Archive for the ‘ಉಭಯ ಕುಶಲೋಪರಿ’ Category

ಅವತ್ತು ಕೆಎಸ್ನ ಅವರ ನಂತರ ಶ್ರೀಮತಿ ವೆಂಕಮ್ಮನವರೂ ನಾಲ್ಕು ಮಾತಾಡಿದರು!

ಸೆಪ್ಟೆಂಬರ್ 28, 2009

7075

ಇದು ೧೯೯೦ರ ಮಾತು.
ಬೆಂಗಳೂರಿನ ಇಂದಿರಾನಗರದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮವಿತ್ತು. ಮುಖ್ಯ ಅತಿಥಿಗಳಾಗಿ ಬರಲಿದ್ದವರು ಕೆ.ಎಸ್. ನರಸಿಂಹಸ್ವಾಮಿ. ಆ ವೇಳೆಗೆ ಅವರಿಗೆ ೭೫ ವರ್ಷ ವಯಸ್ಸಾಗಿತ್ತು. ಆ ಇಳಿವಯಸ್ಸಿನಲ್ಲಿ ಕವಿಗಳು ಹೇಗಿರಬಹುದು? ಅವರು ಯಾವ ಡ್ರೆಸ್ ಹಾಕಿಕೊಂಡು ಬರಬಹುದು? ಅವರೊಂದಿಗೆ ‘ಸಹಾಯಕರಂತೆ’ ಯಾರು ಬರಬಹುದು? ಕವಿಗಳು ಯಾವ ವಿಷಯದ ಬಗ್ಗೆ ಮಾತಾಡಬಹುದು? ಬದುಕಿಡೀ ಪ್ರೀತಿ, ಪ್ರೇಮ, ಪ್ರಣಯದ ಬಗ್ಗೆಯೇ ಬರೆದರಲ್ಲ? ಆ ವಿಷಯವಾಗಿಯೇ ಅವರು ಮಾತಾಡಲಿದ್ದಾರಾ? ಭರ್ತಿ ಐವತ್ತು ವರ್ಷಗಳ ಕಾಲ ಪ್ರೀತಿ-ಪ್ರೇಮದ ಜಪದಲ್ಲೇ ಕೆಎಸ್ನ ಉಳಿದುಬಿಟ್ಟರು ಅಂದರೆ- ಅವರ ಮನಸ್ಸು ಕದ್ದ ಬೆಡಗಿ(ಯರು) ತುಂಬ ಸುಂದರಿಯೇ ಇರಬೇಕು. ಅವರ ನೆನಪಲ್ಲಿಯೇ ತೇಲಿಹೋಗಿ ಕೆಎಸ್ನ ಒಂದರ ಹಿಂದೊಂದು ಪದ್ಯ ಬರೆದಿರಬೇಕು. ಹಳೆಯ ಪ್ರೇಮ ಮತ್ತು ಹಳೆಯ ಪ್ರೇಯಸಿಯರು ನೆನಪಾದಾಗೆಲ್ಲ ಅವರಿಗೆ ಒಂದೊಂದು ಪದ್ಯ ಹೊಳೆದಿರಬೇಕು. ಅಂದಹಾಗೆ, ಕೆಎಸ್ನ ಅವರ ಪತ್ನಿಗೆ ಇದೆಲ್ಲ ಗೊತ್ತಿಲ್ಲವಾ? ಎಲ್ಲ ಗೊತ್ತಿದ್ದೂ ಅವರು ಸುಮ್ಮನಿದ್ದಾರಾ? ಗಂಡ ಹೀಗೆ ಒಂದರ ಹಿಂದೊಂದು ಪ್ರೇಮ ಕವಿತೆ ಬರೀತಾ ಇದ್ದಾಗೆಲ್ಲ ಅವರಿಗೆ ಸಂತೋಷ, ಬೆರಗು, ಅಭಿಮಾನ ಮತ್ತು ಅನುಮಾನ ಒಟ್ಟೊಟ್ಟಿಗೇ ಬಂದುಬಿಡಲ್ವ? ಈ ವಿಷಯವಾಗಿ ಅವರು ಅವಾಗವಾಗ ಜಗಳ ಮಾಡೋದಿಲ್ವ?
ಅವತ್ತು ಕಾರ್ಯಕ್ರಮಕ್ಕೆ ಬಂದಿದ್ದ ನೂರಾರು ಕಿರಿಯರಿಗೆ ಇಂಥವೇ ಕೆಟ್ಟ ಕುತೂಹಲದ ಪ್ರಶ್ನೆಗಳು ಕ್ಷಣಕ್ಷಣಕ್ಕೂ ಕಾಡಿದ್ದವು. ಎಲ್ಲರೂ ಕವಿಗಳ ನಿರೀಕ್ಷೆಯಲ್ಲಿದ್ದಾಗಲೇ, ದಸರಾ ರಜೆ ಕಳೆಯಲು ಅಜ್ಜಿಯ ಮನೆಗೆ ಮಕ್ಕಳು ಬರ‍್ತಾರಲ್ಲ? ಆ ಖುಷಿಯಲ್ಲಿ ಬಂದೇಬಿಟ್ಟರು ಕೆ.ಎಸ್.ನ. ಅವರೊಂದಿಗೆ ಶ್ರೀಮತಿ ವೆಂಕಮ್ಮನವರಿದ್ದರು. ಇಬ್ಬರ ನಡಿಗೆಯಲ್ಲೂ ತಾಳಮೇಳವಿತ್ತು. ವೇಗದಲ್ಲಿ ಮಂದಹಾಸವಿತ್ತು. ಕೆಎಸ್ನ ಅವತ್ತು ಮಲ್ಲಿಗೆ ಬಿಳುಪಿನ ಜುಬ್ಬಾ- ಪಂಚೆ ಧರಿಸಿದ್ದರು. ವೆಂಕಮ್ಮನವರು ಗಾಢ ಹಸಿರು ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿದ್ದರು. ಕಾರ್ಯಕ್ರಮದುದ್ದಕ್ಕೂ ದಂಪತಿಯರು ಪರಸ್ಪರರ ಬಗ್ಗೆ ಅದೆಷ್ಟು ಕೇರ್ ತಗೊಂಡರು ಅಂದರೆ-ವಾಹ್, ಜಗತ್ತಿನ ಆದರ್ಶ ದಂಪತಿ ಅಂದರೆ ಇವರೇ ಇರಬೇಕು ಎಂಬ ಭಾವ ಹಲವರಿಗೆ ಬಂದದ್ದು ಸುಳ್ಳಲ್ಲ. ಏಕೆಂದರೆ ಕೆಎಸ್ನ ಅವರ ಹಣೆಯ ಮೇಲೆ ಒಂದೇ ಒಂದು ಬೆವರಹನಿ ಕಂಡರೂ ಸಾಕು, ಅದನ್ನು ಒರೆಸಲು ವೆಂಕಮ್ಮನವರು ಮುಂದಾಗುತ್ತಿದ್ದರು. ಹಾಗೆಯೇ ವೆಂಕಮ್ಮನವರು ಒಂದೆರಡು ನಿಮಿಷದ ಮಟ್ಟಿಗೆ ಸಪ್ಪೆ ಮುಖಭಾವದಲ್ಲಿ ಕೂತರೂ ಕೆಎಸ್ನ-‘ಏನಾಯ್ತು ನಿಂಗೆ? ಯಾಕೆ ಸಪ್ಪಗಾಗಿ ಬಿಟ್ಟೆ? ಆಯಾಸ ಆಯ್ತಾ? ಎಂಬರ್ಥದಲ್ಲಿ ಪ್ರಶ್ನೆ ಹಾಕುತ್ತಿದ್ದರು.
ವಿಶೇಷವೆಂದರೆ-ಅವತ್ತು ಕೆಎಸ್ನ ಅವರ ನಂತರ ಶ್ರೀಮತಿ ವೆಂಕಮ್ಮನವರೂ ನಾಲ್ಕು ಮಾತಾಡಿದರು! ಅದಕ್ಕೆ ಕಾರಣವಾದದ್ದು ಕಿರಿಯರೊಬ್ಬರ ತುಂಟ ಪ್ರಶ್ನೆ. ಅವರು ಸಹಜ ಕುತೂಹಲದಿಂದಲೇ ಕೇಳಿದ್ದರು: ‘ಕೆಎಸ್ನ ಅವರ ಪದ್ಯದಲ್ಲಿ ಬರುವ ಪದುಮ, ಶಾರದೆ, ಶಾನುಭೋಗರ ಮಗಳು, ಕಾಮಾಕ್ಷಿ, ಕನಕ… ಹೆಸರಿನ ಹುಡುಗಿಯರು (?) ಬೇರೆ ಬೇರೆ ಊರಿನವರೋ ಅಥವಾ ಇವೆಲ್ಲ ತಮ್ಮ ಕಾವ್ಯದ ನಾಯಕಿಗೆ ಕೆಎಸ್ನ ಇಟ್ಟುಕೊಂಡ ಹೆಸರುಗಳೋ? ಅವರ ಕಾವ್ಯದ ನಾಯಕಿ ಯಾರು? ತಮ್ಮ ನಾಯಕಿಯರೊಂದಿಗೆ ಕೆಎಸ್ನ ಒಂದೇ ಒಂದು ದಿನವಾದರೂ ಜಗಳ ಮಾಡಲೇ ಇಲ್ಲವೆ? ಬರೀ ಪ್ರೀತಿ-ಪ್ರೇಮದ ಬಗ್ಗೆ ಮಾತ್ರ ಅವರು ಪದ್ಯ ಬರೆದಿದ್ದಾರೆ. ಜಗಳವಾಡಿದ ಬಗ್ಗೆ ಒಂದೇ ಒಂದು ಕವಿತೆಯೂ ಇಲ್ಲವಲ್ಲ, ಯಾಕೆ?’
ಕೆಣಕುವಂತಿದ್ದ ಈ ಪ್ರಶ್ನೆಗೆ ಕೆಎಸ್ನ ಉತ್ತರಿಸಲಿಲ್ಲ. ಸುಮ್ಮನೆ ನಸುನಕ್ಕರು. ಆಗ ಮಾತು ಶುರು ಮಾಡಿದ ವೆಂಕಮ್ಮನವರು ಹೀಗೆಂದರು:‘ಇವರ ಪದ್ಯಗಳಲ್ಲಿ ಬರುವ ಪದುಮ, ಶಾರದೆ, ಕಾಮಾಕ್ಷಿ, ಕನಕ, ಶಾನುಭೋಗರ ಮಗಳು… ಎಲ್ಲವೂ ನಾನೇ. ವೆಂಕಮ್ಮ ಅನ್ನೋ ಹೆಸರು ಅಷ್ಟೇನೂ ಚೆನ್ನಾಗಿಲ್ಲ ಅನ್ನಿಸಿರಬೇಕು ಇವರಿಗೆ. ಆ ಕಾರಣದಿಂದಲೇ ಬೇರೆ ಹೆಸರು ಬಳಸಿದ್ದಾರೆ. ಇವರು ಒಂದು ದಿನ ಕೂಡ ಜಗಳ ಮಾಡಲೇ ಇಲ್ಲ. ತುಂಬಾ ಬೇಸರವಾದರೆ, ಸಿಟ್ಟು ಬಂದರೆ ಆಗ ಯಾರೊಂದಿಗೂ ಮಾತನಾಡದೆ ಕೂತುಬಿಡ್ತಿದ್ರು. ಆಗ ನಮಗೆಲ್ಲ ‘ರಾಯರು ಸಿಟ್ಟಾಗಿದ್ದಾರೆ’ ಎಂದು ಅರ್ಥವಾಗುತ್ತಿತ್ತು. ಅಂಥ ವೇಳೆಯಲ್ಲಿ ನಾನೂ ಅವರನ್ನು ಕೆಣಕಲು ಹೋಗುತ್ತಿರಲಿಲ್ಲ. ಅವರೊಂದಿಗೆ ಒಮ್ಮೆ ಕೂಡ ಜಗಳ ಮಾಡಲಿಲ್ಲವಲ್ಲ ಎಂದು ಸ್ವಲ್ಪ ಬೇಸರವಿದೆ. ಹಾಗೆಯೇ ಜಗಳ ಮಾಡದೆಯೇ ಬದುಕಿದ ವಿಷಯವಾಗಿ ಹೆಮ್ಮೆಯೂ ಇದೆ…’
ವೆಂಕಮ್ಮನವರ ಮಾತು ಮುಗಿಯುತ್ತಿದ್ದಂತೆಯೇ ಒಮ್ಮೆ ಕತ್ತೆತ್ತಿ ನೋಡಿದ ಕೆ.ಎಸ್.ನ ಮತ್ತೆ ನಸುನಕ್ಕರು. ತಕ್ಷಣವೇ ಅವರದೊಂದು ಕವಿತೆ ನೆನಪಾಯಿತು. ಆ ಪದ್ಯ, ತುಂಬ ಪ್ರಾಯದ ಹುಡುಗಿಯ ಥರಾ, ಅವಳ ಜಂಬದ ನಗುವಿನ ಥರಾ, ವಯ್ಯಾರದ ನಡಿಗೆಯ ಥರಾ, ಕಾಲ್ಗೆಜ್ಜೆಯ ಸದ್ದಿನ ಥರಾ, ಕೈಬಳೆಯ ನಾದದ ಥರಾ, ಘಮ್ಮೆನ್ನುವ ಮಲ್ಲಿಗೆಯ ಪರಿಮಳದ ಥರಾ, ಜೀವ ಝಲ್ಲೆನಿಸುವ ಎದೆಯ ಮಧ್ಯದ ಸುವಾಸನೆಯ ಥರಾ ಶುರುವಾಗುತ್ತದೆ. ನದಿಯಂತೆ ಬಾಗಿ, ಬೀಗಿ, ಬಳುಕಿ ಸಾಗುತ್ತದೆ. ಅದನ್ನು ಕವಿ ಹೇಳುವುದು ಹೀಗೆ:
ಒಬ್ಬಳೇ ಬಂದಳು/ ನಡೆನಡೆದು ಕನಕ!/ನಗುನಗುತ ಬಂದಳು/ನನ್ನೆದೆಯ ತನಕ
ಬರುವ ಸಡಗರದಲ್ಲಿ/ಸದ್ದಾಯ್ತು ಚಿಲಕ;/ ಬಂದು ನಿಂತಳು ಇಲ್ಲಿ/ಎತ್ತರಿಸಿ ಬೆಳಕ.
……………………
……………………
ನೀಲ ಗಗನದ ನಡುವೆ/ಚಂದಿರನ ಹೊರಳು ಮೌನಮಾಯೆಯ ನಡುವೆ/ರಾಗಗಳ ಹೊರಳು.
ಕಣ್ಣೆತ್ತಿ ನೋಡಿದಳು/ಕಣ್ತುಂಬ ಕನಕ; ಗಾಳಿಯಲಿ ತುಂಬಿಗಳು/ಝಂಕಾರ ಪದಕ.
ಪದ್ಯ ಮುಂದುವರಿದಂತೆಲ್ಲ ಖುಷಿಯಾಗುತ್ತದೆ. ರೋಮಾಂಚನವಾಗುತ್ತದೆ. ಆಗಿರುವ ವಯಸ್ಸನ್ನೂ ಮರೆತು ಪ್ರೀತಿಸುವ ಮನಸ್ಸಾಗುತ್ತದೆ. ಕೆ.ಎಸ್.ನ ಅವರ ಜಮಾನಾದಲ್ಲಿ ಪ್ರೇಮಿಗಳಿಗೆ ಇದ್ದ (?) ಪ್ರೈವೇಸಿ ನೆನೆದು ಅಸೂಯೆಯಾಗುತ್ತದೆ!
****
ಕೆಎಸ್ನ ಅವರ ಪದ್ಯ, ಅವರ ಕಾಲದ ಪ್ರೇಮ, ಅವರಿಗೆ ಸಿಕ್ಕ ರೋಮಾಂಚನ ತುಂಬ ಇಷ್ಟವಾಗುತ್ತದೆ ನಿಜ. ಆದರೆ, ಆ ಕಾಲದವರಂತೆ ಪ್ರೇಮಿಸುವುದು ಈಗ ಸಾಧ್ಯವೇ ಇಲ್ಲವೇನೋ. ಅದಕ್ಕೆ ಕಾರಣಗಳನ್ನು ಪಟ್ಟಿ ಮಾಡುತ್ತ ಹೋದರೆ, ಒಮ್ಮೆ ನಗುಬರುತ್ತದೆ. ಹಿಂದೆಯೇ ‘ಹೌದಲ್ವಾ?’ ಅನ್ನಿಸಿ ಅಚ್ಚರಿಯಾಗುತ್ತದೆ.
ಕೇಳಿ: ಇವತ್ತು ಪ್ರೀತಿಯ ಹೊಳೆಗೆ ಬಿದ್ದವರೆಲ್ಲ ‘ರೋಮಾಂಚನದಲ್ಲಿ’ ಮುಳುಗದೇ ಇರಲು ಮುಖ್ಯ ಕಾರಣವಾಗಿರುವುದು ಮೊಬೈಲು! ಇವತ್ತು ಎಷ್ಟೋ ಮಂದಿಗೆ ಪ್ರೀತಿ ಚಿಗುರುವುದೇ ಒಂದು ಎಸ್ಸೆಮ್ಮೆಸ್, ಒಂದು ಕಾಲ್ ಮೂಲಕ! ಹಾಗೆಯೇ ಅದೇ ಮಧುರ ಪ್ರೇಮ ಲಟಾರನೆ ಮುರಿದು ಬೀಳುವುದೂ ಒಂದು ಎಸ್ಸೆಮ್ಮೆಸ್ಸು ಅಥವಾ ಒಂದು ಫೋನ್ ಕಾಲ್ ಮೂಲಕವೇ ಎಂಬುದು ವಿಪರ‍್ಯಾಸ. ಈಗ ಎಲ್ಲಿ ಸರಸವೂ, ಸಿಹಿಮುತ್ತೂ ಮೊಬೈಲಿನ ಪಿಸಪಿಸ ಮಾತುಗಳಲ್ಲೇ ಮುಗಿದು ಹೋಗುತ್ತದೆ. ಈಗಿನ ಕಾಲದಲ್ಲಿ ಯಾವ ಹುಡುಗನೂ ‘ಅವಳ’ ಮೇಲೆ ಪದ್ಯ ಬರೆಯುವುದಿಲ್ಲ. ಬದಲಿಗೆ ರಿಂಗ್ಟೋನ್ ಕಳಿಸುತ್ತಾನೆ, ಕೇಳಿಸುತ್ತಾನೆ! ಒಂದು ಗ್ರೀಟಿಂಗ್ ಕಾರ್ಡಿನೊಂದಿಗೆ ಅವಳ ಮುಂದೆ ದೈನೇಸಿಯಂತೆ ನಿಲ್ಲುವುದಿಲ್ಲ. ಬದಲಿಗೆ ಅವಳಿಗೆ ಭರ್ತಿ ಹದಿನೈದು ಸಾವಿರದ ಮೊಬೈಲು ಕೊಡಿಸುತ್ತಾನೆ. ಆಮೇಲೆ ದಿನದ ಇಪ್ಪತ್ನಾಲ್ಕು ಗಂಟೆಯೂ ಅವಳೊಂದಿಗೆ ‘ಟಚ್’ನಲ್ಲಿರುತ್ತಾನೆ. ಒಂದು ದಿನವೂ ತಪ್ಪಿಸದೆ ಮಾತಾಡುವುದರಿಂದ ಹುಡುಗನಿಗಾಗಲಿ, ಹುಡುಗಿಗಾಗಲಿ ಎಲ್ಲರ ಕಣ್ತಪ್ಪಿಸಿ ಭೇಟಿಯಾಗಬೇಕಾದ ಮಹದಾಸೆ ಇರುವುದಿಲ್ಲ ಅಥವಾ ಭೇಟಿಯಾದರೂ, ಆಗಲೂ ಹೊಸ ರಿಂಗ್ಟೋನ್ ಕೇಳಿಸುವ, ಏನನ್ನೋ ಕದಿಯುವ ‘ಅವಸರ’ ಮಾತ್ರ ಇರುತ್ತದೆ. ಅಂಥ ಭೇಟಿಯಲ್ಲೂ ಮೊಬೈಲಿನಲ್ಲಿ ಅವನೋ, ಅವಳೋ ಹದಿನೈದಿಪ್ಪತ್ತು ನಿಮಿಷ ಮಾತಿಗೆ ನಿಂತರೆ- ಆ ಕಾರಣಕ್ಕೇ ಜಗಳ ಶುರುವಾಗಿಬಿಡುತ್ತದೆ. ಉಹುಂ, ನಂತರದಲ್ಲಿ ‘ಅವರ’ ಪ್ರೇಮ ಮತ್ತೆ ಹಳೆಯ ಟ್ರ್ಯಾಕ್ಗೆ ಬರುವುದಿಲ್ಲ.
ಈ ದಿನಗಳಲ್ಲಿ ಪ್ರೇಮಿಗಳಿಗೆ ಇರುವ ಅಡೆತಡೆಗಳನ್ನು ಗಮನಿಸಿದರೂ ಅಚ್ಚರಿಯಾಗುತ್ತದೆ. ಏಕೆಂದರೆ, ಇವತ್ತು ಅವರ ರಕ್ಷಣೆಗೆ ಜನರೂ ಇಲ್ಲ. ಪ್ರಕೃತಿಯೂ ಇಲ್ಲ. ಒಂದೇ ಮಾತಲ್ಲಿ ಹೇಳಬೇಕೆಂದರೆ, ಇವತ್ತು ಪ್ರೀತಿಯ ಹೊಳೆಗೆ ಬಿದ್ದ ಹುಡುಗ/ಹುಡುಗಿ ಕೆಲಸಕ್ಕೆ ಸೇರಿರುತ್ತಾರೆ; ಕಾಲೇಜಿಗೂ ಹೋಗುತ್ತಿರುತ್ತಾರೆ. ಅವರದು ಪ್ರಧಾನಮಂತ್ರಿಯಷ್ಟೇ ಬ್ಯುಸಿ ಶೆಡ್ಯೂಲ್. ಮಧ್ಯಾಹ್ನ ಅವಳಿಗೊಂದು ಮೆಸೇಜು ಕಳಿಸಲು ಇವನು ಮೊಬೈಲು ಎತ್ತಿಕೊಂಡರೆ, ಅದೇ ವೇಳೆಗೆ ಬಾಸ್ ಕರೆದಿರುತ್ತಾನೆ. ಇವಳು ‘ಸಂಜೆ’ ಬೇಗ ಸಿಗೋಣವಾ ಎಂದು ಅವನಿಗೆ ಮೆಸೇಜು ಬಿಟ್ಟು, ಹತ್ತು ನಿಮಿಷ ಮೊದಲೇ ಆಫೀಸು ಬಿಟ್ಟರೂ, ಗಿಜಿಗಿಜಿ ಟ್ರಾಫಿಕ್ಕಿಗೆ ಸಿಕ್ಕಿಕೊಂಡ ಕಾರಣದಿಂದ ಕಾಫಿಡೇ ತಲುಪುವ ವೇಳೆಗೆ ಎಂಟೂವರೆ ದಾಟಿರುತ್ತದೆ. ಒಂಬತ್ತೂವರೆಯ ಒಳಗೆ ಮನೇಲಿರಬೇಕು; ಬಟ್ಟೆ ಅಥವಾ ಕೈ ಬೆರಳಿನಲ್ಲಿ ‘ಅವನು’ ಹಾಕಿರುವ ಪರ್ಫ್ಯೂಮ್ನ ಘಮವೋ, ಸಿಗರೇಟಿನ ಘಾಟೋ ಅಂಟಿಕೊಳ್ಳಬಾರದು ಎಂದು ‘ಇವಳು’ ವಿಪರೀತ ಎಚ್ಚರಿಕೆ ವಹಿಸುವುದರಿಂದ ಜತೆಯಲ್ಲಿ ಕೂತಿದ್ದರೂ ಅವನು ಮುಟ್ಟುವಂತಿಲ್ಲ. ಮುತ್ತಿಡುವಂತಿಲ್ಲ!
ಹೋಗಲಿ, ಮನೆಮಂದಿಯ ‘ಅಡ್ಡಿಯೇ ಇಲ್ಲ ಅಂದುಕೊಂಡರೂ ಈ ದಿನಗಳಲ್ಲಿ ಪ್ರೇಮಿಗಳಿಗೆ ಸ್ವಾತಂತ್ರ್ಯವಿಲ್ಲ. ಪಾರ್ಕಿಗೆ ಹೋದರೆ ಪೊಲೀಸರು ಕಾಡುತ್ತಾರೆ. ಕಾಫಿಡೇಲಿ ಕುಳಿತರೆ ಪುಂಡರು ಕೆಣಕುತ್ತಾರೆ. ಹುಡುಗ-ಹುಡುಗಿ ಇಬ್ಬರೂ ಒಂದೇ ಆಫೀಸಿನಲ್ಲಿ ಕೆಲಸ ಮಾಡಿದರಂತೂ ಸಹೋದ್ಯೋಗಿಗಳೇ ಅಣಕಿಸಿಬಿಡುತ್ತಾರೆ. ಇನ್ನು, ಮನೆಯಲ್ಲಿ ಸಣ್ಣದೊಂದು ಕಿರಿಕ್ ಆಗಿಬಿಟ್ಟರೂ ಸಾಕು, ಅಪ್ಪ-ಅಮ್ಮ ಮೊದಲು ಕೆಲಸ ಬಿಡಿಸುತ್ತಾರೆ. ದಿನದಿನವೂ ಮೊಬೈಲು ಚೆಕ್ ಮಾಡುತ್ತಾರೆ ಅಥವಾ ಆ ಹುಡುಗನ್ನೇ ಕರೆಸಿ ಬುದ್ಧಿ ಹೇಳಿಸುತ್ತಾರೆ. ಹುಡುಗಿಯನ್ನು ಊರೇ ಬಿಡಿಸುತ್ತಾರೆ! ಈ ಯಾವುದಕ್ಕೂ ಹುಡುಗ-ಹುಡುಗಿ ಕೇರ್ ಮಾಡದೆ ಅಡ್ಡಾಡಿಕೊಂಡಿದ್ದರು ಅಂದುಕೊಳ್ಳಿ: ಅಂಥವರನ್ನು ಒಂದಷ್ಟು ದಿನ ಸೂಕ್ಷ್ಮವಾಗಿ ಗಮನಿಸುವ ಪ್ರಮೋದ್ ಮುತಾಲಿಕ್ ಕಡೆಯ ಜನ ಅವಸರದಲ್ಲಿ ತಾಳಿ ಕಟ್ಟಿಸಿ ಮದುವೆ ಮುಗಿಸಿಬಿಡುತ್ತಾರೆ! ಒಮ್ಮೆ ಮದುವೆಯ ಬಂಧನಕ್ಕೆ ಈಡಾದ ಮೇಲೆ- ನಗುವುದಕ್ಕೆ, ಅವಳ ನೆನಪಲ್ಲಿ ‘ಚಿತ್’ ಆಗುವುದಕ್ಕೆ, ಏನನ್ನೋ ಕಲ್ಪಿಸಿಕೊಂಡು ಸಡಗರ ಪಡುವುದಕ್ಕೆ ಅವಕಾಶ ಎಲ್ಲಿದೆ ಹೇಳಿ?
ಇದನ್ನೆಲ್ಲ ನೆನಪು ಮಾಡಿಕೊಂಡರೆ, ಈಗಿನ ಕಾಲದ ಪ್ರೇಮಿಗಳ ಬಗ್ಗೆ ‘ಅಯ್ಯೋಪಾಪ’ ಅನ್ನಿಸುತ್ತದೆ. ಮರುಕವಾಗುತ್ತದೆ. ‘ಮಾಡರ್ನ್’ ಎನ್ನುವಂಥ ಥಳುಕು, ಬಳುಕು, ಒಂದಿಷ್ಟು ವಿಶೇಷ ಅನುಕೂಲಗಳು ಇರಲಿಲ್ಲ ಎಂಬುದನ್ನು ಬಿಟ್ಟರೆ ಹಳೆಯ ಕಾಲದ ಪ್ರೀತಿಯೇ ಚೆನ್ನಾಗಿತ್ತು: ಕೆಎಸ್ನ ಕಾಲದ ಪ್ರೇಮಿಗಳು ತುಂಬ ಖುಷಿಯಿಂದ ಇದ್ದರು ಎಂದು ಸಂಕೋಚವಿಲ್ಲದೆ ಹೇಳುವ ಆಸೆಯಾಗುತ್ತದೆ. ಆ ಸಂದರ್ಭಗಳಲ್ಲಿ ಮತ್ತೆ ನೆನಪಾಗುವುದು ಅವೇ ಕೆಎಸ್ನ ಕವಿತೆಯ ಮುಂದುವರಿದ ಸಾಲುಗಳು. ಕವಿತೆ, ನಿಂತು ಹೋಗಿದ್ದ ಹಾಡಿನಂತೆ, ಅಮ್ಮನ ಚೆಂದದ ಡ್ಯಾನ್ಸಿನಂತೆ ಹೀಗೆ ತೆರೆದುಕೊಳ್ಳುತ್ತದೆ:
ತಲೆಬಾಗಿ ನೋಡಿದಳು/ಕನ್ನಡಿಯ ಕಡೆಗೆ/ ಅಲ್ಲಿ ಉತ್ತರವಿತ್ತು/ಹೂವಿಟ್ಟ ಜಡೆಗೆ!
……………………
ಕೈ ಹಿಡಿದು ಕೇಳದೆನು/ಸಿಟ್ಟೇನೆ, ಕನಕ! ನಿಟ್ಟುಸಿರ ನಟ್ಟಿದಳು/ನನ್ನೆದೆಯ ತನಕ.
ಬಿಗಿದಪ್ಪಿ ಕೇಳಿದೆನು/ಕಣ್ಣಬಳಿ, ಕನಕ ಬೆಳ್ದಿಂಗಳಿಳಿದಿತ್ತು/ಆ ಮುಖದ ತನಕ
ಹೌದಲ್ಲವಾ? ಪ್ರೇಮಿಗಳು ಇರಬೇಕಾದದ್ದೇ ಹೀಗೆ. ಇಲ್ಲ ಅನ್ನುವುದಾದರೆ, ಇಡೀ ದಿನದಲ್ಲಿ ಹತ್ತಿರವೇ ಇದ್ದರೂ ಸರಸವಾಡಲಿಲ್ಲ ಎನ್ನುವುದಾದರೆ ಅವರು ಯಾಕೆ ಪ್ರೀತಿಯ ಮಾತಾಡಬೇಕು? ಯಾಕಾದರೂ ಅವರು ಪ್ರೇಮಿಗಳಾಗಬೇಕು? ಹೀಗೆಲ್ಲ ಅಂದುಕೊಂಡಾಗಲೇ ದಶಕಗಳ ಹಿಂದೆ ಮನೆ ಮನೆಗಳಲ್ಲೂ ನಡೆದ ಪ್ರೇಮಕತೆಗಳು ಆ ಕಾಲದ ಜನರಿಂದ ರಸವತ್ತಾದ ಕಾಮೆಂಟರಿಯಂತೆ ಕೇಳಿಬರುತ್ತದೆ. ಎಲ್ಲ ಅಡೆತಡೆಗಳ ಮಧ್ಯೆಯೂ ಅವರು ಎಲ್ಲೆಲ್ಲಿ, ಹೇಗೆಲ್ಲ ಭೇಟಿಯಾಗಿದ್ದರು? ಏನೇನೆಲ್ಲ ಮಾತಾಡಿಕೊಂಡಿದ್ದರು ಎಂಬುದನ್ನೂ ಅದೇ ಕಾಮೆಂಟರಿ ಮಾತುಗಳಲ್ಲಿ ಕೇಳಿಸಿಕೊಂಡಾಗಲೇ ಕೆಎಸ್ನರ ಪದ್ಯದ ಕಡೆಯ ಸಾಲು ನಿದ್ರಿಸುವ ಮಗುವಿನ ದಿವ್ಯ ನಗೆಯಂತೆ; ಅವಳ (ನ) ಅನುರಾಗದ ಪಿಸುಮಾತಿನಂತೆ ಕೇಳಿಸುತ್ತದೆ. ಕವಿತೆಯಲ್ಲಿ ‘ಅವನು’ ಹೇಳುತ್ತಾನೆ:
ಮುತ್ತಿಟ್ಟು ಕೇಳಿದೆನು/(ಗುಟ್ಟಾಗಿ) ಕನಕ! ಕಣ್ಣೆತ್ತಿ ನೋಡಿದಳು/ಚಂದಿರನ ತನಕ!
****
‘ಮಾತಿಗೆ ಮೀರಿದ್ದು’ ಅಂತಾರಲ್ಲ- ಅದಷ್ಟೂ ಕಡೆಯ ಸಾಲುಗಳಲ್ಲಿದೆ. ಅವನು ಮುತ್ತಿಡುವುದು, ಗುಟ್ಟಾಗಿ ಕೇಳುವುದು ಸಹಜ ಮತ್ತು ಅನಿವಾರ್ಯ. ಅದಕ್ಕೆ ಅವಳು ಒಂದೇ ಮಾತಲ್ಲಿ ಉತ್ತರಿಸಿದ್ದರೆ ಅಂಥ ವಿಶೇಷ ಇರುತ್ತಿರಲಿಲ್ಲ. ಆದರೆ ಅವಳು ಮಾತೇ ಆಡುವುದಿಲ್ಲ. ಸುಮ್ಮನೇ ಕಣ್ಣೆತ್ತಿ ನೋಡುತ್ತಾಳೆ- ಆ ನೋಟ ಚಂದಿರನನ್ನೂ ತಲುಪಿಬಿಡುತ್ತವೆ. ಅವನನ್ನೇ ತಾಕಿ ಬಿಡುತ್ತದೆ!
ಇದೆಲ್ಲ ನಿಜವಾ? ಇದಿಷ್ಟೂ ನಡೆದಿದ್ದಾ? ಪತ್ನಿ ವೆಂಕಮ್ಮನವರೊಂದಿಗೆ ಒಂದು ದಿನ ಆಡಿದ ರೊಮ್ಯಾಂಟಿಕ್ ಆಟವನ್ನೇ ಕೆಎಸ್ನ ಪದ್ಯವಾಗಿಸಿಬಿಟ್ಟರಾ? ಇದ್ದರೂ ಇರಬಹುದು!
ಅವರ ಕಾವ್ಯಶಕ್ತಿಗೆ ನಮಸ್ಕಾರ. ಅವರಿಗೂ…

‘ಅವನನ್ನು’ ಅಮೆರಿಕದ ಜನ ತಲೆಯೊಳಗೆ ಸಗಣಿ ತುಂಬಿಕೊಂಡ ಪೆಕರಾ ಅಂದಿದ್ದರು.

ಸೆಪ್ಟೆಂಬರ್ 28, 2009

dr-q

ಅಂಥ ಅಮೆರಿಕನ್ನರ ಮುಂದೆಯೇ ‘ಆತ’ ನಂಬರ್ ಒನ್ ಮೆದುಳು ಶಸ್ತ್ರಚಿಕಿತ್ಸಾ ತಜ್ಞನಾಗಿ ಬೆಳೆದು ನಿಂತ!
ವೈದ್ಯರೊಬ್ಬರ ಮಗ ವೈದ್ಯನಾಗುವುದು, ತಹಸೀಲ್ದಾರರ ಮಗ ಡಿ.ಸಿ. ಆಗುವುದು, ಇನ್ಸ್ಪೆಕ್ಟರ್ ಮಗ ಡಿವೈಎಸ್ಪಿ ಆಗುವುದು, ಶಾಸಕನ ಮಗ ಶಾಸಕನೇ ಆಗುವುದು, ಶಿಕ್ಷಕರ ಮಗ ಲೆಕ್ಚರರ್ ಆಗುವುದು… ಉಹುಂ, ಇದ್ಯಾವುದೂ ಸುದ್ದಿಯಲ್ಲ. ಆದರೆ, ಕಳ್ಳನೊಬ್ಬನ ಮಗ ಐಎಎಸ್ ಮಾಡಿಬಿಟ್ಟರೆ-ಅದು ಸುದ್ದಿ. ತಿರುಪೆ ಎತ್ತುತ್ತಿದ್ದವನು ಚಿತ್ರ ನಟನಾದರೆ- ಅದು ಸುದ್ದಿ. ಕೊಳೆಗೇರಿಯ ಹುಡುಗನೊಬ್ಬ ಕೋಟ್ಯಾಪತಿಯಾದರೆ, ಅದೂ ಸುದ್ದಿ. ಅನಾಥಾಶ್ರಮದಲ್ಲಿ ಬೆಳೆದ ಹುಡುಗಿಯೊಬ್ಬಳು ವಿಶ್ವಸುಂದರಿಯಾಗಿಬಿಟ್ಟರೆ- ಅದಪ್ಪಾ ಸುದ್ದಿ.
ಇಂಥದೊಂದು ‘ಪವಾಡ’ ನಡೆಯಬೇಕಾದರೆ – ಗೆಲ್ಲಬೇಕೆಂಬ ಹಠವಿರಬೇಕು. ಗೆದ್ದೇ ತೀರುತ್ತೇನೆ ಎಂಬ ಛಲವಿರಬೇಕು. ಕಣ್ಮುಂದೆ ಗುರಿಯಿರಬೇಕು. ಸಮಸ್ಯೆಗಳನ್ನು ಎದುರಿಸುವ ಧೈರ್ಯವಿರಬೇಕು. ಒಂದು ಎತ್ತರ ತಲುಪಿಕೊಂಡ ನಂತರವೂ ಹೊಸದನ್ನು ಕಲಿಯುವ ಆಸೆಯಿರಬೇಕು, ಆಸಕ್ತಿಯಿರಬೇಕು. ಶ್ರದ್ಧೆ ಇರಬೇಕು. ಆಗ ಮಾತ್ರ ‘ಅಸಾಧ್ಯ’ ಎಂಬುದೆಲ್ಲಾ ‘ಸಾಧ್ಯ’ವಾಗಿಬಿಡುತ್ತದೆ. ಗೌರಿ ಶಂಕರದ ಎತ್ತರ ಕೂಡ ಬರೀ ಇನ್ನೂರು ಮೆಟ್ಟಿಲಿನ ಬೆಟ್ಟದಂತೆ ಕಾಣುತ್ತದೆ.
ಒಂದು ಕಾಲದಲ್ಲಿ ಅಮೆರಿಕದಲ್ಲಿ ಕೂಲಿ ಮಾಡುತ್ತಿದ್ದ; ಡರ್ಟಿ ಮೆಕ್ಸಿಕನ್ ಎಂದು ಅಮೆರಿಕನ್ನರಿಂದ ಉಗಿಸಿಕೊಂಡ; ಬೀದಿಯಲ್ಲಿ ಭಿಕ್ಷುಕನಂತೆ ಬಾಲ್ಯ ಕಳೆದ ಹುಡುಗನೊಬ್ಬ ಅದೇ ಅಮೆರಿಕದಲ್ಲಿ ಈಗ ನಂ.೧ ಮೆದುಳು ಶಸ್ತ್ರಚಿಕಿತ್ಸಾ ತಜ್ಞ ಎಂದು ಹೆಸರಾಗಿದ್ದಾನೆ. ಅವನ ಯಶೋಗಾಥೆಯನ್ನು ವಿವರಿಸುವ ನೆಪದಲ್ಲಿ, ಮೇಲಿನ ಮಾತುಗಳನ್ನು ಹೇಳಬೇಕಾಯಿತು.
***
ನಮ್ಮ ಕಥಾನಾಯಕನ ಹೆಸರು ಆಲ್ಫ್ರೆಡೋ ಕ್ವಿನಾನ್ಸ್ ಹಿನಾಜೋಸಾ. ಈತ ಮೆಕ್ಸಿಕೋ ದೇಶದವನು. ಇವನ ತಂದೆ ಪೆಟ್ರೋಲ್ ಬಂಕ್ ಒಂದರಲ್ಲಿ ಸಣ್ಣ ನೌಕರಿಯಲ್ಲಿದ್ದ. ಮನೆಯಲ್ಲಿ ಅವನ ದುಡಿಮೆಯನ್ನೇ ನಂಬಿಕೊಂಡು ಹೆಂಡತಿ ಹಾಗೂ ಐವರು ಮಕ್ಕಳಿದ್ದರು. ಬರುತ್ತಿರುವ ಸಂಪಾದನೆ ಕುಟುಂಬ ನಿರ್ವಹಣೆಗೆ ಸಾಕಾಗುತ್ತಿಲ್ಲ ಅನ್ನಿಸಿದಾಗ, ಅನಿವಾರ್ಯವಾಗಿ ಮಕ್ಕಳನ್ನೂ ಕೂಲಿ ಕೆಲಸಕ್ಕೆ ಕಳುಹಿಸಲಾಯಿತು. ಆದರೆ, ಮಕ್ಕಳೆಲ್ಲ ಚಿಕ್ಕವರಿದ್ದರಲ್ಲ? ಆ ಕಾರಣಕ್ಕೆ ಅವರಿಗೆ ಯಾವೊಂದು ಕೆಲಸವೂ ಸಿಗಲಿಲ್ಲ. ಪರಿಣಾಮ, ಮನೆಯಲ್ಲಿ ಮಧ್ಯಾಹ್ನದ ಬಡತನ. ಈ ಸಂದರ್ಭದಲ್ಲಿಯೇ ಮೆಕ್ಸಿಕೋದಲ್ಲಿ ಆಂತರಿಕ ಗಲಭೆ ಶುರುವಾಯಿತು. ಅದೊಂದು ದಿನ ಆಲ್ಫ್ರೆಡೋ ಕ್ವಿನಾನ್ಸ್ನ ಮನೆಗೇ ನುಗ್ಗಿದ ಪುಂಡರು, ಮನೆಯಲ್ಲಿದ್ದ ಅಷ್ಟೂ ವಸ್ತುಗಳನ್ನು ಹೊತ್ತೊಯ್ದರು. ಆ ನಂತರದಲ್ಲಿಯೂ ಗಲಭೆಕೋರರ ಕಾಟ ಮುಂದುವರಿದಾಗ, ಕ್ವಿನಾನ್ಸ್ನ ತಂದೆ ಊರು ಬಿಡುವ ನಿರ್ಧಾರಕ್ಕೆ ಬಂದ.
ಊರನ್ನೇನೋ ಬಿಟ್ಟಿದ್ದಾಯಿತು. ಮುಂದಿನ ಬದುಕು ಹೇಗೆ? ಎಂದು ಕ್ವಿನಾನ್ಸ್ನ ಕುಟುಂಬದವರು ದಿಕ್ಕುಗಾಣದೆ ನಿಂತಿದ್ದಾಗ, ಅವನ ಬಂಧುಗಳು ನೆರವಿಗೆ ಬಂದರು. ‘ಅಮೆರಿಕಾದ ತೋಟಗಳಲ್ಲಿ ಕೂಲಿ ಕೆಲಸ ಸಿಗುತ್ತದೆ. ಬಂದುಬಿಡು’ ಎಂದರು. ಕ್ವಿನಾನ್ಸ್ನ ತಂದೆ ಹಿಂದೆ ಮುಂದೆ ಯೋಚಿಸದೆ ಸಂಸಾರ ಸಮೇತ ಬಂದೇ ಬಿಟ್ಟ. ಅಮೆರಿಕದ ಶ್ರೀಮಂತರ ತೋಟದಲ್ಲಿ ಮಾಲಿಯಾಗಿ, ಕೂಲಿಯವನಾಗಿ ಕೆಲಸಕ್ಕೆ ಸೇರಿಕೊಂಡ. ತನ್ನ ಸಂಪಾದನೆ ಯಾವ ಮೂಲೆಗೂ ಸಾಲುವುದಿಲ್ಲ ಎನ್ನಿಸಿದಾಗ ಮಕ್ಕಳನ್ನೂ ಕೂಲಿ ಕೆಲಸಕ್ಕೆ ಸೇರಿಸಿದ.
ಕ್ವಿನಾನ್ಸ್ ಮತ್ತು ಅವನ ತಂದೆ ಕೆಲಸ ಮಾಡುತ್ತಿದ್ದುದು ಹತ್ತು ಎಕರೆ ವಿಶಾಲದ ಜಮೀನಿನಲ್ಲಿ. ಅಲ್ಲಿ ಟೊಮೆಟೋ, ಕೋಸು, ಬೀನ್ಸ್, ಆಲೂಗಡ್ಡೆ ಸೇರಿದಂತೆ ತರಹೇವಾರಿಯ ತರಕಾರಿ ಬೆಳೆಯುತ್ತಿದ್ದರು. ತೋಟದ ಒಂದು ಮೂಲೆಯಲ್ಲಿ ಸಣ್ಣದೊಂದು ರೂಮನ್ನು ಕ್ವಿನಾನ್ಸ್ನ ಕುಟುಂಬಕ್ಕೆ ಬಿಟ್ಟುಕೊಡಲಾಗಿತ್ತು. ಕ್ವಿನಾನ್ಸ್ನ ಅಪ್ಪ ಬೆಳಗಿನಿಂದ ಸಂಜೆಯವರೆಗೂ ಬಿರುಬಿಸಿಲಿನಲ್ಲಿ ತೋಟದ ಈ ಬದಿಯಿಂದ ಆ ಬದಿಯವರೆಗೂ ಪಹರೆ ತಿರುಗುತ್ತಿದ್ದ. ಮಧ್ಯಾಹ್ನ ಊಟಕ್ಕೆಂದು ಬಂದವನು, ಆಕಸ್ಮಿಕವಾಗಿ ಮಾಲೀಕರು ಬಂದರೆ, ಅರ್ಧಕ್ಕೇ ಊಟಬಿಟ್ಟು ಓಡಿಹೋಗಿ ಅವರ ಮುಂದೆ ನಡುಬಾಗಿಸಿ ನಿಲ್ಲುತ್ತಿದ್ದ. ಅವನನ್ನು ಕಂಡ ಮಾಲೀಕರು-ಡರ್ಟಿ ಮೆಕ್ಸಿಕನ್ ಎಂದೇ ಮಾತು ಶುರು ಮಾಡುತ್ತಿದ್ದರು. ಚಿಕ್ಕದೊಂದು ತಪ್ಪಿಗೂ ಡರ್ಟಿ ಬಾಸ್ಟರ್ಡ್ ಎಂದು ಬಯ್ಯುತ್ತಿದ್ದರು. ಸಿಟ್ಟು ಬಂದರೆ ಒದ್ದೇ ಬಿಡುತ್ತಿದ್ದರು. ಇಂಥ ಸಂದರ್ಭಗಳಲ್ಲಿ ತಿರುಗಿ ಮಾತಾಡುವ, ಉತ್ತರ ಹೇಳುವ ಅವಕಾಶ ಕ್ವಿನಾನ್ಸ್ನ ತಂದೆಗೆ ಇರಲೇ ಇಲ್ಲ. ಹಾಗೇನಾದರೂ ಮಾಡಿದರೆ ಕೆಲಸ ಕಳೆದುಕೊಳ್ಳಬೇಕಿತ್ತು. ಅಮೆರಿಕನ್ನರನ್ನು ಅವರ ದೇಶದಲ್ಲಿಯೇ ನಿಂದಿಸಿದ ಕಾರಣಕ್ಕೆ ಜೈಲು ಶಿಕ್ಷೆಗೆ ಗುರಿಯಾಗಬೇಕಿತ್ತು. ಹಾಗಾಗಿ ಕ್ವಿನಾನ್ಸ್ನ ತಂದೆ ಎಲ್ಲ ಅವಮಾನವನ್ನೂ ಹಲ್ಲುಕಚ್ಚಿ ಸಹಿಸಿಕೊಂಡ.
ಅಪ್ಪ ಕೂಲಿ ಮಾಡುತ್ತಿದ್ದನಲ್ಲ? ಅದೇ ತೋಟದಲ್ಲಿ ಕ್ವಿನಾನ್ಸ್ ಕೂಡ ಕೆಲಸಕ್ಕಿದ್ದ-ತೋಟದಲ್ಲಿ ಬೆಳೆದ ತರಕಾರಿಗಳನ್ನು ಆಯ್ದು ತಂದು ಟ್ರಕ್ಗೆ ತುಂಬುವುದು, ಅವಾಗವಾಗ ತೋಟದಲ್ಲಿ ಕಳೆ ಕೀಳುವುದು ಅವನ ಕೆಲಸವಾಗಿತ್ತು. ಹೀಗೆ ತರಕಾರಿ ತುಂಬುತ್ತಿದ್ದ ಹುಡುಗನನ್ನು ಶ್ರೀಮಂತ ಅಮೆರಿಕನ್ನರು ಅಣಕಿಸುತ್ತಿದ್ದರು. ಗೇಲಿ ಮಾಡುತ್ತಿದ್ದರು. ನಿನಗೆ ಇಂಗ್ಲಿಷೇ ಬರಲ್ವಲ್ಲೋ ಮೆಕ್ಸಿಕನ್ ಎಂದು ಅಪಹಾಸ್ಯ ಮಾಡುತ್ತಿದ್ದರು. ‘ನಿಮ್ಮ ತಲೆಯೊಳಗೆ ಬರೀ ಸಗಣಿ ತುಂಬಿದೆ ಕಣ್ರೋ. ನಿಮ್ಮಂಥೋರು ಏನಿದ್ರೂ ಜೀತ ಮಾಡೋಕೇ ಸೈ. ನಿಮಗೆ ಯಾವತ್ತೂ ತಲೆ ಓಡಲ್ಲ ಕಣ್ರೋ’ ಎಂದೆಲ್ಲ ಚುಚ್ಚಿ ಚುಚ್ಚಿ ಮಾತಾಡುತ್ತಿದ್ದರು. ಮುಂದೊಂದು ದಿನ ಇದನ್ನೆಲ್ಲ ನೆನಪು ಮಾಡಿಕೊಂಡು ಕ್ವಿನಾನ್ಸ್ ಹೀಗೆ ಹೇಳಿದ್ದ:
ಅಮೆರಿಕಾದ ಜನ ಹೀಗೆಲ್ಲ ಮಾತಾಡಿದಾಗ ಸಂಕಟವಾಗುತ್ತಿತ್ತು. ಸಿಟ್ಟು ಬರುತ್ತಿತ್ತು. ಅವರಿಗೆ ತಿರುಗಿ ಉತ್ತರ ಕೊಡುವ ಆಸೆಯಾಗುತ್ತಿತ್ತು. ಆದರೆ, ನನಗೆ ಚಂದದ ಇಂಗ್ಲಿಷು ಗೊತ್ತಿರಲಿಲ್ಲ. ಅವರಿಗಿಂತ ಚೆನ್ನಾಗಿ ಬದುಕಬೇಕೆಂಬ ಆಸೆಯಿತ್ತು. ಆದರೆ ಹಣವಿರಲಿಲ್ಲ. ಊಟಕ್ಕೂ ಗತಿಯಿರಲಿಲ್ಲ. ಅಷ್ಟೇ ಅಲ್ಲ, ಹಾಕಿಕೊಳ್ಳಲು ಚೆಂದದ ಬಟ್ಟೆಗಳೂ ಇರಲಿಲ್ಲ. ಇಡೀ ವರ್ಷ ಒಂದು ಜೀನ್ಸ್ ಪ್ಯಾಂಟ್ನಲ್ಲಿಯೇ ಬದುಕಿದೆ. ಕೊಳೆಯಾದಾಗೆಲ್ಲ ರಾತ್ರಿ ಒಗೆದು, ಬೆಳಗ್ಗೆ ಮತ್ತೆ ಅದನ್ನೇ ಧರಿಸುತ್ತಿದ್ದೆ. ಈ ಸಂಕಟದ ಮಧ್ಯೆಯೇ ನನಗೊಂದು ಹಟ ಬಂದುಬಿಟ್ಟಿತ್ತು. ಡರ್ಟಿ ಮೆಕ್ಸಿಕನ್, ನಿಂಗೆ ಇಂಗ್ಲಿಷು ಬರಲ್ಲ ಕಣೋ ಎಂದಿದ್ದರಲ್ಲ? ಅದೇ ಅಮೆರಿಕನ್ನರ ಮುಂದೆ ತಲೆ ಎತ್ತಿ ತಿರುಗಬೇಕು. ನಿಮ್ಮ ತಲೆಯೊಳಗೆ ಏನೂ ಇಲ್ಲ ಅಂದರಲ್ಲ? ನಿಮ್ಮ ಮೆದುಳು ಪೂರ್ತಾ ಖಾಲಿ ಎಂದು ಹಂಗಿಸಿದ್ದರಲ್ಲ? ಅದೇ ಅಮೆರಿಕನ್ನರು ನನ್ನೆದುರು ತಲೆಬಾಗಿ ನಿಲ್ಲುವಂತೆ ಮಾಡಬೇಕು ಎಂಬ ಹಟ ಜತೆಯಾಗಿಬಿಟ್ಟಿತ್ತು…
ಇಂಥದೊಂದು ನಿರ್ಧಾರವನ್ನು ಅಂಗೈಲಿ ಹಿಡಿದುಕೊಂಡೇ ಕ್ವಿನಾನ್ಸ್ ಮನೆಗೆ ಬಂದಾಗ, ಮೂಲೆಯಲ್ಲಿ ನಡುಗುತ್ತಾ ಕೂತಿದ್ದ ಅವನ ತಂದೆ, ಮಗನ ಕೈಹಿಡಿದು ಬಿಕ್ಕಳಿಸುತ್ತಾ ಹೇಳಿದನಂತೆ: ‘ಮಗಾ, ನನ್ನ ಥರಾನೇ ಕಣ್ಣೀರಿನಲ್ಲೇ ಕೈ ತೊಳೆಯಬೇಕು ಅನ್ನೋದಾದ್ರೆ ಈ ಕೆಲಸವನ್ನೇ ಮುಂದುವರಿಸು. ದೊಡ್ಡ ಮನುಷ್ಯ ಆಗಬೇಕು ಅನ್ನೋ ಆಸೆ ಇದ್ರೆ ನಾಳೆಯಿಂದಲೇ ಸ್ಕೂಲಿಗೆ ಹೋಗು…’
ಮರುದಿನವೇ ಮೆಕ್ಸಿಕೋಗೆ ಮರಳಿದ ಕ್ವಿನಾನ್ಸ್ ಶಾಲೆಗೆ ಸೇರಿಕೊಂಡ. ಹಾಗೂ ಹೀಗೂ ಪ್ರಾಥಮಿಕ ಶಿಕ್ಷಣ ಮುಗಿಸಿದ. ಪ್ರೌಢಶಾಲಾ ಶಿಕ್ಷಣ ಮುಗಿಸಲು ಹಣದ ತೊಂದರೆ ಎದುರಾಯಿತು. ಆಗ ಒಂದು ವರ್ಷ ಸ್ಕೂಲು ಬಿಡಲು ಕ್ವಿನಾನ್ಸ್ ನಿರ್ಧರಿಸಿದ. ಹಾಗೆ ಶಾಲೆ ಬಿಟ್ಟವನು ಸೀದಾ ಅಮೆರಿಕಾದ ಫಾರ್ಮ್ ಹೌಸ್ಗೆ ಬಂದ. ತೋಟದ ಮಾಲಿ ಕೆಲಸಕ್ಕೆ ಸೇರಿಕೊಂಡ. ಊಟ ಮಾಡಿದರೆ ದುಡ್ಡು ಖರ್ಚಾಗಿ ಹೋಗುತ್ತದೆ ಎಂದುಕೊಂಡು ಒಂದಿಡೀ ವರ್ಷ (ತೋಟದ ಮಾಲೀಕರಿಗೆ ಗೊತ್ತಾಗದಂತೆ) ಟೊಮೆಟೋ, ಮೂಲಂಗಿ, ಕೋಸು, ಬೀನ್ಸ್ ತಿಂದುಕೊಂಡೇ ಬದುಕಿಬಿಟ್ಟ.
ಹೀಗೆ, ಒಂದು ವರ್ಷ ದುಡಿದ ಹಣವನ್ನು ಜತೆಗಿಟ್ಟುಕೊಂಡು ಮೆಕ್ಸಿಕೋಗೆ ಮರಳಿ, ಹೈಸ್ಕೂಲು ಶಿಕ್ಷಣಕ್ಕೆ ಸೇರಿಕೊಂಡನಲ್ಲ ಆಗ ಕ್ವಿನಾನ್ಸ್ನ ದಾರಿ ಸುಗಮವಿರಲಿಲ್ಲ. ಆತ ವಾಸವಿದ್ದ ಊರಿನಿಂದ ಶಾಲೆ ತುಂಬಾ ದೂರವಿತ್ತು. ಪರಿಣಾಮವಾಗಿ, ಬೆಳಗ್ಗೆ ನಾಲ್ಕು ಗಂಟೆಗೇ ಆತ ಏಳಬೇಕಿತ್ತು. ಅವಸರದಿಂದಲೇ ಬಸ್ಸು ಹಿಡಿಯಬೇಕಿತ್ತು. ಮಧ್ಯಾಹ್ನ ಮನೆಗೆ ವಾಪಸಾಗಲು ಬಸ್ ಇರಲಿಲ್ಲ. ಹಾಗಾಗಿ ಭರ್ತಿ ಎಂಟು ಮೈಲಿ ದೂರವನ್ನು ಆತ ನಡೆದೇ ಬರಬೇಕಿತ್ತು. ವರ್ಷವಿಡೀ ಬಿರುಬಿಸಿಲು ಅಥವಾ ಜಡಿ ಮಳೆ ಯಾವುದಾದರೊಂದು ಸದಾ ಕ್ವಿನಾನ್ಸ್ಗೆ ಕಾಟ ಕೊಡುತ್ತಲೇ ಇತ್ತು.
ಈ ಸಂಕಟದ ಮಧ್ಯೆಯೂ ಕ್ವಿನಾನ್ಸ್ ಡಿಸ್ಟಿಂಕ್ಷನ್ನಲ್ಲಿ ಪಾಸಾದ. ಈ ಸಂದರ್ಭದಲ್ಲಿಯೇ-ಮೆಕ್ಸಿಕೋದಲ್ಲಿಯೇ ಉಳಿದರೆ, ಯಾವುದಾದರೂ ಕಂಪನಿಯಲ್ಲಿ ಗುಮಾಸ್ತನಾಗಬಹುದೇ ಹೊರತು ಅದಕ್ಕಿಂತ ದೊಡ್ಡ ಹುದ್ದೆಗೆ ಹೋಗುವುದು ಸಾಧ್ಯವಿಲ್ಲ ಎಂದು ಕ್ವಿನಾನ್ಸ್ಗೆ ಅರ್ಥವಾಗಿ ಹೋಯಿತು. ಆತ ತಕ್ಷಣವೇ ಅಮೆರಿಕದ ಹಾದಿ ಹಿಡಿದ. ಅಮೆರಿಕದಲ್ಲಿ ಬದುಕಬೇಕೆಂದರೆ ಅಲ್ಲಿನ ಇಂಗ್ಲಿಷ್ ಕಲೀಬೇಕು ಅನ್ನಿಸಿದಾಗ ಒಂದಿಷ್ಟು ಡಿಕ್ಷನರಿ ಜತೆಗಿಟ್ಟುಕೊಂಡು ಕೆಲವೇ ದಿನಗಳಲ್ಲಿ ಅಮೆರಿಕನ್ ಇಂಗ್ಲಿಷು ಕಲಿತೇಬಿಟ್ಟ. ನಂತರ ರೈಲ್ವೆ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ಸೇರಿಕೊಂಡ. ಈ ಸಂದರ್ಭದಲ್ಲಿ ಕ್ವಿನಾನ್ಸ್ ಮಾಡಿದ ಜಾಣತನದ ಕೆಲಸವೆಂದರೆ, ಸಂಜೆ ಕಾಲೇಜಿಗೆ ಸೇರಿಕೊಂಡದ್ದು.
ವಿಜ್ಞಾನದ ವಿಷಯ ಆಯ್ದುಕೊಂಡ ಕ್ವಿನಾನ್ಸ್, ಕಾಲೇಜು ಮುಗಿದ ತಕ್ಷಣ ಲೈಬ್ರರಿ ಸೇರಿಕೊಳ್ಳುತ್ತಿದ್ದ. ಆತನ ಕಣ್ಮುಂದಿನ ಗುರಿ ನಿಚ್ಚಳವಿತ್ತು. ಇವತ್ತಲ್ಲ ನಾಳೆ, ಇಡೀ ಅಮೆರಿಕದ ಜನ ತನ್ನತ್ತ ಬೆರಗಿನಿಂದ ನೋಡುವಂಥ ಸಾಧನೆ ಮಾಡಬೇಕೆಂಬ ಮಹದಾಸೆ ಅವನೊಳಗಿತ್ತು. ಈ ಹಠದಿಂದಲೇ ಓದಲು ಕೂರುತ್ತಿದ್ದ. ಕಡೆಗೊಂದು ದಿನ, ಅವನ ಶ್ರದ್ಧೆಯ ಮುಂದೆ ವಿಜ್ಞಾನವೂ ಸೋತಿತು. ಪರಿಣಾಮ, ಉನ್ನತ ದರ್ಜೆಯಲ್ಲಿ ಆತ ಡಿಗ್ರಿ ಪಡೆದ. ನಂತರ ಶಿಕ್ಷಕನಾಗಿ ಕೆಲಸಕ್ಕೆ ಸೇರಿಕೊಂಡ. ಈ ಕೆಲಸದಿಂದ ಸಿಗುವ ಸಂಬಳದಲ್ಲಿ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಿಲ್ಲ ಅನ್ನಿಸಿದಾಗ, ಬಟ್ಟೆ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡ. ಖಾಸಗಿಯಾಗಿ ಟ್ಯೂಶನ್ ಹೇಳುವುದಕ್ಕೂ ಮುಂದಾದ.
ಹೀಗೆ, ಪೈಸೆಗೆ ಪೈಸೆ ಸೇರಿಸಿಕೊಂಡು ಕನಸಿನ ಹಿಂದೆ ಬಿದ್ದಿದ್ದಾಗಲೇ ಅಮೆರಿಕದ ಸಾವಿರಾರು ವಿದ್ಯಾರ್ಥಿಗಳು ಡ್ರಗ್ಸ್ನ ದಾಸರಾಗಿರುವ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಯಿತು. ತಕ್ಷಣವೇ, ಡ್ರಗ್ಸ್ ಸೇವನೆಯಿಂದ ಮೆದುಳಿನ ಮೇಲಾಗುವ ದುಷ್ಪರಿಣಾಮಗಳು ಎಂಬ ವಿಷಯವಾಗಿ ಕ್ವಿನಾನ್ಸ್ ಒಂದು ಪ್ರಬಂಧ ಬರೆದು ಪ್ರಕಟಿಸಿದ. ಈ ಸಂಶೋಧನೆಗೆ ಪ್ರೊ. ಹೋಗೋ ಮೋರಾ ಎಂಬಾತ ಗೈಡ್ ಆಗಿದ್ದರು. ಕ್ವಿನಾನ್ಸ್ನ ಪ್ರಬಂಧವನ್ನು ಕಂಡ ಅವರು, ಇದಕ್ಕಿಂತ ಚೆನ್ನಾಗಿ ಬರೆಯಲು ನನ್ನಿಂದ ಕೂಡ ಸಾಧ್ಯವಿಲ್ಲ. ಮಾನವ ದೇಹದ ಅತಿ ಸೂಕ್ಷ್ಮ ಅಂಗವೆಂದರೆ ಮೆದುಳು. ಅದರ ಬಗ್ಗೆ, ಅದರ ಕಾರ್ಯ ಚಟುವಟಿಕೆ, ಅದಕ್ಕೆ ಬರುವ ಕಾಯಿಲೆ, ಅದಕ್ಕೆ ಪರಿಹಾರ… ಮುಂತಾದ ವಿಷಯದ ಬಗ್ಗೆ ಅಕಾರಯುತವಾಗಿ ಮಾತಾಡಲು ತುಂಬ ತಿಳಿವಳಿಕೆ ಇರಬೇಕು. ಅಂಥ ಬುದ್ಧಿ ನಿನಗಿದೆ. ನೀನು ಯಾಕೆ ಡಾಕ್ಟರಾಗಬಾರದು? ನೀನೇಕೆ ಮೆದುಳು ಶಸ್ತ್ರಚಿಕಿತ್ಸಾ ತಜ್ಞ ಆಗಬಾರದು? ಎಂದರು. ಅಷ್ಟಕ್ಕೇ ಸುಮ್ಮನಾಗದೆ ಹಾರ್ವರ್ಡ್ನ ಮೆಡಿಕಲ್ ಕಾಲೇಜಿಗೆ ಶಿಷ್ಯನ ಪ್ರಬಂಧವನ್ನು ಕಳಿಸಿಕೊಟ್ಟರು. ಅವನಿಗೆ ವೈದ್ಯ ಶಿಕ್ಷಣಕ್ಕೆ ಸೀಟು ಕೊಡುವಂತೆಯೂ ಆಗ್ರಹಿಸಿದರು.
ಕ್ವಿನಾನ್ಸ್ನ ಪ್ರಬಂಧ ಕಂಡದ್ದೇ ಹಾರ್ವರ್ಡ್ ವಿವಿಯ ಎಲ್ಲರೂ ಬೆರಗಾದರು. ಆತನಿಗೆ ರತ್ನಗಂಬಳಿಯ ಸ್ವಾಗತ ಕೊಟ್ಟರು. ಕೆಲವೇ ವರ್ಷಗಳ ಹಿಂದೆ ಕ್ವಿನಾನ್ಸ್ನಿಂದ ಜೀತ ಮಾಡಿಸಿಕೊಂಡಿದ್ದ ಅಮೆರಿಕ ಸರಕಾರ, ತಾನೇ ಮುಂದಾಗಿ ಅವನಿಗೆ ಅಮೆರಿಕನ್ ಪೌರತ್ವ ನೀಡಿತು. ಸ್ಕಾಲರ್ಶಿಪ್ ನೀಡಿತು. ವಾಸಕ್ಕೆ ಮನೆ ಕೊಟ್ಟಿತು. ಷರತ್ತಿಲ್ಲದೆ ಸಾವಿರಾರು ಡಾಲರ್ ಸಾಲ ನೀಡಿತು.
ಹಳೆಯ ಗಾಯ, ಹಳೆಯ ಅವಮಾನ- ಈ ಎರಡನ್ನೂ ನೆನಪಿಟ್ಟುಕೊಂಡೇ ಕ್ವಿನಾನ್ಸ್ ಓದು ಮುಂದುವರಿಸಿದ. ಈ ಅಮೆರಿಕನ್ನರಿಂದ ಗೌರವ ಪಡೆಯಲೇಬೇಕು ಎಂಬ ಹಠದಿಂದಲೇ ಅಧ್ಯಯನಕ್ಕೆ ತೊಡಗಿಸಿಕೊಂಡ. ಕಡೆಗೂ ಅವನ ಛಲವೇ ಗೆದ್ದಿತು. ನರರೋಗ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದ ಕ್ವಿನಾನ್ಸ್ ನಂತರದ ಎರಡೇ ವರ್ಷದಲ್ಲಿ ‘ಅಮೆರಿಕದ ಅತ್ಯುತ್ತಮ ಮೆದುಳು ಶಸ್ತ್ರ ಚಿಕಿತ್ಸಾ ತಜ್ಞ’ ಎಂದು ಹೆಸರು ಮಾಡಿದ.
***
ಈಗ, ಅಮೆರಿಕದ ಬಾಲ್ಟಿಮೋರ್ನಲ್ಲಿರುವ ಜಾನ್ಸ್ಹಾಫ್ಕಿನ್ಸ್ ಆಸ್ಪತ್ರೆಯಲ್ಲಿ ಸೇವೆಯಲ್ಲಿದ್ದಾನೆ ಕ್ವಿನಾನ್ಸ್. ಮೆದುಳು ಕ್ಯಾನ್ಸರ್ಗೆ ತುತ್ತಾದವರನ್ನು ಬದುಕಿಸುವ ಮಹಾವೈದ್ಯ ಎಂದೇ ಅವನಿಗೆ ಹೆಸರಿದೆ. ಬದುಕುವುದೇ ಇಲ್ಲ ಎಂಬ ಹಂತಕ್ಕೆ ಹೋಗಿದ್ದ ರೋಗಿಗಳೆಲ್ಲ ಕ್ವಿನಾನ್ಸ್ನ ಕೈ ಚಳಕದಿಂದ ಹೊಸ ಬದುಕು ಕಂಡಿದ್ದಾರೆ. ಅಮೆರಿಕ ಸರಕಾರ, ಅವನಿಗೆ ಎಲ್ಲ ಅತ್ಯುನ್ನತ ಪ್ರಶಸ್ತಿಗಳನ್ನೂ ನೀಡಿ ಗೌರವಿಸಿದೆ. ಆ ಮೂಲಕ ತನ್ನ ಖ್ಯಾತಿಯನ್ನೂ ಹೆಚ್ಚಿಸಿಕೊಂಡಿದೆ.
ಇವತ್ತು, ಖ್ಯಾತಿಯ ಗೌರಿಶಂಕರದಲ್ಲಿ ಕುಳಿತಿದ್ದರೂ ೪೦ರ ಹರೆಯದ ಕ್ವಿನಾನ್ಸ್ ಬದಲಾಗಿಲ್ಲ. ಮೈಮರೆತಿಲ್ಲ. ಅಹಮಿಕೆಗೆ ಬಲಿಯಾಗಿಲ್ಲ. ಆತ ಹೇಳುತ್ತಾನೆ: ಒಂದು ಕಾಲದಲ್ಲಿ ಇದೇ ಅಮೆರಿಕದಲ್ಲಿ ಭಿಕ್ಷುಕನಂತೆ ಬದುಕಿದೆ. ಈ ಊರಲ್ಲಿ ತಲೆಎತ್ತಿಕೊಂಡು, ಅಮೆರಿಕನ್ನರಿಗೆ ಸರಿಸಮನಾಗಿ ಬದುಕಬೇಕೆಂಬ ಆಸೆಯಿತ್ತು. ಅದೀಗ ನನಸಾಗಿದೆ. ಅಮೆರಿಕದ ಹುಡುಗಿಯನ್ನೇ ಮದುವೆಯಾಗಿದ್ದೇನೆ. ನನಗೆ ಭವಿಷ್ಯದಲ್ಲಿ ನಂಬಿಕೆಯಿಲ್ಲ. ಇವತ್ತೇ ಕಡೆಯ ದಿನ ಅಂದುಕೊಂಡೇ ಕೆಲಸ ಶುರುಮಾಡ್ತೀನಿ. ಮೆದುಳಿನ ಶಸ್ತ್ರಚಿಕಿತ್ಸೆ ಅಂದರೆ ಸಾವಿನೊಂದಿಗೆ ಸರಸ ಇದ್ದಂತೆ. ಅದು ದೇವರ ಜತೆಗಿನ ಹೋರಾಟ. ನನ್ನ ಕೈ ಚಳಕದ ಸತ್ವ ಪರೀಕ್ಷೆ. ಅದರಲ್ಲಿ ಗೆಲ್ಲಲೇಬೇಕು ಅಂದುಕೊಂಡೇ ಕೆಲಸ ಶುರು ಮಾಡ್ತೀನಿ. ಜೀಸಸ್, ನಿನ್ನ ವಿರುದ್ಧವೇ ಹೋರಾಡ್ತಾ ಇದೀನಿ. ನನಗೆ ಗೆಲುವಾಗುವಂತೆ ಆಶೀರ್ವದಿಸು ಎಂದು ಪ್ರಾರ್ಥಿಸಿದ ನಂತರವೇ ಆಪರೇಷನ್ ಥಿಯೇಟರಿಗೆ ನಡೆದುಹೋಗ್ತೀನಿ. ಮುದ್ದೆ ಮುದ್ದೆಯಂಥ, ಅಮೀಬಾದ ಚಿತ್ರದಂಥ ಮೆದುಳನ್ನು ಕಂಡಾಗ, ಅದರಲ್ಲಿ ಅತಿ ಸೂಕ್ಷ್ಮ ಭಾಗವೊಂದನ್ನು ಕತ್ತರಿಸಿ ತೆಗೆಯಬೇಕಾಗಿ ಬಂದಾಗ ನನಗೂ ಜೀವ ಝಲ್ ಅನ್ನುತ್ತೆ ನಿಜ. ಆದರೆ, ಆಗೆಲ್ಲ ನನಗೆ ನಾನೇ ಧೈರ್ಯ ಹೇಳಿಕೊಂಡು ಕೆಲಸ ಮಾಡ್ತೀನಿ. ಅದೃಷ್ಟ, ಸ್ವಪ್ರಯತ್ನ, ರೋಗಿಯ ಮನೋಸ್ಥೈರ್ಯ ಹಾಗೂ ಜೀಸಸ್ನ ಕರುಣೆಯಿಂದ ಪ್ರತಿ ಸಂದರ್ಭದಲ್ಲೂ ನಾನು ಗೆದ್ದಿದೀನಿ ಎನ್ನುತ್ತಾನೆ ಕ್ವಿನಾನ್ಸ್.
****
ಒಂದು ಕಾಲದಲ್ಲಿ ನಿನ್ನ ಮೆದುಳೇ ಖಾಲಿ ಕಣೋ ಎಂದು ಅಣಕಿಸಿದ್ದ ಅಮೆರಿಕದ ಜನರಿಂದಲೇ ಶ್ರೇಷ್ಠ ಮೆದುಳು ಶಸ್ತ್ರಚಿಕಿತ್ಸಾ ತಜ್ಞ ಎಂದು ಕರೆಸಿಕೊಂಡನಲ್ಲ ಕ್ವಿನಾನ್ಸ್? ಅವನಿಗೆ ಲಾಲ್ಸಲಾಮ್ ಎನ್ನುವ ಆಸೆಯಾಗುತ್ತದೆ. ಹಿಂದೆಯೇ ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ ಎಂದು ಚೀರಿ ಹೇಳಬೇಕೆನಿಸುತ್ತದೆ. ಅಲ್ಲವೇ?

ಬರವಣಿಗೆ ಮೂಲಕ ಭವಿಷ್ಯ ತಿಳಿಯಿರಿ!

ಆಗಷ್ಟ್ 25, 2009

ಒಂದು ಕಾಲವಿತ್ತು.

ಆಗೆಲ್ಲ, ಭವಿಷ್ಯ ತಿಳಿಯ ಬೇಕು ಅನ್ನುವವರು, ಸೀದಾ ಜ್ಯೋತಿಷಿಗಳ ಬಳಿಗೆ ಹೋಗುತ್ತಿದ್ದರು. ಆಂಗೈ ತೋರಿಸುತ್ತಿದ್ದರು. ಕವಡೆ ಬಿಡುತ್ತಿದ್ದರು. ನಂತರ, ಅವರು ಹೇಳಿದ್ದಕ್ಕೆಲ್ಲ ‘ಸರಿ ಸ್ವಾಮಿ, ನಿಜ ಸ್ವಾಮಿ, ಹೌದು ಸ್ವಾಮಿ’ ಎಂದು ಹೂಂಗುಟ್ಟಿ ಎದ್ದು ಬರುತ್ತಿದ್ದರು. ಜ್ಯೋತಿಷಿಗಳ ಬಳಿಗೆ ಹೋಗಲು ಒಪ್ಪದವರು-ತಮ್ಮ ಹೆಸರಿನ ಮೊದಲಕ್ಷರ ಯಾವ ರಾಶಿಯದು ಎಂದು ತಿಳಿದು, ಕುತೂಹಲದಿಂದಲೇ ಪಂಚಾಂಗದ ಕಡೇ ಪುಟಗಳಲ್ಲಿದ್ದ ಭವಿಷ್ಯ ಓದುತ್ತಿದ್ದರು. ಮುಂದೆ, ಹುಟ್ಟಿದ ದಿನಾಂಕ ಹಾಗೂ ತಿಂಗಳಿನ ಆಧಾರದ ಮೇಲೆ ಭವಿಷ್ಯ ಹೇಳುವ/ನೋಡುವ ಸ್ಕೀಮು ಜಾರಿಗೆ ಬಂತು. ಭವಿಷ್ಯವನ್ನು ನಂಬದವರು ಕೂಡ ಒಂದು ಕುತೂಹಲದಿಂದ ಅದನ್ನು ಓದಿ, ಕೇಳಿ, ತಿಳಿದು ಖುಷಿಪಟ್ಟರು. ಸ್ವಾರಸ್ಯವೆಂದರೆ, ಈ ಎರಡೂ ವೆರೈಟಿಯ ಭವಿಷ್ಯಗಳಲ್ಲಿ ಹೆಚ್ಚು-ಕಡಿಮೆ ಆಗುವ ಸಾಧ್ಯತೆಗಳು ತುಂಬಾ ಇದ್ದವು. ಹೇಗೆಂದರೆ, ಜ್ಯೋತಿಷ್ಯ ಹೇಳುವವರು ಪರಿಚಿತರೇ ಆಗಿದ್ದರೆ; ನಮ್ಮಿಂದ ಉಪಕಾರಕ್ಕೆ ಒಳಗಾಗಿದ್ದರೆ-ಕಂಡದ್ದನ್ನು (?!) ಕಂಡಹಾಗೆ ಹೇಳುವ ಸಾಧ್ಯತೆ ತೀರಾ ಕಮ್ಮಿಯಿತ್ತು. ಹಾಗೆಯೇ, ಜನ್ಮದಿನಾಂಕ ತಪ್ಪಾಗಿ ನಮೂದಾಗಿದ್ದರೆ, ಆಗ ಕೂಡ ಭವಿಷ್ಯದ ಸಾಲುಗಳಲ್ಲಿ ಹೆಚ್ಚು ಕಡಿಮೆ ಆಗುವ ಸಂಭವವಿತ್ತು.
ಹೀಗಿರುವಾಗ, ನಮ್ಮ ಕೈಬರಹ, ಪತ್ರ ಬರೆಯುವ ಧಾಟಿ, ಅದರಲ್ಲಿ ಕಂಡು ಬರುವ ಶಿಸ್ತು, ಅಶಿಸ್ತು, ಅವಸರ, ಶ್ರದ್ಧೆ, ಅಕ್ಷರ ಬಳಕೆಯ ರೀತಿಯಿಂದಲೂ ಭವಿಷ್ಯ ಹೇಳಬಹುದು ಅಂದರೆ ನಂಬುತ್ತೀರಾ? ನಂಬುವವರ ಪಾಲಿಗಷ್ಟೇ ಇದು ನಿಜ. ಯಾವ ರೀತಿ ಬರೆಯುವವರ ವ್ಯಕ್ತಿತ್ವ ಹೇಗಿರುತ್ತದೆ ಎಂಬುದಕ್ಕೆ ಇಲ್ಲಿ ವಿವರಣೆಯಿದೆ.
ಕೆಲವರಿರುತ್ತಾರೆ. ಅವರ ಪತ್ರಗಳು ಮಾರುದ್ದ ಇರುತ್ತವೆ ನಿಜ. ಆದರೆ ಆ ಪತ್ರಗಳಲ್ಲಿ ಒಂದೇ ವಿಷಯವನ್ನೂ ಮತ್ತೆ ಮತ್ತೆ ರಿಪೀಟ್ ಮಾಡಿರುತ್ತಾರೆ. ಅದನ್ನು ಓದಿದವರು- ‘ಹುಚ್ಚು, ಮುಂಡೇದು, ಒಂದೇ ವಿಷಯವನ್ನು ಹತ್ತು ಬಾರಿ ಬರ‍್ದಿದೆ. ಮಾಡೋಕೆ ಕೆಲ್ಸ ಇಲ್ಲ ಅನ್ಸುತ್ತೆ’ ಎಂದು ಗೊಣಗುತ್ತಾರೆ. ಹೀಗೆ, ಬರೆದದ್ದನ್ನೇ ಮತ್ತೆ ಮತ್ತೆ ಬರೆದಿರುತ್ತಾರಲ್ಲ? ಅಂಥವರಿಗೆ ಆತ್ಮವಿಶ್ವಾಸದ ಕೊರತೆ ಇರುತ್ತದೆ. ರಿಸ್ಕ್‌ಗೆ ಕೈ ಹಾಕಲು ಹೆದರಿಕೆ ಇರುತ್ತದೆ. ಬೇರೆಯವರು ನಮ್ಮ ಮಾತನ್ನು ಲಕ್ಷ್ಯಗೊಟ್ಟು, ಕೇಳಲಾರರು ಎಂಬ ಶಂಕೆಯಿರುತ್ತದೆ. ಗೆಳೆಯ/ಗೆಳತಿ ನನ್ನ ಪತ್ರದ ಪ್ರತಿ ಸಾಲುಗಳನ್ನೂ ಓದುತ್ತಾನೋ(ಳೋ) ಇಲ್ಲವೋ ಎಂಬ ಅನುಮಾನವಿರುತ್ತದೆ. ಹೀಗೆ ಓದಿ ಹಾಗೆ ಮರೆತುಬಿಟ್ಟರೆ… ಎಂಬ ಸಂಕಟವಿರುತ್ತದೆ. ಈ ಕಾರಣದಿಂದಲೇ ಅವರು ಬರೆದದ್ದನ್ನೇ ಮತ್ತೆ ಮತ್ತೆ ಬರೆದಿರುತ್ತಾರೆ. ತೀರಾ ಸಾಮಾನ್ಯ ಎಂಬಂಥ ವಿಷಯ ಬರೆಯುವ ಮೊದಲೇ, ಇದು ಬಹಳ ಗುಟ್ಟಿನ ವಿಷಯ. ನೀನು ಒಬ್ಬನೇ (ಳೇ) ಇದ್ದಾಗ ಓದು ಪ್ಲೀಸ್… ಎಂದೂ ಸೇರಿಸಿ ರುತ್ತಾರೆ! ಪತ್ರವನ್ನು ಪೋಸ್ಟ್/ಕೊರಿಯರ್ ಮಾಡಿದ ಮರುದಿನವೇ ಫೋನ್ ಮಾಡಿ- ‘ಕಾಗದ ಬಂತಾ? ಲೆಟರ್ ಸಿಕ್ತಾ?’ ಎಂದು ಮೇಲಿಂದ ಮೇಲೆ ಕೇಳಿ ಪ್ರಾಣ ತಿನ್ನುತ್ತಾರೆ.
ಕೆಲವರು, ತಮ್ಮ ಪತ್ರವನ್ನು ದೊಡ್ಡ ಅಕ್ಷರ ಗಳಿಂದ ಆರಂಭಿಸುತ್ತಾರೆ. ಆದರೆ ಪತ್ರದ ಕೊನೆ ತಲುಪುವ ವೇಳೆಗೆ ಅವರು ಹೇಳಬೇಕಿರುವ ವಿಷಯದಲ್ಲಿ ಮುಕ್ಕಾಲು ಭಾಗವನ್ನಷ್ಟೇ ಹೇಳಿರುತ್ತಾರೆ. ಉಳಿದದ್ದನ್ನೂ ಹೇಳಲೇ ಬೇಕಲ್ಲ? ಕಾರಣಕ್ಕೆ ಮಾರ್ಜಿನ್‌ನಲ್ಲಿರುವ ಜಾಗದಲ್ಲಿ ಅಕ್ಷರ ಇನ್ನಿಲ್ಲದ ಸರ್ಕಸ್ ಮಾಡಿ ಜೋಡಿಸುತ್ತಾರೆ! ಇಂಥ ಅಕ್ಷರಗಳ ಒಡೆಯರಿಗೆ, ಜೀವನದಲ್ಲಿ ಒಂದು ಯೋಜನೆ, ಶಿಸ್ತು ಇರುವುದಿಲ್ಲ. ತಿಂಗಳ ಮೊದಲಿನಲ್ಲಿ ಬಿಂದಾಸ್ ಆಗಿ ಖರ್ಚು ಮಾಡಿಕೊಂಡು ಓಡಾಡುವ ಈ ಜನ, ತಿಂಗಳ ಕಡೆಗೆ-ಥತ್ ಜೇಬು ಖಾಲಿ ಎಂದು ಹೇಳಿಕೊಂಡೇ ಅಡ್ಡಾಡುತ್ತಿರುತ್ತಾರೆ.
ಪತ್ರ ಬರೆದು ಮುಗಿಸಿದ ನಂತರ, ‘ಮರೆತ ಮಾತು’ ಎಂದು ಬರೆದು ಅದರ ಕೆಳಗೆ ಒಂದು ದಪ್ಪ ಗೆರೆ ಎಳೆದು, ಅದುವರೆಗೂ ಹೇಳದಿದ್ದ ಒಂದು ವಿಚಾರವನ್ನು ಹೇಳುವ ಅಭ್ಯಾಸ ಹಲವರಿಗಿರುತ್ತದೆ. ಅಂಥವರು ಯಾವುದೇ ಚೌಕಟ್ಟಿಗೂ ಸಿಕ್ಕಿಕೊಳ್ಳದೇ ಬದುಕುತ್ತಿರುತ್ತಾರೆ. ಸ್ವಾರಸ್ಯ ವೆಂದರೆ, ಇದು ಅವರ ಪ್ಲಸ್ ಪಾಯಿಂಟ್ ಮಾತ್ರವಲ್ಲ, ಮೈನಸ್ ಪಾಯಿಂಟೂ ಆಗಿರುತ್ತದೆ. ಏಕೆಂದರೆ, ಬದುಕಿನ ಬಗ್ಗೆ ಒಂದು ಪ್ಲಾನ್ ಇರುವುದಿಲ್ಲವಲ್ಲ? ಅದೇ ಕಾರಣಕ್ಕೆ ಅವರು ಸ್ವಲ್ಪ ಸೋಮಾರಿಯ ಬದುಕು ಸಾಗಿಸಲು ಶುರುಮಾಡುತ್ತಾರೆ. ಈ ಕಾರಣದಿಂದಲೇ ಜತೆಗಿದ್ದವರ ಟೀಕೆಗೆ, ತಾತ್ಸಾರಕ್ಕೆ ಗುರಿಯಾಗುತ್ತಾರೆ.
ಎರಡು ಸಾಲುಗಳ ಮಧ್ಯೆ ಸ್ವಲ್ಪ ಜಾಸ್ತಿ ಎನ್ನುವಷ್ಟು ಅಂತರಬಿಟ್ಟು ಬರೀತಾರಲ್ಲ? ಅವರಿಗೆ ನಾನುಂಟು ಮೂರು ಲೋಕವುಂಟು ಎಂಬ ಭ್ರಮೆಯಿರುತ್ತದೆ. ನನಗೆ ಗೊತ್ತಿಲ್ಲದ ವಿಷಯವೇ ಇಲ್ಲ ಎಂಬ ಅಹಮಿಕೆಯಿರುತ್ತದೆ. ಬಡಾಯಿ ಕೊಚ್ಚಿಕೊಳ್ಳುವ ಹವ್ಯಾಸವಿರುತ್ತದೆ. ಹತ್ತು ಮಂದಿಯನ್ನು ‘ಇಂಪ್ರೆಸ್’ ಮಾಡುವ ‘ಕಲೆ’ ಸಿದ್ಧಿಸಿರುತ್ತದೆ. ಈ ಕಾರಣದಿಂದಲೇ ಅವರನ್ನು ಹಲವರು ಟೀಕಿಸುತ್ತಾರೆ. ಬಯ್ಯುತ್ತಾರೆ. ರೇಗಿಸುತ್ತಾರೆ. ಗೇಲಿ ಮಾಡುತ್ತಾರೆ. ಆದರೆ ಅದ್ಯಾವುದಕ್ಕೂ ಈ ಜನ ಕೇರ್ ಮಾಡುವುದಿಲ್ಲ. ತಲೆಕೆಡಿಸಿಕೊಳ್ಳುವುದೂ ಇಲ್ಲ. ಬದಲಿಗೆ, ಹತ್ತು ಮಂದಿಯ ಮುಂದೆ ‘ಪುಂಗಿ ಊದಲು’ ಹೊರಟೇ ಬಿಡುತ್ತಾರೆ.
‘ನಾನೇ ಬೇರೆ, ನನ್ನ ಸ್ಟೈಲೇ ಬೇರೆ’ ಎಂಬಂಥ ಕೆಟಗರಿಯ ಜನ-ತಮ್ಮ ಪತ್ರಗಳಲ್ಲಿ ಆದಷ್ಟೂ ಹೊಸ ಪದಗಳನ್ನು ಬಳಸುತ್ತಾರೆ. ಆ ಮೂಲಕ
ಓದುವವರನ್ನು ಕನ್‌ಫ್ಯೂಸ್‌ಗೆ ಕೆಡವುತ್ತಾರೆ. ಹತ್ತು ಜನರ ಮುಂದೆ ಪಾಂಡಿತ್ಯ ಪ್ರದರ್ಶಿಸಬೇಕು, ಬೇರೆಯವರಿಗಿಂತ ವಿಶೇಷ ಅನ್ನಿಸುವ ಪದಗಳು, ವಿಷಯಗಳು ನನಗೆ ಗೊತ್ತಿದೆ ಎಂದು ತೋರಿಸಿಕೊಳ್ಳಬೇಕು ಎಂಬ ಹಪಹಪಿಯಿಂದಲೇ ಅವರು ಹೀಗೆ ಮಾಡಿರುತ್ತಾರೆ. ಸ್ವಾರಸ್ಯವೆಂದರೆ, ಹಾಗೆ ಬಳಸಿದ ಪದ ಅಥವಾ ವಿಷಯದ ಬಗ್ಗೆ ಅವರಿಗೇ ಸಮಗ್ರವಾಗಿ ಗೊತ್ತಿರುವುದಿಲ್ಲ. ಯಾರಾದರೂ ಪಟ್ಟು ಹಿಡಿದು ಪ್ರಶ್ನೆ ಹಾಕಿದರೆ, ಏನಾದರೂ ಹಾರಿಕೆಯ ಉತ್ತರ ಕೊಟ್ಟು ಕಾಗೆ ಹಾರಿಸುತ್ತಾರೆ.
ಒಂದು ಸಾಲು ಬರೆಯುವುದು, ನಂತರ ಅದನ್ನು ಹೊಡೆದು ಹಾಕುವುದು; ಒಂದು ಪದ ಬರೆಯುವುದು, ನಂತರ ಅದನ್ನೂ ಹೊಡೆದು ಹಾಕಿ ಬೇರೊಂದು ಪದ ಬರೆಯುವುದು-ಹೀಗೆ ಮಾಡು ತ್ತಾರಲ್ಲ? ಆ ಜನ ‘ಅಯ್ಯೋಪಾಪ’ ಎಂಬ ವರ್ಗಕ್ಕೆ ಸೇರಿದವರು. ಹೇಗೆ ಬರೆದರೆ ಏನಾಗಿಬಿಡುತ್ತೋ ಎಂಬ ಭಯ ಅವರನ್ನು ಕಾಡುತ್ತಿರುತ್ತದೆ. ಹಾಗಾಗಿ ಅವರು, ಮಾಡಿದ ತಪ್ಪನ್ನು ತುಂಬ ಬೇಗ ಒಪ್ಪಿಕೊಂಡು ಬಿಡುತ್ತಾರೆ. ಅಷ್ಟೇ ಅಲ್ಲ, ಯಾವುದೇ ಅಭಿಪ್ರಾಯವಿರಲಿ, ಅದನ್ನು ಹತ್ತು ಮಂದಿ ಒಪ್ಪಿಕೊಂಡರೆ ಹಿಂದೆ ಮುಂದೆ ಯೋಚಿಸದೆ ಹನ್ನೊಂದನೆಯವರಾಗಿ ತಾವೂ ಒಪ್ಪಿಬಿಡುತ್ತಾರೆ.
ಕೆಲವರಿರುತ್ತಾರೆ. ಅವರ ಅಕ್ಷರಗಳು ಮಣಿ ಪೋಣಿಸಿದಷ್ಟು ಮುದ್ದು ಮುದ್ದಾಗಿರುತ್ತವೆ. ಅವರ ಬರಹದಲ್ಲಿ ತಪ್ಪುಗಳಿರುವುದಿಲ್ಲ. ಉತ್ಪ್ರೇಕ್ಷೆ ಇರುವುದಿಲ್ಲ. ಇಂಥವರ ವ್ಯಕ್ತಿತ್ವದಲ್ಲಿ ಕೆಲವರಲ್ಲಿ ವಿಪರೀತ ಧಾರಾಳತನ; ರೇಜಿಗೆ ಹುಟ್ಟಿಸುವಂಥ ಜಿಪುಣತನ-ಎರಡೂ ಇರುತ್ತದೆ. ಸ್ವಾರಸ್ಯವೆಂದರೆ, ಈ ಮುದ್ದು ಅಕ್ಷರಗಳ ಮಂದಿಗೆ ಬೊಂಬಾಟ್ ಎಂಬಂಥ ‘ಗೆಳೆಯರ ಬಳಗ’ ಇರುತ್ತದೆ. ಅಭಿಮಾನಿಗಳ ವೃಂದ ವಿರುತ್ತದೆ. ಇವರು ಮಾಡಿದ ತಪ್ಪನ್ನು ಒಪ್ಪಿಕೊಳ್ಳುವುದೇ ಇಲ್ಲ. ಹಾಗಿದ್ದರೂ, ಅದೇನು ಕಾರಣವೋ ಏನೋ; ಶತ್ರುಗಳು ಅನಿಸಿಕೊಂಡ ಜನ ಕೂಡ ಅವರನ್ನು ಇಷ್ಟಪಡುತ್ತಾರೆ. ಮುದ್ದಾದ ಅಕ್ಷರಗಳ ಮಂದಿಗೆ ಹತ್ತು ಮಂದಿಯ ಸಂಕಟ ಕೇಳುವುದರಲ್ಲಿ, ಅದಕ್ಕೊಂದು ಪರಿಹಾರ ಹೇಳುವುದರಲ್ಲಿ ಏನೋ ಸಂತಸ! ಆದರೆ, ತಮ್ಮ ನೋವನ್ನು ಹೆಚ್ಚಿನ ಸಂದರ್ಭದಲ್ಲಿ ಹೇಳಿಕೊಳ್ಳುವುದೇ ಇಲ್ಲ. ಈ ಕಾರಣದಿಂದಲೇ ಹಲವರು- ‘ಅವನಿಗೇನ್ರಿ ಕಷ್ಟ,! ಮಹಾರಾಜ, ಮಹಾರಾಜನ ಥರಾ ಇದಾನೆ…’ ಎಂದು ಮಾತಾಡಿಕೊಳ್ಳುತ್ತಾರೆ. ಎಷ್ಟೊಂದು ಖುಷಿಯಾಗಿ ದ್ದಾನಲ್ಲ ಎಂದುಕೊಂಡು ಹೊಟ್ಟೆ ಉರಿದುಕೊಳ್ಳುತ್ತಾರೆ ಕೂಡಾ…
ಕೆಲವರ ಗುಣ ಹೀಗೆ: ಅವರು ಪತ್ರ ಬರೆಯುವುದು ಫುಲ್‌ಸ್ಕೇಪ್ ಹಾಳೆಯಲ್ಲೇ. ಅದರ ಎರಡೂ ಬದಿಯಲ್ಲಿ ಜಾಗವಿದೆ ಎಂದು ಅವರಿಗೂ ಗೊತ್ತಿರುತ್ತದೆ. ಹಾಗಿದ್ದರೂ, ಒಂದಕ್ಕೊಂದು ಸಾಲು ಅಂಟಿಕೊಳ್ಳುವಂತೆ ಪತ್ರ ಬರೆದಿರುತ್ತಾರೆ. ಅಕ್ಷರಗಳು ಸಣ್ಣದಿರುತ್ತವೆ. ಪುಟ ತಿರುಗಿಸಿ ಬರೆದರೆ ಏನೋ ಕಳೆದುಹೋಗುತ್ತೆ ಎಂದು ಕೊಂಡವರಂತೆ ಹಾಳೆಯ ಕೊನೆಗೇ ಇರುವೆ ಗಾತ್ರದ ಅಕ್ಷರಗಳಲ್ಲಿ ಮಾತು ಮುಗಿಸಿರುತ್ತಾರೆ. ಅನುಮಾನವೇ ಬೇಡ. ಇಂಥ ಕೈ ಬರಹದ ಜನ ಜಿಪುಣರು. ಅವರ ಜಿಪುಣತನದ ಬಗ್ಗೆ ತಮಾಷೆಗಳಿರುತ್ತವೆ, ಕಥೆಗಳಿರುತ್ತವೆ. ಆದರೂ ಈ ಜನ ಜಿಪುಣತನದಿಂದ ಆಚೆಗೆ ಬರುವುದಿಲ್ಲ. ಹೋಗಲಿ, ಫುಲ್‌ಸ್ಕೇಪ್ ಹಾಳೆಯ ಇನ್ನೊಂದು ಬದಿಯಲ್ಲಿ ಬರೆಯುವ ಉದಾರತೆಯನ್ನೂ ತೋರುವುದಿಲ್ಲ.
ಪದಗಳ ಮಧ್ಯೆ ಹೆಚ್ಚು ಗ್ಯಾಪ್ ಬಿಟ್ಟು ಬರೆಯುತ್ತಾರಲ್ಲ? ಅಂಥ ಹೆಣ್ಣು ಮಕ್ಕಳಿಗೆ ಹತ್ತು ಮಂದಿ ಮೆಚ್ಚುವಂಥ ಸೌಂದರ್ಯವಿರುತ್ತದೆ. ಫ್ಯಾಷನಬಲ್ ಆಗಿ ಮಾತಾಡುವ ‘ಕಲೆ’ ಅವರಿಗೆ ಒಲಿದಿರುತ್ತದೆ. ಒಂದು ದೊಡ್ಡ ಸಾಧನೆ ಮಾಡುವಂಥ ಕೆಪ್ಯಾಸಿಟಿ ಅವರಿಗಿರುತ್ತದೆ ನಿಜ. ಆದರೆ, ‘ಸಾಧನೆ’ಗೆ ಶ್ರಮಿಸುವ ಉತ್ಸಾಹವೇ ಇವರಿಗಿರುವುದಿಲ್ಲ. ಅಂಥ ದೊಡ್ಡ ಶ್ರದ್ಧೆಯೂ ಇರುವುದಿಲ್ಲ. ಹಾಗಾಗಿ, ದೊಡ್ಡ ‘ಎತ್ತರ’ ತಲುಪಿಕೊಳ್ಳಬಲ್ಲ ಸಾಮರ್ಥ್ಯವಿದ್ದರೂ ಇವರು ಹತ್ತರಲ್ಲಿ ಹನ್ನೊಂದನೆಯವರಾಗಿಯೇ ಉಳಿಯುತ್ತಾರೆ.
ಅಕ್ಷರಗಳನ್ನು ಒತ್ತಿ ಒತ್ತಿ ಬರೆಯುತ್ತಾರಲ್ಲ? ಅವರು ದೂರ್ವಾಸನ ವಂಶದವರು. ತಕ್ಷಣವೇ ಸಿಟ್ಟಾಗುತ್ತಾರೆ. ಯಕ್ಕಾಮಕ್ಕಾ ಬಯ್ಯುತ್ತಾರೆ. ಗೆಟ್‌ಔಟ್ ಅಂದೂಬಿಡುತ್ತಾರೆ. ಅಂದಹಾಗೆ, ಇವರೊಳಗೆ ‘ಸ್ವಾರ್ಥ’ ಹೆಚ್ಚಿರುತ್ತದೆ. ಪ್ರತಿಯೊಂದು ಕೆಲಸವನ್ನೂ ಅವರು ಲೆಕ್ಕಾಚಾರದಿಂದಲೇ ಮಾಡುತ್ತಾರೆ. ಎದುರು ನಿಂತವರಿಗೆ ಒಂದು ನಮಸ್ಕಾರ ಹೊಡೆಯ ಬೇಕಾಗಿ ಬಂದರೆ, ಅದರಿಂದ ಏನಾದರೂ ಉಪಯೋಗವಿದೆಯಾ ಎಂದೇ ಯೋಚಿಸುತ್ತಾರೆ.
ಚಿತ್ತುಗಳಿಲ್ಲದೆ ಅಕ್ಷರಗಳಿಂದ ಪತ್ರ ಆರಂಭಿಸಿ ಗಡಿಬಿಡಿಯಲ್ಲಿ ಮುಗಿಸುವ ಜನರಿದ್ದಾರಲ್ಲ? ಅಂಥವರಿಗೆ ತಾಳ್ಮೆ ಕಡಿಮೆ. ಯಾವುದೇ ಕೆಲಸ ಕೈಗೆತ್ತಿಕೊಂಡರೂ ಅವರು ಮೊದಲು ತೋರಿದ ಉತ್ಸಾಹವನ್ನು ಕಡೆಗೆ ತೋರುವುದಿಲ್ಲ. ಈ ಕಾರಣದಿಂದಲೇ ಅವರು ‘ಯಡವಟ್ರಾಯ’ ಎಂದು ಕರೆಸಿಕೊಳ್ಳುತ್ತಾರೆ. ಒಂದು ಕೆಲಸದಲ್ಲಿ ಯಶಸ್ಸು ಪಡೆಯುವ ಮೊದಲೇ ಇನ್ನೊಂದಕ್ಕೂ ಕೈ ಹಾಕಿ ಫಜೀತಿಗೆ ಸಿಕ್ಕಿಕೊಳ್ಳುತ್ತಾರೆ.
ಕೆಲವರು ಫುಲ್‌ಸ್ಕೇಪ್ ಹಾಳೆಯಲ್ಲಿಯೇ ಬರೆದಿರುತ್ತಾರೆ. ಹಾಳೆಯ ತುಂಬಾ ಬರೆದಿರುತ್ತಾರೆ. ಆದರೆ ಅಲ್ಲಿ ಫುಲ್‌ಸ್ಟಾಪ್, ಕಮಾ, ಅಲ್ಪವಿರಾಮ, ಪ್ರಶ್ನಾರ್ಥಕ ಚಿಹ್ನೆ… ಯಾವುದೂ ಇರುವುದಿಲ್ಲ. ಒಂದು ವಾಕ್ಯ ಮುಗಿದದ್ದು ಎಲ್ಲಿ? ಹೊಸ ವಾಕ್ಯ ಶುರುವಾಗಿದ್ದೆಲ್ಲಿ ಎಂಬುದೇ ಓದುವವರಿಗೆ ಅರ್ಥವಾಗುವುದಿಲ್ಲ. ಹೀಗೆ ಬರೀತಾರಲ್ಲ- ಅವರಿಗೆ ತಮ್ಮ ಮನಸ್ಸಿನ ಮೇಲೇ ನಿಯಂತ್ರಣವಿರುವುದಿಲ್ಲ. ಅವರ ಕೈ ಮತ್ತು ಬುದ್ಧಿ ಒಟ್ಟೊಟ್ಟಾಗಿ ಓಡುವುದಿಲ್ಲ.
ಪತ್ರಗಳ ಮಧ್ಯೆ, ತಮ್ಮದೇ ಬರವಣಿಗೆಯ ಮಧ್ಯೆ ಏಕಾಏಕಿ ಬೇರೊಂದು ಭಾಷೆಯ ಪದ ಬಳಸುವ ಅಭ್ಯಾಸ ಕೆಲವರಿಗಿರುತ್ತದೆ. ಇಂಥವರನ್ನು ಅರ್ಥಮಾಡಿಕೊಳ್ಳುವುದೇ ಕಷ್ಟ. ಒಂದು ನೌಕರಿಯಲ್ಲಿ, ಒಂದು ಕೆಲಸದಲ್ಲಿ, ಒಂದು ಸಂಸ್ಥೆಯಲ್ಲಿ, ಒಂದೇ ಮನೆಯಲ್ಲಿ ಈ ಜನ ಹೆಚ್ಚು ದಿನ ಇರುವುದಿಲ್ಲ. ಸಣ್ಣ ಬೇಸರವಾದರೂ ಸಾಕು, ತಕ್ಷಣ ಮನಸ್ಸು ಬದಲಿಸಿ ಎದ್ದುಹೋಗಿಬಿಡುತ್ತಾರೆ. ಇಂಥವರು, ವಹಿಸಿ ಕೊಂಡ ಕೆಲಸವನ್ನು ಹತ್ತುಮಂದಿ ಒಪ್ಪುವಂತೆ ಮಾಡುತ್ತಾರೆ ನಿಜ. ಆದರೆ, ಅವರು ಒಂದೇ ವಿಷಯಕ್ಕೆ ಅಂಟಿಕೊಳ್ಳುವುದಿಲ್ಲ, ಹತ್ತು ಮಂದಿ ಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬದುಕುವುದೂ ಇಲ್ಲ.
ಒಂದು ಪತ್ರದಲ್ಲಿ ಸ್ವಲ್ಪ ಜಾಸ್ತಿಯೇ ಮಾರ್ಜಿನ್ ಬಿಟ್ಟು ಬರೆಯುತ್ತಾರಲ್ಲ? ಅಂಥವರು ಹಣಕಾಸಿನ ವಿಷಯದಲ್ಲಿ ತುಂಬ ಎಚ್ಚರ ವಹಿಸುತ್ತಾರೆ. ಹೆಚ್ಚಿನ ಸಂದರ್ಭದಲ್ಲಿ -ತಮಗೆ ಲಾಸ್ ಆಗದಂತೆ ನೋಡಿಕೊಳ್ಳುತ್ತಾರೆ. ಅದೇ ಸಂದರ್ಭದಲ್ಲಿ ಗೆಳೆಯರ ಮುಂದೆ, ನಾನು ಧಾರಾಳಿ ಎಂದು ತೋರಿಸಿಕೊಳ್ಳಲೂ ಪ್ರಯತ್ನಿಸುತ್ತಾರೆ!
ಕೆಲವರಿಗೆ, ಅತೀ ಎಂಬಂಥ ಆತ್ಮವಿಶ್ವಾಸವಿರುತ್ತದೆ. ನಾನು ಯಾವತ್ತೂ ತಪ್ಪು ಮಾಡೋದೇ ಇಲ್ಲ ಎಂಬ ‘ಅಹಂ’ ಇರುತ್ತದೆ. ಇಂಥ ವರು ಪ್ರತಿಯೊಂದನ್ನೂ ಸಂಕ್ಷಿಪ್ತವಾಗಿ ಬರೆಯುತ್ತಾರೆ ನಿಜ. ಆದರೆ, ಅದನ್ನು ಸಂಬಂಧಪಟ್ಟವರಿಗೆ ತಲುಪಿಸುವುದನ್ನೇ ಮರೆತುಬಿಟ್ಟಿರುತ್ತಾರೆ. uಛಿ ZಜZಜ್ಞಿ, ನಾನು, ಅಂದ್ರೆ ಸುಮ್ನೇನಾ ಎಂಬ ಅಹಮಿಕೆಯೇ ಅವರ ಕೆಲಸ ಕೆಡಿಸಿರುತ್ತದೆ.
ಅದು ಪತ್ರವಿರಬಹುದು, ನೋಟ್ಸ್ ಇರಬಹುದು, ಅರ್ಜಿ ಇರ ಬಹುದು… ಅದರಲ್ಲೂ ಕೆಲವೇ ಶಬ್ದಗಳಲ್ಲಿ ಮಾತು ಮುಗಿಸಿ ಕಡೆಗೆ ಸಹಿ ಮಾಡುವುದನ್ಣೇ ಮರೆಯುವ ಭೂಪತಿಗಳೂ ಇರುತ್ತಾರೆ. ಅನು ಮಾನವೇ ಬೇಡ; ಅವರೆಲ್ಲ ಸೋಮಾರಿ ಸುಬ್ಬಣ್ಣರೇ ಆಗಿರುತ್ತಾರೆ!
* * * *
ಒಂದು ಸರಳ ಸತ್ಯ ಏನೆಂದರೆ, ಕೈ ಇಲ್ಲದವರಿಗೂ ಭವಿಷ್ಯವಿರುತ್ತದೆ. ಹಾಗಾಗಿ, ಬರೆಯಲು ಬಾರದವರಿಗೆ ಭವಿಷ್ಯ ಇಲ್ಲವೆ ಎಂಬ ಕೊಂಕು ಪ್ರಶ್ನೆ ಬೇಡ. ಪರಿಚಿತರ, ಗೆಳೆಯ/ಗೆಳತಿಯರ, ಬಂಧುಗಳ ಹಳೆಯ ಪತ್ರವೋ, ಬರಹದ ಸ್ಯಾಂಪಲ್ಲೋ ಜತೆಗಿದ್ದರೆ ಅದನ್ನು ಅಂಗೈಲಿ ಹಿಡಿದುಕೊಂಡೇ ಲೇಖನ ಓದಿ. ಆಗ, ‘ಎದುರಿಗಿಲ್ಲದವರ ನಡವಳಿಕೆಯ’ ದಿವ್ಯ ದರ್ಶನವಾಗಿ- ‘ಅರೆ ಹೌದಲ್ವಾ?’ ಅನಿಸಬಹುದು, ಏನೂ ಅನ್ನಿಸದೆಯೂ ಇರಬಹುದು!

ಇರುವುದೆಲ್ಲವ ಬಿಟ್ಟು ಇರದುದೆಡೆಗೆ ತುಡಿವುದೇ ಜೀವನ…

ಆಗಷ್ಟ್ 3, 2009

ಮನುಷ್ಯ ಅನ್ನಿಸಿಕೊಂಡ ಮೇಲೆ ಎಲ್ಲರೂ ಒಂದೇ ರೀತಿ ಇರಲು, ಬದುಕಲು ಸಾಧ್ಯವಿಲ್ಲ. ಐದು ಬೆರಳು ಯಾವತ್ತೂ ಒಂದೇ ಸಮನಾಗಿರುವುದಿಲ್ಲ. ಯಾವುದೇ ವ್ಯಕ್ತಿಗೆ ಬಯಸಿದ್ದೆಲ್ಲ ಸಿಗುವುದು ಸಾಧ್ಯವೂ ಇಲ್ಲ ಎಂಬ ಸಂಗತಿ ಎಲ್ಲರಿಗೂ ಗೊತ್ತಿರುತ್ತದೆ. ಹಾಗಿದ್ದರೂ ಕೈಗೆ ಎಟುಕದ ದ್ರಾಕ್ಷಿಗೇ ಎಲ್ಲರೂ ಆಸೆ ಪಡುತ್ತಾರೆ.

* ಪ್ರಕಾಶ, ಒಂದು ಖಾಸಗಿ ಕಂಪನಿಯಲ್ಲಿ ಸೆಕ್ಷನ್ ಇನ್‌ಚಾರ್ಜ್. ಅವನ ಕೈ ಕೆಳಗೆ ಆರು ಮಂದಿ ಕೆಲಸ ಮಾಡುತ್ತಾರೆ. ಆ ಕಂಪನಿಯಲ್ಲಿ ಸಂಬಳ ಜೋರಾಗಿದೆ. ಪಿ.ಎಫ್., ಬೋನಸ್, ರಜೆ ಸೇರಿದಂತೆ ಇತರೆ ಅನುಕೂಲಗಳೂ ಚೆನ್ನಾಗಿವೆ. ಈಗಾಗಲೇ ಪ್ರಕಾಶ ಭರ್ತಿ ಏಳು ಲಕ್ಷಕ್ಕೆ ಒಂದು ಮನೆಯನ್ನು ಲೀಸ್‌ಗೆ ಪಡೆದಿದ್ದಾನೆ. ಮೈಸೂರಿಗೆ ಸಮೀಪದಲ್ಲಿ ಒಂದು ಸೈಟನ್ನೂ ಖರೀದಿಸಿದ್ದಾನೆ. ಕೆನರಾಬ್ಯಾಂಕ್‌ನಿಂದ ಪಡೆದ ಎಂಟುಲಕ್ಷ ರೂಪಾಯಿಗಳ ಸಾಲವಿದೆ ಅನ್ನೋದು ಬಿಟ್ಟರೆ, ಅವನದು ಹೊರೆಯೇ ಇಲ್ಲದ ಸಂತೃಪ್ತ ಬದುಕು. ಇಚ್ಛೆಯನ್ನರಿತು ಬದುಕುವ ಹೆಂಡತಿ ಇದ್ದಾಳೆ. ಹತ್ತು ಮಂದಿಗೆ ಇಷ್ಟವಾಗುವಂಥ ಮಕ್ಕಳಿವೆ. ಸಮಾಜದಲ್ಲಿ, ಪ್ರಕಾಶನಿಗೆ ಒಂದು ಸ್ಥಾನಮಾನವೂ ಇದೆ…ಆದರೂ, ಪ್ರಕಾಶನಿಗೆ ನೆಮ್ಮದಿಯಿಲ್ಲ. ಅವನ ಜತೆಗೇ ಓದಿಕೊಂಡ ಒಂದಿಬ್ಬರು ತಹಶೀಲ್ದಾರ್ ಹುದ್ದೆಯಲ್ಲಿದ್ದಾರೆ. ಇನ್ನೊಂದಿಬ್ಬರು ಅಮೆರಿಕಾದಲ್ಲಿದ್ದಾರೆ. ಅವರ ಬಳಿ ಕಾರುಗಳಿವೆ. ಆಗಲೇ ಸ್ವಂತ ಮನೆಗಳನ್ನು ಕಟ್ಟಿಸಿಕೊಂಡಿದ್ದಾರೆ. ಇದನ್ನೆಲ್ಲ ಸುಮ್ಮನೇ ನೆನಪಿಸಿಕೊಂಡರೂ ಸಾಕು; ಪ್ರಕಾಶ ಖಿನ್ನನಾಗುತ್ತಾನೆ. ಜತೆಗೇ ಆಡಿದವರು, ಜತೆಗೇ ಓದಿದವರು, ಜತೆಗೇ ಬೆಳೆದವರು ಈಗ ಹೇಗಿದ್ದಾರಲ್ಲ ಎಂಬ ಒಂದೇ ಒಂದು ಯೋಚನೆ ಅವನನ್ನು ಹಣ್ಣಾಗಿಸುತ್ತದೆ. ಆಗಲೇ, ನಾನೂ ಅವರಂತೆಯೇ ಇದ್ದಿದ್ದರೆ… ಎಂದು ಯೋಚಿಸಿ ನಿಟ್ಟುಸಿರಾಗುತ್ತಾನೆ.

* ಗೌರಿಯ ಗಂಡ ಬಿಜಿನೆಸ್‌ಮನ್. ಹೊರಗೆ ಸ್ವಲ್ಪ ಜೋರಾಗಿದ್ದಾನೆ. ಮಾತೂ ಸ್ವಲ್ಪ ಒರಟೇ. ಆದರೆ, ಮನೆಯೊಳಗೆ ಮಾತ್ರ-ಅಮ್ಮಾವ್ರ ಗಂಡ. ಪ್ರತಿ ತಿಂಗಳ ಆದಾಯವನ್ನೂ ತಪ್ಪದೇ ಗೌರಿಗೆ ಒಪ್ಪಿಸುತ್ತಾನೆ. ಹೇಳಿ ಕೇಳಿ ಬಿಜಿನೆಸ್‌ಮನ್ ನೋಡಿ; ಹಾಗಾಗಿ ಒಂದಿಷ್ಟು ಕೈಬಿಗಿ ಹಿಡಿದು ಖರ್ಚು ಮಾಡುತ್ತಾನೆ. ಈ ಕಾರಣಕ್ಕೇ ಗೌರಿಗೆ ಗಂಡನೆಂದರೆ ಅಸಮಾಧಾನ, ಸಿಡಿಮಿಡಿ, ತಾತ್ಸಾರ. ‘ಪಕ್ಕದ್ಮನೆ ಪಂಕಜಾಳ ಗಂಡನ್ನ ನೋಡಿ ಕಲಿತುಕೊಳ್ರೀ- ಮೊನ್ನೆ ಅವಳು ಹಾಗೇ ಸುಮ್ಮನೆ ಮಾತಾಡುತ್ತಾ, ‘ಸೀರೆ ತಗೋಬೇಕಿತ್ತು’ ಅಂದಳಂತೆ. ಅಷ್ಟಕ್ಕೇ ಅವನು ಮರುಮಾತಾಡದೆ, ಆರು ಸಾವಿರ ರೂ. ತೆಗೆದು ಟೇಬಲ್ ಮೇಲಿಟ್ಟು ಹೋದನಂತೆ. ನೀವೂ ಇದೀರ ದಂಡಕ್ಕೆ! ಆರು ಸಾವಿರ ಕೇಳಿದ್ರೆ ಎರಡು ಸಾವಿರ ಕೊಟ್ಟು ಹೋಗಿಬಿಡ್ತೀರ’ ಎಂದೆಲ್ಲ ಅವಳು ಅವಾಗವಾಗ ಜೋರು ಮಾಡುತ್ತಾಳೆ. ಚುಚ್ಚಿ ಮಾತಾಡುತ್ತಾಳೆ. ಸ್ವಾರಸ್ಯವೆಂದರೆ, ಗೌರಿಯ ಬಳಿ ಕಡಿಮೆಯೆಂದರೂ ನಲವತ್ತೆಂಟು ಭರ್ಜರಿ ಸೀರೆಗಳಿವೆ. ಅವುಗಳನ್ನೆಲ್ಲ ಉಟ್ಟುಕೊಂಡು ಮೆರೆವ ಆಸೆ ಅವಳಿಗೆ ಖಂಡಿತ ಇಲ್ಲ. ಆದರೆ, ಸಂಸಾರದ ವಿಷಯಕ್ಕೆ ಬಂದಾಗ, ಅವಳಿಗೆ ಗಂಡನಲ್ಲಿ ಏನೋ ಕೊರತೆ ಕಾಣಿಸುತ್ತಿದೆ. ನನ್ನ ಗಂಡನೂ ಪಕ್ಕದ್ಮನೆಯವಳ ಗಂಡನ ಥರಾನೇ ಇರಬಾರದಿತ್ತೆ ಅನಿಸುತ್ತದೆ…
* ಅದು ದುಬಾರಿ ಡೊನೇಷನ್ ಪಡೆವ ಸ್ಕೂಲು. ಅಲ್ಲಿ ಮಕ್ಕಳು ಮಾತ್ರವಲ್ಲ, ಅವರ ತಂದೆ-ತಾಯಿಗೂ ಸಂದರ್ಶನವಿದೆ. ಪಾಸು ಆದರೆ ಮಾತ್ರ ಸೀಟು. ತಿಂಗಳು ತಿಂಗಳಿಗೂ ಶುಲ್ಕದ ಹೆಸರಿನಲ್ಲಿ ಐದೂವರೆ ಸಾವಿರ ಕೊಡಬೇಕು. ಒಂದು ಸಂತೋಷವೆಂದರೆ, ಆ ಶಾಲೆಯಲ್ಲಿ ಆಟ, ಪಾಠ, ಶಿಸ್ತು… ಎಲ್ಲವನ್ನೂ ತುಂಬ ಚೆನ್ನಾಗಿ ಕಲಿಸುತ್ತಾರೆ. ಈ ಶಾಲೆಯಲ್ಲಿ ಆರನೇ ತರಗತಿಯಲ್ಲಿದ್ದಾಳೆ ಪ್ರಿಯಾಂಕ. ತಮ್ಮ ಶಾಲೆಯಿಂದ ಅರ್ಧ ಕಿಲೋಮೀಟರು ದೂರವಿರುವ ಇನ್ನೊಂದು ಶಾಲೆಯ ಮೇಲೆ ಅವಳಿಗೆ ಮೋಹ. ಅದನ್ನೇ ಮುಂದಿಟ್ಟುಕೊಂಡು ಅಪ್ಪನ ಬಳಿ ಹೇಳುತ್ತಾಳೆ: ‘ನೋಡಿ ಪಪ್ಪಾ, ನಂಗೆ ಈ ಸ್ಕೂಲು ಇಷ್ಟವಾಗೊಲ್ಲ. ‘ಆ’ ಸ್ಕೂಲಿನಲ್ಲಿ ಹೋಂವರ್ಕೇ ಕೊಡಲ್ಲ, ಗೊತ್ತಾ? ಆದ್ರೂ ಅಲ್ಲಿ ಓದುವವರಿಗೆ ‘ಎ’ ಗ್ರೇಡ್ ಕೊಡ್ತಿದಾರೆ. ಮುಂದಿನ ವರ್ಷ ನನ್ನನ್ನು ಅಲ್ಲಿಗೇ ಸೇರಿಸಿ…

* ಸಾವಿತ್ರಮ್ಮನವರಿಗೆ ಸೊಸೆಯ ಮೇಲೆ ಮೊದಲಿಂದಲೂ ಸಿಡಿಮಿಡಿ. ಅವಳು ಕೂತರೂ ತಪ್ಪು, ನಿಂತರೂ ತಪ್ಪು. ಯಾವಾಗಲೂ ಗಂಡನಿಗೆ ಅಂಟಿಕೊಂಡೇ ಇರುತ್ತಾಳೆ ಎಂಬುದು ಅವರ ದೂರು. ಹೀಗೆ ದೂರುವಾಗಲೇ ಅವರು ಇನ್ಯಾವುದೋ ಉದಾಹರಣೆ ಹೇಳುತ್ತಾರೆ. ಯಾರೋ ಹುಡುಗಿಯ ಹೆಸರು ಹೇಳಿ- ‘ಅಂಥವಳನ್ನು ಸೊಸೆಯಾಗಿ ಪಡೆಯಲು ಪುಣ್ಯ ಮಾಡಿರಬೇಕು…’ ಎನ್ನುತ್ತಾರೆ. ಈ ಮಾತಿನ ಹಿಂದೆ, ಆ ಹುಡುಗಿಗೆ ವರದಕ್ಷಿಣೆಯ ರೂಪದಲ್ಲಿ ನೀಡಿದ ಎರಡು ಲಕ್ಷ ನಗದು, ಒಂದು ಸೈಟು, ಐದು ತೊಲೆ ಬಂಗಾರ… ಎಲ್ಲವೂ ಸೇರಿರುತ್ತದೆ. ಹಾಗೆ, ವರದಕ್ಷಿಣೆಯೊಂದಿಗೆ ಬಂದ ಹುಡುಗಿ ಅತ್ತೆ ಮನೆಯಲ್ಲಿ ಎಲ್ಲರ ಮೇಲೂ ಸವಾರಿ ಮಾಡುತ್ತಿದ್ದಾಳೆ ಎಂಬ ಸರಳ ಸತ್ಯವನ್ನು ಸಾವಿತ್ರಮ್ಮ ಮಾತಿನ ಮಧ್ಯೆ ಮರೆತೇ ಬಿಡುತ್ತಾರೆ. ಅದೇ ಸಂದರ್ಭದಲ್ಲಿ, ಸೊಸೆ ತುಂಬ ಪ್ರೀತಿಯಿಂದ ಮಾಡುವ ಉಪಚಾರವನ್ನೂ ತಪ್ಪಾಗಿ ಅರ್ಥಮಾಡಿಕೊಳ್ಳುತ್ತಾರೆ. ಅವರ ಮನಸ್ಸು ಇರುವುದನ್ನು ಬಿಟ್ಟು ಇಲ್ಲದ್ದರ ಕುರಿತೇ ಯೋಚಿಸುತ್ತಿರುತ್ತದೆ.

* ಹರೀಶ ಕೆಲಸಕ್ಕೆ ಸೇರಿ ಈಗಿನ್ನೂ ಆರು ತಿಂಗಳಾಗಿದೆ. ಅವನಿಗೆ ಭರ್ತಿ ಹದಿನೆಂಟು ಸಾವಿರ ಸಂಬಳವಿದೆ. ಅವನದೇ ಕೆಲಸ ಮಾಡುವ, ನಾಲ್ಕು ವರ್ಷ ಸೀನಿಯಾರಿಟಿ ಹೊಂದಿರುವ ಸಹೋದ್ಯೋಗಿಗೆ ಇಪ್ಪತ್ತೆರಡು ಸಾವಿರವಿದೆ. ಕೆಲಸ ಮಾತ್ರವಲ್ಲ, ಜವಾಬ್ದಾರಿ ಕೂಡ ಜಾಸ್ತಿ ಇದೆ. ಆದರೆ ಹರೀಶನಿಗೆ ಇದೇನೂ ಕಾಣಿಸುತ್ತಿಲ್ಲ. ನನಗಿಂತ ಅವನಿಗೆ ನಾಲ್ಕು ಸಾವಿರ ರೂ. ಜಾಸ್ತಿ ಸಂಬಳ ಎಂಬುದಷ್ಟೇ ಕಾಣುತ್ತದೆ. ಅದನ್ನೇ ಗೆಳೆಯರೊಂದಿಗೆ ಹೀಗೆ ಹೇಳಿಕೊಳ್ಳುತ್ತಾನೆ: ‘ಆ ನನ್ಮಗ ಏನು ಅಂತ ನಂಗೆ ಗೊತ್ತಿಲ್ವಾ? ಅವನಿಗೆ ಕೆಲಸವೇ ಗೊತ್ತಿಲ್ಲ. ಆದರೆ ಅವ್ನು ದಿನಾಲೂ ಬಾಸ್‌ಗೆ ಬಕೆಟ್ ಹಿಡೀತಾನೆ. ಹಾಗಾಗಿ ಸಂಬಳ ಜಾಸ್ತಿ ಇದೆ…’
ತಾನು ಹೇಳುತ್ತಿರುವ ಮಾತು ಅರ್ಧ ಸತ್ಯ, ಅರ್ಧ ಸುಳ್ಳು ಎಂದು ಹರೀಶನಿಗೇ ಚೆನ್ನಾಗಿ ಗೊತ್ತಿರುತ್ತದೆ. ಈಗ ಸಿಗುತ್ತಿರುವ ಸಂಬಳದಲ್ಲಿ ಮಹರಾಜನಂತೆ ಬದುಕುತ್ತಿರುವುದರ ಅರಿವೂ ಅವನಿಗಿರುತ್ತದೆ. ಆದರೂ ಕೈಗೆ ಸಿಗದ ಕನಸಿನ ಬೆನ್ನೇರಿಯೇ ಅವನು ಯೋಚಿಸುತ್ತಿರುತ್ತಾನೆ!

* ಹೆಂಡತಿ ಸ್ವಲ್ಪ ಫ್ಯಾಷನಬಲ್ ಆಗಿಲ್ಲ ಎನ್ನುವುದು ಮೈಕೇಲ್‌ನ ಚಿಂತೆಗೆ ಕಾರಣ. ಅವಳು ತೆಳ್ಳಗಿದ್ದಾಳೆ. ಬೆಳ್ಳಗೂ ಇದ್ದಾಳೆ. ಸೈಡ್ ಆಂಗಲ್‌ನಿಂದ ನೋಡಿದರೆ, ಒಂದಿಬ್ಬರು ಚಿತ್ರ ನಟಿಯರ ಹಾಗೂ ಕಾಣುತ್ತಾಳೆ ನಿಜ. ಆದರೆ, ಅವಳಿಗೆ ಹಸಿ ಬಿಸಿ ಪ್ರೀತಿಯಲ್ಲಿ ಆಸಕ್ತಿಯಿಲ್ಲ. ಬೆಳಗ್ಗೆ ಎದ್ದವಳೇ ಗಂಡನಿಗೆ ಕಾಫಿ ಮಾಡಿಕೊಟ್ಟು ಅಡುಗೆ ಮನೆ ಸೇರಿ ಬಿಡುತ್ತಾಳೆ. ನಂತರ, ಪಾತ್ರೆ ತೊಳೆಯುವುದು, ಕಸ ಗುಡಿಸುವುದು, ಪೂಜೆ, ತಿಂಡಿ, ಆಪ್ತರಿಗೆ ಫೋನ್ ಮಾಡುವುದು… ಇದರಲ್ಲೇ ಸಮಯ ಕಳೆದು ಹೋಗುತ್ತದೆ. ಮಧ್ಯೆ ಈ ಮೈಕೇಲ್ ಸರಸವಾಡಲು ಬರುತ್ತಾನೆ ನಿಜ. ಇವಳೋ ಅವನನ್ನು ಹತ್ತಿರಕ್ಕೂ ಸೇರಿಸುವುದಿಲ್ಲ. ಹೋಗಲಿ, ರಾತ್ರಿಯಾದರೂ ಅವನ ರಸಿಕತೆಗೆ, ಸರಸಕ್ಕೆ ಹೆಚ್ಚಿನ ಅವಕಾಶವಿದೆಯಾ ಅಂದರೆ ಅದೂ ಇಲ್ಲ.
‘ಆಗೆಲ್ಲ ಅಯ್ಯೋ ಏನ್ರೀ ಇದು ಅಸಹ್ಯಾ, ನಂಗೆ ಒಂಚೂರೂ ಇಷ್ಟವಾಗಿಲ್ಲಪ್ಪಾ’ ಅಂದೇಬಿಡುತ್ತಾಳೆ ಮಹರಾಯರೆ, ಅವಳು ಹಾಗೆ ಹೇಳಿದಾಗೆಲ್ಲ ಮೈಕೇಲ್‌ಗೆ ಪಕ್ಕದ್ಮನೆಯ ವಯ್ಯಾರಿ ನೆನಪಿಗೆ ಬರುತ್ತಾಳೆ. ಒಂದೆರಡು ಸಂದರ್ಭದಲ್ಲಿ ಅವಳ ಹೊಕ್ಕಳು ಕಾಣುವಂತೆ ಸೀರೆಯುಟ್ಟು ಸಂಜೆ ವಾಕಿಂಗ್ ಹೋದದ್ದನ್ನು; ಸ್ವಲ್ಪ ಬೋಲ್ಡ್ ಆಗಿ ಮಾತಾಡುವುದನ್ನು ಮೈಕೇಲನೇ ಪ್ರತ್ಯಕ್ಷ ಕಂಡಿದ್ದಾನೆ. ಈ ಕಾರಣದಿಂದಲೇ ಅಂಥ ಹೆಂಡತಿ ಸಿಗಬಾರದಿತ್ತೆ ಎಂದು ಯೋಚಿಸುತ್ತಾನೆ. ಹೆಂಗಸರು, ಅದರಲ್ಲೂ ಗೃಹಿಣಿ ಅನ್ನಿಸಿಕೊಂಡವರು ಹಾಗೆಲ್ಲ ಬೋಲ್ಡ್ ಆಗಿ ವರ್ತಿಸಿದರೆ ಅದರಿಂದ ಒಳ್ಳೆಯದಕ್ಕಿಂತ ಕೆಟ್ಟದ್ದೇ ಜಾಸ್ತಿ ಎಂಬುದು ಅವನಿಗೆ ಗೊತ್ತಿಲ್ಲದ ಸಂಗತಿಯಲ್ಲ. ಆದರೂ, ಇಲ್ಲದ್ದರ ಕಡೆಗೇ ಅವನ ಧ್ಯಾನ…

ಈವರೆಗೂ ಹೇಳಿದ ಉದಾಹರಣೆಗಳೆಲ್ಲ ದಿನನಿತ್ಯದ ಬದುಕಿನಲ್ಲಿ ನಾವೆಲ್ಲರೂ ಕಾಣುತ್ತಲೇ ಇರುವಂಥವು. ಇರುವುದನ್ನು ಬಿಟ್ಟು ಇಲ್ಲದ್ದರ ಕುರಿತೇ ಯೋಚಿಸುವ ಜನರ ಬಗ್ಗೆ ದಿನವಿಡೀ ಉದಾಹರಣೆಗಳನ್ನೂ ನೀಡಬಹುದು. ಅದು ಹೀಗೆ: ಒಂದಿಬ್ಬರು ಆಸಾಮಿಗಳು ಅಂದುಕೊಳ್ಳಿ. ದಿನವೂ ಹತ್ತಿರದ ಪೇಟೆಗೋ; ಮಾರ್ಕೆಟ್ಟಿಗೋ ಹೋಗಿ ಬರುವುದು ಅವರ ದಿನಚರಿ. ಆಟೊಗೆ ಕೊಡುವಷ್ಟು ಕಾಸಿರುವುದಿಲ್ಲವಲ್ಲ? ಹಾಗಾಗಿ ಬಸ್ಸಿಗೇ ಹೋಗಬೇಕು. ಇವರು ಬರುವ ವೇಳೆಗೆ ಬಸ್ ಹೊರಟಿರುತ್ತದೆ. ಹೇಗೋ ಓಡೋಡಿ ಬಂದು ಬಸ್ ಹತ್ತುತ್ತಾರೆ. ನಂತರ ‘ಸದ್ಯ, ಬಸ್ ಸಿಕ್ತು’ ಎಂದು ಖುಷಿ ಪಡುವುದಿಲ್ಲ. ಬದಲಿಗೆ, ‘ಏನ್ ರಶ್ಶುರೀ’ ಎಂದು ರಾಗ ಎಳೆಯುತ್ತಾರೆ. ಆಗಲೇ ಇವರಿಗೆ ‘ಸೀಟಿಲ್ಲವಲ್ಲ’ ಎಂಬ ಚಿಂತೆ ಶುರುವಾಗುತ್ತೆ. ಒಂದೆರಡು ಸ್ಟಾಪ್‌ನ ನಂತರ ಸೀಟೂ ಸಿಗುತ್ತೆ. ಈ ಪುಣ್ಯಾತ್ಮರು ಆಗಲಾದರೂ ಸುಮ್ಮನಾಗೊಲ್ಲ. ‘ಛೆ, ಕಿಟಕಿ ಪಕ್ಕ ಸೀಟು ಸಿಗಲಿಲ್ಲವಲ್ಲ…’ ಎಂದು ಚಡಪಡಿಸಲು ಶುರು ಮಾಡುತ್ತಾರೆ!

‘ಇನ್ನು ಕಾಲೇಜಿಗೆ ಹೋಗುವ ಮಕ್ಕಳು ಅಪ್ಪ/ಅಮ್ಮನಿಗೆ ಛೇಡಿಸುತ್ತಾರಲ್ಲ? ಅದನ್ನು ಹೇಳದಿರುವುದೇ ಮೇಲು. ಮಕ್ಕಳು ಕಾಲೇಜಿಗೆ ಹೋಗುತ್ತಾರೆ ಎಂದು ಗೊತ್ತಾದ ತಕ್ಷಣ ಅಪ್ಪ/ಅಮ್ಮ ತಾವು ಕೊಡಿಸಿಟ್ಟಿದ್ದ ಹಣವನ್ನೆಲ್ಲ ಹೊಂದಿಸಿ ಮೊಬೈಲು ತೆಗೆದುಕೊಡ್ತಾರೆ. ಮೊಬೈಕು ಕೊಡಿಸಲು ಪ್ರಯತ್ನಿಸುತ್ತಾರೆ. ಅವರ ಸಂಕಟ ಮಕ್ಕಳಿಗೆ ಆರ್ಥವಾಗದ್ದೇನೂ ಅಲ್ಲ. ಆದರೂ, ಮೊಬೈಲ್‌ಗೆ ಕ್ಯಾಮರಾ ಇಲ್ಲ ಎಂಬ ನೆಪ; ಮೊಬೈಕು ಸೆಕೆಂಡ್ ಹ್ಯಾಂಡು ಎಂಬ ನೆಪಗಳನ್ನು ಮುಂದೆ ಮಾಡಿ ಕ್ಯಾತೆ ತೆಗೆಯುತ್ತಾರೆ. ಈ ಮೊಬೈಲು/ಮೊಬೈಕು ಖರೀದಿಸಲು ಅಪ್ಪ/ಅಮ್ಮನಿಗೆ ಅದೆಷ್ಟು ಕಷ್ಟವಾಗಿರಬಹುದು, ಹಣ ಸಾಕಾಗದೆ ಹೋದಾಗ ಅವರು ಗೆಳೆಯ/ಗೆಳತಿ; ಸಂಬಂಕರ ಮುಂದೆ ದೈನೇಸಿಯಂತೆ ನಿಂತು ಹೇಗೆ ಪ್ರಾರ್ಥಿಸಿರಬಹುದು? ಅವರು- ‘ನಮ್ಮಲ್ಲಿ ಹಣವಿಲ್ಲ’ ಎಂದು ನಿಷ್ಠುರವಾಗಿ ಹೇಳಿದ ಸಂದರ್ಭದಲ್ಲಿ ಅವಮಾನದಿಂದ ಹೇಗೆ ಕುಗ್ಗಿ ಹೋಗಿರಬಹುದು ಎಂದು- ಉಹುಂ, ಯಾವ ಮಕ್ಕಳೂ ಯೋಚಿಸುವುದಿಲ್ಲ. ಒಂದು ಸ್ವಾರಸ್ಯವೆಂದರೆ, ಹೀಗೆಲ್ಲ ಮಕ್ಕಳ ಪೋಷಕರಿಗೇ ದಬಾಯಿಸಿ ಮಾತಾಡಲು- ಮೊಬೈಲು/ಮೊಬೈಕು ಚೆನ್ನಾಗಿಲ್ಲ ಎಂಬುದಕ್ಕಿಂತ, ನನ್ನಲ್ಲಿ ಇಲ್ಲದ್ದು ಸಹಪಾಠಿಗಳ ಬಳಿ ಇದೆ ಎಂಬ ಹೊಟ್ಟೆಕಿಚ್ಚೇ ಕಾರಣವಾಗಿರುತ್ತದೆ ಎಂಬುದು ಸುಳ್ಳಲ್ಲ.
****
ಯಾಕೆ ಹೀಗಾಗುತ್ತದೆ? ಇರುವುದೆಲ್ಲವನ್ನೂ ಬಿಟ್ಟು ಇಲ್ಲದ್ದಕ್ಕೆ ಈ ಹಾಳು ಮನಸೇಕೆ ಮನಸ್ಸು ಆಸೆಪಡುತ್ತದೆ ಎಂಬ ಪ್ರಶ್ನೆಗೆ ‘ಇದಮಿತ್ಥಂ’ ಎಂಬಂಥ ಉತ್ತರವಿಲ್ಲ. ಆದರೆ, ಅಂಥದೊಂದು ತಹತಹಕ್ಕೆ ಆಸೆಯೇ (ದುರಾಸೆಯೇ) ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ಏಕೆಂದರೆ, ಮನುಷ್ಯ ಅನ್ನಿಸಿಕೊಂಡ ಮೇಲೆ ಎಲ್ಲರೂ ಒಂದೇ ರೀತಿ ಇರಲು, ಬದುಕಲು ಸಾಧ್ಯವಿಲ್ಲ. ಐದು ಬೆರಳು ಯಾವತ್ತೂ ಒಂದೇ ಸಮನಾಗಿರುವುದಿಲ್ಲ. ಯಾವುದೇ ವ್ಯಕ್ತಿಗೆ ಬಯಸಿದ್ದೆಲ್ಲ ಸಿಗುವುದು ಸಾಧ್ಯವೂ ಇಲ್ಲ ಎಂಬ ಸಂಗತಿ ಎಲ್ಲರಿಗೂ ಗೊತ್ತಿರುತ್ತದೆ. ಹಾಗಿದ್ದರೂ ಕೈಗೆ ಎಟುಕದ ದ್ರಾಕ್ಷಿಗೇ ಎಲ್ಲರೂ ಆಸೆ ಪಡುತ್ತಾರೆ. ಹೀಗೆ ಆಸೆ ಪಡುವ ಸಂದರ್ಭದಲ್ಲಿ ಚಿಕ್ಕಂದಿನಲ್ಲಿ ಬಾಯಿಪಾಠ ಮಾಡಿಕೊಂಡಿದ್ದ ‘ಪಾಲಿಗೆ ಬಂದದ್ದು ಪಂಚಾಮೃತ’, ‘ಕೈಗೆಟುಕದ ದ್ರಾಕ್ಷಿ ಯಾವತ್ತೂ ಹುಳಿ’ ಎಂಬಂಥ ಮಾತುಗಳು ಮರೆತೇ ಹೋಗಿರುತ್ತವೆ.
ಪರಿಣಾಮವಾಗಿಯೇ, ಎಲ್ಲರೂ ‘ಆಸೆ’ಯೆಂಬ ಮೋಹಿನಿಯ ಹಿಂದೆ ಬೀಳುತ್ತಾರೆ. ಈ ಭೂಮಿ ಮೇಲೆ ಯಾರೂ ಶಾಶ್ವತವಲ್ಲ ಎಂದು ವೇದಾಂತ ಹೇಳುವವನೇ ಒಮ್ಮೆ ತನ್ನ ಬೋಳು ನೆತ್ತಿಯನ್ನು ಸವರಿಕೊಂಡು ಎದುರಿಗೆ ಕೂತವನ ಹಿಪ್ಪೆ ಕೂದಲಿನ ತಲೆಯನ ಹಿಪ್ಪೆ ಕೂದಲಿನ ತಲೆಯನ್ನೇ ಆಸೆಯಿಂದ ನೋಡುತ್ತಾನೆ. ಅವನಿಗಿರುವಂಥ ಜೊಂಪೆ ಜೊಂಪೆ ಕೂದಲು ನನಗೂ ಇದ್ದಿದ್ದರೆ ಚೆನ್ನಾಗಿತ್ತು ಎಂಬ ಯೋಚನೆಯೇ ಅವನನ್ನು ಆವರಿಸಿಕೊಂಡಿರುತ್ತದೆ. ತನ್ನ ಮಾತಿಗೆ ಪರವಶರಾಗುವ ಸಾವಿರಾರು ಜನ, ಈ ಮಾತುಗಾರಿಕೆಯಿಂದಲೇ ಸಮಾಜದಲ್ಲಿ ಸಿಕ್ಕಿರುವ ಸ್ಥಾನಮಾನ, ಎಲ್ಲವನ್ನೂ ಆತ ಮರೆತುಬಿಡುತ್ತಾನೆ. ನೊಂದಿರುವ ಸಾವಿರ ಮಂದಿಗೆ ಸಮಾಧಾನ ಹೇಳುವ ಅವನ ಮನಸ್ಸೂ ಇರದುದರ ಕುರಿತೇ ಚಿಂತಿಸುತ್ತಿರುತ್ತದೆ!
ಅಂದಹಾಗೆ, ಇಲ್ಲದ್ದರ ಬಗ್ಗೆ ಧ್ಯಾನಿಸುವವರ ವಿವರ ಇಷ್ಟಕ್ಕೇ ನಿಲ್ಲುವುದಿಲ್ಲ. ಮೈತುಂಬ ಒಡವೆ ಹೇರಿಕೊಂಡಿದ್ದರೂ- ನಿಮ್ಮ ಆಫೀಸಿನಲ್ಲಿ ಯಾರೋ ಅಪರಿಚಿತರಿಗೆ ದಾನ ಮಾಡೋಕೆ ಹಣವಿರುತ್ತೆ. ನಾನು ಒಂದು ಒಡವೆ ಕೇಳಿದ್ರೆ ದುಡ್ಡಿಲ್ಲ ಅಂತೀರಲ್ರಿ? ಎಂದು ರೇಗುವ ಹೆಂಡತಿ; ಮಾವನ ಕೃಪೆಯಿಂದಳೇ ನೌಕರಿ ಪಡೆದೂ- ‘ನಿಮ್ಮಪ್ಪ ಒಂದು ಸೈಟು ಕೊಡಲಿಲ್ವಲ್ಲೇ’ ಎಂದು ಹೆಂಡತಿಗೆ ಕಿಚಾಯಿಸುವ ಗಂಡ; ಹುಡುಗ ಹಳ್ಳಿಯಲ್ಲಿದ್ದಾನೆ ಎಂಬ ಕಾರಣದಿಂದಲೇ ಮದುವೆಗೆ ಒಪ್ಪದೆ, ಬೆಂಗಳೂರಿನ ಗಂಡೇ ಬೇಕು ಎಂದು ಹಟ ಹಿಡಿಯುವ ಹುಡುಗಿ; ಯಾವುದೋ ಗಾಳಿಮಾತು ಕೇಳಿ, ಅದನ್ನೇ ನಿಜವೆಂದು ಭಾವಿಸಿ- ಛೆ, ನಾನು ಅಂಥ ಕಡೆ ಕೆಲಸ ಮಾಡಬೇಕಿತ್ತು…’ ಎಂದು ಮೇಲಿಂದ ಮೇಲೆ ಹೇಳಿಕೊಂಡು ನರಳುವ ನಾವು-ನೀವು ಅವರು-ಇವರು… ಸದಾ ಇರದುದರ ಕಡೆಗೇ ಯೋಚಿಸುವವರೇ.
**
ಅಂದ ಹಾಗೆ, ಇಷ್ಟೆಲ್ಲ ಬರೆದ ಮೇಲೆ, ಇಡೀ ಲೇಖನವನ್ನು ಇನ್ನೂ ಚೆನ್ನಾಗಿ ಬರೆಯಬಹುದಿತ್ತು ಎಂದು ನನಗೂ ಅನ್ನಿಸಿದೆ. ಕುತೂಹಲದಿಂದ (?) ಓದುತ್ತ ಕಡೆಯ ಸಾಲಿಗೆ ಬಂದಾಗ- ಈ ವಿಷಯದ ಬಗ್ಗೆ ಇನ್ನೂ ಚೆನ್ನಾಗಿ ಬರೀಬೇಕಿತ್ತು ಎಂಬ ಭಾವ ಓದುಗರನ್ನೂ ಕಾಡುತ್ತಿರಬಹುದು! ಅದಕ್ಕೇ ಹೇಳಿದ್ದು: ಇರುವುದೆಲ್ಲವ ಬಿಟ್ಟು…

ಕಾಲಿಲ್ಲ ಆದರೂ ನೃತ್ಯ ಕಲಾವಿದೆ!

ಜುಲೈ 25, 2009

ಕೃತಕ ಕಾಲುಗಳಿಂದ ನರ್ತಿಸಿ ನಾಟ್ಯ ರಾಣಿ ಅನ್ನಿಸಿಕೊಂಡ ಸುಧಾ ಚಂದ್ರನ್ ಬಗ್ಗೆ ಕೇಳಿದ್ದೀರಿ. ಅಂಥದೇ ಸಾಧನೆಯ ರಶ್ಮಿ ಔರಸಂಗಳ ಸಾಧನೆಯ ಚರಿತೆ ಇಲ್ಲಿದೆ…

ನಮ್ಮ ಕಥಾನಾಯಕಿಯ ಹೆಸರು ರಶ್ಮಿ ಔರಸಂಗ. ಹತ್ತನೇ ತರಗತಿ ಓದುತ್ತಿರುವ ಈಕೆ ಗುಲ್ಬರ್ಗಾದಿಂದ ಐವತ್ತು ಕಿಲೋಮೀಟರ್ ದೂರವಿರುವ ಸೇಡಂನಲ್ಲಿದ್ದಾಳೆ. ವಿಶೇಷವೇನೆಂದರೆ, ಗುಲಬರ್ಗಾ ಸೀಮೆಯಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ನಡೆದರೂ, ಅಲ್ಲಿ ಈ ಹುಡುಗಿಯ ನೃತ್ಯ ಕಾರ್ಯಕ್ರಮ ಇದ್ದೇ ಇರುತ್ತದೆ. ಈಕೆ ವೇದಿಕೆಗೆ ಬಂದರೆ ಸಾಕು, ಜನ ಮೈಮರೆಯುತ್ತಾರೆ. ಅಪರೂಪದಲ್ಲಿ ಅಪರೂಪದ್ದು ಎಂಬಂಥ ಈ ಬಾಲೆಯ ನೃತ್ಯ ಪ್ರದರ್ಶನ ಕಂಡು ಅಚ್ಚರಿಗೆ ಈಡಾಗುತ್ತಾರೆ. ಸಂಭ್ರಮದಿಂದ ಚಪ್ಪಾಳೆ ಹೊಡೆಯುತ್ತಾರೆ. ಖುಷಿಯಿಂದ ‘ಒನ್ಸ್ ಮೋರ್’ ಕೂಗುತ್ತಾರೆ. ಅದಕ್ಕೆ ಪ್ರತಿಯಾಗಿ ಈ ರಶ್ಮಿ ಮತ್ತೆ ನೃತ್ಯ ಮುಂದುವರಿಸುತ್ತಾಳಲ್ಲ? ಆಗ ಮಾತ್ರ ಒನ್ಸ್ಮೋರ್ ಕೂಗಿದವರೇ ಸಂತೋಷದಿಂದ ಬಿಕ್ಕಳಿಸಲು ಶುರು ಮಾಡಿಬಿಡುತ್ತಾರೆ. ಈ ಹುಡುಗಿಯ ನೃತ್ಯ ಕಂಡು ಹೀಗೆ ಜನ ಭಾವಪರವಶರಾಗಿ ಕಂಬನಿ ಮಿಡಿಯಲು ಕಾರಣವೂ ಇದೆ. ಏನೆಂದರೆ- ಈ ಹುಡುಗಿಗೆ ಸೊಂಟದಿಂದ ಕೆಳಗಿನ ಭಾಗ ಸ್ವಾನದಲ್ಲಿಲ್ಲ! ಇನ್ನೂ ಸ್ವಲ್ಪ ವಿವರವಾಗಿ ಹೇಳಬೇಕೆಂದರೆ- ಒಂದರ್ಥದಲ್ಲಿ ಈಕೆಗೆ ಕಾಲುಗಳಿಲ್ಲ!!

‘ಕಾಲುಗಳೇ ಇಲ್ಲ’ ಎಂಬಂಥ ಸಂಕಟದ ಮಧ್ಯೆಯೇ ಈ ಹುಡುಗಿ- ಗುರುಗಳ ನೆರವಿಲ್ಲದೆಯೇ ನೃತ್ಯ ಕಲಿತಿದ್ದಾಳೆ. ವ್ಹೀಲ್ಚೇರ್ ಮೇಲೆ ಕುಳಿತು ಒಬ್ಬಳೇ ಅಭ್ಯಾಸ ಮಾಡಿದ್ದಾಳೆ. ತನ್ನ ಹಾವ-ಭಾವವನ್ನು ಕನ್ನಡಿಯಲ್ಲಿ ನೋಡಿಕೊಂಡೇ ತಪ್ಪುಗಳನ್ನು ತಿದ್ದಿಕೊಂಡಿದ್ದಾಳೆ. ಇದೇ ಸಂದರ್ಭದಲ್ಲಿ ಓದುವುದರಲ್ಲೂ ವಿಶೇಷ ಮುತುವರ್ಜಿ ತೋರಿ ಅಧ್ಯಾಪಕರಿಂದ besಣ sಣuಜeಟಿಣ ಅನ್ನಿಸಿಕೊಂಡಿದ್ದಾಳೆ. ಆ ಮೂಲಕ ಛಲವೊಂದಿದ್ದರೆ, ಸಾಸಬೇಕು ಎಂಬ ಹುಮ್ಮಸ್ಸು ಜತೆಗಿದ್ದರೆ ಅಂಗವೈಕಲ್ಯವನ್ನು ಖಂಡಿತ ಮೆಟ್ಟಿ ನಿಲ್ಲಬಹುದು ಎಂದು ಸಕಲೆಂಟು ಮಂದಿಗೂ ತೋರಿಸಿಕೊಟ್ಟಿದ್ದಾಳೆ. ತನ್ನ ಸಾಧನೆಯಿಂದ ಸಾವಿರಾರು ಮಂದಿಗೆ ಮಾದರಿಯಾಗಿದ್ದಾಳೆ.

ಈ ವಿವರಣೆಯನ್ನೆಲ್ಲ ಕೇಳಿದವರಿಗೆ- ‘ರಶ್ಮಿ ಯಾವಾಗಿನಿಂದ ಕಾಲುಗಳ ಸ್ವಾನ ಕಳೆದುಕೊಂಡಳು? ಅದಕ್ಕೆ ಚಿಕಿತ್ಸೆ ಕೊಡಿಸಲಿಲ್ಲವಾ? ಅಥವಾ ಚಿಕಿತ್ಸೆ ಫಲಕಾರಿಯಾಗಲಿಲ್ಲವಾ? ಕಾಲುಗಳೇ ಸ್ವಾನದಲ್ಲಿಲ್ಲದ ಸಂದರ್ಭದಲ್ಲಿ ಆಕೆ ಎದುರಿಸಿದ ಸವಾಲುಗಳಾದರೂ ಎಂಥವು? ಕಾಲುಗಳೇ ಇಲ್ಲ ಎಂಬಂಥ ಸಂದರ್ಭದಲ್ಲೂ ಆಕೆಗೆ ನೃತ್ಯ ಕಲಿಯಬೇಕೆಂಬ ಹಟ ಬಂದದ್ದಾದರೂ ಹೇಗೆ? ಅದಕ್ಕೆ ಕಾರಣವಾದ ಸಂದರ್ಭ ಯಾವುದು?’ ಎಂಬಿತ್ಯಾದಿ ಪ್ರಶ್ನೆಗಳು ಕಾಡಬಹುದು. ಅಂಥ ಎಲ್ಲ ಪ್ರಶ್ನೆಗಳಿಗೂ ಇಲ್ಲಿ ಉತ್ತರವಿದೆ. ಹೇಳಿದರೆ, ರಶ್ಮಿಯ ಹೋರಾಟದ ಬದುಕಿನದ್ದೇ ಒಂದು ಚೆಂದದ ಕಥೆ.
***

ರಶ್ಮಿಯ ತಂದೆಯ ಹೆಸರು ಸುಂದ್ರೇಶ್ ಔರಸಂಗ. ಅವರು, ಸೇಡಂನ ವಾಸವದತ್ತಾ ಸಿಮೆಂಟ್ ಕಾರ್ಖಾನೆಯಲ್ಲಿ ಎಂಜಿನಿಯರ್. ತಾಯಿಯ ಹೆಸರು ಅನಿತಾ. ಇವರು ಅದೇ ವಾಸವದತ್ತಾ ವಿದ್ಯಾ ವಿಹಾರ ಶಾಲೆಯಲ್ಲಿ ವಿಜ್ಞಾನ ಶಿಕ್ಷಕಿ. ಈ ದಂಪತಿಗೆ, ೧೯೯೪ರ ಮೇ ೨೩ರಂದು ಹುಟ್ಟಿದ ಕಂದಮ್ಮನೇ ರಶ್ಮಿ. ಹಾಲುಗಲ್ಲದ ಕಂದಮ್ಮನನ್ನು ಕಂಡು ವೈದ್ಯರು ಖಿನ್ನರಾಗಿ ಹೇಳಿದರಂತೆ: ‘ಮಗು ಮುದ್ದು ಮುದ್ದಾಗಿದೆ. ಆದರೆ ಏನೋ ಕೊರತೆ ಕಾಣಿಸ್ತಾ ಇದೆ. ಮುಖ್ಯವಾಗಿ ಸೊಂಟದಿಂದ ಕೆಳಗಿನ ಭಾಗದಲ್ಲಿ ಸ್ಪರ್ಶಜ್ಞಾನ ಇರುವಂತೆ ಕಾಣುತ್ತಿಲ್ಲ. ತಕ್ಷಣವೇ ಒಂದು ಆಪರೇಷನ್ ಮಾಡಬೇಕು…’ಪರಿಣಾಮ ರಶ್ಮಿಗೆ, ಕೇವಲ ಒಂದೂವರೆ ತಿಂಗಳು ತುಂಬಿದ ಸಂದರ್ಭದಲ್ಲಿಯೇ ಪೂನಾದ ಆಸ್ಪತ್ರೆಯಲ್ಲಿ ಆಪರೇಷನ್ ನಡೆದೇ ಹೋಯಿತು. ಆದರೆ ಪ್ರಯೋಜನವೇನೂ ಆಗಲಿಲ್ಲ. ಮತ್ತೆ ಪರೀಕ್ಷಿಸಿದ ವೈದ್ಯರು- ‘ಮಗುವಿನ ಬೆನ್ನಮೂಳೆಯಲ್ಲಿ ಏನೋ ತೊಂದರೆಯಿದೆ. ಮಗು ಬೆಳೆಯುತ್ತಾ ಹೋದಂತೆ ಈ ತೊಂದರೆ ತಂತಾನೇ ಸರಿಹೋಗಬಹುದು. ಸರಿಯಾಗದೆಯೂ ಇರಬಹುದು. ಒಂದು ವೇಳೆ, ಇದೇ ರೀತಿಯ ತೊಂದರೆ ಮುಂದುವರಿದರೆ- ಆಕೆ ಬದುಕಿಡೀ ವ್ಹೀಲ್ಚೇರ್ನೊಂದಿಗೇ ಇರಬೇಕಾಗುತ್ತದೆ. ಹಾಗಾಗದಿರಲಿ ಎಂದು ಪ್ರಾರ್ಥಿಸೋಣ’ ಎಂದರಂತೆ.
ವೈದ್ಯರ ಮಾತು ಕೇಳಿದ ಸುಂದ್ರೇಶ್- ಅನಿತಾ ದಂಪತಿ ಆ ಕ್ಷಣದಿಂದಲೇ ಮಗುವಿನ ಬಗ್ಗೆ ವಿಶೇಷ ಕಾಳಜಿ ವಹಿಸಿದರು. ಮಗುವಿಗೆ ಒಳಿತಾಗಲಿ ಎಂಬ ಸದಾಶಯದಿಂದ ಪೂಜೆ ಮಾಡಿಸಿದರು. ಹರಕೆ ಕಟ್ಟಿಕೊಂಡರು. ಅದೇ ಸಂದರ್ಭದಲ್ಲಿ ಗುಲ್ಬರ್ಗಾ, ಬಾಂಬೆ, ಹೈದ್ರಾಬಾದ್, ಬೆಂಗಳೂರಿನಲ್ಲಿರುವ ಎಲ್ಲ ಅತ್ಯುತ್ತಮ ಆಸ್ಪತ್ರೆಗಳನ್ನೂ ಸುತ್ತಿ ಬಂದರು. ಈ ಓಡಾಟದಿಂದ, ಚಿಕಿತ್ಸೆಗಳಿಂದ ದುಡ್ಡು ಖರ್ಚಾಯಿತೇ ವಿನಃ ಮಗುವಿನ ಆರೋಗ್ಯ ಸುಧಾರಿಸಲಿಲ್ಲ. ಕಡೆಗೊಂದು ದಿನ ಈ ಮಗುವಿಗೆ- ವ್ಹೀಲ್ಚೇರ್ ಕೊಡಿಸುವುದೊಂದೇ ಮಾರ್ಗ ಎಂಬ ನಿಷ್ಠುರ ಸತ್ಯ ಗೊತ್ತಾದಾಗ ಅದೊಂದು ರಾತ್ರಿ ಸುಂದ್ರೇಶ್-ಅನಿತಾ ದಂಪತಿ ಹೀಗೆ ನಿರ್ಧರಿಸಿದರಂತೆ: ‘ಮುಂದೆ ಇನ್ನೊಂದು ಮಗುವಾದರೆ, ಭವಿಷ್ಯದ ದಿನಗಳಲ್ಲಿ ಅವನ (ಳ)ನ್ನು ಕಂಡು ರಶ್ಮಿಗೆ- ಛೆ, ನಾನು ಹೀಗಿದ್ದೀನಲ್ಲ ಎಂಬ ಸಂಕಟ ಕಾಡಬಹುದು. ಅಥವಾ, ಮೊದಲಿನದು ಅಂಗವಿಕಲ ಮಗು ಎಂಬ ಕಾರಣಕ್ಕೆ ಇವಳ ಬಗ್ಗೆ ನಮಗೇ ಒಂದಿಷ್ಟು ಅನಾದರ ಬೆಳೆದು ಬಿಡಬಹುದು. ಹಾಗಾಗಿ, ರಶ್ಮಿಯನ್ನೇ ತುಂಬ ಮುದ್ದಾಗಿ ಬೆಳೆಸೋಣ.

ಎಲ್ಲ ಸವಾಲುಗಳನ್ನೂ ಎದುರಿಸುವಂತೆ ಅವಳನ್ನು ಮಾನಸಿಕವಾಗಿ ‘ಸಿದ್ಧ’ಗೊಳಿಸೋಣ. ನಮಗೆ ಎರಡನೇ ಮಗು ಬೇಡವೇ ಬೇಡ! ಮಗುವಿನ ಭವಿಷ್ಯದ ಬಗ್ಗೆ ಮಾತಾಡುತ್ತ ಸುಂದ್ರೇಶ್-ಅನಿತಾ ದಂಪತಿ, ಪರಸ್ಪರರಿಗೆ ಕಾಣದಂತೆ ಕಂಬನಿ ಒರೆಸಿಕೊಂಡೇ ಇಂಥದೊಂದು ನಿರ್ಧಾರಕ್ಕೆ ಬಂದರಲ್ಲ? ಅವತ್ತು ಮಾತ್ರ ದೇವತೆಗಳಂಥ ದೇವತೆಗಳೂ ಭಾವಪರವಶರಾಗಿ ಕಂಬನಿ ಮಿಡಿದರಂತೆ!

ಮರುದಿನದಿಂದಲೇ ವ್ಹೀಲ್ ಚೇರ್ನಲ್ಲಿ ಕೂರಿಸಿಯೇ ಮಗುವನ್ನು ಶಾಲೆಗೆ ಕಳಿಸುವ ಪರಿಪಾಠ ಆರಂಭವಾಯಿತು. ಹೇಳಿ ಕೇಳಿ ಹೆಣ್ಣುಮಗು. ಅದಕ್ಕೆ ಸೊಂಟದ ಕೆಳಗಿನ ಭಾಗವೇ ಸ್ವಾನದಲ್ಲಿಲ್ಲ. ಇಂಥ ಸಂದರ್ಭದಲ್ಲಿ ಬೇರೆ ಯಾವುದಾದರೂ ಶಾಲೆಗೆ ಸೇರಿಸಿದರೆ, ಮಗುವಿಗೆ ತಬ್ಬಲಿತನ ಕಾಡಬಹುದು. ಏಕಾಂಗಿ ಅನ್ನಿಸಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಇನ್ನೊಬ್ಬರ ನೆರವಿನಿಂದಲೇ ಶೌಚಾಲಯಕ್ಕೆ ಹೋಗಬೇಕಾದಂಥ ಸಂದರ್ಭದಲ್ಲಿ ತುಂಬ ಸಂಕೋಚ ಮತ್ತು ಸಂಕಟವಾಗಬಹುದು ಅನಿಸಿದ್ದರಿಂದ, ತಾವು ನೌಕರಿಗಿದ್ದ ವಾಸವದತ್ತಾ ವಿದ್ಯಾವಿಹಾರ ಶಾಲೆಗೇ ಮಗಳನ್ನೂ ಸೇರಿಸಿಕೊಂಡರು ಅನಿತಾ.
ಆಗ ಎದುರಾದ ಸಮಸ್ಯೆಗಳ ಬಗ್ಗೆ ಅನಿತಾ ಹೇಳುತ್ತಾರೆ: ‘ದಿನ ಕಳೆದಂತೆಲ್ಲ ದೇಹ ಬೆಳೆಯಿತೇ ಹೊರತು ಕಾಲಿನ ಚಲನೆಯಾಗಲಿಲ್ಲ. ಪರಿಣಾಮ, ಆಕೆಯನ್ನು ಎಲ್ಲಿಗೇ ಕರೆದೊಯ್ಯಬೇಕೆಂದರೂ ವ್ಹೀಲ್ಚೇರ್ನಲ್ಲೇ ಕರೆದೊಯ್ಯಬೇಕಿತ್ತು. ಇಲ್ಲವಾದರೆ ಎತ್ತಿಕೊಂಡು ಹೋಗಬೇಕಿತ್ತು. ಇದೆಲ್ಲಕ್ಕಿಂತ ಹಿಂಸೆ ಅನಿಸುತ್ತಿದ್ದುದು ಶೌಚಾಲಯಕ್ಕೆ ಹೋಗಬೇಕಾಗಿ ಬಂದಾಗ. ಪ್ರತಿಯೊಬ್ಬರೂ ತುಂಬ ಏಕಾಂತ ಬಯಸುವ; ಏಕಾಂತದಲ್ಲಿ ಕೆಲ ನಿಮಿಷದ ಮಟ್ಟಿಗೆ ಇರಲೇಬೇಕಾದ ಜಾಗ ಅದು. ವಿಪರ್ಯಾಸವೆಂದರೆ, ಅಲ್ಲಿ ಕೂಡ ನಾನು ಮಗಳೊಂದಿಗೆ ನಿಲ್ಲಬೇಕಿತ್ತು. ಇಲ್ಲಿ ನಾಚಿಕೊಳ್ಳುವಂಥದ್ದು; ಸಂಕಟ ಪಡುವಂಥದ್ದು ಏನೇನೂ ಲ್ಲ ಮಗಳೇ. ಇದೆಲ್ಲಾ ಕಾಮನ್. ಪುಟ್ಟ ಮಕ್ಕಳು ಶೌಚಕ್ಕೆ ಹೋದಾಗ ಅಮ್ಮಂದಿರು ಕ್ಲೀನ್ ಮಾಡ್ತಾರೆ ಅಲ್ವ? ಇದೂ ಹಾಗೇನೇ ನೀನು ನನ್ನ ಪಾಲಿಗೆ ಎಂದೆಂದೂ ಪುಟ್ಟ ಮಗೂನೇ ಎಂದು ಧೈರ್ಯ ಹೇಳಬೇಕಿತ್ತು. ಈ ಕೆಲಸವನ್ನು ನಾನು ತುಂಬ ಸಂಭ್ರಮದಿಂದ ಮಾಡಿದೆ. ಈ ಸಂದರ್ಭದಲ್ಲಿಯೇ ರಶ್ಮಿಯಂಥ ಮಕ್ಕಳಿಗೆ ಭಾರತೀಯ ಶೈಲಿಯ ಶೌಚಾಲಯಕ್ಕಿಂತ ಪಾಶ್ಚಾತ್ಯ ಶೈಲಿಯ ಶೌಚಾಲಯವಿದ್ದರೆ ತುಂಬ ಅನುಕೂಲ ಎಂದು ಕೊಲ್ಲಾಪುರದಲ್ಲಿರುವ ಹೆಲ್ಪರ್ಸ್ ಆಫ್ ದ ಹ್ಯಾಂಡಿಕ್ಯಾಪ್ಡ್ ಸಂಸ್ಥೆಯ ಮುಖ್ಯಸ್ಥೆ ನಸೀಮಾ ಹುರಜುಕ್ ಸಲಹೆ ಮಾಡಿದರು. ತಕ್ಷಣವೇ ಅಂಥದೊಂದು ವ್ಯವಸ್ಥೆ ಮಾಡಿಕೊಟ್ಟೆ. ಒಂದು ಸಂತೋಷವೆಂದರೆ, ನಮ್ಮ ಎಲ್ಲ ಭಾವನೆಗಳನ್ನೂ ರಶ್ಮಿ ಅರ್ಥಮಾಡಿಕೊಂಡಳು. ಕೆಲವೇ ದಿನಗಳಲ್ಲಿ ಯಾರ ನೆರವೂ ಇಲ್ಲದೆ ಶೌಚಾಲಯಕ್ಕೆ ಹೋಗಿಬರುವುದನ್ನು ಅಭ್ಯಾಸ ಮಾಡಿಕೊಂಡಳು. ಅದನ್ನು ಕಂಡಾಗ ನನಗೆ, ನನ್ನ ಮಗಳು ಯುದ್ಧಕ್ಕೆ ಕಳಿಸಿದರೂ ಗೆದ್ದು ಬರ್ತಾಳೆ ಅನ್ನಿಸಿಬಿಡ್ತು…’ ಅಂದಹಾಗೆ, ಕಾಲುಗಳು ಸ್ವಾನದಲ್ಲೇ ಇಲ್ಲದಿದ್ದರೂ, ನೃತ್ಯ ಮಾಡಲು ರಶ್ಮಿ ಆರಂಭಿಸಿದಳಲ್ಲ; ಅದೂ ಕೂಡ ಆಕಸ್ಮಿಕವಾಗಿ ನಡೆದು ಹೋದ ಪವಾಡವೇ. ರಶ್ಮಿಯ ತಾಯಿ ಅನಿತಾ ಅವರಿಗೆ ಪ್ರತಿವರ್ಷವೂ ಸ್ಕೂಲ್ಡೇ ಸಂದರ್ಭದಲ್ಲಿ. ಮಕ್ಕಳಿಗೆ ಡ್ಯಾನ್ಸ್ ಕಲಿಸುವ ಜವಾಬ್ದಾರಿ ವಹಿಸಲಾಗುತ್ತಿತ್ತು. ಈಗ ಅದನ್ನೇ ನೆನಪು ಮಾಡಿಕೊಂಡು ಅನಿತಾ ಹೇಳುತ್ತಾರೆ: ‘ವಾರ್ಷಿಕೋತ್ಸವದ ಸಂದರ್ಭದಲ್ಲಿ ಡ್ಯಾನ್ಸ್ ಕಾರ್ಯಕ್ರಮ ನೋಡಿ ರಶ್ಮಿ ಖುಷಿಯಿಂದ ಚಪ್ಪಾಳೆ ಹೊಡೆಯುತ್ತಿದ್ದಳು. ಆಗೆಲ್ಲ ನನಗೆ ವಿಪರೀತ ಸಂಕಟವಾಗುತ್ತಿತ್ತು. ನನ್ನ ಮಗುವಿಗೇ ಕಲಿಸಲಾಗದ ನಾನು ಬೇರೆಯವರಿಗೆ ಹೇಳಿಕೊಡೋದ್ರಿಂದ ಬಂದ ಭಾಗ್ಯವೇನು ಅನ್ನಿಸುತ್ತಿತ್ತು. ಆಗೆಲ್ಲ ಒಬ್ಬಳೇ ಮೌನವಾಗಿ ಕಂಬನಿ ಸುರಿಸುತ್ತಿದ್ದೆ. ಅಂಥ ಸಂದರ್ಭದಲ್ಲಿ ಸದ್ದಿಲ್ಲದೇ ಬಂದು ಹೆಗಲು ತಟ್ಟುತ್ತಿದ್ದ ನನ್ನ ಪತಿ ಸುಂದ್ರೇಶ್- ‘ಅಳಬೇಡ. ಸಂತೋಷದ ದಿನಗಳು ಹತ್ತಿರದಲ್ಲೇ ಇವೆ’ ಅಂತಿದ್ರು…’

ಈ ಸಂದರ್ಭದಲ್ಲಿಯೇ ರಶ್ಮಿ ಬದುಕಿಗೆ ಟರ್ನಿಂಗ್ ಪಾಯಿಂಟ್ ಅನ್ನಿಸುವಂಥ ಸಂದರ್ಭ ಬಂದೇ ಬಂತು. ಟಿವಿಯಲ್ಲಿ ಅವತ್ತು ‘ಫನ್ಹಾ’ ಎಂಬ ಹಿಂದಿ ಚಿತ್ರವೊಂದು ಪ್ರಸಾರವಾಯಿತು. ಆ ಚಿತ್ರದಲ್ಲಿ ಕುರುಡಿಯೊಬ್ಬಳು ಡ್ಯಾನ್ಸ್ ಮಾಡಿ ಎಲ್ಲರಿಂದ ಬೇಷ್ ಅನ್ನಿಸಿಕೊಳ್ಳುವ ದೃಶ್ಯವಿದೆ. ಸಿನಿಮಾ ಮುಗಿದ ಕ್ಷಣದಲ್ಲೇ- ‘ಕುರುಡಿಯೇ ಡ್ಯಾನ್ಸ್ ಮಾಡಿದಳು ಅಂದ ಮೇಲೆ ಕಣ್ಣಿರುವ ನಾನೂ ಒಂದು ಕೈ ನೋಡಬಾರದೇಕೆ?’ ಎಂದುಕೊಂಡಳು ರಶ್ಮಿ. ಈ ಸಂದರ್ಭದಲ್ಲೇ ಎನ್ಡಿಟಿವಿಯಲ್ಲಿ ನೃತ್ಯ ನಿರ್ದೇಶಕಿ ಸರೋಜ್ಖಾನ್ ನಡೆಸಿಕೊಡುವ ‘ನಚಲೇ’ ಎಂಬ ಕಾರ್ಯಕ್ರಮವೂ ಪ್ರಸಾರವಾಯಿತು. ಅದನ್ನು ನೋಡಿದ ನಂತರ ಅದೇ ಫನ್ಹಾ ಚಿತ್ರದ ‘ಯಹಾಂ ಹರ್ ಕದಂ/ಕದಂ ಪೇ ಧರತಿ ಬದಲೇ ರಂಗ್/ ಮೇರಾ ದೇಶ್ ರಂಗೀಲಾ’ ಹಾಡನ್ನು ರೆಕಾರ್ಡ್ ಮಾಡಿಕೊಂಡು, ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ವ್ಹೀಲ್ ಚೇರ್ ಮೇಲೆ ಕುಳಿತೇ ಡ್ಯಾನ್ಸ್ ಪ್ರಾಕ್ಟೀಸ್ಗೆ ಶುರು ಮಾಡಿದಳು. ಒಂದು ಕೈಯಲ್ಲಿ ವ್ಹೀಲ್ಚೇರ್ ತಿರುಗಿಸುತ್ತಲೇ ಇನ್ನೊಂದು ಕೈಯಿಂದ ಅಭಿನಯ ಮಾಡಲು ಕಲಿತೂಬಿಟ್ಟಳು.

ಅದೊಂದು ದಿನ ಹೀಗೇ ಅಭ್ಯಾಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಮನೆಗೆ ಬಂದ ತಂದೆ ಸುಂದ್ರೇಶ್ ಔರಸಂಗ, ಮಗಳ ನೃತ್ಯಾಭ್ಯಾಸ ಹಾಗೂ ಅವಳ ಮುಖದ ಭಾವಾಭಿನಯ ಕಂಡು ಬೆರಗಾದರಂತೆ. ಮರುಕ್ಷಣವೇ ಮಗಳನ್ನು ಬಾಚಿ ತಬ್ಬಿಕೊಂಡು ಮುದ್ದಾಡಿ – ‘ಮುಂದುವರಿಸು ಮಗಳೇ. ನಿನ್ನ ಜತೆಗೆ ನಾವಿರ್ತೇವೆ’ ಎನ್ನುತ್ತಾ ಭಾವುಕರಾದಂತೆ.ಅಂದಿನಿಂದ ಮನೆಯಲ್ಲೇ ಶುರುವಾಯಿತು- ಈ ಕಾಲಿಲ್ಲದ ಹುಡುಗಿಯ ನೃತ್ಯಾಭ್ಯಾಸ. ತನಗಿದ್ದ ಅಂಗವೈಕಲ್ಯದ ಮೇಲೆ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದವಳಂತೆ ತುಂಬ ಕಡಿಮೆ ಅವಯಲ್ಲೇ ಡ್ಯಾನ್ಸ್ ಕಲಿತೇಬಿಟ್ಟಳು. ನೃತ್ಯ ಕಲಾವಿದರ ಪರಿಣಿತಿಗೆ ಕನ್ನಡಿ ಹಿಡಿಯುವ ಕಣ್ಣು ಮುಖದ ಕದಲಿಕೆಯ ವಿಷಯದಲ್ಲಂತೂ, ಫನ್ಹಾ ಚಿತ್ರದ ನೃತ್ಯಗಾರ್ತಿಯೇ ಬೆರಗಾಗುವಷ್ಟರ ಮಟ್ಟಿಗೆ ಪಳಗಿ ಹೋಗಿದದಳು.
ಕಡೆಗೊಂದು ದಿನ ರಶ್ಮಿಯ ನೃತ್ಯ ಪ್ರದರ್ಶನಕ್ಕೆ ವೇದಿಕೆ ಸಿಕ್ಕಿಯೇಬಿಟ್ಟಿತು. ಅದು ೨೦೦೮, ಅಕ್ಟೋಬರ್ ೧೭. ಅವತ್ತು ಹೈದ್ರಾಬಾದ್ನಲ್ಲಿ ಹೆಲ್ಪರ್ಸ್ ಆಫ್ ದಿ ಹ್ಯಾಂಡಿಕ್ಯಾಪ್ಡ್ ಸಂಸ್ಥೆಯ ಕಾರ್ಯಕ್ರಮವಿತ್ತು. ಶೌಚಾಲಯ ಬಳಕೆಯ ವಿಷಯದಲ್ಲಿ ಸಲಹೆ ನಸೀಮಾ ಅವರೇ ರಶ್ಮಿಯ ನೃತ್ಯ ಪ್ರದರ್ಶನಕ್ಕೆ ಅವಕಾಶ ನೀಡಿದ್ದರು. ಅವತ್ತು ರಶ್ಮಿಯ ವ್ಹೀಲ್ ಚೇರ್ ನೃತ್ಯ ನೋಡಿದವರೆಲ್ಲ ಒಂದೇ ಸಮನೆ ಒನ್ಸ್ ಮೋರ್ ಕೂಗಿದರು. ಖುಷಿಯಿಂದ ಚಪ್ಪಾಳೆ ಹೊಡೆದರು. ಈ ಹುಡುಗಿಯ ಸಾಧನೆಗೆ, ಛಲಕ್ಕೆ ಕೈಮುಗಿದರು. ನೃತ್ಯ ಮುಗಿಯುತ್ತಿದ್ದಂತೆಯೇ ವೇದಿಕೆಗೆ ಬಂದು ರಶ್ಮಿಯ ಆಟೊಗ್ರಾಫ್ ಪಡೆದರು. ಜತೆಯಲ್ಲಿ ಫೋಟೊ ತೆಗೆಸಿಕೊಂಡು ಖುಷಿಪಟ್ಟರು.
***

ಈಗ ಏನೇನಾಗಿದೆ ಅಂದರೆ, ವ್ಹೀಲ್ ಚೇರ್ ನೃತ್ಯದ ಮೂಲಕ ರಶ್ಮಿ ಗುಲ್ಬರ್ಗಾ ಸೀಮೆಯಲ್ಲಿ ದೊಡ್ಡ ಹೆಸರಾಗಿದ್ದಾಳೆ. ಅಲ್ಲಿನ ಪೀಠಾಪತಿ ಶರಣಬಸಪ್ಪ ಅಪ್ಪ ಅವರು ರಶ್ಮಿಯ ನೃತ್ಯ ಪ್ರತಿಭೆಯನ್ನು ಕಂಡು ಬೆರಗಾಗಿದ್ದಾರೆ. ಈಕೆಯ ಕಾರ್ಯಕ್ರಮಕ್ಕೆ ವೇದಿಕೆ ಒದಗಿಸಿ ಬೆನ್ನು ತಟ್ಟಿದ್ದಾರೆ. ಅಂಥದೇ ಪ್ರೋತ್ಸಾಹ ವಾಸವದತ್ತಾ ವಿದ್ಯಾ ವಿಹಾರ ಶಾಲೆಯ ಪ್ರಾಚಾರ್ಯರಾದ ನೀತಾ ಪುರೋಹಿತ್ ಅವರಿಂದಲೂ ದೊರಕಿದೆ. ಶಾಲೆಯ ೨೫ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ರಶ್ಮಿಯ ನೃತ್ಯ ಏರ್ಪಡಿಸಿದ್ದ ಅಲ್ಲಿನ ಆಡಳಿತ ಮಂಡಳಿ- ‘ಈ ವಿದ್ಯಾರ್ಥಿನಿ ನಮ್ಮೆಲ್ಲರ ಹೆಮ್ಮೆ’ ಎಂದು ಖುಷಿಯಿಂದ ಹೇಳಿಕೊಂಡಿದೆ.
ಇದನ್ನೆಲ್ಲ ಕಂಡು ಸಹಜವಾಗಿಯೇ ಖುಷಿಯಾಗಿರುವ ಸುಂದ್ರೇಶ್-ಅನಿತಾ ದಂಪತಿ ಹೇಳುತ್ತಾರೆ: ಈ ಹಿಂದೆಲ್ಲಾ ಮಗಳಿಗೆ ಕಾಲು ಸ್ವಾನದಲ್ಲಿ ಇಲ್ಲವಲ್ಲ ಎಂದು ನೆನೆದು ಅಳ್ತಾ ಇದ್ವಿ. ಈಗ ಕಾಲಿಲ್ಲದಿದ್ರೂ ಮಗಳು ಎಂಥ ದೊಡ್ಡ ಸಾಧನೆ ಮಾಡಿದಳಲ್ಲ ಎಂದು ನೆನಪಾಗಿ ಆನಂದಬಾಷ್ಪ ಸುರಿಸ್ತಾ ಇದೀವಿ. ಇಂಥ ಕಂದಮ್ಮನ ಅಪ್ಪ-ಅಮ್ಮ ಅಂತ ಹೇಳಿಕೊಳ್ಳೋಕೆ ನಮಗೆ ಹೆಮ್ಮೆ ಆಗ್ತಾ ಇದೆ…’
ಈಗ ಹೇಳಿ: ರಶ್ಮಿಯ ಸಾಧನೆಯ ಕಥೆ ಓದಿದ ಮೇಲೆ ಈ ಹುಡುಗಿ ನಮ್ಮ ಅಕ್ಕನೋ ತಂಗಿಯೋ ಆಗಿರಬೇಕಿತ್ತು ಅನಿಸೋದಿಲ್ವ?
ಅಂದ ಹಾಗೆ ರಶ್ಮಿ ಮನೆಯ ಮೊಬೈಲ್ ನಂಬರ್: ೯೪೪೯೮ ೭೬೬೫೮.

ಆಷಾಢ ಅಂದ್ರೆ ಸುಮ್ನೇನಾ?

ಜುಲೈ 7, 2009

ಗೆಳೆಯ, ಯುದ್ಧ ಗೆದ್ದವನ ಸಂಭ್ರಮದಲ್ಲಿದ್ದ.
‘ಏನಾಯ್ತೋ, ಟ್ವೆಂಟಿ-೨೦ ಕ್ರಿಕೆಟ್ ಮುಗಿದು ಆಗಲೇ ತಿಂಗಳಾಗ್ತಾ ಬಂತು. ಹಾಗಾಗಿ ಈಗ ನೀನು ಬೆಟ್ ಗೆದ್ದಿರೋಕೆ ಸಾಧ್ಯವಿಲ್ಲ. ಹಾಗಿದ್ರೂ ನಿಂತನಿಂತಲ್ಲೇ ಥೈಥೈ ಕುಣಿತಾ ಇದೀಯಲ್ಲ, ಏನ್ಸಮಾಚಾರ?’ ಅಂದರೆ- ಒಳಗೊಳಗೇ ನಗುತ್ತ ಹೀಗೆಂದ: ‘ಗೊತ್ತಿದೆಯಲ್ವ ನಿಂಗೂ? ಆಷಾಢ ಶುರುವಾಗಿದೆ. ಅದೇ ಕಾರಣಕ್ಕೆ ಹೆಂಡತಿ ಹೋಗಿ ಅಣ್ಣನ ಮನೆ ಸೇರ್ಕೊಂಡಿದಾಳೆ. ಅವಳ ಜೊತೆ ದಿನಕ್ಕೆ ಒಂದೆರಡಲ್ಲ, ನಲವತ್ತೆಂಟು ಬಾರಿ ಫೋನ್ ಮಾಡಿ ಮಾತಾಡ್ತಿದ್ದೆ ನಿಜ. ಆದ್ರೂ ಸಮಾಧಾನ ಆಗ್ತಾ ಇರಲಿಲ್ಲ. ನಿನ್ನೆ ಸಂಜೆ ಸೀದಾ ಅವಳ ಅಣ್ಣನ ಮನೆಗೇ ಹೋದೆ. ಸಂಪ್ರದಾಯದ ನೆಪದಲ್ಲಿ ಅವರು ಅರ್ಧಗಂಟೆ ವಾಕ್ ಹೋಗೋಕೂ ಬಿಡಲ್ಲ ಅನ್ನಿಸ್ತು. ಅದಕ್ಕೇ ಉಪಾಯ ಮಾಡ್ದೆ, ದೇವಸ್ಥಾನಕ್ಕೆ ಬರುವಂತೆ ಅವಳಿಗೆ ಐಡಿಯಾ ಕೊಟ್ಟೆ. ಅವಳೂ ಖುಷಿಯಿಂದ ಒಪ್ಪಿದ್ಲು. ದೇವಸ್ಥಾನದಲ್ಲಿ ಐದು ನಿಮಿಷ ಇದ್ದು ಸೀದಾ ಮಲ್ಟಿಪ್ಲೆಕ್ಸ್ಗೆ ಸಿನಿಮಾಕ್ಕೆ ಹೋದ್ವಿ. ಅಲ್ಲಿ ಇಬ್ರೂ ಪರಸ್ಪರ ಭೇಟಿಯಾಗಿದ್ದು ಆಯ್ತು. ಬೇಟೆ ಆಡಿದ್ದೂ ಆಯ್ತು! ನಮ್ಮ ಮದುವೆಯಾಗಿ ಇನ್ನೂ ಹದಿನೈದು ದಿನ ಕಳೆದಿಲ್ಲ. ಹಾಗಿರುವಾಗ ಸಂಪ್ರದಾಯದ ನೆಪದಲ್ಲಿ ದೂರ ಮಾಡೋಕೆ ನೋಡಿದ್ರೆ ನಾವಾದ್ರೂ ಹೇಗೆ ಇರೋಕಾಗ್ತದೆ ಹೇಳು…. ಈ ಆಷಾಢದ ಮನೆ ಹಾಳಾಗ!’
ಹೀಗೆಂದವನೇ, ಗೆಳೆಯ ಮಾತು ನಿಲ್ಲಿಸಿದ.
***
‘ಆಷಾಢದಲ್ಲಿ ಗಂಡ-ಹೆಂಡತಿ ಜೊತೆಗಿರಬಾರದು’ ಎಂಬ ಮಾತು ಗೆಳೆಯನ ನೆಪದಲ್ಲಿ ಮತ್ತೆ ನೆನಪಾಯಿತು. ಹಿಂದೆಯೇ, ನಮ್ಮ ಮಧ್ಯೆ ಇವತ್ತಿಗೂ ವ್ರತದಂತೆ ಆರಣೆಯಲ್ಲಿರುವ- ‘ಆಷಾಢದಲ್ಲಿ ಹೊಸ ಮನೆ ಖರೀದಿಸಬಾರದು, ಮನೆ ಬದಲಿಸಬಾರದು, ವಾಹನ ಕೊಳ್ಳಬಾರದು, ಆಸ್ತಿ ಮಾರಬಾರದು, ಮನೆ ನಿರ್ಮಾಣಕ್ಕೆ ಪಾಯ ಹಾಕಬಾರದು, ಮದುವೆಯೂ ಸೇರಿದಂತೆ ಯಾವೊಂದು ಶುಭ ಕಾರ್ಯವೂ ಆಷಾಢ ಮಾಸದಲ್ಲಿ ನಡೆಯಬಾರದು…’ ಎಂಬಿತ್ಯಾದಿ ಮಾತುಗಳೆಲ್ಲ ಸಾಲು ದೀಪದ ಬೆಳಕಿನಂತೆ ಕಣ್ಮುಂದೆ ಬಂದು ಹೋದವು. ಆಗಲೇ ಹುಟ್ಟಿಕೊಂಡದ್ದು ಈ ಪ್ರಶ್ನೆಗಳ ಗುಚ್ಛ: ಅಲ್ಲ, ಆಷಾಢದಲ್ಲಿ ಅದ್ಯಾಕೆ ಮದುವೆಯಾಗಬಾರದು? ಯಾಕೆ ಹೊಸ ಮನೆ ಕಟ್ಟಿಸಬಾರದು ಖರೀದಿಸಬಾರದು? ಗಂಡ-ಹೆಂಡತಿ ಜೊತೆಯಾಗಿದ್ದರೆ ಈ ಆಷಾಢಕ್ಕೇನು ಕಷ್ಟ? ಈ ಮಾಸದಲ್ಲಿ ಕೂಡ ಅದದೇ ಭಾನುವಾರ, ಸೋಮವಾರ, ಮಂಗಳವಾರ… ವಗೈರೆಗಳೇ ಇದ್ದರೂ ಹೊಸದಾಗಿ ವಾಹನ ಖರೀದಿಸಬಾರದು ಎಂದರೆ ಏನರ್ಥ? ಆಷಾಢದ ನೂರೆಂಟು ಲೆಕ್ಕಾಚಾರಗಳ ಮಧ್ಯೆಯೂ ದಿನಸಿ, ಸಾಂಬಾರ ಪದಾರ್ಥಗಳು ಹಾಗೂ ತರಕಾರಿಯನ್ನು ದಿನದಿನವೂ ಖರೀದಿಸುವ ಜನ, ಆಸ್ತಿ ಖರೀದಿಯ ವಿಷಯ ಬಂದಾಗ ಮಾತ್ರ ಹಾವು ತುಳಿದವರಂತೆ ಬೆಚ್ಚುವುದೇಕೆ? ಒಂದು ವೇಳೆ ಯಾರಾದರೂ ಕಿಲಾಡಿಗಳು, ಈ ಆಷಾಢ ಮಾಸ ತುಂಬಾ ಕೆಟ್ಟದು. ಹಾಗಾಗಿ ಒಂದಿಡೀ ತಿಂಗಳು ಯಾರೂ ಊಟ ಮಾಡಬಾರದು, ಸ್ನಾನ ಮಾಡಬಾರದು ಮತ್ತು ಉಸಿರಾಡಲೂಬಾರದು ಎಂದು ಹೇಳಿಬಿಟ್ಟರೆ…?!
ಇಂಥದೊಂದು ಯೋಚನೆ ಬಂದೊಡನೆ ನಗು ಬಂತು. ಹಿಂದೆಯೇ ಆಷಾಢದ ಸಂದರ್ಭದಲ್ಲಿ ನಮ್ಮ ಸುತ್ತಮುತ್ತಲ ಜನ ಹಾಗೂ ಪರಿಸರದ ‘ಬದಲಾದ ಚಿತ್ರವೂ’ ಕಣ್ಮುಂದೆ ಹಾದು ಹೋಯಿತು; ಬ್ಲಾಕ್ ಅಂಡ್ ವೈಟ್ ಸಿನಿಮಾದ ದೃಶ್ಯಗಳ ಹಾಗೆ…
ಹೌದಲ್ಲವಾ? ಉಳಿದೆಲ್ಲ ಸಂದರ್ಭಗಳಲ್ಲೂ ಆಕಾಶ ಶುಭ್ರವಾಗಿರುತ್ತದೆ. ಸ್ವಚ್ಛವಾಗಿರುತ್ತದೆ. ಆದರೆ, ಆಷಾಢ ಮಾಸ ಬಂತೆಂದರೆ ಸಾಕು, ಆಕಾಶವೆಂಬೋ ಆಕಾಶ ಕೂಡ ಸ್ವಲ್ಪ ಮಂಕಾಗುತ್ತದೆ, ಮಸುಕಾದಂತೆ ಕಾಣಿಸುತ್ತದೆ. ರೈಲಿನ ಎಂಜಿನ್ನಿಂದ ಹೊರಟ ಹೊಗೆಯಂತೆ ಕಾಣುವ ಕಡುಗಪ್ಪು ಮೋಡಗಳು ಆಕಾಶದ ಚೆಲುವನ್ನೇ ಹಾಳು ಮಾಡಿರುತ್ತವೆ. ಈ ಮೋಡಗಳಲ್ಲಿರುವ ಅಷ್ಟೂ ಮಳೆ ನೀರನ್ನು ಸುರಿಸಿ, ದುಗುಡ, ದುಮ್ಮಾನವನ್ನು ಕಳೆದುಕೊಳ್ಳಬೇಕೆಂಬ ಬಯಕೆ ಆಗಸಕ್ಕಿರುತ್ತದೆ, ನಿಜ. ಆದರೆ, ತುಂಬ ಸಂದರ್ಭದಲ್ಲಿ ಮೋಡಗಳು ಮಳೆ ಸುರಿಸುವುದೇ ಇಲ್ಲ. ಬದಲಿಗೆ, ಅಮ್ಮನೊಂದಿಗೆ ‘ಠೂ’ ಬಿಟ್ಟು ಮನೆಯ ಇನ್ನೊಂದು ಮೂಲೆಗೆ ಬಂದು ಮುಖ ಊದಿಸಿಕೊಂಡು ಕೂರುವ ಮಗುವಿನಂತೆ, ಅದೇ ಆಗಸದ ಇನ್ನೊಂದು ತುದಿಗೆ ಬಂದು ಕೂತುಬಿಡುತ್ತವೆ. ಪರಿಣಾಮ, ಈ ಆಷಾಢದ ಸಂದರ್ಭದಲ್ಲಿ ಆಕಾಶದಂಥ ಆಕಾಶ ಕೂಡ ಎಲ್ಲ ಇದ್ದರೂ ಏನೂ ಇಲ್ಲ ಎಂಬಂಥ ನೋವಿನಿಂದ ಕಂಗಾಲಾಗಿರುತ್ತದೆ. ಅದಕ್ಕೇ ಹೇಳಿದ್ದು- ಆಷಾಢ ಎಂದರೆ ಖಿನ್ನತೆ. ಆಷಾಢ ಎಂದರೆ ಯಾತನೆ, ಆಷಾಢ ಎಂದರೆ ದುಗುಡ ಮತ್ತು ಆಷಾಢವೆಂದರೆ ವಿರಹ!
ಹೀಗೆ ಅಂದುಕೊಂಡಾಕ್ಷಣ ಮನಸ್ಸು ಮತ್ತೆ ಅದೇ ಹಳೆಯ ಪ್ರಶ್ನೆಗೇ ಬಂದು ನಿಲ್ಲುತ್ತದೆ: ‘ಆಷಾಢದಲ್ಲಿ ಗಂಡ-ಹೆಂಡತಿಯನ್ನು ದೂರ ಮಾಡ್ತಾರಲ್ಲ ಯಾಕೆ?’
ಹಿರಿಯರ ಜಾಣತನವನ್ನೇ ಅಂದಾಜು ಮಾಡಿಕೊಂಡು ಹೇಳುವುದಾದರೆ- ಮದುವೆಗಳ ಸೀಜನ್ ಆರಂಭವಾಗುವುದೇ ಜೇಷ್ಠ ಮಾಸದಲ್ಲಿ. ಆ ತಿಂಗಳು- ಮದುವೆ, ನಂತರದ ಒಂದಿಷ್ಟು ಶಾಸ್ತ್ರ, ದೇವಸ್ಥಾನ, ಗೆಳೆಯರ ಮನೆಗಳಿಗೆ ಯಾತ್ರೆ ಇತ್ಯಾದಿಗಳಲ್ಲೇ ಮುಗಿದು ಹೋಗುತ್ತದೆ. ಈ ಮಧ್ಯೆಯೇ ‘ಹೊಸ ಬದುಕಿನ ರಸಮಯ ಕ್ಷಣಗಳ’ ರುಚಿ ಗಂಡ-ಹೆಂಡತಿ, ಇಬ್ಬರಿಗೂ ಆಗಿರುತ್ತದೆ. ಪರಿಣಾಮ, ಇಬ್ಬರೂ ‘ನಿನ್ನ ಅರೆಗಳಿಗೆಯೂ ನಾನು ಬಿಟ್ಟಿರಲಾರೆ…’ ಎಂಬ ಉನ್ಮಾದದ ಸ್ಥಿತಿಗೆ ಬಂದಿರುತ್ತಾರೆ. ಹೀಗಿದ್ದಾಗಲೇ ಕಳ್ಳನಂತೆ, ಒಂದೊಂದೇ ಹೆಜ್ಜೆ ಇಡುತ್ತ ಬಂದೇ ಬಿಡುತ್ತದೆ ಆಷಾಢ. ಒಂದು ವೇಳೆ ಹಸಿಬಿಸಿ ಆಸೆಗಳಿಂದ ಹುಚ್ಚಾದ ನವದಂಪತಿಗಳನ್ನು ಈ ತಿಂಗಳು ಜೊತೆಯಾಗಿರಲು ಬಿಟ್ಟರೆ, ಬಿರು ಬೇಸಿಗೆಯ ಕಾಲಕ್ಕೆ ಹೆರಿಗೆಯಾಗಿ ಬಿಡುವ ಸಾಧ್ಯತೆಗಳಿರುತ್ತವೆ. ಬಿಸಿಲಿನ ತಾಪಕ್ಕೆ ಕೆಲವೊಮ್ಮೆ ದಿಢೀರನೆ ಜ್ವರ ಬಂದುಬಿಡುವ ಸಾಧ್ಯತೆಗಳಿರುತ್ತದೆ. ಈ ಮಧ್ಯೆ ಗರ್ಭದ ಭಾರ, ಹೆರಿಗೆಯ ನೋವು, ಬಾಣಂತನದ ಬಾಧೆಯನ್ನು ತಪ್ಪಿಸಬೇಕೆಂಬ ಆಶಯದಿಂದಲೇ ಒಂದು ತಿಂಗಳ ಮಟ್ಟಿಗೆ ಗಂಡ-ಹೆಂಡತಿಯನ್ನು ತಾತ್ಕಾಲಿಕವಾಗಿ ದೂರ ಇರಿಸಲಾಗುತ್ತದೆ.
ಅಂತೆಯೇ, ಆಷಾಢದ ಸಂದರ್ಭದಲ್ಲಿ, ಆಗಷ್ಟೇ ಮಳೆ ಬಿದ್ದು ಬಿತ್ತನೆ, ಕಳೆ ಕೀಳುವುದೂ ಸೇರಿದಂತೆ ರೈತರಿಗೆ ಕೈ ತುಂಬ ಕೆಲಸ ಸಿಕ್ಕಿರುತ್ತದೆ. ಈ ಸಂದರ್ಭದಲ್ಲಿ ಮನೆ ಕಟ್ಟಿಸುವ/ ಖರೀದಿಸುವ ಕೆಲಸಕ್ಕೆ ನಿಂತರೆ ಮೈಮರೆವಿನ ಕಾರಣಕ್ಕೆ ಕೃಷಿ ಕೆಲಸ ಕೆಡಬಹುದು ಎಂಬ ಇನ್ನೊಂದು ಕಾರಣ ಕೂಡ ‘ಆಷಾಢದಲ್ಲಿ ಶುಭಕಾರ್ಯಗಳಿಗೆ ನಿಷಿದ್ಧ’ ಎಂಬ ಘೋಷಣೆಯ ಹಿಂದಿರಬಹುದೇನೋ ಅನಿಸುತ್ತದೆ.
ಇಂಥದೊಂದು ಸಮಜಾಯಿಷಿ ಕೊಟ್ಟ ನಂತರವೂ ಆಷಾಢ ಎಂದಾಕ್ಷಣ ‘ನವದಂಪತಿಯ’ ಇರುಳಿನ ಸಂಕಟವೇ ಮತ್ತೆ ಮತ್ತೆ ನೆನಪಿಗೆ ಬರುತ್ತದೆ. ಮನಸ್ಸು, ಹದಿನೈದಿಪ್ಪತ್ತು ವರ್ಷ ಹಿಂದೆ ಚಾಲ್ತಿಯಲ್ಲಿದ್ದ ಆಚರಣೆಗಳ ಹಿಂದೆ ಯಾತ್ರೆ ಹೊರಡುತ್ತದೆ. ತುಂಟ ಕಂಗಳು ಅದನ್ನು ಹಿಂಬಾಲಿಸುತ್ತವೆ.
ಯಾರು ಏನೇ ಹೇಳಲಿ, ಹಳೆಯ ದಿನಗಳ ಆಚರಣೆಯೇ ಚೆಂದವಿತ್ತು. ಆಗೆಲ್ಲ- ಆಷಾಢ ಇನ್ನೂ ನಾಲ್ಕೈದು ದಿನವಿದೆ ಎನ್ನುವಾಗಲೇ ಗಂಡನ ಮನೆಯಿಂದ ತಂಗಿಯನ್ನು ಕರೆ ತರಲು ಅಣ್ಣ ತಯಾರಿ ನಡೆಸುತ್ತಿದ್ದ. ಈ ಕಡೆ- ಆಷಾಢದಲ್ಲಿ ಅತ್ತೆ-ಸೊಸೆ ಒಂದೇ ಮನೇಲಿದ್ರೆ ಕೆಡುಕು ತಪ್ಪಿದ್ದಲ್ಲ ಎಂಬ ಹಳೆಯ ಮಾತನ್ನು ನಂಬಿ, ಸೊಸೆ ಅನ್ನಿಸಿಕೊಂಡಾಕೆ ಕೂಡ ಅಪ್ಪನ ಮನೆಗೆ ಹೊರಟು ನಿಲ್ಲುತ್ತಿದ್ದಳು. ಅಣ್ಣ ಬರುವುದು ಒಂದೆರಡು ದಿನ ತಡವಾದರೂ ಸಾಕು; ಹೆಣ್ಣು ಮಕ್ಕಳಿಗೆ ‘ಆಷಾಢ ಮಾಸ ಬಂದೀತಮ್ಮ/ ತೌರಿಂದ ಅಣ್ಣ ಬರಲಿಲ್ಲ/ ಎಷ್ಟು ನೆನೆಯಲಿ ಅಣ್ಣನ ದಾರಿ/ ಸುವ್ವೋ ಲಾಲಿ ಸುವ್ವಾಲಾಲಿ’ ಎಂಬ ಹಾಡು ನೆನಪಾಗಿಬಿಡುತ್ತಿತ್ತು.
ತಮಾಷೆಯೆಂದರೆ, ಹೀಗೆ- ಕುಣಿದಾಡಿಕೊಂಡೇ ತೌರಿಗೆ ಬಂದವಳ ಸಂಭ್ರಮ ಎರಡೇ ದಿನಗಳಿಗೆ ಮುಗಿದು ಹೋಗುತ್ತಿತ್ತು. ತವರು ಮನೆಯ ನೂರು ಸಂಭ್ರಮದ ಮಧ್ಯೆಯೂ ‘ಗಂಡ’ ನೆನಪಾಗುತ್ತಿದ್ದ. ಅವನೊಂದಿಗೆ ಜಗಳವಾಡಿದ್ದು, ಠೂ ಬಿಟ್ಟಿದ್ದು, ತಲೆ ಮೇಲೆ ಮೊಟಕಿದ್ದು, ಸ್ನಾನದ ಮನೆಯಲ್ಲಿ ಸರಸವಾಡಿದ್ದು, ಒಂದೇ ತಟ್ಟೆಯಲ್ಲಿ ಹಂಚಿಕೊಂಡು ತಿಂದದ್ದು ನೆನಪಾಗಿ ಬಿಡುತ್ತಿತ್ತು. ಪರಿಣಾಮ, ಕೆನ್ನೆಯಲ್ಲಿನ್ನೂ ಅರಿಶಿಣದ ಗುರುತು ಉಳಿಸಿಕೊಂಡಿರುತ್ತಿದ್ದ ಕನ್ಯೆಗೆ- ಹಗಲಲ್ಲಿ ಬೆಳಕೇ ಇರುತ್ತಿರಲಿಲ್ಲ. ರಾತ್ರಿ ನಿದ್ರೆ ಬರುತ್ತಿರಲಿಲ್ಲ!
ಈ ಕಡೆ, ಗಂಡ ಅನ್ನಿಸಿಕೊಂಡವನ ಕಥೆಯೂ ಅದೇ. ಆಗೆಲ್ಲ, ತವರಿಗೆ ಹೋದವಳನ್ನು ಸಂಪರ್ಕಿಸಲು ಇದ್ದ ದಾರಿಯೆಂದರೆ ಕಾಗದ ಬರೆಯುವುದು! ಈ ಪುಣ್ಯಾತ್ಮನ ಕಾಗದವನ್ನು ಹೆಂಡತಿಯ ಮನೆಯಲ್ಲಿ ಎಲ್ಲರೂ ಓದುತ್ತಿದ್ದುದರಿಂದ ಅಲ್ಲಿ ಪೋಲ್ ಪೋಲಿಯಾಗಿ ಬರೆಯುವಂತಿರಲಿಲ್ಲ. ಕಾಗದ ಬಿಟ್ಟರೆ, ಹೆಂಡತಿಯನ್ನು ಸಂಪರ್ಕಿಸಲು ಇದ್ದ ಇನ್ನೊಂದು ದಾರಿಯೆಂದರೆ- ಎಸ್ಟೀಡಿ ಫೋನು! ಆಗೆಲ್ಲ, ಒಂದೂರಿನಲ್ಲಿ ತಲಾ ಇಪ್ಪತ್ತು ಮನೆಗೆ ಒಂದು ಫೋನ್ ಇರುತ್ತಿತ್ತು. ಆ ಮನೆಯ ನಂಬರ್ ಪಡೆದು ಫೋನ್ ಮಾಡಿದರೆ, ಮನೆಯ ಯಜಮಾನರು ಫೋನ್ ಎತ್ತಿಕೊಂಡು ಲೋಕಾಭಿರಾಮ ಹರಟೆಗೇ ನಿಂತುಬಿಡುತ್ತಿದ್ದರು! ಇವನಿಗೋ ಪ್ರಾಣಸಂಕಟ. ಅವರ ಕಾಡು ಹರಟೆಯನ್ನೆಲ್ಲ ತೆಪ್ಪಗೆ ಕೇಳಿಸಿಕೊಂಡು ಕಡೆಗೊಮ್ಮೆ ಸಂಕೋಚದಿಂದ ನಮ್ಮ ‘ರಾಧನ್ನು’ ಕರೀತೀರಾ ಅಂದರೆ- ಕರೆಯೋಣ ಕರೆಯೋಣ ಎಂದು ಅವರು ಹೇಳುತ್ತಿದ್ದಾಗಲೇ ಲೈನ್ ಕಟ್ ಆಗುತ್ತಿತ್ತು! ಇವನು ಇನ್ನೊಂದು ಬಾರಿ ಫೋನ್ ಮಾಡುವ ವೇಳೆಗೆ ‘ಅವಳು’ ಓಡಿ ಬಂದಿರುತ್ತಿದ್ದಳು ನಿಜ. ಆದರೆ, ಆಕೆಯ ಸುತ್ತಲೂ ಗೆಳತಿಯರ, ನೆರೆ ಹೊರೆಯವರ ಗುಂಪಿರುತ್ತಿತ್ತು. ಇವನಿಗೋ ಫೋನ್ನಲ್ಲೇ ಲಲ್ಲೆಗೆರೆಯುವ, ಮುತ್ತಿಡುವ, ಪೋಲಿ ಜೋಕು ಹೇಳುವ ಕಾತುರ! ಆದರೆ, ಇವನ ಸಂಭ್ರಮಕ್ಕೆ ದನಿಯಾಗುವ ಪರಿಸ್ಥಿತಿಯಲ್ಲಿ ಅವಳಿರುತ್ತಿರಲಿಲ್ಲ. ಈತ ಗುರ್ರ ಗುರ್ರ ಎಂದು ರೇಗಿದರೂ, ಸೆಕ್ಸಿಯಾಗಿ ಮಾತಾಡಿದರೂ ಒಂದಿಷ್ಟು ಬೈದರೂ- ಈಕೆ ‘ಹಾ, ಹೂಂ, ಸರಿ ಸರಿ…’ ಎಂದೇ ಮಾತು ಮುಗಿಸುತ್ತಿದ್ದಳು. ಇದರಿಂದ ಸಹಜವಾಗಿಯೇ ಸಿಟ್ಟಾದ ಈ ಗಂಡ ಮಹಾರಾಯ- ‘ತವರಿನ ಸುಖ ಜಾಸ್ತಿ ಆಗಿರಬೇಕು, ಹಾಗಿರುವಾಗ ನನ್ನ ನೆನಪೆಲ್ಲಿ ಬರ್ತದೆ ಹೇಳು?’ ಎಂದು ಚುಚ್ಚಿ ಪತ್ರ ಬರೆಯುತ್ತಿದ್ದ!
ಮರು ಟಪಾಲಿಗೇ ಬರುತ್ತಿದ್ದ ಅವಳ ಉತ್ತರ ಹೀಗಿರುತ್ತಿತ್ತು? ತೌರ ಸುಖದೊಳಗೆನ್ನರೆತಿಹಳು ಎನ್ನದಿರಿ/ ನಿಮ್ಮ ಪ್ರೇಮವ ನೀವೇ ಒರೆಯನಿಟ್ಟು/ ನಿಮ್ಮ ನೆನಪೇ ನನ್ನ ಹಿಂಡುವುದು ಹಗಲಿನಲಿ/ ಇರುಳಿನಲಿ ಕಾಣುವುದು ನಿಮ್ಮ ಕನಸು..’
ಮೊದಲೇ ವಿರಹದ ಮಧ್ಯೆ ಬದುಕುತ್ತಿದ್ದವನಿಗೆ ಇಂಥದೊಂದು ಆರ್ದ್ರ ಭಾಷೆಯ ಪತ್ರ ಬಂದರೆ, ಮನಸು ತಡೆದೀತಾದರೂ ಹೇಗೆ? ಈತ ತಕ್ಷಣವೇ ‘ಕೋಟಿ ಯೋಜನವಿರಲಿ ದಾಟಿ ಬರುವೆನು ಹೆಣ್ಣೆ..’ ಎಂದು ಹಾಡಿಕೊಂಡೇ ಹೆಂಡತಿಯ ಮನೆಗೆ ಬಂದುಬಿಡುತ್ತಿದ್ದ.
ಫಜೀತಿಯೆಂದರೆ, ಅತ್ತೆಯ ಮನೆಯಲ್ಲಿ ಹೊಸದೊಂದು ಬಗೆಯ ಸಂಕಟ ಜೊತೆಯಾಗುತ್ತಿತ್ತು. ‘ಈತ’ ಆಗೊಮ್ಮೆ ಈಗೊಮ್ಮೆ ಅವಕಾಶ ಸಿಕ್ಕರೆ ಅವಳೊಂದಿಗೆ ಸರಸವಾಡಬೇಕು ಎಂಬ ಅವಸರದಲ್ಲಿದ್ದರೆ ಅದಕ್ಕೆ ಅವಕಾಶವೇ ಸಿಗುತ್ತಿರಲಿಲ್ಲ. ಊಟ ಬಡಿಸಲು ಅವಳೊಂದಿಗೆ ಅತ್ತೆಯೂ ಬರುತ್ತಿದ್ದದರಿಂದ ಆಗ ಕೈ ಚಿವುಟಿ ರೋಮಾಂಚನಗೊಳ್ಳುವುದಕ್ಕೆ; ಕಣ್ಣು ಹೊಡೆದು ಖುಷಿ ಪಡುವುದಕ್ಕೆ ಆಗುತ್ತಿರಲಿಲ್ಲ. ಊಟವಾದ ನಂತರ ಹೊರಬಂದು, ಈಗ ಎರಡೇ ನಿಮಿಷದ ಮಟ್ಟಿಗೆ ಕರೆಂಟು ಹೋಗಿಬಿಟ್ಟರೆ ಸಾಕು, ತಬ್ಬಿ ಮುದ್ದಾಡಬಹುದು ಎಂದು ಇಬ್ಬರೂ ಅಂದುಕೊಳ್ಳುತ್ತಿದ್ದರು ನಿಜ. ಆದರೆ ಅವತ್ತು ದರಿದ್ರದ ಕರೆಂಟು ಹೋಗುತ್ತಲೇ ಇರಲಿಲ್ಲ! ಹಾಳಾಗಿ ಹೋಗಲಿ, ಮಲಗುವ ಮುನ್ನವಾದರೂ ಅವಳನ್ನು ತಬ್ಬಿ ಮುದ್ದಾಡಲೇಬೇಕು ಎಂದು ‘ಇವನು’ ಅಂದುಕೊಂಡಿದ್ದಾಗಲೇ- ಹೆಂಡತಿಯ ಅಣ್ಣನೋ, ಮಾವನೋ ಲಗುಬಗೆಯಿಂದ ಬಂದು ಹಾಸಿಗೆ ಹಾಸಿಕೊಡುತ್ತಿದ್ದರು. ‘ಅವಳು’ ಎಲ್ಲವನ್ನೂ ಬಾಗಿಲ ಸಂದಿಯಲ್ಲೇ ನೋಡಿ, ನಕ್ಕು, ಸಾರಿ ಕೇಳಿ, ಗಾಳಿಯಲ್ಲಿ ಹೂಮುತ್ತು ತೇಲಿಬಿಟ್ಟು ಹೋಗಿಬಿಡುತ್ತಿದ್ದಳಿ. ಇಂಥ ಗಡಿಬಿಡಿ, ಸಿಡಿಮಿಡಿ, ಆಸೆ, ಕಾತುರ ಹಾಗೂ ವಿರಹದ ಮಧ್ಯೆಯೇ ಆಷಾಢ ಕಳೆದು ಹೋಗುತ್ತಿತ್ತು.
ಸ್ವಾರಸ್ಯ ಏನೆಂದರೆ- ಈ ಒಂದು ತಿಂಗಳ ಅವಯಲ್ಲಿ ಅವಳಿಗೆ ಇವನ ಮೇಲೆ, ಇವಳಿಗೆ ಅವನ ಮೇಲೆ ‘ಅತೀ’ ಅನ್ನುವಷ್ಟು ಪ್ರೀತಿ ಹುಟ್ಟುತ್ತಿತ್ತು. ಎರಡು ಕುಟುಂಬಗಳ ನಡುವೆ ಇದ್ದ ಸಂಬಂಧದ ಬಂಧ ಗಟ್ಟಿಯಾಗುತ್ತಿತ್ತು!
***
ಹೌದು. ಇದೆಲ್ಲಾ ಹಳೆಯ ಮಧುರ ನೆನಪು. ಈಗ ಆಷಾಢಕ್ಕೆ ಹೆದರುವ ಗಂಡ-ಹೆಂಡಿರಿಲ್ಲ. ‘ಅಯ್ಯೋ, ಆಷಾಢ ಇಲ್ವಾ ನಿಮ್ಗೆ? ಎಂದು ಕೇಳಿದರೆ ಆ ಬೆಡಗಿ ನಕ್ಕು- ‘ಗೊತ್ತಲ್ಲ ನಿಮ್ಗೂ. ಆಷಾಢದಲ್ಲಿ ಅತ್ತೆ-ಸೊಸೆ ಒಂದು ಮನೇಲಿ ಇರಬಾರ್ದಂತೆ. ಗಂಡ-ಹೆಂಡತಿ ಇರಬಹುದಂತೆ! ನಮ್ಮತ್ತೆ ಊರಲಿದ್ದಾರೆ. ಹಾಗಾಗಿ ನಮ್ಗೆ ಆಷಾಢವಿಲ್ಲ’ ಅನ್ನುತ್ತಾಳೆ. ಬೆಂಗಳೂರಿನಲ್ಲೇ ಬದುಕುವ ಜೋಡಿಗಳಂತೂ ಊರಿಗೆ ಹೋಗದೆ, ಅಕ್ಕಪಕ್ಕದ ಏರಿಯಾಗಳಲ್ಲೇ ಇರುವ ಬಂಧುಗಳ ಮನೆ ಸೇರಿಕೊಳ್ಳುತ್ತಾರೆ. ಇನ್ನು ಕೆಲವರು- ಅಯ್ಯೋ ಹೋಗ್ರಿ, ಒಂದಿಡೀ ತಿಂಗಳು ಯಾರು ಒಂಟಿಯಾಗಿ ಬದುಕುತ್ತಾರೆ? ನಮಗೆ ಆಷಾಢವೂ ಬೇಡ, ಗೀಷಾಡವೂ ಬೇಡ’ ಎಂದು ಉತ್ತರ ಕೊಟ್ಟು ದಂಗು ಬಡಿಸುತ್ತಾರೆ. ಒಂದು ವೇಳೆ ಸಂಪ್ರದಾಯದ ನೆಪದಲ್ಲಿ ಆಕೆ ತವರಿಗೆ ಹೋದರೆ, ಎರಡೇ ದಿನಗಳ ನಂತರ ಅವಳ ಪತಿರಾಯರು ಅತ್ತೆ ಮನೆಗೆ ಹೋಗಿಬಿಡುತ್ತಾರೆ. ಒಂದು ರೌಂಡ್ ಸುತ್ತಾಡಿ ಬರೋಣ ಎಂದು ಹೇಳಿ, ಅತ್ತೆಯ ವಿರೋಧಕ್ಕೆ ಗೋಲಿ ಹೊಡೆದು ಹೋಗಿಯೂಬಿಡುತ್ತಾರೆ. ಹೊರಗೆ ಬಂದ ಮೇಲೆ ಇನ್ನೇನಿದೆ? ಪರಸ್ಪರ ಭೇಟಿಯಾಗುತ್ತದೆ. ಬೇಕಿರುವುದೆಲ್ಲ ಲೂಟಿಯಾಗುತ್ತದೆ! ಆಮೇಲೆ, ಏನೂ ನಡೆದೇ ಇಲ್ಲ ಎಂಬಂತೆ ಇಬ್ಬರೂ ಹುಳ್ಳಗೆ ನಗುತ್ತಾ ಮನೆಗೆ ಬರುತ್ತಾರೆ. ಈಗಿನ ದಂಪತಿಯ ಪೈಕಿ ಹೆಚ್ಚಿನವರು ಎರಡು ವರ್ಷದವರೆಗೂ ಮಗು ಬೇಡ ಎಂದು ಮೊದಲೇ ನಿರ್ಧರಿಸುವುದರಿಂದ ಆಷಾಢದಲ್ಲಿ ಒಂದಾದರೆ ಮುಂದೆ ಕಷ್ಟ ಆಗುತ್ತೆ ಎಂಬ ಮಾತೇ ಅರ್ಥ ಕಳೆದುಕೊಂಡಿದೆ.
ಪರಿಣಾಮ ಏನಾಗಿದೆಯೆಂದರೆ, ಈಗ, ಆಷಾಢ ಎಂದರೆ ‘ಅವನಿ(ಳಿ)ಲ್ಲದೆ ಇರಬೇಕಿಲ್ಲ ಎಂಬ ಸಂಕಟವಿಲ್ಲ. ಇಬ್ಬರ ಬಳಿಯೂ ಮೊಬೈಲ್ ಇರುವುದರಿಂದ ಎಸ್ಟೀಡಿ ಫೋನ್ ಮಾಡುವ ಅಗತ್ಯವಿಲ್ಲ. ಪತ್ರ ಬರೆಯುವುದೇ ಇಬ್ಬರಿಗೂ ಮರೆತಿದೆಯಾದ್ದರಿಂದ ಅಕ್ಷರ ಪ್ರೀತಿಯ ರೋಮಾಂಚನ ಕೂಡ ಇಬ್ಬರಿಗೂ ಇಲ್ಲ. ಹೀಗೆ, ಬದಲಾಗಿ ಹೋದ ಕಾಲಮಾನವನ್ನು ಮರೆತು ಹೋಗುತ್ತಿರುವ ಸಂಪ್ರದಾಯವನ್ನು ಕಂಡಾಗ ಅನಿಸುವುದಿಷ್ಟೆ: ಕಾಲಾಯ ತಸ್ಮೈ ನಮಃ

ಮತ್ತೆ ಮಳೆ ಹೊಯುತ್ತಿದೆ, ಎಲ್ಲ ನೆನೆಪಾಗುತ್ತಿದೆ…

ಜೂನ್ 7, 2009

male

ಮಳೆಗಾಲ ಶುರುವಾಗಿದೆ!
‘ಮಳೆ’ಯ ನೆನಪಾದರೆ ಸಾಕು-ತಂಗಾಳಿಯಂಥ ಆಹ್ಲಾದವೊಂದು ಮೈಮನವನ್ನು ಆವರಿಸಿಕೊಳ್ಳುತ್ತದೆ. ಅದರಲ್ಲೂ ದಶಕಗಳ ಹಿಂದೆ ಹಳ್ಳಿಗಳಲ್ಲೇ ತಮ್ಮ ಬಾಲ್ಯ ಕಳೆದವರಿಗಂತೂ-ಮಳೆ ಅಂದಾಕ್ಷಣ ಊರು, ಒಂದಿಡೀ ವಾರ ಕೆಂಪು ನೀರಿನಿಂದಲೇ ತುಂಬಿರುತ್ತಿದ್ದ ಅಲ್ಲಿನ ಕೆರೆ ನೆನಪಾಗುತ್ತದೆ. ಹಾಗೆಯೇ, ಹೊರಗೆ ಜುರ್ರೋ ಎಂದು ಮಳೆ ಸುರಿಯುತ್ತಿದ್ದರೆ- ಇದ್ಯಾಕೋ ಛಳಿಛಳಿ ಆಗ್ತಾ ಇದೆಯಲ್ಲ ಎನ್ನುತ್ತಲೇ ಬೀಡಿ ಹಚ್ಚಿಕೊಂಡು ಬೆಚ್ಚಗಾಗುತ್ತಿದ್ದ ಅಪ್ಪ/ಚಿಕ್ಕಪ್ಪನ ಚಿತ್ರ ಕಣ್ಮುಂದೆ ಬರುತ್ತದೆ ಮತ್ತು ಇದೆಲ್ಲಕ್ಕಿಂತ ಮುಖ್ಯವಾಗಿ ಮಳೆಗೆ ಸಂಬಂಸಿದಂತೆ, ಅಪ್ಪ-ಅಮ್ಮ, ತಾತ-ಅಜ್ಜಿಯವರು ಹೇಳಿದ್ದ ‘ಚಂದಮಾಮ’ದ ಕಥೆಗಳಷ್ಟೇ ಮಜದಿಂದ ಕೂಡಿದ್ದ ಕಥೆಗಳು ನೆನಪಾಗುತ್ತಿವೆ. ಅಂಥ ಒಂದೆರಡು ಕತೆಗಳಿವೆ ಇಲ್ಲಿ; ಅವುಗಳನ್ನು ಈ ಹಿಂದೆ ಕೇಳಿರದಿದ್ದರೆ- ಈಗ ಓದಿ ಖುಷಿಪಡಿ. ಈಗಾಗಲೇ ಕೇಳಿದ್ದರೆ-ಬಾಲ್ಯವನ್ನು ಮತ್ತೆ ನೆನಪು ಮಾಡಿಕೊಂಡು ಇನ್ನಷ್ಟು ಖುಷಿಪಡಿ!
ತುಂಬ ಸಂದರ್ಭದಲ್ಲಿ ಈಗಿನಂತೆಯೇ, ಹೊತ್ತು ಗೊತ್ತಿಲ್ಲದೆ ಮಳೆ ಬರುತ್ತಿತ್ತು. ಆಗೆಲ್ಲ ಅವ್ವ ನಡುಮನೆಯಲ್ಲಿ ಕುಳಿತು, ಅಲ್ಲಲ್ಲಿ ಮಳೆ ಸೋರುತ್ತಿದ್ದ ಜಾಗಕ್ಕೆ ಪಾತ್ರಗಳನ್ನಿಟ್ಟು ಹೇಳುತ್ತಿದ್ದಳು: ‘ತುಂಬ ವರ್ಷಗಳ ಹಿಂದೆ ಆಕಾಶ, ತುಂಬ ಹತ್ತಿರದಲ್ಲೇ, ಅಂದರೆ ತೆಂಗಿನಮರದ ಎತ್ತರದಲ್ಲೇ ಇತ್ತಂತೆ. ಆ ದಿನಗಳಲ್ಲಿ ಮಳೆ ಬೇಕು ಅನ್ನಿಸಿದರೆ, ಜನ ದೊಡ್ಡದೊಂದು ಕೋಲು ತಯಾರಿಸಿ, ಅದನ್ನು ಮೋಡಕ್ಕೆ ಚುಚ್ಚಿ ಮಳೆ ಬರಿಸಿಕೊಳ್ತಾ ಇದ್ರಂತೆ! (?!) ಒಂದು ಸಂದರ್ಭದಲ್ಲಿ ಘಟವಾಣಿ ಹೆಂಗಸೊಬ್ಬಳು ಭತ್ತ ಕುಟ್ಟುತ್ತಿದ್ದಳಂತೆ. ಆ ಸಂದರ್ಭದಲ್ಲಿ ಒಮ್ಮೆ ಅವಳ ಒನಕೆ ಮೇಲಿಂದ ಮೇಲೆ ಮೋಡಕ್ಕೆ ತಾಕಿತಂತೆ. ಇದರಿಂದ ಸಿಟ್ಟಿಗೆದ್ದ ಆಕೆ- ‘ನಿನ್ ಮನೆ ಹಾಳಾಗ. ಯಾಕೆ ಇಲ್ಲಿದ್ದೀಯ? ಹೋಗ್ಬಾರ್ದಾ ಮೇಲಕ್ಕೆ’ ಅಂದಳಂತೆ! ತಕ್ಷಣವೇ ಮೋಡ- ಮುನಿಸಿಕೊಂಡು ಮೇಲೆ ಮೇಲೆ ಹೋಗ್ತಾನೇ ಇತ್ತಂತೆ. ಅದೇ ವೇಳೆಗೆ ಆ ದಾರಿಯಲ್ಲಿ ಬರುತ್ತಿದ್ದ ದಾಸಯ್ಯನೊಬ್ಬ- ‘ಅಯ್ಯಯ್ಯೋ, ಒಬ್ಬನೇ ಹೋಗ್ತಾ ಇದೀಯಲ್ಲ? ನಿಂತ್ಕೊ ನಿಂತ್ಕೊ, ನಾನೂ ಬರ್ತೀನಿ ಜತೆಗೆ’ ಅಂದನಂತೆ. ತಕ್ಷಣವೇ ಮೋಡ ಅಲ್ಲಿಯೇ ನಿಂತುಕೊಂಡಿತಂತೆ. ಅವತ್ತಿಂದ ಆಕಾಶ ಅದೇ ಎತ್ತರದಲ್ಲಿದೆ! ಇದು, ಅಮ್ಮಂದಿರು ಹೇಳುತ್ತಿದ್ದ ಕತೆ.
ಈಗ ತೆಂಗಿನ ಮರದ ಎತ್ತರದಲ್ಲೇ ಆಕಾಶವಿತ್ತು ಎಂಬುದನ್ನು ನೆನಪು ಮಾಡಿಕೊಂಡರೆ- ಬೆರಗೂ, ಭಯವೂ, ವಿಸ್ಮಯವೂ ಒಮ್ಮೆಗೇ ಆಗುತ್ತದೆ. ಆದರೆ, ಬಾಲ್ಯದಲ್ಲಿ ಹಾಗೆಂದೂ ಅನ್ನಿಸಲೇ ಇಲ್ಲ!
ಹೀಗೆ, ಅಮ್ಮನ ಕಥೆ ಸಾಗುತ್ತಿದ್ದ ಸಂದರ್ಭದಲ್ಲೇ ಗೋಡೆ, ಕಿಟಕಿ, ಮಾಳಿಗೆಯ ಕಿಂಡಿಯ ಮಧ್ಯೆ ಫಳಫಳಿಸುವ ಮಿಂಚು ಕಾಣಿಸುತ್ತಿತ್ತು. ಹಿಂದೆಯೇ ಭೂಮಂಡಲವೇ ನಡುಗಿ ಹೋಗಬೇಕು- ಅಂಥ ದೊಂದು ಭಾರೀ ಸದ್ದಿನ ಸಿಡಿಲು ಮೊರೆಯು ತ್ತಿತ್ತು. ಆಗ ಅಮ್ಮ ಹೇಳುತ್ತಿದ್ದಳು: ‘ಅರ್ಜುನ ಬಾಣ ಬಿಡ್ತಾ ಇದಾನೆ. ಆ ಬಾಣದ ಸದ್ದೇ ಈ ಸಿಡಿಲು. ಅವನು ಬಾಣ ಬಿಡಲು ಎದ್ದು ನಿಂತ ತಕ್ಷಣ ಅವನ ತಾಯಿ ಕುಂತಿ ದೇವಿ- ‘ಹೆಂಗಸರು, ಮಕ್ಕಳು ಇರ್ತಾರೆ ಮಗೂ. ದೊಡ್ಡ ಸದ್ದು ಮಾಡದಂಥ ಬಾಣ ಬಿಡು’ ಎಂದು ಬುದ್ಧಿಮಾತು ಹೇಳ್ತಾಳೆ. ಆದ್ರೂ ಅರ್ಜುನ ಕೇಳೋದಿಲ್ಲ. ಅವನು ಬಿಲ್ಲಿನ ದಾರವನ್ನು ಎಳೀತಾನಲ್ಲ? ಆಗ ಉಂಟಾ ಗುವ ಸದ್ದೇ ಗುಡುಗು. ಬಾಣ ಬಿಡ್ತಾನೆ ನೋಡಿ- ಅದು ಸಿಡಿಲು!’ (ಈಗ ಯೋಚಿಸಿ ದರೆ- ಅಂಥ ಬಿರುಮಳೆಯ ಮಧ್ಯೆಯೇ ಬಾಣ ಬಿಡುವ ಹೀಗ ಬಾಣ ಬಿಟ್ಟು ಮರವನ್ನೋ, ಮನುಷ್ಯನನ್ನೋ ಸುಡುವ ಅರ್ಜೆಂಟು ಅರ್ಜುನನಿಗಾದರೂ ಏನಿತ್ತು ಅನಿಸುತ್ತದೆ.)
ಸಿಡಿಲಿನ ಕಥೆ ಹೇಳುತ್ತಲೇ ತಕ್ಷಣವೇ ಕುಡುಗೋಲನ್ನೋ, ಕತ್ತಿಯನ್ನೋ ಬಾಗಿಲಿನ ಮುಂದೆ ಎಸೆಯುವಂತೆ ಹೇಳುತ್ತಿದ್ದಳು ಅಮ್ಮ. ಅದು ಸಿಡಿಲಿನಿಂದ ಮನೆಯನ್ನು ಸಂರಕ್ಷಿಸಿಕೊಳ್ಳಲು ಇದ್ದ ಉಪಾಯ. ಮಕ್ಕಳು ತಕ್ಷಣವೇ ಮನೆಯ ಮುಂದೊಂದು, ಹಿಂದೊಂದು ಕುಡುಗೋಲನ್ನು ಎಸೆದು ಬಂದು, ಕಬ್ಬಿಣದ ವಸ್ತುವಿಗೆ ಸಿಡಿಲು ಹೊಡೆಯಲ್ಲ ಅನ್ನೋದು ನಿಜವೇನಮ್ಮ ಎಂದು ಮತ್ತೆ ಮತ್ತೆ ಅನುಮಾನದಿಂದ ಕೇಳಿದರೆ- ‘ಶ್ರವಣ ಬೆಳಗೊಳದಲ್ಲಿ ಗೊಮ್ಮಟೇಶ್ವರನಿಗೆ ಸಿಡಿಲು ಹೊಡೆಯದಿರಲಿ ಎಂದು ನೆತ್ತಿಯ ಮೇಲೆ ಸಲಾಕೆ ಹೊಡೆದಿದ್ದಾರೆ ಗೊತ್ತಾ?’ ಅನ್ನುತ್ತಿದ್ದಳು ಅಮ್ಮ!
ಮಳೆಗಾಲದ ಇನ್ನೊಂದು ಮಧುರ ನೆನಪೆಂದರೆ-ಕಪ್ಪೆಗಳ ವಟರ್ವಟರ್ ಸದ್ದು! ಮಳೆ ಹನಿಯುವ ಕ್ಷಣದವರೆಗೂ ಕಣ್ಣಿಗೆ ಬೀಳದಿದ್ದ ಕಪ್ಪೆಗಳು, ಮಳೆ ಬಿದ್ದ ಅರ್ಧಗಂಟೆಯೊಳಗೆ ಮನೆಯ ಆಚೀಚೆಯಿದ್ದ ಹೊಂಡಗಳಲ್ಲಿ ತುಂಬಿಕೊಂಡು ‘ಭಜನೆ’ ಆರಂಭಿಸುತ್ತಿದ್ದವು! ಅದಕ್ಕೆ ಹಿನ್ನೆಲೆಯಾಗಿಯೂ ಒಂದು ಕತೆ ಇರುತ್ತಿತ್ತು. ಅದು ಹೀಗೆ: ‘ಒಂದೆರಡಲ್ಲ, ಮೂರು ತಿಂಗಳಿಗೂ ಹೆಚ್ಚು ಅವಯ ಬೇಸಿಗೆಯ ಬಿಸಿಲಿಂದ ಕಂಗಾಲಾದ ಕಪ್ಪೆಗಳು ಮೇಲಿಂದ ಮೇಲೆ ಮಳೆಗಾಗಿ ಪ್ರಾರ್ಥಿಸುತ್ತವಂತೆ. ಕಡೆಗೊಮ್ಮೆ ಮಳೆಬಿದ್ದು ಹೊಂಡಗಳೆಲ್ಲ ತುಂಬಿಕೊಂಡಾಗ ಅದರೊಳಗೆ ಖುಷಿಯಿಂದ ಈಜು ಹೊಡೆದು, ಮುಗಿಲಿಂದ ಬಿದ್ದ ಹೊಸನೀರು ಕುಡಿದು, ಕಡೆಗೊಮ್ಮೆ ಮಳೆರಾಯನನ್ನು ಸ್ತುತಿಸಲು ಅಹೋರಾತ್ರಿ ‘ಸಂಗೀತ ಕಾರ್ಯಕ್ರಮ’ ನಡೆಸುತ್ತವಂತೆ! ಅದರ ಪರಿಣಾಮವೇ ಇಡೀ ರಾತ್ರಿ ವಟರ್ ವಟರ್!!!
* * *
ಒಮ್ಮೊಮ್ಮೆ ಏನಾಗುತ್ತಿತ್ತೆಂದರೆ, ಬೆಳ್ಳಂಬೆಳಗಿನಿಂದಲೇ ಸೋನೆ ಮಳೆ ಶುರುವಾಗು ತ್ತಿತ್ತು. ಅದರ ಮಧ್ಯೆಯೇ ಶಾಲೆ ತಲುಪಿಕೊಂಡರೆ- ಮಳೆಯ ಕಾರಣಕ್ಕೆ ದೂರದ ಊರಿಂದ ಬರುತ್ತಿದ್ದ ಶಿಕ್ಷಕರೇ ‘ಚಕ್ಕರ್’ ಹೊಡೆದಿ ರುತ್ತಿದ್ದರು. ಇನ್ನು ಕೆಲವೊಂದು ಸಂದರ್ಭಗಳಲ್ಲಿ ಮೇಸ್ಟ್ರು ಬರುವುದು ಬರೀ ಅರ್ಧಗಂಟೆ ತಡವಾದರೆ, ಓಹ್ ಮೇಸ್ಟ್ರು ಬರುವುದಿಲ್ಲ ಎಂದು ಅಂದಾಜು ಮಾಡಿಕೊಂಡು ಹುಡುಗರೇ ಮನೆಗೆ ಪೇರಿ ಕೇಳುತ್ತಿದ್ದರು! ಹಾಗೆ ಮನೆಗೆ ಹೋಗುವ ಹಾದಿಯಲ್ಲೇ ಆಗಷ್ಟೇ ಹರಿದು ಬರುತ್ತಿದ್ದ ಮಳೆ ನೀರಿನಲ್ಲಿ ಎಕ್ಸ್ರ್ಸೈಜ್ ಹಾಳೆಯಿಂದ ಮಾಡಿದ ಕಾಗದದ ದೋಣಿ ಮಾಡಿ ತೇಲಿ ಬಿಟ್ಟು; ಮಳೆ ನೀರಿನ ಕೊಚ್ಚೆಯಲ್ಲಿ ಬೇಕೆಂದೇ ಕಾಲು ಮುಳುಗಿಸಿ, ಆ ಸಂದರ್ಭದಲ್ಲೇ ಮೈಮೇಲೆ ಕೆಸರು ಹಾರಿಸಿದ ಸಹಪಾಠಿಯ ಮೇಲೆ ಮನೆಯಲ್ಲಿ ಒಮ್ಮೆ, ಶಾಲೆಯಲ್ಲಿ ಮತ್ತೊಮ್ಮೆ ಚಾಡಿ ಹೇಳಿ, ಅದೇ ಕಾರಣಕ್ಕೆ ಗೆಳೆಯ/ಗೆಳತಿಯೊಂದಿಗೆ ಕೋಳಿ ಜಗಳವನ್ನೂ ಆಡಿ…
ಹೌದಲ್ಲವಾ? ದಶಕಗಳ ಹಿಂದೆ, ಶಾಲೆಗೆ ಹೋಗುತ್ತಿದ್ದ ಯಾರೊಬ್ಬರ ಬಳಿಯೂ ಛತ್ರಿ ಇರುತ್ತಿರಲಿಲ್ಲ. ಹಾಗಾಗಿ ಮಳೆ ಬಂದ ತಕ್ಷಣ ಎಲ್ಲರೂ ಪುಸ್ತಕಗಳನ್ನೇ ತಲೆಯ ಮೇಲಿಟ್ಟುಕೊಂಡು ಮನೆಯ ಕಡೆಗೆ ಅಥವಾ ಶಾಲೆಯ ಕಡೆಗೆ ಪೇರಿ ಕೇಳುತ್ತಿದ್ದರು. ಒಂದು ವೇಳೆ ಬಿರುಮಳೆಯ ಕಾರಣದಿಂದ ಪುಸ್ತಕವೆಲ್ಲ ತೊಯ್ದು ತೊಪ್ಪೆಯಾದರೂ ಅಂಥ ಸಂಕಟವೇನೂ ಯಾರಿಗೂ ಆಗುತ್ತಿರಲಿಲ್ಲ. ಮಕ್ಕಳು ಮನೆ ತಲುಪಿದ ಮರುಗಳಿಗೆಯೇ ರಪರಪನೆ ಸದ್ದು ಮಾಡುತ್ತಾ ಆಲಿಕಲ್ಲು ಬಿದ್ದರೆ, ಅದ್ಯಾವ ಮಾಯದಲ್ಲೋ ಬೀದಿಗೆ ಹೋಗಿ ಐದಾರು ಆಲಿಕಲ್ಲು ತಂದು- ಬೇಗ ‘ಆಆಆಆ ….’ ಅನ್ನು. ಆಲಿಕಲ್ಲು ನುಂಗು. ಇದು ತಿಂದ್ರೆ ಹಲ್ಲುಗಟ್ಟಿಯಾಗ್ತವೆ ಅನ್ನುತ್ತಿದ್ದಳು ಅವ್ವ.
ಹೀಗೆ ಮಳೆ ಬಂದ ಸಂದರ್ಭದಲ್ಲಿ ಒಂಟಿಯಾಗಿ ಹಳ್ಳವನ್ನೂ ದಾಟಬೇಕಾಗಿ ಬಂದರೆ, ತಕ್ಷಣವೇ – ‘ಅಲ್ಲಿ ದೆವ್ವಗಳಿವೆಯಂತೆ’ ಎಂದು ಯಾರೋ, ಎಂದೋ ಹೇಳಿದ್ದ ಮಾತು ನೆನಪಾಗುತ್ತಿತ್ತು. ಮರುಕ್ಷಣವೇ ಆ ಮಳೆಯ ಮಧ್ಯೆಯೂ ಮೈ ಬೆವರುತ್ತಿತ್ತು. ತಕ್ಷಣ ಮನೆದೇವರ ಹೆಸರನ್ನು ಜಪಿಸುತ್ತ ಜೈ ಹನುಮಾನ್, ಜೈರಾಮ್, ಜೈ ಚಾಮುಂಡೇ ಶ್ವರಿ… ಎಂದೆಲ್ಲ ಹೇಳಿಕೊಂಡರೂ ‘ದೆವ್ವ’ದ ಭಯ ಹೋಗುತ್ತಲೇ ಇರಲಿಲ್ಲ!
ಮತ್ತೆ ಕೆಲವೊಂದು ಸಂದರ್ಭಗಳಲ್ಲಿ ಸ್ಕೂಲಿಂದ ಬಂದು ಮೇಯಲು ಹೋಗಿರುತ್ತಿದ್ದ ಜಾನುವಾರುಗಳನ್ನು ಮನೆಗೆ ಹೊಡೆದುಕೊಂಡು ಬರಲು ಹೋದರೆ, ಆ ವೇಳೆಗೇ ಮಳೆ ಬಂದು ಬಿಡುತ್ತಿತ್ತು. ಮಳೆಗೆ ಬೆದರಿ ಕುರಿ, ಮೇಕೆ, ದನಗಳು ಮನೆಯ ಕಡೆಗೆ ಪೇರಿ ಕಿತ್ತರೆ, ಎಮ್ಮೆಗಳು ಸೀದಾ ಹೋಗಿ ಕೆರೆಯ ನೀರೊಳಗೆ ಮಲಗಿಬಿಡುತ್ತಿದ್ದವು! ಕೆರೆಯ ಈಚೆ ದಡದಿಂದ ಅದೆಷ್ಟೇ ಗದರಿಸಿದರೂ, ಅದೆಷ್ಟೇ ಕಲ್ಲು ಹೊಡೆದರೂ ಅವು ಏಳುತ್ತಲೇ ಇರಲಿಲ್ಲ!
ಇನ್ನು ಕೆಲ ಬಾರಿ ಆ ಭೋರ್ಗರೆವ ಮಳೆಯ ಮಧ್ಯೆ ಕೂಡ ಎಮ್ಮೆಗಳು ಹೆಜ್ಜೆಯ ಮೇಲೆ ಹೆಜ್ಜೆ ಇಡುತ್ತಾ ಅತೀ ನಿಧಾನವಾಗಿ ನಡೆಯುತ್ತಿದ್ದವು. ಕಡೆಗೂ ಅವುಗಳೊಂದಿಗೆ ಮನೆ ತಲುಪುವ ವೇಳೆಗೆ ಮಳೆಗೆ ರಕ್ಷಣೆ ಕೊಡಲೆಂದು ಬಯ್ದಿರುತ್ತಿದ್ದ ಗೋಣಿ ಚೀಲದಿಂದ ಮಳೆ ನೀರು, ಧಾರೆಯಾಗಿ ಬೀಳುತ್ತಿತ್ತು. ಮಳೆಯಲ್ಲಿ ನೆಂದು ಪಜ್ಜಿಯಾಗಿ ಮನೆ ತಲುಪಿದ ಮಕ್ಕಳನ್ನು ಅಮ್ಮಂದಿರು ಒಳಗೆ ಕರೆದುಕೊಂಡು ಸೆರಗಿನಿಂದ ತಲೆಯೊರಸಿ, ಒಲೆ ಮುಂದೆ ಕೂರಿಸಿ- ‘ಇಲ್ಲೇ ಸ್ವಲ್ಪ ಹೊತ್ತು ಇರು. ಮೈ ಬಿಸಿಯಾಗ್ಲಿ’ ಎನ್ನುತ್ತಿದ್ದರು. ನಂತರ, ಸರಭರನೆ ಹೊರಗೆ ಬಂದು, ಒಮ್ಮೆ ಎರಡೂ ಕೈಗಳಿಂದ ಲಟಿಕೆ ಮುರಿದು- ‘ಅದ್ಯಾವ ದಯ್ಯದ ಮಳೆಯೋ, ಇದರ ಮನೆ ಹಾಳಾಗ (?!) ನನ್ನ ಮಗು ಪೂರ್ತಿ ನೆಂದು ಹೋದ್ರೂ ಬಿಡಲಿಲ್ವಲ್ಲ? ಇದಕ್ಕೇನು ಕೇಡುಗಾಲವೋ ಕಾಣೆ’ ಎಂದು ಬೈಯುತ್ತಿದ್ದರು! ಒಂದು ವೇಳೆ ಮಳೇಲಿ ನೆಂದ ಕಾರಣಕ್ಕೆ ಜ್ವರವೋ, ತಲೆನೋವೋ ಬಂದರೆ- ಹಣೆ, ಕಿವಿಯ ಸಂದು, ಕುತ್ತಿಗೆಯ ಸುತ್ತಲೂ ಅಮೃತಾಂಜನ ತಿಕ್ಕಿ, ಕೌದಿ ಹೊದಿಸಿ ಬೆಚ್ಚಗೆ ಮಲಗಿಸುತ್ತಿದ್ದರು. ಮಧ್ಯೆ ಮಧ್ಯೆ ಹಣೆ ಮುಟ್ಟಿ ಪರೀಕ್ಷಿಸುತ್ತಾ- ಈಗ ಪರವಾಗಿಲ್ಲ. ಜ್ವರ ಬಿಟ್ಟಿದೆ, ತಲೆನೋವೂ ಹೋಗಿದೆ’ ಎಂದು ತಮಗೆ ತಾವೇ ಹೇಳಿಕೊಂಡು ಹಣೆಗೊಂದು ಮುತ್ತಿಡುತ್ತಿದ್ದರು.
ಮಳೆ ಅಂದಾಕ್ಷಣ ಎಲ್ಲರ ಕಣ್ಮುಂದೆಯೂ ‘ಹಾಗೇ ಸುಮ್ಮನೆ’ ಸುಳಿದು ಹೋಗುವ ಇನ್ನೊಂದು ಚಿತ್ರ- ಛತ್ರಿ ಹಿಡಿದು, ಆ ಮಳೆಯಲ್ಲೇ ಸಂಭ್ರಮದಿಂದ ನಡೆದು ಹೋಗುವ ಪ್ರೇಮಿಗಳದು. ರಸ್ತೆಯಲ್ಲಿ ಇಡೀ ಅರ್ಧಗಂಟೆ, ಅವನೊಂದಿಗೆ ಕೈ ಕೈ ಹಿಡಿದು, ಮೈಗೆ ಮೈ ತಾಗಿಸಿಕೊಂಡು, ಯಾವುದೋ ಹಳೆಯ ಹಾಡು ಗುನುಗುತ್ತಾ ಅಥವಾ ಅವನಿಗಷ್ಟೇ ಕೇಳಿಸುವಂತೆ ಪಿಸುಮಾತನಾಡುತ್ತಾ ನಡೆದುಹೋಗಬೇಕು. ಆಗೊಮ್ಮೆ ಈಗೊಮ್ಮೆ ಮೈತಾಗುವ ಅವನ ಬಿಸಿಯುಸಿರಿಂದ ಖುಷಿಯಾಗಬೇಕು. ಅವನ ಕಣ್ಣೊಳಗೆ ಇಣುಕಿ ನೋಡಿ, ಕಣ್ಣು ಹೊಡೆಯಬೇಕು, ಹೇಗಿದ್ರೂ ಸುತ್ತಮುತ್ತ ಯಾರೂ ಇರಲ್ಲವಲ್ಲ? ಅದೇ ನೆಪದಲ್ಲಿ ಅವನಿಗೊಂದು ಮುತ್ತಿಡಬೇಕು ಎಂಬ ಹಪಹಪಿ ಪ್ರೀತಿಯ ಹೊಳಗೆ ಬಿದ್ದ ಅಷ್ಟೂ ಹುಡುಗಿಯರಿಗಿರುತ್ತದೆ. (ಇಂಥದೇ ಭಾವ ಹುಡುಗರಿಗೂ ಇರುತ್ತದೆ!) ಹಾಗೆ, ಅಂದುಕೊಂಡ ಕನಸೆಲ್ಲ ನನಸಾಗುತ್ತಿದ್ದುದು ಮಳೆ ಬಂದ ಸಂದರ್ಭದಲ್ಲೇ!
ಹೀಗೆ ಮಳೆ ಬಂದ ಸಂದರ್ಭದಲ್ಲಿ ಈ ಪ್ರೇಮಿಗಳ ಬಳಿ ಇರುತ್ತಿದ್ದುದು ಒಂದೇ ಛತ್ರಿ. ಒಂದಿಷ್ಟು ಏಕಾಂತ ಬೇಕೆಂದು ಮೊದಲೇ ಬಯಸಿದ್ದ ಇಬ್ಬರೂ ಕೈ ಕೈ ಹಿಡಿದುಕೊಂಡು ರಸ್ತೆಗಿಳಿದು, ತುಂಟಾಟಕ್ಕೆ, ಸಣ್ಣ ಜಗಳಕ್ಕೆ, ರವಷ್ಟು ಪೋಲಿತನಕ್ಕೆ ನಿಂತರೆಂದರೆ, ಅದನ್ನು ಕಂಡು ಮಳೆಯೆಂಬ ಮಳೆಯೂ ಬೆಚ್ಚಗಾಗುತ್ತಿತ್ತು. ಅವರು ಇನ್ನಷ್ಟು ಹೊತ್ತು ಜತೆ ಜತೆಗೇ ನಡೆಯಲಿ ಎಂಬ ಮಹದಾಸೆಯಿಂದ ಹನಿ ಸುರಿಸುತ್ತಿತ್ತು…
* * *
ಹೌದು. ಆಗೆಲ್ಲ ಮಳೆ ಶುರುವಾದರೆ ಸಾಕು, ಮಕ್ಕಳೆಲ್ಲ ರಾಗವಾಗಿ- ‘ಹುಯ್ಯೋ ಹುಯ್ಯೋ ಮಳೆರಾಯ ಹೂವಿನ ತೋಟಕೆ ನೀರಿಲ್ಲ/ಬಾರೋ ಬಾರೋ ಮಳೆರಾಯ ಬಾಳೆಯ ಗಿಡಕೆ ನೀರಿಲ್ಲ’ ಎಂದು ಹಾಡುತ್ತಿದ್ದರು. ಅಮ್ಮನ ಸೀರೆಯ ಸೆರಗೊಳಗೆ ಬೆಚ್ಚಗೆ ಮಲಗಿಕೊಂಡು ಇಡೀ ರಾತ್ರಿ ಸುರಿಯುತ್ತಿದ್ದ ಮಳೆ ಸದ್ದು ಕೇಳುತ್ತಿದ್ದರು. ಉಹುಂ, ಈಗ ಆ ಸಂಭ್ರಮವಿಲ್ಲ. ಹಳ್ಳಿಗಳ ಶಾಲೆಗಳಲ್ಲಿ ಈಗ ಹೆಚ್ಚಿನ ಮಕ್ಕಳಿಲ್ಲ. ಇರುವ ಮಕ್ಕಳನ್ನು ಕರೆದೊಯ್ಯಲು ಈಗ ಆಟೊಗಳಿವೆ. ಹಾಗಾಗಿ ಮಕ್ಕಳಿಗೆ ಮಳೆಯಲ್ಲಿ ನೆನೆವ ಸೌಭಾಗ್ಯವಿಲ್ಲ. ದೆವ್ವದ ಹೆದರಿಕೆಯಿಲ್ಲ. ಸಿಡಿಲಿನ ಕತೆ ಗೊತ್ತಿಲ್ಲ. ಹಳ್ಳಿಯ ಶಿಕ್ಷಕರೂ ಈಗ ರೈನ್ಕೋಟ್ ಧರಿಸಿ ಬೈಕ್ನಲ್ಲಿ ಬರುವುದರಿಂದ ಅವರು ಚಕ್ಕರ್ ಹೊಡೆವ ಸಂಭವವೂ ಇಲ್ಲ! ಮನೆಯ ಹಿಂಬದಿಯಿದ್ದ ಹೊಂಡ, ಊರಿನಾಚೆಗಿದ್ದ ಕೆರೆ ಏಕಕಾಲಕ್ಕೆ ಕಣ್ಮರೆಯಾಗಿರುವುದರಿಂದ ಕಪ್ಪೆಗಳ ಸಂಗೀತವೂ ಕೇಳಿಸುತ್ತಿಲ್ಲ.
ಇನ್ನು, ಬೆಂಗಳೂರಿನ ಮಳೆಗಾಲದ ಬಗ್ಗೆಯಂತೂ ಹೇಳುವುದೇ ಬೇಡ. ಇಲ್ಲಿ ಮಳೆ ಶುರುವಾದರೆ, ಮಕ್ಕಳಿರಲಿ, ದೊಡ್ಡವರಿಗೂ ಕೂಡ ಹೊರಗೆ ಹೋಗಲು ಭಯ. ಮಳೆ ನೀರಲ್ಲಿ ಸುಮ್ಮನೇ ಕಾಲಿಟ್ಟರೂ ಕೊಚ್ಚಿ ಹೋಗುವ ಭೀತಿ….
ಇದನ್ನೆಲ್ಲ ನೋಡಿದರೆ, ನಾವೆಲ್ಲ ಏನೋ ಬಹುಮುಖ್ಯವಾದುದನ್ನು ಕಳೆದುಕೊಂಡ ಸಂಕಟದ ಭಾವವೊಂದು ಮತ್ತೆ ಮತ್ತೆ ಕೈ ಜಗ್ಗಿದಂತಾಗುತ್ತದೆ; ಅಲ್ಲವೇ?

ಆ ಅಪ್ರತಿಮ ಆಟಗಾರ ಅಬ್ಭೇಪಾರಿಯಂತೆ ಸತ್ತ!

ಮೇ 5, 2009

dhyan

ಅತ್ತ ದಕ್ಷಿಣ ಆಫ್ರಿಕಾದಲ್ಲಿ ಐಪಿಎಲ್ ಪಂದ್ಯಾವಳಿಗಳ ಅಬ್ಬರ ಜೋರಾಗಿದೆ. ಬೌಂಡರಿ ಹೊಡೆದಿದ್ದಕ್ಕೆ, ಸಿಕ್ಸರ್ ಸಿಡಿಸಿದ್ದಕ್ಕೆ, ಕ್ಯಾಚ್ ಹಿಡಿದಿದ್ದಕ್ಕೆ ವಿಕೆಟ್ ಪಡೆದಿದ್ದಕ್ಕೆ, ರನೌಟ್ ಮಾಡಿದ್ದಕ್ಕೆ, ಚನ್ನಾಗಿ ಆಡಿದ್ದಕ್ಕೆ ಮತ್ತು ಆಡದೇ ಇದ್ದುದಕ್ಕೆ ಕೂಡ ಆಟಗಾರರು ಲಕ್ಷ ಲಕ್ಷ ಸಂಭಾವನೆ ಪಡೆಯುತ್ತಿದ್ದಾರೆ. ಈ ಆಟ ನೇರ ಪ್ರಸಾರದ ನಡುವೆಯೇ ಬಂದು ಹೋಗುವ ಜಾಹೀರಾತುಗಳಲ್ಲಿ ಕೂಡ ಅದೇ ಆಟಗಾರರ ಆಟ, ಓಡಾಟ, ಮೆರೆದಾಟ! ಅದನ್ನು ಕಂಡಾಗಲೆಲ್ಲ ಈಗಿನ ಅದೆಷ್ಟೋ ಕ್ರೀಡಾಪಟುಗಳ ತಿಂಗಳ ಸಂಪಾದನೆ, ಕೋಟಿಗಳ ಲೆಕ್ಕದಲ್ಲಿರುತ್ತದೆ ಎಂಬ ಸರಳ ಸತ್ಯ ಎಂಥ ಪೆದ್ದನಿಗೂ ಅರ್ಥವಾಗಿಬಿಡುತ್ತದೆ.
ತಿಂಗಳ ಹಿಂದೆ, ಅಂದರೆ ಐಪಿಎಲ್ ಪಂದ್ಯಾವಳಿಗಳು ಆರಂಭವಾಗುವ ಮೊದಲು, ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಒಂದು ಸಂವಾದದಲ್ಲಿ ಭಾಗವಹಿಸಿದ್ದರು. ‘ಆಟಗಾರರು ಕೋಟಿ ಕೋಟಿಗಳಿಗೆ ತಮ್ಮನ್ನು ಮಾರಿಕೊಳ್ಳುವುದು ಸರಿಯೇ?’ ಎಂಬ ಪ್ರಶ್ನೆಯೊಂದು ಅವರತ್ತ ತೂರಿ ಬಂತು. ಫಿಲ್ಟರ್ ಲೆಸ್ ಮಾತುಗಳಿಗೆ ಹೆಸರಾದ ಧೋನಿ ತಕ್ಷಣವೇ- ‘ವಯಸ್ಸಿದ್ದಾಗಲೇ ಸಾಯುವವರೆಗೂ ಆಗುವಷ್ಟು ಕಾಸು ಮಾಡಿಕೊಳ್ಳುವುದು ಎಲ್ಲ ರೀತಿಯಿಂದಲೂ ಸರಿ. ಯಾಕೆಂದರೆ, ನಿವೃತ್ತಿಯ ನಂತರ ಆಟಗಾರರನ್ನು ಎಲ್ಲರೂ ನಿರ್ಲಕ್ಷಿಸುತ್ತಾರೆ. ಮರೆತೇಬಿಡುತ್ತಾರೆ. ಅವರ ಕಷ್ಟ-ಸುಖವನ್ನು ಯಾರೂ ಕೇಳುವುದಿಲ್ಲ. ಹಾಗಾಗಿ, ಈಗಿನ ಆಟಗಾರರು ಕಾಸು ಮಾಡಿಕೊಳ್ತಾ ಇರೋದೇ ಸರಿ’ ಅಂದರು!
ಧೋನಿ ಹೇಳಿದ ಮಾತು ಸರಿಯೋ ತಪ್ಪೋ ಎಂಬುದರ ಚರ್ಚೆ ಇಲ್ಲಿ ಅನಗತ್ಯ. ಆದರೆ, ಒಬ್ಬ ಆಟಗಾರ, ಅದೆಷ್ಟೇ ಜನಪ್ರಿಯನಾಗಿರಲಿ, ಆತ ಕ್ರೀಡೆಯಿಂದ ನಿವೃತ್ತಿ ಪಡೆದ ಮರುದಿನದಿಂದಲೇ ಭಾರತದಂಥ ‘ಬಡಾ’ ರಾಷ್ಟ್ರದಲ್ಲಿ ಆತನನ್ನು ಮರೆಯಲಾಗುತ್ತದೆ. ನಿರ್ಲಕ್ಷಿಸಲಾಗುತ್ತದೆ ಎಂಬುದಂತೂ ಕಟು ಸತ್ಯ. ಈ ಮಾತಿಗೆ ಒಂದು ಉದಾಹರಣೆಯೇ-ರೂಪಸಿಂಗ್ ಅಥವಾ ರೂಪ್ ಚಂದ್ ಎಂಬ ಅಪ್ರತಿಮ ಹಾಕಿ ಆಟಗಾರನ ಬದುಕಿನ ದುರಂತ ಕಥೆಯ ವಿವರಣೆ.
****
‘ಹಾಕಿ’ ಅಂದಾಕ್ಷಣ, ಭಾರತ ಮಾತ್ರವಲ್ಲ, ಜಗತ್ತಿನ ಸಮಸ್ತರಿಗೂ ನೆನಪಾಗುವಾತ ಹಾಕಿ ಮಾಂತ್ರಿಕ ಧ್ಯಾನ್ಚಂದ್. ಈ ಧ್ಯಾನ್ಚಂದ್ರ ಸ್ವಂತ ತಮ್ಮನೇ ರೂಪ್ಚಂದ್. ಹಾಕಿಯಲ್ಲಿ, ಧ್ಯಾನ್ಚಂದ್ಗೆ ಸರಿಸಮ ಎಂಬಂತಿದ್ದ ರೂಪ್ಸಿಂಗ್, ಸ್ವಾತಂತ್ರ್ಯ ಪೂರ್ವದಲ್ಲಿ ಹಾಕಿಯಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದ ಧೀರರಲ್ಲೊಬ್ಬ. ಈತನಿಗೆ ಪದ್ಮಶ್ರೀ ಸಿಕ್ಕಿತ್ತು. ಪದ್ಮಭೂಷಣವೂ ಒಲಿದಿತ್ತು. ಹಾಗಿದ್ದರೂ ಈತ ತೀವ್ರ ಬಡತನದಲ್ಲಿಯೇ ಬದುಕಿದ. ಬಡತನದ ಕಾರಣಕ್ಕೇ ಕಾಯಿಲೆ ಬಿದ್ದ. ಮತ್ತು ಬಡತನದಲ್ಲಿಯೇ ಸತ್ತೂ ಹೋದ. ವಿಪರ್ಯಾಸವೆಂದರೆ, ಒಂದು ಕಡೆಯಲ್ಲಿ ಈ ಆಟಗಾರ ಸಾವು ಬದುಕಿನ ಮಧ್ಯೆ ಒದ್ದಾಡುತ್ತಿದ್ದಾಗಲೇ ಇನ್ನೊಂದು ಕಡೆಯಲ್ಲಿ ಈತನ ಆಟದ ಕೌಶಲ ಕುರಿತು ದೊಡ್ಡ ಹೋಟೆಲಿನ ಸಭಾಂಗಣದಲ್ಲಿ ಚರ್ಚೆಗಳು ನಡೆಯುತ್ತಿದ್ದವು. ಕ್ರೀಡಾಂಗಣಗಳಲ್ಲಿ ಸಹಾಯಾರ್ಥ ಪಂದ್ಯಗಳು ನಡೆಯುತ್ತಿದ್ದವು. ಆದರೆ, ಆಗ ಸಂಗ್ರಹವಾದ ಹಣದ ಚಿಕ್ಕಾಸೂ ಕೂಡ ಈ ಮಹಾನ್ ಆಟಗಾರನಿಗೆ ಸಿಗಲಿಲ್ಲ. ಅಪ್ರತಿಮ ಆಟಗಾರನೊಬ್ಬನ ಬದುಕು ಯಾಕಿಂಥ ಸಂಕಟದ ಚಕ್ರ ಸುಳಿಗೆ ಸಿಕ್ಕಿಕೊಂಡಿತು ಎಂಬುದು ಈಗಲೂ ಅರ್ಥವೇ ಆಗದ ವಿಚಾರ. ಉತ್ತರವೇ ಸಿಗದ ಪ್ರಶ್ನೆ.
ರೂಪ್ಸಿಂಗ್ ಹುಟ್ಟಿದ್ದು ೧೯೧೧ರಲ್ಲಿ, ಅಲಹಾಬಾದ್ನಲ್ಲಿ. ಇವರ ತಂದೆಯ ಹೆಸರು ಸೋಮೇಶ್ವರಸಿಂಗ್. ಆತ, ಸೇವೆಯಲ್ಲಿ ಸಿಪಾಯಿಯಾಗಿದ್ದ. ರೂಪ್ಸಿಂಗ್ಗೆ ಹಾಕಿಯಲ್ಲಿ ಆಸಕ್ತಿ ಬೆಳೆಯಲು ಅಣ್ಣ ಧ್ಯಾನ್ಚಂದೇ ಕಾರಣ. ಧ್ಯಾನ್ಚಂದ್ ಆಡುವುದನ್ನು ಮೈದಾನದ ಆಚೆಗೆ ನಿಂತು ತದೇಕಚಿತ್ತದಿಂದ ನೋಡುತ್ತ ನೋಡುತ್ತಲೇ ಈತ ಆಡುವುದನ್ನು ಕಲಿತುಬಿಟ್ಟ. ಆದರೆ, ಅಣ್ಣನನ್ನು ಕಂಡರೆ ತುಂಬ ಹೆದರಿಕೆ ಇದ್ದುದರಿಂದ ‘ನಾನೂ ಹಾಕಿ ಕಲಿತಿದ್ದೇನೆ. ನಿನ್ನೊಂದಿಗೆ ಆಡಲು ನನಗೂ ಇಷ್ಟವಿದೆ’ ಎಂದು ರೂಪ್ಸಿಂಗ್ ಹೇಳಲೇ ಇಲ್ಲ. ಬದಲಿಗೆ, ತನ್ನಣ್ಣ ಇಲ್ಲದ ವೇಳೆಯಲ್ಲಿ ಬೇರೆ ಬೇರೆ ಕ್ಲಬ್ಗಳ ಪರವಾಗಿ ಆಡಿ ಮಿಂಚಿದ. ನಂತರ, ಅವರಿವರ ಬಾಯಿಂದ ತಮ್ಮನ ಅಪ್ರತಿಮ ಆಟದ ಸುದ್ದಿ ಕೇಳಿ ಧ್ಯಾನ್ಸಿಂಗ್ ನಂಬದೇ ನಂಬಿ ಬೆರಗಾಗಿದ್ದಾಗಲೇ- ೧೯೩೨ರ ಒಲಂಪಿಕ್ಸ್ ಕ್ರೀಡಾಕೂಟಕ್ಕೆ ತಂಡದ ಆಯ್ಕೆಗೆಂದು ಭೋಪಾಲ್ನಲ್ಲಿ ಒಂದು ಆಟ ಹಮ್ಮಿಕೊಳ್ಳಲಾಯಿತು. ಈ ಪಂದ್ಯದಲ್ಲಿ ರೂಪ್ಸಿಂಗ್ ಒಟ್ಟು ಎಂಟು ಗೋಲು ಬಾರಿಸಿ ತಂಡಕ್ಕೆ ಆಯ್ಕೆಯಾದ. ಆ ಆಟ ಕಂಡು ಸ್ವತಃ ಧ್ಯಾನ್ಚಂದ್ ಅವರೇ ದಂಗುಬಡಿದು ಹೋದರು.
ಆ ವರ್ಷದ ಒಲಂಪಿಕ್ಸ್ ಫೈನಲ್ನಲ್ಲಿ ಭಾರತಕ್ಕೆ ಎದುರಾಳಿಯಾದದ್ದು ಅಮೆರಿಕ. ಆ ಪಂದ್ಯದಲ್ಲಿ ಭಾರತ ೨೪-೧ ಗೋಲುಗಳ ಅಂತರದಿಂದ ಅಮೆರಿಕವನ್ನು ಸೋಲಿಸಿತು. ಹಾಕಿಯ ಇತಿಹಾಸದಲ್ಲಿ, ಅದೂ ಒಲಂಪಿಕ್ಸ್ನಲ್ಲಿ ತಂಡವೊಂದು ೨೪ ಗೋಲು ಹೊಡೆದಿರುವುದು ಇವತ್ತಿಗೂ ದಾಖಲೆ. ಈ ಇಪ್ಪತ್ನಾಲ್ಕರಲ್ಲಿ ರೂಪ್ಸಿಂಗ್ ಒಬ್ಬರೇ ಹನ್ನೊಂದು ಗೋಲುಗಳನ್ನೂ; ಧ್ಯಾನ್ಚಂದ್ ಎಂಟು ಗೋಲುಗಳನ್ನೂ ಹೊಡೆದಿದ್ದರು. ಆಗ ಅಮೆರಿಕದ ಪತ್ರಿಕೆಯೊಂದು ಹೀಗೆ ಬರೆದಿತ್ತು: ‘ಭಾರತ ತಂಡದಲ್ಲಿ ರೂಪ್ಸಿಂಗ್ ಅವರಂಥ ಆಟಗಾರರು ಇರುವವರೆಗೆ, ಇಡೀ ತಂಡ ಎಡಗೈಯಿಂದ ಆಟವಾಡಿದರೆ ಮಾತ್ರ ಬೇರೆ ತಂಡಗಳು ಭಾರತವನ್ನು ಸೋಲಿಸಲು ಸಾಧ್ಯ!’
ನಂತರದಲ್ಲಿ ಭಾರತ ತಂಡ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ರಾಷ್ಟ್ರಗಳಲ್ಲಿ ಪ್ರವಾಸ ಮಾಡಿತು. ಎರಡೂ ರಾಷ್ಟ್ರಗಳಲ್ಲಿ ರೂಪ್ಸಿಂಗ್ರ ಆಟ ಮನೆಮಾತಾಯಿತು. ಅವರ ಕೀರ್ತಿಯ ಬಗ್ಗೆ ಕೇಳಿದ ಅಂದಿನ ಗ್ವಾಲಿಯಾರ್ ಮಹಾರಾಜ-ಜೀವಾಜಿರಾವ್ ಸಿಂಧಿಯಾ, ರೂಪ್ಸಿಂಗ್ಗೆ ತನ್ನ ಸೇನೆಯಲ್ಲಿ ಕ್ಯಾಪ್ಟನ್ ಪದವಿ ನೀಡಿದ. ಅಷ್ಟೇ ಅಲ್ಲದೆ, ‘ಅರಮನೆಯ ಒಂದು ಭಾಗದಲ್ಲಿ ನಿಮಗೆ ಉಳಿಯುವ ವ್ಯವಸ್ಥೆ ಮಾಡುತ್ತೇನೆ. ಸಂಸಾರದೊಂದಿಗೆ ಇಲ್ಲಿಗೇ ಬಂದು ಬಿಡಿ’ ಎಂದ. ರೂಪ್ಚಂದ್ ಹಾಗೇ ಮಾಡಿದರು.
ಮುಂದೆ ನಡೆದದ್ದೇ ೧೯೩೬ರ ಬರ್ಲಿನ್ ಒಲಂಪಿಕ್ಸ್. ಈ ಟೂರ್ನಿಯ ನಂತರ ತಾವು ಹಾಕಿಯಿಂದ ನಿವೃತ್ತಿ ಪಡೆಯುವುದಾಗಿ ಧ್ಯಾನಚಂದ್ ಮೊದಲೇ ಘೋಷಿಸಿದ್ದರು. ಒಲಂಪಿಕ್ಸ್ನಲ್ಲಿ ಭಾರತಕ್ಕೆ ಚಿನ್ನ ಗೆದ್ದುಕೊಡಬೇಕೆಂಬುದೇ ತಮ್ಮ ಮಹದಾಸೆ ಎಂದೂ ಸೇರಿಸಿದ್ದರು. ಇದೇ ಸಂದರ್ಭದಲ್ಲಿ, ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್, ಈ ಬಾರಿ ಜರ್ಮನ್ನರೇ ಒಲಂಪಿಕ್ಸ್ ಹಾಕಿಯಲ್ಲಿ ಚಿನ್ನ ಗೆಲ್ಲಬೇಕೆಂದು ಬಯಸಿದ್ದ. ಅದೇ ಕಾರಣದಿಂದ, ತನ್ನ ತಂಡಕ್ಕೆ ರಹಸ್ಯ ತರಬೇತಿಯನ್ನೂ ಕೊಡಿಸಿದ್ದ. ತನ್ನವರನ್ನು ಹುರಿದುಂಬಿಸಲು ಕ್ರೀಡಾಂಗಣಕ್ಕೂ ಬಂದಿದ್ದ. ಆದರೆ, ಧ್ಯಾನ್ಸಿಂಗ್ ಹಾಗೂ ರೂಪ್ಸಿಂಗ್ರ ಚಮತ್ಕಾರದ ಮುಂದೆ ಜರ್ಮನ್ನರ ಆಟ ನಡೆಯಲಿಲ್ಲ. ಈ ಸೋದರರು ಫೈನಲ್ನಲ್ಲಿ ತಲಾ ನಾಲ್ಕು ಗೋಲು ಬಾರಿಸಿದ್ದರು. ಹಿಟ್ಲರ್ನಂಥ ನಿರ್ದಯಿ ಕೂಡ ಅವತ್ತು ಈ ಭಾರತೀಯರ ಪ್ರಚಂಡ ಆಟ ಕಂಡು ಬೆರಗಾಗಿದ್ದ. ಚಪ್ಪಾಳೆ ಹೊಡೆದಿದ್ದ. ಈ ಆಟದಿಂದ ರೂಪ್ಸಿಂಗ್ ಜರ್ಮನಿಯಲ್ಲಿ ಅದೆಷ್ಟು ಜನಪ್ರಿಯರಾಗಿದ್ದರೆಂದರೆ- ೩೬ ವರ್ಷಗಳ ನಂತರ, ಅಂದರೆ ೧೯೭೨ರಲ್ಲಿ ಮ್ಯೂನಿಕ್ನಲ್ಲಿ ಒಲಂಪಿಕ್ಸ್ ನಡೆದಾಗ, ಆ ಪ್ರದೇಶದ ಮುಖ್ಯ ಬೀದಿಯೊಂದಕ್ಕೆ ‘ರೂಪ್ಸಿಂಗ್ ರಸ್ತೆ’ ಎಂದು ಹೆಸರಿಟ್ಟು ಗೌರವಿಸಲಾಯಿತು.
****
ತಮ್ಮ ಕಲಾತ್ಮಕ ಆಟದಿಂದ ರೂಪ್ಸಿಂಗ್ ೨೭ ಚಿನ್ನದ ಪದಕ ಗಳಿಸಿದರು. ಹಲವಾರು ಪ್ರಶಸ್ತಿ ಪಡೆದರು ನಿಜ. ಆದರೆ, ಆರ್ಥಿಕವಾಗಿ ಅವರ ಪರಿಸ್ಥಿತಿ ಏನೇನೂ ಚೆನ್ನಾಗಿರಲಿಲ್ಲ. ಅವರದು ಎಂಟು ಮಕ್ಕಳ ತುಂಬು ಸಂಸಾರ. ಎಲ್ಲರೂ ರೂಪ್ಸಿಂಗ್ರ ದುಡಿಮೆಯನ್ನೇ ನಂಬಿಕೊಂಡಿದ್ದರು. ಹೀಗಿದ್ದಾಗಲೇ ವಿಧಿಯ ಅಟ್ಟಹಾಸ ಆರಂಭವಾಯಿತು. ಬಡತನ ಹಾಗೂ ಪೌಷ್ಠಿಕ ಆಹಾರದ ಕೊರತೆಯಿಂದ ೧೯೫೪ರಲ್ಲಿ ರೂಪ್ಸಿಂಗ್ಗೆ ಕ್ಷಯ ಅಮರಿಕೊಂಡಿತು. ಕ್ಷಯರೋಗಿ ಎಂಬ ಕಾರಣದಿಂದಲೇ ಅವರನ್ನು ಸೇವೆಯಿಂದ ಬಲವಂತವಾಗಿ ನಿವೃತ್ತಿ ಮಾಡಲಾಯಿತು. ಹಿಂದೆಯೇ, ವಾಸದ ಮನೆಯನ್ನು ಕೂಡಲೇ ಖಾಲಿಮಾಡಿ ಎಂಬ ಆದೇಶ ಕೂಡ ಅರಮನೆಯ ಅಧಿಕಾರಿಗಳಿಂದ ಬಂತು.
ಬೇರೆ ದಾರಿಯಿಲ್ಲದೆ ರೂಪ್ಸಿಂಗ್, ಒಂದು ಪುಟ್ಟ ಬಾಡಿಗೆ ಮನೆಗೆ ಬಂದರು. ಬದುಕು ನಡೆಸುವುದೇ ಕಷ್ಟ ಅನ್ನಿಸಿದಾಗ ಒಂದೊಂದೇ ಚಿನ್ನದ ಪದಕಗಳನ್ನು ಮಾರಿದರು. ಆದರೂ ತಿಂಗಳ ಕೊನೆಗೆ ಬರಿಗೈ ದಾಸರಾದರು. ಆಗಲೇ ಬಂದ ಬಾಡಿಗೆ ಮನೆಯ ಮಾಲೀಕ, ಬಾಡಿಗೆ ಕೊಟ್ಟಿಲ್ಲ ಎಂದು ಜಗಳ ತೆಗೆದ. ಅಷ್ಟೇ ಅಲ್ಲ, ಅವರ ಮನೆಯ ಸಾಮಾನುಗಳನ್ನು ತೆಗೆದು ಬೀದಿಗೆಸೆದ. ತಮ್ಮ ಸಾಮಾನು, ಸರಂಜಾಮುಗಳೊಂದಿಗೆ ರೂಪ್ಸಿಂಗ್, ಬೆಳಗಿಂದ ಸಂಜೆಯವರೆಗೂ ಬೀದಿಯಲ್ಲೇ ನಿಂತಿದ್ದರೂ ಯಾರೊಬ್ಬರೂ, ಸೌಜನ್ಯಕ್ಕೂ ಅವರನ್ನು ಮಾತಾಡಿಸಲಿಲ್ಲ. ಕಡೆಗೆ, ಅದೇ ಗ್ವಾಲಿಯಾರ್ನ ಹೊರಭಾಗದಲ್ಲಿದ್ದ ಷೆಡ್ನಂಥ ಮನೆಯೊಂದನ್ನು ರೂಪ್ಸಿಂಗ್ ಬಾಡಿಗೆಗೆ ಹಿಡಿದರು.
ಇದೇ ಸಂದರ್ಭದಲ್ಲಿ ಮಧ್ಯಪ್ರದೇಶ ಸರಕಾರಕ್ಕೆ ದಿಢೀರನೆ ಜ್ಞಾನೋದಯವಾಯಿತು. ರೂಪ್ಸಿಂಗ್ ಅವರ ಹೆಸರು ಚಿರಸ್ಥಾಯಿಯಾಗಿರುವಂತೆ ಮಾಡಲು ಶಾಲೆ-ಕಾಲೇಜುಗಳಲ್ಲಿ ಬಳಸುವ ಹಾಕಿ ಸ್ಟಿಕ್ಗಳ ಮೇಲೆ ಅವರ ಹೆಸರು ಬರೆಸಲಾಯಿತು. ವಿಪರ‍್ಯಾಸವೆಂದರೆ, ಒಂದೆಡೆ ವಿದ್ಯಾರ್ಥಿಗಳು ಈ ಸ್ಟಿಕ್ಗಳೊಂದಿಗೆ ಆಟವಾಡುತ್ತಾ, ನಾನೂ ರೂಪ್ಸಿಂಗ್ ಥರಾ ಆಡ್ತೀನಿ ಗೊತ್ತಾ ಎಂದು ಬೀಗುತ್ತಿದ್ದರೆ, ಇನ್ನೊಂದೆಡೆ ರೂಪ್ಸಿಂಗ್ ತುತ್ತು ಅನ್ನಕ್ಕೂ ಗತಿಯಿಲ್ಲದೆ ಒದ್ದಾಡುತ್ತಿದ್ದರು. ಈ ಸಂದರ್ಭದಲ್ಲೇ ಒಂದೆರಡು ಕಾಯಿಲೆಗಳೂ ಅವರಿಗೆ ಗಂಟುಬಿದ್ದವು.
ಇದರಿಂದ ಜರ್ಜರಿತರಾದ ರೂಪ್ಸಿಂಗ್, ಓಹ್, ಮುಗೀತು ನನ್ನ ಕತೆ ಎಂದುಕೊಂಡಾಗಲೇ ಅವರ ನೆರವಿಗೆ ಬಂದ ನಟ ಪೃಥ್ವಿರಾಜ್ ಕಪೂರ್, ಒಂದು ನಾಟಕ ಪ್ರದರ್ಶಿಸಿ, ಆಗ ಸಂಗ್ರಹವಾದ ಅಷ್ಟೂ ಹಣ ನೀಡಿ ರೂಪ್ಸಿಂಗ್ರನ್ನು ಅಮೆರಿಕಕ್ಕೆ, ವೈದ್ಯಕೀಯ ಚಿಕಿತ್ಸೆಗೆಂದು ಕಳಿಸಿಕೊಟ್ಟರು.
ಈ ವೇಳೆಗಾಗಲೇ ರೂಪ್ಸಿಂಗ್ರ ಬಡತನದ ಬಗ್ಗೆ ಹಲವರಿಗೆ ತಿಳಿದಿತ್ತು. ತಕ್ಷಣವೇ ಅವರ ಸಹಾಯಾರ್ಥ ಗ್ವಾಲಿಯಾರ್ನಲ್ಲಿ ಒಂದು ಪಂದ್ಯ ಆಡಿಸಲು ನಿರ್ಧರಿಸಲಾಯಿತು. ಈ ಮಹಾನ್ ಆಟಗಾರನ ಸಹಾಯಾರ್ಥ ಪಂದ್ಯ ಆಡಲು ಹಾಲೆಂಡ್ನ ಆಟಗಾರರು ಉತ್ಸಾಹದಿಂದ ಬಂದರು. ವಿಪರ‍್ಯಾಸ ನೋಡಿ; ಹಾಕಿ ಪಂದ್ಯ ಆಯೋಜಿಸಿದ್ದ ಅಧಿಕಾರಿಗಳು ರೂಪ್ಸಿಂಗ್ ಅವರಿಗೇ ಆಹ್ವಾನ ಪತ್ರ ಕಳಿಸಿರಲಿಲ್ಲ. ಹಾಗಿದ್ದರೂ ರೂಪ್ಸಿಂಗ್ ಕ್ರೀಡಾಂಗಣಕ್ಕೆ ಬಂದರು. ಅವರ ಬಳಿ ಪಾಸ್ ಅಥವಾ ಟಿಕೆಟ್ ಇಲ್ಲ ಎಂಬ ಕಾರಣದಿಂದ ಗೇಟ್ ಕೀಪರ್ ಅವರನ್ನು ಕ್ರೀಡಾಂಗಣಕ್ಕೇ ಬಿಡಲಿಲ್ಲ. ಕಡೆಗೆ ದಾರಿ ಕಾಣದೆ ರೂಪ್ಸಿಂಗ್ ತಮ್ಮ ಪರಿಚಯ ಹೇಳಿಕೊಂಡರು.
ತನ್ನೆದುರು ನಿಂತಿರುವವರೇ ರೂಪ್ಸಿಂಗ್ ಎಂದು ಗೊತ್ತಾದಾಗ ಗೇಟ್ಕೀಪರ್ ಅದುರಿಬಿದ್ದ. ಮರುಕ್ಷಣವೇ ಕ್ಷಮೆ ಕೋರಿದ. ‘ಒಂದೆರಡು ನಿಮಿಷ ಇಲ್ಲೇ ಇರಿ ಸಾರ್. ಸಂಘಟಕರನ್ನು ಕರೆತರುತ್ತೇನೆ’ ಎಂದು ಓಡಿದ. ಆದರೆ, ಸಂಘಟಕರು ಬೇರೇನೋ ಬಿಜಿಯಲ್ಲಿದ್ದರು. ‘ಮ್ಯಾಚ್ ಮುಗಿದ ಮೇಲೆ ಸಿಕ್ತಾರೆ ಅಂತ ಹೇಳಯ್ಯ ಆ ಮುದುಕನಿಗೆ’ ಎಂದು ಹೇಳಿ ಕಳಿಸಿದರು! ಪಾಪ, ರೂಪ್ಸಿಂಗ್, ಬಾಡಿದ ಮನಸ್ಸಿನಿಂದ ಮನೆಗೆ ಹಿಂದಿರುಗಿದರು.
ಪಂದ್ಯ ಮುಗಿದ ತಕ್ಷಣವೇ ತಮ್ಮ ಆರಾಧ್ಯ ದೈವ ರೂಪ್ಸಿಂಗ್ರನ್ನು ಭೇಟಿ ಮಾಡಿಸುವಂತೆ ಹಾಲೆಂಡ್ ಆಟಗಾರರು ಪಟ್ಟು ಹಿಡಿದರು. ಸಂಘಟಕರು ಆಗ ಅನಿವಾರ್ಯವಾಗಿ ರೂಪ್ಸಿಂಗ್ರ ಮನೆಗೆ ಹೋಗಲೇ ಬೇಕಾಯಿತು. ಅಲ್ಲಿ, ನಿರ್ಗತಿಕರಂತೆ ಕುಳಿತಿದ್ದ ರೂಪ್ಚಂದ್ರನ್ನು ಕಂಡು ಹಾಲೆಂಡ್ ಆಟಗಾರರ ಕಣ್ತುಂಬಿ ಬಂತು. ಅವರೆಲ್ಲ ರೂಪ್ಚಂದ್ರ ಕೈಗಳನ್ನು ಕಣ್ಣಿಗೆ ಒತ್ತಿಕೊಂಡು- ‘ನಿಮ್ಮಂಥ ಅಪ್ರತಿಮ ಆಟಗಾರನನ್ನು ಈ ಸ್ಥಿತಿಯಲ್ಲಿಟ್ಟ ಭಾರತದ ಅಧಿಕಾರಿಗಳಿಗೆ ಧಿಕ್ಕಾರವಿರಲಿ’ ಅಂದೇಬಿಟ್ಟರು.
ಮರುದಿನವೇ ಈ ಸುದ್ದಿ ಅಂದಿನ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ಕಿವಿಗೆ ಬಿತ್ತು. ರೂಪ್ಸಿಂಗ್ಗೆ ಏನಾದರೂ ಸಹಾಯ ಮಾಡಬೇಕು ಎಂದರು. ಈ ಸಂಬಂಧ ಮೀಟಿಂಗ್ಗಳಾದವು. ಅವರು ನೆರವಿಗೆ ಬರುವ ಮೊದಲೇ ೧೯೭೭ರ ಸೆಪ್ಟೆಂಬರ್ ೧೬ರಂದು ರೂಪ್ಸಿಂಗ್ ತೀರಿಕೊಂಡರು. ನೆಮ್ಮದಿಯ ಬದುಕು ಕಂಡು ಸಾಯಬೇಕು ಎಂಬ ಅವರ ಕನಸು, ಕಡೆಗೂ ಕನಸಾಗಿಯೇ ಉಳಿಯಿತು.
ತಮಾಷೆ ಕೇಳಿ: ರೂಪ್ಸಿಂಗ್ರ ನಿಧನದ ನಂತರ ಅನೇಕ ಕಡೆಗಳಲ್ಲಿ ದೊಡ್ಡ ದೊಡ್ಡ ಶೋಕ ಸಭೆಗಳಾದವು. ಅವರ ಹೆಸರನ್ನು ಹಲವು ಕ್ರೀಡಾಂಗಣಗಳಿಗೆ ಇಡಲಾಯಿತು. ಗ್ವಾಲಿಯರ್ನ ರಸ್ತೆಯೊಂದಕ್ಕೂ ರೂಪ್ಸಿಂಗ್ ರಸ್ತೆ ಎಂದು ನಾಮಕರಣ ಮಾಡಲಾಯಿತು. ಅದೇ ರಸ್ತೆಯಲ್ಲಿ ರೂಪ್ಸಿಂಗ್ರ ಸಂಸಾರ ಬಾಡಿಗೆ ಮನೆಯಲ್ಲಿತ್ತು. ಅದನ್ನು ಯಾರೂ ಗಮನಿಸಲಿಲ್ಲ. ಮುಂದೆ, ಬಾಡಿಗೆ ಕೊಡಲಿಲ್ಲ ಎಂಬ ಕಾರಣಕ್ಕೆ, ಇಡೀ ಸಂಸಾರವನ್ನು ಬೀದಿಯಲ್ಲಿ ನಿಲ್ಲಿಸಿದಾಗ ಕೂಡ- ಆ ಸಂಸಾರವನ್ನು ಯಾರೂ ಗಮನಿಸಲಿಲ್ಲ. ಆದರೆ, ಅವತ್ತೇ ಗ್ವಾಲಿಯಾರ್ನ ಇನ್ನೊಂದು ಮೂಲೆಯಲ್ಲಿ ನಡೆದ ರೂಪ್ಸಿಂಗ್ ನೆನಪಿನ ಶೋಕಸಭೆಯಲ್ಲಿ ರಾಜಕಾರಣಿಗಳು ಭರ್ಜರಿ ಭಾಷಣ ಹೊಡೆದು ಎದ್ದು ಹೋದರು!
ಒಂದಲ್ಲ, ಎರಡು ಒಲಂಪಿಕ್ಸ್ ಪಂದ್ಯಗಳಲ್ಲಿ ಚಿನ್ನ ಗೆದ್ದುಕೊಟ್ಟ ಅಪ್ರತಿಮ ಆಟಗಾರನನ್ನು ನಮ್ಮ ದೇಶ ನಡೆಸಿಕೊಂಡ ರೀತಿ ಇದು.
ಈಗ ಹೇಳಿ, ಕ್ರಿಕೆಟ್ ಆಟಗಾರರು ಕೈ ತುಂಬಾ ಕಾಸು ಮಾಡುತ್ತಿರುವುದು ತಪ್ಪೇ?

ಕೋಟಿ ತಂದುಕೊಟ್ಟವನು ಕೊಳೆಗೇರಿಯಲ್ಲೇ ಇದ್ದಾನೆ!

ಏಪ್ರಿಲ್ 20, 2009

salaam-bombay-maria-nair

೧೯೮೯ರಲ್ಲಿ ತೆರೆಕಂಡ ‘ಸಲಾಂಬಾಂಬೆ’ ಚಿತ್ರ ನಿರ್ಮಿಸಿ, ನಿರ್ದೇಶಿಸಿದಾಕೆ ಮೀರಾ ನಾಯರ್. ಹಳ್ಳಿಯ, ಬಡಕುಟುಂಬದ ಹುಡುಗನೊಬ್ಬ, ಅಮ್ಮನಿಗೆ ಅಗತ್ಯವಿದ್ದ ೫೦೦ ರೂ. ಗಳನ್ನು ಸಂಪಾದಿಸಲೆಂದು ಮುಂಬಯಿಗೆ ಬಂದು ಸಂಕಟಗಳ ಮಧ್ಯೆಯೇ ಕಳೆದುಹೋಗುವುದು ಆ ಸಿನಿಮಾದ ಒನ್ಲೈನ್ ಸ್ಟೋರಿ. ಆ ಚಿತ್ರದಲ್ಲಿ ಬಡತನದ ಹಸಿಹಸೀ ಚಿತ್ರಣವಿತ್ತು. ಸಂಕಟದ ವೈಭವೀಕರಣವಿತ್ತು. ತುಂಬ ಸುಲಭವಾಗಿ ನಂಬಬಹುದಾದಂಥ ಸುಳ್ಳಿನ ಸರಮಾಲೆಯಿತ್ತು. ನಂಬಲಾಗದಂಥ ಸತ್ಯದರ್ಶನವಿತ್ತು. ವಿಪರೀತ ಎಂಬಷ್ಟು ಮೆಲೋಡ್ರಾಮಾ ಇತ್ತು.
ಆ ಚಿತ್ರ ತೆರೆಕಂಡದ್ದೇ ತಡ, ನಿರ್ದೇಶಕಿ ಮೀರಾ ನಾಯರ್-ದೇಶಾದ್ಯಂತ ಮಾತ್ರವಲ್ಲ; ಜಗತ್ತಿನಾದ್ಯಂತ ಸುದ್ದಿಯಾದಳು. ಅವಾರ್ಡುಗಳು ಆಕೆಯನ್ನು ಹುಡುಕಿಕೊಂಡು ಬಂದವು. ಆಕೆಯ ಬಗ್ಗೆ ಸುದ್ದಿ ಪ್ರಕಟಿಸಲೆಂದು ಪತ್ರಿಕೆಗಳು ವಾರಕ್ಕೆ ಇಂತಿಷ್ಟು ಜಾಗವನ್ನು ಮೀಸಲಾಗಿಟ್ಟವು. ಆಕೆಯ ಸಂದರ್ಶನಕ್ಕಾಗಿ ವರದಿಗಾರರು ಕ್ಯೂ ನಿಂತರು. ಆಕೆ ಕೆಮ್ಮಿದ್ದು, ಕ್ಯಾಕರಿಸಿದ್ದು, ವಟವಟ ಮಾತಾಡಿದ್ದು; ಮಾತೇ ಆಡದೆ ಸುಮ್ಮನಿದ್ದದ್ದು ಕೂಡ ಸುದ್ದಿಯಾಯಿತು. ಕಾರ್ಪೊರೇಟ್ ಸಂಸ್ಥೆಗಳು ಆಕೆಯನ್ನು ತಮ್ಮ ಕಂಪನಿಯ ರಾಯಭಾರಿ ಮಾಡಿಕೊಳ್ಳಲು ಸ್ಪರ್ಧೆಗಿಳಿದವು. ಆಕೆಯನ್ನು ಸಮಾರಂಭಗಳಿಗೆ ಕರೆದು ಸನ್ಮಾನಿಸಿ ತಮ್ಮ ಸ್ಕೋಪ್ ಹೆಚ್ಚಿಸಿಕೊಂಡವು. ಈ ಮಧ್ಯೆ ಮೀರಾನಾಯರ್ಳ ಮಹಾನ್ (?) ಸಾಧನೆಯನ್ನು ಗುರುತಿಸಿ, ಮಹಾರಾಷ್ಟ್ರ ಸರಕಾರ ಆಕೆಗೆ ಸೈಟ್ ನೀಡಿತು. ಒಂದು ಅಪಾರ್ಟ್ಮೆಂಟನ್ನೂ ಉಡುಗೊರೆಯಾಗಿ ನೀಡಿತು. ಅಷ್ಟೇ ಅಲ್ಲ, ಮುಂಬಯಿ ಒಂದು ರಸ್ತೆಗೆ ಮೀರಾನಾಯರ್ಳ ಹೆಸರಿಡುವವರೆಗೂ ಈ ಹುಚ್ಚಾಟ ಮುಂದುವರಿಯಿತು. ಒಂದೇ ಒಂದು ಸಿನಿಮಾ ನಿರ್ಮಾಣ- ನಿರ್ದೇಶನದ ಮೂಲಕ, ಒಂದಲ್ಲ ಎರಡು ಜನ್ಮಕ್ಕೆ, ಆಗಿ ಮಿಗುವಷ್ಟು ಖ್ಯಾತಿ ಮತ್ತು ಹಣವನ್ನು ಮೀರಾನಾಯರ್ ಸಂಪಾದಿಸಿಬಿಟ್ಟಳು.
ಆದರೆ, ಅದೇ ‘ಸಲಾಂ ಬಾಂಬೆ’ ಸಿನಿಮಾದ ಹೀರೋ ಕೃಷ್ಣನ ಪಾತ್ರದಲ್ಲಿ ನಟಿಸಿದ್ದ ಷಫಿ ಎಂಬ ಬಾಲಕನ ಬದುಕು ಬರ್ಬಾದ್ ಆಗಿ ಹೋಗಿತ್ತು. ಮೂಲತಃ ಬೆಂಗಳೂರಿನವನಾದ ಷಫಿಗೆ ‘ಸಲಾಂ ಬಾಂಬೆ’ ಚಿತ್ರದ ನಟನೆಗೆಂದು ನೀಡಿದ ಒಟ್ಟು ಹಣದ ಮೊತ್ತ ೧೫,೦೦೦. ಮುಂದೆ ಈತನಿಗೆ ಅತ್ಯುತ್ತಮ ಬಾಲನಟ ಎಂಬ ರಾಷ್ಟ್ರಪ್ರಶಸ್ತಿ ಕೂಡ ಬಂತು. ಆ ದಿನಗಳಲ್ಲಿ ಎಲ್ಲ ಪತ್ರಿಕೆಗಳಲ್ಲೂ ಮೇಲಿಂದ ಮೇಲೆ ಈ ಹುಡುಗನ ಫೋಟೊ ಪ್ರಕಟವಾಯಿತು. ಆತನ ಸಂದರ್ಶನಗಳೂ ಬಂದವು. ಕಡುಬಡವರ ಮನೆಯ ಹುಡುಗ ಷಫಿ, ಪ್ರಶಸ್ತಿ ಪಡೆಯುವ ನೆಪದಲ್ಲಿ ವಿಮಾನದಲ್ಲಿ ಪ್ರಯಾಣ ಮಾಡಿದ್ದೂ ಆಯ್ತು.
ಮುಂದೆ, ಕೋಲ್ಕತ್ತಾದಲ್ಲಿ ಅಂತಾರಾಷ್ಟ್ರೀಯ ಚಿತ್ರೋತ್ಸವ ನಡೆದಾಗ ಅಲ್ಲಿ ‘ಸಲಾಂ ಬಾಂಬೆ’ ಕೂಡ ಪ್ರದರ್ಶನವಾಯಿತು. ಆ ಸಂದರ್ಭದಲ್ಲೇ ಒಂದೆರಡು ಪತ್ರಿಕೆಗಳಲ್ಲಿ ಷಫಿಯ ಕೌಟುಂಬಿಕ ಹಿನ್ನೆಲೆಯ ವಿವರಣೆ ಪ್ರಕಟವಾಯಿತು. ತಕ್ಷಣವೇ ಮಹಾದಾನಿಗಳಂತೆ ಫೋಸ್ ನೀಡಿದ ಕೆಲವರು, ‘ಷಫಿಗೆ ಲಕ್ಷ ಲಕ್ಷ ರೂ. ನೆರವು ನೀಡಲು ನಾವು ಸಿದ್ಧ ಎಂದು ಘೋಷಿಸಿದರು. ಅದೇ ಮಾತನ್ನು ಪತ್ರಿಕೆಗಳ ಮುಂದೆಯೂ ಹೇಳಿ ಫೋಟೊ ತೆಗೆಸಿಕೊಂಡರು. ಕೆಲವರಂತೂ ಇನ್ನೂ ನಾಲ್ಕು ಹೆಜ್ಜೆ ಮುಂದೆ ಹೋಗಿ, ಷಫಿಯ ಕಾಲೇಜು ವ್ಯಾಸಂಗದವರೆಗೂ ತಾವು ಧನಸಹಾಯ ಮಾಡುವುದಾಗಿ ಘೋಷಿಸಿಬಿಟ್ಟರು. ಇನ್ಯಾರೋ- ‘ಆ ಹುಡುಗನಿಗೆ ನಾವು ಮನೇನೇ ಕಟ್ಟಿಸಿಕೊಡ್ತೇವೆ ಬಿಡ್ರಿ’ ಎಂದು ಬೂಸಿ ಹೊಡೆದು ಸುದ್ದಿಯಾದರು.
ಹೀಗಿದ್ದಾಗಲೇ ಯಡವಟ್ಟಾಗಿ ಹೋಯಿತು. ಕೋಲ್ಕತ್ತಾದಲ್ಲಿ ಚಿತ್ರೋತ್ಸವಕ್ಕೆಂದು ಹೋಗಿದ್ದನಲ್ಲ? ಅಲ್ಲಿಯೇ ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ತನಗೆ ದೊರಕಿದ್ದ ‘ಅತ್ಯುತ್ತಮ ಬಾಲನಟ’ ಪ್ರಶಸ್ತಿ ಪತ್ರವನ್ನೇ ಈ ಅಮಾಯಕ ಷಫಿ ಕಳೆದುಕೊಂಡುಬಿಟ್ಟ. ಅಲ್ಲಿಂದ ಹಿಂದಿರುಗುವ ವೇಳೆಗೆ ಮೀರಾನಾಯರ್ಗೆ ಈ ಹುಡುಗನ ಕಡೆಯಿಂದ ಆಗಬೇಕಾದ್ದೇನೂ ಇರಲಿಲ್ಲವಲ್ಲ? ಅದೇ ಕಾರಣದಿಂದ- ‘ಟಾಟಾ ಸೀಯೂ ಬೈ ಬೈ…’ ಎಂದು ಮೆಲ್ಲಗೆ ಜಾರಿಕೊಂಡಳು. ತನ್ನ ಅದ್ಭುತ ಅಭಿನಯದಿಂದ ಕೇವಲ ಮುಂಬಯಿಯಲ್ಲ; ಇಡೀ ಭಾರತದ ಜನರ ಮನಗೆದ್ದಿದ್ದ ಷಫಿ ಅಕ್ಷರಶಃ ಬೀದಿಗೆ ಬಿದ್ದಿದ್ದ. ಸರ್ಟಿಫಿಕೇಟ್ ಇರಲಿಲ್ಲವಲ್ಲ? ಅದೇ ಕಾರಣದಿಂದ ‘ಸಲಾಂ ಬಾಂಬೆ’ಯ ಹೀರೋ ನಾನೇ ಎಂದು ಈ ಹುಡುಗ ಹೇಳಿದರೆ- ಅದನ್ನು ನಂಬಲು ಭಗವಂತ ಕೂಡ ತಯಾರಿರಲಿಲ್ಲ. ಷಫಿಗೆ ಮನೆ ಕೊಡಿಸ್ತೀವಿ. ಕಾಲೇಜಿಗೆ ಕಳಿಸ್ತೀವಿ, ಖರ್ಚಿಗೆ ಕಾಸು ಕೊಡ್ತೇವೆ ಎಂದಿದ್ದರಲ್ಲ? ಅವರೆಲ್ಲ ಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾದ ಮರುದಿನದಿಂದಲೇ ನಾಪತ್ತೆಯಾಗಿದ್ದರು!
ಕಡೆಗೆ ಏನಾಯಿತೆಂದರೆ, ಸಲಾಂ ಬಾಂಬೆಯ ಹೀರೋ ಷಫಿ; ಬಾಂಬೆಗೆ ಕಡೆಯ ಸಲಾಂ ಹೊಡೆದು ಸೀದಾ ಬೆಂಗಳೂರಿಗೆ ಬಂದ. ಇಲ್ಲಿ ಅದೆಷ್ಟು ಸಂಕಟ ಅನುಭವಿಸಿದನೋ; ಭಗವಂತ ಬಲ್ಲ. ಮುಂದೆ ಹೊಟ್ಟೆಪಾಡಿನ ಕಾರಣಕ್ಕೆ, ಆಟೊ ಓಡಿಸಲು ನಿಂತ. ಈ ಮಧ್ಯೆ ಅದ್ಯಾರೋ- ಹೇಗಿದ್ರೂ ನೀನು ರಾಷ್ಟ್ರಪ್ರಶಸ್ತಿ ತಗೊಂಡವನು ತಾನೆ? ಒಂದು ಅರ್ಜಿ ಹಾಕು, ಬಿಡಿಎ ಸೈಟ್ ಸಿಗುತ್ತೆ ಅಂದಿದ್ದಾರೆ. ಷಫಿ ಅರ್ಜಿಯ ಹಿಂದೆಯೇ ಐದಾರು ವರ್ಷ ಅಲೆದಾಡಿದ್ದಾನೆ. ಉಹುಂ, ಏನೆಂದರೆ ಏನೂ ಉಪಯೋಗವಾಗಿಲ್ಲ.
ಒಂದು ಕಾಲದಲ್ಲಿ ದೇಶದ ಅಷ್ಟೂ ದಿನ ಪತ್ರಿಕೆಗಳಲ್ಲಿ ಮುಖಪುಟಗಳಲ್ಲಿ ರಾರಾಜಿಸಿದ ಷಫಿ- ಈಗ ಬೆಂಗಳೂರಿನಲ್ಲಿ ಆಟೊ ಓಡಿಸಿಕೊಂಡಿದ್ದಾನೆ. ಕನಕಪುರ ರಸ್ತೆ, ಅಂಜನಾಪುರ ಸಮೀಪದ ಆವನಹಳ್ಳಿಯಲ್ಲಿ ಒಂದು ಪುಟ್ಟ ಮನೆಯಲ್ಲಿ ಅವನ ವಾಸ. ೯೮೪೫೭ ೭೯೦೫೭ ನಂಬರಿಗೆ ಫೋನ್ ಮಾಡಿ- ‘ಹಲೋ ಷಫೀ ಅಂದರೆ, ಎರಡನೇ ನಿಮಿಷದ ಹೊತ್ತಿಗೆ ಜನ್ಮಾಂತರದ ಬಂಧುವೇನೋ ಎಂಬಂತೆ ಆತ ಮಾತಿಗೆ ಶುರು ಮಾಡುತ್ತಾನೆ. ಆತನ ಮಾತುಗಳಲ್ಲಿ ಸಂಭ್ರಮ, ಸಡಗರ, ಅನುಮಾನ, ಕುತೂಹಲ, ಒಂದು ಬೆರಗು, ಸಣ್ಣದೊಂದು ಅನುಮಾನ, ಸಾಗರದಷ್ಟು ಪ್ರೀತಿ ಮತ್ತು ತನ್ನ ಸಂಕಟದ ಬದುಕಿನ ಕುರಿತು ಒಂದು ವಿಷಾದ- ಇರುತ್ತದೆ. ಆದರೆ, ತಾನೇ ಬಡವ ಎಂದು ಗೊತ್ತಿದ್ದರೂ- ‘ಮನುಷ್ಯ ಜನ್ಮ ಒಂದೇ ಸಾರ್. ಈ ಜನ್ಮದಲ್ಲಿ ಹತ್ತು ಜನ್ಮಕ್ಕಾದ್ರೂ ನಾನು ಸಹಾಯ ಮಾಡ್ಬೇಕು’ ಎನ್ನುತ್ತಾನೆ ಷಫಿ. ಆ ಮಾತು ಕೇಳಿದಾಗ ಮಾತ್ರ ‘ಹೀರೋ ಅಂದ್ರೆ ಇವನೇ’ ಎಂದು ಉದ್ಗರಿಸುವಂತಾಗುತ್ತದೆ.
***
ದುರದಾದೃಷ್ಟ ಎಂಬುದು ವಕ್ಕರಿಸಿಕೊಂಡರೆ ಏನಾಗುತ್ತೆ ಎಂಬುದಕ್ಕೆ ಉದಾಹರಣೆಯಾಗಿ ‘ಸಲಾಂ ಬಾಂಬೆ’ಯ ‘ಷಫಿ’ಯ ಬದುಕಿನ ಕಥೆ ಹೇಳಬೇಕಾಯಿತು ಅಷ್ಟೆ. ಈ ವಾರ ಹೇಳಲು ಹೊರಟಿರುವುದು ಸ್ಲಂಡಾಗ್ ಮಿಲೇನಿಯರ್ ಚಿತ್ರದ ಮೂವರು ಬಾಲನಟರ ಪೈಕಿ ಒಬ್ಬನಾದ ಅಜರುದ್ದೀನ್ ಇಸ್ಮಾಯಿಲ್ ಷೇಕ್ನ ಬದುಕಿನ ಕಥೆಯನ್ನ.
ಈಗ, ಜಗತ್ತಿಗೇ ಗೊತ್ತಿರುವಂತೆ- ‘ಸ್ಲಂಡಾಗ್…’ ಸಿನಿಮಾಕ್ಕೆ ಎಂಟು ಆಸ್ಕರ್ ಪ್ರಶಸ್ತಿಗಳು ಬಂದಿವೆ. ಏಳು ಬ್ರಿಟೀಷ್ ಅಕಾಡೆಮಿ ಪ್ರಶಸ್ತಿಗಳೂ ಲಭಿಸಿವೆ. ಚಿತ್ರ ತೆರೆಕಂಡು ಆಗಲೇ ಮೂರು ತಿಂಗಳು ಕಳೆದು ಹೋಗಿದ್ದರೂ ಈಗಲೂ ಎಲ್ಲರ ಮನೆಯಲ್ಲೂ ‘ಸ್ಲಂಡಾಗ್’ ಕುರಿತು ಚರ್ಚೆ ಆಗುತ್ತಲೇ ಇದೆ. ಕೇವಲ ಹದಿನೈದು ಕೋಟಿ ರೂ. ವೆಚ್ಚದಲ್ಲಿ ತಯಾರಾದ ಈ ಸಿನಿಮಾ ಈವರೆಗೆ ೧೫೦ ಕೋಟಿ ರೂ.ಗೂ ಹೆಚ್ಚು ಹಣ ಸಂಪಾದಿಸಿದೆ. ಮುಂದಿನ ಆರು ತಿಂಗಳಲ್ಲಿ ಈ ಲಾಭದ ಮೊತ್ತವೇ ೩೦೦ ಕೋಟಿ ರೂ.ಗೆ ತಲುಪಬಹುದೆಂದು ಹಾಲಿವುಡ್ ಚಿತ್ರರಂಗದ ಪ್ರಮುಖರು ಅಂದಾಜು ಮಾಡಿದ್ದಾರೆ. ಈ ಚಿತ್ರಕ್ಕೆ ಸಂಗೀತ ನೀಡಿದ ರೆಹಮಾನ್ ಬೆಲೆ ಕೂಡ ಚಿತ್ರವೊಂದಕ್ಕೆ ಒಂದು ಕೋಟಿ +++ ಆಗಿ ಹೋಗಿದೆ.
ಹೀಗೆ, ಪ್ರತಿಯೊಂದು ವ್ಯವಹಾರವೂ ಕೋಟಿ ಕೋಟಿಯ ಲೆಕ್ಕದಲ್ಲೇ ನಡೆಯುತ್ತಿರುವಾಗಲೇ- ಅಜರುದ್ದೀನ್ ಇಸ್ಮಾಯಿಲ್ ಷೇಕ್, ಮುಂಬಯಿಯ ಕೊಳೆಗೇರಿಯಲ್ಲೇ ಉಳಿದು ಹೋಗಿದ್ದಾನೆ. ಹೇಳಿದರೆ ಅವನ ಬದುಕಿನದು- ಚೆಂದದ ಕತೆಯೂ ಹೌದು; ಕರುಣ ಕಥೆ ಕೂಡ ಹೌದು.
ಈ ಅಜರುದ್ದೀನ್ ಇಸ್ಮಾಯಿಲ್ ಷೇಕ್, ಮುಂಬಯಿಯ ಕೊಳೆಗೇರಿಯಲ್ಲೇ ಹುಟ್ಟಿ ಬೆಳೆದ ಬಾಲಕ. ಮುಂಬಯಿ ಷೇರುಪೇಟೆಗೆ ತುಂಬ ಹತ್ತಿರದಲ್ಲೇ ಆ ಕೊಳೆಗೇರಿಯಿದೆ. ‘ಸ್ಲಂ ಡಾಗ್’ ಚಿತ್ರದಲ್ಲಿ ನಾಯಕಿಯ ಪಾತ್ರ ಮಾಡಿದ್ದಾಳಲ್ಲ ರುಬೀನಾ ಆಲಿ, ಆಕೆ ಈ ಹುಡುಗನ ಕ್ಲಾಸ್ಮೇಟ್. ಇಬ್ಬರೂ ಅದೇ ಕೊಳೆಗೇರಿಯಲ್ಲಿರುವ ಮುನ್ಸಿಪಲ್ ಶಾಲೆಯಲ್ಲಿ ಓದುತ್ತಿದ್ದಾರೆ.
ಒಂದು ಕ್ಷಣದ ಮಟ್ಟಿಗೆ ‘ಸ್ಲಂ ಡಾಗ್…’ನ ಹೀರೋ ಜಮಾಲ್ನ ಅಣ್ಣನ ಪಾತ್ರದಲ್ಲಿರುವ ಅಜರುದ್ದೀನ್ನ ನಟನೆಯ ಸ್ಯಾಂಪಲ್ಗಳನ್ನು ನೆನಪಿಸಿಕೊಳ್ಳಿ: ಜಮಾಲ್ ತುಂಬಾ ಕಷ್ಟಪಟ್ಟು ಅಮಿತಾಭ್ ಬಚ್ಚನ್ನ ಆಟೊಗ್ರಾಫ್ ಹಾಕಿಸಿಕೊಂಡು ಬಂದರೆ- ಅದನ್ನು ಈತ, ಜಾಸ್ತಿ ದುಡ್ಡು ಕೊಟ್ಟ ಯಾರೋ ಒಬ್ಬನಿಗೆ ಮಾರಿಬಿಡುವ ಸಂದರ್ಭ; ಕಥಾನಾಯಕಿ ಲತಿಕಾ ಕೈಗೆ ಒಂದು ಹಸುಗೂಸು ನೀಡಿ ಇದನ್ನು ಎತ್ಕೊಂಡೇ ಭಿಕ್ಷೆ ಬೇಡಲು ಹೋಗು. ಆಗ ನಿನಗೆ ಎರಡು ಪಟ್ಟು ಭಿಕ್ಷೆ ಸಿಗುತ್ತೆ ಎನ್ನುವ ಸನ್ನಿವೇಶ; ಚಲಿಸುತ್ತಿರುವ ರೈಲಿನ ಮೇಲೆ ಹಗ್ಗ ಹಿಡಿದು ನಿಂತು, ತಿಂಡಿ ಲಪಟಾಯಿಸಲು ತಮ್ಮನಿಗೆ ಹೇಳುವ ಮತ್ತೊಂದು ಸಂದರ್ಭ, ಹೀಗೇ…
ಈಗ ಏನಾಗಿದೆ ಅಂದರೆ- ಚಿತ್ರದ ನಿರ್ಮಾಪಕರು ಮೂಟೆ ಮೂಟೆ ದುಡ್ಡಿನೊಂದಿಗೆ, ನಿರ್ದೇಶಕರು ವಿಪರೀತ ಖ್ಯಾತಿಯೊಂದಿಗೆ ಹಾಲಿವುಡ್ ಸೇರಿಕೊಂಡಿದ್ದಾರೆ. ಪ್ರಶಸ್ತಿ ಪಡೆಯುವ ನೆಪದಲ್ಲಿ ಅಜರುದ್ದೀನ್ ಕೂಡ ವಿದೇಶಕ್ಕೆ ಹೋಗಿ ಬಂದಿದ್ದಾನೆ. ಆತನ ಕೈಯಲ್ಲಿ ಪ್ರಶಸ್ತಿ ಪತ್ರವಿದೆ. ಪತ್ರಿಕೆಗಳಲ್ಲಿ ಆತನ ಫೋಟೊ, ಸಂದರ್ಶನ ಬಂದಿದೆ. ಈ ಹುಡುಗನಿಗೆ ಮುಂಬಯಿ ಸರಕಾರ ಒಂದು ಫ್ಲ್ಯಾಟ್ ನೀಡಿ ಗೌರವಿಸಿದೆ; ‘ಸ್ಲಂಡಾಗ್…’ ಚಿತ್ರದ ನಿರ್ಮಾಪಕರೂ ಒಂದು ಫ್ಲ್ಯಾಟ್ ಕೊಟ್ಟಿದ್ದಾರೆ ಎಂಬ ಸುದ್ದಿ ಎಲ್ಲ ಪತ್ರಿಕೆಗಳಲ್ಲೂ ವರದಿಯಾಗಿದೆ. ಅಷ್ಟೇ ಅಲ್ಲ; ‘ಸ್ಲಂ ಡಾಗ್…’ ಚಿತ್ರದಿಂದ ಬಂದ ಲಾಭದ ಹಣದಲ್ಲಿ ಒಂದು ಭಾಗವನ್ನು ಸ್ಲಂನಲ್ಲಿರುವ ಮಕ್ಕಳ ಉದ್ಧಾರಕ್ಕೆ ಬಳಸಲಾಗುವುದು ಎಂಬ ಬಿಟ್ಟಿ ಹೇಳಿಕೆಯನ್ನೂ ಆ ಚಿತ್ರದ ನಿರ್ಮಾಪಕರು ನೀಡಿದ್ದಾರೆ. ಅದೂ ಪ್ರಕಟವಾಗಿದೆ. ಈ ಮಧ್ಯೆಯೇ ಒಂದಿಬ್ಬರು ಕುಬೇರರು- ‘ನಾವು ಅಜರುದ್ದೀನ್ ಮತ್ತು ರುಬೀನಾ ಆಲಿಯ ಜೀವಿತಾವಧಿಯ ಶಿಕ್ಷಣದ ವೆಚ್ಚ ಕೊಡುತ್ತೇವೆ’ ಎಂದು ಹೇಳಿ ಸುದ್ದಿ ಮಾಡಿದ್ದಾರೆ!
ಆದರೆ, ಸತ್ಯ ಏನೆಂದರೆ – ಈ ಲೇಖನ ಅಚ್ಚಿಗೆ ಹೋಗುತ್ತಿರುವ ಸಂದರ್ಭದಲ್ಲಿ ಕೂಡ ಅಜರುದ್ದೀನ್ ಇಸ್ಮಾಯಿಲ್ ಷೇಕ್ನ ಕುಟುಂಬಕ್ಕೆ ಯಾರಿಂದಲೂ ನಯಾಪೈಸೆಯ ನೆರವೂ ಸಿಕ್ಕಿಲ್ಲ. ಈ ಹುಡುಗನ ತಂದೆ ತಳ್ಳುಗಾಡಿಯಲ್ಲಿ ತರಕಾರಿ ಮಾರುತ್ತಾನೆ. ಅವರ ಮನೆಗೆ ಬಾಗಿಲಿಲ್ಲ, ಕಿಟಕಿಯಿಲ್ಲ. ಗೋಡೆಯೂ ಇಲ್ಲ. ಮೇಲ್ಚಾವಣಿಯ ರಕ್ಷಣೆಯೂ ಇಲ್ಲ. ಬಾಗಿಲಿನ ರೂಪದಲ್ಲಿ ಒಂದು ಪರದೆಯಿದೆ. ಮೇಲ್ಚಾವಣಿಯ ರೂಪದಲ್ಲಿ ಒಂದು ದೊಡ್ಡ ಪ್ಲಾಸ್ಟಿಕ್ ಹಾಳೆಯಿದೆ. ೭ ೧೩ ಚರದಡಿ ವಿಸ್ತಾರದ ಕಪ್ಪೆಗೂಡಿನಂಥ ಆ ಮನೆಯೊಳಗೆ ಅಜರುದ್ದೀನ್ ಷೇಕ್ನ ತಂದೆ-ತಾಯಿ, ಚಿಕ್ಕಮ್ಮ-ಚಿಕ್ಕಪ್ಪ ಇದ್ದಾರೆ! ಐದು ಜನ ಅಂಟಂಟಿಕೊಂಡಂತೆಯೇ ಮಲಗುತ್ತಾರೆ. ಮಳೆಗಾಲದಲ್ಲಿ ಹೇಗಿರ್ತೀರಿ ಅಂದರೆ- ಆಗ ನಮ್ಮ ಪಾಡು ಅಲ್ಲಾಹುದಿಗೇ ಪ್ರೀತಿ ಎಂದು ಕಣ್ಣೀರಾಗುತ್ತಾಳೆ ಅಜರ್ನ ಅಮ್ಮ. ಈ ಕುಟುಂಬದ ಜನ ರಾತ್ರಿ ವೇಳೆ- ಆಹ್, ಇನ್ನೇನು ನಿದ್ರೆ ಬಂತು ಎನ್ನುವಷ್ಟರಲ್ಲಿ ಇಲಿಗಳ ಸೈನ್ಯ ಆಹಾರ ಹುಡುಕಿಕೊಂಡು ಬರುತ್ತವೆ. ಕೊಳೆಗೇರಿಯ ಮನೆಯಲ್ಲಿ ಕಾಳೆಲ್ಲಿ ಸಿಗುತ್ತೆ ಹೇಳಿ? ಬಂದ ಇಲಿಗಳು ಮಲಗಿದ್ದವರ ಕೈ ಕಾಲು ಕಿವಿಯನ್ನೇ ಕಚ್ಚಿ ಹೊಟ್ಟೆ ತುಂಬಿಸಿಕೊಳ್ಳುತ್ತವೆ!
ಅರೆ, ಇದೆಲ್ಲ ನಿಜವಾ? ‘ಸ್ಲಂಡಾಗ್…’ ಸಿನಿಮಾ ಈ ಹುಡುಗನ ಬಾಳಿಗೆ ಬೆಳಕು ತರಲಿಲ್ವಾ? ಎಂದು ಪ್ರಶ್ನಿಸುವವರಿಗೆ ಉತ್ತರ ಇಷ್ಟೆ: ಇಲ್ಲಿ ಬರೆದಿರುವುದೆಲ್ಲ ಸತ್ಯ ಮತ್ತು ಇದಷ್ಟೇ ಸತ್ಯ.
ಅಜರುದ್ದೀನ್ನ ಬಡತನದ ಬದುಕನ್ನೂ ಮೀರಿದ ವ್ಯಂಗ್ಯವೊಂದಿದೆ. ಏನೆಂದರೆ- ಲಾಸ್ ಏಂಜಲೀಸ್ನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಸ್ಲಂಡಾಗ್ ಚಿತ್ರದ ಬಾಲನಟರಿಗೆ ಪ್ರಶಸ್ತಿ ವಿತರಿಸುತ್ತಾ, ಅವರ ಬಡತನ ನಿವಾರಣೆಯ ಬಗ್ಗೆ ವೇದಿಕೆಯಲ್ಲಿದ್ದವರು ಭಾಷಣ ಮಾಡುತ್ತಿದ್ದಾಗಲೇ, ಇಲ್ಲಿ ಮುಂಬಯಿ ನಗರ ಪಾಲಿಕೆಯ ಅಧಿಕಾರಿಗಳು ಅಜರುದ್ದೀನ್ ಷೇಕ್ ವಾಸವಿದ್ದ ಕೊಳಗೇರಿಗೆ ಬುಲ್ಡೋಜರ್ ನುಗ್ಗಿಸಿದ್ದರು. ಆ ಸಂದರ್ಭದಲ್ಲಿ ಅಜರುದ್ದೀನ್ ಸಂಗ್ರಹಿಸಿದ್ದ ಆಟದ ಸಾಮಾನುಗಳು, ಅವನ ಕನಸು ತುಂಬಿಕೊಂಡಿದ್ದ ಒಂದಷ್ಟು ಪುಸ್ತಕಗಳು ಬೀದಿ ಪಾಲಾಗಿದ್ದವು. ನಮ್ಮ ಮಗ ಸಿನಿಮಾದಲ್ಲಿ ಮಾಡ್ತಿದಾನೆ… ಎಂದು ಹೇಳಲು ಹೋದ ಅಜರ್ ತಂದೆ ಇಸ್ಮಾಯಿಲ್ಗೆ ಭರ್ತಿ ಒದೆ ಬಿದ್ದವು!
***
ಈಗ ಅಜರುದ್ದೀನ್ ಷೇಕ್ನ ಕುಟುಂಬ ಕೊಳೆಗೇರಿಯ ಇನ್ನೊಂದು ಮೂಲೆಯಲ್ಲಿ ವಾಸ್ತವ್ಯ ಹೂಡಿದೆ. ಜಾತ್ರೆಯಲ್ಲಿ ಕಳೆದು ಹೋದ ಕಂದಮ್ಮನಂತೆ, ಆ ಹುಡುಗ ದಿಕ್ಕು ತೋಚದೆ ನಿಂತುಬಿಟ್ಟಿದ್ದಾನೆ. ಕೆಲವೇ ದಿನಗಳ ಹಿಂದೆ ಆ ಹುಡುಗನ ಉದ್ಧಾರದ ಬಗ್ಗೆ ಮಾತಾಡಿದರಲ್ಲ- ಅವರಿಗೆಲ್ಲ ತಮ್ಮ ಮಾತು ಮರೆತು ಹೋಗಿದೆ. ಬದುಕಿನಲ್ಲಿ ಧುತ್ತನೆ ಎದುರಾಗುವ ಇಂಥ ವಿಪರ್ಯಾಸಗಳಿಗೆ ಏನೆನ್ನೋಣ?

ಅವರಿಲ್ಲದೆ ಎರಡು ವರ್ಷ!

ಏಪ್ರಿಲ್ 8, 2009

poornachandra

ಎರಡು ವರ್ಷ ಕಳೆದೇ ಹೋಯ್ತು ನಿಜ.
ಆದರೆ, ‘ಅವರು ನಮ್ಮೊಂದಿಗಿಲ್ಲ’ ಎನ್ನಲು ಈಗಲೂ ಮನಸ್ಸು ಒಪ್ಪುವುದಿಲ್ಲ. ಏಕೆಂದರೆ- ‘ಏರೋಪ್ಲೇನ್ ಚಿಟ್ಟೆಯನ್ನು ನೋಡಿದಾಗಲೆಲ್ಲ ಅವರು ನೆನಪಿಗೆ ಬರುತ್ತಾರೆ. ‘ಹಾರುವ ಏತಿ’ ಅಂದಾಕ್ಷಣ ಅವರ ಬರಹವೆಂಬ ಬೆರಗು ಜತೆಯಾಗುತ್ತದೆ. ಮರಿಗಳಿಗೆ ಗುಟುಕು ತಿನ್ನಿಸುತ್ತಿರುವ ಸೂರಕ್ಕಿಯ, ಭತ್ತದ ತೆನೆಗೆ ಬಾಯಿ ಹಾಕಿರುವ ಗುಬ್ಬಿಮರಿಯ, ಬಣ್ಣ ಬದಲಿಸುತ್ತಿರುವ ಕೀಟದ, ಹಸಿರು ಎಲೆಯಂತೆಯೇ ಭಾಸವಾಗುವ ಪತಂಗದ, ಬಾಗಿಲ ಮರೆಯಲ್ಲಿ ನಿಂತು ಕಣ್ಣು ಹೊಡೆಯುತ್ತಿರುವ ಬೆಡಗಿಯಂತೆ ಪೋಸ್ ಕೊಟ್ಟಿರುವ ಮರಕುಟಿಕದ ಫೋಟೊ ಕಂಡಾಗಲೆಲ್ಲ- ‘ಅರೆ, ಇಲ್ಲೇ ಇದ್ದಾರಲ್ಲ ತೇಜಸ್ವಿ?’ ಅನ್ನಿಸಿಬಿಡುತ್ತದೆ. ಮನೆಯ ವರಾಂಡದಲ್ಲಿರುವ ಪುಟ್ಟ ಗೋಡೆಯ ಮೇಲೆ ಒಂದು ಕಾಲಿಟ್ಟುಕೊಂಡು ಆಟೊಗ್ರಾಫ್ ಹಾಕುತ್ತಿರುವ ಅವರ ಫೋಟೊ ನೋಡಿದಾಗಲಂತೂ, ತಡವರಿಸುತ್ತಲೇ- ‘ನಮಸ್ಕಾರ ಸಾರ್’ ಎಂದು ಬಿಡುವ ಮನಸ್ಸಾಗುತ್ತದೆ. ಹೀಗೆ- ‘ನಮಸ್ಕಾರ’ ಅನ್ನುತ್ತಲೇ ಡಿಸ್ಟರ್ಬ್ ಮಾಡುತ್ತಿದ್ದವರಿಗೆ ಅವರು- ‘ಶನಿ ಮುಂಡೇವಾ, ಶುರುವಾಯ್ತಾ ನಿಮ್ಮ ಕಾಟ?’ ಎಂದು ಪ್ರೀತಿಯಿಂದಲೇ ಗದರಿಸುತ್ತಿದ್ದರಲ್ಲ ಎಂಬುದು ನೆನಪಾದಾಗ ಖುಷಿಯಾಗುತ್ತದೆ.
ಒಂದು ಚಿತ್ರವಾಗಿ, ಒಂದು ಪಾತ್ರವಾಗಿ, ಬದುಕಿನ ಆದರ್ಶವಾಗಿ, ಕಂದನ ಮುಗುಳ್ನಗೆಯಾಗಿ, ಅಮ್ಮನ ಮಮತೆಯಾಗಿ, ಹಿರಿಯಣ್ಣನ ಗದರಿಕೆಯಾಗಿ ಮತ್ತು ತಮಾಷೆ ಅನ್ನಿಸುವಂಥ ಬೈಗುಳದ ನೆಪವಾಗಿ ಎಲ್ಲರನ್ನೂ ಪದೇ ಪದೆ ಕಾಡುತ್ತಿದ್ದಾರೆ ತೇಜಸ್ವಿ. ಈಗ್ಗೆ ಎರಡು ವರ್ಷದ ಹಿಂದೆ ಅಂದರೆ ೨೦೦೭, ಏಪ್ರಿಲ್ ೫ರ ಗುರುವಾರ ಮಧ್ಯಾಹ್ನ ಊಟ ಮುಗಿಸಿದ ಕೆಲವೇ ನಿಮಿಷಗಳ ನಂತರ; ‘ಒಂದು ಗಂಟೆ ನಲವತ್ತಾರು ನಿಮಿಷಕ್ಕೆ ಕುಸಿದು ಬಿದ್ದು, ಹೃದಯಾಘಾತದಿಂದ- ತೇಜಸ್ವಿ ತೀರಿಕೊಂಡರು’ ಎಂಬ ಸುದ್ದಿ ಕೇಳಿದ ಅಭಿಮಾನಿಗಳೆಲ್ಲ- ಛೆ ಛೆ, ಬಿಡ್ತು ಅನ್ರಿ, ತೇಜಸ್ವಿ ಅವರಿಗೆ ಅಂಥದೇನೂ ಆಗಿಲ್ಲ ಅಂತ ಹೇಳ್ರಿ. ಅದೇ ಮಾತು ನಿಜವಾಗ್ಲಿ ಅಂತ ಪ್ರಾರ್ಥಿಸಿಬಿಡ್ರಿ’ ಅಂದಿದ್ದರು. ನಂತರದ ಕೆಲವೇ ಕ್ಷಣಗಳಲ್ಲಿ ‘ತೇಜಸ್ವಿ ಇನ್ನಿಲ್ಲ’ ಎಂಬುದೇ ನಿಷ್ಠುರ ಸತ್ಯ ಎಂದು ಅರ್ಥವಾದಾಗ ‘ಕಾಲನೆಂಬ ಕ್ರೂರಿಗೆ ಧಿಕ್ಕಾರವಿರಲಿ’ ಎಂದು ಆಕ್ರೋಶದಿಂದ ಹೇಳಿ, ತೇಜಸ್ವಿಯವರ ಸಾವಿಗೆ ಕಂಬನಿ ಮಿಡಿದಿದ್ದರು.
ಸಾಹಿತಿಗಳು ಅಂದಾಕ್ಷಣ ಬೆಂಗಳೂರು- ಮೈಸೂರಿನ ಕಡೆಗೆ, ಧಾರವಾಡದ ದಿಕ್ಕಿಗೆ ಅಥವಾ ಬೆಳಗಾವಿ- ಮಂಗಳೂರಿನ ಕಡೆಗೆ ನೋಡುವುದು ಹಲವರ ರೂಢಿ. ನಮ್ಮ ಸಾಹಿತಿಗಳೆಲ್ಲ ಹೆಚ್ಚಾಗಿ ನಗರಗಳಲ್ಲೇ ವಾಸವಿರುವುದೇ ಇದಕ್ಕೆ ಕಾರಣ. ಆದರೆ ತೇಜಸ್ವಿ ಜಪ್ಪಯ್ಯ ಅಂದರೂ ಮೂಡಿಗೆರೆ ಬಿಟ್ಟು ಆಚೆಗೆ ಬರಲೇ ಇಲ್ಲ. ಆದರೆ, ನಾಡಿನ ಅದ್ಯಾವ ಊರಿಗೇ ಹೋದರೂ ಅವರನ್ನು ನೋಡಲು ಜಾತ್ರೆಗೆ ಬರುವಂತೆ ಜನ ಬರುತ್ತಿದ್ದರು. ಅವರ ಮಾತುಗಳನ್ನು ಆಸೆಯಿಂದ, ಆಸಕ್ತಿಯಿಂದ ಕೇಳುತ್ತಿದ್ದರು. ರೆಕಾರ್ಡ್ ಮಾಡಿಕೊಳ್ಳುತ್ತಿದ್ದರು. ತೇಜಸ್ವಿಯವರಾದರೋ- ವರ್ಷಕ್ಕೆ ಒಂದೆರಡು ಬಾರಿ ಬೆಂಗಳೂರಿಗೆ ಬಂದರೆ; ಇಲ್ಲಿಂದ ಯಾವಾಗ ವಾಪಸ್ ಹೋಗುತ್ತೇನೋ ಎಂದು ಚಡಪಡಿಸುತ್ತಿದ್ದರು. ಗಿಜಿಗಿಜಿ ಟ್ರಾಫಿಕ್ ಮಧ್ಯೆ ಸಿಕ್ಕಿಬಿದ್ದರಂತೂ – ‘ಏನಯ್ಯಾ ಇದು ನರಕಾ? ನಂಗೆ ಒಂದು ದಿನಕ್ಕೇ ಸುಸ್ತಾಗಿ ಹೋಯ್ತು. ನೀವು ಇಡೀ ವರ್ಷ ಹ್ಯಾಗಯ್ಯಾ ಬದುಕ್ತೀರಿ ಇಲ್ಲಿ? ಒಂದಂತೂ ಗ್ಯಾರಂಟಿ ತಿಳ್ಕೊಳ್ಳಿ. ಏನಂದ್ರೆ- ಬೆಂಗ್ಳೂರಲ್ಲಿ ಟ್ರಾಫಿಕ್ನ ಮಧ್ಯೆ ಹತ್ತು ವರ್ಷ ಕಳೆದವನಿಗೆ ನರಕದಲ್ಲಿ ಬದುಕಿದ ಅನುಭವ ಆಗಿರುತ್ತೆ. ಹಾಗಾಗಿ ಸತ್ತ ಮೇಲೆ ಅವರಿಗೆ ನರಕದಲ್ಲಿ ಶಿಕ್ಷೇನೇ ಇರಲ್ಲ. ಆ ಒಂದೇ ಒಂದು ಕಾರಣಕ್ಕೆ ಪುಣ್ಯವಂತರು ನೀವು’ ಎಂದು ನಗೆಯಾಡುತ್ತಿದ್ದರು.
ಸ್ವಾರಸ್ಯವೆಂದರೆ, ಸುದೀರ್ಘ ಚರ್ಚೆಯಲ್ಲಿ, ವಾಗ್ವಾದದಲ್ಲಿ ತೇಜಸ್ವಿಯವರಿಗೆ ಆಸಕ್ತಿ ಇರಲಿಲ್ಲ. ಯಾವುದೇ ಒಂದು ಕೆಲಸಕ್ಕೆ ಕೈ ಹಾಕಿದರೂ, ಹತ್ತು ಜನ ಒಪ್ಪುವಂತೆ ಅದನ್ನು ಮಾಡಿ ಮುಗಿಸುತ್ತಿದ್ದರು ನಿಜ. ಆದರೆ, ಅದರಲ್ಲಿ ಏನಾದರೂ ತಪ್ಪು ತೋರಿಸಿ- ‘ಏನ್ಸಾರ್ ಇದೂ’ ಎಂದರೆ ಅವರು ಖಡಕ್ಕಾಗಿ ಉತ್ತರಿಸುತ್ತಿರಲಿಲ್ಲ. ಬದಲಾಗಿ ತೇಲಿಸಿ ಮಾತಾಡಿಬಿಡುತ್ತಿದ್ದರು. ಈ ಮಾತಿಗೆ ಒಂದು ಪುಟ್ಟ ಉದಾಹರಣೆ ಎಂದರೆ- ತೇಜಸ್ವಿಯವರ ‘ಕರ್ವಾಲೋ’ ಪಠ್ಯಪುಸ್ತಕವಾಗಿ, ಹಾರುವ ಓತಿಯ ವಿಷಯ ಎಲ್ಲರ ಕುತೂಹಲಕ್ಕೂ, ಚರ್ಚೆಗೂ ಕಾರಣವಾಗಿದ್ದಾಗ- ಚಿಕ್ಕಮಗಳೂರು ಸೀಮೆಯ ಮಂಜಯ್ಯ ಎಂಬ ಕಾಲೇಜು ವಿದ್ಯಾರ್ಥಿ ಹಾರುವ ಓತಿಯಂಥ ಪ್ರಾಣಿ (!)ಯನ್ನೇ ಹಿಡಿದು ಒಟ್ಟಿದ್ದ. ನಂತರ- ‘ನಿಮ್ಮ ಕಾದಂಬರಿಯಲ್ಲಿ ಬರುವ ಹಾರುವ ಓತಿ ಇದೇನಾ ಸಾರ್?’ ಎಂದು ಹಲವರು ಕೇಳಿದಾಗ- ತೇಜಸ್ವಿಯವರಿಂದ ಖಡಕ್ ಉತ್ತರ ಬರಲೇ ಇಲ್ಲ. (ಇಂಥವೇ ಕಾರಣಗಳಿಂದ ತೇಜಸ್ವಿಯವರಿಗೆ ‘ಪಲಾಯನವಾದಿ’ ಎಂಬ ಹೆಸರೂ ಅಂಟಿಕೊಂಡಿತು!)
ನನ್ನ ಪಾಲಿಗೆ ಇದೇ ಶಾಶ್ವತ ಎಂದು ತೇಜಸ್ವಿ ಯಾವತ್ತೂ, ಯಾವುದಕ್ಕೂ ಗಟ್ಟಿಯಾಗಿ ಅಂಟಿಕೊಂಡವರೇ ಅಲ್ಲ. ನಾಡಿನ ಜನರೆಲ್ಲ ಅವರ ಯಾವುದೋ ಕಾದಂಬರಿ ಕುರಿತು ಚರ್ಚೆಯಲ್ಲಿ ತೊಡಗಿದ್ದಾಗ, ಈ ಮಹರಾಯರು ಕ್ಯಾಮರಾ ನೇತು ಹಾಕಿಕೊಂಡು ಫೋಟೊ ತೆಗೆಯುವಲ್ಲಿ ಬ್ಯುಸಿಯಾಗಿರುತ್ತಿದ್ದರು. ‘ಅಬ್ಬಾ, ತೇಜಸ್ವಿ ತೆಗೆದಿರುವ ಹಕ್ಕಿ ಪಕ್ಷಿಗಳ ಫೋಟೊ ಎಷ್ಟೊಂದು ಚೆಂದವಿದೆಯಲ್ಲ?’ ಎಂದು ಎಲ್ಲರೂ ಬೆರಗಾಗುತ್ತಿದ್ದ ವೇಳೆಯಲ್ಲಿ ಅವರು ಪೇಂಟಿಂಗ್ಗೆ ಕೈ ಹಾಕಿರುತ್ತಿದ್ದರು. ‘ತೇಜಸ್ವಿಯವರು ಪೇಂಟಿಂಗ್ ಮಾಡ್ತಾ ಇರೋದು ಕಂಪ್ಯೂಟರ್ನಲ್ಲಂತೆ ಕಣ್ರೀ’ ಎಂದು ಅವರಿವರು ಅನುಮಾನದಿಂದ ಪಿಸುಗುಡುತ್ತಿದ್ದ ಸಂದರ್ಭದಲ್ಲಿಯೇ, ಅಂಥ ಮಾತುಗಳಿಗೂ ತಮಗೂ ಸಂಬಂಧವೇ ಇಲ್ಲ ಎನ್ನುವಂತೆ ಮೂಡಿಗೆರೆಯ ತಮ್ಮ ಮನೆಯೆದುರಿನ ಕೆರೆಯಲ್ಲಿ ಅವರು ಮೀನು ಹಿಡಿಯುತ್ತಾ ಕೂತುಬಿಟ್ಟಿರುತ್ತಿದ್ದರು.
ಇದನ್ನು ಕಂಡ ಯಾರಾದರೂ ಗಾಬರಿಯಿಂದ- ‘ಏನ್ಸಾರ್ ಇದೂ?’ ಎಂದು ಪ್ರಶ್ನಿಸಿದರೆ- ‘ರೀ, ನೀವು ಅಂದುಕೊಂಡಂತೆ ಅಥವಾ ನೀವು ಬಯಸಿದಂತೆ ಬದುಕಲಿಕ್ಕೆ ನನ್ನಿಂದ ಸಾಧ್ಯವಿಲ್ಲ. ನನಗೇನು ಇಷ್ಟಾನೋ ಅದನ್ನು ನಾನು ಮಾಡ್ತೀನಿ. ಪುಸ್ತಕ ಬರೀಬೇಕು ಅನ್ಸಿದ್ರೆ ಪುಸ್ತಕ ಬರೀತೀನಿ. ಫೋಟೊ ತೆಗೀಬೇಕು ಅನ್ಸಿದ್ರೆ ಫೋಟೊ ತೆಗೀತೀನಿ. ಚಿತ್ರ ಬರೀಬೇಕು ಅನ್ಸಿದ್ರೆ ಹಾಗೇ ಮಾಡ್ತೀನಿ. ನೀವು ಯಾರ್ರೀ ಕೇಳೋಕೆ ಎಂದು ರೇಗುತ್ತಿದ್ದರು. ಸ್ವಲ್ಪ ಚೆನ್ನಾಗಿ ಪರಿಚಯವಿದ್ದವರನ್ನು ‘ಬಡ್ಡೀಮಕ್ಳ’ ಎಂದು ಬಯ್ದೇ ಮಾತಾಡಿಸುತ್ತಿದ್ದರು. ದಿಢೀರನೆ ಅವರ ಮನೆಗೆ ಹೋದರೆ ‘ಶನಿಗಳಾ, ಈಗ ಬಂದ್ರಾ? ಬನ್ನಿ ಕಾಫಿ ಕುಡಿಯೋಣ’ ಎನ್ನುತ್ತಾ ಮಾತಿಗೆ ಕೂರುತ್ತಿದ್ದರು. ಜಾಸ್ತಿ ಸಲುಗೆಯವರಾದರೆ- ‘ಥೂ ಹಲ್ಕಾ’ ಎಂದೇ ಮಾತು ಶುರು ಮಾಡುತ್ತಿದ್ದರು! ಮತ್ತು ಐದೇ ನಿಮಿಷದ ಮಾತುಕತೆಯಲ್ಲೇ ರಕ್ತ ಸಂಬಂಧಿಗಿಂತ ಹೆಚ್ಚಿನ ಆತ್ಮೀಯರಾಗುತ್ತಿದ್ದರು.
ಸ್ವಾರಸ್ಯವೆಂದರೆ, ತೇಜಸ್ವಿಯವರಿಂದ ಹಾಗೆಲ್ಲ ಬೈಸಿಕೊಂಡಿದ್ದಕ್ಕೆ ಯಾರೂ ಬೇಸರ ಪಡುತ್ತಿರಲಿಲ್ಲ. ಬದಲಿಗೆ- ‘ಅವರು ಹೇಗೆಲ್ಲಾ ಬಯ್ದರು’ ಎಂಬುದನ್ನು ಗೆಳೆಯರ ಮುಂದೆ ಹೆಮ್ಮೆಯಿಂದಲೇ ಹೇಳಿಕೊಳ್ಳುತ್ತಿದ್ದರು:
***
‘ಕುವೆಂಪು ಅವರ ಸುಪುತ್ರನಾದರೂ ನಾನು ಅಸಾಧಾರಣ ಬುದ್ಧಿವಂತನಂತೂ ಖಂಡಿತ ಅಲ್ಲ. ಅದರಲ್ಲೂ ಪಿಯೂಸಿ, ಡಿಗ್ರಿಯಲ್ಲಿದ್ದಾಗ ನಾನೂ ಕೂಡ ಡುಮ್ಕಿ ಹೊಡೆದವನೇ’ ಎಂದು ಸಂಕೋಚವಿಲ್ಲದೆ ಬರೆದುಕೊಂಡವರು ತೇಜಸ್ವಿ. ಅವರ ಸೂಪರ್ಬ್ ಎನ್ನಿಸುವಂಥ ಇಂಗ್ಲಿಷ್ ಭಾವಾನುವಾದದ ಬಗ್ಗೆ ಎಲ್ಲರೂ ಮೆಚ್ಚುಗೆಯಿಂದ ಮಾತಾಡುತ್ತಿದ್ದಾಗಲೇ, ‘ಲಂಕೇಶ್ ಪತ್ರಿಕೆ’ಯಲ್ಲಿ ಧಾರಾವಾಹಿಯಾಗಿ ಪ್ರಕಟವಾದ ‘ಅಣ್ಣನ ನೆನಪು’ನಲ್ಲಿ ಹೀಗೆ ಬರೆದಿದ್ದರು ತೇಜಸ್ವಿ: ‘ನಾನೂ ಅನೇಕ ಸಾರಿ ಫೇಲಾಗಿದ್ದೇ ಇಂಗ್ಲಿಷಿನಲ್ಲಿ. ಏನನ್ನು ಬೇಕಾದರೂ ಕಲಿಯಬಲ್ಲ ಸಾಮರ್ಥ್ಯವಿರುವ ನನಗೆ ಮೊದಲಿನಿಂದಲೂ ಗಣಿತ ಮತ್ತು ಇಂಗ್ಲಿಷ್ ಕೊಟ್ಟಿರುವ ತೊಂದರೆ ಅಷ್ಟಿಷ್ಟಲ್ಲ. ನನಗೆ ಈಗಲೂ ಇಂಗ್ಲಿಷಿನಲ್ಲಿ ಓದುವುದು, ಮಾತಾಡುವುದು ಎಲ್ಲ ಸುಲಭ ಸಾಧ್ಯವಿದ್ದರೂ, ಅದೊಂದು ಕನ್ನಡದ ವಿಸ್ತರಣೆಯಂತಾಗ ಮಾತ್ರ ಸಾಧ್ಯವೇ ಹೊರತು ಇಂಗ್ಲಿಷ್ ಭಾಷೆ ಎಂದು ಪ್ರತ್ಯೇಕವಾಗಿ ಪರಿಗಣಿಸಿದ ಕೂಡಲೇ ಸಾಧ್ಯವಾಗುವುದೇ ಇಲ್ಲ. ಮೊನ್ನೆ ಎಲ್ಲೋ ಭಾಷಣ ಮಾಡಬೇಕೆಂದು ಎದ್ದಾಗ ‘ಇಂಗ್ಲಿಷಿನಲ್ಲಿ ಮಾತನಾಡಿ’ ಎಂದರು, ನನ್ನ ಬಾಯಿಂದ ಮಾತೇ ಹೊರಡಲಿಲ್ಲ…
… ಇಂಗ್ಲಿಷಿನಲ್ಲಿ ಬರೆಯುವುದೆಂದರೆ ನನಗೆ ತಲೆನೋವು. ಬಹುಶಃ ಸ್ಪೆಲ್ಲಿಂಗ್ ಇರುವ ಯಾವ ಭಾಷೆಯನ್ನೂ ನಾನು ಕಲಿಯಲಾರೆನೆಂದು ಅನಿಸುತ್ತದೆ. ಅದರಲ್ಲೂ ಇಂಗ್ಲಿಷ್ ಹುಚ್ಚರ ಭಾಷೆಯೆಂದು ನನ್ನ ಅಭಿಮತ. ಮೊದಲೇ ಸ್ಪೆಲ್ಲಿಂಗ್ ಜ್ಞಾಪಕ ಇಟ್ಟುಕೊಳ್ಳುವುದು ತಲೆ ನೋವು. ಅದರ ಜತೆಗೆ ಸ್ಪೆಲ್ಲಿಂಗೇ ಒಂದು ತರ, ಅದನ್ನು ಉಚ್ಚರಿಸುವುದು ಇನ್ನೊಂದು ತರ ಆದರೆ ನಾನು ಕಲಿಯುವುದಾದರೂ ಹೇಗೆ? ನಾನು ಮಿಡಲ್ಸ್ಕೂಲ್, ಹೈಸ್ಕೂಲ್ ಓದುತ್ತಿದ್ದಾಗ ಅಣ್ಣ (ಕುವೆಂಪು) ನನಗೆ ಇಂಗ್ಲಿಷ್ ಬರೆಯುವುದನ್ನು ಹೇಳಿಕೊಡಲು ತುಂಬಾ ಪ್ರಯತ್ನಪಟ್ಟರು. ಸ್ಪೆಲ್ಲಿಂಗ್ ಉಪಯೋಗಕ್ಕೆ ಇಂಗ್ಲಿಷ್ ಭಾಷೆಯಲ್ಲಿ ಒಂದು ನಿರ್ದಿಷ್ಟ ಸಾರ್ವತ್ರಿಕ ಸೂತ್ರವೇ ಇಲ್ಲದಾಗ ಅವರು ತಾನೆ ಹೇಗೆ ಹೇಳಿಕೊಟ್ಟಾರು? ಇಂಗ್ಲಿಷಿನಲ್ಲಿ ಓದುವ ಮಾತಾಡುವುದೆಲ್ಲ ಬಂದರೂ ಈ ಸ್ಪೆಲ್ಲಿಂಗಿನ ಪ್ರಾರಬ್ಧದ ದೆಸೆಯಿಂದಾಗಿ ನಾನು ಇಂಗ್ಲಿಷಿನಲ್ಲಿ ಯಾವತ್ತೂ ಒಂದೇ ಸಾರಿಗೆ ಪಾಸಾಗಲಿಲ್ಲ…’
ಹೀಗೆ- ‘ಸಹಜ ಸೋಜಿಗದ ಅಪ್ಪಟ ಮನುಷ್ಯ’ರಾಗಿದ್ದ ತೇಜಸ್ವಿಯವರಿಗೆ ಯಾರು ಬೇಕಾದರೂ ಕಾಗದ ಬರೆಯಬಹುದಿತ್ತು. ‘ಕೆ.ಪಿ. ಪೂರ್ಣಚಂದ್ರ ತೇಜಸ್ವಿ- ಹ್ಯಾಂಡ್ ಪೋಸ್ಟ್, ಮೂಡಿಗೆರೆ, ಚಿಕ್ಕಮಗಳೂರು’ ಎಂದು ವಿಳಾಸ ಬರೆದು ಕಾಗದ ಹಾಕಿದರೆ- ನಂತರದ ವಾರದೊಳಗೆ, ಅದ್ಯಾರೇ ಅಪರಿಚಿತರಾಗಿದ್ದರೂ ಸರಿ; ತೇಜಸ್ವಿ ಉತ್ತರ ಬರೆಯುತ್ತಿದ್ದರು. ಕಾಗದದ ಮೇಲ್ಭಾಗದಲ್ಲಿ ಗೆಳೆಯರಾದ/ಆತ್ಮೀಯರಾದ ಎಂದೇ ಆರಂಭಿಸುತ್ತಿದ್ದರು. ಆ ಮೂಲಕ ಒಂದೇ ಪತ್ರದ ನೆಪದಲ್ಲಿ ಜನ್ಮಾಂತರದ ಬಂಧುವಾಗಿ ಬಿಡುತ್ತಿದ್ದರು. ಹೀಗೆ ಕಾಗದ ಬರೆದು ತೇಜಸ್ವಿಯವರಿಗೆ ಯಾವ ಪ್ರಶ್ನೆಯನ್ನಾದರೂ ಕೇಳಬಹುದಿತ್ತು. ಉತ್ತರ ಪಡೆಯಬಹುದಿತ್ತು.
ತೇಜಸ್ವಿಯವರ ಬಗೆಗೆ ಅಪಾರ ಅಭಿಮಾನ ಹೊಂದಿರುವ ಪರಿಸರ ಚಳವಳಿ ಹಿನ್ನೆಲೆಯ ಜಿ. ಕೃಷ್ಣಪ್ರಸಾದ್ ಈಗ್ಗೆ ೨೦ ವರ್ಷದ ಹಿಂದೆ ಅವರಿಗೆ ಪತ್ರ ಬರೆದು- ಕನ್ನಡದಲ್ಲಿ ವಿಜ್ಞಾನ ಸಾಹಿತ್ಯದ ಬೆಳವಣಿಗೆಯ ಬಗ್ಗೆ ಏನನ್ನುತ್ತೀರಿ? ಇಂಗ್ಲಿಷಿನಿಂದ ಅನುವಾದಿಸುವ ಸಂದರ್ಭ ಬಂದಾಗ- ಸೂಕ್ತ ಪಾರಿಭಾಷಿಕ ಪದಗಳು ಸಿಗದಿದ್ದರೆ ಏನು ಮಾಡಬೇಕು? ಕಿರಿಯರಿಗೆ ನಿಮ್ಮ ಸಲಹೆ ಏನು? ನೀವು ವಿಜ್ಞಾನದ ಲೇಖಕರೆ?’ ಎಂದು ಕೇಳಿದ್ದರು.
ಅದಕ್ಕೆ ತೇಜಸ್ವಿಯವರ ಉತ್ತರ ಹೀಗಿತ್ತು: ‘ಕನ್ನಡದಲ್ಲಿ ವಿಜ್ಞಾನ ಸಾಹಿತ್ಯದ ಬೆಳವಣಿಗೆ ಖಂಡಿತ ಸಮಾಧಾನಕರವಾಗಿಲ್ಲ. ಪಾರಿಭಾಷಿಕ ಪದಗಳು ಕನ್ನಡದಲ್ಲಿ ಹೆಚ್ಚಿಗೆ ಇಲ್ಲ. ಕನ್ನಡದ ಜಾಯಮಾನಕ್ಕೆ ಒಗ್ಗುವಂಥ ಪದಗಳಿದ್ದರೆ ಕನ್ನಡ ಪದ ಬಳಸಬಹುದು. ಇಲ್ಲದಿದ್ದರೆ ಇಂಗ್ಲಿಷಿನವನ್ನೇ ಕನ್ನಡದಲ್ಲಿ ಉಪಯೋಗಿಸಿ, ಭಾಷೆ ಬೆಳೆಯುವುದೇ ಹೀಗೆ. ಅನೇಕ ಪಾರಿಭಾಷಿಕ ಪದಗಳು ಇಂಗ್ಲಿಷನವೂ ಅಲ್ಲ. ಅವರೂ ಬೇರೆ ಬೇರೆ ಭಾಷೆಯ ಪದಗಳನ್ನೇ ತಮ್ಮವನ್ನಾಗಿಸಿಕೊಂಡಿದ್ದಾರೆ. ಕಿರಿಯ ಬರಹಗಾರರಿಗೆ ನಾನು ಹೇಳುವುದೇನೂ ಇಲ್ಲ. ನಾನು ಮೂಲತಃ ವಿಜ್ಞಾನದ ವಿದ್ಯಾರ್ಥಿಯಲ್ಲ. ನನಗೆ ಕೆಲವು ವಿಷಯ ತುಂಬಾ ಇಷ್ಟವಾದ್ದರಿಂದ ವಿಜ್ಞಾನದ ಲೇಖಕನಾಗಿದ್ದೇನೆ, ಅಷ್ಟೆ…’
ಇನ್ನೊಂದು ಸಂದರ್ಭದಲ್ಲಿ ತೇಜಸ್ವಿಯವರ ಅಪರೂಪದ ಫೋಟೊಗ್ರಫಿ ಕಂಡು ಬೆರಗಾದ ಶಿಡ್ಲಘಟ್ಟದ ಡಿ.ಜಿ. ಮಲ್ಲಿಕಾರ್ಜುನ ಒಂದು ಮೆಚ್ಚುಗೆಯ ಪತ್ರ ಬರೆದರೆ- ಅದಕ್ಕೆ ಉತ್ತರಿಸಿದ ತೇಜಸ್ವಿ- ‘ತಮ್ಮ ಅಭಿನಂದನೆಗಳಿಗೆ ನನ್ನ ಕೃತಜ್ಞತೆಗಳು. ಪ್ರಶಸ್ತಿಗಳಿಗಿಂತ ತಮ್ಮಂಥವರ ಮೆಚ್ಚುಗೆ ಮಾತುಗಳು ಸಾವಿರ ಪಾಲು ಬೆಲೆ ಬಾಳುವಂಥವೆಂದು ನನ್ನ ಅನಿಸಿಕೆ’ ಎಂದು ಬರೆದಿದ್ದರು!
***
ನೆನಪಿಸಿಕೊಂಡಷ್ಟೂ ನೆನಪಾಗುತ್ತಲೇ ಇರುವ ಮಹಾಚೇತನ ತೇಜಸ್ವಿ. ಅವರ ಕಾಲದಲ್ಲಿ ನಾವಿದ್ದೆವಲ್ಲ ಎಂದುಕೊಂಡಾಗ ಖುಷಿಯಾಗುತ್ತದೆ, ಹೆಮ್ಮೆಯಾಗುತ್ತದೆ. ಅವರು ಜತೆಗಿಲ್ಲ ಅನಿಸಿದಾಗ ಮಾತ್ರ- ಮನೆಯ ಹಿರಿಯನೊಬ್ಬ ಒಂದು ಮಾತೂ ಹೇಳದೆ ಹೋಗಿಬಿಟ್ಟಾಗ ಆಗುತ್ತದಲ್ಲ- ಅಂಥ ಸಂಕಟವಾಗುತ್ತದೆ ಮತ್ತು ಈ ಸಂಕಟ ಜತೆಗೇ ಇರುತ್ತದೆ- ನಾವಿರುವ ತನಕ!