Archive for the ‘ಚೌಚೌ ಬಾತ್..’ Category

ಒಂದು ಲೋಟ ಹಾಲು ಮತ್ತು…

ಫೆಬ್ರವರಿ 29, 2012

 

 

 

 

 

 

 

 

 

 

ಕೇಳಿ : ಕಥೆಗಳು ಮಕ್ಕಳನ್ನು ರಂಜಿಸುತ್ತವೆ. ಅವರಿಗೆ ಒಳ್ಳೆಯ ಬುದ್ದಿ ಕಲಿಯಲು ಪ್ರೇರೇಪಿಸುತ್ತವೆ. ಸೆಂಟಿಮೆಂಟ್ ಕಥೆಗಳು ಬದುಕಿಡೀ ನೆನಪಿರುತ್ತವೆ. ಒಂದೊಂದು ಹೃದ್ಯ ಕತೆ ಕೂಡ ಒಂದು ಕಂದ ಭವಿಷ್ಯ ಬದಲಿಸುವ ಶಕ್ತಿ ಹೊಂದಿದೆ ಎಂಬ ಮಾತು ಸುಳ್ಳಲ್ಲ. ಅಂಥ ಒಂದು ಕಥೆ ಇಲ್ಲಿದೆ. ನಿಮಗಷ್ಟೇ ಅಲ್ಲ ಮಕ್ಕಳಿಗೂ ಇಷ್ಟವಾಗುತ್ತೆ.

ಅವನು ಬಡವರ, ಅಲ್ಲಲ್ಲ ಕಡು ಬಡವರ ಮನೆಯ ಹುಡುಗ. ಹೆಸರು ಚಂದ್ರಶೇಖರ. ಆತ, ಚಿತ್ರದುರ್ಗಕ್ಕೆ ಸಮೀಪದ ಹಳ್ಳಿಯವನು. ಎಳವೆಯಲ್ಲೇ ಅಪ್ಪ ಅಮ್ಮನನ್ನು ಕಳೆದುಕೊಂಡಿದ್ದ ಅವನಿಗೆ ಓದಬೇಕೆಂಬ ಆಸೆಯೇನೋ ಇತ್ತು ಆದರೆ, ಓದಿಸುವವರು ಯಾರು? ಓದಲು ಹಣ ಕೊಡುವವರು ಯಾರು? ಆದರೂ, ಈ ಹುಡುಗ ಸುಮ್ಮನಾಗಲಿಲ್ಲ. ಮನೆ ಮನೆಗೆ ಪೇಪರ್ ಹಾಕುತ್ತ, ಅದರಿಂದ ಸಿಗುವ ಪುಡಿಗಾಸಿನಲ್ಲಿ ಓದು ಮುಂದುವರಿಸಿದ್ದ.

ಅದೊಂದು ಭಯಂಕರ ಬೇಸಿಗೆಯ ಮಧ್ಯಾಹ್ನ. ಇವನು ಮನೆ ಮನೆಯಿಂದ ತಿಂಗಳ ಬಿಲ್ ವಸೂಲಿಗೆ ಹೊರಟಿದ್ದ. ಬೆಳಗಿನಿಂದ ಏನೂ ತಿಂದಿರಲಿಲ್ಲ. ಹೊತ್ತಾದಂತೆಲ್ಲಾ ಹಸಿವಿನಿಂದ ಕಂಗಾಲಾದ. ಕಡೆಗೆ ‘ಅಮ್ಮಾ, ಒಂದಿಷ್ಟು ತಂಗಳು ಇದ್ರೆ ಕೊಡಿ. ತುಂಬಾ ಹಸಿವಾಗಿದೆ’ ಎಂದು ಕೇಳಿಯೇ ಬಿಡೋಣ ಎಂದುಕೊಂಡೇ ಒಂದು ಮನೆಯ ಬಾಗಿಲು ಬಡಿದ.

ಈ ಹುಡುಗ ನಿರೀಕ್ಷಿಸಿದ್ದು ಮಧ್ಯವಯಸ್ಕ ಹೆಂಗಸನ್ನು. ಆದರೆ, ಬಾಗಿಲು ತೆಗೆದದ್ದು ಅವನಿಗಿಂತ ೧೦-೧೨ ವರ್ಷ ದೊಡ್ಡವಳಿದ್ದ ಹುಡುಗಿ. ‘ಅಮ್ಮಾ, ಏನಾದ್ರೂ ತಂಗಳು ಇದ್ರೆ ಕೊಡಿ ಅನ್ನಬೇಕು ಅಂತಿದ್ದವನು. ಆಕೆಯಲ್ಲಿ ಹಾಗೆ ಕೇಳಲು ಸಂಕೋಚವೆನಿಸಿ, ಒಂದು ಲೋಟ ನೀರು ಕೊಡ್ತೀರ? ಅಂದುಬಿಟ್ಟ. ಒಮ್ಮೆ ಈ ಹುಡುಗನನ್ನೇ ಅಪಾದಮಸ್ತಕ ನೋಡಿದ ಆಕೆ ‘ಸರಿ’ ಎಂದು ಒಳಗೆ ಹೋದಳು. ನೀಡಿದ ಲೋಟ ಕೈಗೆತ್ತಿಕೊಂಡವಳು ತಕ್ಷಣವೇ ಯೋಚಿಸಿದಳು. ‘ಪಾಪ ಆತ ತುಂಬಾ ಹಸಿದಿರುವಂತೆ ಕಾಣುತ್ತಿದ್ದಾನೆ. ಇದು ಊಟದ ಹೊತ್ತು. ಬರೀ ನೀರು ಕೊಟ್ರೆ ಹೊಟ್ಟೆ ತುಂಬುತ್ತಾ?’ ಎರಡು ನಿಮಿಷ ಹೀಗೇ ಯೋಚಿಸಿದ ಆಕೆ ಒಂದು ದೊಡ್ಡ ಲೋಟದೊಂದಿಗೆ ಹೊರಬಂದಳು. ಅದರ ತುಂಬಾ ಹಾಲಿತ್ತು. ಹುಡುಗ ಅವಸರದಿಂದಲೇ ಅದನ್ನು ಪಡೆದ. ಸಂಕೋಚ ಬೇಡ. ಕುಡೀರಿ ಅಂದಳು ಈಕೆ. ಒಂದೊಂದು ಗುಟುಕಿಗೂ ಎರಡೆರಡು ಬಾದಾಮಿ ಸಿಗುತ್ತ ಹೋದಾಗ ಇಷ್ಟೊಂದು ಒಳ್ಳೆಯ ಹಾಲು ಕೊಟ್ಟಿದಾರಲ್ಲ, ಕುಡಿದ ಮೇಲೆ ದುಡ್ಡು ಕೊಡಿ ಅಂದ್ರೆ ಏನು ಮಾಡೋದು ಎಂದು ಯೋಚಿಸುತ್ತಲೇ ಈ ಹುಡುಗ ಹಾಲು ಕುಡಿದು ಮುಗಿಸಿದ. ನಂತರ ‘ನಾ ನಾ… ನಾನು, ಇದಕ್ಕೆ ಎಷ್ಟು ದುಡ್ಡು ಕೊಡಬೇಕು’ ಎಂದು ಕೇಳಿಬಿಟ್ಟ.

ಇದಕ್ಕೆಲ್ಲ ದುಡ್ಡು ಬೇಡ, ಕಷ್ಟದಲ್ಲಿ ಇದ್ದವರಿಂದ ಯಾವತ್ತೂ ದುಡ್ಡು ಪಡೀಬಾರ್‍ದು ಅಂತ ಅಮ್ಮ ಹೇಳಿಕೊಟ್ಟಿದ್ದಾರೆ. ಹೋಗಿ ಬನ್ನಿ ನಿಮಗೆ ಒಳ್ಳೇದಾಗ್ಲಿ, ಬಾಯ್ ಎಂದವಳೇ ಈ ಹುಡುಗಿ ಮನೆಯೊಳಗೆ ಹೋಗಿಯೇ ಬಿಟ್ಟಳು. ಅವಳ ಉದಾರ ಮನಸು ಕಂಡು ಈ ಹುಡುಗ ನಿಂತಲ್ಲೇ ಕಣ್ತುಂಬಿಕೊಂಡ.

******
೨೦ ವರ್ಷಗಳ ನಂತರ, ಏನೇನೋ ಬದಲಾವಣೆ ಆಗಿಹೋಗಿತ್ತು. ಈ ಹುಡುಗಿಗೆ ಮದುವೆಯಾಗಿ, ನಾಲ್ಕೇ ವರ್ಷಗಳಲ್ಲಿ ಗಂಡ ತೀರಿ ಹೋಗಿದ್ದ. ಅದೇ ಕೊರಗಿನಲ್ಲಿದ್ದವಳಿಗೆ ಕ್ಯಾನ್ಸರ್ ಅಮರಿಕೊಂಡಿತ್ತು. ಮೊದ ಮೊದಲು ಈಕೆಗೆ ಕಾಯಿಲೆ ಏನೆಂದೇ ಗೊತ್ತಾಗಲಿಲ್ಲ. ಗೊತ್ತಾಗುವ ವೇಳೆಗೆ ರೋಗ ಉಲ್ಬಣಿಸಿತ್ತು. ತಾಲೂಕು, ಜಿಲ್ಲಾ ಕೇಂದ್ರದ ವೈದ್ಯರು ಕೈ ಚೆಲ್ಲಿದರು. ಕಡೆಗೆ ಬೆಂಗಳೂರಿನ ವೈದ್ಯರು ಚೆನ್ನೈನ ಆಸ್ಪತ್ರೆಯೊಂದರ ವಿಳಾಸ ನೀಡಿ, ಕಾಯಿಲೆ ಕೈ ಮೀರಿ ಹೋಗಿದೆ. ತಕ್ಷಣ ಈ ಆಸ್ಪತ್ರೆಗೆ ಹೋಗಿ. ಹಾಗೆ ಮಾಡಿದರೆ ಮಾತ್ರ ಏನಾದ್ರೂ ಸಹಾಯ ಅದೀತೇನೋ ಎಂದರು. ಒಂದು ಕಾಲಕ್ಕೆ ಗೌರವಾನ್ವಿತ ಕುಟುಂಬವೊಂದರ ಮಗಳಾಗಿದ್ದವಳು ಆಕೆ. ಅಂಥವಳು, ಚಿಕ್ಕ ವಯಸ್ಸಿಗೆ ವೈಧವ್ಯಕ್ಕೆ ಒಳಗಾದಾಗ ಎಲ್ಲರೂ ದೂರವಾಗಿದ್ದರು. ಪತಿಯ ಸಾವಿನ ನಂತರ, ಬಡತನವೆಂಬುದು ಅವಳನ್ನು ಬಾಚಿ ತಬ್ಬಿಕೊಂಡಿತ್ತು. ಅಂಥ ಪರಿಸ್ಥಿತಿಯಲ್ಲಿದ್ದ ಈ ಹೆಂಗಸು ಅದು ಹೇಗೋ, ಯಾರ್‍ಯಾರ ಸಹಾಯದಿಂದಲೋ ಚೆನ್ನೈನ ಅಪೊಲೋ ಆಸ್ಪತ್ರೆ ಸೇರಿಕೊಂಡಳು.

ಅಲ್ಲಿ ಎದುರಿಗಿದ್ದ ಕಿರಿಯ ವೈದ್ಯನಿಗೆ, ಆ ಹಿರಿಯ ವೈದ್ಯರು ಹೇಳಿದರು. ನೋಡಿ ಚಂದ್ರು, ಕರ್ನಾಟಕದಿಂದ ಒಬ್ರು ಪೇಷಂಟ್ ಬಂದಿದಾರೆ. ಆಕೆಗೆ ಕ್ಯಾನ್ಸರ್ ಆಗಿದೆ. ಪೂರ್‌ಫೆಲೋ ಆಕೆ. ಆ ಕೇಸನ್ನು ನೀವೇ ಹ್ಯಾಂಡಲ್ ಮಾಡಿ… ‘ಕರ್ನಾಟಕ ಅಂದಾಕ್ಷಣ ಆ ಯುವ ವೈದ್ಯನ ಕಣ್ಣಲ್ಲಿ ಸಾವಿರ ಮಿಂಚು. ಆಕೆಗೆ ಚಿತ್ರದುರ್ಗ ಗೊತ್ತಿರಬಹುದಾ? ಟ್ರೀಟ್‌ಮೆಂಟ್ ಕೊಡುವಾಗ ಅದನ್ನೊಮ್ಮೆ ಕೇಳಿಬಿಡಬೇಕು ಎಂದುಕೊಂಡ. ತಕ್ಷಣ ಅವನಿಗೆ ತನ್ನ ಬಾಲ್ಯ, ಬಡತನ, ಒಂದು ಮಧ್ಯಾಹ್ನ ತಾನು ನೀರು ಕೇಳಿದಾಗ, ಒಂದು ದೊಡ್ಡ ಲೋಟದಲ್ಲಿ ಹಾಲು ಕೊಟ್ಟ ಆ ಹುಡುಗಿ, ಅವಳ ಮಮತೆ ಎಲ್ಲ ನೆನಪಾಯಿತು. ತಕ್ಷಣ ಆತ ಆ ರೋಗಿಯಿದ್ದ ವಾರ್ಡ್‌ಗೆ ಬಂದವನೇ, ಕ್ಷಣ ನಿಬ್ಬೆರಗಾಗಿ ನಿಂತುಬಿಟ್ಟ. ಅವನಿಗೆ ಅವಳ ಗುರುತಿಸಿತು ಸಿಕ್ಕಿಬಿಟ್ಟಿತು.

ದೇವರೇ, ಈಕೆಯನ್ನು ಉಳಿಸಲಿಕ್ಕಾಗಿ ನಿನ್ನ ಜತೆ ಯುದ್ದ ಮಾಡಲೂ ನಾನು ಸಿದ್ದ ಎಂದು ಮನದೊಳಗೇ ಉದ್ಗರಿಸಿದ ಡಾ. ಚಂದ್ರಶೇಖರ್. ನಂತರ ಆಕೆಯನ್ನು ತುರ್ತು ಚಿಕಿತ್ಸಾ ವಾರ್ಡ್‌ಗೆ ಸೇರಿಸಿದ. ಅಂದಿನಿಂದ ಹದಿನೈದು ದಿನಗಳ ಕಾಲ ತನ್ನ ಅನುಭವವನ್ನೆಲ್ಲಾ ಪಣಕ್ಕಿಟ್ಟು ಹೋರಾಡಿದ, ಇವನ ಶ್ರಮದ ಮುಂದೆ ದೇವರು ಸೋತು ಹೋದ. ಸಕಲೆಂಟು ಮಂದಿಯೂ ಬೆರಗಾಗುವ ರೀತಿಯಲ್ಲಿ ಆಕೆ ಕ್ಯಾನ್ಸರನ್ನು ಜಯಿಸಿದ್ದಳು.

ಚಿಕಿತ್ಸೆಯೆಲ್ಲಾ ಮುಗಿದು ಆಸ್ಪತ್ರೆಯಿಂದ ಡಿಸ್‌ಚಾರ್ಚ್ ಆಗುವ ದಿನ ಬಂದಾಗ ಆಕೆ ಹೆದರಿ ನಡುಗುತ್ತಿದ್ದಳು. ೧೫ ದಿನ ಐಸಿಯುನಲ್ಲಿದ್ದುದು ಆಕೆಗೆ ನೆನಪಿತ್ತು. ಆಕೆಯ ಬಳಿ ಚಿಕ್ಕಾಸೂ ಇರಲಿಲ್ಲ. ಏನೂ ಕೊಡದಿದ್ದರೆ ಆಸ್ಪತ್ರೆಯವರು ಬಿಟ್ಟಾರೆಯೇ? ಹೇಗೆಲ್ಲಾ ರೇಗುತ್ತಾರೋ ಏನೋ? ಕಾಸು ಕಟ್ಟದಿದ್ದರೆ ಜೈಲಿಗೆ ಕಳಿಸಿಬಿಟ್ಟರೆ ಗತಿ ಏನು? ಇಂಥ ಅಪಮಾನದ ಬದಲು ನಾನು ಸತ್ತು ಹೋಗಿದ್ದರೇ ಒಳ್ಳೆಯದಿತ್ತು ಅಂದುಕೊಳ್ಳುತ್ತಾ ಆಕೆ ವಾರ್ಡ್‌ನಲ್ಲಿ ಕುಳಿತಿದ್ದಳು. ಇತ್ತ ಆಕೆಯ ‘ಬಿಲ್ ಬಂತು. ಸಿಬ್ಬಂದಿಯಿಂದ ಬಿಲ್ ಪಡೆದ ಡಾ. ಚಂದ್ರಶೇಖರ್, ಅದರ ಒಂದು ಮೂಲೆಯಲ್ಲಿ ಹಸಿರು ಇಂಕ್‌ನಲ್ಲಿ ಏನೋ ಬರೆದು ಅದನ್ನು ಆಕೆಗೆ ಕಳುಹಿಸಿಕೊಟ್ಟ.

ನರ್ಸ್, ಬಿಲ್‌ನ ಕವರ್ ನೀಡಿದಾಗ ಈ ಹೆಂಗಸು ಮತ್ತೆ ಕಂಪಿಸಿದಳು. ನಡುಗುತ್ತಲೇ ಆ ಕವರ್ ಒಡೆದು ನೋಡಿದಳು. ಬಿಲ್‌ನ ಒಂದು ಬದಿಯಲ್ಲಿ ಒಂದು ಗ್ಲಾಸ್ ಹಾಲಿನ ರೂಪದಲ್ಲಿ ಆಸ್ಪತ್ರೆಯ ಚಿಕಿತ್ಸಾ ವೆಚ್ಚ ಪಾವತಿಯಾಗಿದೆ’ ಎಂದು ಬರೆದಿತ್ತು. ಈಕೆ ಶಾಕ್‌ಗೆ ಒಳಗಾದವಳಂತೆ’ ಕಣ್ತುಂಬಿಕೊಂಡು ಎದ್ದುನಿಂತಳು. ಎದುರಿಗೆ, ಅದೇ ಸ್ಥಿತಿಯಲ್ಲಿ ಡಾ. ಚಂದ್ರಶೇಖರ್ ನಿಂತಿದ್ದ.

****

ಅಂದಹಾಗೆ, ಈ ಬೇಸಿಗೆಯಲ್ಲಿ ನಿಮ್ಮ ಮಕ್ಕಳಿಗೆ ಯಾವ ಕತೆ ಹೇಳಿಕೊಟ್ಟಿರಿ?

ಎಂಟು ಜನರೂ ಒಮ್ಮೆಗೇ ಗುರಿ ಮುಟ್ಟಿದರು!

ಜೂನ್ 7, 2009

ಅದು ಜಿಲ್ಲಾ ಮಟ್ದದ ಕ್ರೀಡಾಕೂಟ. ವಿಶೇಷವೆಂದರೆ, ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಕ್ಕಳೆಲ್ಲ ಮಾನಸಿಕ ಅಸ್ವಸ್ಥರು, ಅಂಗವಿಕಲರು. ವಿಯ ಷಡ್ಯಂತ್ರಕ್ಕೆ ಬಲಿಯಾಗಿ ದೇಹದ ಯಾವುದೋ ಒಂದು ಅಂಗವನ್ನು ಕಳೆದುಕೊಂಡವರು.
ಅವತ್ತು ನಡೆಯಲಿದ್ದುದು ನೂರು ಮೀಟರ್ ಓಟದ ಅಂತಿಮ ಸುತ್ತಿನ ಸ್ಪರ್ಧೆ. ಕಣದಲ್ಲಿ ಉಳಿದಿದ್ದವರು ಎಂಟು ಮಂದಿ. ಆ ಪೈಕಿ ಊರುಗಾಲಿನ ಸಹಾಯದಿಂದ ಓಡುವ ಒಂದು ಹುಡುಗಿ ಕೂಡ ಇದ್ದಳು. ಮೊದಲು ಗುರಿ ತಲುಪಿದವರಿಗೆ ಕಪ್ ಮತ್ತು ಶೀಲ್ಡ್ ಕೊಡಲಾಗುವುದು ಎಂದು ಸಂಘಟಕರು ಮೇಲಿಂದ ಮೇಲೆ ಘೋಷಿಸಿದ್ದರು.
ಹೇಳಿ ಕೇಳಿ ಕಣದಲ್ಲಿರುವವರು ಅಂಗವಿಕಲರು ತಾನೆ? ಹಾಗಾಗಿ ಓಟದ ಸ್ಪರ್ಧೆಯಲ್ಲಿ ಅಂಥ ಸ್ವಾರಸ್ಯವಾಗಲಿ, ರೋಚಕ ಕ್ಷಣವಾಗಲಿ ಇರುವುದಿಲ್ಲ ಎಂದು ಎಲ್ಲರಿಗೂ ಗೊತ್ತಿತ್ತು. ಆದರೂ, ವಿಕಲಾಂಗರ ಓಟ ಹೇಗಿರುತ್ತದೋ ಎಂಬ ಕುತೂಹಲದಿಂದಲೇ ಒಂದಷ್ಟು ಮಂದಿ ಸ್ಟೇಡಿಯಂಗೆ ಬಂದಿದ್ದರು. ಇಂಥ ಕುತೂಹಲಿಗಳ ಮಧ್ಯೆಯೇ ಇದ್ದ ರ್ಸ್ಪಗಳ ಪೋಷಕರು-ಆಗಿಂದಾಗ್ಗೆ ಗಟ್ಟಿ ದನಿಯಲ್ಲಿ ತಮ್ಮ ಮಕ್ಕಳ ಕಡೆಗೆ ಕೈ ಮಾಡಿ ಕೂಗುತ್ತಾ-‘ವಿಷಲ್ ಹಾಕಿದ ತಕ್ಷಣ ಓಡಿಬಿಡಬೇಕು. ಫಸ್ಟ್ ಪ್ರೈಜೇ ತಗೋಬೇಕು ಗೊತ್ತಾಯ್ತಾ?’ ಎಂದು ಉಪದೇಶದ ಮಾತು ಹೇಳುತ್ತಿದ್ದರು.
ಕಡೆಗೊಮ್ಮೆ ಓಟ ಆರಂಭವಾಗುವ ಕ್ಷಣ ಬಂದೇ ಬಂತು. ಆಯೋಜಕರ ಕಡೆಯವರೊಬ್ಬರು -‘ರೆಡೀ, ಓನ್, ಟೂ, ಥ್ರೀ’ ಎಂದು, ನಂತರದ ಕೆಲವೇ ಸೆಕೆಂಡುಗಳಲ್ಲಿ ವಿಷಲ್ ಹಾಕಿದರು.
ಅಷ್ಟೇ, ಎಂಟೂ ಮಂದಿ ಓಡಲು ಶುರು ಮಾಡಿದರು. ಆ ಪೈಕಿ ಒಬ್ಬಾಕೆಗೆ ಕೈಗಳಿರಲಿಲ್ಲ. ಇನ್ನೊಬ್ಬಳಿಗೆ ಒಂದು ಕಾಲಿರಲಿಲ್ಲ. ಮತ್ತೊಬ್ಬಳಿಗೆ ದೃಷ್ಟಿ ಭಾಗ್ಯವಿರಲಿಲ್ಲ. ಮಗದೊಬ್ಬಳಿಗೆ ಬುದ್ಧಿ ಭ್ರಮಣೆ ಎಂಬ ಹಣೆಪಟ್ಟಿ ಅಂಟಿಕೊಂಡಿತ್ತು. ಆದರೆ, ಓಡುವ ಸಂದರ್ಭದಲ್ಲಿ ಮಾತ್ರ ಈ ಮಕ್ಕಳು ತಮ್ಮ ದೈಹಿಕ ನ್ಯೂನತೆಗಳನ್ನೂ ಮರೆತು ಗುರಿ ತಲುಪುವತ್ತ ಉತ್ಸಾಹದಿಂದ ಮುನ್ನುಗ್ಗಿದ್ದರು.
ಈ ಮಕ್ಕಳ ಆಮೆ ವೇಗದ ಓಟ ಕಂಡು ಕೆಲವರಿಗೆ ನಗು, ಕೆಲವರಿಗೆ ಅಚ್ಚರಿ. ಹೀಗಿದ್ದಾಗಲೇ ಊರುಗೋಲಿನ ಸಹಾಯದಿಂದಲೇ ಓಡುತ್ತಿದ್ದ ಹುಡುಗಿಯೊಬ್ಬಳು ಆಯತಪ್ಪಿ ಬಿದ್ದುಬಿಟ್ಟಳು. ಬಿದ್ದ ರಭಸಕ್ಕೆ ಚರ್ಮ ಕಿತ್ತು ಬಂದಿತ್ತು. ನೋವಿನಿಂದ ಆಕೆ ಚೀರಿಕೊಂಡಳು. ಆ ಕ್ಷಣವೇ ಮುಂದೆ ಓಡುತ್ತಿದ್ದ ಉಳಿದ ಏಳೂ ಮಕ್ಕಳು ಹಿಂತಿರುಗಿ ನೋಡಿದರು. ಎರಡೇ ನಿಮಿಷಗಳಲ್ಲಿ ಅವರ ಕಂಗಳು ಮಾತಾಡಿಕೊಂಡವು. ಎಲ್ಲರೂ ಮತ್ತೆ ಹಿಂದಕ್ಕೆ ಓಡಲು ತೊಡಗಿ, ಗಾಯಗೊಂಡಿದ್ದಾಕೆಯ ಬಳಿ ಬಂದರು. ಆಕೆಗೆ ತಮಗೆ ತಿಳಿದಂತೆ ಚಿಕಿತ್ಸೆ ನೀಡಿದರು.
ಸ್ಟೇಡಿಯಂನಲ್ಲಿ ಇದ್ದ ಜನರೆಲ್ಲ ಓಹ್, ಹೇಳಿ ಕೇಳಿ ಇವು ಬುದ್ಧಿಭ್ರಮಿತ, ಅಂಗವಿಕಲ ಮಕ್ಕಳು ತಾನೆ? ಇವುಗಳಿಗೆ ಸ್ಪರ್ಧೆ ಇದೆ ಅನ್ನೋದೇ ಮರೆತು ಹೋಗಬಹುದು ಎಂದು ಮಾತಾಡಿಕೊಂಡರು. ಇರಲಿ, ಮುಂದೇನಾದೀತೋ ಎಂದು ಅವರೆಲ್ಲ ಬೆರಗಿನಿಂದ ನೋಡುತ್ತಿದ್ದಾಗಲೇ ಗಾಯಗೊಂಡಿದ್ದ ಹುಡುಗಿಯನ್ನು ನಿಲ್ಲಿಸಿ ಎಲ್ಲರೂ ಒಬ್ಬರ ಕೈ ಇನ್ನೊಬ್ಬರು ಹಿಡಿದುಕೊಂಡು,ಒಂದೇ ವೇಗದಲ್ಲಿ ಓಡುತ್ತಾ ಬಂದು ಎಂಟು ಮಂದಿಯೂ ಒಟ್ಟಿಗೇ ಗುರಿ ತಲುಪಿದರು!
ಆ ಕ್ಷಣದಲ್ಲಿ ಆ ಮಕ್ಕಳ ಹೃದಯ ಮಾತಾಡಿತ್ತು! ಈ ಅಪರೂಪದ ದೃಶ್ಯ ನೋಡಿದ ಆ ಮಕ್ಕಳ ಪೋಷಕರು ಬಿಕ್ಕುತ್ತಾ ಓಡಿಬಂದು ಆ ಮಕ್ಕಳನ್ನು ಅಪ್ಪಿಕೊಂಡರು. ಅಂಗವಿಕಲ ಮಕ್ಕಳು ಪ್ರದರ್ಶಿಸಿದ ‘ದೊಡ್ಡ ಗುಣ’ ಕಂಡು ಮೂಕರಾದ ಅಕಾರಿಗಳು ಎಲ್ಲ ಮಕ್ಕಳಿಗೂ ಪ್ರತ್ಯೇಕವಾಗಿಯೇ ಒಂದೊಂದು ಕಪ್ ನೀಡಿ ತಾವೂ ಕಣ್ಣೊರಸಿಕೊಂಡರು!

ಮನುಷ್ಯ ಹೇಗೆ ಬದುಕಬೇಕು

ಜೂನ್ 7, 2009

ಕೆಲವರಿರುತ್ತಾರೆ: ಅವರು ಎಷ್ಟೇ ಎತ್ತರಕ್ಕೆ ಬೆಳೆದರೂ ‘ಎನಗಿಂತ ಕಿರಿಯರಿಲ್ಲ’ ಎಂದು ಹೇಳುತ್ತಲೇ ಇರುತ್ತಾರೆ. ಹಾಗೆಯೇ ಬದುಕುತ್ತಾರೆ. ತಮಗೆ ಕಷ್ಟಕಾಲದಲ್ಲಿ ಸಹಾಯ ಮಾಡಿದವರನ್ನು ಮೇಲಿಂದ ಮೇಲೆ ನೆನಪು ಮಾಡಿಕೊಳ್ಳುತ್ತಾ, ನನ್ನ ಬೆಳವಣಿಗೆಯ ಹಿಂದೆ ಇಂಥವರ ಕರುಣೆಯ ಕೈ ಕೆಲಸ ಮಾಡಿದೆ ಎಂದು ಹೇಳುವ ಮೂಲಕ ದೊಡ್ಡತನ ಮೆರೆಯುತ್ತಾರೆ. ಅಂಥವರ ಪೈಕಿ ಶಿವರಾಮ ಕಾರಂತರು ಪ್ರಮುಖರು.
ಕಾರಂತರು ತಮ್ಮ ‘ಚೋಮನ ದುಡಿ’ ಕಾದಂಬರಿಯನ್ನು ಅರ್ಪಿಸಿದ್ದು ದೇವಣ್ಣ ಸುಬ್ರಾಯ ಪೈ ಅವರಿಗೆ. ಪೈ ಅವರಿಗೇ ಕಾದಂಬರಿ ಅರ್ಪಿಸಿದ್ದೇಕೆ ಎಂಬುದಕ್ಕೆ ಕಾರಂತರು ಸ್ಪಷ್ಟನೆಯನ್ನೂ ಕೊಡುತ್ತಾರೆ. ಅದು ಹೀಗೆ:
ಈ ಗ್ರಂಥದ ಅರ್ಪಣೆಯ ವಿಚಾರ- ಇದನ್ನು ನನ್ನೊಬ್ಬ ಮಿತ್ರರಾದ ಕುಂದಾಪುರದ ದೇವಣ್ಣ ಸುಬ್ರಾಯ ಪೈಗಳಿಗೆ ಅರ್ಪಿಸಿದ್ದೇನೆ. ಅವರೇನು ದೊಡ್ಡ ಮನುಷ್ಯರ ವರ್ಗಕ್ಕೆ ಸೇರಿದವರಲ್ಲ. ಬಡ ಗುಮಾಸ್ತರೊಬ್ಬರು. ಆದರೆ ಅವರಿಗೆ ನನ್ನಿಂದ ಸಲ್ಲುವ ಪ್ರೇಮದ ಋಣ ಬಹಳವಿದೆ. ಎಷ್ಟೋ ಸಮಯ, ನಾನು ಅವರನ್ನು ಮರೆಯುವ ತಪ್ಪನ್ನೂ ಮಾಡಿದ್ದೇನೆ. ಈಗ ಅವರಿಗೆ ಈ ವಿಶ್ವಾಸದ ಕಾಣಿಕೆಯನ್ನು ಅರ್ಪಿಸುತ್ತಿದ್ದೇನೆ.
ನಾನು ಚಿಕ್ಕವನಾಗಿರುವಾಗ (ಈಗ ದೊಡ್ಡವನಾಗಿಲ್ಲ) ಅವರ ಬೆಂಬಲವಿಲ್ಲದಿದ್ದರೆ ನನಗೆ ಸಾಹಿತ್ಯ ಕ್ಷೇತ್ರದಲ್ಲಿ ಹಾರುವುದು ಅಸಾಧ್ಯದ ಮಾತಾಗಿತ್ತು. ತಮ್ಮ ಕಷ್ಟಾರ್ಜಿತ ಧನದಿಂದ ಅವರು ನನ್ನ ಹಿಂದಿನ ಸಾಹಸ ‘ವಸಂತ’ ಪತ್ರಿಕೆಯ ಜನ್ಮಕ್ಕೆ ಕಾರಣರಾದರು. ಅದರಿಂದಾಗಿ, ನನ್ನ ಮೊದಲಿನ ಕಾದಂಬರಿ ‘ವಿಚಿತ್ರ ಕೂಟ’ವು ಬೆಳಕನ್ನು ಕಂಡಿತು. ನನ್ನ ಅಂದಿನ ಕೆಲಸಗಳೆಲ್ಲ ತೀರ ತೊದಲು ನುಡಿಗಳಂತಿವೆ. ಅವುಗಳನ್ನು ಆಡಲು, ತಮ್ಮ ಅಪಾರ ತ್ಯಾಗದಿಂದ ಅವರೇ ವಾತಾವರಣ ಕಲ್ಪಿಸಿಕೊಟ್ಟರು. ನಾನು ಯಾವ ಸ್ಥಿತಿಯಲ್ಲಿದ್ದರೂ ಅವರ ಸಹಾಯದ ನೀರೇ, ಮುಂದಿನ ಬೆಳೆಗೆ ಕಾರಣವಾಯಿತು ಎಂಬುದನ್ನು ಮರೆಯಲಾರೆ. ಅವರು ಸಾಹಿತ್ಯ ಪ್ರೇಮಿಗಳೂ, ಹರಿಜನರ ಮೇಲೆ ಕರುಣೆಯುಳ್ಳವರೂ ಅಹುದು. ಆದುದರಿಂದ ಇದೇ ಉಚಿತ ಕಾಣಿಕೆಯೆಂದು ಅವರಿಗೆ ಅರ್ಪಿಸುತ್ತಿದ್ದೇನೆ.
****
ಈಗ ಹೇಳಿ, ಮನುಷ್ಯ ಹೇಗೆ ಬದುಕಬೇಕು ಎಂಬುದಕ್ಕೆ ಕಾರಂತರ ಈ ಬರಹವೇ ಉತ್ತರವಾಗುತ್ತದೆ. ಅಲ್ಲವೆ?

ಪಪ್ಪಂಗೆ ಒಮ್ಮೆಶಾಕ್ ಕೊಟ್ರೆ ಹ್ಯಾಗೆ?

ಜೂನ್ 7, 2009

ಮಕ್ಕಳು ಎಷ್ಟೊಂದು ಮುಗ್ಧವಾಗಿ ಯೋಚಿಸುತ್ತವೆ ಎಂಬುದಕ್ಕೆ ಉದಾಹರಣೆಯಾಗಿ ಈ ಪುಟ್ಟ ಕಥೆ. ಅದೊಮ್ಮೆ ಮಗುವೊಂದು ತಾಯಿಯನ್ನು ಕೇಳಿತು: ‘ಅಮ್ಮ ಅಮ್ಮ, ನಂಗೆ ಆಟ ಆಡೋಕೆ ಜತೆಗೊಂದು ಪಾಪು ಬೇಕು. ನಮ್ಮ ಮನೇಗೆ ಇನ್ನೊಂದು ಪಾಪು ತರೋಣ್ವ?’
ಮಗುವಿನ ಈ ಮುದ್ದು ಮಾತು ಕೇಳಿ ಒಳಗೊಳಗೇ ನಾಚಿಕೊಂಡ ಅಮ್ಮ ಹೇಳಿದಳು: ‘ನೋಡು ಕಂದಾ, ನಿಮ್ಮ ಡ್ಯಾಡಿ ಈಗ ಫಾರಿನ್ಗೆ ಹೋಗಿದ್ದಾರೆ. ಅವರು ವಾಪಸ್ ಬಂದ ಮೇಲೆ, ನೀನು ಕೇಳ್ತಾ ಇದೀಯಲ್ಲ ಹೊಸ ಪಾಪು; ಆ ಬಗ್ಗೆ ಮಾತಾಡ್ತೀನಿ. ನಂತರ ಸ್ವಲ್ಪ ದಿನ ಆದ ಮೇಲೆ ನಮ್ಮ ಮನೆಗೆ ಹೊಸ ಪಾಪು ಬರುತ್ತೆ. ಸರೀನಾ?’
ಈ ಕಂದ ತಕ್ಷಣವೇ ಅದೇ ಮುದ್ ಮುದ್ದು ಭಾಷೆಯಲ್ಲಿ ಹೀಗೆಂದಿತು: ‘ಪಪ್ಪ ಬರೋ ತನಕ ಕಾಯುವುದರ ಬದಲು, ಅವರು ಬರೋಕಿಂತ ಮೊದಲೇ ನೀನೇ ಒಂದು ಪಾಪು ತಂದ್ಕೋಬಿಡಮ್ಮ. ಆಗ ನಾವು ಪಪ್ಪ ಬಂದ ತಕ್ಷಣ ಅವರಿಗೆ ಹೊಸ ಪಾಪೂನ ತೋರಿಸಿ, ಶಾಕ್ ಕೊಡಬಹುದು!’
***
ಈ ಮಾತನ್ನು ಮಗು ಹೇಳಿದ್ದಕ್ಕೆ ಅದು ತಮಾಷೆ. ಅದೇ ಮಾತನ್ನು ಸ್ವಲ್ಪ ಅದಲು ಬದಲು ಮಾಡಿ ದೊಡ್ಡವರು ಹೇಳಿದ್ದರೆ… ಹೇಳಿದ್ದರೆ…?!

ಮಹಾರಾಜರು ಕಾಲಿಟ್ಟ ತಕ್ಷಣ ದೀಪಗಳು ಝಗ್ಗೆಂದು…

ಜೂನ್ 7, 2009

ಚಿಕ್ಕಂದಿನಲ್ಲಿ ಅಪ್ಪ-ಅಮ್ಮನೋ; ಅಜ್ಜಿ-ತಾತನೋ ಅಥವಾ ಗೆಳೆಯನೋ ಹೇಳಿದ್ದ ಕೆಲವು ಕತೆಗಳು ಮೇಲಿಂದ ಮೇಲೆ ಬಿಟ್ಟೂ ಬಿಡದೆ ಕಾಡುತ್ತವೆ. ಹೇಳಿಕೇಳಿ ಕಥೆಗಳಲ್ಲವೆ? ಅದೇ ಕಾರಣದಿಂದ ಅವುಗಳಲ್ಲಿ ಸತ್ಯಾಂಶ ಇರುವುದಿಲ್ಲ. ಆದರೆ, ಕತೆ ಹೇಳುವವರು ತಾವು ಪ್ರತ್ಯಕ್ಷ ಕಂಡದ್ದೇನೋ ಎಂಬಂತೆ ಆ ಘಟನೆಯನ್ನು ಬಣ್ಣಿಸಿರುತ್ತಾರೆ. ಪರಿಣಾಮ, ಕಥೆ ಕೇಳಿದವರು ಕೂಡ ಅದೆಷ್ಟೋ ದಿನಗಳವರೆಗೆ ಅದು ನಿಜವೆಂದೇ ನಂಬಿರುತ್ತಾರೆ.
ಅಂಥದೊಂದು ಪ್ರಸಂಗ ಇಲ್ಲಿದೆ ಕೇಳಿ: ಇದು ಚಂದ್ರಶೇಖರ ಆಲೂರು ಅವರ ‘ನಾನು ಒಲಿದಂತೆ ಹಾಡುವೆ’ ಪ್ರಬಂಧ ಸಂಕಲನದಿಂದ ಎತ್ತಿಕೊಂಡದ್ದು. ‘ಮೈಸೂರು ಅರಮನೆಯ ಅಷ್ಟೂ ದೀಪಗಳು ಸಂಜೆಯ ವೇಳೆ, ಏಕಕಾಲಕ್ಕೆ ಝಗ್ಗನೆ ಹೊತ್ತಿಕೊಳ್ಳುತ್ತವಲ್ಲ; ಅದು ಹೇಗೆ? ಎಂಬ ಪ್ರಶ್ನೆಗೆ ಆಲೂರರ ಗೆಳೆಯನೊಬ್ಬ ಹೇಳಿದನಂತೆ: ಮೈಸೂರು ಅರಮನೆಯಲ್ಲಿ ಅದೇನೋ ಒಂದು ವಿಶೇಷ ತಂತ್ರ ಜ್ಞಾನ ಬಳಸಿದ್ದಾರಂತೆ. ಅದೇನಪ್ಪ ಅಂದ್ರೆ ದಿನಾಲೂ ಸಂಜೆ ಮಹಾರಾಜರು ಆಸ್ಥಾನಕ್ಕೆ ಬಂದು-ಸಿಂಹಾಸನದ ಮೇಲೆ ಬಲಗಾಲು ಇಟ್ಟ ತಕ್ಷಣ ಮೈಸೂರಾದಿ ಮೈಸೂರಿನ ದೀಪಗಳೆಲ್ಲ ಝಗ್ಗನೆ ಹೊತ್ತಿಕೊಳ್ತವಂತೆ!’
ಈ ಕಥೆಯನ್ನು ನಿಜವೆಂದೇ ತುಂಬಾ ದಿನಗಳ ಕಾಲ ನಂಬಿದ್ದ ಆಲೂರು ಮತ್ತು ಮಿತ್ರರು, ಆಕಸ್ಮಿಕವಾಗಿ ಮೈಸೂರಿಗೆ ಹೋದಾಗ, ಸಂಜೆಯ ವೇಳೆ ಅವರೆಲ್ಲ ನೋಡನೋಡುತ್ತಿದ್ದಂತೆಯೇ ಅರಮನೆಯ ದೀಪಗಳು ಝಗ್ಗನೆ ಹೊತ್ತಿಕೊಂಡರೆ- ‘ಓಹ್, ಈಗ ಮಹಾರಾಜರು ಸಿಂಹಾಸನದ ಮೇಲೆ ಬಲಗಾಲು ಇಟ್ಟಿದಾರೆ ಅಂತಾಯ್ತು!’ ಅನ್ನುತ್ತಿದ್ದಂತೆ.
***
ಈಗ ಸುಮ್ಮನೇ ಒಮ್ಮೆ ಯೋಚಿಸಿ. ಮಹಾರಾಜರು ಸಿಂಹಾಸನ ಮೆಟ್ಟಿದ ತಕ್ಷಣ ದೀಪಗಳು ಹೊತ್ತಿಕೊಳ್ಳುವುದೇ ನಿಜವಾಗಿದ್ದರೆ, ಆ ದೀಪಗಳನ್ನು ಆರಿಸುವುದಕ್ಕೆ ಕೂಡ ಇನ್ನೊಂದು ಟೆಕ್ನಿಕ್ ಬಳಸಬೇಕಾಗಿತ್ತು! ಜತೆಗೆ ಒಂದು ವೇಳೆ ಅವರಿಗೆ ಜ್ವರ ಗಿರ ಬಂದು ಎರಡು ಮೂರು ದಿನ ಹಾಸಿಗೆ ಹಿಡಿದಿದ್ದರೆ?
ಉಹುಂ, ಆಗ ಇಂಥ ತುಂಟ ಯೋಚನೆಗಳು ಬರುತ್ತಿರಲಿಲ್ಲ. ಕಥೆಗಳು ಕೇಳಿದಷ್ಟೂ ಖುಷಿಕೊಡುತ್ತಿದ್ದವು. ಹೀಗೇ…

ಸಿಂಹ ಅವರ ವೇಷದಲ್ಲಿ ಕೈಲಾಸಂ ಬಂದಿದ್ರು, ಗೊತ್ತಾ?

ಮೇ 27, 2009

simha

ಕೈಲಾಸಂ ಕುರಿತು ಇರುವ ಕತೆಗಳಿಗೆ ಲೆಕ್ಕವಿಲ್ಲ. ಆ ಪೈಕಿ ಸ್ವಾರಸ್ಯಕರ ಎಂಬಂಥ ಒಂದೆರಡು ಸ್ಯಾಂಪಲ್‌ಗಳು ಹೀಗಿವೆ. ಸ್ಯಾಂಪಲ್ ಒಂದು: ಕೈಲಾಸಂ, ಗಣಿತದಲ್ಲಿ ವಿಪರೀತ ಬುದ್ಧಿವಂತ ಆಗಿದ್ದರಂತೆ. ಅವರು ಹಾಸನದಲ್ಲಿ ಪ್ರೌಢಶಾಲೆಯಲ್ಲಿದ್ದ ಸಂದರ್ಭದಲ್ಲಿ, ಪರೀಕ್ಷೆಯಲ್ಲಿ ಹದಿನೈದು ಪ್ರಶ್ನೆಗಳನ್ನು ನೀಡಿ, ಯಾವುದಾದರೂ ಹತ್ತಕ್ಕೆ ಮಾತ್ರ ಉತ್ತರಿಸಿ ಎಂದು ಸೂಚನೆ ನೀಡಲಾಗಿತ್ತಂತೆ.

ಈ ಕೈಲಾಸಂ ಸಾಹೇಬರು, ಎಲ್ಲ ಹದಿನೈದು ಲೆಕ್ಕಗಳನ್ನೂ ಸರಿಯಾಗಿ ಬಿಡಿಸಿ-ಉತ್ತರ ಪತ್ರಿಕೆಯ ಕೆಳಗೆ-‘ಮಾನ್ಯ ಪರೀಕ್ಷಕರೆ, ಯಾವುದಾದರೂ ಹತ್ತು ಉತ್ತರಗಳಿಗೆ ಮಾರ್ಕ್ಸ್ ಕೊಡಿ’ ಎಂದು ಬರೆದಿದ್ದರಂತೆ!

ಸ್ಯಾಂಪಲ್ ಎರಡು: ಕೈಲಾಸಂ ಅವರು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಇಂಗ್ಲೆಂಡ್‌ಗೆ ಹೋಗಿದ್ದರು. ಅಲ್ಲಿ ಪಾಠ ಕಲಿತಿದ್ದಕ್ಕಿಂತ ಹೆಚ್ಚಾಗಿ ನಾಟಕ, ಸಂಗೀತ ಕಲಿತರು. ಈ ಮಧ್ಯೆಯೇ ಗುಂಡು ಸೇವನೆಯೂ ಆಗುತ್ತಿತ್ತು. ಅದೊಂದು ದಿನ ಕ್ಲಬ್‌ನಲ್ಲಿ ಹಾಡಿದ ಗಾಯಕನೊಬ್ಬ ತನ್ನ ಸಂಗೀತ ಜ್ಞಾನ, ಕಂಠಸಿರಿಯ ಬಗ್ಗೆ ತಾನೇ ಹೆಮ್ಮೆ ಪಡುತ್ತ- ‘ಧೈರ್ಯವಿದ್ದರೆ ಇಲ್ಲಿರುವ ಸಭಿಕರ ಪೈಕಿ ಯಾರಾದ್ರೂ ನನ್ನ ಥರಾನೇ ಹಾಡಿ ನೋಡೋಣ’ ಅಂದನಂತೆ.

ಈ ಛಾಲೆಂಜ್ ಸ್ವೀಕರಿಸಲು ಬ್ರಿಟಿಷರೇ ಹಿಂದೆ ಮುಂದೆ ನೋಡುತ್ತಿದ್ದಾಗ-ಛಕ್ಕನೆ ಮೇಲೆದ್ದ ಕೈಲಾಸಂ-ಒಂದಿಷ್ಟೂ ತಡವರಿಸದೆ ಆತನಂತೆಯೇ ಹಾಡಿ, ಎಲ್ಲರ ಶಹಭಾಷ್‌ಗಿರಿಯ ಜತೆಗೆ ಬಹುಮಾನವನ್ನೂ ಗಿಟ್ಟಿಸಿದರಂತೆ…

ಕೈಲಾಸಂ ಹೇಗಿದ್ದರು ಎಂದು ವಿವರಿಸುತ್ತಾ ಹೀಗೆಲ್ಲ ಹೇಳುವ ಜನರೇ ಮತ್ತೂ ಒಂದು ಸಾಲು ಸೇರಿಸುತ್ತಾರೆ: ‘ಕೈಲಾಸಂ ಒಂದು ಕೈಲಿ ಬುಸಬುಸನೆ ಸಿಗರೇಟು ಸೇದುತ್ತಾ, ಆಕಾಶಕ್ಕೆ ಹೊಗೆ ಬಿಡುತ್ತಾ, ತಮ್ಮ ನಾಟಕದ ಪಾತ್ರಗಳ ಸಂಭಾಷಣೆಯನ್ನು ಹೇಳ್ತಾ ಹೋಗ್ತಿದ್ರು. ಅವರ ಶಿಷ್ಯಂದಿರು ಅದನ್ನು ಬರೆದುಕೊಳ್ತಿದ್ರು. ಕೈಲಾಸಂ ಅವರಿಂದ ಡಿಕ್ಟೇಷನ್ ಪಡೆಯುವುದೇ ಸೌಭಾಗ್ಯ ಎಂದು ನಂಬಿದವರ ದೊಡ್ಡ ಹಿಂಡೇ ಅವರ ಸುತ್ತಮುತ್ತ ಇತ್ತು…’

***

ಈಗ ನಮ್ಮೊಂದಿಗಿಲ್ಲದ ಒಬ್ಬ  ವ್ಯಕ್ತಿಯ ಕುರಿತು ಇಂಥದೇ ‘ಕತೆ’ಗಳನ್ನು ಕೇಳಿದಾಗ, ಆತ ಹೀಗಿದ್ದನೇನೋ; ಹೀಗೆ ಮಾತಾಡುತ್ತಿದ್ದನೇನೋ; ಹೀಗೆ ನಡೆದಾಡುತ್ತಿದ್ದನೇನೋ ಎಂಬ ಅಂದಾಜಿನ ಚಿತ್ರ ಕಣ್ಮುಂದೆ ಬಂದು ನಿಲ್ಲುತ್ತದೆ. ಅಂಥ ವ್ಯಕ್ತಿಯೊಬ್ಬನ ಪಾತ್ರವನ್ನು ರಂಗದ ಮೇಲೆ ತರುವುದಿದೆಯಲ್ಲ? ಅದು ನಿಜಕ್ಕೂ ಸವಾಲಿನ ಕೆಲಸ.

ಇಂಥದೊಂದು ಸವಾಲನ್ನು ಯಶಸ್ವಿಯಾಗಿ ನಿಭಾಯಿಸಿದ್ದು ನಟ ಸಿ.ಆರ್. ಸಿಂಹ ಅವರ ಹೆಚ್ಚುಗಾರಿಕೆ. ಕೈಲಾಸಂ ಅವರ ವ್ಯಕ್ತಿಚಿತ್ರವನ್ನು ‘ಟಿಪಿಕಲ್ ಟಿ.ಪಿ. ಕೈಲಾಸಂ’ ಎಂಬ ನಾಟಕದಲ್ಲಿ ಅಕ್ಷರ ರೂಪದಲ್ಲಿ ತೆರೆದಿಟ್ಟವರು ನಾಟಕಕಾರ, ನಿರ್ದೇಶಕ ಟಿ.ಎನ್. ನರಸಿಂಹನ್. ವೇದಿಕೆ ತಂಡದಿಂದ ನಟ ಸಿ.ಆರ್. ಸಿಂಹ ಆ ನಾಟಕವನ್ನು ಕಳೆದ ಇಪ್ಪತ್ತೈದು ವರ್ಷಗಳಿಂದಲೂ ಪ್ರದರ್ಶಿಸುತ್ತಿದ್ದಾರೆ. ಅದು ಒನ್‌ಮ್ಯಾನ್ ಶೋ. ಎರಡು ಗಂಟೆ ಇಪ್ಪತ್ತು ನಿಮಿಷಗಳ ಕಾಲ ‘ಕೈಲಾಸಂ’ ಆಗಿ ಸಿಂಹ ಇಡೀ ವೇದಿಕೆಯನ್ನೆ ಆಕ್ರಮಿಸಿಕೊಳ್ಳುವ ಪರಿಯಿದೆಯಲ್ಲ? ವಾಹ್, ಅದೊಂದು ಅದ್ಭುತ, ಅದೊಂದು ಸೋಜಿಗ, ಅದೊಂದು ಬೆರಗು ಮತ್ತು ಅದು ವರ್ಣನೆಗೆ ನಿಲುಕಲಾಗದ ಆನಂದ.

ಕೈಲಾಸಂ, ಚಟಪಟ ಮಾತಿನ; ಅಂಥದೇ ಬಿರುಸಿನ ಓಡಾಟದ ಆಸಾಮಿ. ಈ ಇಳಿವಯಸ್ಸಿನಲ್ಲಿ ಆ ಪಾತ್ರ ಮಾಡಲು ಸಿಂಹ ಅವರಿಗೆ ಸಾಧ್ಯವೇ? ಮೊನ್ನೆ, ಮೇ ೧೨ರ ಮಂಗಳವಾರ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ನಾಟಕಕ್ಕೆ ಬಂದ ಎಲ್ಲರನ್ನೂ ಈ ಅನುಮಾನದ ಮುಳ್ಳು ಕಾಡುತ್ತಲೇ ಇತ್ತು. ವಯಸ್ಸಿನ ಕಾರಣದಿಂದ ಡೈಲಾಗ್ ಹೇಳುವಾಗ, ನಡೆದಾಡುವಾಗ, ಕೈಲಾಸಂ ಶೈಲಿಯಲ್ಲಿ ಡ್ಯಾನ್ಸ್ ಮಾಡಬೇಕಾಗಿ ಬಂದಾಗ ಸಿಂಹ ತಡವರಿಸಬಹುದು. ಈ ಕಾರಣದಿಂದಲೇ ನಾಟಕ ಸ್ವಲ್ಪ ಸಪ್ಪೆ ಅನ್ನಿಸಬಹುದು ಎಂದೇ ಎಲ್ಲರೂ ನಿರೀಕ್ಷಿಸಿದ್ದರು.

ಆದರೆ, ಹಾಗಾಗಲಿಲ್ಲ. ಸಿಂಹ-ಅದ್ಭುತವಾಗಿ ನಟಿಸಿದರು. ಅಲ್ಲಲ್ಲ, ಕೈಲಾಸಂ ಅವರೇ ಸಿಂಹ ಅವರ ವೇಷದಲ್ಲಿ ಬಂದು, ಕಲಾಕ್ಷೇತ್ರದ ಆ ಮೂಲೆಯಿಂದ ಈ ಮೂಲೆಯವರೆಗೂ ಪಾದರಸದಂತೆ ಓಡಾಡಿ, ತಮ್ಮ ಇಂಗ್ಲಿಷ್‌ಗನ್ನಡ ಮಾತುಗಳಿಂದ ಪ್ರೇಕ್ಷಕರನ್ನು ರಂಜಿಸಿದರು. ಒಂದೊಂದು ದೃಶ್ಯ ಮುಗಿದಾಗಲೂ ಇದೆಲ್ಲಾ ಕೈಲಾಸಂ, ಇದೆಲ್ಲ ಸಿಂಹ ಎಂದು ಖುಷಿಯಿಂದ ಚೀರುವಂತಾಗುತ್ತಿತ್ತು. ಒ ಂದು ವಿಶೇಷವೆಂದರೆ ನಾಟಕ ನಡೆದಷ್ಟೂ ಹೊತ್ತು ಸಿಂಹ ಅವರ ಮೊಗದ ತುಂಬಾ ಕೈಲಾಸಂ ಮುಖದ ಹೋಲಿಕೆಯೇ ಕಾಣುತ್ತಿತ್ತು. ಸಭಿಕರಿಗೆ ಒರಿಜನಲ್ ಸಿಂಹ, ಅವರ ಮುಖಾರವಿಂದ ಕಾಣಿಸಿದ್ದು ನಾಟಕ ಮುಗಿದ ಇಪ್ಪತ್ತು ನಿಮಿಷದ ನಂತರ!

ಅದನ್ನು ಕಂಡು ಪ್ರೇಕ್ಷಕರೊಬ್ಬರು ಖುಷಿಯಿಂದ ಉದ್ಗರಿಸಿದರು: ಕನ್ನಡಕೊಬ್ಬನೇ ಕೈಲಾಸಂ ಮತ್ತು ಕನ್ನಡಕ್ಕೊಬ್ಬರೇ ಸಿಂಹ!

-ಕಾಂತನ್

 

ಅದೇ ದೋಸೆ ಅದೇ ಮಾಣಿ ಮತ್ತು ಅದೇ ಪ್ರಕಾಶ್ ರೈ!

ಮೇ 5, 2009

2007042914370202

ಕಳೆದ ಭಾನುವಾರ-ಅಂದರೆ, ಏಪ್ರಿಲ್ ೨೬ರಂದು ಯಾವುದೇ ಹೊಸ ಚಿತ್ರದ ಶೂಟಿಂಗ್ ಇರಲಿಲ್ಲ. ಮುಹೂರ್ತವಿರಲಿಲ್ಲ. ನಟ-ನಟಿಯ ಮದುವೆಯೂ ಇರಲಿಲ್ಲ. ಇದ್ದದ್ದು ‘ಅಮ್ಮ ಹೇಳಿದ ಎಂಟು ಸುಳ್ಳುಗಳು’ ಪುಸ್ತಕದ ಬಿಡುಗಡೆ ಸಮಾರಂಭ. ‘ಅದೊಂದೇ ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಬರುತ್ತೇನೆ; ಅದೂ ಏನು? ಚೆನ್ನೈನಿಂದ ಹೊರಡುವ ಮೊದಲ ವಿಮಾನ ಹತ್ತಿ, ಏರ್ಪೋರ್ಟ್ನಿಂದ ಸೀದಾ ಸಮಾರಂಭ ನಡೆವ ರವೀಂದ್ರ ಕಲಾಕ್ಷೇತ್ರಕ್ಕೇ ಬರುತ್ತೇನೆ’ ಅಂದಿದ್ದರು ನಟ ಪ್ರಕಾಶ್ ರೈ.
ದಿನಕ್ಕೆ ನಾಲ್ಕು ಶೆಡ್ಯೂಲ್ಗಳಲ್ಲಿ ದುಡಿಯುವ ಪ್ರಕಾಶ್ ರೈ ಅವರಂಥ ಬಿಜಿ ನಟ ಆಫ್ಟರಾಲ್ ‘ಒಂದು ಪುಸ್ತಕ ಬಿಡುಗಡೆಯ ಕಾರಣಕ್ಕೇ ಬೆಂಗಳೂರಿಗೆ ಬರುತ್ತಾರೆಂಬ ನಿರೀಕ್ಷೆ ಯಾರಿಗೂ ಇರಲಿಲ್ಲ. ಅವರು ಬರುವುದಿಲ್ಲ ಎಂಬ ನಂಬಿಕೆ ಎಲ್ಲರಿಗೂ ಇತ್ತು. ಆದರೆ, ಎಲ್ಲ ನಿರೀಕ್ಷೆಗಳನ್ನು ಸುಳ್ಳು ಮಾಡಿದ ಪ್ರಕಾಶ್ ರೈ ಬೆಳ್ಳಂಬೆಳಗ್ಗೆ ೯.೪೦ಕ್ಕೇ ರವೀಂದ್ರ ಕಲಾಕ್ಷೇತ್ರದ ಅಂಗಳಕ್ಕೆ ಬಂದೇ ಬಿಟ್ಟರು! ಕಾರ್ಯಕ್ರಮವಿರುವುದು ಹನ್ನೊಂದು ಗಂಟೆಗೆ ಎಂದು ತಿಳಿದಾಗ ಅಲ್ಲಿನ ಕ್ಯಾಂಟೀನ್ ಕಟ್ಟೆಯ ಮೇಲೆ ಥೇಟ್ ಕಾಲೇಜು ಹುಡುಗನ ಥರಾ ಕೂತುಕೊಂಡರು. ‘ಹದಿನೈದು ವರ್ಷದ ಹಿಂದೆ, ಇದೇ ಜಾಗದಲ್ಲಿ ಕೂತಿರುತ್ತಿದ್ದೆ. ಆಗ ಜೇಬಲ್ಲಿ ಕಾಸಿರುತ್ತಿರಲಿಲ್ಲ’ ಎಂಬುದನ್ನೆಲ್ಲ ನೆನಪು ಮಾಡಿಕೊಳ್ಳುವ ವೇಳೆಗೇ ಅವರ ಹಳೆಯ ಗೆಳೆಯರ ಹಿಂಡು ಬಂದೇ ಬಂತು. ಹಾಗೆ ಬಂದವರೆಲ್ಲ ಪದೇ ಪದೆ ಕಣ್ಣುಜ್ಜಿಕೊಂಡು ತನ್ನನ್ನೇ ಬೆರಗಿನಿಂದ ನೋಡುವುದನ್ನು ಕಂಡ ಪ್ರಕಾಶ್ ರೈ ತುಂಟತನದಿಂದ ಹೇಳಿದರು: ‘ತಡವಾಗಿ ಬಂದ್ರೆ ಕಲಾಕ್ಷೇತ್ರದಲ್ಲಿ ಜಾಗ ಸಿಗಲ್ಲ ಅನ್ನಿಸ್ತು. ಅದಕ್ಕೇ ಬೇಗ ಬಂದುಬಿಟ್ಟೆ…’
***
ಹದಿನೈದು ವರ್ಷಗಳ ಹಿಂದೆ ಕಲಾಕ್ಷೇತ್ರಕ್ಕೇ ‘ಅಪರಿಚಿತ’ರಾಗಿದ್ದರಲ್ಲ ರೈ? ಆಗಲೂ ಇವರ ಸವಾರಿ ಟೌನ್ಹಾಲ್ ಸಮೀಪದ ಕಾಮತ್ ಹೋಟೆಲ್ಗೆ ಹೋಗುತ್ತಿತ್ತು. ಜತೆಗೆ ಗೆಳೆಯರಿರುತ್ತಿದ್ದರು. ಹಾಗೆ ಹೋದವರು, ಒಂದು ಮೂಲೆ ಟೇಬಲ್ನಲ್ಲಿ ಕೂತು ಸಿಗರೇಟು ಹಚ್ಚುತ್ತಿದ್ದರು. ಆ ಟೇಬಲ್ಗೆ ಸರ್ವ್ ಮಾಡುತ್ತಿದ್ದ ಮಾಣಿಗೆ, ರೈ ಸಾಹೇಬರ ಮೇಲೆ ಅದೇನೋ ಅಕ್ಕರೆ, ಪ್ರೀತಿ, ಮಮಕಾರ. ಇವರ ಪಟ್ಟಾಂಗವೆಲ್ಲ ಮುಗಿದ ನಂತರ ಆತ ಬೈಟು ಕಾಫಿ ತಂದಿಡುತ್ತಿದ್ದ.
ಮೊನ್ನೆ ಕಲಾಕ್ಷೇತ್ರದ ಎದುರು ಕೂತಾಗ ಕಾಮತ್ ಹೋಟೆಲಿನ ತಿಂಡಿ ನೆನಪಾಯಿತು. ತಕ್ಷಣವೇ ಹಳೆಯ ಗೆಳತಿಯ ಮನೆ ಹುಡುಕುವ ಹುಡುಗನಂತೆ ಪ್ರಕಾಶ್ ರೈ ಸಾಹೇಬರು, ಗೆಳೆಯ ಬಿ. ಸುರೇಶ್ರನ್ನೂ ಜತೆಗಿಟ್ಟುಕೊಂಡು ಕಾಮತ್ ಹೋಟೆಲ್ಗೆ ಹೋಗಿಯೇಬಿಟ್ಟರು. ಅದೇ ಹಳೆಯ ಟೇಬಲ್ನ ಮೂಲೆಯಲ್ಲಿ ಕೂತು ಮಸಾಲೆ ದೋಸೆಗೆ ಆರ್ಡರ್ ಮಾಡಿದರು. ನಂತರ ಸಹಜ ಕುತೂಹಲದಿಂದ, ತನ್ನ ಗೆಳೆಯನಂತಿದ್ದ ಹಳೆಯ ಮಾಣಿಯ ಬಗ್ಗೆ ವಿಚಾರಿಸಿದರು. ‘ಆತ ಈಗಲೂ ಇಲ್ಲೇ ಇದ್ದರೆ, ಸ್ವಲ್ಪ ಕರೀತೀರಾ? ನಾನು ನೋಡ್ಬೇಕು’ ಎಂದೂ ಕೇಳಿಕೊಂಡರು.
ಆ ಮಾಣಿ ಬೆರಗಿನಿಂದ ಬಂದವನೇ- ‘ಓ ಪ್ರಕಾಶ್ ರೈ ಸಾರ್… ನೀವು ಈಗಲೂ ಹಾಗೇ ಇದೀರ. ಏನೇನೂ ಬದಲಾಗಿಲ್ಲ ನೋಡಿ, ಸ್ವಲ್ಪ ದಪ್ಪ ಆಗಿದೀರ ಅಷ್ಟೆ, ಅಂದ!’
‘ಹೌದಪ್ಪಾ ಹೌದು. ನಾನೂ ಹಾಗೇ ಇದೀನಿ. ನೀನೂ ಹಾಗೇ ಇದೀಯ. ನಾನು ಮೊದಲು ಕೂರ‍್ತಾ ಇದ್ದೆನಲ್ಲ? ಅದೇ ಜಾಗದಲ್ಲಿ ಈಗಲೂ ಕೂತಿದ್ದೀನಿ. ಎಲ್ಲಿ, ಬೇಗ ಮಸಾಲೆ ದೋಸೆ ಕೊಡು. ಹಸಿವಾಗ್ತಿದೆ’ ಅಂದರು ರೈ.
ತಕ್ಷಣವೇ ಕರೆಕ್ಷನ್ ಹಾಕಿದ ಆತ- ‘ದೋಸೆ ತಂದುಕೊಡ್ತೇನೆ. ಆದ್ರೆ ನೀವು ಟೇಬಲ್ನ ಈ ಕಡೆ ಕೂರ‍್ತಾ ಇರಲಿಲ್ಲ. ಆ ಕಡೆ ಕೂರ‍್ತಾ ಇದ್ರಿ’ ಅಂದನಂತೆ!
ತಕ್ಷಣವೇ ಆತ ತೋರಿಸಿದ ಜಾಗಕ್ಕೇ ಹೋಗಿ ಕೂತ ರೈ, ಪಟ್ಟಾಗಿ ಎರಡು ಮಸಾಲೆ ದೋಸೆ ಬಾರಿಸಿದರಂತೆ…
***
ಏಪ್ರಿಲ್ ೨೬ರ ಸಂಜೆ ಇದಿಷ್ಟನ್ನೂ ಖುಷಿಯಿಂದ ಹೇಳಿಕೊಂಡರು ಪ್ರಕಾಶ್ ರೈ. ಅವರ ಕಂಗಳಲ್ಲಿ ಹಸುಳೆಗೆ ಆಗುವಂಥ ಆನಂದವಿತ್ತು.

ನಾವೂ ಸ್ವಲ್ಪ ಹೊತ್ತು ರಮೇಶ್ ಆಗ್ಬೇಕು!

ಫೆಬ್ರವರಿ 17, 2009

ಸೆಲೆಬ್ರಿಟಿ ಅನ್ನಿಸಿಕೊಂಡ ಮನುಷ್ಯ ಅಷ್ಟೊಂದು ಸರಳವಾಗಿರಲು ಸಾಧ್ಯವಾ?
ನಟ ರಮೇಶ್ ಅರವಿಂದ್ ಅವರನ್ನು ಕಂಡಾಗಲೆಲ್ಲ ಈ ಪ್ರಶ್ನೆ ಬಿಡದೆ ಕಾಡುತ್ತದೆ.
ಜೀನಿಯಸ್ ಎಂದು ಕರೆಸಿಕೊಳ್ಳಬೇಕಾದರೆ ಒಬ್ಬ ಮನುಷ್ಯ ಹೇಗಿರಬೇಕು ಎಂಬುದಕ್ಕೆ ಚೆಂದದ ಉದಾಹರಣೆಯೆಂದರೆ- ರಮೇಶ್ ಅರವಿಂದ್. ಅವರು ಬೇಸರ ಮಾಡಿಕೊಂಡದ್ದನ್ನು, ಸಪ್ಪೆ ಮೋರೆಯಲ್ಲಿ ನಿಂತಿದ್ದನ್ನು, ಯಾರೊಂದಿಗೋ ರೇಗಿದ್ದನ್ನು ಕಂಡವರೇ ಇಲ್ಲ. ಇನ್ನೂ ಸ್ವಲ್ಪ ವಿವರಿಸಿ ಹೇಳಬೇಕು ಎನ್ನುವುದಾದರೆ- ರಮೇಶ್ ಅರವಿಂದ್ ಅವರ ಬದುಕೆಂಬ ಡಿಕ್ಷನರಿಯಲ್ಲಿ ಉಲ್ಲಾಸ, ಉತ್ಸಾಹ, ಸಂಭ್ರಮ, ಸಂತೋಷಗಳೇ ತುಂಬಿ ಹೋಗಿವೆ. ಬೇಸರ, ಕೋಪ, ಸಿಡಿಮಿಡಿ ಎಂಬ ಪದಗಳಿಗೆ ಅಲ್ಲಿ ಜಾಗವೇ ಇಲ್ಲ!
ರಮೇಶ್ ಅರವಿಂದ್ ಅವರನ್ನು ‘ಜಾಣರ ಜಾಣ’ ಎಂದು ಕರೆಯುವುದೇ ಸರಿ. ಯಾಕೆಂದರೆ, ಅವರಿಗೆ ಗೊತ್ತಿಲ್ಲದ ವಿಷಯವೇ ಇಲ್ಲ. ವ್ಯಾಲೆಂಟೈನ್ಸ್ ಡೇ ವಿಷಯ ಪ್ರಸ್ತಾಪಿಸಿ ನೋಡಿ- ಅವರು ಈಗಷ್ಟೇ ಇಪ್ಪತ್ತೈದು ತುಂಬಿದ ತರುಣನಂತೆ ಮಾತಾಡಬಲ್ಲರು. ಷೇರು ಮಾರ್ಕೆಟ್ನ ವಿಷಯ ಎತ್ತಿ; ಅದರ ಒಳ ಹೊರಗನ್ನೆಲ್ಲ ಬಿಡಿಬಿಡಿಯಾಗಿ ವಿವರಿಸಬಲ್ಲರು. ಅಮ್ಮಂದಿರ ಜತೆಯಲ್ಲಿ ಅವರ ಮಕ್ಕಳಿಗಿಂತ ಹೆಚ್ಚು ಪ್ರೀತಿಯಿಂದ ಮಾತಾಡಬಲ್ಲರು. ಅಡುಗೆಯ ವಿಷಯ ಪ್ರಸ್ತಾಪಿಸಿದರೆ, ನಳ ಮಹರಾಜ ಕೂಡ ಅಹುದಹುದು ಎನ್ನುವಂತೆ ವಿವರಣೆ ನೀಡಬಲ್ಲರು. ಹೆಂಗಸರ ಅಲಂಕಾರದ ಬಗ್ಗೆ ಈ ಲೋಕದ ಅಷ್ಟೂ ಹೆಣ್ಣು ಮಕ್ಕಳು ಒಪ್ಪುವಂತೆ ತಮಾಷೆ ಮಾಡಬಲ್ಲರು. ಮಕ್ಕಳ ಜತೆ ಮಗುವಾಗಬಲ್ಲರು. ತುಂಬ ಕಷ್ಟ ಅನ್ನಿಸಿದ ಯಾವುದೇ ಸಮಸ್ಯೆ ಹೇಳಿದರೂ, ಅದಕ್ಕೊಂದು ಪರಿಹಾರ ಹುಡುಕಲೂಬಲ್ಲರು.
ಬಿಡಿ, ರಮೇಶ್ ಅವರದು ಪದಗಳಲ್ಲಿ ಹಿಡಿದಿಡಲಾಗದಂಥ ವ್ಯಕ್ತಿತ್ವ. ಮೊನ್ನೆ, ತಮ್ಮ ಹೊಸ ಸಿನಿಮಾದ ಪ್ರಚಾರದ ಸಲುವಾಗಿ ಮಕ್ಕಳೊಂದಿಗೆ ಮಗುವಾಗಿ, ಮಧುರ ನಗುವಾಗಿ, ಗಾಳಿಪಟ ಹಾರಿಸುತ್ತಾ ಸಂಭ್ರಮಿಸಿದ ರಮೇಶ್ ಅರವಿಂದ್ ಅವರನ್ನು ಕಂಡಾಗ ಇದನ್ನೆಲ್ಲ ಹೇಳಬೇಕೆನಿಸಿತು.

ಹೀಗೂ ಒಂದು ಕಥೆ

ಜನವರಿ 5, 2009

ಅದೊಂದು ಮಳೆಯ ರಾತ್ರಿ. ಜೋರು ಮಳೆ ಬೀಳುತ್ತಿತ್ತಲ್ಲ? ಅದೇ ಕಾರಣದಿಂದ ಕರೆಂಟೂ ಹೋಗಿಬಿಟ್ಟಿತ್ತು. ಹೀಗಿರುವಾಗ ಆ ಊರಿನಿಂದ ಒಂದು ಮೈಲಿ ದೂರವಿದ್ದ ಬಸ್ ನಿಲ್ದಾಣದಲ್ಲಿ ಒಬ್ಬ ಮುದುಕ ನಡುಗುತ್ತಾ ನಿಂತಿದ್ದ. ಅವನ ಕೈಲಿ ಒಂದು ದಪ್ಪ ಪುಸ್ತಕವಿತ್ತು.
ಇದೇ ಸಂದರ್ಭಕ್ಕೆ ಒಬ್ಬ ಶ್ರೀಮಂತ ತರುಣನೂ ಅಲ್ಲಿಗೆ, ಮಳೆಯಿಂದ ಆಶ್ರಯ ಪಡೆಯಲು ಬಂದ. ಮುದುಕನ ಕೈಯಲ್ಲಿದ್ದ ಪುಸ್ತಕ ನೋಡಿದಾಕ್ಷಣ ಅದೊಂದು ಪತ್ತೇದಾರಿ ಕಾದಂಬರಿ ಎಂದು ತರುಣನಿಗೆ ಅರ್ಥವಾಗಿ ಹೋಯಿತು. ಅದೇಕೋ ಕಾಣೆ; ಈ ಪುಸ್ತಕ ಓದಲೇಬೇಕು ಎಂಬ ಆಸೆ ಅವನಿಗೆ ಬಂತು. ತಕ್ಷಣವೇ ಅಜ್ಜಾ, ಈ ಪುಸ್ತಕ ನನಗೆ ಬೇಕು. ಬೇಕೇ ಬೇಕು. ಎಷ್ಟಕ್ಕೆ ಕೊಡ್ತೀಯ?’ ಎಂದು ವ್ಯಾಪಾರಕ್ಕಿಳಿದ.
ಅರ್ಧಗಂಟೆ ಚೌಕಾಶಿಯ ನಂತರ ೩೦೦೦ ರೂ. ಬೆಲೆಗೆ ಆ ಪುಸ್ತಕ ಮಾರಿದ ಮುದುಕ ಎಚ್ಚರಿಸುವ ದನಿಯಲ್ಲಿ ಹೇಳಿದ : `ನೋಡೂ, ನೀನು ಯಾವುದೇ ಕಾರಣಕ್ಕೂ ಈ ಪುಸ್ತಕದ ಕಡೆಯ ಪುಟ ಓದಬೇಡ. ಅದನ್ನು ಓದಿದರೆ ನಿನ್ನ ಜೀವಕ್ಕೂ ತೊಂದರೆಯಾಗಬಹುದು…
ಈ ಯುವಕ ಮನೆಗೆ ಬಂದವನೇ ಮುದುಕನ ಮಾತನ್ನು ಮತ್ತೆ ಮತ್ತೆ ನೆನಪು ಮಾಡಿಕೊಳ್ಳುತ್ತಾ ಕುತೂಹಲದಿಂದಲೇ ಆ ಪುಸ್ತಕ ಓದಿದ. ಸ್ವಾರಸ್ಯವೆಂದರೆ, ಕಡೆಯ ಎರಡು ಪುಟಗಳು ಉಳಿದಿದ್ದಾಗಲೇ ಕಥೆ ಮುಗಿದುಹೋಯಿತು. ಕಥೆಯೇ ಮುಗಿದ ಮೇಲೆ ಜೀವಕ್ಕೇ ಅಪಾಯ ಉಂಟು ಮಾಡುವಂಥ ಸಂಗತಿ ಕಡೆಯ ಪುಟದಲ್ಲಿ ಏನಿರಬಹುದು ಎಂಬ ಕುತೂಹಲದಿಂದಲೇ, ಈತ ನಡುಗುವ ಕೈಗಳಿಂದಲೇ ಕಡೆಯ ಪುಟವನ್ನು ತೆರೆದು ನೋಡಿದ. ಅಲ್ಲಿದ್ದುದನ್ನು ಕಂಡು ಆಂಂಂ ಎಂದು ಉದ್ಗರಿಸಿದ: ಏಕೆಂದರೆ ಅಲ್ಲಿ- ಪುಸ್ತಕದ ಅಧಿಕೃತ ಮಾರಾಟ ಬೆಲೆ ೩೦ ರೂ. ಎಂದಿತ್ತು !

ಕ್ಷಮಿಸಿ; ಈ ಭಾವ ವಿವರಿಸಲು ಪದಗಳಿಲ್ಲ…..

ಜನವರಿ 5, 2009

rajiv_gandhi

ಒಂದು ಸೋಲು, ಒಂದು ಅಪಮಾನ, ಒಂದು ನಿರಾಸೆ, ಒಂದು ಸಂಕಟ, ಏನನ್ನೋ ಕಳೆದುಕೊಂಡ ದುಃಖ ಜತೆಯಾದಾಗ ಅಪ್ಪ ನೆನಪಾಗಿಬಿಡುತ್ತಾನೆ. ಇಂಥ ಸಂದರ್ಭದಲ್ಲೆಲ್ಲ ಮಕ್ಕಳು, ಬಿಟ್ಟ ಬಾಣದಂತೆ ಓಡಿ ಹೋಗಿ ಅಪ್ಪನನ್ನ ತಬ್ಬಿಕೊಳ್ಳುತ್ತವೆ. ಎಂಥ ನೋವೇ ಸಮಸ್ಯೆಯೇ ಇದ್ದರೂ ಅದಕ್ಕೆಲ್ಲ ಅಪ್ಪ ಒಂದು ಪರಿಹಾರ ಹೇಳಿಯೇ ತೀರುತ್ತಾನೆ ಎಂಬ ನಂಬಿಕೆಯೇ ಮಕ್ಕಳ ಇಂಥ ವರ್ತನೆಗೆ ಕಾರಣವಾಗಿರುತ್ತದೆ.

ಇದೇ ಸಂದರ್ಭದಲ್ಲಿ ಅಪ್ಪಂದಿರ ಸ್ಥಿತಿಯನ್ನೂ ಹೇಳಿಬಿಡಬೇಕು. ಮಗ / ಮಗಳು ಓಡಿಬಂದು ತಬ್ಬಿಕೊಂಡು ಬಿಕ್ಕಳಿಸುತ್ತಿರುವುದು-ಅಜ್ಜಿ ಯ ಸಾವಿಗೋ ಅಮ್ಮನ ಪ್ರಜ್ಞಾ ಹೀನ ಸ್ಥಿತಿಗೋ; ಮುದ್ದಿನ ನಾಯಿ ಸತ್ತು ಹೋಗಿದ್ದಕ್ಕೋ ಆಗಿರಬಹುದು. ಇಂಥ ಸಂದರ್ಭದಲ್ಲೆಲ್ಲ ಮಕ್ಕಳಿಗೆ ಆಗಿರುತ್ತದೆ ನೋಡಿ; ಅಷ್ಟೇ -ಅಥವಾ ಅದಕ್ಕಿಂತ ಹೆಚ್ಚಿನ ನೋವು ಅಪ್ಪನಿಗೂ ಆಗಿರುತ್ತದೆ. ಆದರೆ, ಆತ ಮಕ್ಕಳ ಮುಂದೆ ಅಳುವಂತಿಲ್ಲ. ಬಿಕ್ಕಳಿಸುವಂತಿಲ್ಲ. ಕುಸಿದು ಬೀಳುವಂತಿಲ್ಲ. ಕಾಣದ ದೇವರನ್ನು ಶಪಿಸುವಂತೆಯೂ ಇಲ್ಲ. ಯಾಕೆಂದರೆ-ಅಪ್ಪ ಅನ್ನಿಸಿಕೊಂಡವನೇ ಅಳಲು ನಿಂತರೆ ಮಕ್ಕಳ ಧೈರ್ಯದ ಕೋಟೆಯೇ ಕುಸಿದು ಬೀಳುತ್ತದೆ. ಹಾಗಾಗಿ ಎಲ್ಲ ಮನೆಯ ಅಪ್ಪಂದಿರೂ ಮಕ್ಕಳ ಮುಂದೆ, ಎಂಥ ಸಂಕಟದ ಸಂದರ್ಭದಲ್ಲೂ ತುಟಿಕಚ್ಚಿ ಅಳುನುಂಗಿಕೊಂಡೇ ಬದುಕುತ್ತಾರೆ. ಆದರೆ, ಮನೆಮಂದಿಯೆಲ್ಲ ಕೆಲವೇ ನಿಮಿಷದ ಮಟ್ಟಿಗೆ ತಮ್ಮಿಂದ ಹತ್ತು ಹೆಜ್ಜೆ ದೂರ ಹೋದರೆ….

****

ಸಂಕಟದ ಸಂದರ್ಭದಲ್ಲಿ ಅಪ್ಪ-ಮಕ್ಕಳು ಹೇಗಿರುತ್ತಾರೆ ಎಂಬುದಕ್ಕೆ ಪುಟ್ಟ ಸಾಕ್ಷಿಯಾಗಿ ಈ ಚಿತ್ರ -ಭಾರತದ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಅಂಗರಕ್ಷಕರ ಗುಂಡೇಟಿಗೆ ಬಲಿಯಾದರಲ್ಲ? ಆ ನಂತರದಲ್ಲಿ ಪುಟ್ಟ ಬಾಲಕ ರಾಹುಲ್ ಗಾಂಧಿ, ಸುಯ್ಯನೆ ಓಡಿ ಬಂದು ಅಪ್ಪ ರಾಜೀವ್‌ಗಾಂಧಿಯನ್ನು ತಬ್ಬಿಹಿಡಿದು ಬಿಕ್ಕಳಿಸುತ್ತಿದ್ದಾನೆ. ರಾಜೀವ್, ತುಂಬ ಕಷ್ಟದಿಂದ ಅಳುವನ್ನು ತಡೆ ಹಿಡಿದು ಮಗನನ್ನು ಸಂತೈಸುತ್ತಿದ್ದಾರೆ.

ಬಿಡಿ, ಈ ಚಿತ್ರದಲ್ಲಿ ಕಾಣುತ್ತಿರುವ ಭಾವನೆಗಳನ್ನು ವಿವರಿಸಲು ಪದಗಳಿಲ್ಲ…..