 

 

 

 

 

ಇದು, ೧೨೭ ವರ್ಷಗಳ ಹಿಂದೆ ನಡೆದ ಪ್ರಸಂಗ.
ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ೧೮೮೩ರಲ್ಲಿ ಆರಂಭವಾಗಿ ನಂತರದ ಹದಿನೈದಿಪ್ಪತ್ತು ವರ್ಷಗಳ ನಂತರ ಮುಗಿದು ಹೋದ ಮಹಾಸೇತುವೆ ನಿರ್ಮಾಣವೊಂದರ ಸಾಹಸಗಾಥೆ.
ಅವನ ಹೆಸರು ಜಾನ್ ರಾಬ್ಲಿಂಗ್. ಮೂಲತಃ ಜರ್ಮನಿಯವನು. ಬರ್ಲಿನ್‌ನಲ್ಲಿ ಸಿವಿಲ್ ಎಂಜಿನಿಯರಿಂಗ್ ಡಿಪ್ಲೊಮಾ ಮುಗಿಸಿದ ರಾಬ್ಲಿಂಗ್, ಮುಂದೇನು ಮಾಡುವುದು ಎಂದು ಯೋಚಿಸುತ್ತಿದ್ದಾಗಲೇ ಅವನ ಗುರುಗಳಾದ ಪ್ರೊಫೆಸರ್ ಹೇಗಲ್ ಹೇಳಿದರಂತೆ : ‘ನಿನ್ನೊಳಗೆ ಛಲವಿದೆ. ಉತ್ಸಾಹವಿದೆ. ಕನಸುಗಳಿವೆ. ಕನಸುಗಾರನೂ ಇದ್ದಾನೆ. ಸೀದಾ ಅಮೆರಿಕಕ್ಕೆ ಹೋಗು. ಸಾಹಸಿಗರಿಗೆ ಅಲ್ಲಿ ಅವಕಾಶಗಳು ಸಾವಿರ’.
ಗುರುಗಳ ಮಾತಿನಂತೆ, ಅಮೆರಿಕದ ನ್ಯೂಯಾರ್ಕ್ ಮಹಾನಗರಕ್ಕೆ ಬಂದ ರಾಬ್ಲಿಂಗ್. ಹೇಳಿ ಕೇಳಿ ಸಿವಿಲ್ ಎಂಜಿನಿಯರಿಂಗ್ ಓದಿದ್ದವನಲ್ಲವೇ? ಮೊದಲಿಗೆ ಪುಟ್ಟಪುಟ್ಟ ಕಾಲುವೆ ನಿರ್ಮಾಣದ ಕಾಮಗಾರಿಯನ್ನು ಗುತ್ತಿಗೆಗೆ ಹಿಡಿದ. ಈ ಸಂದರ್ಭದಲ್ಲಿಯೇ ಸೇತುವೆ ನಿರ್ಮಾಣದ ವಿಷಯದಲ್ಲಿ ಅವನಿಗೆ ವಿಶೇಷ ಆಸಕ್ತಿ ಬೆಳೆಯಿತು. ಮೊದಲಿಗೆ ಒಂದಿಬ್ಬರು ಹಿರಿಯ ಗುತ್ತಿಗೆದಾರರ ಬಳಿ ಸಹಾಯಕನಾಗಿ ಕೆಲಸ ಮಾಡಿದ ನಂತರ, ಐದಾರು ಚಿಕ್ಕಪುಟ್ಟ ಸೇತುವೆಗಳ ನಿರ್ಮಾಣ ವಹಿಸಿಕೊಂಡ ರಾಬ್ಲಿಂಗ್. ಕೆಲವೇ ದಿನಗಳಲ್ಲಿ ಆ ಕೆಲಸದ ಹಿಂದಿರುವ ಪಟ್ಟುಗಳು ಹಾಗೂ ಗುಟ್ಟುಗಳು ಆವನಿಗೆ ಅರ್ಥವಾಗಿ ಹೋದವು. ಆನಂತರದಲ್ಲಿ ನ್ಯೂಯಾರ್ಕ್ ಮಹಾನಗರದ ನಂಬರ್ ಒನ್ ಕಂಟ್ರಾಕ್ಟರ್ ಎಂಬ ಅಭಿದಾನಕ್ಕೂ ಪಾತ್ರನಾದ.
ಅಮೆರಿಕದ ಭೂಪಟವನ್ನು ಒಮ್ಮೆ ನೋಡಿ. ನ್ಯೂಯಾರ್ಕ್ ಮತ್ತು ಮ್ಯಾನ್‌ಹಟನ್ (ಇದಕ್ಕೆ ಬ್ರೂಕ್‌ಲೈನ್ ಸಿಟಿ ಎಂಬ ಹೆಸರೂ ಇದೆ). ನಗರಗಳ ಮಧ್ಯೆ ಮಹಾಸಾಗರದಷ್ಟೇ ದೊಡ್ಡದಾದ ಈಸ್ಟ್‌ರಿವರ್ ಹೆಸರಿನ ನದಿ ಹರಿಯುತ್ತದೆ. ಈ ನದಿಯ ಅಗಲವೇ ಎರಡೂವರೆ ಕಿ.ಮೀ.ಗಳಷ್ಟಿದೆ. ಹಾಗಾಗಿ ೧೨೭ ವರ್ಷಗಳ ಹಿಂದೆ ಮ್ಯಾನ್‌ಹಟನ್ ಸಿಟಿಯಿಂದ ನ್ಯೂಯಾರ್ಕ್ ಸಂಪರ್ಕವೇ ಇರಲಿಲ್ಲ. ಅನಿವಾರ್ಯವಾಗಿ ಬರಲೇಬೇಕೆಂದರೆ ಹಡಗು, ದೋಣಿಯನ್ನೇ ಅವಲಂಬಿಸಬೇಕಿತ್ತು.
ಇಂಥ ಸಂದರ್ಭದಲ್ಲಿ, ನ್ಯೂಯಾರ್ಕ್ ಮತ್ತು ಮ್ಯಾನ್‌ಹಟನ್ ನಗರದ ಮಧ್ಯೆ ಸಂಪರ್ಕ ಕಲ್ಪಿಸಲು ಒಂದು ತೂಗುಸೇತುವೆಯನ್ನು ಏಕೆ ನಿರ್ಮಿಸಬಾರದು ಎಂದು ರಾಬ್ಲಿಂಗ್ ಯೋಚಿಸಿದ. ಅದನ್ನೇ ತನ್ನ ಜತೆಗಾರರಿಗೆ, ಗೆಳೆಯರಿಗೆ, ಬಂಧುಗಳಿಗೆ ಹೇಳಿದ. ಎಲ್ಲರೂ ಅವನನ್ನು ಅನುಕಂಪದಿಂದ ನೋಡಿದರು. ಆಪ್ತರೆಲ್ಲ ಬಳಿ ಬಂದು ‘ನಿನ್ನದು ಹುಚ್ಚು ಆಲೋಚನೆ ಕಣಯ್ಯ. ಈಸ್ಟ್ ರಿವರ್‌ನ ಆಳ-ಅಗಲ ಬಲ್ಲವರಿಲ್ಲ. ಅದು ವರ್ಷವಿಡೀ ತುಂಬಿ ಹರಿಯುತ್ತದೆ. ಹೀಗಿರುವಾಗ ತೂಗುಸೇತುವೆ ನಿರ್ಮಾಣಕ್ಕೆ ನದಿ ಹರಿವಿನ ಉದ್ದಕ್ಕೂ ಅಲ್ಲಲ್ಲಿ ಪಿಲ್ಲರ್‌ಗಳನ್ನು ಹಾಕಬೇಕಲ್ಲ? ಅಂಥ ಸಂದರ್ಭದಲ್ಲಿ ನದಿಯ ಆಳವೇ ಗೊತ್ತಾಗದಿದ್ದರೆ ಗತಿ ಏನು? ನದಿಯೊಳಗೆ ಪಿಲ್ಲರ್‌ಗಳನ್ನು ನಿಲ್ಲಿಸುವುದಾದರೂ ಹೇಗೆ? ಅಲ್ಲಿ ಕೆಲಸ ಮಾಡುವಾಗ ಯಾರಾದರೂ ಅಯತಪ್ಪಿ ಬಿದ್ದರೆ ನೀರು ಪಾಲಾಗುತ್ತಾರೆ. ಹಾಗಾಗಿ ಇದು ಹುಚ್ಚು ಸಾಹಸ. ಈ ಕೆಲಸದಿಂದ ನಿನಗೆ ಖಂಡಿತ ಒಳ್ಳೆಯ ಹೆಸರು ಬರುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಇಂಥದೊಂದು ಮಹಾಸೇತುವೆ ನಿರ್ಮಾಣಕ್ಕೆ ದಶಕಗಳೇ ಹಿಡಿಯಬಹುದು. ಅಷ್ಟೂ ದಿನ ನೀನು ಬದುಕಿರ್‍ತೀಯ ಅಂತ ಏನು ಗ್ಯಾರಂಟಿ? ಒಂದು ಮಹಾನಗರ ಹಾಗೂ ಒಂದು ದ್ವೀಪದ ಮಧ್ಯೆ ಸಂಪರ್ಕ ಕಲ್ಪಿಸಲು ರಸ್ತೆಗಳಿಂದ ಮಾತ್ರ ಸಾಧ್ಯ. ಹಾಗಿರುವಾಗ ನೀನು ಮೇಲ್ಸುತುವೆಯ ಕನಸು ಕಾಣ್ತಿದ್ದೀ. ಇದು ಹುಚ್ಚಾಟ? ಸುಮ್ಮನೇ ರಿಸ್ಕ್ ತಗೋಬೇಡ’ ಎಂದೆಲ್ಲ ‘ಬುದ್ಧಿ’ ಹೇಳಿದರು.
ಆದರೆ, ರಾಬ್ಲಿಂಗ್‌ನ ಮನಸ್ಸಿನೊಳಗೆ ಕನಸಿತ್ತು. ತೂಗುಸೇತುವೆಯನ್ನು ನಿರ್ಮಿಸಲೇಬೇಕು ಎಂಬ ಹಠವಿತ್ತು. ನಿರ್ಮಿಸಬಲ್ಲೆ ಎಂಬ ಛಲವಿತ್ತು. ಈ ಧೈರ್ಯದಿಂದಲೇ ಆತ ಎಲ್ಲರ ಬುದ್ಧಿಮಾತನ್ನೂ ನಿರ್ಲಕ್ಷಿಸಿ ಹೆಜ್ಜೆ ಮುಂದಿಟ್ಟ. ತಾನು ನಿರ್ಮಿಸಲು ಉದ್ದೇಶಿಸಿರುವ ತೂಗುಸೇತುವೆ, ಅದಕ್ಕೆ ತಗುಲಬಹುದಾದ ಅಂದಾಜು ವೆಚ್ಚ, ಈ ಸೇತುವೆ ನಿರ್ಮಾಣದಿಂದ ಆಗಲಿರುವ ಅನುಕೂಲದ ಸಮಗ್ರ ಮಾಹಿತಿಯನ್ನು ಅಮೆರಿಕ ಸರಕಾರದ ಮುಂದಿಟ್ಟು ಒಪ್ಪಿಗೆಯನ್ನೂ ಪಡೆದುಬಿಟ್ಟ!
ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸುವ ಮುನ್ನ, ತನ್ನ ಕನಸು, ಕಲ್ಪನೆ, ಕನವರಿಕೆ, ಆಕಸ್ಮಿಕವಾಗಿ ಎದುರಾಗಬಹುದಾದ ಸವಾಲುಗಳು ಹಾಗೂ ಅದಕ್ಕೆ ಇರುವ ಪರಿಹಾರಗಳು… ಇವನ್ನೆಲ್ಲ ಹೇಳಿಕೊಳ್ಳಲು ಒಂದು ಆಪ್ತ ಜೀವದ ಅಗತ್ಯ ರಾಬ್ಲಿಂಗ್‌ಗೆ ಇತ್ತು. ಆಗ ಅವನ ಕಣ್ಮುಂದೆ ಕಂಡವನೇ ವಾಷಿಂಗ್‌ಟನ್ ರಾಬ್ಲಿಂಗ್.
ಈ ವಾಷಿಂಗ್ಟನ್ ಬೇರೆ ಯಾರೂ ಅಲ್ಲ. ರಾಬ್ಲಿಂಗ್‌ನ ಏಕೈಕ ಪುತ್ರ. ರಾಬ್ಲಿಂಗ್ ಒಂದು ಮಹಾಯಾತ್ರೆಗೆ ಮುಂದಾಗುವ ವೇಳೆಯಲ್ಲಿ ಈ ವಾಷಿಂಗ್ಟನ್ ಸಿವಿಲ್ ಎಂಜಿನಿಯರಿಂಗ್ ಡಿಪ್ಲೊಮಾದ ಅಂತಿಮ ವರ್ಷದಲ್ಲಿದ್ದ. ಅಪ್ಪನ ಮಾತು, ಮನಸು ಎರಡೂ ಅವನಿಗೆ ಅರ್ಥವಾಗುತ್ತಿದ್ದವು. ಒಂದೆರಡು ನಿಮಿಷ ಅಪ್ಪನನ್ನೇ ದಿಟ್ಟಿಸಿ ನೋಡಿದ ವಾಷಿಂಗ್ಟನ್ ಟಠಿeಜ್ಞಿಜ ಜಿಞmಟooಜಿಚ್ಝಿಛಿ mZmmZ. ಐZಞ ಡಿಜಿಠಿe qsಟ್ಠ. ಎಟ ZeಛಿZb ಅಂದ!
ನೋಡನೋಡುತ್ತಲೇ ಅಪಾರ ಉತ್ಸಾಹ ಹಾಗೂ ಭಾರೀ ಪ್ರಚಾರದೊಂದಿಗೆ ತೂಗುಸೇತುವೆಯ ನಿರ್ಮಾಣ ಕಾಮಗಾರಿ ಆರಂಭವಾಯಿತು. ಈ ಸಂದರ್ಭದಲ್ಲಿ ಮ್ಯಾನ್‌ಹಟನ್ ನಗರದ ಮೀನುಗಾರರು ಪ್ರತಿಭಟನೆಗೆ ನಿಂತರು. ತೂಗುಸೇತುವೆ ನಿರ್ಮಾಣದಿಂದ ತಮ್ಮ ಮೂಲ ಆದಾಯಕ್ಕೆ ಹೊಡೆತ ಬೀಳುತ್ತದೆ. ಹಾಗಾಗಿಬಿಟ್ಟರೆ ತಾವು ಬದುಕುವುದೇ ಕಷ್ಟವಾಗುತ್ತದೆ ಎಂಬ ವಾದ ಅವರದಿತ್ತು. ಈ ಹಂತದಲ್ಲಿ ಇದ್ದ ಬುದ್ಧಿಯನ್ನೆಲ್ಲ ಉಪಯೋಗಿಸಿದ ರಾಬ್ಲಿಂಗ್- ‘ನನ್ನದು ಜನಪರ ಯೋಜನೆಯೇ ವಿನಃ ಜನವಿರೋ ಯೋಜನೆಯಲ್ಲ’ ಎಂದು ಎಲ್ಲರಿಗೂ ಮನವರಿಕೆ ಮಾಡಿಕೊಟ್ಟ.
ನ್ಯೂಯಾರ್ಕ್ ಮತ್ತು ಮ್ಯಾನ್‌ಹಟನ್ ನಗರಗಳ ಮಧ್ಯೆ ಹರಿಯುತ್ತಿದ್ದ ಈಸ್ಟ್ ರಿವರ್‌ನ ಅಗಲವೇ ಎರಡು ಕಿಲೋಮೀಟರ್ ಉದ್ದವಿತ್ತಲ್ಲ? ರಾಬ್ಲಿಂಗ್ ಅಷ್ಟೂ ಉದ್ದದ ತೂಗುಸೇತುವೆ ನಿರ್ಮಿಸಬೇಕಿತ್ತು. ಮೊದಲ ಐದು ತಿಂಗಳ ಕಾಲ ಕಾಮಗಾರಿ ಕೆಲಸ ಅಂದುಕೊಂಡಂತೆಯೇ ನಡೆಯಿತು. ಆದರೆ, ಆರನೇ ತಿಂಗಳ ಮೊದಲ ವಾರ ಆಗಬಾರದ್ದು ಆಗಿಹೋಯಿತು.
ಅದು ಮಳೆಗಾಲದ ಸಂದರ್ಭ. ಕಾಮಗಾರಿ ಪರಿಶೀಲನೆಗೆಂದು ರಾಬ್ಲಿಂಗ್ ಮತ್ತು ವಾಷಿಂಗ್ಟನ್ ಇಬ್ಬರೂ ಬಂದಿದ್ದರು. ಅವರು ಅಕಾರಿಗಳೊಂದಿಗೆ ಮಾತಾಡುತ್ತ ನಿಂತಿದ್ದಾಗಲೇ ಸೇತುವೆಯ ಒಂದು ಭಾಗ ದಿಢೀರ್ ಕುಸಿಯಿತು. ಈ ದುರ್ಘಟನೆ ಜರುಗಿದ್ದು ೧೮೬೯ರಲ್ಲಿ. ಈ ದುರಂತದಲ್ಲಿ ತೀವ್ರವಾಗಿ ಗಾಯಗೊಂಡ ರಾಬ್ಲಿಂಗ್, ಕೆಲವೇ ದಿನಗಳಲ್ಲಿ ಸತ್ತುಹೋದ. ಈ ಕಡೆ ವಾಷಿಂಗ್ಟನ್‌ಗೂ ಭಾರೀ ಪೆಟ್ಟು ಬಿದ್ದಿತ್ತು. ತಂದೆಯ ಕನಸಿನ ಸೇತುವೆ ಕಣ್ಮುಂದೆಯೇ ಕುಸಿದದ್ದು, ತಂದೆ ಸತ್ತೇ ಹೋದದ್ದನ್ನು ಕಂಡು ವಾಷಿಂಗ್ಟನ್ ಆಘಾತಗೊಂಡ. ಈ ಚಿಂತೆಯಲ್ಲಿದ್ದಾಗಲೇ ಅವನಿಗೆ ಸ್ಟ್ರೋಕ್ ಆಯಿತು. ಮಾತು ನಿಂತುಹೋಯಿತು. ಕೈ ಕಾಲುಗಳೆಲ್ಲ ಚಲನೆ ಕಳೆದುಕೊಂಡವು. ಈ ಸಂದರ್ಭದಲ್ಲಿ ವಾಷಿಂಗ್ಟನ್‌ನನ್ನು ಪರೀಕ್ಷಿಸಿದ ವೈದ್ಯರು ಅವನ ಹೆಂಡತಿ ಎಮಿಲಿಯನ್ನು ಕರೆದು ಹೇಳಿದರು : ‘ಮುಂದೆ ಇವರಿಗೆ ಮಾತಾಡಲು ಸಾಧ್ಯವಾಗುತ್ತೋ ಇಲ್ಲವೋ ಹೇಳಲಾಗುವುದಿಲ್ಲ. ಬಹುಶಃ ಸಾಯುವವರೆಗೂ ಇವರು ಇದೇ ಸ್ಥಿತೀಲಿ ಇರ್‍ತಾರೆ ಅನಿಸುತ್ತೆ. ಹುಷಾರಾಗಿ ನೋಡಿಕೊಳ್ಳಿ…’
ಈ ಘಟನೆಯ ನಂತರ ಅಮೆರಿಕದ ಜನ ತಲೆಗೊಂದು ಮಾತಾಡಿದರು. ಕೆಲವರು ಸೇತುವೆ ನಿರ್ಮಾಣದ ಪ್ಲಾನ್ ಸರಿಯಿಲ್ಲ ಎಂದರು. ಕೆಲವರು ಕಳಪೆ ಕಾಮಗಾರಿಯ ಪ್ರತಿಫಲ ಎಂದರು. ಇನ್ನೊಂದಷ್ಟು ಮಂದಿ ಭೂತದ ಕಾಟ ಎಂದು ಹುಯಿಲೆಬ್ಬಿಸಿದರು. ಈ ವೇಳೆಗಾಗಲೇ ಸೇತುವೆ ನಿರ್ಮಾಣದ ಕಾಮಗಾರಿ ಅರ್ಧ ಮುಗಿದಿತ್ತು. ಹಾಗಾಗಿ ಅದನ್ನು ಅಷ್ಟಕ್ಕೇ ಕೈಬಿಡುವಂತಿರಲಿಲ್ಲ. ಈ ಮಹಾಯೋಜನೆಯನ್ನು ಮುಂದುವರಿಸಲು ಯಾರೊಬ್ಬರೂ ಮುಂದೆ ಬರಲಿಲ್ಲ.
ಒಂದು ಕಡೆ ಪರಿಸ್ಥಿತಿ ಹೀಗಿದ್ದಾಗಲೇ ಅದೇ ಮ್ಯಾನ್‌ಹಟನ್ ನಗರದ ಒಂದು ಆಸ್ಪತ್ರೆಯಲ್ಲಿ ವಾಷಿಂಗ್ಟನ್ ರಾಬ್ಲಿಂಗ್ ಚಿಕಿತ್ಸೆ ಪಡೆಯುತ್ತಿದ್ದ. ಗಂಡನನ್ನು ಉಳಿಸಿಕೊಳ್ಳಲೇಬೇಕು ಎಂಬ ಹಟಕ್ಕೆ ಬಿದ್ದಿದ್ದ ಎಮಿಲಿ, ಅವನೊಂದಿಗೆ ಮಾತಾಡುವ ಆಸೆಯಿಂದಲೇ ‘ಮೂಗರ ಭಾಷೆ’ ಕಲಿತಿದ್ದಳು. ಹೀಗೊಂದು ದಿನ ಸಂeಗಳ ಮೂಲಕ ಮಾತಾಡುತ್ತಿದ್ದಾಗಲೇ, ನಾನು ಹೇಳಿದ್ದನ್ನೆಲ್ಲ ಅರ್ಥ ಮಾಡಿಕೊಂಡು, ನೋಟ್ಸ್ ಮಾಡಿಕೊಂಡು ಅದನ್ನೇ ಅಕಾರಿಗಳಿಗೆ ಹೇಳಲು ಸಾಧ್ಯವಾ ಎಂದು ಕೇಳಿದ ವಾಷಿಂಗ್ಟನ್.
ಗಂಡನ ಮಾತು ಕೇಳುತ್ತಿದ್ದಂತೆಯೇ ‘ಈ ಮಹಾಯಾತ್ರೆಗೆ ನಾನು ಸಾರಥಿಯಾಗಬೇಕು ಎಂದು ನಿರ್ಧರಿಸಿದಳು ಎಮಿಲಿ. ನಿಮ್ಮ ಮಾತು ನಡೆಸಿಕೊಡ್ತೀನಿ ಎಂದು ಕಣ್ಣ ಭಾಷೆಯಲ್ಲೇ ಹೇಳಿದಳು. ನಂತರದ ಕೆಲವೇ ದಿನಗಳಲ್ಲಿ ಅವಳು ಸಿವಿಲ್ ಎಂಜಿನಿಯರಿಂಗ್ ಡಿಪ್ಲೊಮಾಗೆ ಸೇರಿಕೊಂಡಳು. ಗಂಡನನ್ನು ಜೋಪಾನವಾಗಿ ನೋಡಿಕೊಳ್ಳುತ್ತಲೇ ಕೋರ್ಸ್ ಮುಗಿಸಿಯೇಬಿಟ್ಟಳು. ಈ ವೇಳೆಗೆ ಅವಳಿಗೂ ಸೇತುವೆ ನಿರ್ಮಾಣ ಕಾಮಗಾರಿಯ ಒಳಗುಟ್ಟುಗಳು ಹಾಗೂ ಅಲ್ಲಿ ಬಳಕೆಯಾಗುವ ತಂತ್ರeನ ಹಾಗೂ ಭಾಷೆಯ ಬಗ್ಗೆ ಅರ್ಥವಾಗಿ ಹೋಗಿತ್ತು.
೧೮೭೨ರಲ್ಲಿ ಎಮಿಲಿಯ ಸಾರಥ್ಯದಲ್ಲಿ ಮಹಾಸೇತುವೆಯ ನಿರ್ಮಾಣ ಕಾರ್ಯ ಮತ್ತೆ ಶುರುವಾಯಿತು. ದಿನಾ ಬೆಳಗ್ಗೆ ವಾಷಿಂಗ್ಟನ್ ಆಸ್ಪತ್ರೆಯ ಬೆಡ್‌ನಲ್ಲಿ ಅಂಗಾತ ಮಲಗಿಕೊಂಡೇ ಕಾಮಗಾರಿ ಕೆಲಸದ ಬಗ್ಗೆ ಸಂeಯ ಮೂಲಕವೇ ಡಿಕ್ಟೇಶನ್ ಕೊಡುತ್ತಿದ್ದ. ಎಮಿಲಿ ಅದನ್ನು ತನ್ನ ಕೈಕೆಳಗಿನ ಎಂಜಿನಿಯರ್‌ಗಳು ಹಾಗೂ ಅಕಾರಿಗಳಿಗೆ ದಾಟಿಸುತ್ತಿದ್ದಳು. ಹೀಗೆ ಶುರುವಾದ ಕೆಲಸ ಸತತ ಹನ್ನೊಂದು ವರ್ಷ ನಡೆದು ಕಡೆಗೂ ಮುಕ್ತಾಯವಾಯಿತು. ರಾಬ್ಲಿಂಗ್ ಕಂಡಿದ್ದ ಕನಸು ಅವನ ಸೊಸೆಯ ಮೂಲಕ ನನಸಾಗಿತ್ತು.
೧೮೮೩, ಮೇ ೨೪ರಂದು ಈ ಸೇತುವೆಯನ್ನು ಪ್ರವೇಶಕ್ಕೆ ತೆರವುಗೊಳಿಸಲಾಯಿತು. ಈ ಸ್ಮರಣೀಯ ಸಂದರ್ಭಕ್ಕೆ ಸಾಕ್ಷಿಯಾಗಲು ಅಮೆರಿಕದ ಅಂದಿನ ಅಧ್ಯಕ್ಷ ಚೆಸ್ಟರ್ ಎ. ಆರ್ಥರ್, ನ್ಯೂಯಾರ್ಕ್‌ನ ಮೇಯರ್ ಫ್ರಾಂಕ್ಲಿನ್ ಎಡಿಸನ್ ಹಾಗೂ ಮ್ಯಾನ್‌ಹಟನ್ ನಗರದ ಮೇಯರ್ ಸೇತ್‌ಲೋ ಬಂದಿದ್ದರು. ಸೇತುವೆಯ ಮೇಲೆ ನ್ಯೂಯಾರ್ಕ್‌ನಿಂದ ಮ್ಯಾನ್‌ಹಟನ್ ಸಿಟಿ ತಲುಪುವ ಮೊದಲ ಅವಕಾಶವನ್ನು ಎಮಿಲಿಗೇ ನೀಡಲಾಯಿತು. ಆಕೆ ಗಮ್ಯ ತಲುಪಿದ ನಂತರ ಒಂದೇ ದಿನದಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಮಂದಿ ತೂಗುಸೇತುವೆಯ ಮೇಲೆ ವ್ಯಾನ್, ಕಾರು, ಬಸ್ಸು, ಬೈಕ್‌ಗಳ ಮೂಲಕ ಪ್ರಯಾಣ ಮಾಡಿ ಖುಷಿಪಟ್ಟರು.
***
ಕತೆ ಇಲ್ಲಿಗೇ ಮುಗಿಯಲಿಲ್ಲ. ಉದ್ಘಾಟನೆಯಾದ ಆರೇ ದಿನಗಳಲ್ಲಿ ಈ ಮಹಾಸೇತುವೆಯ ಒಂದು ಭಾಗ ಮತ್ತೆ ಕುಸಿಯಿತು. ಈ ದುರಂತದಲ್ಲಿ ೧೨ ಮಂದಿ ಸತ್ತರು. ಪರಿಣಾಮವಾಗಿ, ಟೀಕೆ, ಅವಹೇಳನ, ಕೊಂಕುಮಾತು, ಬೆದರಿಕೆ ಎಲ್ಲವೂ ಎಮಿಲಿಯ ಬೆನ್ನು ಬಿದ್ದವು. ಆದರೆ ಎಮಿಲಿ ಹೆದರಲಿಲ್ಲ. ಮೂರೇ ದಿನಗಳಲ್ಲಿ ಅಕಾರಿಗಳು ಹಾಗೂ ಕಾರ್ಮಿಕರೊಂದಿಗೆ ನಡೆದುಹೋಗಿ ಸೇತುವೆಯ ಕುಸಿದಿದ್ದ ಭಾಗದ ರಿಪೇರಿ ಮಾಡಿಸಿಬಿಟ್ಟಳು. ಈ ಬಾರಿ ಸೇತುವೆಯ ಗುಣಮಟ್ಟದ ಬಗ್ಗೆ ಪರೀಕ್ಷಿಸಲು ನಿರ್ಧರಿಸಿದ ಅಮೆರಿಕ ಸರಕಾರ, ಸರ್ಕಸ್‌ನಿಂದ ೨೧ ಆನೆಗಳನ್ನು ಕರೆಸಿ, ಅವುಗಳನ್ನು ಏಕಕಾಲಕ್ಕೆ ಸೇತುವೆಯ ಈ ತುದಿಯಿಂದ ಆ ತುದಿಯವರೆಗೂ ಓಡಿಸಿ ನೋಡಿತು. ಏನೂ ತೊಂದರೆಯಿಲ್ಲ ಎಂದು ಗ್ಯಾರಂಟಿ ಮಾಡಿಕೊಂಡಿತು. ಸಂಚಾರಕ್ಕೆ ತೆರವುಗೊಳಿಸುವ ಮುನ್ನ ಆ ಮಹಾಸೇತುವೆಗೆ ಬ್ರೂಕ್‌ಲೈನ್ ಬ್ರಿಡ್ಜ್ ಎಂಬ ಹೆಸರಿಟ್ಟಿತು.
ರಾಬ್ಲಿಂಗ್‌ನ ಕನಸು, ವಾಷಿಂಗ್ಟನ್‌ನ ದೂರದೃಷ್ಟಿ ಹಾಗೂ ಎಮಿಲಿಯ ತ್ಯಾಗದ ಪ್ರತಿಫಲ ಬ್ರೂಕ್‌ಲೈನ್ ಬ್ರಿಡ್ಜ್. ಇವತ್ತು ಅದರ ಮೇಲೆ ಓಡಾಡುವುದೆಂದರೆ ಪ್ರತಿ ಅಮೆರಿಕನ್ನರಿಗೂ ಹೆಮ್ಮೆ ಖುಷಿ. ‘ಅಕ್ಕ’ ಸಮ್ಮೇಳನದ ನೆಪದಲ್ಲಿ ರಾಬ್ಲಿಂಗ್ ಓಡಾಡಿದ್ದ ನ್ಯೂಜೆರ್ಸಿಯಲ್ಲಿ ಅಡ್ಡಾಡಿದ ನಂತರ, ಬ್ರೂಕ್‌ಲೈನ್ ಬ್ರಿಡ್ಜ್‌ನ ಅಗಾಧತೆಯನ್ನು ಪ್ರತ್ಯಕ್ಷ ಕಂಡ ನಂತರ ನಿಮಗೂ ಈ ಕತೆ ಹೇಳಬೇಕೆನ್ನಿಸಿತು…

ಪ್ರಾರ್ಥನೆ

ಸೆಪ್ಟೆಂಬರ್ 25, 2010

kids prayer

ಬೆಂಗಳೂರಿನಲ್ಲಿ ಇರುವ ಜನಕ್ಕೆ ಕತ್ರಿಗುಪ್ಪೆ ಚೆನ್ನಾಗಿ ಗೊತ್ತು. ಕತ್ರಿಗುಪ್ಪೆ ಸಿಗ್ನಲ್‌ನಲ್ಲಿ ಇಳಿದು, ಫುಡ್‌ವರ್ಲ್ಡ್ ದಾಟಿದ್ರೆ ಸಿಗೋದೇ ಅನ್ನ ಕುಟೀರ ಹೋಟೆಲು. ಅದರ ಎದುರಿಗೆ ಬಿಗ್‌ಬಜಾರ್. ಅದೇ ರಸ್ತೇಲಿ ಮುಂದೆ ಹೋಗಿ ಮೊದಲು ಎಡಕ್ಕೆ ತಿರುಗಬೇಕು. ಹಾಗೇ ಐದು ನಿಮಿಷ ನಡೆದರೆ ಎರಡು ಸಂಪಿಗೆ ಮರಗಳು ಸಿಗುತ್ತವೆ. ಆ ಮರದ ಎದುರಿಗಿರೋದೇ ಹರೀಶ-ಭಾರತಿ ದಂಪತಿಯ ಮನೆ. ಡಬಲ್ ಬೆಡ್‌ರೂಂನ ಆ ಮನೆಗೆ ಎರಡು ಲಕ್ಷ ಅಡ್ವಾನ್ಸ್. ಎಂಟು ಸಾವಿರ ಬಾಡಿಗೆ.
ಭಾರತಿ-ಹರೀಶ್ ದಂಪತಿಗೆ ಒಂದು ಮುದ್ದಾದ ಮಗುವಿದೆ. ಅದರ ಹೆಸರು ಸ್ನೇಹಾ. ಹರೀಶನಿಗೆ ಒಂದು ಎಂಎನ್‌ಸಿಯಲ್ಲಿ ಕೆಲಸವಿದೆ. ಎಂಎನ್‌ಸಿ ಕೆಲಸ ಅಂದ ಮೇಲೆ ಹೇಳೋದೇನಿದೆ? ಆ ನೌಕರಿಯಲ್ಲಿ ಒಳ್ಳೆಯ ಸಂಬಳವೇನೋ ಇದೆ ನಿಜ. ಆದರೆ ಆ ದುಡಿಮೆಗೆ ಹೊತ್ತು-ಗೊತ್ತು ಎಂಬುದೇ ಇಲ್ಲ. ಶಿಫ್ಟ್ ಲಿಸ್ಟಿನ ಪ್ರಕಾರ ಬೆಳಗ್ಗೆ ೧೧ ರಿಂದ ಸಂಜೆ ಆರೂವರೆಯವರೆಗೂ ಕೆಲಸ ಅಂತ ಇದೆ ನಿಜ. ಆದರೆ ಹೆಚ್ಚಿನ ದಿನಗಳಲ್ಲಿ ಕೆಲಸ ಮುಗಿಯೋವಷ್ಟರಲ್ಲಿ ರಾತ್ರಿ ಎಂಟು ಗಂಟೆ ದಾಟಿರುತ್ತೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಆಫೀಸಿಂದ ಹೊರಟು ಹರೀಶ ಕತ್ರಿಗುಪ್ಪೆಯ ಮನೆ ತಲುಪಿಕೊಳ್ಳುವುದರೊಳಗೆ ರಾತ್ರಿ ಒಂಭತ್ತೂವರೆ ಆಗಿಬಿಡುತ್ತಿತ್ತು. ಶನಿವಾರ-ಭಾನುವಾರಗಳಂದು ಆಫೀಸಿನ ಗೆಳೆಯರೊಂದಿಗೆ ವೀಕೆಂಡ್ ಪಾರ್ಟಿಗೆಂದು ಆತ ಹಾರಿಬಿಡುತ್ತಿದ್ದ. ಆ ಎರಡು ದಿನಗಳಲ್ಲಿ ಆತ ಮನೆ ತಲುಪುತ್ತಿದ್ದುದು ರಾತ್ರಿ ಹನ್ನೊಂದು, ಹನ್ನೊಂದೂವರೆಗೆ!
ಬೆಳಗ್ಗೆ ಒಂಭತ್ತು ಗಂಟೆಗೆಲ್ಲ ಗಂಡ-ಮಗಳು ಮನೆಯಿಂದ ಹೊರಟುಬಿಡುತ್ತಿದ್ದರು. ಆನಂತರ ಇಡೀ ದಿನ ಮನೇಲಿ ನಾನೊಬ್ಬಳೇ ಎನ್ನಿಸಿದಾಗ ಭಾರತಿಗೆ ಬೋರ್ ಎನ್ನಿಸತೊಡಗಿತು. ಅವಳಾದರೂ ಇಂಗ್ಲಿಷಿನಲ್ಲಿ ಎಂ.ಎ. ಮಾಡಿಕೊಂಡಿದ್ದವಳು. ಇಡೀ ದಿನ ಮನೇಲಿರುವ ಬದಲು ಯಾವುದಾದರೂ ಸ್ಕೂಲ್‌ನಲ್ಲಿ ಟೀಚರ್ ಆಗಿ ಸೇರಬಾರದೇಕೆ ಅಂದುಕೊಂಡಳು. ಅವಳ ಅದೃಷ್ಟಕ್ಕೆ, ಅದೇ ವೇಳೆಗೆ ಸ್ನೇಹಾ ಓದುತ್ತಿದ್ದ ಶಾಲೆಯಲ್ಲಿ ಶಿಕ್ಷಕಿಯರ ಕೊರತೆ ಇದೆ ಎಂಬ ವಿಷಯವೂ ಗೊತ್ತಾಯಿತು. ಒಮ್ಮೆ ಪ್ರಯತ್ನಿಸಿ ನೋಡೋಣ. ಕೆಲಸ ಸಿಕ್ಕಿಬಿಟ್ಟರೆ ಹೋಗೋದು. ಇಲ್ಲವಾದರೆ, ಒಂದು ಸಂದರ್ಶನ ಎದುರಿಸಿದ ಅನುಭವವಂತೂ ಆಗುತ್ತದೆ ಎಂದುಕೊಂಡು ಅರ್ಜಿ ಹಾಕಿಯೇಬಿಟ್ಟಳು ಭಾರತಿ. ಹದಿನೈದೇ ದಿನಗಳಲ್ಲಿ ಆ ಕಡೆಯಿಂದ ಉತ್ತರ ಬಂತು : ‘ಸಹ ಶಿಕ್ಷಕಿಯಾಗಿ ನಿಮ್ಮನ್ನು ನೌಕರಿಗೆ ತೆಗೆದುಕೊಳ್ಳಲಾಗಿದೆ. ಅಭಿನಂದನೆ…’
ಹೆಂಡತಿ ಕೆಲಸಕ್ಕೆ ಹೊರಟು ನಿಂತಾಗ ಹರೀಶ ಎಗರಾಡಿದ. ತಕ್ಷಣವೇ ಭಾರತಿ ಹೇಳಿದಳು : ‘ಯೋಚನೆ ಮಾಡಿ ಹರೀ. ಬೆಳಗ್ಗಿಂದ ಸಂಜೆಯ ತನಕ ಮನೇಲಿ ನಾನೊಬ್ಳೇ ಇರಬೇಕು. ಅದರ ಬದಲು ಟೀಚರ್ ಆಗಿ ಕೆಲಸ ಮಾಡಿದ್ರೆ ತಪ್ಪೇನು? ನಾನು ಹೋಗ್ತಿರೋದು ಮಗು ಓದ್ತಾ ಇರೋ ಸ್ಕೂಲೇ ತಾನೆ? ಇದರಿಂದ ಅವಳಿಗೂ ಒಂದು ಕಂಫರ್ಟ್ ಸಿಕ್ಕ ಹಾಗಾಯ್ತು. ಇನ್ನು ಮುಂದೆ ಪ್ರತಿ ತಿಂಗಳೂ ನಾನೂ ಒಂದಿಷ್ಟು ದುಡ್ಡು ಉಳಿಸ್ತೀನಿ. ಒಂದೈದು ವರ್ಷ ನಾವಿಬ್ರೂ ಕಷ್ಟಪಟ್ಟು ಎಷ್ಟು ಸಾಧ್ಯವೋ ಅಷ್ಟು ಉಳಿಸೋಣ. ಎಲ್ಲವನ್ನೂ ಮರೆತು ದುಡಿಯೋಣ. ಹಾಗೆ ಮಾಡಿದ್ರೆ ಆರನೇ ವರ್ಷದ ಹೊತ್ತಿಗೆ ನಾವೂ ಒಂದು ಸ್ವಂತ ಮನೆ ಮಾಡ್ಕೋಬಹುದೋ ಏನೋ…
ಹೆಂಡತಿಯ ಕಡೆ ಕಡೆಯ ಮಾತುಗಳು ಹರೀಶನಿಗೆ ತುಂಬ ಇಷ್ಟವಾದವು. ತಿಂಗಳು ತಿಂಗಳೂ ನಾನೂ ಒಂದಿಷ್ಟು ದುಡ್ಡು ಉಳಿಸ್ತೀನಿ ಅಂದಳಲ್ಲ? ಅದೊಂದೇ ಕಾರಣದಿಂದ ಅವಳನ್ನು ಕೆಲಸಕ್ಕೆ ಕಳುಹಿಸಲು ಒಪ್ಪಿಕೊಂಡ.
************************
‘ಮಿಸ್ ಭಾರತೀ, ಬನ್ನಿ ಕೂತ್ಕೊಳ್ಳಿ. ನಿಮ್ಗೆ ಒಂದಿಷ್ಟು ಹೆಚ್ಚುವರಿ ಕೆಲ್ಸ ಕೊಡ್ತಾ ಇದೀನಿ. ಐದನೇ ತರಗತಿಗೆ ಕನ್ನಡ ತಗೋತಾರಲ್ಲ? ಅವರಿಗೆ ಚಿಕೂನ್‌ಗುನ್ಯಾ ಅಂತೆ. ಹಾಗಾಗಿ ಅವರು ಒಂದು ವಾರ ರಜೇಲಿದ್ದಾರೆ. ಹೇಗಿದ್ರೂ ನಿಮ್ದು ಎಂ.ಎ. ಇಂಗ್ಲಿಷ್ ತಾನೆ? ಹಾಗಾಗಿ ಒಂದು ವಾರದ ಮಟ್ಟಿಗೆ ಕನ್ನಡ ಪಾಠ ಮಾಡೋದು ನಿಮ್ಗೆ ಕಷ್ಟ ಆಗೋದಿಲ್ಲ ಅನ್ಕೋತೀನಿ. ಈಗ ಮೊದಲು ಒಂದು ಕೆಲ್ಸ ಮಾಡಿ. ಮಂತ್ಲೀ ಟೆಸ್ಟ್‌ದು ಆನ್ಸರ್ ಶೀಟ್‌ಗಳಿವೆ ಇಲ್ಲಿ. ಅದನ್ನು ಚೆಕ್ ಮಾಡಿ, ಮಾರ್ಕ್ಸ್ ಕೊಡಿ. ಈ ವಾರದ ಕೊನೆಯಲ್ಲಿ ಪೇರೆಂಟ್-ಟೀಚರ್ ಮೀಟಿಂಗ್ ಇರೋದ್ರಿಂದ ಈ ಕೆಲಸ ಅರ್ಜೆಂಟಾಗಿ ಆಗಲೇಬೇಕು. ನನಗೆ ನಿಮ್ಮ ಬಗ್ಗೆ, ನಿಮ್ಮ ಕೆಲಸದ ಬಗ್ಗೆ ನಂಬಿಕೆಯಿದೆ. ಈ ಉತ್ತರ ಪತ್ರಿಕೆಗಳನ್ನು ಮನೆಗೇ ತಗೊಂಡು ಹೋಗಿ ವ್ಯಾಲ್ಯುಯೇಷನ್ ಮಾಡ್ಕೊಂಡು ಬನ್ನಿ ಪರ್ವಾಗಿಲ್ಲ…’ ಹೆಡ್‌ಮೇಡಂ ಹೀಗೆ ಹೇಳಿದಾಗ ‘ಸರಿ ಮೇಡಂ’ ಎಂದಷ್ಟೇ ಹೇಳಿ ಸಮ್ಮತಿಸಿದಳು ಭಾರತಿ.
ಕೆಲಸಕ್ಕೆ ಸೇರಿಕೊಂಡ ನಾಲ್ಕೇ ತಿಂಗಳಲ್ಲಿ ಹೀಗೊಂದು ಹೊಸ ಜವಾಬ್ದಾರಿ ಹೆಗಲೇರಿದ್ದು ಕಂಡು ಭಾರತಿಗೆ ಖುಷಿಯಾಗಿತ್ತು. ಉತ್ತರ ಪತ್ರಿಕೆಗಳನ್ನು ಬಂಡಲ್ ಥರಾ ಕಟ್ಟಿಕೊಂಡು ಬ್ಯಾಗ್‌ನೊಳಗೆ ಇಟ್ಟುಕೊಂಡಳು. ಹೊಸದಾಗಿ ಸೇರಿದ್ದ ಕೆಲಸ ತಾನೆ? ಹಾಗಾಗಿಯೇ, ಪ್ರಶ್ನೆಗಳು ಹೇಗಿವೆ ಎಂಬುದನ್ನು ಇಲ್ಲಿಯೇ ನೋಡಿಬಿಡೋಣ ಎಂಬ ಕುತೂಹಲ ಅವಳದು. ಈ ಕಾರಣದಿಂದಲೇ ಒಮ್ಮೆ ಪ್ರಶ್ನೆ ಪತ್ರಿಕೆಯತ್ತ ಕಣ್ಣು ಹಾಯಿಸಿದಳು ಭಾರತಿ. ಅಲ್ಲಿದ್ದ ಒಂದು ಪ್ರಶ್ನೆ ಅವಳಿಗೆ ಬಹಳ ಇಷ್ಟವಾಯಿತು : ‘ದೇವರಲ್ಲಿ ನನ್ನ ಬೇಡಿಕೆ’ ಎಂಬ ವಿಷಯವಾಗಿ ಪ್ರಬಂಧ ಬರೆಯಿರಿ ಎಂಬುದೇ ಆ ಪ್ರಶ್ನೆ. ಇದಕ್ಕೆ ಉತ್ತರವಾಗಿ ಮಕ್ಕಳು ಏನೇನು ಬರೆದಿರಬಹುದೋ ನೋಡೋಣ ಎಂದುಕೊಂಡೇ ಮನೆ ತಲುಪಿದಳು ಭಾರತಿ.
ಒಂದೆರಡು ಸೀರಿಯಲ್ ನೋಡಿಕೊಂಡೇ ಅಡುಗೆ ಕೆಲಸ ಮುಗಿಸುವುದರೊಳಗೆ ಒಂಭತ್ತೂವರೆ ಆಗಿಹೋಯಿತು. ಮಗಳು ಆಗಲೇ ತೂಕಡಿಸುತ್ತಿದ್ದಳು. ಅವಳಿಗೆ ಊಟ ಮಾಡಿಸಿ ಮಲಗಿಸಿ ಉತ್ತರ ಪತ್ರಿಕೆಗಳ ಮುಂದೆ ಕೂತಳು ಭಾರತಿ. ಅದೇ ಸಂದರ್ಭಕ್ಕೆ ಹರೀಶನೂ ಬಂದ. ಅವನಿಗೆ ಸಂಕ್ಷಿಪ್ತವಾಗಿ ವಿಷಯ ತಿಳಿಸಿದಳು. ‘ಸರಿ ಬಿಡು. ನಾನೇ ಹಾಕ್ಕೊಂಡು ಊಟ ಮಾಡ್ತೇನೆ. ನೀನು ಕೆಲ್ಸ ಮುಗಿಸು’ ಎಂದ ಹರೀಶ.
ಮೊದಲ ಆರು ಉತ್ತರ ಪತ್ರಿಕೆಗಳಲ್ಲಿ ಅಂಥ ವಿಶೇಷವೇನೂ ಕಾಣಿಸಲಿಲ್ಲ. ಆದರೆ, ಏಳನೇ ಉತ್ತರ ಪತ್ರಿಕೆ ತಗೊಂಡಳಲ್ಲ, ಆ ನಂತರದಲ್ಲಿ ಅವಳು ಒಂದರ್ಥದಲ್ಲಿ ಮೈಮರೆತಳು. ಒಂದೊಂದೇ ಸಾಲು ಓದುತ್ತಾ ಹೋದಂತೆ ಅವಳ ಮುಖ ಕಳೆಗುಂದಿತು. ಕಂಗಳಲ್ಲಿ ನೀರು ತುಂಬಿಕೊಂಡಿತು. ಒಂದೆರಡು ಹನಿಗಳು ಪೈಪೋಟಿಗೆ ಬಿದ್ದಂತೆ ಕೆನ್ನೆ ಮೇಲಿಂದ ಜಾರಿ ಉತ್ತರ ಪತ್ರಿಕೆಯ ಮೇಲೆ ಬಿದ್ದು ಟಪ್ ಟಪ್ ಎಂದು ಸದ್ದು ಮಾಡಿದವು.
ಹೆಂಡತಿಯ ಈ ವರ್ತನೆಯಿಂದ ಹರೀಶ ಪೆಚ್ಚಾದ. ಸರಸರನೆ ಊಟ ಮುಗಿಸಿ, ಕೈ ತೊಳೆದು ಬಂದವನೇ- ‘ಯಾಕೇ ಭಾರ್‍ತಿ, ಏನಾಯ್ತು? ಯಾಕೆ ಅಳ್ತಾ ಇದೀಯ? ಪೇಪರ್ ನೋಡಿ ನೋಡಿ ಕಣ್ಣು ಉರಿಬಂತಾ?’ ಎಂದು ವಿಚಾರಿಸಿದ.
ಅವನ ಮಾತು ಕೇಳಿಸಲೇ ಇಲ್ಲ ಎಂಬಂತೆ- ‘ಒಂದು ಮಗು ಬರೆದಿರೋ ಪ್ರಬಂಧ ಇದು. ಓದಿ’ ಎಂದಳು ಭಾರತಿ. ಆ ಪ್ರಬಂಧದಲ್ಲಿ ಆ ಮಗುವಿನ ಮಾತು ಹೀಗಿತ್ತು : ‘ಕಾಣದ ದೇವರೇ, ನಿನಗೆ ನಮಸ್ಕಾರ. ನಾನು ನಿನ್ನಲ್ಲೊಂದು ವಿಚಿತ್ರವಾದ ಬೇಡಿಕೆ ಇಡ್ತಾ ಇದೀನಿ. ಏನ್ ಗೊತ್ತಾ? ದಯವಿಟ್ಟು ನನ್ನನ್ನು ಒಂದು ಟಿವಿಯನ್ನಾಗಿ ಮಾಡಿಬಿಡು! ಪ್ಲೀಸ್, ನಮ್ಮ ಮನೇಲಿ ಟೀವಿ ಇದೆಯಲ್ಲ? ಆ ಜಾಗದಲ್ಲಿ ನಾನಿರಬೇಕು. ನಮ್ಮ ಮನೇಲಿ ಟಿವಿಗೆ ಅಂತ ಒಂದು ಜಾಗ ಇದೆ. ಅದೇ ಥರ ನನಗೂ ಒಂದು ಜಾಗ ಕೊಡು ದೇವ್ರೇ, ಪ್ಲೀಸ್…
… ನಮ್ಮ ಮನೇಲಿರೋದು ಮೂರೇ ಜನ. ನಾನು, ಪಪ್ಪ, ಮಮ್ಮಿ… ಪಪ್ಪ ಬೆಳಗ್ಗೇನೆ ಕೆಲಸಕ್ಕೆ ಹೋಗಿಬಿಡ್ತಾರೆ. ಅಮ್ಮನೂ ಅಷ್ಟೆ. ನಾನು ಸಂಜೆ ಸ್ಕೂಲಿಂದ ಬರ್‍ತೀನಲ್ಲ? ಬಂದ ತಕ್ಷಣ- ‘ಹೋಂವರ್ಕ್ ಎಲ್ಲಾ ಮುಗಿಸೇ’ ಅಂತಾರೆ ಅಮ್ಮ. ಎಲ್ಲಾ ಮುಗಿಸಿ, ಆಸೆಯಿಂದ ಓಡಿ ಹೋಗಿ ಕುತ್ತಿಗೇಗೆ ಜೋತುಬಿದ್ರೆ ‘ಅಯ್ಯೋ, ದನ ಬಿದ್ದ ಹಾಗೆ ಮೇಲೆ ಬೀಳ್ತೀಯಲ್ಲೆ? ಅಲ್ಲೇ ನಿಂತ್ಕೊಂಡು ಮಾತಾಡು. ಯಾಕೆ ಹಾಗೆ ಮೈಮೇಲೆ ಬೀಳ್ತೀಯ. ನೀನೇನು ಎಳೇ ಮಗುವಾ?’ ಅಂತಾರೆ. ಯಾವತ್ತಾದ್ರೂ ಒಂದು ದಿನ ‘ಅಮ್ಮಾ, ಸ್ವಲ್ಪ ತಲೆ ನೋಯ್ತಿದೆ’ ಅಂದರೆ- ‘ಓದಬೇಕಾಗ್ತದೆ ಅಂತ ನಾಟಕ ಆಡ್ತಾ ಇದೀಯ’ ಅಂತ ರೇಗ್ತಾರೆ. ‘ಸ್ಕೂಲಲ್ಲಿ ನಿನಗಿಂತ ಚೆನ್ನಾಗಿ ಓದೋರು ಎಂಟು ಜನ ಇದ್ದಾರಂತೆ. ಅವರನ್ನೆಲ್ಲ ಹಿಂದೆ ಹಾಕ್ತೀಯ ನೋಡು, ಅವತ್ತು ನನ್ನ ಹತ್ರ ಬಂದು ಎಷ್ಟು ಬೇಕೋ ಅಷ್ಟು ಮಾತಾಡು, ಮುದ್ದು ಮಾಡು’ ಅಂತಾರೆ. ಯಾವಾಗಲಾದ್ರೂ ಒಂದೈದು ದಿನ ಜ್ವರ ಬಂದು ಮಲಗಿಬಿಟ್ರೆ; ಶೀತ ಆಗಿ ಕೆಮ್ಮು ಶುರುವಾದ್ರೆ- ‘ಆವಾಗವಾಗ ಏನಾದ್ರೂ ಒಂದು ಕಾಯ್ಲೆ ಇದ್ದೇ ಇರ್‍ತದಲ್ಲ ನಿಂಗೆ? ನಮ್ಗೆ ಒಳ್ಳೇ ಪ್ರಾಣ ಸಂಕಟ. ಇದೆಲ್ಲ ಯಾವ ಜನ್ಮದ ಕರ್ಮಾನೋ…’ ಅಂದು ರೇಗಿಬಿಡ್ತಾರೆ…
ಈಗ ಅಪ್ಪನ ವಿಷ್ಯಕ್ಕೆ ಬರ್‍ತೀನಿ. ಬೆಳಗ್ಗೆ ನಾನು ಪೇಸ್ಟ್ ಮಾಡಿ ಬೋರ್ನ್ ವಿಟಾ ಕುಡಿಯೋ ಹೊತ್ತಿಗೆ ಅಪ್ಪ ರೆಡಿಯಾಗಿರ್‍ತಾರೆ. ಲ್ಯಾಪ್‌ಟಾಪಲ್ಲಿ ಮುಳುಗಿಹೋಗಿರ್‍ತಾರೆ. ಅವರದು ಯಾವಾಗ್ಲೂ ಗಡಿಬಿಡೀನೆ. ಅಪ್ಪನ ಜತೆ ಆಟ ಆಡಬೇಕು, ಅವರ ಹತ್ರ ಕತೆ ಹೇಳಿಸ್ಕೋಬೇಕು. ಲೆಕ್ಕ ಹೇಳಿಸ್ಕೋಬೇಕು ಅಂತೆಲ್ಲ ತುಂಬಾ ಆಸೆ ನಂಗೆ. ಆದ್ರೆ ಅದಕ್ಕೆಲ್ಲ ಅವಕಾಶಾನೇ ಇಲ್ಲ. ಅಪ್ಪ, ಒಂದ್ಸಲಾನೂ ನನ್ನ ನೋಟ್ಸ್ ನೋಡಿಲ್ಲ. ರಾತ್ರಿ ಆಪ್ಪನ ಹತ್ರ ಹೋದ್ರೆ ಸಾಕು- ‘ನಂಗೆ ಸುಸ್ತಾಗಿದೆ. ತಲೆ ಸಿಡೀತಾ ಇದೆ. ನೀನು ಮತ್ತೆ ತಲೆ ಕೆಡಿಸಬೇಡಿ. ಏನಿದ್ರು ಅಮ್ಮಂಗೆ ಹೇಳು. ಈಗ ಮಲ್ಕೋ ಹೋಗು’ ಎಂದು ಗದರಿಸಿಬಿಡ್ತಾರೆ ಪಪ್ಪ. ಅದಕ್ಕೇ ನನ್ನನ್ನು ಟಿವಿಯನ್ನಾಗಿ ಮಾಡಿಬಿಡು, ಪ್ಲೀಸ್.
ಯಾಕೆ ಗೊತ್ತ? ಎಷ್ಟೇ ಸುಸ್ತಾಗಿದ್ರೂ, ಜ್ವರ ಬಂದಿದ್ರೂ ಕೂಡ ಅಪ್ಪ, ಮನೆಗೆ ಬಂದ ತಕ್ಷಣ ಟಿವಿ ಹಾಕ್ತಾರೆ. ಆನಂತರ ಟಿವಿ ನೋಡ್ತಾ ನೋಡ್ತಾ ತಮ್ಮಷ್ಟಕ್ಕೆ ತಾವೇ ನಗ್ತಾರೆ, ಮಾತಾಡ್ತಾರೆ. ಹಾಡು ಹೇಳ್ತಾರೆ. ಮಧ್ಯೆ ಮಧ್ಯೆ ನಮ್ಮ ಟೀವಿ ಎಷ್ಟೊಂದು ಚೆನ್ನಾಗಿ ಬರ್‍ತಿದೆ ಅಲ್ವಾ? ಅನ್ನುತ್ತಾರೆ. ಅದನ್ನು ದಿನಕ್ಕೆ ಎರಡು ಬಾರಿ ಒರೆಸ್ತಾರೆ. ಒಂದು ವೇಳೆ ಅದು ಕೆಟ್ಟು ಹೋದ್ರೆ ಐದಾರು ಜನಕ್ಕೆ ಫೋನ್ ಮಾಡಿ ತಕ್ಷಣವೇ ರಿಪೇರಿ ಮಾಡಿಸ್ತಾರೆ. ಆನಂತರ ಮತ್ತೆ ಟಿವಿ ಹಾಕ್ಕೊಂಡು ತಮ್ಮಷ್ಟಕ್ಕೆ ತಾವೇ ಮಾತಾಡ್ತಾ, ಹಾಡು ಕೇಳ್ತಾ ಉಳಿದುಬಿಡ್ತಾರೆ….
ಅಮ್ಮ ಕೂಡ ಅಷ್ಟೆ. ಪಾತ್ರೆ ತೊಳೆಯುವಾಗ, ಅಡುಗೆ ಮಾಡುವಾಗ, ಕಸ ಗುಡಿಸುವಾಗ, ಫೋನ್ ಮಾಡುವಾಗ ಕೂಡ ಅವಳ ಕಣ್ಣು ಟಿವಿ ಕಡೆಗೇ ಇರ್‍ತದೆ. ಒಂದೇ ಮಾತಲ್ಲಿ ಹೇಳಬೇಕು ಅಂದ್ರೆ- ಟೀವಿ ಜತೆ ಅಪ್ಪನಿಗಿದೆಯಲ್ಲ? ಅದಕ್ಕಿಂತ ಹೆಚ್ಚಿನ ಅಟ್ಯಾಚ್‌ಮೆಂಟ್ ಅಮ್ಮನಿಗಿದೆ!
ಅದಕ್ಕೆ ದೇವ್ರೇ, ಪ್ಲೀಸ್, ನನ್ನನ್ನು ಟಿವಿಯನ್ನಾಗಿ ಮಾಡಿಬಿಡು. ನಮ್ಮ ಅಪ್ಪ-ಅಮ್ಮ, ಇಬ್ರೂ ಸಂತೋಷ-ಬೇಸರದ ಸಂದರ್ಭದಲ್ಲೆಲ್ಲ ನನ್ನ ಮುಂದೇನೇ ಕೂತಿರ್ಬೇಕು. ನನ್ನ ಮಾತನ್ನು ಅವರು ಆಸಕ್ತಿಯಿಂದ ಕೇಳಬೇಕು. ನಾನು ಈ ಮನೆಯ ಆಸಕ್ತಿಯ ಕೇಂದ್ರಬಿಂದು ಆಗಬೇಕು. ಆಮೇಲೆ ನಮ್ಮ ಮನೆಯ ಜನ ಪ್ರಶ್ನೆ ಮಾಡದೆ, ಅಡ್ಡಿ ಮಾಡದೆ, ರೇಗದೆ ನನ್ನ ಮಾತು ಕೇಳಿಸ್ಕೋಬೇಕು. ಟಿವಿ ಕೆಟ್ಟು ಹೋದಾಗ ಅದನ್ನು ಎಷ್ಟು ಜೋಪಾನ ಮಾಡ್ತಾರೋ ಅಷ್ಟೇ ಕಾಳಜಿಯನ್ನು ನನ್ನ ವಿಷಯದಲ್ಲೂ ತಗೋಬೇಕು. ಅಮ್ಮ, ತನ್ನ ನೋವನ್ನೆಲ್ಲ ಮರೆಯೋದಕ್ಕೆ ನನ್ನನ್ನು ಉಪಯೋಗಿಸಬೇಕು. ನನ್ನ ಜತೇಲಿರೋದಕ್ಕೋಸ್ಕರ ಎಲ್ರೂ ತಮ್ಮ ಕೆಲಸ ಮರೆತು ಬರ್‍ತಾರೆ ಅಂತ ನಂಗೆ ಅನ್ನಿಸಬೇಕು. ಎಲ್ಲರೂ ನನ್ನ ಮಾತಿಂದ, ಹಾಡಿಂದ, ಆಟದಿಂದ ಖುಷಿ ಪಡಬೇಕು. ಹೌದು ದೇವ್ರೆ, ಇದಿಷ್ಟೂ ನನ್ನ ಪ್ರೀತಿಯ ಕೋರಿಕೆ. ಪ್ಲೀಸ್, ನನ್ನನ್ನು ಒಂದು ಟಿವಿಯನ್ನಾಗಿ ಮಾಡಿಬಿಡು. ನಾನಿರಬೇಕಾದ ಜಾಗದಲ್ಲಿ ಈಗ ಟಿವಿ ಇದೆ…’
***************************
ಇದಿಷ್ಟನ್ನೂ ಓದಿ ಮುಗಿಸಿದ ಹರೀಶ- ‘ಛೀ, ಈ ಮಗುವಿನ ಪೇರೆಂಟ್ಸ್ ಎಷ್ಟೊಂದು ಕ್ರೂರಿಗಳು ಅಲ್ವಾ? ಇರೋ ಒಂದು ಮಗೂನ ಸರಿಯಾಗಿ ನೋಡಿಕೊಳ್ದೇ ಇರೋರು…’ ಎಂದ.
ಭಾರತಿ, ಗಂಡನನ್ನೇ ಅನುಕಂಪದಿಂದ ನೋಡುತ್ತ ಸಂಕಟದಿಂದ ಹೇಳಿದಳು : ‘ಈ ಪ್ರಬಂಧ ಬರೆದಿರೋದು ನಮ್ಮ ಮಗಳು ಕಣ್ರೀ…’
****************************
ಕೆಲಸ, ಸಂಪಾದನೆ, ಪ್ರೊಮೋಷನ್, ಪಾರ್ಟಿ… ಇತ್ಯಾದಿ ಗದ್ದಲದಲ್ಲಿ ಮುಳುಗಿ ಹೋಗಿ ಮಕ್ಕಳನ್ನು ಸುಖ-ದುಃಖ ವಿಚಾರಿಸಲು ಮರೆತ ಎಲ್ಲ ಪೋಷಕರಿಗೆ ಪ್ರೀತಿಯಿಂದ – ಈ ಬರಹ.

ಕಾಲಲ್ಲಿ ಬರೆದ ಚಿತ್ರಕ್ಕೆ ಲಕ್ಷ ಲಕ್ಷ!

ಏಪ್ರಿಲ್ 24, 2010

ಮಗು ಮುದ್ದಾಗಿದೆ. ಆರೋಗ್ಯವಾಗಿದೆ. ಎರಡೂವರೆ ಕೆ.ಜಿ. ತೂಕವಿದೆ. ಆದರೆ… ಆದರೆ… ಮಗುವಿಗೆ ಎರಡೂ ಕೈಗಳಿಲ್ಲ! ಇಂಥದೊಂದು ಸುದ್ದಿ ಕೇಳಿದರೆ, ಭಾರತದ ಹೆಚ್ಚಿನ ತಂದೆ-ತಾಯಿಗಳು ಏನು ಮಾಡ್ತಾರೆ ಹೇಳಿ; ಮೊದಲಿಗೆ ಬೆಚ್ಚಿ ಬೀಳುತ್ತಾರೆ. ನಂತರ ಗೋಳಾಡುತ್ತಾರೆ. ದೇವ್ರೆ ಯಾಕಪ್ಪಾ ಹೀಗೆ ಮಾಡ್ದೆ ಎಂದು ಪ್ರಶ್ನೆ ಹಾಕುತ್ತಾರೆ. ಆ ಮೇಲೆ ಚೇತರಿಸಿಕೊಂಡು- ಎಲ್ಲವೂ ಶಿವನಿಚ್ಛೆ, ನಾವು ಪಡೆದುಕೊಂಡು ಬಂದದ್ದೇ ಇಷ್ಟು  ಎಂದು ತಮಗೆ ತಾವೇ ಸಮಾಧಾನ ಹೇಳಿಕೊಳ್ಳುತ್ತಾರೆ. ಯಾವುದೋ ಜನ್ಮದ ತಪ್ಪಿಗೆ ಈ ಜನ್ಮದಲ್ಲಿ ಶಿಕ್ಷೆಯಾಗಿದೆ ಅಂದುಕೊಳ್ಳುತ್ತಾರೆ. ಅಥವಾ ಇದೆಲ್ಲಾ ಮನೆದೇವರ ಶಾಪವಿರಬಹುದು ಎಂಬ ನಿರ್ಧಾರಕ್ಕೆ ಬರುತ್ತಾರೆ. ಮುಂದೆ ಈ ವಿಷಯವಾಗಿಯೇ ಶಾಸ್ತ್ರ ಕೇಳುತ್ತಾರೆ. ಶಾಂತಿ ಹೋಮ ಮಾಡಿಸುತ್ತಾರೆ. ಮಗುವಿಗೆ ಆಗಿರುವ ಅಂಗವೈಕಲ್ಯ ಸರಿಹೋಗಿಬಿಟ್ಟರೆ, ನಿನಗೆ ಇಂತಿಷ್ಟು ದುಡ್ಡು ಕೊಡುತ್ತೇನೆ ಎಂದು ಇಷ್ಟದೈವಕ್ಕೆ ಹರಕೆ ಕಟ್ಟಿಕೊಳ್ಳುತ್ತಾರೆ. ಅಥವಾ ಕಡಿಮೆ ಖರ್ಚಿನಲ್ಲಿ ಆಗಬಹುದಾದ ಪೂಜೆ/ ಕಾಣಿಕೆಯ ಬಗ್ಗೆ ತಿಳಿದುಕೊಂಡು ದೇವರೊಂದಿಗೇ ಚೌಕಾಶಿಗೆ ನಿಲ್ಲುತ್ತಾರೆ!

ದುರಂತವೆಂದರೆ, ಹೆಚ್ಚಿನ ಸಂದರ್ಭದಲ್ಲಿ ಯಾವ ತಾಯ್ತಂದೆಯೂ ಆ ಅಂಗವಿಕಲ ಮಗುವಿನಲ್ಲಿ ಆತ್ಮವಿಶ್ವಾಸ ಬೆಳೆಸುವ ಗೋಜಿಗೇ ಹೋಗಿರುವುದಿಲ್ಲ. ಹುಟ್ಟಿನಿಂದಲೇ ಬರುವ ಅಂಗವೈಕಲ್ಯಗಳು ಹರಕೆ ಕಟ್ಟಿಕೊಂಡರೆ, ಅಥವಾ ಹೋಮ ಮಾಡಿಸಿದರೆ ಸರಿ ಹೋಗುವುದಿಲ್ಲ ಎಂಬ ಪ್ರಾಥಮಿಕ ಅರಿವು ಕೂಡ ಬಹಳ ಜನಕ್ಕೆ ಇರುವುದಿಲ್ಲ. ಪರಿಣಾಮ, ಅಂಗವಿಕಲ ಮಗು ಹುಟ್ಟಿದೆ ಎಂದು ಗೊತ್ತಾದ ನಂತರ -ದೇವರು, ಜಪ, ತಪ, ಪೂಜೆಯ ಕಡೆಗೇ ಹೆಚ್ಚಿನವರು ವಾಲಿಕೊಳ್ಳುತ್ತಾರೆ. ಬಂಧುಗಳು, ಗೆಳೆಯರ ಮುಂದೆ ತಮ್ಮ ಮಗುವಿನ ಅವಸ್ಥೆಯ ಕುರಿತು ಸಂಕಟದಿಂದ ಮಾತಾಡುತ್ತಾರೆ. ಹತ್ತು ಮಂದಿಯ ಅನುಕಂಪ ಬಯಸುತ್ತಾರೆ. ನಂತರ, ಕೈ-ಕಾಲು ಇಲ್ಲದ ಮಕ್ಕಳಿಂದ ಏನೂ ಮಾಡಲು ಸಾಧ್ಯವಾಗುವುದಿಲ್ಲ ಎಂದು ತಾವೇ ಹೇಳಿಕೊಳ್ಳುತ್ತಾರೆ. ಆ ಮಗುವನ್ನು ಬಂಧುಗಳಿಂದ, ಗೆಳೆಯರಿಂದ, ಪರಿಚಿತರಿಂದ ಹಾಗೂ ಶಿಕ್ಷಣದಿಂದ ದೂರವೇ ಉಳಿಸುತ್ತಾರೆ! ಮತ್ತು, ಹೀಗೆ ಮಾಡುವ ಮೂಲಕ ನನ್ನಿಂದ ಯಾವ ಸಾಧನೆಯೂ ಸಾಧ್ಯವಿಲ್ಲ ಎಂಬ ಭಾವನೆ ಅಂಗವಿಕಲ ಮಗುವಿಗೂ ಬಂದುಬಿಡುವಂತೆ ಮಾಡಿಬಿಡುತ್ತಾರೆ! ಪರಿಣಾಮ ಏನಾಗುತ್ತದೆ ಅಂದರೆ- ಅದೆಷ್ಟೋ ಅಂಗವಿಕಲ ಮಕ್ಕಳ ಸುಪ್ತ ಪ್ರತಿಭೆಯ ಪರಿಚಯ ಹೊರಜಗತ್ತಿಗೆ ಆಗುವುದೇ ಇಲ್ಲ! ಅಥವಾ ಒಂದು ವೇಳೆ ಒಂದು ರಾಜ್ಯವೇ ಮೆಚ್ಚುವಂಥ ಸಾಧನೆಯನ್ನು ಅಂಗವಿಕಲನೊಬ್ಬ ಮಾಡಿದರೂ ಅದನ್ನು ತುಂಬ ಸಂಭ್ರಮದಿಂದ ಒಪ್ಪುವಂಥ ಮನಸುಗಳು ನಮ್ಮ ಮಧ್ಯೆಯೂ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲ. ಈ ಕಾರಣದಿಂದಲೇ ಹುಟ್ಟು ಅಂಧನಾಗಿದ್ದರೂ ಭರತನಾಟ್ಯದ ದೊರೆ ಅನ್ನಿಸಿಕೊಂಡಿರುವ ಬುಸೇಗೌಡ, ಎರಡೂ ಕಾಲಿಲ್ಲದೆಯೂ ಮಹತ್ವದ್ದನ್ನು ಸಾಸಿರುವ ನಾಗನರೇಶ್ ಮುಂತಾದವರ ಬಗ್ಗೆ ನೂರು ಮಂದಿಯಲ್ಲಿ ವಿಚಾರಿಸಿದರೂ ಎರಡು ಪುಟಗಳ ಮಾಹಿತಿ ಸಿಗುವುದಿಲ್ಲ.

ಯಾರು ಏನೇ ಹೇಳಲಿ; ಈ ವಿಷಯದಲ್ಲಿ ವಿದೇಶಿಯರು ಅದರಲ್ಲೂ ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯದ ಜನರನ್ನು ನೋಡಿ ಕಲಿಯಬೇಕು. ಅಂಗವಿಕಲನೊಬ್ಬ ಮಹತ್ವದ ಸಾಧನೆಗೆ ತೊಡಗಿದ್ದಾನೆ ಎಂದು ಗೊತ್ತಾದರೆ ಸಾಕು, ಆ ದೇಶಗಳಲ್ಲಿ ಅವನ ಪರವಾಗಿ ಪ್ರಚಾರ ಮಾಡುವ ಜನ ಹುಟ್ಟಿಕೊಳ್ಳುತ್ತಾರೆ. ಅವನ ಚಿಕ್ಕದೊಂದು ಗೆಲುವನ್ನೂ ಮಹತ್ಸಾಧನೆ ಎಂದು ಬಣ್ಣಿಸಲು ಪತ್ರಿಕೆಗಳು ಪಣತೊಡುತ್ತವೆ. ವಿಕಲಾಂಗನೊಬ್ಬ ತನ್ನ ಅಂಗವೈಕಲ್ಯವನ್ನು ಮೆಟ್ಟಿ ನಿಂತದ್ದು ಹೇಗೆ? ಬದುಕಿನ ಹಾದಿನಲ್ಲಿ ಅವನಿಗೆ ಎದುರಾದ ಸಂಕಷ್ಟಗಳು ಎಂಥವು? ಈ ಹೋರಾಟದಲ್ಲಿ ಅವನ ಬೆನ್ನಿಗೆ ನಿಂತವರು ಯಾರು? ಎಂಬಿತ್ಯಾದಿ ವಿವರಗಳೆಲ್ಲ ಪತ್ರಿಕೆ ಹಾಗೂ ವೆಬ್‌ಸೈಟ್‌ಗಳಲ್ಲಿ ಮೇಲಿಂದ ಮೇಲೆ ಪ್ರಕಟವಾಗುತ್ತಲೇ ಇರುತ್ತವೆ. ಪರಿಣಾಮ ಏನಾಗುತ್ತದೆ ಎಂದರೆ, ನಾನು ಅಂಗವಿಕಲ ಎಂಬ ಭಾವನೆ ಅಂಗವಿಕಲ ವ್ಯಕ್ತಿಗೆ ಬರುವುದೇ ಇಲ್ಲ. ಬದಲಿಗೆ, ನಾನು ವಿಶೇಷ ಸಾಧನೆ ಮಾಡಲಿಕ್ಕೆಂದೇ ಹುಟ್ಟಿದವನು. ನಾನು ಯಾರಿಗೇನು ಕಡಿಮೆ ಎಂಬ ಭಾವವೇ ಅಂಗವಿಕಲ ವ್ಯಕ್ತಿಗಳ ರಕ್ತದ ಕಣಕಣದಲ್ಲಿ ತುಂಬಿ ಹೋಗುತ್ತದೆ.

***

ಇಂಗ್ಲೆಂಡಿನ ಹೆಸರಾಂತ ಚಿತ್ರಕಲಾವಿದ ಪೀಟರ್ ಲಾಂಗ್‌ಸ್ಟಫ್‌ನ ಯಶೋಗಾಥೆಯನ್ನು ವಿವರಿಸುವ ಮೊದಲು ಪೂರ್ವಪೀಠಿಕೆಯ ರೂಪದಲ್ಲಿ ಮೇಲಿನ ಮಾತುಗಳನ್ನು ಹೇಳಬೇಕಾಯಿತು. ವಿಶೇಷ ಏನೆಂದರೆ -ಲಾಂಗ್‌ಸ್ಟಫ್ ರಚಿಸಿದ ಕಲಾಕೃತಿಗಳಿಗೆ  ಇಂಗ್ಲೆಂಡಿನಲ್ಲಿ ವಿಪರೀತ ಬೇಡಿಕೆಯಿದೆ. ಒಂದೊಂದು ಕಲಾಕೃತಿಯೂ ಸಾವಿರ ಸಾವಿರ ಡಾಲರ್‌ಗೆ ಮಾರಾಟವಾಗುತ್ತದೆ. ಅರೆ, ಚಿತ್ರಕಲಾವಿದನೊಬ್ಬನ ಆರ್ಟ್‌ವರ್ಕ್‌ಗೆ ಲಕ್ಷ ರೂ.ಗೆ ಮಾರಾಟವಾದರೆ ಅದರಲ್ಲಿ ವಿಶೇಷವೇನು ಬಂತು ಎಂದಿರಾ? ವಿಶೇಷವಿರುವುದೇ ಇಲ್ಲಿ. ಏನೆಂದರೆ ಲಾಂಗ್‌ಸ್ಟಫ್‌ಗೆ ಹುಟ್ಟಿನಿಂದಲೇ ಎರಡೂ ಕೈಗಳಿಲ್ಲ. ಆತ ಕಾಲಿನಿಂದಲೇ ಚಿತ್ರ ಬರೆಯುತ್ತಾನೆ! ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದವನು ಲಾಂಗ್‌ಸ್ಟಫ್. ಆತನ ತಾಯಿಗೆ ಯೌವನದ ದಿನಗಳಿಂದಲೂ ಬೆಳಗ್ಗೆ ಎದ್ದ ತಕ್ಷಣವೇ ತಲೆಸುತ್ತು, ತಲೆನೋವು, ಮೈಕೈ ನೋವು ಕಾಣಿಸಿಕೊಳ್ಳುತ್ತಿತ್ತು. ಈ ಸಂಕಟದಿಂದ ಪಾರಾಗಲು ಅವಳು ಸಿಗರೇಟು ಸೇದಲು ಕಲಿತಳು. ಹಿಂದೆಯೇ ಡ್ರಿಂಕ್ಸ್ ತೆಗೆದುಕೊಳ್ಳಲು ಆರಂಭಿಸಿದಳು. ಇಷ್ಟು ಸಾಲದೆಂಬಂತೆ ತನಗಿದ್ದ ಕಾಯಿಲೆಗೆಂದು ತಪ್ಪದೇ ಮಾತ್ರೆಗಳನ್ನೂ ನುಂಗಿದಳು. ಸಿಗರೇಟು, ಮದ್ಯ ಮತ್ತು ಮಾತ್ರೆ-ಈ ಮೂರರ ಸೈಡ್ ಎಫೆಕ್ಟ್ ಆಕೆಗೆ ಹುಟ್ಟಿದ ಮಗುವಿನ ಮೇಲಾಯ್ತು. ಹುಟ್ಟಿದ ಮಗುವಿಗೆ ಎರಡೂ ಕೈಗಳು ಇರಲಿಲ್ಲ!

ಕುಡುಕಿಯಾದರೇನಂತೆ; ಅವಳೂ ತಾಯಿಯಲ್ಲವೆ? ಮಗನ ಪರಿಸ್ಥಿತಿ ಕಂಡು ಆ  ತಾಯಿ ಕೂಡ ಭೋರಿಟ್ಟು ಅತ್ತಳು. ಒಂದು ಸಂತೋಷ ವೆಂದರೆ  ಈ ಡಿಫ್ರೆಶನ್‌ನಿಂದ ಆಕೆ  ಬೇಗ ಚೇತರಿಸಿಕೊಂಡಳು. ಮಗುವಿಗೆ ಪೀಟರ್ ಲಾಂಗ್‌ಸ್ಟಫ್ ಎಂದು ಹೆಸರಿಟ್ಟಳು. ಕೈಗಳು ಇಲ್ಲ ಅಂದ ಮೇಲೆ, ಕಾಲುಗಳನ್ನೇ ಕೈಗಳ ಥರಾ ಬಳಸಬೇಕು ಎಂದು ಹೇಳಿಕೊಟ್ಟಳು. ಕಾಲ್ಬೆರಳ ಸಹಾಯದಿಂದಲೇ ಬ್ರಷ್ ಮಾಡಿಕೊಳ್ಳಲು, ಬರೆಯಲು, ಕಾಫಿ ಕುಡಿಯಲು, ಜಗ್ ಹಿಡಿದುಕೊಳ್ಳಲು ಕಲಿಸಿದಳು. ಎಲ್ಲಕ್ಕಿಂತ ಹೆಚ್ಚಾಗಿ, ನೀನು ಯಾರಿಗೂ ಕಡಿಮೆಯಿಲ್ಲ ಎಂದು ಪದೇ ಪದೆ ಹೇಳುತ್ತ ಬಂದಳು. ಮಗ ಒಂದೇ ಒಂದು ಒಳ್ಳೆಯ ಕೆಲಸ ಮಾಡಿದರೂ ಅದನ್ನು ಹತ್ತು ಮಂದಿಗೆ ಹೇಳಿಕೊಂಡು ಮೆರೆದಾಡಿದಳು. ಇದರ ಒಟ್ಟು ಪರಿಣಾಮ ಏನಾಯಿತೆಂದರೆ, ನಾನು ಅಂಗವಿಕಲ ಎಂಬ ಭಾವನೆಯೇ ಲಾಂಗ್‌ಸ್ಟಫ್‌ನನ್ನು ಕಾಡಲಿಲ್ಲ. ಅವನು ಕೀಳರಿಮೆಗಳಿಂದ ಮುಕ್ತನಾಗಿ ಬೆಳೆಯುತ್ತಾ ಹೋದ.

ಪ್ರಾಪ್ತ ವಯಸ್ಕನಾಗುವ ವೇಳೆಗೆ ಪೀಟರ್‌ಗೆ ತನ್ನ ಮಿತಿ ಮತ್ತು ದೌರ್ಬಲ್ಯದ ಬಗ್ಗೆ ಖಡಕ್ಕಾಗಿ ಗೊತ್ತಿತ್ತು. ಈ ಮಧ್ಯೆಯೂ ಅವನು ಫುಟ್‌ಬಾಲ್ ಕಲಿತ. ಎರಡೂ ಕೈಗಳು ಇರಲಿಲ್ಲವಲ್ಲ| ಅದೇ ಕಾರಣದಿಂದ ಎದುರಾಳಿ ಆಟಗಾರರ ಮಧ್ಯೆ ದಿಢೀರನೆ ನುಸುಳುವುದು ಅವನಿಗೆ ತುಂಬ ಸುಲಭವಾಯಿತು. ಹೈಸ್ಕೂಲಿನ ದಿನಗಳಲ್ಲಂತೂ ಪೀಟರ್‌ಗೆ ಚೆಂಡು ಸಿಕ್ಕಿದರೆ ಗೋಲ್ ಆಯ್ತು ಎಂದೇ ಭಾವಿಸಲಾಗುತ್ತಿತ್ತು. ಒಂದಷ್ಟು ದಿನಗಳ ನಂತರ ಸ್ವಉದ್ಯೋಗವನ್ನೇಕೆ ಮಾಡಬಾರದು ಎಂಬ ಯೋಚನೆ ಪೀಟರ್‌ಗೆ ಬಂತು. ತಕ್ಷಣವೇ ಆತ ಟ್ರಾಕ್ಟರ್ ಓಡಿಸಲು ಕಲಿತ. ಹಿಂದೆಯೇ ಹಂದಿ ಸಾಗಣೆಯ ಕೋರ್ಸ್‌ಗೆ ಸೇರಿಕೊಂಡ. ಅವರಲ್ಲಿ ಪದವಿ ಪಡೆದ ! ನಂತರ ಹಂದಿ ಸಾಕುವ ಫಾರ್ಮ್ ಆರಂಭಿಸಿದ. ಮುಂದೆ ಹಂದಿಗಳನ್ನು ಟ್ರಾಕ್ಟರ್‌ನಲ್ಲಿ ತುಂಬಿಕೊಂಡು ಮಾರ್ಕೆಟ್‌ಗೆ ಹೋಗಿ ಮಾರಿ ಬರುವುದೇ ಅವನ ಉದ್ಯೋಗವಾಯಿತು.

ಈ ವೃತ್ತಿಯಲ್ಲಿಯೇ ಪೀಟರ್ ಭರ್ತಿ ಇಪ್ಪತ್ತು ವರ್ಷ ಕಳೆದ. ಆದರೆ, ಸ್ವಲ್ಪ ವಯಸ್ಸಾದಂತೆ, ಇನ್ನು ಮುಂದೆ ಈ ಕೆಲಸ ಕಷ್ಟ ಎಂಬುದು ಅವನಿಗೆ ಅರ್ಥವಾಗಿ ಹೋಯಿತು. ಏಕೆಂದರೆ, ಹಂದಿಗಳ ಹಿಂಡನ್ನು ಕಂಟ್ರೋಲ್ ಮಾಡಲು ಅವನಿಗೆ ಕಷ್ಟವಾಗತೊಡಗಿತು. ಜತೆಗೆ, ಮಾರ್ಕೆಟ್‌ನಲ್ಲಿ ಖರೀದಿಗೆ ಬಂದ ಜನ ಕೆಲವೊಮ್ಮೆ ನುಗ್ಗಿ ಬರುತ್ತಿದ್ದರು. ಕೈಗಳೇ ಇರಲಿಲ್ಲವಲ್ಲ? ಆ ಕಾರಣದಿಂದಲೇ ಗುಂಪಾಗಿ ಬಂದವರನ್ನು ಅತ್ತಿತ್ತ ಸರಿಸುವುದೂ ಪೀಟರ್‌ಗೆ ಕಷ್ಟವಾಗುತ್ತಿತ್ತು. ಪರಿಣಾಮ, ಅದೊಂದು ದಿನ ಈ ಕೆಲಸಕ್ಕೆ ಗುಡ್‌ಬೈ ಹೇಳಿ, ಫುಟ್‌ಬಾಲ್ ಕೋಚ್ ಹುದ್ದೆಗೆ ಸೇರಿಕೊಂಡ.

ಒಂದಷ್ಟು ವರ್ಷ ಕೋಚ್ ಆಗಿ ಇಂಗ್ಲೆಂಡಿನ ಹತ್ತಾರು ನಗರಗಳಿಗೆ ತನ್ನ ತಂಡದೊಂದಿಗೆ ಹೋಗಿಬಂದ ಪೀಟರ್. ಅವನ ಕಾಲ್ಬೆರಳ ಚಳಕ, ಫುಟ್‌ಬಾಲ್‌ನಲ್ಲಿ ಅವನಿಗಿರುವ ಪ್ರಾವೀಣ್ಯತೆ ಕಂಡು ಎಲ್ಲರೂ ಬೆರಗಾದರು.

ಆದರೆ, ಕೆಲವೇ ದಿನಗಳಲ್ಲಿ ಈ ಕೋಚ್ ಹುದ್ದೆಯಲ್ಲೂ ಅಂಥ ವಿಶೇಷ ವಿಲ್ಲ ಅನ್ನಿಸಿತು ಪೀಟರ್‌ಗೆ. ಆಗಲೇ ಆತ ಚಿತ್ರಕಲೆಯೆಡೆಗೆ ತಿರುಗಿ ನೋಡಿದ. ಕಾಲ್ಬೆರಳ ಸಹಾಯದಿಂದಲೇ ಬರೆಯಬಹುದು, ಪೇಸ್ಟ್  ಮಾಡಬಹುದು, ಬಾಗಿಲು ತೆಗೆಯಬಹುದು, ಊಟ ಮಾಡಬಹುದು ಎಂದಾದರೆ, ಅದೇ ಕಾಲ್ಬೆರಳ ಸಹಾಯದಿಂದ ಚಿತ್ರ ಬರೆಯಲು ಏಕೆ ಸಾಧ್ಯವಿಲ್ಲ ಎಂದೇ ಆತ ಯೋಚಿಸಿದ. ನಂತರ ಅವನು ತಡಮಾಡಲಿಲ್ಲ. ಲಂಡನ್‌ನಲ್ಲಿರುವ ‘ಅಂಗವಿಕಲರ ಚಿತ್ರಕಲಾ ಕೇಂದ್ರಕ್ಕೆ ವಿದ್ಯಾರ್ಥಿಯಾಗಿ ಸೇರಿಯೇ ಬಿಟ್ಟ.

ಮುಂದಿನದೆಲ್ಲವೂ ಅವನ ಯಶೋಗಾಥೆಯೇ: ಕಲೆಯ ಎಲ್ಲ ಸಾಧ್ಯತೆಗಳನ್ನೂ ಅರ್ಥಮಾಡಿಕೊಂಡ ಪೀಟರ್, ಒಂದೊಂದೇ ಹೊಸ ಚಿತ್ರ ಬರೆಯುತ್ತಾ ಹೋದ. ಅದರಲ್ಲೂ ಪ್ರಕೃತಿಯ ಸೊಬಗನ್ನು ಚಿತ್ರಗಳಲ್ಲಿ ಹಿಡಿದಿಟ್ಟ. ಏಕಾಗ್ರತೆ ಸಾಸಲೆಂದು ಯೋಗ ಕಲಿತ. ಧ್ಯಾನ ಕಲಿತ. ಈ ಹಟಸಾಧನೆಯೆಲ್ಲಾ ಅವನ ಕಲಾಕೃತಿಗಳಲ್ಲಿ ಫಳಫಳಿಸಿತು.

ಈಗ ಪೀಟರ್‌ಗೆ ಭರ್ತಿ ಐವತ್ತೊಂದು ವರ್ಷ. ಅವನಿಗೆ ಹದಿನಾಲ್ಕು ವರ್ಷದ ಮಗನಿದ್ದಾನೆ. ಹೆಂಡತಿ ತೊರೆದು ಹೋಗಿದ್ದಾಳೆ. ಆದರೆ ಆ ಜಾಗಕ್ಕೆ ಹೊಸ ಗರ್ಲ್‌ಫ್ರೆಂಡ್ ಬಂದಿದ್ದಾಳೆ. ಈ ಮಧ್ಯೆ ಕಲಾವಿದನಾಗಿ ಆತ ದೊಡ್ಡ ಎತ್ತರ ತಲುಪಿಕೊಂಡಿದ್ದಾನೆ.  ಕ್ರಿಸ್ ಮಸ್‌ನ ಸಂದರ್ಭದಲ್ಲಿ  ಪೀಟರ್‌ನ ಕಲಾಕೃತಿಗಳು ಬಿಸಿದೋಸೆಗಳಂತೆ ಖರ್ಚಾಗುತ್ತಿವೆ. ಕಾಲಲ್ಲಿ ಬರೆದ ಒಂದೊಂದು ಚಿತ್ರವೂ ಸಾವಿರ ಸಾವಿರ ಡಾಲರ್‌ಗೆ ಮಾರಾಟವಾಗಿದೆ. ಇಂಗ್ಲೆಂಡಿನ ಮಹಾನಗರಗಳಲ್ಲೆಲ್ಲ ಪೀಟರ್‌ನ ಕಲಾಕೃತಿಗಳ ಎಕ್ಸಿಬಿಷನ್ ನಡೆದಿದೆ.

ಇಷ್ಟೆಲ್ಲ ಆದರೂ ಪೀಟರ್ ಅಹಂಕಾರದ ಕೈಗೆ ಬುದ್ದಿ ಕೊಟ್ಟಿಲ್ಲ. ಆತ, ಈಗಲೂ ಸಾಮಾನ್ಯರಲ್ಲಿ ಸಾಮಾನ್ಯನಂತೆಯೇ ಇದ್ದಾನೆ. ಅಂಗವೈಕಲ್ಯದ ನೋವು ನನ್ನೊಳಗೂ ಖಂಡಿತ ಇದೆ. ಆದರೆ, ಈ ವಿಷಯವಾಗಿ ಅಳುತ್ತಾ ಕೂರಲು ನಾನು ಸಿದ್ಧನಿಲ್ಲ, ಇಷ್ಟಕ್ಕೂ ಅಳುತ್ತ ಕೂತರೆ ನನಗೆ ಕೈ ಬಂದು ಬಿಡುತ್ತಾ? ಎಂದು ಪ್ರಶ್ನಿಸುತ್ತಾನೆ ಪೀಟರ್. ಹಿಂದೆಯೇ, ಕೈಗಳಿಲ್ಲ ಎಂಬ ಕೊರಗು ನನಗಂತೂ ಇಲ್ಲ. ಎರಡೂ ಕಾಲುಗಳನ್ನೇ ಎರಡೂ ಕೈಗಳಂತೆ ಬಳಸುವುದನ್ನು ನಾನು ಅಭ್ಯಾಸ ಮಾಡಿಕೊಂಡಿದ್ದೀನಿ. ಈ ಬದುಕಲ್ಲಿ ನಾನಂತೂ ಸುಖಿ ಎನ್ನುತ್ತಾನೆ.

ಅವನ ಸಾಧನೆ, ಛಲ, ಕಷ್ಟವನ್ನು ಎದುರಿಸಿ ಗೆದ್ದ ರೀತಿ ಕಂಡಾಗ ಮನಸ್ಸು ಮೂಕವಾಗುತ್ತದೆ.ಪೀಟರ್.  ಕಾಲಿಲ್ಲದವನ ‘ಚಿತ್ರಕಾವ್ಯ’ಕ್ಕೆ ಕೈ ಮುಗಿಯುವ ಮನಸ್ಸಾಗುತ್ತದೆ. ಅಲ್ಲವೆ?

 

ಅಮ್ಮ ಮತ್ತು ಒಂದು ರುಪಾಯಿ…

ಏಪ್ರಿಲ್ 9, 2010

ಇದು ಕಥೆಯಲ್ಲ, ಹಿಂದೊಮ್ಮೆ ನಡೆದು ಹೋದ ಪ್ರಸಂಗ. ಆದರೆ, ಈಗಿನ ಜಮಾನಾದವರಿಗೆ ಇದನ್ನು ನಂಬುವುದು ಕಷ್ಟ ಅನ್ನಿಸಬಹುದು. ಹಾಗಾಗಿ, ಇದು ಕಥೆ ಅಂದುಕೊಂಡರೆ ಕಥೆ, ಕಲ್ಪನೆ ಅಂದುಕೊಂಡರೆ ಕಲ್ಪನೆ. ಅನುಭವ ಅಂದುಕೊಂಡರೆ ಅನುಭವ. ಅಥವಾ ಇಪ್ಪತ್ತೈದು ವರ್ಷಗಳ ಹಿಂದಿನ ಮಧ್ಯಮ ವರ್ಗದ ಕುಟುಂಬವೊಂದರ ಬದುಕಿನ ಸಿಂಪಲ್ ಚಿತ್ರಣ ಅಂದುಕೊಂಡರೆ- ಅದು!

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕು ಹೊಣಕೆರೆ ಹೋಬಳಿಯ ವ್ಯಾಪ್ತಿಯಲ್ಲಿರುವುದು ತಟ್ಟೇಕೆರೆ ಹಿರಿಯ ಪ್ರಾಥಮಿಕ ಶಾಲೆ. ಈ ಊರು ಕೆ.ಆರ್.ಪೇಟೆ-ನಾಗಮಂಗಲ ತಾಲೂಕುಗಳ ಮಧ್ಯೆ ಇದೆ. ಇಷ್ಟು ಹೇಳಿದರೆ ತಟ್ಟೇಕೆರೆ ಎಂಬ ಕುಗ್ರಾಮದ ಗುರುತು ತಕ್ಷಣಕ್ಕೆ ಸಿಗುವುದಿಲ್ಲ. ಹಾಗಾಗಿ ಜೋಗಾದಿ ಸಂತೆ ಮೈದಾನದಿಂದ ಸೀದಾ ಕೆಳಕ್ಕೆ, ಎರಡು ಮೈಲಿ ನಡೆದರೆ ಮೊದಲು ಆಯಿತನಹಳ್ಳಿ ಎಂಬ ಊರು ಸಿಗುತ್ತದೆ. ಅಲ್ಲಿಂದ ಅರ್ಧ ಕಿಲೋಮೀಟರು ನಡೆದರೆ ಸಿಗುವ ಊರೇ- ತಟ್ಟೇಕೆರೆ! ಒಂದು ಊರಿನ ವಿಳಾಸವನ್ನು ಹೀಗೆ ಸುತ್ತಿ ಬಳಸಿ ಹೇಳುವುದೇ ಬೇಡ ಎಂದುಕೊಂಡ ವಿದ್ಯಾವಂತರು- ‘ಕವಿ ರಾಮಚಂದ್ರ ಶರ್ಮ ಅವರ ಹುಟ್ಟೂರು ಬೋಗಾದಿ. ಅಲ್ಲಿ ಯಾರನ್ನು ಕೇಳಿದರೂ ತಟ್ಟೇಕೆರೆಗೆ ದಾರಿ ತೋರಿಸ್ತಾರೆ. ಅರ್ಧಗಂಟೆ ನಡೆದರೆ ಸಾಕು, ಊರು ಸಿಕ್ಕಿಬಿಡುತ್ತೆ’ ಎಂದು ಹೇಳಲು ಕಲಿತಿದ್ದರು. ಜತೆಗಿದ್ದವರಿಗೂ ಇದನ್ನೇ ಹೇಳಿಕೊಟ್ಟಿದ್ದರು!

ಅವತ್ತು ಏನಾಯಿತೆಂದರೆ-ಕನ್ನಡ ಪಾಠ ಮಾಡುತ್ತಿದ್ದ ಮರಿಯಪ್ಪ ಮಾಸ್ಟರು, ತಟ್ಟೇಕೆರೆಯ ಪ್ರಾಥಮಿಕ ಶಾಲೆಯ ಬೋರ್ಡಿನ ಒಂದು ತುದಿಯಲ್ಲಿ ನಿಂತು, ಎಡಗೈಲಿ ಪುಸ್ತಕ ಹಿಡಿದುಕೊಂಡು –

‘ವಸಂತ ಬಂದ ಋತುಗಳ ರಾಜ, ತಾ ಬಂದ
ಚಿಗುರನು ತಂದ, ಹೆಣ್ಗಳ ಕುಣಿಸುತ ನಿಂದ
ಚಳಿಯನು ಕೊಂದ, ಹಕ್ಕಿಗಳುಳಿಗಳೆ ಚೆಂದ
ಕೂವೂ, ಜಗ್‌ಜಗ್, ಪುವ್ವೀ, ಟೂವಿಟ್ಟವೂ!’

ಎಂದು ರಾಗವಾಗಿ ಹಾಡುತ್ತಾ ಪಾಠ ಮಾಡುತ್ತಿದ್ದರು. ವಸಂತ ಬಂದ ಎಂದು ಹೇಳುವಾಗ ಅವರು ಒಂದು ಬಾರಿ ಥೇಟ್ ಡಾಕ್ಟರ್ ರಾಜಕುಮಾರ್ ಶೈಲಿಯಲ್ಲಿ ಮೇಲಿಂದ ಕೆಳಗೆ ಕೈ ಮಾಡಿ ತೋರಿಸುತ್ತಿದ್ದರು. ಇನ್ನೊಮ್ಮೆ ಸೀದಾ ವಿದ್ಯಾರ್ಥಿಗಳನ್ನೇ ನೋಡಿ, ಹಾಡುತ್ತ, ಹುಬ್ಬು ಎಗರಿಸಿ, ನಗುತ್ತಾ ಹೇಳುತ್ತಿದ್ದರು. ಪದ್ಯ ಓದುತ್ತಾ ಓದುತ್ತಾ ಮೈಮರೆತು ಕುಣಿತದ ಧಾಟಿಯಲ್ಲಿ ಹೆಜ್ಜೆ ಹಾಕುತ್ತಿದ್ದರು. ಅದನ್ನು ಕಂಡು ಹುಡುಗರಿಗೆ ವಿಪರೀತ ಖುಷಿಯಾಗುತ್ತಿತ್ತು.
ಹೀಗೆ, ಮಕ್ಕಳೊಂದಿಗೆ ಮಗುವಾಗಿ ನಲಿಯುತ್ತಾ ಮರಿಯಪ್ಪ ಮಾಸ್ಟರು ಪದ್ಯ ಓದುತ್ತಿದ್ದಾಗಾಲೇ ಬಾಗಿಲಲ್ಲಿ ಹೆಡ್‌ಮಾಸ್ಟರ್ ರಾಮೇಗೌಡರ ಮುಖ ಕಾಣಿಸಿತು. ತಕ್ಷಣವೇ ಮರಿಯಪ್ಪ ಮಾಸ್ಟರು ಪಾಠ ನಿಲ್ಲಿಸಿದರು. ಸಂಭ್ರಮದಿಂದಲೇ ಒಳಗೆ ಬಂದ ರಾಮೇಗೌಡರು, ‘ಹರೀಶನಿಗೆ ಈ ವರ್ಷ ತಾಲೂಕಿಗೇ ಅತಿ ಹೆಚ್ಚು ಅಂಕ ಬಂದಿದೆ. ಹಾಗಾಗಿ ೧೦೦ ರೂಪಾಯಿ ಸ್ಕಾಲರ್ ಶಿಪ್ ಬಂದಿದೆ’ ಎಂದರು. ನಂತರ ಹರೀಶನನ್ನೇ ಕರೆದು ‘ನೋಡೋ ಮರೀ, ಈ ಅರ್ಜೀನ ನಿಮ್ಮ ತಂದೆ ಕೈಲಿ ತುಂಬಿಸಿ, ಅದಕ್ಕೆ ಅವರ ಸಹಿ ಮಾಡಿಸ್ಕೊಂಡು ಬಾ. ಇದನ್ನು ನಾಳೇನೇ ನಮಗೆ ವಾಪಸ್ ಕೊಡಬೇಕು. ನೀನು ಈಗಲೇ ಹೋಗಿ ನಿಮ್ಮ ತಂದೆ ಹತ್ರ ಸೈನ್ ಮಾಡಿಸ್ಕೊಂಡು ಬಾ’ ಅಂದರು- ಹರೀಶನ ತಂದೆ ಕೆ.ಆರ್. ಪೇಟೆ ಎಂಬ ತಾಲೂಕಿನಲ್ಲಿ ಗುಮಾಸ್ತರಾಗಿದ್ದರು. ಸಣ್ಣ ಸಂಬಳದಲ್ಲಿ ಅವರು ದೊಡ್ಡ ಕುಟುಂಬವನ್ನು ಸಲಹಬೇಕಿತ್ತು. ಇಪ್ಪತ್ತೈದು ವರ್ಷಗಳ ಹಿಂದೆ ಈಗಿನಂತೆ ಗಂಟೆಗೆ ಎರಡರ ಲೆಕ್ಕದಲ್ಲಿ ಬಸ್ಸುಗಳಿರಲಿಲ್ಲ. ಅಥವಾ ತಾಲೂಕಾಫೀಸಿನ ಗುಮಾಸ್ತರು ಬೈಕ್ ಇಟ್ಟುಕೊಳ್ಳುವ ಸಾಧ್ಯತೆ ಕೂಡ ಇರಲಿಲ್ಲ. ಹಾಗಾಗಿ, ಹರೀಶನ ತಂದೆ ತಾವು ನೌಕರಿಗಿದ್ದ ಊರಲ್ಲಿಯೇ ಒಂದು ಬಾಡಿಗೆ ಮನೆ ಮಾಡಿಕೊಂಡಿದ್ದರು. ವಾರಕ್ಕೊಮ್ಮೆ ಹುಟ್ಟೂರಿಗೆ ಬಂದು ಹೆಂಡತಿ ಹಾಗೂ ಕುಟುಂಬದವರ ಯೋಗಕ್ಷೇಮ ನೋಡಿಕೊಂಡು ಹೋಗುತ್ತಿದ್ದರು. ಈ ಎಲ್ಲ ವಿಷಯವೂ ಹೆಡ್ ಮಾಸ್ಟರ್ ರಾಮೇಗೌಡರಿಗೆ ಗೊತ್ತಿತ್ತು. ಈ ಕಾರಣದಿಂದಲೇ ಅವರು ಹರೀಶನಿಗೆ ಅರ್ಧ ದಿನದ ರಜೆ ನೀಡಿ ನಿಮ್ಮ ತಂದೆಯ ಬಳಿಗೆ ಹೋಗಿ ಸೈನ್ ಮಾಡಿಸಿಕೊಂಡು ಬಾ ಎಂದಿದ್ದರು. ಆ ದಿನಗಳಲ್ಲಿ ಹರೀಶನಿದ್ದ ಊರಿಂದ ಕೆ.ಆರ್. ಪೇಟೆಗೆ ಬೆಳಗ್ಗೆ ಎಂಟೂವರೆಗೆ ಒಂದು, ಮಧ್ಯಾಹ್ನ ಎರಡು ಗಂಟೆಗೆ ಇನ್ನೊಂದು, ಸಂಜೆ ಆರೂವರೆಗೆ ಮತ್ತೊಂದು-ಹೀಗೆ ಮೂರು ಬಸ್‌ಗಳಿದ್ದವು. ಈ ಪೈಕಿ ಸಂಜೆಯ ಬಸ್ಸು, ಬಂದರೆ ಬಂತು, ಇಲ್ಲಾಂದ್ರೆ ಇಲ್ಲ! ಹಾಗಿತ್ತು. ಹೆಡ್‌ಮಾಸ್ಟರೇ ರಜೆ ನೀಡಿದ ಮೇಲೆ ಭಯವೆಲ್ಲಿದೆ? ಹರೀಶ, ಶಾಲೆಯಿಂದ ಒಂದೇ ಓಟದಲ್ಲಿ ಮನೆಗೆ ಬಂದ. ಒಂದೇ ನಿಮಿಷದಲ್ಲಿ ಅಮ್ಮನಿಗೆ ವಿಷಯ ತಿಳಿಸಿದ.ಈಗ್ಲೇ ಹೋಗ್ಬೇಕಂತೆ. ಬಸ್‌ಚಾರ್ಜ್‌ಗೆ ದುಡ್ಡು ಕೊಡವ್ವಾ ಎಂದ. ಅವನ ಮಾತಲ್ಲಿ ಅವಸರ-ಖುಷಿ ಎರಡೂ ಇತ್ತು. ಅವನ ಖುಷಿಗೆ ಒಂದಲ್ಲ, ಎರಡು ಕಾರಣಗಳಿದ್ದವು. ಮೊದಲನೆಯದು- ಅವನ ಊರಿಂದ ಕೆ.ಆರ್. ಪೇಟೆಗೆ ಹೋಗಲು ರೆಡಿಯಾದರೆ, ಅವನಿಗೆ ಬಸ್ ಜಾರ್ಜ್ ಎಂದು ಒಂದು ರೂಪಾಯಿ ಸಿಗುತ್ತಿತ್ತು. ಅದರಲ್ಲಿ ಬಸ್‌ಗೆ ತೊಂಬತ್ತು ಪೈಸೆ ಖರ್ಚಾಗಿ ಹತ್ತು ಪೈಸೆ ಉಳಿಯುತ್ತಿತ್ತು. (ಆ ಹತ್ತು ಪೈಸೆ ಇವತ್ತಿನ ಹತ್ತು ರೂಪಾಯಿಗೆ ಸಮ!) ಹಾಗೆ ಉಳಿದ ದುಡ್ಡಿಗೆ ಒಂದು ದೊಡ್ಡ ಸೈಜಿನ ಮೈಸೂರ್‌ಪಾಕ್ ಸಿಗುತ್ತಿತ್ತು. ಹಳದಿ-ಕಂದು ಮಿಶ್ರಣದ ಬಣ್ಣದಲ್ಲಿದ್ದ, ತುಂಬ ಗಟ್ಟಿಯೂ ಇರುತ್ತಿದ್ದ ಅದನ್ನು ಚೀಪುತ್ತ ಚೀಪುತ್ತಲೇ ಹರೀಶ, ಅರ್ಧ ಕಿಲೋಮೀಟರ್ ದೂರವಿದ್ದ ಅಪ್ಪನ ಮನೆ ತಲುಪಿಕೊಳ್ಳುತ್ತಿದ್ದ.

ಎರಡನೇ ಕಾರಣವೆಂದರೆ- ಕೆ.ಆರ್. ಪೇಟೆಯಲ್ಲಿ ಒಂದು ಚಿತ್ರಮಂದಿರವಿತ್ತು. ಅಲ್ಲಿ ರಾಜ್‌ಕುಮಾರ್ ನಟಿಸಿದ ಯಾವುದೇ ಚಿತ್ರ ಓಡುತ್ತಿದ್ದರೂ ಹರೀಶನ ತಂದೆ ತಪ್ಪದೇ ಸಿನಿಮಾ ತೋರಿಸುತ್ತಿದ್ದರು. ಅಥವಾ ಪೌರಾಣಿಕ/ ಐತಿಹಾಸಿಕ ಸಿನಿಮಾಗಳಾದರೆ ಅವು ಬೇರೆ ಭಾಷೆಯವಾಗಿದ್ದರೂ ಸೈ. ಮಗನನ್ನು ಕರೆದೊಯ್ಯುತ್ತಿದ್ದರು. ಅಪ್ಪನೊಂದಿಗೆ ಸಿನಿಮಾ ನೋಡಿ ಬಂದು ಮರುದಿನ ಶಾಲೆಯ ಎಲ್ಲ ಗೆಳೆಯರಿಗೂ ಸ್ಟೋರಿ, ಹಾಡು ಹೇಳಿ ಸ್ಕೋಪ್ ತಗೋಬಹುದಲ್ಲ? ಅದನ್ನು ನೆನಪು ಮಾಡಿಕೊಂಡೇ ಖುಷಿಯಾಗುತ್ತಿದ್ದ ಹರೀಶ. ಜತೆಗೆ ಬಸ್‌ನಲ್ಲಿ ಕಂಡಕ್ಟರ್ ಏನಾದರೂ ಟಿಕೇಟ್ ಕೊಡದೇ ಹೋದರೆ ಅವನಿಗೆ ಸ್ವಲ್ಪ ಹಣವನ್ನಷ್ಟೇ ನೀಡಿ ಉಳಿದಿದ್ದರಲ್ಲಿ ಪೆನ್ಸಿಲ್-ರಬ್ಬರ್ ಖರೀದಿಸುವ ಯೋಚನೆ ಕೂಡ ಹರೀಶನಿಗಿತ್ತು. ಈ ಎಲ್ಲಾ ಲೆಕ್ಕಾಚಾರಗಳ ಮಧ್ಯೆಯೇ ಹರೀಶ ಗಬಗಬನೆ ಊಟ ಮಾಡುತ್ತಿದ್ದ. ಸರಿಯಾಗಿ ಎರಡು ಗಂಟೆಗೆ ಬಸ್ಸು ಬರುತ್ತಿದ್ದುದರಿಂದ ಅವನು ಆದಷ್ಟು ಬೇಗ ಮನೆ ಬಿಟ್ಟು ಅರ್ಧ ಕಿಲೋ ಮೀಟರು ದೂರವಿದ್ದ ಬಸ್‌ನಿಲ್ದಾಣಕ್ಕೆ ಬಂದು ಬಸ್ ಹಿಡಿಯಬೇಕಿತ್ತು. ಹರೀಶ ಹೀಗೆ ಗಡಿಬಿಡಿಯಲ್ಲಿ ಊಟ ಮುಗಿಸಿದ ಹೊತ್ತಿನಲ್ಲೇ ಆ ಕಡೆ ಅವನ ತಾಯಿ ಕಾವೇರಮ್ಮ ಬಸ್‌ಚಾರ್ಜ್‌ಗೆ ಬೇಕಾದ ಒಂದು ರೂಪಾಯಿಗಾಗಿ ಆರು ಮನೆಗಳಲ್ಲಿ ಸಾಲ ಕೇಳಿದ್ದಳು. ಆರನೇ ಮನೆಯವರು ಕಡೆಗೂ ಕನಿಕರ ತೋರಿ, ನಾಡಿದ್ದು ವಾಪಸ್ ಕೊಡಬೇಕು ಎಂದು ಎಚ್ಚರಿಸಿಯೇ ದುಡ್ಡು ಕೊಟ್ಟಿದ್ದರು. ಮನೆಗೆ ಬಂದು ಬೆವರು ಒರೆಸಿಕೊಳ್ಳುತ್ತಾ ನೀಲಿ ಕಲರಿನ ಆ ಒಂದು ರೂಪಾಯಿ ನೋಟನ್ನು ಮಗನ ಜೇಬಿಗಿಟ್ಟಳು ಕಾವೇರಮ್ಮ. ಅದೇ ವೇಳೆಗೆ, ದೂರದಲ್ಲಿ ಪ್ರೇಂಂಂ ಎಂದು ಬಸ್‌ನ ಹಾರ್ನ್ ಸದ್ದಾಯಿತು. ಬಸ್ಸು ಬರುತ್ತಿದೆ ಎಂದು ಗೊತ್ತಾದ ತಕ್ಷಣ, ಹರೀಶ ಕೈತೊಳೆಯುವುದನ್ನೂ ಮರೆತು ಪೇರಿಕಿತ್ತ. ಹಿಂದೆಯೇ ಓಡಿಬಂದ ಕಾವೇರಮ್ಮ, ಬಸ್ ಹತ್ತುವಾಗ ಹುಷಾರು, ಕಿಟಕಿಯಿಂದ ಹೊರಗೆ ಕೈ ಹಾಕಬೇಡ. ಪೂರ್ತಿ ಕಿಟಕಿ ತೆಗೆದು ಕೊತ್ಕೋಬೇಡ, ಟಿಕೆಟ್ ತಗೊಳ್ಳಲು ಮರೀಬೇಡ ಎಂದೆಲ್ಲಾ ಹೇಳಿದಳು. ಅಮ್ಮನ ಎಲ್ಲ ಮಾತಿಗೂ ಹೂಂ ಹೂಂ ಅಂದ ಹರೀಶ ಒಂದೇ ಸಮನೆ ಓಟಕಿತ್ತ. ಅವನು ಏದುಸಿರು ಬಿಡುತ್ತಾ ಬಸ್‌ನಿಲ್ದಾಣಕ್ಕೆ ಬರುವುದಕ್ಕೂ ಕೆಎಸ್‌ಆರ್‌ಟಿಸಿ ಬಸ್ ಬಂದು ನಿಲ್ಲುವುದಕ್ಕೂ ಸರಿಹೋಯಿತು.

ತಡಬಡಾಯಿಸುತ್ತಲೇ ಬಸ್ ಹತ್ತಿದ ಹರೀಶ ಕಿಟಕಿ ಪಕ್ಕದ ಸೀಟಿನಲ್ಲಿ ಕೂತ. ಮರುಕ್ಷಣವೇ ಬಸ್ ಹೊರಟಿತು. ಒಂದೆರಡು ನಿಮಿಷದ ನಂತರ ದೂರದಲ್ಲಿ ಕಾಣುತ್ತಿದ್ದ ತನ್ನ ಊರನ್ನೇ ನೋಡಲು ಮುಂದಾದ ಹರೀಶ, ಇದ್ದಕ್ಕಿದ್ದಂತೆ ಕಂಗಾಲಾದ. ಏಕೆಂದರೆ, ಆ ಕಾಲುದಾರಿಯಲ್ಲಿ ಕಾವೇರಮ್ಮ ತನ್ನ ಕಿರಿಯ ಮಗನನ್ನೂ ಕಂಕುಳಲ್ಲಿ ಇಟ್ಟುಕೊಂಡು ಹರೀ, ಹರೀ, ಹರೀಶಾ, ಹರೀಶಾ ಎಂದು ಚೀರುತ್ತಾ ಓಡೋಡಿ ಬರುತ್ತಿದ್ದಳು. ಅವ್ವ ಕೂಗುತ್ತಿರುವುದು ತನ್ನನ್ನೇ ಎಂದು ಗೊತ್ತಾದ ತಕ್ಷಣ ಹರೀಶ, ಬಸ್‌ನ ಒಳಗಿಂದಲೇ – ‘ಅವ್ವಾ, ಏನವ್ವಾ? ಬಸ್ ಸಿಕ್ಕಿದೆ, ಹೋಗ್ತಾ ಇದೀನಿ’ ಎಂದು ಜೋರಾಗಿ ಕೂಗಿ ಹೇಳಿದ. ಹರೀಶ ಹೀಗೆ ಉತ್ತರಿಸಿದ ನಂತರವೂ, ಕಾವೇರಮ್ಮ ಕಾಲುದಾರಿಯಲ್ಲಿದ್ದ ಹೊಲಗಳ ಮಧ್ಯೆ ಏದುಸಿರು ಬಿಡುತ್ತಾ ಓಡಿ ಬರುತ್ತಿದ್ದಳು. ಮಧ್ಯೆ ಮಧ್ಯೆ ಹರೀ, ಹರೀಶಾ, ಹರೀಶಾ… ಎಂದು ಕೂಗುತ್ತಿದ್ದಳು. ಅವ್ವನ ಈ ಅವತಾರ ಕಂಡೇ ಏನೋ ಯಡವಟ್ಟಾಗಿದೆ ಎಂದು ಹರೀಶನಿಗೆ ಖಚಿತವಾಗಿ ಹೋಯಿತು. ಅವನು ಕಿಟಕಿಯಿಂದಲೆ- ‘ಅವ್ವಾ, ಬಸ್ ಸಿಕ್ಕಿದೆ ಹೋಗ್ತಾ ಇದೀನಿ. ಹೆದರಬೇಡ. ನಂಗೇನೂ ತೊಂದ್ರೆ ಇಲ್ಲ’ ಎನ್ನುತ್ತಿದ್ದವನು, ಛಕ್ಕನೆ ಮಾತು ನಿಲ್ಲಿಸಿ, ಸೀದಾ ಡ್ರೈವರ್ ಬಳಿ ಬಂದು- ‘ಸಾರ್, ನಮ್ಮಮ್ಮ ಓಡಿ ಬರ್ತಾದ ಇದಾರೆ. ನಾನು ಇಳ್ಕೋತೀನಿ. ಬಸ್ ನಿಲ್ಸಿ ಸಾರ್’ ಎಂದು ಗೋಗರೆದ. ಈ ಮಾತು ಕೇಳಿಸಲೇ ಇಲ್ಲ ಎಂಬಂತೆ ಡ್ರೈವರ್ ಕೂತಿದ್ದಾಗ ಮತ್ತೊಮ್ಮೆ ಅದೇ ಮಾತು ಹೇಳಿ ಕೈ ಮುಗಿದ. ಆ ವೇಳೆಗೆ, ದೂರದಲ್ಲಿ ಓಡೋಡಿ ಬರುತ್ತಿದ್ದ ಕಾವೇರಮ್ಮ ಡ್ರೈವರ್‌ಗೂ ಕಾಣಿಸಿದಳು. ಆತ ತಕ್ಷಣವೇ ಬಸ್ ನಿಲ್ಲಿಸಿದ. ಹರೀಶ ಬಸ್ ಇಳಿದು ಅಮ್ಮನ ಬಳಿ ಓಡೋಡಿ ಬಂದಾಗ, ಆ ಕಡೆ ಬಸ್ ಹೋಗೇಬಿಟ್ಟಿತು. ಹರೀಶ, ಕೆದರಿದ ತಲೆ, ನಡುಗುತ್ತಿದ್ದ ಕೈಕಾಲು, ಸಂಕಟದ ಮೋರೆಯಲ್ಲಿದ್ದ ತಾಯಿಯ ಮುಂದೆ ನಿಂತು -‘ ‘ಯಾಕವ್ವಾ, ಏನಾಯ್ತು?’ ಅಂದ. ಕಾವೇರಮ್ಮ ಸಂಕಟದ ಮುಖ ಮಾಡಿಕೊಂಡು-‘ಹರೀ, ನಿಮ್ಮ ಅಪ್ಪನ ಹತ್ರ ಸೈನ್ ಮಾಡಿಸಬೇಕಲ್ಲ; ಆ ಅರ್ಜಿ ಎಲ್ಲಿ?’ ಅಂದಳು. ಬಸ್ ಹಿಡಿಯುವ ಅವಸರದಲ್ಲಿ ತಾನು ಅರ್ಜಿಯನ್ನೇ ತಗೊಂಡಿಲ್ಲ ಎಂಬುದು ಹರೀಶನಿಗೆ ಆಗ ನೆನಪಾಯಿತು. ಮುದುರಿಕೊಂಡಿದ್ದ ಅದನ್ನು ಹರೀಶನಿಗೆ ಕೊಡುತ್ತಾ ಕಾವೇರಮ್ಮ ಹೇಳಿದಳು : ‘ಬಸ್‌ಚಾರ್ಜ್‌ಗೆ ಒಂದು ರೂಪಾಯಿ ಹೊಂದಿಸಬೇಕು ಮಗಾ. ಅಷ್ಟು ದುಡ್ಡೇ ಇರಲಿಲ್ಲ ನನ್ನ ಹತ್ರ. ಅದನ್ನೂ ಸಾಲ ತಂದುಕೊಟ್ಟೆ. ಈಗ ನೀನು ಹೋಗಿಬಿಟ್ಟಿದ್ರೆ, ಅರ್ಧ ದಾರಿಯಿಂದ ವಾಪಸ್ ಬರಬೇಕಿತ್ತು. ಆಗ ಮತ್ತೆ ಹೋಗಲು ಇನ್ನೂ ಒಂದ್ರುಪಾಯಿ ಸಾಲ ಮಾಡಬೇಕಿತ್ತು. ಮತ್ತೆ ಯಾರಲ್ಲಿ ಸಾಲ ಕೇಳಲಿ? ಅದನ್ನು ತಪ್ಪಿಸಬೇಕು ಅಂತಾನೇ ನಾನೂ ಓಡೋಡಿ ಬಂದೆ… ಸಂಜೆಯ ಬಸ್‌ಗೆ ಹೋದರಾಯ್ತು. ಮನೆಗೆ ಹೋಗೋಣ ಬಾ…’

ಪ್ರಿಯ ಓದುಗಾ, ಇವತ್ತು ಹರೀಶ ಈ ಬಡಾ ಬೆಂಗಳೂರಲ್ಲಿ ನೌಕರಿಯಲ್ಲಿದ್ದಾನೆ. ಅವನಿಗೆ ಭರ್ತಿ ೨೨ ಸಾವಿರ ಸಂಬಳ ಬರುತ್ತದೆ. ಹಾಗಿದ್ದರೂ ಮೂವತ್ತು ವರ್ಷಗಳ ಹಿಂದಿನ ಒಂದು ರೂಪಾಯಿ ನೋಟು ಅವನ ಬಳಿ ಈಗಲೂ ಇದೆ. ಇವತ್ತು ಯಾವ್ಯಾವುದೋ ಕಾರಣಕ್ಕೆ ಹರೀಶ ವಾರವಾರವೂ ಸಾವಿರಾರು ರೂಪಾಯಿ ಕಳೆಯುತ್ತಾನೆ. ಅಂಥ ಸಂದರ್ಭದಲ್ಲೆಲ್ಲ ಅವನಿಗೆ ಅಮ್ಮನ ನೆನಪಾಗುತ್ತದೆ. ಈಗ, ಊರಿಗೆ ಹೋದಾಗಲೆಲ್ಲ ಅಮ್ಮನ ಕೈಗೆ ಐನೂರರ ನೋಟುಗಳನ್ನೇ ಇಟ್ಟು ಬರುತ್ತಾನೆ ನಿಜ. ಆದರೆ, ಅಮ್ಮ ಕೊಟ್ಟಿದ್ದ ಆ ಒಂದು ರೂಪಾಯಿಗಿದ್ದ ಬೆಲೆ, ಆ ಅಂಗೈಯಗಲದ ನೋಟಿನ ಸಂಪಾದನೆಗೆ ಅವಳು ಪಟ್ಟ ಕಷ್ಟ ನೆನಪಾದರೆ ಅವನಿಗೆ ಕಣ್ತುಂಬಿ ಬರುತ್ತದೆ. ಆಗೆಲ್ಲ ಹರೀಶ ಬಿಕ್ಕಳಿಸುತ್ತಾ ಹೇಳುತ್ತಾನೆ:
ಅಮ್ಮಾ, ಯು ಆರ್ ಗ್ರೇಟ್…

‘ಪ್ರೀತಿ’ ಅಂದ್ರೆ ಏನು?

ಫೆಬ್ರವರಿ 3, 2010

ಈ ಪ್ರಶ್ನೆಗೆ ಹದಿಹರಯದವರ ಉತ್ತರಗಳು ಸಾಮಾನ್ಯವಾಗಿ ಹೀಗಿರುತ್ತವೆ. ಉತ್ತರ ಕೊಟ್ಟವರು ಹುಡುಗಿಯರಾದರೆ- ‘ಅವನ ಮೇಲಿನ ಪ್ರೀತಿಗೋಸ್ಕರ ಹೆತ್ತವರ ವಿರೋಧ ಕಟ್ಟಿಕೊಂಡೆ, ಬಂಧುಗಳನ್ನು ದೂರ ಮಾಡಿಕೊಂಡೆ, ಅದೆಷ್ಟೋ ಜನರಿಂದ ಕೆಟ್ಟ ಮಾತು ಕೇಳಿದೆ. ಅವಮಾನ ಸಹಿಸಿಕೊಂಡೆ. ಅದೇ ಪ್ರೀತಿ … ಎಂದೆಲ್ಲಾ ಹೇಳುತ್ತಾರೆ.

ಹುಡುಗರಾದರೆ- ಅವಳಿಗೋಸ್ಕರ ಹೊಸ ಬೈಕು ತಗೊಂಡೆ, ಸೈಟ್ ತಗೊಂಡೆ, ಕೆಲಸ ಕಳೆದುಕೊಂಡೆ. ಐದಾರು ಬಾರಿ ಅವಳ ಅಣ್ಣ ತಮ್ಮಂದಿರಿಂದ ಒದೆ ತಿಂದೆ, ಅವಳಿಗೋಸ್ಕರ ಅಂತಾನೇ ಸಾವಿರ ಸಾವಿರ ಖರ್ಚು ಮಾಡಿದೆ. ಮನೆಮಂದಿಯ ಪ್ರೀತಿ ಕಳೆದುಕೊಂಡೆ, ಮಾನಸಿಕ ನೆಮ್ಮದೀನೂ ಕಳಕೊಂಡೆ. ಪ್ರೀತಿ ಅಂದ್ರೆ ಏನೆಂದು ತೋರಿಸೋಕೆ ಅಂತಾನೇ ಅವಳಿಗೆ ಆರು ಬಾರಿ ರಕ್ತದಲ್ಲಿ ಪತ್ರ ಬರೆದುಕೊಟ್ಟೆ ಅನ್ನುತ್ತಾರೆ!
ಆದರೆ, ಪ್ರೀತಿ ಅಂದ್ರೆ ಏನು ಎಂಬ ಪ್ರಶ್ನೆಯನ್ನು ೪ ರಿಂದ ೮ ವರ್ಷದ ಮಕ್ಕಳಿಗೆ ಕೇಳಿದಾಗ ಅವರು ನೀಡಿದ ಸ್ವಾರಸ್ಯಕರ ಉತ್ತರಗಳನ್ನು ಇಲ್ಲಿ ನೀಡಲಾಗಿದೆ. ಇಲ್ಲಿ ಮಕ್ಕಳ ಹೆಸರಿದೆ, ಅವರ ವಯಸ್ಸೂ ಇದೆ. ಇದು ಇಂಟರ್‌ನೆಟ್‌ನಲ್ಲಿ ಸಿಕ್ಕ ಮಾಹಿತಿ…….

* ನಮ್ಮ ಅಜ್ಜಿಗೆ ಆರ್ಥರೈಟಿಸ್ ಕಾಯಿಲೆ ಅಮರಿಕೊಂಡು ಬಿಡ್ತು. ಅವತ್ತಿಂದ ಅಜ್ಜಿಗೆ ಕೈ ಕಾಲಿನ ಬೆರಳುಗಳನ್ನು ಮಡಿಚುವುದಕ್ಕಾಗಲಿ, ಸರಾಗವಾಗಿ ಓಡಾಡುವುದಕ್ಕಾಗಲಿ, ಚಿಕ್ಕಪುಟ್ಟ ಕೆಲಸ ಮಾಡುವುದಕ್ಕಾಗಲಿ ಆಗ್ತಾ ಇರಲಿಲ್ಲ. ಅಂಥ ಸಂದರ್ಭದಲ್ಲಿ ಅಜ್ಜಿಗಿಂತ ಹನ್ನೆರಡು ವರ್ಷಕ್ಕೆ ಹಿರಿಯರಾಗಿದ್ದ ನನ್ನ ಅಜ್ಜ, ಹೆಂಡತಿಯ ಸೇವೆಗೆ ನಿಂತು ಬಿಟ್ರು. ದಿನಾಲೂ ಬೆಳಗ್ಗೆ, ಮಧ್ಯಾಹ್ನ, ಸಂಜೆಯ ಹೊತ್ತು ಅಜ್ಜಿಯ ಕೈ-ಕಾಲಿನ ಬೆರಳುಗಳಿಗೆ, ಮೊಣಕೈಗೆ, ಹಿಂಗಾಲಿಗೆ ಮಸಾಜು ಮಾಡುವುದೇ ಅಜ್ಜನ ಕೆಲಸ ಆಗಿಬಿಡ್ತು. ಮುಂದೊಂದು ದಿನ ಅಜ್ಜನಿಗೇ ಆರ್ಥರೈಟಿಸ್ ಬಂದುಬಿಡ್ತು. ಆಗ ಕೂಡ ಅಜ್ಜ, ಅಜ್ಜಿಗೆ ಮಸಾಜ್ ಮಾಡೋದನ್ನು ನಿಲ್ಲಿಸಲಿಲ್ಲ. ನಿಜವಾದ ಪ್ರೀತಿ ಅಂದ್ರೆ ಅದೇ.
-ರೆಬೆಕಾ, ೮ ವರ್ಷ.

* ಆಟವಾಡಲು ಹೋಗುವ ಮುನ್ನ ಏಳು ವಯಸ್ಸಿನ ಹುಡುಗಿ ಬಟ್ಟೆ ತುಂಬಾ ಪರ್‌ಫ್ಯೂಮ್ ಹಾಕ್ಕೊಂಡಿರ‍್ತಾಳೆ. ಅವಳದೇ ವಯಸ್ಸಿನ ಹುಡುಗ ಕೆನ್ನೆಗೆ ಆಫ್ಟರ್ ಶೇವ್ ಲೋಷನ್ ಹಾಕ್ಕಂಡಿರ‍್ತಾನೆ. ಆಟದ ಸಂದರ್ಭದಲ್ಲಿ, ಈ ಘಮಘಮ ವಾಸನೆ ತುಂಬಾ ಚನ್ನಾಗಿದೆ ಅಲ್ವ ಎಂದು ಅವರಿಬ್ರೂ ಪರಸ್ಪರ ಹೇಳಿಕೊಳ್ತಾರೆ ನೋಡಿ- ಅದೇ ಪ್ರೀತಿ.
-ಬಿಲ್ಲಿ, ೪ ವರ್ಷ.

* ಪಾನಿಪೂರಿ, ಗೋಬಿಮಂಚೂರಿ ತಿಂದು ಚ್ಯೂಸ್ ಕುಡಿದು ಬರೋಣ ಅಂತ ಹೊರಗೆ ಹೋಗಿದ್ದಾಗ, ತಿಂಡಿಗೆ ಬಾಯಿ ಹಾಕುವ ಮೊದಲೇ ಒಂದಷ್ಟು ಜನ ಬಡವರು ಬಂದು ‘ಅಮ್ಮಾ ಹಸಿವು…’ ಅಂತಾರೆ. ಅಂಥ ಸಂದರ್ಭದಲ್ಲಿ ಅವರಿಗೆ ಹೊಟ್ಟೆ ತುಂಬುವಷ್ಟು ಊಟ ಹಾಕಿಸಿ, ಅವರು ಸಂತೃಪ್ತಿಯಿಂದ ತೇಗುವುದನ್ನು ಕಂಡು ಖುಷಿಪಡುವುದಿದೆಯಲ್ಲ? ಅದೇ ಪ್ರೀತಿ.
-ರಾಮುಲು, ೬ ವರ್ಷ.

* ಅಪ್ಪ-ಅಮ್ಮ, ಬಂಧು-ಬಳಗ, ಗುರು-ಹಿರಿಯರು ಮತ್ತು ಇತರರಿಗೆ ನಮ್ಮಿಂದ ಯಾವ ಸಂದರ್ಭದಲ್ಲಿಯೂ ನೋವಾಗದಂತೆ ನೋಡಿಕೊಳ್ಳುವುದೇ ನಿಜವಾದ ಪ್ರೀತಿ.
-ಗೀತಾಂಜಲಿ, ೮ ವರ್ಷ.

* ಕೆಲಸದ ಒತ್ತಡ ಅಥವಾ ಯಾವುದೋ ಸಂಕಟದ ಕಾರಣದಿಂದ ನಾವು ವಿಪರೀತ ಸುಸ್ತಾಗಿದ್ದಾಗ, ಜೊತೆಗಿದ್ದವರು ನಮ್ಮ ಮುಖದಲ್ಲಿ ನಗು ಅರಳಿಸಲು ಪ್ರಯತ್ನಿಸ್ತಾರಲ್ಲ- ಅದು ನಿಜವಾದ ಪ್ರೀತಿಯ ಲಕ್ಷಣ.
-ಮೇರಿ, ೬ ವರ್ಷ.

* ನಮ್ಮ ಡ್ಯಾಡಿ ಸಂಜೆ ಆಫೀಸಿನಿಂದ ಬರ‍್ತಾರಲ್ಲ? ಆಗ ಕಾಫಿ ತಯಾರಿಸಿದ ಅಮ್ಮ, ಪಪ್ಪಂಗೆ ಕೊಡುವ ಮೊದಲೇ ಒಂದು ಗುಟುಕು ಕುಡಿದು, ರುಚಿ ಸರಿಯಾಗಿದೆ ಎಂದು ಗ್ಯಾರಂಟಿ ಮಾಡಿಕೊಂಡು, ನಂತರವಷ್ಟೇ ಕಾಫಿ ಕೊಟ್ಟು, ರಿಲ್ಯಾಕ್ಸ್ ಆಗಿ ಎನ್ನುತ್ತಾ, ಮೃದುವಾಗಿ
ಪಪ್ಪನ ತಲೆ ನೇವರಿ ಸುತ್ತಾಳಲ್ಲ? ಅದು ಪ್ರೀತಿ.
-ಡ್ಯಾನಿ, ೭ ವರ್ಷ.

* ತುಂಬ ದ್ವೇಷಿಸುವ ಗೆಳೆಯ/ಗೆಳತಿಯ ಬದುಕು ಸಂಕಷ್ಟಕ್ಕೆ ಸಿಕ್ಕಿಕೊಂಡಿದೆ ಅಂದಾಗ, ತಕ್ಷಣವೇ ಅವರ ನೆರವಿಗೆ ಧಾವಿಸುವುದಿದೆಯಲ್ಲ- ಪ್ರೀತಿಯೆಂದರೆ ಅದೇ, ಅದೇ.
-ಅಮೃತಾ, ೮ ವರ್ಷ.

* ಬರ್ತ್‌ಡೇ ಖುಷಿಯಲ್ಲಿದ್ದ ಮಗು, ತನಗಾಗಿ ತಂದಿದ್ದ ಉಡುಗೊರೆಗಳನ್ನು, ಹೊಸ ಬಟ್ಟೆಗಳನ್ನು ಅಲ್ಲಿರುವ ಎಲ್ಲ ಮಕ್ಕಳಿಗೂ ಹಂಚಬೇಕು ಎಂದು ಪಟ್ಟುಹಿಡಿದು ಅಳುತ್ತದಲ್ಲ- ಅದು ಪ್ರೀತಿ.
-ಬಾಬ್ಬಿ, ೭ ವರ್ಷ.
* ನೀನು ಈ ಡ್ರೆಸ್‌ನಲ್ಲಿ ತುಂಬ ಚನ್ನಾಗಿ ಕಾಣ್ತೀಯ ಎಂದು ತಮಾಷೆಗೆ ಹೇಳಿದ್ರೆ, ಅದನ್ನೇ ನಿಜವೆಂದು ನಂಬಿ, ನಂತರದ ಪ್ರತಿ ಭೇಟಿಯಲ್ಲೂ ಆ ಡ್ರೆಸ್‌ನಲ್ಲೇ ಗೆಳೆಯ/ಗೆಳತಿ ಕಾಣಿಸಿಕೊಳ್ತಾರಲ್ಲ? ಅದೇ ಶುದ್ಧ ಪ್ರೀತಿ.
-ಹಾರಿಕಾ, ೬ ವರ್ಷ.

* ಈಗಲೋ ಆಗಲೋ ಸಾಯಬಹುದು ಎಂಬಂತೆ ಕಾಣುವ ಅಜ್ಜ-ಅಜ್ಜಿ, ಭರ್ತಿ ೬೦ ವರ್ಷ ಜತೆಯಾಗಿ ಬದುಕಿದ ನಂತರವೂ ನೆನ್ನೆಯಷ್ಟೇ ಪರಿಚಯವಾದವರಂತೆ ಹರಟುತ್ತಾ ಕೂತಿರುತ್ತಾರಲ್ಲ? ಅದೇ ನಿಜವಾದ ಪ್ರೀತಿ.
-ಜೋಸಫಿನ್, ೯ ವರ್ಷ.

* ಆಟವಾಡುವಾಗ ಜಾರಿ ಬಿದ್ದು ಗಾಯ ಮಾಡಿಕೊಂಡಿದ್ದರೂ, ಅದನ್ನು ಕಂಡರೆ ಅಮ್ಮನಿಗೆ ಬೇಸರವಾಗುತ್ತೆ ಎಂಬ ಕಾರಣಕ್ಕೆ ಸತ್ಯ ಹೇಳದೆ, ಅನಿವಾರ‍್ಯವಾಗಿ ಸುಳ್ಳು ಹೇಳಿ ಆಕೆಯನ್ನು ಖುಷಿಪಡಿಸಲು ಒಂದು ಮಗು ಪ್ರಯತ್ನಿಸುತ್ತೆ ನೋಡಿ- ಅದೇ ಪ್ರೀತಿ.
-ಜೆಸ್ಸಿಕಾ, ೮ ವರ್ಷ.

* ಅವತ್ತು ನನ್ನ ಅರಂಗೇಟ್ರಂ ನಡೆಯಲಿತ್ತು. ಮೇಕಪ್ ಮುಗಿಸಿಕೊಂಡು ಸಭಾಂಗಣಕ್ಕೆ ಬಂದು ನೋಡಿದರೆ- ಜನಜಾತ್ರೆ! ಅಷ್ಟೊಂದು ಜನರನ್ನು ಕಂಡದ್ದೇ ನನಗೆ ನನಗೆ ಮೈ ನಡುಕ ಶುರುವಾಯಿತು. ಕಾಲುಗಳು ಗಡಗಡ ನಡುಗಲು ಶುರುಮಾಡಿ ದವು. ಪ್ರೇಕ್ಷಕರೆಲ್ಲ ನನ್ನನ್ನೇ ನೋಡುತ್ತಿದ್ದರು. ನಾನು ಗಾಬರಿಯಿಂದ ಪ್ರೇಕ್ಷಕರ ಮಧ್ಯೆ ಕೂತಿದ್ದ ತಂದೆಯ ಕಡೆ ನೋಡಿದೆ. ಅಪ್ಪ ಸಂಭ್ರಮದಿಂದ ನಗುತ್ತ, ನನಗಷ್ಟೇ ಅರ್ಥವಾಗುವಂತೆ- ಗೆದ್ದು ಬಾ ಮಗಳೇ ಎಂದರು. ಅಪ್ಪನ ಮಾತು ‘ಅರ್ಥವಾದ’ ತಕ್ಷಣ ನನ್ನ ಮೈ ನಡುಕ ನಿಂತು ಹೋಯಿತು. ಹೌದು, ನನ್ನ ಮಟ್ಟಿಗೆ ಅದೇ ನಿಜವಾದ ಪ್ರೀತಿ.
-ಪ್ರತಿಭಾ, ೭ ವರ್ಷ.

* ಮಲಗಿರುವ ಕಂದನ ಹಣೆಗೆ, ಅದಕ್ಕೆ ಗೊತ್ತಾಗದಂತೆ ಚುಂಬಿಸಿ, ಅಮ್ಮ ಖುಷಿಪಡ್ತಾಳೆ ನೋಡಿ; ಅದೇ ನಿಜವಾದ ಪ್ರೀತಿ.

-ಕ್ಲಾರಾ, ೫ ವರ್ಷ.
* ಅಮ್ಮನ ಗೈರು ಹಾಜರಿಯಲ್ಲಿ ಮಕ್ಕ ಳೊಂದಿಗೆ ಊಟಕ್ಕೆ ಕೂತ ತಂದೆ, ಪಾತ್ರೆಯಲ್ಲಿ ಒಂದೇ ಒಂದು ಅಗುಳೂ ಉಳಿದಿಲ್ಲ ಎಂದು ತಿಳಿದನಂತರ ಕೂಡ- ‘ಕಂದಾ, ಹೊಟ್ಟೆ ತುಂಬಿದ್ಯಾ? ಇನ್ನೂ ಸ್ವಲ್ಪ ಊಟ ಬೇಕಾ?’ ಅಂತ ಆಸೆಯಿಂದ ಕೇಳ್ತಾನಲ್ಲ- ಅದೇ ಪ್ರೀತಿ.
-ಜಾಕೋಬ್, ೭ ವರ್ಷ.

* ಬೆಳಗಿಂದ ಸಂಜೆಯವರೆಗೂ ಟಾಮಿಯನ್ನು ಒಂಟಿಯಾಗಿ ಬಿಟ್ಟು ಹೋದರೂ, ಸಂಜೆ ಮನೆಯ ಜನರೆಲ್ಲ ಬಂದ ತಕ್ಷಣ ಅದು ಓಡೋಡಿ ಬಂದು ಎಲ್ಲರ ಕೈ, ಕಾಲಿಗೆ ತಾಕಿಕೊಂಡೇ ಓಡಾಡುತ್ತಾ, ಎಲ್ಲರಿಂದಲೂ ತನ್ನನ್ನು ಮುದ್ದು ಮಾಡಿಸಿಕೊಳ್ಳುತ್ತ, ಆಗಾಗ್ಗೆ ಹುಸಿಕೋಪ ತೋರುತ್ತದಲ್ಲ? ಅದೇ ಪ್ರೀತಿ.
-ರ‍್ಯಾಂಡಿ, ೪ ವರ್ಷ.

* ಗ್ಯಾಂಗ್ರಿನ್‌ಗೆ ಒಳಗಾಗಿ ಕೈ ಕತ್ತರಿಸಿಕೊಂಡ ಗಂಡನ ಮುಂದೆ ಕುಳಿತು, ‘ನಿಮಗೆ ಏನೂ ಆಗಿಲ್ಲ ರೀ, ಈಗಲೂ ನೀವು ಬಹಳ ಚನ್ನಾಗಿ ಕಾಣ್ತಿದೀರ’ ಎಂದು ಹೆಂಡತಿ ಧೈರ‍್ಯ ಹೇಳ್ತಾಳಲ್ಲ, ಅದೇ ನಿಜವಾದ ಪ್ರೀತಿ.
-ಕೆವಿನ್ ಕರೇನ್, ೬ ವರ್ಷ.

* ಅಮ್ಮ ಹುಷಾರಿಲ್ಲದೆ ಮಲಗಿದ್ದಾಗ, ಹಿಂದೆ ಆಕೆ ಮಾಡಿದ್ದ ಪ್ರಾರ್ಥನೆಯನ್ನೇ ಅರೆಬರೆಯಾಗಿ ನೆನಪು ಮಾಡಿಕೊಂಡು ದೇವರ ಮುಂದೆ ಕುಳಿತ ಪುಟ್ಟ ಮಗು- ‘ನಮ್ಮ ಅಮ್ಮನಿಗೆ ಒಳ್ಳೆಯದು ಮಾಡಪ್ಪಾ’ ಎಂದು ಪ್ರಾರ್ಥಿಸುತ್ತಾ ಕಂಬನಿ ಮಿಡಿಯುತ್ತದಲ್ಲ; ಈ ಮಾತುಗಳನ್ನು ಆಕಸ್ಮಿಕವಾಗಿ ಕೇಳಿಸಿಕೊಂಡ ಅಮ್ಮ ಹಾಸಿಗೆಯಲ್ಲೇ ಕಣ್ಣೀರಾಗುತ್ತಾಳಲ್ಲ. ಅದೇ ಪ್ರೀತಿ.
-ಅಮೆಂಡೋ, ೭ ವರ್ಷ.

* ಸೋತು ಬಂದವರನ್ನು ಎಲ್ಲರೂ ಹೀಗಳೆಯುತ್ತಿದ್ದಾಗ ಅವನನ್ನು ಪಕ್ಕಕ್ಕೆ ಕರೆದು- ‘ಇದಕ್ಕೆಲ್ಲ ಯೋಚನೆ ಮಾಡಬೇಡ. ಸೋಲೇ ಗೆಲುವಿನ ಸೋಪಾನ’ ಎಂದು ಸಮಾಧಾನ ಹೇಳುವ ಅಪರಿಚಿತನ ಮಾತಿದೆಯಲ್ಲ; ಅದೇ ಪ್ರೀತಿ.
-ಸ್ಟೀವನ್‌ಸನ್, ೬ ವರ್ಷ

* ಮನೆಯ ಮುಂದೆ ಕಡ್ಲೆಕಾಳಿನಷ್ಟು ಗಾತ್ರದ ಬೆಲ್ಲದ ಚೂರನ್ನು ಐದಾರು ಇರುವೆಗಳು ಹೊತ್ತೊಯ್ಯುವುದನ್ನು ಕಂಡ ಮಗು, ಸರಸರನೆ ಒಳಗೆ ಹೋಗಿ ಎರಡು ಸ್ಪೂನ್ ಸಕ್ಕರೆ ತಂದು ಅವುಗಳ ಮುಂದೆ ಹಾಕಿ- ‘ಹೊಟ್ಟೆ ತುಂಬ ತಿನ್ನಿ’ ಎಂದು ಹೇಳುವ ಮಾತಿದೆಯಲ್ಲ? ಅದು ನಿಜವಾದ ಪ್ರೀತಿ.
-ಟಬು, ೮ ವರ್ಷ.

* ರಾತ್ರಿ ಊಟ ಮಾಡುತ್ತಾ, ಆಗಸದಲ್ಲಿರುವ ಚಂದ್ರನನ್ನೇ ಖುಷಿಯಿಂದ ನೋಡುವ ಮಗು- ‘ಊಟ ಮಾಡೋಣ ಬಾರೋ’ ಎಂದು ಕೂಗುವುದು; ಅವನು ಬರದೇ ಹೋದಾಗ ಒಂದು ತುತ್ತು ತೆಗೆದು ಕೆಳಗಿಟ್ಟು- ‘ನಾನು ಅವಿತುಕೊಂಡಿರ‍್ತೀನಿ ಬೇಗ ಬಂದು ತಿಂದ್ಕೊಂಡು ಹೋಗು’ ಎನ್ನುತ್ತಾ ಬಾಗಿಲ ಮರೆಯಲ್ಲಿ ಅಡಗಿ ನಿಲ್ಲುತ್ತದಲ್ಲ? ಅದು ಪ್ರೀತಿ.
-ಕಾರ್ತಿಕ್ ಆರ್. ರೆಡ್ಡಿ, ೫ ವರ್ಷ.

* ಪಕ್ಕದ ಮನೆಯ ಆಂಟಿ ಡಿಢೀರನೆ ತೀರಿಕೊಂಡ್ರು. ದಿಕ್ಕು ತೋಚದಂತಾದ ಅಂಕಲ್ ಚೋರಾಗಿ ಅಳಲು ಶುರುಮಾಡಿದ್ರು. ಅದನ್ನು ಕಂಡು ನಾನು ಒಂದೊಂದೇ ಹೆಜ್ಜೆ ಇಡ್ತಾ ಅಂಕಲ್ ಹತ್ರ ಹೋದೆ. ಅವರ ತೊಡೆ ಹತ್ತಿ ಕೂತ್ಕೊಂಡೆ. ನಂತರ ಅವರ ಕಣ್ಣೀರು ಒರೆಸೋಕೆ ಹೋದೆ. ತಕ್ಷಣವೇ ನನಗೂ ವಿಪರೀತ ಅಳು ಬಂತು. ಅವರ ಜೊತೆಗೇ ಅಳುತ್ತಾ ಕೂತುಬಿಟ್ಟೆ. ಆಗ ಅಂಕಲ್, ತಮ್ಮ ದುಃಖ ಮರೆತು, ನನ್ನನ್ನು ಸಮಾಧಾನ ಮಾಡೋಕೆ ನಿಂತರು. ನಿಜವಾದ ಪ್ರೀತಿ ಅಂದ್ರೆ ಅದೇ.
-ರೂಪ್ ಕನ್ವರ್, ೬ ವರ್ಷ.

* ಬಿಸಿಲು ಕಾಯುತ್ತ ಕೂತ ಮಗು, ದಿಢೀರನೆ ಬಿಸಿಲು ಹೆಚ್ಚಿದಾಗ ಆಕಾಶದ ಸೂರ‍್ಯನನ್ನೇ ನೋಡುತ್ತಾ- ‘ನಂಗೆ ಚುರು ಚುರು ಅನ್ನಿಸ್ತೀಯಾ? ನಿಂಜೊತೆ ‘ಠೂ’ ಎಂದು ಮುಖ ಊದಿಸಿಕೊಂಡು ಒಳಗೆ ಹೋಗಿ ಅಮ್ಮನಿಗೆ ಸೂರ್ಯನ ಮೇಲೆ ದೂರು ಹೇಳುತ್ತದಲ್ಲ? ಅದೇ ಪ್ರೀತಿ.
-ವಿಕ್ರಮನ್, ೬ ವರ್ಷ.

ಇಲ್ಲಿಂದಲೇ ಕೈ ಮುಗಿದರೆ ಅಲ್ಲಿಂದಲೇ ಹರಸಿದರು!

ಫೆಬ್ರವರಿ 3, 2010

ನಮ್ಮಲ್ಲಿ ಹೆಚ್ಚಿನವರು ಅಂಥದೊಂದು ಕೆಲಸ ಮಾಡುತ್ತಾರೆ. ಏನೆಂದರೆ -ಮನಮೆಚ್ಚಿದ ಹುಡುಗ/ ಹುಡುಗಿಯನ್ನು ವರ್ಣಿಸಿ ಪದ್ಯ ಬರೆಯುತ್ತಾರೆ. ಒಂದು ವೇಳೆ ಹೀಗೆ ಬರೆಸಿಕೊಂಡವರು ನಂತರ ಕೈ ತಪ್ಪಿ ಹೋದರೆ, ಅದೇ ನೆನಪಿನಲ್ಲಿ ಮತ್ತಷ್ಟು ಪದ್ಯ ಬರೆಯುತ್ತಾರೆ. ಆ ಪದ್ಯಗಳಲ್ಲಿ ಅವಳ(ನ)ನ್ನು ಯಾವುದೋ ಒಂದು ಗುಪ್ತ ಹೆಸರಿಂದ ಕರೆಯುತ್ತಾರೆ. ಅದನ್ನು ಪರಮಾಪ್ತರ ಮುಂದೆ ಹೇಳಿಕೊಂಡು ಎದೆಯನ್ನು ಹಗುರ ಮಾಡಿಕೊಳ್ಳುತ್ತಾರೆ. ಹಿಂದೆಯೇ ‘ಇದು ಗುಟ್ಟಿನ ವಿಚಾರ. ಯಾರಿಗೂ ಹೇಳಬಾರ‍್ದು ಪ್ಲೀಸ್’ ಎಂಬ ಎಚ್ಚರಿಕೆಯನ್ನೂ ನೀಡುತ್ತಾರೆ. ಇಂಥ ವಿಷಯಗಳಲ್ಲಿ ಹುಡುಗಿಯರಿಗಿಂತ ಹುಡುಗರೇ ಮುಂದಿರುತ್ತಾರೆ. ಸ್ವಾರಸ್ಯವೆಂದರೆ, ಕೈ ತಪ್ಪಿ ಹೋದ (ಒಂದೊಂದು ಸಂದರ್ಭದಲ್ಲಿ ಮೋಸ ಮಾಡಿ ಹೋದ) ಹುಡುಗಿಯನ್ನೂ ಮಲ್ಲಿಗೆ, ಸಂಪಿಗೆ, ಅಪ್ಸರೆ, ಕರುಣಾಮಯಿ ಎಂದೆಲ್ಲಾ ವರ್ಣಿಸಿರುತ್ತಾರೆ- ಪದ್ಯಗಳಲ್ಲಿ.
ಬದುಕಿದ್ದ ಅಷ್ಟೂ ದಿನ ಪ್ರೀತಿಯನ್ನೇ ಉಸಿರಾಡಿದವರು, ಪ್ರೀತಿಯನ್ನೇ ಧ್ಯಾನಿಸಿದವರು, ಪ್ರೀತಿಯ ಬಗ್ಗೆಯೇ ಬರೆದವರು ಕೆ.ಎಸ್. ನರಸಿಂಹಸ್ವಾಮಿ. ಒಂದೆರಡಲ್ಲ, ಒಟ್ಟು ಹದಿನೇಳು ಕವನ ಸಂಕಲನಗಳನ್ನೂ ಪ್ರಕಟಿಸಿದ್ದು ಅವರ ಹೆಚ್ಚುಗಾರಿಕೆ. ಸ್ವಾರಸ್ಯವೆಂದರೆ, ಎಲ್ಲ ಪದ್ಯಗಳಲ್ಲೂ ‘ಪ್ರೀತಿ’ಯ ವಿಷಯವನ್ನೇ ಜತೆಗಿಟ್ಟುಕೊಂಡು ಕಾವ್ಯದ ಮಾಲೆ ಕಟ್ಟಿದವರು ಕೆ.ಎಸ್.ನ. ಉಳಿದೆಲ್ಲ ಕವಿಗಳೂ ಆರಂಭದ ದಿನಗಳಲ್ಲಿ ವಯೋ ಸಹಜ ಎಂಬಂತೆ ಪ್ರೇಮಗೀತೆ ಬರೆದು ನಂತರದಲ್ಲಿ ಕಾವ್ಯದ ಬೇರೆ ಬೇರೆ ಪ್ರಾಕಾರಕ್ಕೆ ಹೊರಳಿಕೊಂಡರು ನಿಜ. ಆದರೆ, ೮೫ ತುಂಬಿದ ನಂತರವೂ ಕೆ.ಎಸ್.ನ ಪ್ರೀತಿ- ಪ್ರೇಮದ ಪಲ್ಲಕ್ಕಿಯಲ್ಲಿ ಕುಳಿತೇ ಮಲ್ಲಿಗೆ, ಸಂಪಿಗೆ, ಜಾಜಿ, ಮುರುಗದಂಥ ಮಧುರಾತಿ ಮಧುರ ಹಾಡು ಕಟ್ಟಿದರು. ಅವರ ಪದ್ಯಗಳೆಲ್ಲ ಆಗಷ್ಟೇ ಅರಳಿದ ಪಾರಿಜಾತದ ಘಮದಂತೆ ‘ಫ್ರೆಶ್’ ಆಗಿದ್ದವು. ತಾಜಾ ಆಗಿದ್ದವು.
ಮುತ್ತನಿಡುವೆನು ಅರಳು ಪ್ರೇಮದ ಗುಲಾಬಿಯೇ
ಮುತ್ತನಿಡುವೆನು, ನಕ್ಕು, ಮುತ್ತ ಸುರಿಸು
ಸುತ್ತಸಾವಿರ ಹೂವು ಕತ್ತೆತ್ತಿ ನೋಡಿದರೆ
ಅತ್ತ ಹೋಗದಿದು, ನಿನ್ನ ಹಿಡಿದ ಮನಸು.
***
ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ
ನಿನ್ನೊಳಿದೆ ನನ್ನ ಮನಸು
ಹುಣ್ಣಿಮೆಯ ರಾತ್ರಿಯಲಿ ಉಕ್ಕುವುದು ಕಡಲಾಗಿ
ನಿನ್ನೊಲುಮೆ ನನ್ನ ಕಂಡು
***
ತಾರೆಯಿಂದ ತಾರೆಗವಳು ಅಡಿಯಿಡುವುದ ಕಂಡೆನು
ಹೂವನಸೆದು ನಡೆದಳವಳು ಒಂದೆರಡನು ತಂದೆನು
ಇವಳು ಯಾರು ಬಲ್ಲಿರೇನೂ….
***
ನಡು ಬೆಟ್ಟದಲ್ಲಿ ನಿನ್ನೂರು
ಅಲ್ಲಿಹವು ನವಿಲು ಮುನ್ನೂರು
ಮುನ್ನೂರು ನವಿಲು ಬಂದಂತೆ
ನೀ ಬಂದರೆನಗೆ; ಸಿರಿವಂತೆ
ಅಂತಿಂಥ ಹೆಣ್ಣು ನೀನಲ್ಲ…
ಹೀಗೆಲ್ಲ ಬರೆದವರು ಕೆ.ಎಸ್.ನ. ಪದ್ಯಗಳಲ್ಲಿ ಮೀನಾಕ್ಷಿ, ಕಾಮಾಕ್ಷಿ, ರತ್ನ, ಪದುಮ, ಗೌರಿ, ಶಾರದೆ ಎಂದೆಲ್ಲ ಕರೆಸಿಕೊಂಡ ಅವರ ಕಥಾನಾಯಕಿಗೆ ಯಾವಾಗಲೂ ೨೫ರ ಏರು ಹರೆಯ! ಆಕೆ ಸುಂದರಿ, ಸುಶೀಲೆ, ಸೊಗಸುಗಾತಿ ಮತ್ತು ಕರುಣಾಮಯಿ. ಕೆ.ಎಸ್.ನ. ಅವರ ಪದ್ಯಗಳನ್ನು ಖುಷಿ ಹಾಗೂ ಬೆರಗಿನಿಂದ ಓದುತ್ತಿದ್ದ ಹಲವರು ತಮ್ಮ ತಮ್ಮೊಳಗೇ ಹೀಗೆ ಪಿಸುಗುಡುತ್ತಿದ್ದುದುಂಟು: ‘ಬಹುಶಃ ಕೆ.ಎಸ್.ನ. ಕೂಡ ಯಾರನ್ನೋ ಪ್ರೀತಿಸಿದ್ರು ಅಂತ ಕಾಣುತ್ತೆ. ಮುಂದೆ, ಆಕೆ ಕೈ ತಪ್ಪಿ ಹೋಗಿರಬೇಕು. ಅದೇ ನೆನಪಲ್ಲಿ ಅವರು ಒಂದೊಂದೇ ಪದ್ಯ ಬರೆದಿದ್ದಾರೆ ಅನಿಸುತ್ತೆ. ತಮ್ಮ ಮನಸ್ಸು ಗೆದ್ದವಳ ಗುರುತು ಯಾರಿಗೂ ಸಿಗದಿರಲಿ ಎಂಬ ಕಾರಣದಿಂದಲೇ ಅವರು ಕಥಾ ನಾಯಕಿಗೆ ಬಗೆ ಬಗೆಯ ಹೆಸರು ಕೊಟ್ಟಿರಬೇಕು. ಇದೇ ಸತ್ಯವಿರಬೇಕು. ಪ್ರೇಯಸಿಯ ಬಗ್ಗೆ ಬರೆಯಲು ಹೊರಟರೆ ಪದ್ಯ ತಾನಾಗೇ ಸೃಷ್ಟಿಯಾಗುತ್ತೆ. ಅಂದುಕೊಂಡಿದ್ದಕ್ಕಿಂತ ಚನ್ನಾಗಿಯೂ ಇರುತ್ತೆ. ಅದು ಬಿಟ್ಟು ಯಾರಾದ್ರೂ ಹೆಂಡತಿಯ ಮೇಲೆ ಇಷ್ಟೊಂದು ಚೆಂದ ಚೆಂದದ ಪದ್ಯಗಳನ್ನು ಬರೀತಾರಾ? ಹೆಂಡತೀನ ಉದಾಹರಣೆ ಇಟ್ಕೊಂಡು ಒಳ್ಳೇ ಪದ್ಯ ಬರೆಯೋಕಾಗುತ್ತಾ? ಛೆ, ಇರಲಿಕ್ಕಿಲ್ಲ ಬಿಡ್ರಿ…
ಮುಂದೊಂದು ದಿನ ಇಂಥ ಪಿಸುಮಾತುಗಳೆಲ್ಲ ಕೆ.ಎಸ್.ನ. ಅವರ ಪತ್ನಿ ಶ್ರೀಮತಿ ವೆಂಕಮ್ಮನವರ ಕಿವಿಗೂ ಬಿದ್ದವು. ಅದೊಂದು ದಿನ ಕೆ.ಎಸ್.ನ ಅವರ ಮಗ್ಗುಲಲ್ಲಿ ಕೂತೇ ವೆಂಕಮ್ಮನವರು ತುಂಬ ಸ್ಪಷ್ಟವಾಗಿ ಹೇಳಿದ್ದರು: ನಮ್ಮ ಯಜಮಾನರು ಶ್ರೀ ರಾಮಚಂದ್ರ ಇದ್ದ ಹಾಗೆ, ಬೇರೊಂದು ಹೆಣ್ಣನ್ನು ಅವರು ಕಣ್ಣೆತ್ತಿ ಕೂಡ ನೋಡಿದವರಲ್ಲ. ಅವರ ಪದ್ಯಗಳಲ್ಲಿ ಬರುವ ಕಾಮಾಕ್ಷಿ, ಪದುಮ, ಗೌರಿ, ರತ್ನ, ಮೀನಾಕ್ಷಿ ಎಲ್ಲವೂ ನಾನೇ. ‘ವೆಂಕಮ್ಮ’ ಅನ್ನೋ ಹೆಸರು ಪದ್ಯದಲ್ಲಿ ಚನ್ನಾಗಿ ಕಾಣಿಸೋದಿಲ್ಲ ನೋಡಿ; ಹಾಗಾಗಿ ಸ್ವಲ್ಪ ಫ್ಯಾಷನ್ನಾಗಿ ಕಾಣುವಂಥ ಹೆಸರುಗಳನ್ನು ಯಜಮಾನರು ಬಳಸಿದ್ದಾರೆ, ಅಷ್ಟೆ…
ಆ ನಂತರದ ದಿನಗಳಲ್ಲಿ ‘ಮೈಸೂರ ಮಲ್ಲಿಗೆ’ಯ ಹಾಡುಗಳನ್ನು ಕೇಳಿದಾಗೆಲ್ಲ- ಇಷ್ಟೊಂದು ಕವನಗಳಿಗೆ ನಾಯಕಿಯಾದ ವೆಂಕಮ್ಮನವರು ಪುಣ್ಯವಂತೆ ಅನ್ನಿಸುತ್ತಿತ್ತು. ಕೆ.ಎಸ್.ನ.ರೊಂದಿಗೆ ಅವರ ಮಧುರ ಪ್ರೇಮದ ನೆನಪಾಗಿ ಹೆಮ್ಮೆಯಾಗುತ್ತಿತ್ತು. ಜತೆಗೇ ಒಂದಿಷ್ಟು ಅಸೂಯೆಯೂ…
***
ಕೆ.ಎಸ್.ನ ಹುಟ್ಟಿದ್ದು ಜನವರಿ ೨೬ ರಂದು. ಅದೇ ನೆಪದಿಂದ ಮನೆಯಲ್ಲಿ ಹಬ್ಬದಡುಗೆ ಮಾಡಿದರೆ, ಹೆಂಡತಿ- ಮಕ್ಕಳನ್ನೆಲ್ಲ ಕರೆದು ಕೆ.ಎಸ್.ನ ಹೇಳುತ್ತಿದ್ದರಂತೆ: ‘ನೋಡಿ, ನನ್ನ ಬರ್ತ್‌ಡೇನ ದೇಶಕ್ಕೆ ದೇಶವೇ ಹೆಮ್ಮೆಯಿಂದ ಆಚರಿಸ್ತಾ ಇದೆ!’ ದಾಂಪತ್ಯ ಜೀವನದ ಉದ್ದಕ್ಕೂ ವರ್ಷ ವರ್ಷವೂ ಯಜಮಾನರಿಂದ ಇಂಥ ತಮಾಷೆಯ ಮಾತುಗಳನ್ನು ಕೇಳುತ್ತಲೇ ಬಂದವರು ವೆಂಕಮ್ಮ. ಈ ಮಾತುಗಳನ್ನೆಲ್ಲ ಅವರು ತಮ್ಮ ಬಂಧುಗಳು ಹಾಗೂ ಆಪ್ತರ ಬಳಿ ಹೇಳಿಕೊಂಡು ಖುಷಿಪಡುತ್ತಿದ್ದರು. ಹೀಗಿದ್ದಾಗಲೇ ತುಂಬ ಅವಸರದಲ್ಲೇ ಒಂದಷ್ಟು ಬದಲಾವಣೆಯಾಯಿತು. ಕವಿ ಕೆ.ಎಸ್.ನ ಎಂದೂ ಬಾರದ ಲೋಕಕ್ಕೆ ಹೋಗಿ ಬಿಟ್ಟರು.
ಓಡುವ ಕಾಲಕ್ಕೆ ಯಾವ ತಡೆ? ಕೆ.ಎಸ್.ನ ಅವರಿಲ್ಲದಿದ್ದರೂ ಮತ್ತೊಮ್ಮೆ ಜನವರಿ ೨೬ರ ದಿನ ಬಂದೇ ಬಂತು. ‘ನನ್ನ ಬರ್ತ್‌ಡೇನ ಇಡೀ ದೇಶವೇ ಆಚರಿಸ್ತುದೆ’ ಎಂದು ಕೆ.ಎಸ್.ನ ಹೇಳುತ್ತಿದ್ದ ಮಾತು ನೆನಪಿಗೆ ಬಂತು. ಮನೇಲಿ ಅಪ್ಪ ಇಲ್ಲ. ಅಮ್ಮ ಒಬ್ಬರೇ ಅನ್ನಿಸಿದಾಗ ಕೆ.ಎಸ್.ನ ಪುತ್ರಿ ತುಂಗಭದ್ರಾ ಒಂದು ನಿರ್ಧಾರಕ್ಕೆ ಬಂದರು. ತಮ್ಮ ಮನೆಯಂಗಳದಲ್ಲಿ ಅಪ್ಪನ ಹಾಡುಗಳನ್ನು ಎಲ್ಲರಿಗೂ ಕೇಳಿಸುವ ತೀರ್ಮಾನಕ್ಕೆ ಬಂದರು.
ಇಂಥ ಸಂದರ್ಭದಲ್ಲಿ ಕೆ.ಎಸ್.ನ ಕುಟುಂಬಕ್ಕೆ ಸಾಥ್ ನೀಡಿದ್ದು ಉಪಾಸನಾ ಮೋಹನ್ ಮತ್ತು ಇತರೆ ಗಾಯಕ, ಗಾಯಕಿಯರು. ಪ್ರತಿ ವರ್ಷ ಜನವರಿ ೨೬ ಬಂದರೆ ಸಾಕು, ಬೆಂಗಳೂರಿನ ಸೀತಾ ಸರ್ಕಲ್‌ನಲ್ಲಿರುವ ಕೆ.ಎಸ್.ನ. ಪುತ್ರಿ ತುಂಗಭದ್ರಾ ಅವರ ಮನೆಯ ಮುಂದೆ ಜನಜಾತ್ರೆ ಸೇರುತ್ತಿತ್ತು. ಅಲ್ಲಿ ಕೆ.ಎಸ್.ನ ಅವರ ಬಂಧುಗಳು, ಮಿತ್ರರು, ಅಭಿಮಾನಿಗಳಿರುತ್ತಿದ್ದರು. ಎಲ್ಲರಿಗಿಂತ ಮುಂದೆ ಒಂದು ಬೆತ್ತದ ಕುರ್ಚಿಯಲ್ಲಿ ವೆಂಕಮ್ಮನವರು ಕೂತಿರುತ್ತಿದ್ದರು. ಕಾರ್ಯಕ್ರಮ ಶುರುವಾದ ನಂತರದಲ್ಲಿ ‘ನವಿಲೂರಿನೊಳಗೆಲ್ಲ ನೀನೆ ಬಲು ಚೆಲುವೆ,’ ‘ಬಾರೆ ನನ್ನ ಶಾರದೆ’, ‘ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು,’ ‘ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು…’ ಗೀತೆಗಳು ಒಂದರ ಹಿಂದೊಂದು ಕೇಳಿ ಬರುತ್ತಿದ್ದವು. ಕೇಳುತ್ತ ಕೂತವರಿಗೆ, ಜತೆಗೆ ಕವಿಗಳಿಲ್ಲವಲ್ಲ ಎಂಬ ದುಃಖ ಒಂದು ಕಡೆ ಹಿಂದೆಯೇ ಎಲ್ಲ ಪದ್ಯಗಳ ಕಥಾನಾಯಕಿ ವೆಂಕಮ್ಮನವರು ಜತೆಗಿದ್ದಾರೆ ಎಂಬ ಸಂತಸ ಮತ್ತೊಂದು ಕಡೆ!
ಅಂದ ಹಾಗೆ, ದಾಂಪತ್ಯದುದ್ದಕ್ಕೂ ಸುಮದ ಪರಿಮಳವನ್ನೇ ಚಿಮ್ಮಿಸಿದ ಹಾಡುಗಳನ್ನು ಪತಿಯ ಗೈರು ಹಾಜರಿಯಲ್ಲಿ ಕೇಳುತ್ತಿದ್ದಂತೆ ವೆಂಕಮ್ಮನವರಿಗೆ ಖುಷಿಯಾಗುತ್ತಿತ್ತಾ? ಗೊತ್ತಾಗುತ್ತಿರಲಿಲ್ಲ. ಒಂದು ಹಾಡು ಮುಗಿಯುತ್ತಿದ್ದಂತೆಯೇ, ಪತಿಯ ನೆನಪಾಗಿ ಕಣ್ತುಂಬಿ ಬರುತ್ತಿತ್ತಾ? ವೆಂಕಮ್ಮನವರ ಕನ್ನಡಕ ಗುಟ್ಟು ಬಿಟ್ಟುಕೊಡುತ್ತಿರಲಿಲ್ಲ!
***
ಮೊನ್ನೆ ಜನವರಿ ೨೬ ರಂದು ಮತ್ತೆ ಕೆ.ಎಸ್.ನ ಜನ್ಮದಿನ ನಡೆಯಿತು. ತುಂಗಭದ್ರ ಅವರ ಮನೆಯಂಗಳದಲ್ಲಿ ಅದೇ ಕಾವ್ಯ ರಸಿಕರು, ಬಂಧುಗಳು, ಅಭಿಮಾನಿಗಳು, ಗಾಯಕರು. ಅಂದು ನಡೆದದ್ದು ಹಾಡಿನ ಉಪಾಸನೆ. ಪ್ರೀತಿಯ ಉಪಾಸನೆ. ಆದರೆ, ಅವತ್ತು ವೆಂಕಮ್ಮನವರು ಜತೆಗಿರಲಿಲ್ಲ. ಅವರೂ ಕಾಲನ ಕರೆಗೆ ಓಗೊಟ್ಟು ಹೋಗಿಬಿಟ್ಟಿದ್ದರು; ಕೆ.ಎಸ್.ನ ಅವರಿದ್ದ ಊರಿಗೆ, ಎಂದೂ ಬಾರದ ನಾಡಿಗೆ!
ಅವತ್ತು ಹಾಡು ಕೇಳಿದವರೆಲ್ಲ ಕಡೆಯಲ್ಲಿ ಗಂಧರ್ವರಂತೆಯೇ ಬಾಳಿ ಬದುಕಿದ ಕೆ.ಎಸ್.ನ-ವೆಂಕಮ್ಮರನ್ನು ಮತ್ತೆ ಮತ್ತೆ ನೆನೆದು ಇಲ್ಲಿಂದಲೇ ಕೈ ಮುಗಿದರು. ಅವರು -ಅಲ್ಲಿಂದಲೇ ಹರಸಿದರು!

ಸಚಿನ್ ಅಂದ್ರೆ ಸುಮ್ನೇನಾ?

ಡಿಸೆಂಬರ್ 30, 2009

ಕ್ರಿಕೆಟ್ ಪ್ರೇಮಿಗಳು ಅವನನ್ನು ‘ಮಾಸ್ಟರ್ ಮ್ಲಾಸ್ಟರ್’ ಎನ್ನುತ್ತಾರೆ. ಲಿಟಲ್ ಚಾಂಪಿಯನ್ ಅನ್ನುತ್ತಾರೆ. ಮುಂಬುಯಿಯ ಮಂದಿ ಅವನನ್ನು ಪ್ರೀತಿಯಿಂದ ‘ತೇಂಡ್ಲ್ಯಾ’ ಎನ್ನುತ್ತಾರೆ. ಎದುರಾಳಿ ತಂಡದವರೆಲ್ಲ ‘ ದಿ ಮಾಸ್ಟರ್’ ಎಂದು ಕರೆದು ಗೌರವ ತೋರುತ್ತಾರೆ. ಅವನು ಬ್ಯಾಟ್ ಹಿಡಿದು ಮೈದಾನಕ್ಕೆ ನಡೆದು ಬರುವ ದೃಶ್ಯ ಟಿವಿಯಲ್ಲಿ ಕಂಡರೆ ಸಾಕು; ಮನೆಮನೆಯ ಮಕ್ಕಳು ಕಣ್ಣರಳಿಸಿ- ಅಮ್ಮಾ, ‘ಸಚ್ಚಿನ್ನೂ…’ ಎಂದು ಉದ್ಗರಿಸುತ್ತಾರೆ. ಬಾಳಾಠಾಕ್ರೆಯಂಥ ಅವಿವೇಕಿಗಳು ಮಾತ್ರ ಅವನ ಮೇಲೆ ಸುಖಾಸುಮ್ಮನೆ ಇಲ್ಲಸಲ್ಲದ ಟೀಕೆ ಮಾಡಿ ಸುದ್ದಿಯಾಗುತ್ತಾರೆ.
ಸ್ವಾರಸ್ಯವೆಂದರೆ ಟೀಕೆ, ಹೊಗಳಿಕೆ, ಮೆಚ್ಚುಗೆಯ ಹೂಮಳೆಯಾದ ಸಂದರ್ಭದಲ್ಲಿ ಈ ಮಹರಾಯ ಹೆಚ್ಚು ಮಾತಾಡುವುದೇ ಇಲ್ಲ. ಬದಲಿಗೆ ತನಗೆ ಏನೂ ಗೊತ್ತಿಲ್ಲ ಎನ್ನುವವನಂತೆ ಅಥವಾ ಇದೆಲ್ಲಾ ನನಗೆ ಮೊದಲೇ ಗೊತ್ತಿತ್ತು ಎನ್ನುವವನಂತೆ ಮುಗುಳ್ನಗುತ್ತಾನೆ. ಮನೆಮನೆಯ ಮುದ್ದು ಮಕ್ಕಳ ಥರಾ. ಆ ನಗುವನ್ನು ನೋಡಿದ ನಂತರ ‘ಅವನ’ ಮೋಡಿಯಿಂದ ಹೊರಬರಲು ಆಗುವುದೇ ಇಲ್ಲ.
ಸಚಿನ್ ರಮೇಶ್ ತೆಂಡೂಲ್ಕರ್ನ ವಿಶೇಷವೇ ಅದು. ಟೆಸ್ಟ್ನಲ್ಲಿ ೪೩, ಒಂದು ದಿನದ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ೪೫ ಸೆಂಚುರಿ ಹೊಡೆದಿರುವದು ಅವರ ಹೆಚ್ಚುಗಾರಿಕೆ. ಕೇವಲ ೩೬ನೇ ವಯಸ್ಸಿಗೇ ಕ್ರಿಕೆಟ್ ಅಂಗಳಧ ದೇವರು, ಲಿವಿಂಗ್ ಲೆಜೆಂಡ್ ಅನಿಸಿಕೊಂಡವನು ತೆಂಡೂಲ್ಕರ್. ಬಹುಶಃ ಮುಂದಿನ ಹದಿನೈದಿಪ್ಪತ್ತು ವರ್ಷಗಳವರೆಗೂ ಅವರ ಹೆಸರಲ್ಲಿರುವ ದಾಖಲೆಗಳನ್ನು ಮುರಿಯುವುದು ಕಷ್ಟ ಕಷ್ಟ.
ತೆಂಡೂಲ್ಕರ್ ಬ್ಯಾಟಿಂಗ್ ಬಗ್ಗೆ ಎಲ್ಲರಿಗೂ ಗೊತ್ತು. ಹೆಚ್ಚಿನವರಿಗೆ ಗೊತ್ತಿಲ್ಲದ, ಆದರೆ ಸ್ವಾರಸ್ಯಕರ ಅನ್ನುಸುವ ಕೆಲವು ವಿವರಗಳು ಇಲ್ಲಿವೆ. ನಿಮಗಿಷ್ಟವಾಗಬಹುದು ಓದಿಕೊಳ್ಳಿ…
* ‘ಗಂಡನಿಗಿಂತ ಹೆಂಡತಿ ಚಿಕ್ಕವಳಿರಬೇಕು…’ ಹಾಗಂತ ಬಹಳಷ್ಟು ಮಂದಿ ಭಾವಿಸುತ್ತಾರೆ, ಹುಡುಗಿಯ ವಯಸ್ಸು ಹುಡುಗನಿಗಿಂತ ಹತ್ತು ವರ್ಷ ಕಡಿಮೆ ಇದ್ರೂ ನಡೆಯುತ್ತೆ ಎಂದೂ ಹಿರಿಯರೇ ಹೇಳುತ್ತಾರೆ. ಆದರೆ ತೆಂಡೂಲ್ಕರ್ ವಿಷಯದಲ್ಲಿ ಇದು ಉಲ್ಟಾ ಆಗಿದೆ! ಅವನ ಹೆಂಡತಿಯ ಹೆಸರು ಅಂಜಲಿ. ಆಕೆ ವೈದ್ಯೆ. ತೆಂಡೂಲ್ಕರ್ಗಿಂತ ಈ ಡಾಕ್ಟರಮ್ಮ ಆರು ವರ್ಷ ದೊಡ್ಡವಳು!
* ಸಚಿನ್ಗೆ ಮದುವೆಯಾಗಿ ಆಗಷ್ಟೇ ತಿಂಗಳಾಗಿತ್ತು. ಅಂಜಲಿಗೆ ಗಂಡನೊಂದಿಗೆ ಥಿಯೇಟರ್ನಲ್ಲಿ ಕುಳಿತು ಸಿನಿಮಾ ನೋಡುವಾಸೆ. ಆದರೆ ಥಿಯೇಟರ್ನಲ್ಲೂ ಅಭಿಮಾನಿಗಳ ಕಾಟ ಶುರುವಾಗುತ್ತೆ ಎಂದು ಇಬ್ಬರಿಗೂ ಗೊತ್ತಿತ್ತು.
ಆಗ ಒಂದು ಉಪಾಯ ಮಾಡಿದ ಅಂಜಲಿ-ತೆಂಡೂಲ್ಕರ್ಗೆ ಬುರ್ಖಾ ಹಾಕಿ ಥಿಯೇಟರ್ಗೆ ಹೋಗಿಯೇಬಿಟ್ಟಳು. ಗಂಡನ ಹೊಸ ವೇಷ ನೋಡಿ ಮುಸಿಮುಸಿ ನಗುತ್ತಾ; ಪಿಸಪಿಸ ಮಾತನಾಡುತ್ತಾ ‘ರೋಜಾ’ ಸಿನಿಮಾ ನೋಡುತ್ತಿದ್ದಳು. ಇಂಟರ್ವಲ್ ಬಿಟ್ಟಾಗ ಅಲ್ಲಿದ್ದ ಚಿತ್ರ ಪ್ರೇಮಿಗಳು ಮೊದಲು ಅಂಜಲಿಯನ್ನು ಗುರುತು ಹಿಡಿದರು. ಅರೇ, ತೆಂಡೂಲ್ಕರ್ ಹೆಂಡ್ತಿ ಎಂದುಕೊಂಡು ಆಕೆಯಿಂದ ಆಟಿಗ್ರಾಫ್ ಪಡೆಯಲು ದುಂಬಾಲು ಬಿದ್ದರು. ಅಭಿಮಾನಿಗಳ ಗುಂಪು ದೊಡ್ಡದಾದಾಗ ಸಚಿನ್ ಅನಿವಾರ್ಯವಾಗಿ ಬುರ್ಖಾ ತೆಗೆದು ಹೆಂಡತಿಯ ರಕ್ಷಣೆಗೆ ಧಾವಿಸಲೇಬೇಕಾಯಿತು. ಅಚಿನ್ನನ್ನು ಕಂಡಿದ್ದೇ ಜನ ಹುಚ್ಚೆದ್ದರು. ಅಭಿಮಾನಿಗಳ ಅಬ್ಬರ ಹೆಚ್ಚಿದ್ದರಿಂದ ಸಿನಿಮಾ ಪ್ರದರ್ಶನ ಕ್ಯಾನ್ಸಲ್ ಆಯಿತು. ತೆಂಡೂಲ್ಕರ್ ಕಂಪತಿ ಹರಸಾಹದಿಂದ ತಪ್ಪಿಸಿಕೊಂಡು ಮನೆಗೆ ಬಂದರು.
ರಕ್ತ ಸುರಿದರೂ ಆಟ ನಿಲ್ಲಿಸಲಿಲ್ಲ! ಅದು ೧೯೮೯ರ ಮಾತು. ತೆಂಡೂಲ್ಕರ್ಗೆ ಆಗಿನ್ನೂ ಸ್ವೀಟ್ ೧೬! ಆ ವಯಸ್ಸಿನಲ್ಲಿ ಉಳಿದವರೆಲ್ಲ ಕಾಲೇಜಿಗೆ ಹೋಗುತ್ತಾರೆ. ಈ ಭೂಪ ಅಷ್ಟು ಚಿಕ್ಕ ವಯಸ್ಸಿಗೇ ಟೆಸ್ಟ್ ಕ್ಯಾಪ್ ಧರಿಸಿದ. ಸಣ್ಣದೊಂದು ಹಿಂಜರಿಕೆಯೂ ಇಲ್ಲದೆ ಭಾರತ ತಂಡದೊಂದಿಗೆ ಪಾಕಿಸ್ತಾನ ಪ್ರವಾಸಕ್ಕೆ ಬಂದೂಬಿಟ್ಟ.
ಆ ದಿನ ಭಾರತ ತಂಡದ ನಾಯಕನಾಗಿದ್ದಾತ ಕೆ. ಶ್ರೀಕಾತ್. ಪಾಕಿಸ್ತಾನಕ್ಕೆ ಇಮ್ರಾನ್ ಖಾನ್ನ ಸಾರಥ್ಯವಿತ್ತು. ಭಾರತದ ಆಟಗಾರರನ್ನು ಹೆದರಿಸಲೆಂದೇ ವಾಸಿಂ ಅಕ್ರಂ ಎಂಬ ಹೊಸ ಬಾಲಕನನ್ನು ಕರೆತಂದಿದ್ದ ಇಮ್ರಾನ್ಖಾನ್, ಅವನ ಕಡೆಯಿಂದ ಒಂದರ ಹಿಂದೊಂದು ಬೌನ್ಸರ್ ಹಾಕಿಸಿ ಬ್ಯಾಟ್ಸ್ಮನ್ಗಳನ್ನು ಹೆದರಿಸುತ್ತಿದ್ದ. ಕರಾಚಿಯಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ ವೆಂಗ್ಸರ್ಕಾರ್, ರವಿಶಾಸ್ತ್ರಿ, ಕಿರಣ್ಮೋರೆಯ ಮೇಲೆ ಅಕ್ರಂ ಬೌನ್ಸರ್ ಹಾಕಿದಾಗ ಇಮ್ರಾನ್ ಹೇಳಿದನಂತೆ; ‘ಪೆದ್ದ, ಅವರೆಲ್ಲ ಇವತ್ತೋ ನಾಳೆಯೋ ನಿವೃತ್ತಿ ಘೋಷಿಸುವ ಆಟಗಾರರು. ಅವರ ಮೇಲೆ ಯಾಕೆ ಬೌನ್ಸರ್ ಎಸೀತೀಯ? ಅವರಿಂದ ಪಾಕ್ ತಂಡಕ್ಕೆ ಯಾವುದೇ ತೊಂದರೆಯಿಲ್ಲ. ಈ ಬೇಟಾ ತೆಂಡೂಲ್ಕರ್ ಇದಾನಲ್ಲ? ಇವನಿಂದಲೇ ತೊಂದರೆ. ಚೆಂಡಿನ ಮೂಲಕ ಕೈ ಕಾಲು ಮುರಿಯೋ ಹಾಗಿದ್ರೆ ಇವನನ್ನೇ ವಿಚಾರಿಸ್ಕೋ!
ತನ್ನ ಗುರು ಹಾಗೂ ಗಾಡ್ಫಾದರ್ ಆಗಿದ್ದ ಇಮ್ರಾನ್ಖಾನ್ನ ಮಾತನ್ನು ವಾಸಿ ಅಕ್ರಂ ಮೀರಲಿಲ್ಲ. ಮುದಿನ ಓವರ್ನಲ್ಲಿ ತೆಂಡೂಲ್ಕರ್ಗೆ ಬೌನ್ಸರ್ ಹಾಕಿಯೇಬಿಟ್ಟ. ಆ ಚೆಂಡು ಬಡಿದ ರಭಸಕ್ಕೆ ಮೂಗು-ಬಾಯಿಂದ ರಕ್ತ ಬಂತು. ಅವನನ್ನು ಸ್ಟ್ರೆಚರ್ನಲ್ಲಿ ಅಂಗಳದಿಂದ ಹೊರಗೆ ಹೊತ್ತೊಯ್ಯಲು ಎಲ್ಲರೂ ಯೋಚಿಸುತ್ತಿದ್ದರು. ಆದರೆ ಈ ವಾಮನ, ಬಲಗೈಯಿಂದ ಒಮ್ಮೆ ದವಡೆಯನ್ನು ಉಜ್ಜಿಕೊಂಡು ಆಡಲು ನಿಂತುಬಿಟ್ಟ. ವಾಸಿಂ ಅಕ್ರಂನ ಚೆಂಡನ್ನು ಬೌಡರಿಗೆ ಕಳಿಸಿ- ‘ನಾನು ನಾನೇ’ ಎಂದು ಸಾರಿ ಹೇಳಿದ್ದ!
ತಾಕತ್ತಿದ್ರೆ ನನಗೆ ಹೊಡಿ! ತೆಂಡೂಲ್ಕರ್ ಪಾಕಿಸ್ತಾನ ಪ್ರವಾಸ ಮಾಡಿದ್ದನಲ್ಲ? ಆಗ ಪಾಕ್ ತಂಡದಲ್ಲಿ ದಿ ಗ್ರೇಟ್ ಸ್ಪಿನ್ನರ್ ಅಬ್ದುಲ್ ಖಾದಿರ್ ಕೂಡ ಇದ್ದ. ಎರಡು ಟೆಸ್ಟ್ ಪಂದ್ಯಗಳು ಮುಗಿದ ನಂತರ ರಾವಲಿಂಡಿಯಲ್ಲಿ ತಲಾ ಇಪ್ಪತ್ತು ಓವರ್ಗಳ ಒಂದು ದಿನದ ಸಹಾಯಾರ್ಥ ಪಂದ್ಯ ಏರ್ಪಡಿಸಲಾಯಿತು. ಈ ಪಂದ್ಯದ ಮೂಲಕ ಸ್ಪಿನ್ನರ್ ಮುಷ್ತಾಕ್ ಅಹಮದ್ ಅರಂಗೇಟ್ರಂ ಆರಂಭಿಸಿದ.
ಮೊದಲು ಬ್ಯಾಟ್ ಮಾಡಿದ ಇಮ್ರಾನ್ ಪಡೆ ೨೦ ಓವರ್ಗಳಲ್ಲಿ ೧೫೭ ರನ್ ಪೇರಿಸಿತು. ಈ ಮೊತ್ತದ ಬೆನ್ನು ಹತ್ತಿದ ಭಾರತ ಮೊದಲಿಇನ ನಾಲ್ಕು ವಿಕೆಟ್ಗಳನ್ನು ಬೇಗನೆ ಕಳೆದುಕೊಂಡಿತು. ಐದನೇ ವಿಕೆಟ್ಗೆ ಆಡಲು ಬಂದ ತೆಂಡೂಲ್ಕರ್ ಮುಷ್ತಾಆಕ್ ಅಹಮದ್ಗೆ ಒಂದು ಸಿಕ್ಸರ್ ಹೊಡೆದೇಬಿಟ್ಟ.
ಇದನ್ನು ಕಂಡದ್ದೇ ಅವದುಲ್ ಖಾದಿರ್ಗೆ ಕೆಂಡಾಮಂಡಲ ಕೋಪ ಬಂತು. ಆತ ಮಿಮಿ ಅನ್ನುತ್ತಲೇ ತೆಂಡೂಲ್ಕರ್ ಬಳಿಗೆ ಬಂದು ಹೇಳಿದ: ‘ಈ ಮುಷ್ತಾಕ್ ಇದಾನಲ್ಲ? ಅವನು ಇನ್ನೂ ಬಚ್ಚಾ. ಅವನ ಮುಂದೆ ಯಾಕೆ ಪೌರುಷ ತೋರಿಸೋಕೆ ಹೋಗ್ಯಾ ಇದೀಯ? ನಿಂಗೆ ತಾಕತ್ತಿದ್ರೆ ನಂಗೆ ಒಂದೇ ಒಂದು ಫೋರ್ ಹೊಡಿ ನೋಡೋಣ’.
ಖಾದಿರ್ನ ಮಾತುಗಳಲ್ಲಿ ವ್ಯಂಗ್ಯವಿತ್ತು. ಆಹ್ವಾನವಿತ್ತು. ನನ್ನ ಮುಂದೆ ನಿನ್ನ ಆಟ ನಡೆಯೋದಿಲ್ಲ ಎಂಬ ಎಚ್ಚರಿಕೆಯಿತ್ತ. ಉಹೂಂ, ಆಗ ಕೂಡ ತೆಂಡೂಲ್ಕರ್ ಮಾತಾಡಲಿಲ್ಲ. ಸುಮ್ಮನೇ ಒಮ್ಮೆ ಮುಗುಳ್ನಕ್ಕ. ಮುಂದಿನ ಓವರ್ನಲ್ಲಿ ಖಾದಿರ್ನದ್ದೇ ಬೌಲಿಂಗ್. ಮೊದಲ ಎಸೆತವನ್ನೇ ಸಿಕ್ಸರ್ಗೆ ಎತ್ತಿಬಿಟ್ಟ ತೆಂಡೂಲ್ಕರ್. ಎರಡನೇ ಬಾಲ್ಗೆ ರನ್ ಬರಲಿಲ್ಲ. ನೋಡಿದ್ಯಾ ಹೇಗೆ ಕಟ್ಟಿಹಾಕ್ದೆ ಎನ್ನುತ್ತಾ ಖಾದಿರ್ ಮೂರನೇ ಚೆಂಡು ಎಸೆದನಲ್ಲ? ಅದನ್ನು ಕ್ಷಣ ಮಾತ್ರದಲ್ಲಿ ಬೌಂಡರಿ ಗೆರೆಗೆ ತಲುಪಿಸಿದ್ದ ಸಚಿನ್. ನಂತರ ನಾಲಕು, ಐದು ಮತ್ತು ಆರನೇ ಎಸೆತಗಳಲ್ಲಿ ಸಚಿನ್ ಮೂರು ಭರ್ಜರಿ ಸಿಕ್ಸರ್ ಹೊಡೆದುಬಿಟ್ಟ.
ಹೌದು, ಅಬ್ದುಲ್ ಖಾದಿರ್ನ ಗರ್ವಭಂಗವಾದದ್ದೇ ಆಗ.
* ತೆಂಡೂಲ್ಕರ್ನನ್ನು ಇವತ್ತು ಎಲ್ಲರೂ ಬ್ಯಾಟಿಂಗ್ ಮಾಂತ್ರಿಕ ಎಂದೇ ಗುರುತಿಸುತ್ತಾರೆ. ಸ್ವಾರಸ್ಯವೆಂದರೆ, ಬ್ಯಾಟ್ಸ್ಮನ್ ಆಗಬೇಕೆಂದು ತೆಂಡೂಲ್ಕರ್ಗೆ ಕನಸೂ ಇರಲಿಲ್ಲ. ಆತ ಫಾಸ್ಟ್ ಬೌಲರ್ ಆಗಬೇಕೆಂದು ಆಸೆಪಟ್ಟಿದ್ದ. ಅದೆ ಉದ್ದೇಶದಿಂದ ಚೆನ್ನೈನಲಿ ಟೆನಿಸ್ ಲಿಲ್ಲಿ ನಡೆಸುತ್ತಿದ್ದ ಎಂಆರ್ಎಫ್ ಫೌಂಡೇಷನ್ನಲ್ಲಿ ಹೆಸರು ನೋಂದಾಯಿಸಿದ್ದ.
ಆದರೆ ತರಬೇತಿಯ ವೇಳೆಯಲ್ಲಿ ಈತ ‘ಕುಳ್ಳ’ ಎಂಬುದನ್ನು ಗಮನಿಸಿದ ಡೆನಿಸ್ ಲಿಲ್ಲಿ ಹೇಳಿದರು : ನೋಡೂ, ಫಾಸ್ಟ್ ಬೌಲರ್ ಆಗಬೇಕಾದ್ರೆ ಸ್ವಲ್ಪ ಉದ್ದ ಇರಬೇಕು. ಆಗ ಚೆಂಡನ್ನು ವಿಕೆಟ್ನ ಎರಡೂ ಬದಿಯಲ್ಲಿ ಸ್ಟಿಂಗ್ ಮಾಡಬಹುದು. ನೀನು ತುಂಬಾನೇ ಕುಳ್ಳ. ಪ್ರಯತ್ನ ಪಟ್ಟರೆ ನೀನು ಸ್ಟಿನ್ನರ್ ಆಗಬಹುದೇ ವಿನಃ ಫಾಸ್ಟ್ ಬೌಲರ್ ಆಗಲು ಸಾಧ್ಯವಿಲ್ಲ. ಹಾಗಾಗಿ ಬ್ಯಾಟಿಂಗ್ ಕಡೆ ಗಮನ ಕೊಡು ಎಂದರು.
ಒಮ್ಮೆ ಸುಮ್ಮನೇ ಯೋಚಿಸಿ : ಒಂದು ವೇಳೆ ಲಿಲ್ಲಿ ಹಾಗೆ ಹೇಳದೇ ಹೋಗಿದ್ದಿದ್ದರೆ…
* ೨೦೦೩ರ ವಿಶ್ವಕಪ್ ಪಂದ್ಯಾವಳಿಯ ಸಂದರ್ಭ. ಆಗ ಭಾರತದ ಎದುರಾಳಿಯಾಗಿದ್ದುದು ಪಾಕಿಸ್ತಾನ. ಬಿಡುಬೀಸಾಗಿ ಆಡುತ್ತಿದ್ದ ತೆಂಡೂಲ್ಕರ್ ಅದೊಮ್ಮೆ ಕೊಟ್ಟ ಕ್ಯಾಚನ್ನು ಅಬ್ದುಲ್ ರಜಾಕ್ ನೆಲಕ್ಕೆ ಹಾಕಿಬಿಟ್ಟ. ಆಗ ಹಣೆ ಹಣೆ ಚಚ್ಚಿಕೊಂಡು ಅಲ್ಲಿಗೆ ಓಡಿ ಬಂದ ವಾಸಂ ಆಕ್ರಂ ಹೇಳಿದ್ದು ಒಂದೇ ಮಾತು. ಯೂ ಫೂಲ್. ಈಗ ನಿನ್ನ ಕೈಯಿಂದ ಜಾರಿ ಹೋದದ್ದು ಚೆಂಡಲ್ಲ. ಅದು ವಿಶ್ವಕಪ್. ಅರ್ಥ ಮಾಡ್ಕೊ!
ಆಟದ ಅಂಗಳದಲ್ಲಿ ಸಚಿನ್ ಈಗಲೂ ಜಿಂಕೆ ಮರಿ. ಅವನಿಗೆ ಭರ್ತಿ ೩೬ ವರ್ಷ ಆಗಿದೆ ನಿಜ. ಆದರೆ ನಿನ್ನೆಯಷ್ಟೇ ೧೮ ವರ್ಷ ತುಂಬಿತೇನೋ ಎನ್ನುವಷ್ಟು ಚಟುವಟಿಕೆಯಿಂದ ಆತ ಆಡುತ್ತಾನೆ. ಆತ ಬೆಸ್ಟ್ ಬೌಲರ್. ಬೆಸ್ಟ್ ಬ್ಯಾಟ್ಸ್ಮನ್. ಬೆಸ್ಟ್ ಫೀಲ್ಡರ್. ಆದರೆ ಬೆಸ್ಟ್ ಕ್ಯಾಪ್ಟನ್ ಅನ್ನಿಸಿಕೊಳ್ಳಲು ಅವನಿಗೆ ಸಾಧ್ಯವಾಗಲೇ ಇಲ್ಲ. ಆತ ಯಶಸ್ವೀ ಆಟಗಾರ ಮತ್ತು ವಿಫಲ ನಾಯಕ!
* ಯಾವ ಚೆಂಡಿಗೆ ಸಚಿನ್ ಹೇಗೆ ಹೊಡೆಯಬಹುದು ಎಂದುಯಾರೂ ಅಂದಾಜು ಮಾಡಿಕೊಳ್ಳಲೂ ಆಗುವುದಿಲ್ಲ. ಹಾಗಿರುತ್ತದೆ ತೆಂಡೂಲ್ಕರ್ ಆಟ. ಫಾರ್ಮ್ನಲ್ಲಿ ಇದ್ದ ಸಂದರ್ಭದಲ್ಲಂತೂ ಬ್ಯಾಟ್ ಎಂಬುದು ಅವನ ಕೈಯಲ್ಲಿ ಮಂತ್ರ ದಂಡದ ಥರಾ ಕೆಲಸ ಮಾಡುತ್ತದೆ. ಅದನ್ನು ನೆನಪು ಮಾಡಿಕೊಂಡೇ ಅಂಪೈರ್ ವೆಂಕಟರಾಘವನ್ ಅದೊಮ್ಮೆ ಹೀಗೆ ಹೇಳಿದ್ದರು : ತೆಂಡೂಲ್ಕರ್ ಅಬ್ಬರದಿಂದ ಬ್ಯಾಟ್ ಬೀಸುವ ಅದೆಷ್ಟೋ ಮ್ಯಾಚ್ಗಳನ್ನು ನಾನು ಕೂಗಳತೆ ದೂರದಲ್ಲಿ ನಿಂತು ನೋಡಿದೀನಿ. ಆಗೆಲ್ಲ ಖುಷಿಯಿಂದ ಚಪ್ಪಾಳೆ ಹೊಡೆಯಬೇಕು ಅಂತ ನನಗೆ ಆಸೆಯಾಗುತ್ತೆ. ಆದರೆ ಏನು ಮಾಡೋಣ ಹೇಳಿ; ನಾನು ಮಾಡ್ತಿರೋದು ಅಂಪೈರಿಂಗ್ ಕೆಲಸ. ಎಷ್ಟೇ ಸಂತೋಷವಾದ್ರೂ ಆ ಸಂದರ್ಭದಲ್ಲಿ ಮುಕ್ತವಾಗಿ ಹೇಳಿಕೊಳ್ಳಲು ಆಗೋದಿಲ್ಲ. ಆವಾಗೆಲ್ಲ ನನಗೆ ನನ್ನ ಕೆಲಸದ ಬಗ್ಗೆಯೇ ಬೇಸರ ಆಗಿದೆ.
* ನಿಮ್ಮ ಪ್ರಕಾರ ಹೆಚ್ಚು ಅಭಿಮಾನಿಗಳನ್ನು ಹೊಂದಿದ ವ್ಯಕ್ತಿ ಯಾರು ಎಂದು ಸಂದರ್ಶಕನೊಬ್ಬ ಕೇಳಿದಾಗ ನಟ ಶಾರೂಕ್ ಖಾನ್ ಹೇಳಿದ್ದಿಷ್ಟು. ಒಂದು ಪಾರ್ಟಿ ಅಂದುಕೊಳ್ಳಿ. ಅದಕ್ಕೆ ಬಾಲಿವುಡ್ನ ಅಷ್ಟೂ ನಟ-ನಟಿಯರು ಹಾಗೂ ಕ್ರಿಕೆಟಿಗರನ್ನು ಆಹ್ವಾನಿಸಲಾಗಿರುತ್ತದೆ.
ಹೀಗಿರುವಾಗಲೇ ಪ್ರವೇಶ ದ್ವಾರದ ಬಳಿ ಗದ್ದಲ ಶುರುವಾಗುತ್ತದೆ. ಓಹ್, ಅಮಿತಾಬ್ ಬಚ್ಚನ್ ಬಂದ್ರು ಎಂದು ಯಾರೋ ಕೂಗುತ್ತಾರೆ. ತಕ್ಷಣ ಎಲ್ಲರೂ ಅಮಿತಾಬ್ರ ಕೈ ಕುಲುಕಲು ಮುಂದಾಗುತ್ತಾರೆ. ಒಂದೆರಡ್ ನಿಮಿಷದ ನಂತರ ಮತ್ತೆ ಬಾಗಿಲ ಬಳಿ ಸದ್ದಾಗುತ್ತದೆ. ಓಹ್, ಸಚಿನ್ ಬಂದ್ರು ಎಂದು ಯಾರೋ ಕೂಗುತ್ತಾರೆ. ಅಷ್ಟೇ, ನೆರೆದಿದ್ದ ಅಷ್ಟೂ ಮಂದಿಯನ್ನು ಆಚೀಚೆ ತಳ್ಳುವ ಅಮಿತಾಬ್, ತರಾತುರಿಯಿಂದ ಓಡಿ ಹೋಗಿ ತೆಂಡೂಲ್ಕರ್ನ ಕೈಕುಲುಕುತ್ತಾರೆ. ಅನುಮಾನವೇ ಬೇಡ. ಸದ್ಯಕ್ಕೆ ಇಡೀ ದೇಶದಲ್ಲೇ ಅತಿ ಹೆಚ್ಚು ಅಭಿಮಾನಿಗಳನ್ನು ಪಡೆದಿರೋದು ಸಚಿನ್ ಮಾತ್ರ.
***
ಅದಕ್ಕೇ ಹೇಳಿದ್ದು : ಸಚಿನ್ ಅಂದ್ರೆ ಸುಮ್ನೇನಾ?
.

ಅವರು ಈಗಲೂ ವ್ಹೀಲ್ಚೇರ್ನ ಆಶ್ರಯದಲ್ಲಿಯೇ ಬದುಕುತ್ತಿದ್ದಾರೆ!

ಡಿಸೆಂಬರ್ 30, 2009

ಇಲ್ಲಿ ಹೇಳಲು ಹೊರಟಿರುವುದು ಒಬ್ಬ ಮಹಾನ್ ಸಾಧಕನ ಕಥೆ. ಅವರ ಹೆಸರು ವಿ.ಕೆ. ಬನ್ಸಾಲ್. ನೋಡಲಿಕ್ಕೆ ಅವರು ನಮ್ಮ-ನಿಮ್ಮಂತೆಯೇ ಇದ್ದಾರೆ ನಿಜ. ಆದರೆ ಅವರಿಗೆ ಸೊಂಟದ ಕೆಳಗಿನ ಭಾಗ ಸಂಪೂರ್ಣವಾಗಿ ಸ್ವಾನದಲ್ಲಿಲ್ಲ. ಪಾರ್ಶ್ವವಾಯು ಪೀಡಿತರಂತೆ ಕಾಣುವ ಬನ್ಸಾಲ್ ದಶಕದ ಹಿಂದೆ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದುದು ನಿಜ. ಆದರೆ ಇವತ್ತು ಅವರು ಟ್ಯೂಶನ್ ಮಾಸ್ಟರ್ ಎಂದೇ ಹೆಸರಾಗಿದ್ದಾರೆ. ರಾಜಾಸ್ತಾನದ ಜಿಲ್ಲಾ ಕೇಂದ್ರವಾದ ಕೋಟದಲ್ಲಿ ಅವರ ‘ಬನ್ಸಾಲ್ ಕೋಚಿಂಗ್ ಕ್ಲಾಸ್’ ಹೆಸರಿನ ಟ್ಯುಟೋರಿಯಲ್ ಇದೆ. ಅಲ್ಲಿ ಪಾಠ ಹೇಳಿಸಿಕೊಂಡರೆ ಜನ್ಮ ಸಾರ್ಥಕವಾಯಿತು ಎಂದು ಭಾವಿಸುವ ವಿದ್ಯಾರ್ಥಿಗಳಿದ್ದಾರೆ. ದೇಶದ ಪ್ರತಿಷ್ಠಿತ ಕೋಚಿಂಗ್ ಕ್ಲಾಸ್ ಎಂಬ ಹಿರಿಮೆ ಕೂಡ ಬನ್ಸಾಲ್ ಕೋಚಿಂಗ್ ಕ್ಲಾಸ್ನ ಪಾಲಾಗಿದೆ. ಇಷ್ಟೆಲ್ಲ ಆದರೂ ಬನ್ಸಾಲ್ ಅವರ ದೈಹಿಕ ಸಮಸ್ಯೆ ಪರಿಹಾರವಾಗಿಲ್ಲ. ಅವರು ಈಗಲೂ ವ್ಹೀಲ್ಚೇರ್ನ ಆಶ್ರಯದಲ್ಲಿಯೇ ಬದುಕುತ್ತಿದ್ದಾರೆ!
ಅಲ್ಲ, ವೃತ್ತಿಯಿಂದ ಮೆಕ್ಯಾನಿಕಲ್ ಎಂಜಿನಿಯರ್ ಆದ ಬನ್ಸಾಲ್, ದೇಶದ ಅತ್ಯುತ್ತಮ ಟ್ಯೂಟರ್ ಅನ್ನಿಸಿಕೊಂಡದ್ದು ಹೇಗೆ? ಅವರ ಅನಾರೋಗ್ಯಕ್ಕೆ ಕಾರಣವಾದರೂ ಏನು? ಅವರ ಯಶೋಗಾಥೆಯ ಹಿಂದಿರುವುದು ಶ್ರಮವೋ, ಅದೃಷ್ಟವೋ ಅಥವಾ ದೈವ ಸಂಕಲ್ಪವೋ? ಇಂಥವೇ ಕುತೂಹಲದ ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ.
ಲಖನೌ ಸಮೀಪದ ಝಾನ್ಸಿಯವರಾದ ಬನ್ಸಾಲ್ ಜನಿಸಿದ್ದು ೨೬-೧೦-೧೯೪೯ ರಲ್ಲಿ. ತವರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಮುಗಿಸಿದ ಬನ್ಸಾಲ್, ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದರು. ನಂತರ ರಾಜಸ್ಥಾನದ ಕೋಟ ಎಂಬಲ್ಲಿರುವ ಜೆ.ಕೆ. ಸಿಂಥೆಟಿಕ್ಸ್ ಕಂಪನಿಯಲ್ಲಿ ನೌಕರಿಗೆ ಸೇರಿಕೊಂಡರು. ಮದುವೆ ಯಾದರು. ನಂತರದ ಐದಾರು ವರ್ಷಗಳಲ್ಲಿ ಎರಡು ಹೆಣ್ಣು, ಒಂದು ಗಂಡು ಮಗುವಿನ ತಂದೆಯಾದರು. ಇಚ್ಛೆಯನರಿತು ನಡೆವ ಪತ್ನಿ, ವೆಚ್ಚಕ್ಕೆ ಹೊನ್ನು, ಸಂತೋಷ ನೀಡಲೆಂದೇ ಬದುಕಿಗೆ ಬಂದ ಮಕ್ಕಳನ್ನು ಕಂಡು- ಸ್ವರ್ಗಕ್ಕೆ ಕಿಚ್ಚು ಹಚ್ಚಲು ಬನ್ಸಾಲ್ ನಿರ್ಧರಿಸಿದ್ದರು ನಿಜ. ಆದರೆ ೧೯೭೫ರ ಚಳಿಗಾಲದ ಒಂದು ಮುಂಜಾನೆಯಲ್ಲಿ ಆಗಬಾರದ್ದು ಆಗಿ ಹೋಯಿತು. ಅವತ್ತು ಮಂಡಿಯಿಂದ ಕೆಳಗಿನ ಭಾಗ ಜೋಮು ಹಿಡಿದಂತೆ ಭಾಸವಾಯಿತು, ಹತ್ತಿಪ್ಪತ್ತು ನಿಮಿಷದಲ್ಲಿಯೇ ಜೋಮು ಬಿಟ್ಟು ಹೋಗುತ್ತದೆ ಎಂದುಕೊಂಡ ಬನ್ಸಾಲ್ ಹಾಗೇ ಕೂತರು. ಆದರೆ ಆಗಿದ್ದೇ ಬೇರೆ. ಐದಾರು ನಿಮಿಷಗಳಲ್ಲಿ ಮತ್ತೊಂದು ಕಾಲಿಗೂ ಜೋಮು ಹಿಡಿಯಿತು. ನಂತರದ ಕ್ಷಣಗಳಲ್ಲಿ ಪ್ರಜ್ಞೆ ತಪ್ಪಿ ಬಿದ್ದು ಬಿಟ್ಟರು ಬನ್ಸಾಲ್.
****************************
‘ಮಿಸ್ಟರ್ ಬನ್ಸಾಲ್, ನಿಮಗೊಂದು ಕಹಿ ಸುದ್ದಿ ಹೇಳಬೇಕಾಗಿದೆ. ಏನೆಂದರೆ ನಿಮ್ಮ ಸೊಂಟದ ಕೆಳಗಿನ ಭಾಗ ಪೂರ್ತಿಯಾಗಿ ಸ್ವಾನ ಕಳೆದುಕೊಂಡಿದೆ. ಬಹುಶಃ ಇದು ವಂಶವಾಹಿ ಕಾಯಿಲೆ ಅನಿಸುತ್ತದೆ. ಇದಕ್ಕೆ ಶಾಶ್ವತ ಚಿಕಿತ್ಸೆ ಇಲ್ಲ. ಮುಚ್ಚುಮರೆ ಇಲ್ಲದೆ ಹೇಳ್ತಾ ಇದೀವಿ. ಅಮ್ಮಮ್ಮಾ ಅಂದ್ರೆ ನೀವು ಇನ್ನು ಹದಿನೈದು ವರ್ಷ ಬದುಕಬಹುದು ಅಷ್ಟೇ. ಅದಕ್ಕಿಂತ ಜಾಸ್ತಿ ದಿನ ಬದುಕುವ ಛಾನ್ಸಸ್ ತುಂಬಾ ಕಡಿಮೆ. ಈಗ ದೇಹದ ಅರ್ಧ ಭಾಗವೇ ನಿಷ್ಕ್ರಿಯವಾಗಿದೆಯಲ್ಲ? ಅದೇ ಕಾರಣದಿಂದ ಮುಂದೆ ಒಂದೊಂದೇ ಹೊಸ ಕಾಯಿಲೆಗಳು ನಿಮ್ಮ ಜೊತೆಯಾಗಲಿವೆ. ಎಲ್ಲವನ್ನೂ ಎದುರಿಸಲಿಕ್ಕೆ ಈಗಿನಿಂದಲೇ ಮಾನಸಿಕವಾಗಿ ಸಿದ್ಧರಾಗಿ…’ ನಿರ್ವಿಕಾರ ಭಾವದಿಂದಲೇ ಇಷ್ಟನ್ನೂ ಹೇಳಿದ ವೈದ್ಯರು ಕಡೆಗೊಮ್ಮೆ ‘ಗುಡ್ಲಕ್’ ಎಂದು ಹೊರನಡೆದರು.
ಈ ರೋಗಕ್ಕೆ ಚಿಕಿತ್ಸೆ ಸಾಧ್ಯವಿಲ್ಲ ಎಂದು ಒಬ್ಬ ಡಾಕ್ಟರ್ ಹೇಳಿದರೆ, ನಾವೆಲ್ಲ ಇನ್ನೊಬ್ಬ ವೈದ್ಯರನ್ನು ಹುಡುಕುವುದಿಲ್ಲವೆ? ಬನ್ಸಾಲ್ ಕೂಡ ಹಾಗೇ ಮಾಡಿದರು. ಆಸ್ಪತ್ರೆಯಿಂದ ಆಸ್ಪತ್ರೆಗೆ, ವಾರ್ಡ್ನಿಂದ ವಾರ್ಡ್ಗೆ ಅಲೆದರು. ಅಲೋಪತಿ, ಹೋಮಿಯೋಪತಿ, ಆಯುರ್ವೇದ, ನಾಟಿ ವೈದ್ಯ ಎಲ್ಲಕ್ಕೂ ‘ಸೈ’ ಎಂದರು. ಈ ಚಿಕಿತ್ಸೆಗಳಿಂದ ಕಷ್ಟಕಾಲಕ್ಕೆಂದು ಕೂಡಿಟ್ಟಿದ್ದ ಹಣವೆಲ್ಲ ಖರ್ಚಾಗಿ ಹೋಯಿತು. ಆದರೆ ರೋಗ ಗುಣವಾಗಲಿಲ್ಲ. ಈ ಸಂದರ್ಭದಲ್ಲಿಯೇ ಪತ್ರಮಿತ್ರರಾಗಿದ್ದ ಅಮೆರಿಕದ ವೈದ್ಯರೊಬ್ಬರು ಹೀಗೆ ಸಲಹೆ ನೀಡಿದ್ದರು : ‘ಈ ಕಾಯಿಲೆ ಬಗ್ಗೆ ಯೋಚಿಸಿ ಯೋಚಿಸಿ ನೀವು ಮಾನಸಿಕವಾಗಿ ಇಳಿದು ಹೋಗ್ತೀರಿ. ಒಂದು ಕೆಲ್ಸ ಮಾಡಿ. ನೀವು ಟ್ಯೂಶನ್ ಹೇಳಿಕೊಂಡು ಯಾಕೆ ಹೊಸಬದುಕು ಶುರು ಮಾಡಬಾರದು? ಟ್ಯೂಶನ್ ಮಾಡ್ತೀರಿ ಅಂದ್ರೆ ನೀವು ಯಾವಾಗಲೂ ಓದಿಕೊಳ್ತಾ ಇರಬೇಕಾಗುತ್ತೆ. ಆ ಒತ್ತಡದಲ್ಲಿ ನಿಮಗೆ ಕಾಯಿಲೆಯ ನೆನಪೇ ಬರುವುದಿಲ್ಲ…’
ವೈದ್ಯರ ಸಲಹೆಯೇನೋ ಚೆನ್ನಾಗೇ ಇತ್ತು. ಆದರೆ ಎಂಜಿನಿಯರ್ ಆಗಿದ್ದ ಬನ್ಸಾಲ್ಗೆ ಪಾಠ ಮಾಡಿ ಅಭ್ಯಾಸವೇ ಇರಲಿಲ್ಲ. ಹೀಗಿರುವಾಗ ಟ್ಯೂಶನ್ ಶುರುಮಾಡುವುದಾದರೂ ಹೇಗೆ? ಟ್ಯೂಶನ್ ಮಾಡುವುದಾದರೂ ಯಾರಿಗೆ ಎಂದು ಯೋಚಿಸಿ ಹಣ್ಣಾದರು ಬನ್ಸಾಲ್. ಈ ಸಂದರ್ಭದಲ್ಲಿ ನೆರವಿಗೆ ಬಂದ ಬನ್ಸಾಲ್ರ ಪತ್ನಿ ನೀಲಂ. ‘ಈಗ ಒಂದು ಟ್ರೈಸೈಕಲ್ ತಗೊಳ್ಳೋಣ. ಅದರಲ್ಲಿ ನೀವು ಆಫೀಸಿಗೆ ಹೋಗಿ ಬರೋದು ಅಭ್ಯಾಸ ಮಾಡಿಕೊಳ್ಳಿ. ‘ಇಲ್ಲಿ ಟ್ಯೂಶನ್ ಮಾಡಲಾಗುವುದು’ ಎಂದು ಬೋರ್ಡ್ ಹಾಕಿಸ್ತೇನೆ. ಮುಂದೆ, ಯಾರು ಬರ್ತಾರೋ ಅವರಿಗೆ ಟ್ಯೂಶನ್ ಹೇಳಿ. ಹೇಗಿದ್ರೂ ನಿಮ್ದು ಎಂಜಿನಿಯರಿಂಗ್ ಫೀಲ್ಡ್ ತಾನೆ? ಗಣಿತ-ವಿಜ್ಞಾನದ ವಿಷಯ ನಿಮ್ಗೆ ತುಂಬಾ ಚೆನ್ನಾಗಿ ಗೊತ್ತಿರುತ್ತೆ. ಎಸೆಸ್ಸೆಲ್ಸಿ-ಪಿಯುಸಿ ಮಕ್ಕಳಿಗೆ ಪಾಠ ಹೇಳಿದ್ರಾಯ್ತು…’ ಎಂದಳು.
ಮರುದಿನ ಟ್ರೈಸೈಕಲ್ನಲ್ಲೇ ಆಫೀಸಿಗೆ ಹೊರಟರು ಬನ್ಸಾಲ್. ಸಂಜೆಯ ವೇಳೆಗೆ ಮನೆಯ ಮುಂದೆ -‘ಇಲ್ಲಿ ಟ್ಯೂಶನ್ ಮಾಡಲಾಗುವುದು’ ಎಂಬ ಬೋರ್ಡ್ ಇತ್ತು ನಿಜ. ಆದರೆ ಎರಡು ತಿಂಗಳಾದರೂ ಅವರಲ್ಲಿ ಪಾಠ ಹೇಳಿಸಿಕೊಳ್ಳಲು ಒಬ್ಬೇ ಒಬ್ಬ ವಿದ್ಯಾರ್ಥಿಯೂ ಬರಲಿಲ್ಲ. ‘ಮುಂದೇನು ’ ಎಂದು ಬನ್ಸಾಲ್ ಅವರು ತಲೆಮೇಲೆ ಕೈಹೊತ್ತು ಕೂತಿದ್ದಾಗಲೇ ಒಬ್ಬ ವಿದ್ಯಾರ್ಥಿ ಬಂದ. ಹಿಂದೆಯೇ ಅವನ ತಂದೆ ತಾಯಿಯೂ ಇದ್ದರು. ಪೋಷಕರೇ ಮಾತು ಆರಂಭಿಸಿ ಹೇಳಿದರು: ‘ಇವ್ನು ನಮ್ಮ ಮಗ ಸ್ವಾಮಿ. ಏಳನೇ ಕ್ಲಾಸು. ವಿಪರೀತ ದಡ್ಡ. ಇವನಿಗೆ ಪಾಠ ಹೇಳಿಕೊಟ್ಟು ಉದ್ದಾರ ಮಾಡಿ ಸ್ವಾಮೀ…’
ಎಸ್ಸೆಸ್ಸೆಲ್ಸಿ-ಪಿಯುಸಿ ಮಕ್ಕಳಿಗೆ ಪಾಠ ಹೇಳುವುದೆಂದು ಬನ್ಸಾಲ್ ನಿರ್ಧರಿಸಿದ್ದರು ನಿಜ. ಆದರೆ, ಕಣ್ಣೆದುರಿಗಿದ್ದವನು ಏಳನೇ ತರಗತಿಯ ಶತದಡ್ಡ! ಇರಲಿ, ಇದು ನನಗೆ ಸತ್ವ ಪರೀಕ್ಷೆಯ ಕಾಲ ಎಂದುಕೊಂಡ ಬನ್ಸಾಲ್, ಆ ಹುಡುಗನಿಗೆ ಇನ್ನಿಲ್ಲದ ಶ್ರದ್ಧೆಯಿಂದ ಪಾಠ ಹೇಳಿಕೊಟ್ಟರು. ಹಾಂ ಹೂಂ ಅನ್ನುವುದರೊಳಗೆ ಆರು ತಿಂಗಳು ಕಳೆದೇ ಹೋಯಿತು. ಟ್ಯೂಶನ್ಗೆ ಬರುತ್ತಿದ್ದ ಹುಡುಗನ ಪರೀಕ್ಷೆ ಮುಗಿದು ಫಲಿತಾಂಶವೂ ಬಂತು. ಬನ್ಸಾಲ್ ಅವರ ಬದುಕಿನ ಮೊದಲ ಪವಾಡ ನಡೆದದ್ದೇ ಆಗ. ಅದುವರೆಗೂ ಎಲ್ಲರಿಂದಲೂ ಶತದಡ್ಡ ಎಂದು ಕರೆಸಿಕೊಂಡಿದ್ದ ಆ ಹುಡುಗ ಶಾಲೆಗೇ ಮೊದಲಿಗನಾಗಿ ಪಾಸಾಗಿದ್ದ!
ಶತದಡ್ಡ ವಿದ್ಯಾರ್ಥಿಯೊಬ್ಬನನ್ನು ತರಗತಿಗೇ ಮೊದಲಿಗನಾಗುವಂತೆ ಮಾಡಿದ ಬನ್ಸಾಲ್ರ ಕೀರ್ತಿ ನಾಲ್ಕೇ ದಿನಗಳಲ್ಲಿ ಮನೆಮನೆಗೆ ತಲುಪಿತು. ಪರಿಣಾಮ, ಪ್ರೌಢಶಾಲೆ ವಿದ್ಯಾರ್ಥಿಗಳು ಮರುದಿನದಿಂದಲೇ ಗುಂಪುಗುಂಪಾಗಿ ಟ್ಯೂಶನ್ಗೆ ಬರತೊಡಗಿದರು. ೧೯೮೧ರಿಂದ ೧೯೯೧ ರವರೆಗೆ, ಹತ್ತು ವರ್ಷ ಕಾಲ, ಬೆಳಗ್ಗೆ ೯ರಿಂದ ಸಂಜೆ ೬ರವರೆಗೆ ಫ್ಯಾಕ್ಟರಿ; ೭ರಿಂದ ರಾತ್ರಿ ೧೦.೩೦ರ ತನಕ ಟ್ಯೂಶನ್… ಹೀಗೇ ಬದುಕಿಬಿಟ್ಟರು ಬನ್ಸಾಲ್.
ಬರುಬರುತ್ತಾ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚತೊಡಗಿತು. ಹೆಚ್ಚಾಗಿ ಪಿಯುಸಿ, ಡಿಗ್ರಿಯ ವಿದ್ಯಾರ್ಥಿಗಳೂ ಬರತೊಡಗಿದರು. ಅವರ ಸಮಸ್ಯೆಗಳಿಗೆಲ್ಲ ಸುಲಭವಾಗಿ ಉತ್ತರ ಹೇಳಬೇಕು ಅಂದರೆ, ತಾವು ವಿಪರೀತ ಓದಬೇಕು, ಹೋಂವರ್ಕ್ ಮಾಡಿಕೊಂಡು ತಯಾರಾಗಬೇಕು ಎಂದು ಬನ್ಸಾಲ್ಗೆ ಅರ್ಥವಾಗಿ ಹೋಯಿತು. ಕಡೆಗೊಮ್ಮೆ ಗಟ್ಟಿಮನಸ್ಸು ಮಾಡಿ ಬನ್ಸಾಲ್, ಫ್ಯಾಕ್ಟರಿಯ ನೌಕರಿಗೆ ರಾಜೀನಾಮೆ ನೀಡಿದರು. ತಾವು ವಾಸವಿದ್ದ ರಾಜಸ್ಥಾನದ ಕೋಟ ನಗರದಲ್ಲಿ ನಾಲ್ಕು ಅಂತಸ್ತಿನ ಬಿಲ್ಡಿಂಗ್ ಕಟ್ಟಿಸಿ ಅಲ್ಲಿ ‘ಬನ್ಸಾಲ್ ಕೋಚಿಂಗ್ ಕ್ಲಾಸ್’ ಆರಂಭಿಸಿದರು. ಈ ವೇಳೆಗೆ ಡಾಕ್ಟರ್ ನೀಡಿದ್ದ ಹದಿನೈದು ವರ್ಷದ ಡೆಡ್ಲೈನ್ ಮುಗಿದು ಹೋಗಿತ್ತು. ಛಲ ವೊಂದಿದ್ದರೆ ಸಾವನ್ನೂ ಹಿಮ್ಮೆಟ್ಟಿಸ ಬಹುದು ಎಂಬುದನ್ನು ಆ ವೇಳೆಗೆ ‘ಅನುಭವದಿಂದಲೇ ಕಂಡು ಕೊಂಡಿದ್ದ ಬನ್ಸಾಲ್, ಬಿ.ಇ. ಪದವಿಯ ನಂತರ ಐಐಟಿಗೆ ಸೇರಬಯಸುವ ವಿದ್ಯಾರ್ಥಿಗಳಿಗೆ ಟ್ಯೂಶನ್ ಆರಂಭಿಸಿದರು.
ಐಎಎಸ್, ಐಪಿಎಸ್ಗೆ ಸರಿಸಮನಾದದ್ದು ಐಐಟಿ. ಆ ಪರೀಕ್ಷೆಯಲ್ಲಿ ಯಶಸ್ಸಾಗುವುದು ಕಷ್ಟ ಕಷ್ಟ. ಐಐಟಿ ವಿದ್ಯಾರ್ಥಿಗಳಿಗೆ ಟ್ಯೂಶನ್ ಆರಂಭಿಸಿದಾಗಲೇ ಬನ್ಸಾಲ್ಗೆ ಇದು ಗೊತ್ತಿತ್ತು. ಆದರೂ ಅವರು ಹಿಂಜರಿಯಲಿಲ್ಲ. ಆದಷ್ಟೂ ಸರಳವಾಗಿ, ಸುಲಭವಾಗಿ ಅರ್ಥವಾಗುವಂತೆ ಪಾಠ ಹೇಳಿದರು. ಬನ್ಸಾಲ್ರಿಂದ ಪಾಠ ಹೇಳಿಸಿಕೊಂಡು ೧೯೮೫ರಲ್ಲಿ ಐಐಟಿ ಪರೀಕ್ಷೆ ಬರೆದ ಅನೂಪ್ ಕೊಥಾರಿ ಎಂಬಾತ ದೇಶಕ್ಕೇ ಐದನೆಯವನಾಗಿ ಪಾಸಾದ ನೋಡಿ; ಆಗ ಬನ್ಸಾಲ್ರ ಅದೃಷ್ಟದ ಬಾಗಿಲು ಮತ್ತೊಮ್ಮೆ ತೆರೆದುಕೊಂಡಿತು.
ಮುಂದೆ ನಡೆದಿದ್ದೆಲ್ಲ ಪವಾಡವೇ. ಮರುವರ್ಷ, ಅಂದರೆ ೧೯೮೬ರಲ್ಲಿ ಬನ್ಸಾಲ್ ಅವರಿಂದ ಪಾಠ ಹೇಳಿಸಿಕೊಂಡಿದ್ದ ಮೂವರು ಐಐಟಿಯಲ್ಲಿ ರ್ಯಾಂಕ್ ಬಂದರು. ೧೯೯೦ರಲ್ಲಿ ಈ ಸಂಖ್ಯೆ ೧೦ಕ್ಕೆ ಬಂದು ನಿಂತಿತು. ೧೯೯೯ ರಲ್ಲಿ ಮಾತ್ರ ಯಾರೂ ನಿರೀಕ್ಷಿಸದ ಅದ್ಭುತವೊಂದು ನಡೆದುಹೋಯಿತು. ಆ ವರ್ಷ ಬನ್ಸಾಲ್ ಅವರಿಂದ ಟ್ಯೂಶನ್ ಹೇಳಿಸಿಕೊಂಡಿದ್ದ ೭೦೦ ವಿದ್ಯಾರ್ಥಿಗಳು ಐಐಟಿ ಪರೀಕ್ಷೆಯಲ್ಲಿ ಪಾಸಾಗಿದ್ದರು. ಈ ಪೈಕಿ ೨೦೯ ಮಂದಿ ಡಿಸ್ಟಿಂಕ್ಷನ್ ಬಂದಿದ್ದರು! ಫಲಿತಾಂಶ ಕಂಡು ಸಂಭ್ರಮದಿಂದ ಕುಣಿದಾಡಿದ ಅಷ್ಟೂ ವಿದ್ಯಾರ್ಥಿಗಳು ಏಕಕಂಠದಲ್ಲಿ ಹೇಳಿದ್ದು ಒಂದೇ ಮಾತು: ಈ ಯಶಸ್ಸು ಖಂಡಿತ ನಮ್ಮದಲ್ಲ. ಇದು ಬನ್ಸಾಲ್ ಸರ್ಗೆ ಸಲ್ಲಬೇಕಾದದ್ದು…
ಈಗ ಏನಾಗಿದೆ ಅಂದರೆ, ಬನ್ಸಾಲ್ ಅವರ ಟ್ಯುಟೋರಿಯಲ್ನಲ್ಲಿ ೧೮೦೦೦ ವಿದ್ಯಾರ್ಥಿಗಳು ಟ್ಯೂಶನ್ಗೆ ಬರುತ್ತಿದ್ದಾರೆ. ೧೫೦ ಮಂದಿ ಉಪನ್ಯಾಸಕರು ಅಲ್ಲಿ ಬದುಕು ಕಂಡುಕೊಂಡಿದ್ದಾರೆ. ಬನ್ಸಾಲ್ ಟ್ಯುಟೋರಿಯಲ್ಸ್ನ ವಾರ್ಷಿಕ ಆದಾಯ ೧೦೦ ಕೋಟಿ ದಾಟಿದೆ. ಬನ್ಸಾಲ್ ಅವರ ವೈಯಕ್ತಿಕ ಆದಾಯವೇ ವರ್ಷಕ್ಕೆ ೧೮ ಕೋಟಿ ದಾಟುತ್ತಿದೆ. ಗಣಿತದ ತಲೆ-ಬುಡ ಗೊತ್ತಿಲ್ಲದವನೂ ಕೂಡ ಬನ್ಸಾಲ್ ಬಳಿ ಪಾಠ ಹೇಳಿಸಿಕೊಂಡರೆ ರ್ಯಾಂಕ್ ಬರುತ್ತಾನೆ ಎಂಬ ಮಾತು ಜನಜನಿತವಾಗಿದೆ.ಬನ್ಸಾಲ್ ಟ್ಯುಟೋರಿಯಲ್ಸ್ನಿಂದ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಕೋಟ ಜಿಲ್ಲೆಯ ನೂರಾರು ಹೋಟೆಲುಗಳಿಗೂ ಅದೃಷ್ಟ ಖುಲಾಯಿಸಿದೆ. ಇಲ್ಲಿ ಐಐಟಿ ಟ್ಯೂಷನ್ಗೆ ಬರುವ ವಿದ್ಯಾರ್ಥಿಗಳು ತಲಾ ನಾಲ್ಕೈದು ತಿಂಗಳು ಲಾಡ್ಜ್ಗಳಲ್ಲ; ಬಾಡಿಗೆ ಮನೆಗಳಲ್ಲಿ ತಂಗುತ್ತಿದ್ದಾರೆ. ಹೆಣ್ಣು ಮಕ್ಕಳಿಗೆಂದು ಪಿಜಿಗಳೂ ಆರಂಭವಾಗಿವೆ.ಟ್ಯೂಷನ್ಗೆ ಬರುವ ವಿದ್ಯಾರ್ಥಿಗಳ ಬಾಡಿಗೆ ಹಣದಿಂದಲೇ ನೂರಾರು ಕುಟುಂಬಗಳು ಬದುಕು ಕಂಡುಕೊಂಡಿವೆ…
ಈ ಮಧ್ಯೆ ಬನ್ಸಾಲ್ ಅವರ ರೋಗ ಪೂರ್ತಿ ಗುಣವಾಗಿಲ್ಲ ನಿಜ. ಆದರೆ ಬನ್ಸಾಲ್ರ ಃಶಕ್ತಿಯ ಮುಂದೆ ಅದು ಸೋತುಹೋಗಿದೆ. ಮೊನ್ನೆ ಮೊನ್ನೆಯಷ್ಟೇ ೬೦ನೇ ಹುಟ್ಟುಹಬ್ಬ ಆಚರಿಸಿಕೊಂಡ ಬನ್ಸಾಲ್- ‘ನೋಡ್ತಿರಿ, ನಾನು ಇನ್ನೂ ಇಪ್ಪತ್ತು ವರ್ಷ ಆರಾಮಾಗಿರ್ತೀನಿ. ನನಗಾಗಿ ಅಲ್ಲದಿದ್ದರೂ ನನ್ನ ವಿದ್ಯಾರ್ಥಿಗಳಿಗಾಗಿಯಾದ್ರೂ ನಾನು ಬದುಕಲೇಬೇಕಲ್ವ?’ ಎಂದು ನಗುತ್ತಾರೆ.
******************
ದೇಹದ ಅರ್ಧ ಭಾಗವೇ ಸ್ವಾನದಲ್ಲಿಲ್ಲ ಎಂದು ಗೊತ್ತಾದ ನಂತರವೂ ಅಪಾರ ಜೀವನೋತ್ಸಾಹದಿಂದ ಬದುಕುತ್ತಿರುವ; ಸಾವು ಮಗ್ಗುಲಲ್ಲೇ ನಿಂತಿದೆ ಎಂದು ಗೊತ್ತಾದ ನಂತರವೂ ಇನ್ನೂ ೨೦ ವರ್ಷ ಬದುಕ್ತೀನಿ ನೋಡ್ತಾ ಇರಿ ಎಂದು ಆತ್ಮವಿಶ್ವಾಸದಿಂದ ಹೇಳುತ್ತಿರುವ ಬನ್ಸಾಲ್- ಚಿಕ್ಕ ಪುಟ್ಟ ಸೋಲಿಂದ ಹತಾಶರಾಗಿ ಗೋಳಾಡುವ ಎಲ್ಲರಿಗೂ ಮಾದರಿ. ಅಲ್ಲವೇ?

ಕ್ಯಾನ್ಸರ್ ವಿರುದ್ಧ ತೊಡೆ ತಟ್ಟುತ್ತಾ ೬೦ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ.

ಡಿಸೆಂಬರ್ 30, 2009

* ‘ಅವಳು’ ಕಾರಣವಿಲ್ಲದೆಯೇ ‘ಕೈ’ ಕೊಡುತ್ತಾಳೆ.
* ಡಿಗ್ರಿ ಕಡೆಯ ವರ್ಷದ ಫಲಿತಾಂಶ ಶೇ.೪೨ಕ್ಕೆ ಬಂದು ನಿಂತಿರುತ್ತದೆ.
* ಬದುಕಿಗೆ ಒಂದು ಭದ್ರತೆ ಒದಗಿಸಿದ್ದ ನೌಕರಿ ಇದ್ದಕ್ಕಿದ್ದಂತೆ ಕೈ ತಪ್ಪಿ ಹೋಗುತ್ತದೆ.
* ತುಂಬ ಪ್ರೀತಿಸುತ್ತಿದ್ದ ಅಮ್ಮ ಅದೊಂದು ಮುಂಜಾನೆ ದಿಢೀರ್ ಸತ್ತು ಹೋಗುತ್ತಾಳೆ.
* ಆಕಸ್ಮಿಕವಾಗಿ ಕೈ ಹಿಡಿದ ಯಶಸ್ಸಿನಿಂದಾಗಿ ಜೇಬಿನ ತುಂಬಾ ದುಡ್ಡು ಸೇರಿರುತ್ತದೆ.

ಇಂಥ ಸಂದರ್ಭದಲ್ಲೆಲ್ಲ ನೋವು ಮರೆಯಲು ಹೆಚ್ಚಿನ ಯುವಕರು ಒಂದು ‘ಅಭ್ಯಾಸ’ಕ್ಕೆ ಮುಂದಾಗುತ್ತಾರೆ: ಅದೇ-ಸಿಗರೇಟು ಸೇದುವುದು! ಸಿಗರೇಟೆಂಬುದು ಕೆಲವರ ಪಾಲಿಗೆ ಹಾಬಿ. ಕೆಲವರ ಪಾಲಿಗೆ ಅದೊಂದು ಶೋಕಿ. ಒಂದಿಷ್ಟು ಮಂದಿಗೆ ಸಿಗರೇಟು ಎಂಬುದು ಚಟ. ಮತ್ತೊಂದಿಷ್ಟು ಮಂದಿಯ ಪಾಲಿಗೆ ಅದು-ನೋವು ನಿವಾರಕ ಮದ್ದು! ರಜನಿಕಾಂತ್ಗೆ ಮಾತ್ರ ಸಿಗರೇಟ್ ಎಂಬುದು ಐಡೆಂಟಿಟಿ. ಅದೊಂದು ಸ್ಟೈಲು. ಸಿಗರೇಟು ಸೇದುತ್ತಲೇ ನೌಕರಿ ಮಾಡುವ ಜನರ ಪಾಲಿಗೆ, ಅದು ಸೂರ್ತಿ ದೇವತೆ! ಹೀಗೆ, ಯಾವುದೋ ಒಂದು ಕಾರಣದಿಂದ ಆಕಸ್ಮಿಕವಾಗಿ ಸಿಗರೇಟಿನ ಹುಚ್ಚು ಅಂಟಿಸಿಕೊಂಡವರು, ನಂತರದ ವರ್ಷಗಳಲ್ಲಿ ಅದನ್ನು ಬಿಟ್ಟು ‘ಬದುಕಲಾರದ’ ಸ್ಥಿತಿ ತಲುಪಿಬಿಡುತ್ತಾರೆ. ‘ಇದು ಕೆಟ್ಟ ಚಟ ಕಣ್ರೀ. ಆದಷ್ಟು ಬೇಗ ಬಿಟ್ಟುಬಿಡಿ. ಇದರಿಂದ ಆರೋಗ್ಯ ಹಾಳಾಗುತ್ತೆ’ ಎಂದು ಯಾರಾದರೂ ಬುದ್ಧಿ ಹೇಳಿದರೆ- ಒಂದು ಹೊತ್ತಿನ ಊಟ ಬೇಕಾದ್ರೂ ಬಿಡ್ತೀನಿ. ಆದ್ರೆ ಸಿಗರೇಟು ಬಿಡೋಕಾಗಲ್ಲ’ ಎನ್ನುತ್ತಾರೆ. ಸಿಗರೇಟು ಚಟದವರ ಅಂತರಂಗದ ಪಿಸುಮಾತನ್ನೇ ಕವಿ ಬಿ.ಆರ್. ಲಕ್ಷ್ಮಣರಾವ್ ಅವರು ತಮ್ಮ ಪದ್ಯವೊಂದರಲ್ಲಿ ಹೀಗೆ ಹೇಳಿದ್ದಾರೆ:

ಬಿಡಲಾರೆ ನಾ ಸಿಗರೇಟು
ಹುಡುಗಿ, ನಿನ್ನಂತೆ ಅದು ಥೇಟು
ಬಿಡಬಲ್ಲೆನೆ ನಾ ನಿನ್ನ ಚಿನ್ನ
ಹಾಗೆಯೇ ಸಿಗರೇಟನ್ನ!

ಹೀಗೆ, ಯಾರನ್ನು ಬಿಟ್ಟರೂ, ಏನನ್ನು ಬಿಟ್ಟರೂ ಸಿಗರೇಟನ್ನು ಬಿಡಲಾರೆ ಎನ್ನುತ್ತಾರಲ್ಲ? ಅಂಥವರ ಪೈಕಿ ಹೆಚ್ಚಿನವರಿಗೆ- ‘ಸಿಗರೇಟು ಸೇವನೆ ಆರೋಗ್ಯಕ್ಕೆ ಹಾನಿಕರ’ ಎಂದು ಗೊತ್ತಿರುತ್ತದೆ. ಅತಿಯಾದ ಸಿಗರೇಟು ಸೇವನೆಯಿಂದ ಕಣ್ಣಿಗೆ ತೊಂದರೆಯಿದೆ. ಕರುಳಿಗೂ ಕಂಟಕವಿದೆ. ವಿಪರೀತ ಸಿಗರೇಟು ಸೇದುವುದರಿಂದ ಕಿಡ್ನಿಗೂ ಅಪಾಯವಿದೆ. ತುಂಬ ಮುಖ್ಯವಾಗಿ ಕ್ಯಾನ್ಸರ್ ಬರುತ್ತದೆ. ಸಿಗರೇಟಿನಲ್ಲಿರುವ ವಿಷಕಾರಕ ರಾಸಾಯನಿಕಗಳಿಂದ ಶ್ವಾಸಕೋಶಕ್ಕೆ ಹಾನಿಯಾಗುತ್ತದೆ. ಗಂಟಲು ನಾಳ ಕಟ್ಟಿಕೊಳ್ಳುತ್ತದೆ. ಇಂಥ ಸಂದರ್ಭ ಎದುರಾದರೆ ತಿಂಡಿ ತಿನ್ನುವುದಿರಲಿ; ನೀರು ಕುಡಿಯುವುದಕ್ಕೂ ಕಷ್ಟವಾಗುತ್ತದೆ ಎಂದೂ ಗೊತ್ತಿರುತ್ತದೆ. ಒಂದೇ ಮಾತಿನಲ್ಲಿ ಹೇಳುವುದಾದರೆ, ಸಿಗರೇಟು ಸೇವನೆಯಿಂದ ಹತ್ತಾರು ಬಗೆಯ ಕಾಯಿಲೆಗಳಿಗೆ ತುತ್ತಾದವರು; ನರಳುತ್ತಲೇ ಬದುಕಿದವರು, ಕ್ಯಾನ್ಸರ್ಗೆ ಬಲಿಯಾದವರು ಪ್ರತಿ ಊರಿನಲ್ಲೂ; ಹುಡುಕಿದರೆ- ‘ಚಟಗಾರ’ರಿಗೆ ಪ್ರತಿ ಬೀದಿಯಲ್ಲೂ ಸಿಗುತ್ತಾರೆ. ಆದರೆ, ಸಿಗರೇಟಿನಿಂದ ಉದ್ಧಾರವಾದ ಒಂದೇ ಒಂದು ಜೀವ- ಭೂತಕನ್ನಡಿ ಹಾಕಿ ಹುಡುಕಿದರೂ ಸಿಗುವುದಿಲ್ಲ!
ಸ್ವಾರಸ್ಯವೆಂದರೆ- ಸಿಗರೇಟು ಸೇವನೆಯಿಂದ ಆಗುವ ಅಪಾಯದ ಬಗ್ಗೆ ಹೆಚ್ಚಿನವರಿಗೆ ತಿಳಿದಿರುತ್ತದೆ. ಹಾಗಿದ್ದೂ ಅವರು- ‘ಅಯ್ಯೋ, ಹಾಗೆ ಆದಾಗ ನೋಡಿಕೊಂಡರಾಯ್ತು. ಈಗೇನು? ಎಲ್ಲ ಕಾಯಿಲೆಗೂ ಮಾತ್ರೆ, ಟಾನಿಕ್ ಬಂದಿದೆ. ಇವತ್ತಲ್ಲ ನಾಳೆ, ಕಾನ್ಸರ್ಗೂ ಸುಲಭ ಚಿಕಿತ್ಸೆ ಬಂದೇ ಬರುತ್ತೆ. ಆಗ ಟ್ರೀಟ್ಮೆಂಟ್ ತಗೊಂಡ್ರಾಯ್ತು. ಸದ್ಯಕ್ಕೆ ಒಂದು ಸಿಗರೇಟು ಸೇದೋಣ’ ಎಂದು ಕಡ್ಡಿ ಗೀರಿಯೇ ಬಿಡುತ್ತಾರೆ! ಮುಂದೊಂದು ದಿನ, ಕ್ಯಾನ್ಸರ್ ವಾಸಿಮಾಡುವಂಥ ಔಷ ಇಲ್ಲ ಎಂದು ಅವರಿಗೆ ಗೊತ್ತಾಗುತ್ತದೆ ನಿಜ. ಆದರೆ ಆಗ ತುಂಬಾ ತಡವಾಗಿರುತ್ತದೆ!
ಅಲ್ಲ, ಗಾತ್ರದಲ್ಲಿ ನಮ್ಮ ಕಿರುಬೆರಳಿಗಿಂತ ಚಿಕ್ಕದಿರುವ ಸಿಗರೇಟಿಗೆ ಒಂದು ಜೀವವನ್ನೇ ಬಲಿ ತೆಗೆದುಕೊಳ್ಳುವಂಥ ಶಕ್ತಿ ಇದೆಯಾ? ಸಿಗರೇಟು ಸೇವನೆ ಎಂಬ ಚಟ, ನಮ್ಮನ್ನು ಸೀದಾ ಚಟ್ಟಕ್ಕೇ ‘ಹತ್ತಿಸುವಂಥ’ ಶಕ್ತಿ ಹೊಂದಿದೆಯಾ? ಎಂಬ ಪ್ರಶ್ನೆಗೆ ಉತ್ತರಿಸುವ ಮುನ್ನ, ಸಿಗರೇಟಿನಲ್ಲಿ ಯಾವ್ಯಾವ ಹಾನಿಕಾರಕ ವಸ್ತುಗಳನ್ನು ಸೇರಿಸಲಾಗಿದೆ ಎಂದು ತಿಳಿಯಬೇಕು.
ವಿಶ್ವ ಆರೋಗ್ಯ ಸಂಸ್ಥೆ ಬಹಿರಂಗ ಪಡಿಸಿರುವ ವರದಿಯ ಪ್ರಕಾರ- ಸಿಗರೇಟಿನ ಪುಡಿಯಲ್ಲಿ ೪೦೦೦ ರಾಸಾಯನಿಕಗಳ ಮಿಶ್ರಣವಿರುತ್ತದಂತೆ. ಈ ಮಿಶ್ರಣದ ಪಟ್ಟಿಯಲ್ಲಿ ಇಲಿ ಪಾಷಾಣ, ಡಿಡಿಟಿ, ಮೀಥೆನಾಲ್, ಬ್ಯೂಟೇನ್ ರಾಸಾಯನಿಕಗಳು ಹಾಗೂ ಟಾಯ್ಲೆಟ್ ತೊಳೆಯಲು ಬಳಸುವ ಆಸಿಡ್ ಕೂಡ ಸೇರಿರುತ್ತದೆ! ಇಷ್ಟೆಲ್ಲಾ ದೇಹ ಸೇರಿದ ಮೇಲೆ ಕ್ಯಾನ್ಸರ್ ಬಾರದೇ ಇರುತ್ತದೆಯೇ?
ನೆನಪಿಡಿ: ಸುದೀರ್ಘ ಕಾಲದವರೆಗೆ ಸಿಗರೇಟು ಸೇದುವ ಕಾರಣದಿಂದಲೇ ಗಂಟಲಿನಲ್ಲಿ ಗಂಟು ಕಾಣಿಸಿಕೊಳ್ಳಬಹುದು. ಮುಂದೆ, ಅದೇ ಕಾರಣದಿಂದ ಸ್ವರ ಹೊರಡಿಸುವ ಧ್ವನಿ ಪೆಟ್ಟಿಗೆಯೇ ಒಡೆದು ಹೋಗಬಹುದು. ಹೀಗಾದ ಮರುಕ್ಷಣವೇ, ಮಾತು ‘ಬಿದ್ದು ಹೋಗುತ್ತದೆ. ಅಯ್ಯಯ್ಯೋ, ಇದೇನಾಗಿ ಹೋಯ್ತು’ ಎಂದುಕೊಂಡು ವೈದ್ಯರ ಬಳಿಗೆ ಹೋದರೆ- ಧ್ವನಿಪೆಟ್ಟಿಗೆ ಒಡೆದು ಹೋಗಿದೆ ಎಂಬುದರ ಜತೆಗೆ, ನಿಮ್ಮನ್ನು ಕ್ಯಾನ್ಸರ್ ಎಂಬ ಮಾರಿ ಅಮರಿಕೊಂಡಿದೆ ಎಂಬ ಇನ್ನೊಂದು ವಿಷಯವೂ ಬಹಿರಂಗವಾಗುತ್ತದೆ.
****
ಇದಿಷ್ಟನ್ನೂ ವಿವರವಾಗಿ ಹೇಳಲು ಕಾರಣವಾದದ್ದು ಸರ್ಫುದ್ದೀನ್ ಎಂಬಾತನ ಹೋರಾಟದ ಬದುಕು. ೬೦ ವರ್ಷ ದಾಟಿರುವ ಈತ ಚೆನ್ನೈನವನು. ಸಿಗರೇಟಿನ ದಾಸಾನುದಾಸ ಎಂಬಂತೆ ಬದುಕಿದ ಸರ್ಫುದ್ದೀನ್ಗೆ ಈಗ ಮಾತು ಬಿದ್ದುಹೋಗಿದೆ. ಕ್ಯಾನ್ಸರ್ ಅಮರಿಕೊಂಡಿದೆ. ನಾನು ಹೆಚ್ಚು ದಿನ ಬದುಕುವುದಿಲ್ಲ ಎಂಬುದು, ಉಳಿದೆಲ್ಲರಿಗಿಂತ ಮೊದಲು ಸರ್ಫುದ್ದೀನ್ಗೇ ಗೊತ್ತಾಗಿ ಹೋಗಿದೆ. ಸ್ವಾರಸ್ಯವೆಂದರೆ, ಸಾವೆಂಬುದು ತನ್ನ ಹಿಂದೆಯೇ ಇದೆ ಎಂದು ಗೊತ್ತಾದ ನಂತರವೂ ಈತ ಎದೆಗುಂದಿಲ್ಲ. ಬದುಕಿನಲ್ಲಿ ಆಸಕ್ತಿ ಕಳೆದುಕೊಂಡಿಲ್ಲ. ಕನಸು ಕಾಣುವುದನ್ನೂ ನಿಲ್ಲಿಸಿಲ್ಲ. ಈತ ಕ್ಯಾನ್ಸರ್ ವಿರುದ್ಧವೇ ಸಮರ ಸಾರಿದ್ದಾನೆ. ದೇಶದ ಅದೆಷ್ಟೋ ನಗರಗಳಲ್ಲಿ ತನ್ನ ಬದುಕಿನ ಕಥೆಯನ್ನು ಹೇಳಿಕೊಂಡಿದ್ದಾನೆ. ಅದನ್ನು ಸರ್ಫುದ್ದೀನ್ನ ಮಾತುಗಳಲ್ಲೇ ಕೇಳೋಣ:
‘ಚೆನ್ನೈನಲ್ಲಿ ಒಂದು ಸಹಕಾರಿ ಬ್ಯಾಂಕ್ ಇತ್ತು. ಅದರಲ್ಲಿ ಸೆಕ್ರೆಟರಿಯಾಗಿ ನಾನು ವೃತ್ತಿ ಆರಂಭಿಸಿದೆ. ಸಹಕಾರಿ ಬ್ಯಾಂಕ್ ಅಂದಮೇಲೆ ಕೇಳಬೇಕೇ? ಅಲ್ಲಿಗೆ ದಿನವೂ ನೂರಾರು ಜನ ಬರುತ್ತಿದ್ದರು. ಸಾಲಕ್ಕೆ, ಸೈಟ್ಗೆ ಅರ್ಜಿ ಹಾಕುತ್ತಿದ್ದರು. ಸಲಹೆ ಕೇಳುತ್ತಿದ್ದರು. ವಿಶೇಷ ಮರ್ಯಾದೆ ನೀಡಿ ಕಾಫಿಗೆ ಕರೆಯುತ್ತಿದ್ದರು. ಹಾಗೆ ಕಾಫಿಗೆ ಹೋದಾಗಲೆಲ್ಲ ಸಿಗರೇಟು ಸೇದುವುದು ಅಭ್ಯಾಸವಾಯಿತು. ಮುಂದಿನ ಕೆಲವೇ ವರ್ಷಗಳಲ್ಲಿ ಸಿಗರೇಟ್ ಇಲ್ಲದೆ ಬದುಕಲು ಸಾಧ್ಯವೇ ಇಲ್ಲ ಅನ್ನಿಸಿತು. ಮೊದಲು ದಿನಕ್ಕೆ ಎರಡು ಅಥವಾ ಮೂರು ಸಿಗರೇಟು ಸೇದುತ್ತಿದ್ದವನು ಬರಬರುತ್ತಾ ದಿನಕ್ಕೆ ಒಂದು ಪ್ಯಾಕ್ ಖಾಲಿ ಮಾಡಲು ಆರಂಭಿಸಿದೆ. ಯಾವುದೇ ಸಂಕಟವಾದರೂ, ಸಂತೋಷವಾದರೂ ಸಿಗರೇಟಿನತ್ತ ಕೈ ಚಾಚಲು ಕಲಿತೆ. ಥತ್, ಇದೇನಯ್ಯ ಇದೂ? ಎಂದು ರೇಗಿದವರ ಮುಂದೆ- ‘ಹೌದಲ್ವಾ, ಇದು ಬಹಳ ಕೆಟ್ಟಿದ್ದು, ಅದಕ್ಕೇ ಇದನ್ನು ಸುಟ್ಟು ಹಾಕ್ತಾ ಇದೀನಿ’ ಎಂದು ಜೋಕ್ ಹೊಡೆದೆ.
ಸಿಗರೇಟಿನೊಂದಿಗಿನ ನಂಟು ಹೀಗೇ ಅಮೋಘ ಇಪ್ಪತ್ತನೇ ವರ್ಷಕ್ಕೆ ಬಂದಾಗ ಅದೊಂದು ದಿನ ಯಾಕೋ ಗಂಟಲು ಕಟ್ಟಿದ ಹಾಗಾಯಿತು. ಓಹ್, ಥಂಡಿಗೆ ಹೀಗಾಗಿರಬೇಕು ಅಂದುಕೊಂಡೆ. ಮೆಡಿಕಲ್ ಶಾಪ್ಗೆ ಹೋಗಿ ಒಂದಿಷ್ಟು ಮಾತ್ರೆ ಖರೀದಿಸಿದೆ. ಆಗಲೂ ಕಟ್ಟಿದ ಗಂಟಲು ಸರಿಯಾಗಲಿಲ್ಲ. ತಕ್ಷಣವೇ ಸಿರಪ್ ಕುಡಿದೆ. ಒಂದೆರಡು ದಿನದ ಮಟ್ಟಿಗೆ ಎಲ್ಲವೂ ‘ಸರಿಯಾದಂತೆ’ ಕಾಣಿಸಿತು. ಮತ್ತೆ ಸಿಗರೇಟಿಗೆ ಕಡ್ಡಿ ಗೀರಿದೆ. ಆದರೆ, ನಂತರದ ಕೆಲವೇ ದಿನಗಳಲ್ಲಿ ನೀರು ಗುಟುಕರಿಸುವುದೂ ಕಷ್ಟವಾಯಿತು. ತಡೆಯಲಾಗದಂಥ ಗಂಟಲು ನೋವು ಬಂತು. ನನ್ನ ಧ್ವನಿ ನನಗೇ ಅರ್ಥವಾಗದಷ್ಟು ‘ಗೊಗ್ಗರು ಗೊಗ್ಗರಾಯಿತು!’. ಏನೋ ತೊಂದರೆಯಾಗಿರಬೇಕು ಎಂದು ಆಸ್ಪತ್ರೆಗೆ ಹೋಗಲು ತಯಾರಾದೆ. ಮುಂಜಾನೆಗೇ ಎದ್ದು- ‘ಆಸ್ಪತ್ರೆಗೆ ಹೋಗಿ ಬರೋಣ. ಜತೆಗೆ ಬಾ’ ಎಂದು ಗೆಳೆಯನನ್ನು ಕರೆಯಲು, ನಂಬರ್ ಒತ್ತಿ ಮಾತಾಡಲು ಹೋದರೆ-ಧ್ವನಿಯೇ ಹೊರಡಲಿಲ್ಲ. ಗಾಬರಿಯಾಯಿತು. ದಡಬಡಿಸಿ ಒಬ್ಬನೇ ಆಸ್ಪತ್ರೆಗೆ ಹೋದೆ. ಅಲ್ಲಿ, ಹತ್ತಾರು ರೀತಿಯ ಚಿಕಿತ್ಸೆ ನಡೆಸಿದ ವೈದ್ಯರು- ‘ನಿಮಗೆ ಧ್ವನಿ ಪೆಟ್ಟಿಗೆ ಒಡೆದು ಹೋಗಿದೆ. ಗಂಟಲು ಕ್ಯಾನ್ಸರ್ ಅಮರಿಕೊಂಡಿದೆ. ಒಡೆದು ಹೋಗಿರುವ ಧ್ವನಿ ಪೆಟ್ಟಿಗೆಯನ್ನು ಶಸ್ತ್ರಚಿಕಿತ್ಸೆಯ ಮೂಲಕ ತಕ್ಷಣವೇ ತೆಗೆದುಹಾಕಬೇಕು. ಇಲ್ಲವಾದಲ್ಲಿ ಜೀವಕ್ಕೇ ಅಪಾಯವಿದೆ. ನಿಮ್ಮ ಒರಿಜಿನಲ್ ‘ಸ್ವರ’ ಮುಂದೆಂದೂ ಮರಳುವುದಿಲ್ಲ. ಶಸ್ತ್ರಚಿಕಿತ್ಸೆಯ ನಂತರ ಎಲೆಕ್ಟ್ರೋನಾರ್ಲೆಕ್ಸ್ ಎಂಬ ಕೃತಕ ಧ್ವನಿಪೆಟ್ಟಿಗೆಯನ್ನು ಅಳವಡಿಸ್ತೀವಿ. ಅದು ನಿಮ್ಮಿಂದ ಮಾತು ಹೊರಡಲಿಕ್ಕೆ ಸಹಾಯ ಮಾಡುತ್ತೆ. ಹೀಗೆ, ಕೃತಕ ಧ್ವನಿಪೆಟ್ಟಿಯ ನೆರವಿಂದ ಬರುವ ಮಾತಿನಲ್ಲಿ ಮಾಧುರ್ಯ ಇರುವುದಿಲ್ಲ’ ಎಂದರು.
ಹೀಗೆ- ‘ಮಾತೇ ಬಿದ್ದು ಹೋಯ್ತು’ ಅನ್ನಿಸಿಕೊಂಡಾಗ ನನಗೆ ಭರ್ತಿ ೫೭ ವರ್ಷ. ‘ಮಾತಿಲ್ಲ’ ಎಂದು ಗೊತ್ತಾದ ತಕ್ಷಣವೇ ನನ್ನನ್ನು ನೌಕರಿಯಿಂದ ಕಿತ್ತುಹಾಕಲಾಯಿತು. ಕೆಲಸವಿಲ್ಲ ಅಂದ ಕ್ಷಣದಿಂದಲೇ ಕಾಸೂ ಇಲ್ಲ ಎಂಬಂತಾಯಿತು ನನ್ನ ಸ್ಥಿತಿ. ತಕ್ಷಣವೇ ಗೆಳೆಯರು ಮಾಯವಾದರು. ಬಂಧುಗಳು ದೂರವಾದರು. ಮನೆಮಂದಿ ಕೂಡ ‘ಅಯ್ಯೋ ಪಾಪ’ ಎಂಬಂತೆ ನೋಡಲು ಆರಂಭಿಸಿದರು. ಇದಕ್ಕೆಲ್ಲ ಕಾರಣವಾದದ್ದು- ಸಿಗರೇಟು! ಒಂದು ರೀತಿಯಲ್ಲಿ ‘ಹುಚ್ಚು’ ಎಂಬಂತೆ ಜತೆಯಾಗಿದ್ದ ಈ ಚಟದಿಂದ ನನಗೆ ಮುಂದೊಂದು ದಿನ ತೊಂದರೆಯಾಗಬಹುದು ಎಂದು ಗೊತ್ತಿತ್ತು. ಆದರೆ, ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ತೊಂದರೆ ಆಗಬಹುದು ಎಂಬ ಅಂದಾಜು ಖಂಡಿತ ಇರಲಿಲ್ಲ…
ಆಗಲೇ ಅರವತ್ತು ಹತ್ತಿರಾಗುತ್ತಿದೆ. ಕ್ಯಾನ್ಸರ್ ಕೂಡ ಜತೆಯಾಗಿದೆ. ಅಂದ ಮೇಲೆ ಈತ ಜಾಸ್ತಿ ದಿನ ಬದುಕುವುದಿಲ್ಲ ಎಂಬ ಮಾತುಗಳನ್ನು ನಂತರದ ದಿನಗಳಲ್ಲಿ ಜತೆಗಿದ್ದವರೇ ಹೇಳತೊಡಗಿದರು. ಹೆಜ್ಜೆ ಹೆಜ್ಜೆಗೂ ತಿರಸ್ಕಾರ, ವ್ಯಂಗ್ಯ, ಅನುಕಂಪ, ಸಮಾಧಾನದ ಮಾತುಗಳಿಂದ ತಿವಿಯತೊಡಗಿದರು. ಈ ಜಗತ್ತೇ ಕ್ರೂರಿ ಅನಿಸಿದ್ದೇ ಆಗ- ಅವರಿವರ ಮಾತಿಂದ ಕಣ್ಣೀರಾಗುವ ಬದಲು, ಇದ್ದಷ್ಟು ದಿನ ನಗುನಗುತ್ತಾ ಬಾಳಬೇಕು ಎಂಬ ಛಲ ಜತೆಯಾದದ್ದೇ ಆಗ. ತಕ್ಷಣವೇ ನನ್ನ ಆಸೆಯನ್ನು ಡಾಕ್ಟರ್ಗಳಿಗೆ ಹೇಳಿಕೊಂಡೆ.
ನನ್ನ ಈಗಿನ ದುಃಸ್ಥಿತಿಗೆ ಸಿಗರೇಟೇ ಕಾರಣ ಡಾಕ್ಟ್ರೇ. ಸಿಗರೇಟು ಸೇವನೆಯಿಂದ ಆಗುವ ಅನಾಹುತಗಳ ಬಗ್ಗೆ ಅರಿವು ಮೂಡಿಸುತ್ತಲೇ ಸಾಯಬೇಕು ಅನ್ನೋದು ನನ್ನ ಆಸೆ. ಕ್ಯಾನ್ಸರ್ ಇದ್ದರೆ ಏನಂತೆ? ನನಗೂ ನೂರು ವರ್ಷ ಆಯಸ್ಸಿದೆ ಅನ್ಕೋತೇನೆ. ಈಗಾಗಲೇ ೫೭ ವರ್ಷ ಕಳೆದುಹೋಗಿದೆ. ಉಳಿದಿರುವ ಅಷ್ಟೂ ದಿನ ಕ್ಯಾನ್ಸರ್ ವಿರುದ್ಧ ಕತ್ತಿ ಝಳಪಿಸುತ್ತಲೇ ಇರ್ತೇನೆ. ನನ್ನ ಈ ಕ್ಷಣದ ಪರಿಸ್ಥಿತಿಯನ್ನು ಕಂಡಾದರೂ ಜನ ಸಿಗರೇಟು ಸೇವನೆಯಿಂದ ಹಿಂದೆ ಸರೀತಾರೆ ಅನ್ಕೋತೇನೆ ಎಂದೆ. ವೈದ್ಯರು ಖುಷಿಯಾದರು. ಕ್ಯಾನ್ಸರ್ ವಿರೋ ಆಂದೋಲನದ ಕಾರ್ಯಕ್ರಮಗಳಿಗೆ ದೇಶದ ಹತ್ತಾರು ಕಡೆಗೆ ಹೋಗಿಬರಲು ವ್ಯವಸ್ಥೆ ಮಾಡಿಕೊಟ್ಟರು….
****
ಇದೆಲ್ಲ ನಡೆದು ಈಗ ಮೂರು ವರ್ಷ ಕಳೆದಿದೆ. ಸರ್ಫುದ್ದೀನ್ ಕ್ಯಾನ್ಸರ್ನ ವಿರುದ್ಧ ತೊಡೆ ತಟ್ಟುತ್ತಾ ೬೦ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ. ಅದೆಷ್ಟೋ ನಗರದ ಕಾಲೇಜುಗಳಿಗೆ ಹೋಗಿದ್ದಾನೆ. ಗಂಟಲಿನ ಪಕ್ಕಕ್ಕೆ ಧ್ವನಿತರಂಗ ಹೊರಡಿಸುವ ಕೃತಕ ಉಪಕರಣ ಇಟ್ಟುಕೊಂಡೇ, ಗೊಗ್ಗರು ದನಿಯಲ್ಲಿ ಮಾತಾಡುತ್ತಾನೆ. ತನ್ನ ಬದುಕಿನ ಕಥೆ ಹೇಳಿಕೊಳ್ಳುತ್ತಾನೆ. ಈಗಲೋ ಆಗಲೋ ಬರಲಿರುವ ಸಾವನ್ನು ನೆನೆದು ಕಂಗಾಲಾಗುತ್ತಾನೆ. ಕಣ್ಣೀರು ಸುರಿಸುತ್ತಾನೆ. ಪ್ರತಿಯೊಬ್ಬರಿಗೂ ಅವರದೇ ಆದ ಬಂಧು-ಬಳಗವಿರುತ್ತದೆ. ಗೆಳೆಯ-ಗೆಳತಿಯರ ಗುಂಪಿರುತ್ತದೆ. ಆ ಬಳಗದಿಂದ ಒಬ್ಬರು ದಿಢೀರ್ ಮಾಯವಾದರೆ, ಒಂದು ವೇದನೆ ಎಲ್ಲರನ್ನೂ ಕಾಡುತ್ತದೆ. ಅಂಥದೊಂದು ಸಂಕಟ ಜತೆಯಾಗಬಾರದು ಎಂಬುದೇ ನಿಮ್ಮ ಆಸೆಯಾಗಿದ್ದರೆ- ಈ ಕ್ಷಣದಿಂದಲೇ ಸಿಗರೇಟು ಸೇದೋದು ಬಿಡಿ’ ಅನ್ನುತ್ತಾನೆ. ಈ ಮಾತುಗಳು ಯುವಕರ ಮೇಲೆ ಏನೂ ಪರಿಣಾಮ ಬೀರುತ್ತಿಲ್ಲ ಅನ್ನಿಸಿದರೆ-ಟಾಯ್ಲೆಟ್ ತೊಳೆಯೋಕೆ ಬಳಸುವ ಕೆಮಿಕಲ್ಸ್ ಸಿಗರೇಟಿನ ಪುಡಿಯಲ್ಲಿರ್ತವೆ. ಅಂದರೆ ಟಾಯ್ಲೆಟ್ ತೊಳೆಯೋಕೆ ಬಳಸುವ ವಸ್ತುವನ್ನೇ ನಾವು ತಿಂದ ಹಾಗಾಗುತ್ತೆ! ನೀವು ಮತ್ತೆ ಸಿಗರೇಟು ಹಚ್ಚಿದಾಗ ಈ ಮಾತು ನೆನಪು ಮಾಡ್ಕೊಳ್ಳಿ. ಆಗ ನಿಮಗೇ ಹೊಟ್ಟೆ ತೊಳಸಿಬರುತ್ತೆ. ಸಿಗರೇಟು ಸೇದಬೇಕು ಅನ್ನೋ ಆಸೆ ಖಂಡಿತ ಕೈಬಿಡುತ್ತೆ’ ಎಂದು ಮಾತು ಮುಗಿಸುತ್ತಾನೆ.
ಸಿಗರೇಟು ಇಲ್ಲದಿದ್ದರೆ ಸಂಭ್ರಮವಿಲ್ಲ ಎಂದು ಹೇಳುವ ಅಣ್ಣ ತಮ್ಮಂದಿರೆಲ್ಲ ಸರ್ಫುದ್ದೀನ್ನ ಬದುಕಿನ ಕಥೆ ಮತ್ತು ವ್ಯಥೆಯನ್ನು ಅರ್ಥಮಾಡಿಕೊಳ್ಳಲಿ. ಸಿಗರೇಟಿಗೆ ಕಡೆಯ ಸಲಾಮು ಹೊಡೆಯಲು ಮುಂದಾಗಲಿ. ಹಾಗೆಯೇ ಮಾರಕ ರೋಗದ ವಿರುದ್ಧ ‘ಧ್ವನಿ’ಯೆತ್ತಿರುವ ಮುದುಕನಿಗೆ ಜಯವಾಗಲಿ. ಇದು ಆಶಯ ಮತ್ತು ಹಾರೈಕೆ.