ಈ ಹಾಡಿನಿಂದಾಗಿ ಮುನಿಸು ಮರೆಯಾಯಿತು,ಮನಸು ತಿಳಿಯಾಯಿತು…

ನವೆಂಬರ್ 12, 2010

 

 

 

 

 

 

 

ನೀನು ನೀನೆ… ಇಲ್ಲಿ ನಾನು ನಾನೆ…
ಚಿತ್ರ: ಗಡಿಬಿಡಿ ಗಂಡ . ಸಾಹಿತ್ಯ, ಸಂಗೀತ: ಹಂಸಲೇಖ
ಗಾಯನ: ಎಸ್.ಪಿ. ಬಾಲಸುಬ್ರಹ್ಮಣ್ಯಂ

ನೀನು ನೀನೆ… ಇಲ್ಲಿ ನಾನು ನಾನೆ
ನೀನು ಎಂಬುವನಿಲ್ಲಿ ನಾದವಾಗಿರುವಾಗ
ನಾನೇನು ಹಾಡಲಯ್ಯ ದಾಸಾನುದಾಸ ||ಪ||

ನಾದದ ಶೃತಿ ನೀಡಿ ತುಂಬುರ ಸ್ಮೃತಿ ಹಾಡಿ
ಕೈಲಾಸವೆಲ್ಲ ನಾದೋಪಾಸನೆಯಾಗಿ
ಷಣ್ಮುಖಪ್ರಿಯ ರಾಗ ಮಾರ್ಗ ಹಿಂದೋಳವಾಗಿ
ನಡೆಸಿದೆ ದರಬಾರು ನೋಡು
ಹಾಡುವೆಯ ಪಲ್ಲವಿಯ, ಕೇಳುವೆಯ, ಮೇಲೆ ಎಳುವೆಯ
ನೀನು ಎಂಬುವನಿಲ್ಲಿ ನಾದವಾಗಿರುವಾಗ
ನಾನೇನು ಹಾಡಲಯ್ಯ ದಾಸಾನುದಾಸ ||೧||

ಈ ಸ್ವರವೆ ವಾದ ಈಶ್ವರನೆ ನಾದ
ಗತಿಗತಿಯ ಕಾಗುಣಿತ ವೇದ ಶಿವಸ್ಮರಣೆ ಸಂಗೀತ ಸ್ವಾದ
ಗಮಕಗಳ ಪಾಂಡಿತ್ಯ ಶೋಧ ಸುಮತಿಗಳ ಸುಜ್ಞಾನ ಬೋಧ
ಬದುಕುಗಳ ವಿಚಾರಣೆ ಕ್ಷಮಾಪಣೆ ವಿಮೋಚನೆ
ಗೆಲುವುಗಳ ಆಲೋಚನೆ ಸರಸ್ವತಿ ಸಮರ್ಪಣೆ
ನವರಸ ಅರಗಿಸಿ ಪರವಶ ಪಳಗಿಸಿ
ಅಪಜಯ ಅಡಗಿಸಿ ಜಯಿಸಲು ಇದು
ಶಕುತಿಯ ಯುಕುತಿಯ ವಿಷಯಾರ್ಥ
ಗಣಗಣ ಶಿವಗಣ ನಿಜಗುಣ ಶಿವಮನ
ನಲಿದರೆ ಒಲಿದರೆ ಕುಣಿದರೆ ಅದೆ
ಭಕುತಿಯ ಮುಕುತಿಯ ಪರಮಾರ್ಥ ||೨||

೧೯೯೩ರಲ್ಲಿ ಜಯಭೇರಿ ಹೊಡೆದ ಚಿತ್ರ- ಗಡಿಬಿಡಿ ಗಂಡ. ತೆಲುಗಿನ ‘ಅಲ್ಲರಿ ಮೊಗುಡು’ ಚಿತ್ರದ ರಿಮೇಕ್ ಆದ ಈ ಚಿತ್ರದಲ್ಲಿ ರವಿಚಂದ್ರನ್, ಜಗ್ಗೇಶ್, ರಮ್ಯಕೃಷ್ಣ, ರೋಜಾ ತಾರಾಗಣವಿತ್ತು. ರವಿಚಂದ್ರನ್‌ಗೆ ಎದುರಾಳಿಯಂತಿದ್ದ ಹಿರಿಯ ಸಂಗೀತಗಾರನ ಪಾತ್ರದಲ್ಲಿ ತಮಿಳಿನ ಜನಪ್ರಿಯ ನಟ ತಾಯ್‌ನಾಗೇಶ್ ಅಭಿನಯಿಸಿದ್ದರು. ಈ ಚಿತ್ರದಲ್ಲಿ ತಮ್ಮಿಬ್ಬರ ಪರಿಚಯ ಹೇಳಿಕೊಳ್ಳುವ ಸಂದರ್ಭದಲ್ಲಿ ರವಿಚಂದ್ರನ್-‘ನಾನು ಹಾರ್ಮೋನಿಯಂ ಸರಸ್ವತಿ. ಇವನು ತಬಲಾ ಸರಸ್ವತಿ’ ಎಂದೇ ಹೇಳುತ್ತಾರೆ. ಈ ಡೈಲಾಗ್ ಕೇಳಿಸಿದಾಕ್ಷಣ ಥಿಯೇಟರಿನ ತುಂಬಾ ಕಿಲಕಿಲ ನಗು, ಶಿಳ್ಳೆ, ಚಪ್ಪಾಳೆ…
ಆ ಚಿತ್ರದ ಒಂದು ಸಂದರ್ಭ ಹೀಗಿದೆ: ಆಕಾಶ್ ಆಡಿಯೋ ಹೆಸರಿನ ಸಂಸ್ಥೆ ಸಂಗೀತ ಸ್ಪರ್ಧೆಯೊಂದನ್ನು ಹಮ್ಮಿಕೊಂಡಿರುತ್ತದೆ. ನಾಡಿನ ಪ್ರಖ್ಯಾತ ಸಂಗೀತಗಾರ ಎಂದೇ ಹೆಸರಾದ ತಾಯ್‌ನಾಗೇಶ್ ಅದರಲ್ಲಿ ಭಾಗವಹಿಸಿರುತ್ತಾರೆ. ಅವರಿಗೆ ಪ್ರತಿರ್ಸ್ಪಯಾಗಿ ಸೆಣೆಸಲು ರವಿಚಂದ್ರನ್-ಜಗ್ಗೇಶ್ ಜೋಡಿ ನಾನಾ ಪ್ರಯತ್ನ ಮಾಡಿ ಸೋತಿರುತ್ತದೆ. ಕಡೆಗೆ ಅದೇ ಆಕಾಶ್ ಆಡಿಯೋದ ಮಾಲೀಕನ ಮಗಳು ರಮ್ಯಕೃಷ್ಣಳ ಶಿಫಾರಸಿನ ಕಾರಣದಿಂದಾಗಿ, ಸ್ಪರ್ಧೆಯಲ್ಲಿ ಕಡೆಯ ಅಭ್ಯರ್ಥಿಗಳಾಗಿ ಈ ಇಬ್ಬರ ಹೆಸರೂ ಸೇರ್ಪಡೆಯಾಗುತ್ತದೆ. ಸ್ಪರ್ಧೆಗೆ ಬಂದ ಎಲ್ಲರನ್ನೂ ಸೋಲಿಸುವ ತಾಯ್‌ನಾಗೇಶ್, ಈ ಇಬ್ಬರನ್ನು ‘ಅಯ್ಯೋ ಪಾಪ’ ಎಂಬಂತೆ ನೋಡುತ್ತಾನೆ. ‘ನನ್ನ ಪಾಂಡಿತ್ಯದ ಮುಂದೆ ನೀವು ತರಗೆಲೆಗಳು. ನಿಮ್ಮನ್ನು ಚಿಟಿಕೆ ಹೊಡೆಯುವಷ್ಟರಲ್ಲಿ ಸೋಲಿಸಬಲ್ಲೆ’ ಅನ್ನುತ್ತಾನೆ. ಅಷ್ಟಕ್ಕೇ ಸುಮ್ಮನಾಗದೆ- ‘ಈ ಸ್ಪರ್ಧೆಯಲ್ಲಿ ನೀವೇನಾದ್ರೂ ಸೋತರೆ ಮುಂದೆಂದೂ ಸಂಗೀತ ಹಾಡುವಂತಿಲ್ಲ. ಒಂದು ವೇಳೆ ನಾನೇ ಸೋತು ಹೋದರೆ, ನಿಮ್ಮ ಪಾದ ತೊಳೆದು ನನ್ನ ಕಡಗವನ್ನು ನಿಮಗೆ ತೊಡಿಸುತ್ತೇನೆ’ ಅನ್ನುತ್ತಾನೆ.
ಈ ಸವಾಲಿನ ಮುಂದುವರಿದ ಭಾಗವಾಗಿ ಶುರುವಾಗುತ್ತದೆ: ‘ನೀನು ನೀನೆ… ಇಲ್ಲಿ ನಾನು ನಾನೆ/- ನೀನು ಎಂಬುವನಿಲ್ಲಿ ನಾದವಾಗಿರುವಾಗ…’
ಚಿತ್ರದಲ್ಲಿ, ಇಬ್ಬರು ಸಂಗೀತಗಾರರ ಗಾಯನ ಶಕ್ತಿ ಪ್ರದರ್ಶನಕ್ಕೆ ಈ ಹಾಡು ಬಳಕೆಯಾಗಿದೆ ನಿಜ. ಆದರೆ, ನಿಜವಾಗಿ ಈ ಹಾಡು ಸೃಷ್ಟಿಯಾದ ಸಂದರ್ಭದ ಹಿಂದೆ ಸ್ವಾರಸ್ಯವಿದೆ, ಪ್ರೀತಿಯಿದೆ. ಕೊಂಚ ಅಸಮಧಾನವಿದೆ. ರವಷ್ಟು ಸಿಡಿಮಿಡಿಯಿದೆ. ಬೊಗಸೆ ತುಂಬುವಷ್ಟು ಭಾವುಕತೆಯಿದೆ. ವಿಶೇಷವೇನೆಂದರೆ, ಈ ಹಾಡಿನ ಒಂದೊಂದು ಸಾಲೂ ಗಾನಗಾರುಡಿಗ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರನ್ನು ಉದ್ದೇಶಿಸಿಯೇ ಬರೆದಿದ್ದಾಗಿದೆ!
ಬಹುತ್ ಪಸಂದ್ ಹೈ ಎಂಬಂತಿರುವ ಈ ಹಾಡ ಹಿಂದಿನ ಕಥೆಯನ್ನು ಹಂಸಲೇಖ ಅವರು ವಿವರಿಸಿದ್ದು ಹೀಗೆ: ‘ರವಿಚಂದ್ರನ್-ಹಂಸಲೇಖಾ-ಎಸ್.ಪಿ.ಬಿ. ಕಾಂಬಿನೇಷನ್ ಇದ್ದರೆ ಸಾಕು, ಆ ಸಿನಿಮಾದ ಹಾಡುಗಳು ಸೂಪರ್ ಹಿಟ್ ಆಗ್ತವೆ’ ಎಂದು ಗಾಂ ನಗರ ಮಾತಾಡಿಕೊಳ್ಳುತ್ತಿದ್ದ ಕಾಲ ಅದು. ಆ ಸಂದರ್ಭದಲ್ಲಿಯೇ ನನ್ನ ಏಳಿಗೆಯನ್ನು ಸಹಿಸದ ಒಂದು ಗುಂಪು ಹುಟ್ಟಿಕೊಂಡಿತು. ಹಂಸಲೇಖಾ ಅವರಿಗೆ ಜಂಭ ಬಂದಿದೆ. ಅವರು, ಹತ್ತಿದ ನಡೆದು ಬಂದ ದಾರೀನ ಮರೆತಿದ್ದಾರೆ. ಹತ್ತಿದ ಏಣಿಯನ್ನು ಒದೆಯುತ್ತಿದ್ದಾರೆ. ಎಸ್.ಪಿ.ಬಿ. ಅವರನ್ನು ಬೇಕೆಂದೇ ನಿರ್ಲಕ್ಷಿಸುತ್ತಿದ್ದಾರೆ. ಅವರಿಗೆ ಪರ್‍ಯಾಯ ಆಗಬಲ್ಲ ಗಾಯಕರನ್ನು ತಯಾರು ಮಾಡ್ತಾ ಇದ್ದಾರೆ’ ಎಂದೆಲ್ಲ ಆ ಗುಂಪು ಸುದ್ದಿ ಹಬ್ಬಿಸಿತು. ಈ ಸುದ್ದಿ ಎಸ್.ಪಿ. ಅವರಿಗೂ ತಲುಪುವಂತೆ ನೋಡಿಕೊಂಡಿತು.
ನಾನು ಆತ್ಮಸಾಕ್ಷಿಯಾಗಿ ಹೇಳಬೇಕಾದ ಮಾತೊಂದಿದೆ. ಏನೆಂದರೆ, ಈಗಲೂ ಮನುಷ್ಯತ್ವಕ್ಕೆ, ಸಹನೆ-ತಾಳ್ಮೆಗೆ, ಸಮಚಿತ್ತಕ್ಕೆ, ಶಿಸ್ತಿಗೆ ನನಗೆ ಮಾದರಿಯಾಗಿರುವವರು ಡಾ. ರಾಜ್‌ಕುಮಾರ್ ಮತ್ತು ಎಸ್.ಪಿ.ಬಿ. ನನ್ನ ಆಲ್ ಟೈಂ ಫೇವರಿಟ್ ಹಾಗೂ ನನ್ನ ಸಂಗೀತ ನಿರ್ದೇಶನದಲ್ಲಿ ಅತಿ ಹೆಚ್ಚು ಗೀತೆ ಹಾಡಿರುವ ಗಾಯಕ ಕೂಡ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರೇ. ವಾಸ್ತವ ಹೀಗಿದ್ದಾಗ ಎಸ್ಪೀಬಿ ಅವರನ್ನು ವಿರೋಸುವಂಥ ಯೋಚನೆಯನ್ನಾದ್ರೂ ಹೇಗೆ ಮಾಡಲಿ ನಾನು?
ಆದರೆ, ಶತಾಯಗತಾಯ ನನ್ನನ್ನು ಹಣಿಯಬೇಕು ಎಂಬ ಹಟಕ್ಕೆ ಬಿದ್ದಿದ್ದ ಗುಂಪು ಸುಳ್ಳು ಸುದ್ದಿಗಳನ್ನು ಮೇಲಿಂದ ಮೇಲೆ ಎಸ್ಪಿ ಅವರಿಗೆ ತಲುಪಿಸುವಲ್ಲಿ ಯಶಸ್ವಿಯಾಯಿತು. ಬಹುಶಃ ಈ ಸಂದರ್ಭದಲ್ಲಿ ಎಸ್ಪಿ ಮನಸ್ಸನ್ನು ಕಹಿ ಮಾಡಿಕೊಂಡರು ಅನಿಸುತ್ತೆ.
ಈ ಸಂದರ್ಭದಲ್ಲೇ ರವಿಚಂದ್ರನ್ ಎಕ್ಸ್‌ಪ್ರೆಸ್ ವೇಗದಲ್ಲಿ ‘ರಾಮಾಚಾರಿ’ ತೆಗೆಯುತ್ತಿದ್ದರು. ಸತತ ಸೋಲುಗಳಿಂದ ಕಂಗೆಟ್ಟಿದ್ದ ಅವರಿಗೆ ತಕ್ಷಣಕ್ಕೆ ಒಂದು ಹಿಟ್ ಸಿನಿಮಾ ಬೇಕಿತ್ತು. ಈ ಚಿತ್ರಕ್ಕೆ ಹಾಡುವಂತೆ ಕೇಳಿಕೊಳ್ಳಲು ನಾವು ಮೇಲಿಂದ ಮೇಲೆ ಎಸ್ಪಿ ಅವರಿಗೆ ಫೋನ್ ಮಾಡುತ್ತಲೇ ಇದ್ದೆವು. ಫೋನ್ ರಿಸೀವ್ ಮಾಡುತ್ತಿದ್ದ ಅವರ ಸಹಾಯಕರು-‘ಸರ್‌ಗೆ ಹುಶಾರಿಲ್ಲ. ಗಂಟಲು ನೋವಿನ ತೊಂದರೆ. ಅವರು ಚಿಕಿತ್ಸೆಗಾಗಿ ಲಂಡನ್‌ಗೆ ಹೋಗಿದ್ದಾರೆ’ ಎನ್ನುತ್ತಿದ್ದರು. ಹದಿನೈದು ದಿನಗಳ ನಂತರವೂ ಇದೇ ಉತ್ತರ ರಿಪೀಟ್ ಆದಾಗ ಅನಿವಾರ್ಯವಾಗಿ ಮನು ಹಾಗೂ ಯೇಸುದಾಸ್ ಅವರಿಂದ ಹಾಡಿಸಿದೆ. ನನ್ನ ಈ ನಿರ್ಧಾರ ಮತ್ತಷ್ಟು ಗುಸುಗುಸುಗಳಿಗೆ ಕಾರಣವಾಯ್ತು. ಗಾಳಿ ಸುದ್ದಿಗಳಿಗೆ ರೆಕ್ಕೆ ಪುಕ್ಕ ಅಂಟಿಕೊಂಡಿತು. ಪರಿಣಾಮ, ಎಸ್ಪಿ ಹಾಗೂ ನನ್ನ ಮಧ್ಯೆ ನಮಗೇ ಗೊತ್ತಿಲ್ಲದ ಹಾಗೆ ಒಂದು ಅಂತರ ಬೆಳೆದುಬಿಡ್ತು.
ನಂತರದ ದಿನಗಳಲ್ಲಿ ಬಂದದ್ದೇ ಗಡಿಬಿಡಿ ಗಂಡ. ಮೂಲ ತೆಲುಗು ಚಿತ್ರದಲ್ಲಿ ಎಸ್ಪಿ ಹಾಡಿದ್ದ ಎಲ್ಲ ಹಾಡುಗಳೂ ಹಿಟ್ ಆಗಿದ್ದವು. ಹಾಗಾಗಿ ಕನ್ನಡದಲ್ಲೂ ಅವರಿಂದಲೇ ಹಾಡಿಸಬೇಕೆಂಬ ಹಂಬಲ ನಿರ್ಮಾಪಕ ರಾಘವೇಂದ್ರರಾವ್ ಅವರದಿತ್ತು. ಅವರಿಗೆ ನಮ್ಮ ಮಧ್ಯೆ ಬೆಳೆದಿರುವ ‘ಅಂತರ’ದ ಬಗ್ಗೆ ತಿಳಿಸಿದೆ. ರಾಘವೇಂದ್ರರಾವ್ ಅವರ ಸಿನಿಮಾ ಪ್ರೀತಿ ದೊಡ್ಡದು. ಅವರು ಎಸ್ಪಿ ಅವರೊಂದಿಗೆ ಮಾತಾಡಿದರು. ಎಲ್ಲ ಸಂಗತಿ ವಿವರಿಸಿದರು. ತಮ್ಮ ಸಿನಿಮಾಕ್ಕೆ ಹಾಡಲು ಒಪ್ಪಿಸಿಯೂ ಬಿಟ್ಟರು. ನಂತರ ನನ್ನ ಬಳಿ ಬಂದು-ಎಸ್ಪಿ ಹಾಡಲು ಒಪ್ಪಿದ್ದಾರೆ. ನಾಳೆಯೇ ಬರ್‍ತಾರಂತೆ. ಹಾಡಿನ ಸಾಹಿತ್ಯ ಹಾಗೂ ಟ್ಯೂನ್ ರೆಡಿ ಮಾಡಿಕೊಳ್ಳಿ’ ಎಂದರು.
ಆವೇಳೆಗಾಗಲೇ ಹಿಂಧೋಳ ರಾಗದಲ್ಲಿ ಟ್ಯೂನ್ ಮಾಡಿದ್ದೆ. ಎಸ್ಪಿ ಬರುವ ದಿನವೇ ಬೆಳ್ಳಂಬೆಳಗ್ಗೆಯೇ ಹಾಡು ಬರೆಯಲು ಕೂತೆ. ಹಾಡು ಬರಬೇಕಿದ್ದ ಸಂದರ್ಭ ನೆನಪಿತ್ತು. ಹಾಡು ಬರೆಯಲು ಶುರುಮಾಡಿದಾಗ ಮನದಲ್ಲಿ ಯಾವ್ಯಾವ ಯೋಚನೆಗಳು ಸರಿದಾಡುತ್ತಿದ್ದವು ಎಂಬುದು ನನ್ನ ಪಾಲಿಗೂ ನಿಗೂಢ. ಹಾಡಿನ ಸಾಲುಗಳು ತಂತಾನೇ ಸೇರಿಕೊಳ್ಳುತ್ತಾ ಹೋದವು.
ಕೆಲ ಸಮಯದ ನಂತರ ರೆಕಾರ್ಡಿಗ್ ರೂಂ ಗೆ ಬಂದರು ಎಸ್ಪಿ. ನನ್ನನ್ನು ನೋಡಿದವರೇ ತೆಲುಗಿನಲ್ಲಿ- ‘ನಿಮ್ಮ ಮೇಲೆ ಬೇಜಾರಾಗಿತ್ತು’ ಅಂದ್ರು. ನಾನೂ ಅದೇ ತೆಲುಗಿನಲ್ಲಿ ‘ನನ್ನಗೂ ನಿಮ್ಮ ಮೇಲೆ ಬೇಜಾರಾಗಿತ್ತು’ ಅಂದೆ. ತಕ್ಷಣವೇ ನನ್ನತ್ತ ನೋಡಿ ನಸುನಕ್ಕ ಎಸ್ಪಿ, -‘ಹಳೆಯದನ್ನೆಲ್ಲ ಮರೆತು ಬಿಡೋಣ ಗುರುಗಳೇ’ ಎಂಬರ್ಥದ ಮಾತಾಡಿದರು. ಅವರ ಮಾತಿಗೆ ತಕ್ಷಣವೇ ಒಪ್ಪಿಕೊಂಡೆ.
ಎರಡು ನಿಮಿಷದ ನಂತರ ಸಾಹಿತ್ಯ ಬರೆದುಕೊಳ್ಳಲು ರೆಡಿಯಾದರು ಎಸ್ಪಿ. ಮೊದಲ ಸಾಲೆಂದು-‘ನೀನು ನೀನೆ… ಇಲ್ಲಿ ನಾನು ನಾನೆ’ ಎಂದೆ ನೋಡಿ? ಆ ಸಾಲು ಓದಿದ ನನ್ನನ್ನೇ ತೀಕ್ಷ್ಣವಾಗಿ ನೋಡಿದರು ಎಸ್ಪಿ. ಇದೆಂಥ ಅಹಂಕಾರ ನಿಮ್ಮದು ಎಂಬಂತಿತ್ತು ಆ ನೋಟ, ನಾನು ಅದನ್ನು ಕಂಡೂ ಕಾಣದವನಂತೆ ನಿರ್ಲಿಪ್ತ ಭಾವದಲ್ಲಿ ಎರಡನೇ ಸಾಲು ಓದಿದೆ: ನೀನು ಎಂಬುವನಿಲ್ಲಿ ನಾದವಾಗಿರುವಾಗ! ನಾನೇನು ಮಾಡಲಯ್ಯಾ ದಾಸಾನುದಾಸ..!
ಈ ಸಾಲುಗಳನ್ನು ಕೇಳುತ್ತಿದ್ದಂತೆಯೇ ಎಸ್ಪಿ ಭಾವುಕರಾದರು. ಛಕ್ಕನೆ ನನ್ನ ಕೈ ಹಿಡಿದುಕೊಂಡು-‘ನಿಮ್ಮನ್ನು ಅಪಾರ್ಥ ಮಾಡಿಕೊಂಡಿದ್ದೆ. ಸಾರಿ’ ಎಂದರು. ಅವರ ಮಾತಲ್ಲಿ ತಾಯ್ತನದ ಸ್ಪರ್ಶವಿತ್ತು. ಪ್ರೀತಿಯಿತ್ತು. ಗೆಳೆತನವಿತ್ತು. ಸಂತೋಷವಿತ್ತು. ಅವರ ಮಾತು ಕೇಳಿ ನನಗೂ ಮನಸು ತುಂಬಿ ಬಂದಿತ್ತು. ಪುನರ್ ಮಿಲನದ ಈ ಸಡಗರದ ಮಧ್ಯೆಯೇ ತಾಯ್ ನಾಗೇಶ್ ಹಾಗೂ ರವಿಚಂದ್ರನ್ ಇಬ್ಬರಿಗೂ ಹೊಂದುವಂಥ ಭಿನ್ನ ಧ್ವನಿಯಲ್ಲಿ ಅದ್ಭುತವಾಗಿ ಹಾಡಿದರು ಬಾಲು…’
***
ದೇಶ ಕಂಡ ಮಹಾನ್ ಗಾಯಕ ಎಸ್ಪಿ. ಅಂಥ ಹಾಡುಗಾರನ ಮನಸನ್ನು ಒಂದು ಹಾಡಿಂದಲೇ ಗೆದ್ದವರು ಹಂಸಲೇಖ. ಅವರಿಗೆ ಪ್ರೀತಿ, ನಮಸ್ಕಾರ, ಕೃತಜ್ಞತೆ, ಅಭಿನಂದನೆ…

ಮಾತು ನಿಂತರೂ ಅವನು ಮಹಾಸೇತುವೆ ಕಟ್ಟಿದ !

ನವೆಂಬರ್ 10, 2010

 

 

 

 

 

 

 

ಇದು, ೧೨೭ ವರ್ಷಗಳ ಹಿಂದೆ ನಡೆದ ಪ್ರಸಂಗ.
ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ೧೮೮೩ರಲ್ಲಿ ಆರಂಭವಾಗಿ ನಂತರದ ಹದಿನೈದಿಪ್ಪತ್ತು ವರ್ಷಗಳ ನಂತರ ಮುಗಿದು ಹೋದ ಮಹಾಸೇತುವೆ ನಿರ್ಮಾಣವೊಂದರ ಸಾಹಸಗಾಥೆ.
ಅವನ ಹೆಸರು ಜಾನ್ ರಾಬ್ಲಿಂಗ್. ಮೂಲತಃ ಜರ್ಮನಿಯವನು. ಬರ್ಲಿನ್‌ನಲ್ಲಿ ಸಿವಿಲ್ ಎಂಜಿನಿಯರಿಂಗ್ ಡಿಪ್ಲೊಮಾ ಮುಗಿಸಿದ ರಾಬ್ಲಿಂಗ್, ಮುಂದೇನು ಮಾಡುವುದು ಎಂದು ಯೋಚಿಸುತ್ತಿದ್ದಾಗಲೇ ಅವನ ಗುರುಗಳಾದ ಪ್ರೊಫೆಸರ್ ಹೇಗಲ್ ಹೇಳಿದರಂತೆ : ‘ನಿನ್ನೊಳಗೆ ಛಲವಿದೆ. ಉತ್ಸಾಹವಿದೆ. ಕನಸುಗಳಿವೆ. ಕನಸುಗಾರನೂ ಇದ್ದಾನೆ. ಸೀದಾ ಅಮೆರಿಕಕ್ಕೆ ಹೋಗು. ಸಾಹಸಿಗರಿಗೆ ಅಲ್ಲಿ ಅವಕಾಶಗಳು ಸಾವಿರ’.
ಗುರುಗಳ ಮಾತಿನಂತೆ, ಅಮೆರಿಕದ ನ್ಯೂಯಾರ್ಕ್ ಮಹಾನಗರಕ್ಕೆ ಬಂದ ರಾಬ್ಲಿಂಗ್. ಹೇಳಿ ಕೇಳಿ ಸಿವಿಲ್ ಎಂಜಿನಿಯರಿಂಗ್ ಓದಿದ್ದವನಲ್ಲವೇ? ಮೊದಲಿಗೆ ಪುಟ್ಟಪುಟ್ಟ ಕಾಲುವೆ ನಿರ್ಮಾಣದ ಕಾಮಗಾರಿಯನ್ನು ಗುತ್ತಿಗೆಗೆ ಹಿಡಿದ. ಈ ಸಂದರ್ಭದಲ್ಲಿಯೇ ಸೇತುವೆ ನಿರ್ಮಾಣದ ವಿಷಯದಲ್ಲಿ ಅವನಿಗೆ ವಿಶೇಷ ಆಸಕ್ತಿ ಬೆಳೆಯಿತು. ಮೊದಲಿಗೆ ಒಂದಿಬ್ಬರು ಹಿರಿಯ ಗುತ್ತಿಗೆದಾರರ ಬಳಿ ಸಹಾಯಕನಾಗಿ ಕೆಲಸ ಮಾಡಿದ ನಂತರ, ಐದಾರು ಚಿಕ್ಕಪುಟ್ಟ ಸೇತುವೆಗಳ ನಿರ್ಮಾಣ ವಹಿಸಿಕೊಂಡ ರಾಬ್ಲಿಂಗ್. ಕೆಲವೇ ದಿನಗಳಲ್ಲಿ ಆ ಕೆಲಸದ ಹಿಂದಿರುವ ಪಟ್ಟುಗಳು ಹಾಗೂ ಗುಟ್ಟುಗಳು ಆವನಿಗೆ ಅರ್ಥವಾಗಿ ಹೋದವು. ಆನಂತರದಲ್ಲಿ ನ್ಯೂಯಾರ್ಕ್ ಮಹಾನಗರದ ನಂಬರ್ ಒನ್ ಕಂಟ್ರಾಕ್ಟರ್ ಎಂಬ ಅಭಿದಾನಕ್ಕೂ ಪಾತ್ರನಾದ.
ಅಮೆರಿಕದ ಭೂಪಟವನ್ನು ಒಮ್ಮೆ ನೋಡಿ. ನ್ಯೂಯಾರ್ಕ್ ಮತ್ತು ಮ್ಯಾನ್‌ಹಟನ್ (ಇದಕ್ಕೆ ಬ್ರೂಕ್‌ಲೈನ್ ಸಿಟಿ ಎಂಬ ಹೆಸರೂ ಇದೆ). ನಗರಗಳ ಮಧ್ಯೆ ಮಹಾಸಾಗರದಷ್ಟೇ ದೊಡ್ಡದಾದ ಈಸ್ಟ್‌ರಿವರ್ ಹೆಸರಿನ ನದಿ ಹರಿಯುತ್ತದೆ. ಈ ನದಿಯ ಅಗಲವೇ ಎರಡೂವರೆ ಕಿ.ಮೀ.ಗಳಷ್ಟಿದೆ. ಹಾಗಾಗಿ ೧೨೭ ವರ್ಷಗಳ ಹಿಂದೆ ಮ್ಯಾನ್‌ಹಟನ್ ಸಿಟಿಯಿಂದ ನ್ಯೂಯಾರ್ಕ್ ಸಂಪರ್ಕವೇ ಇರಲಿಲ್ಲ. ಅನಿವಾರ್ಯವಾಗಿ ಬರಲೇಬೇಕೆಂದರೆ ಹಡಗು, ದೋಣಿಯನ್ನೇ ಅವಲಂಬಿಸಬೇಕಿತ್ತು.
ಇಂಥ ಸಂದರ್ಭದಲ್ಲಿ, ನ್ಯೂಯಾರ್ಕ್ ಮತ್ತು ಮ್ಯಾನ್‌ಹಟನ್ ನಗರದ ಮಧ್ಯೆ ಸಂಪರ್ಕ ಕಲ್ಪಿಸಲು ಒಂದು ತೂಗುಸೇತುವೆಯನ್ನು ಏಕೆ ನಿರ್ಮಿಸಬಾರದು ಎಂದು ರಾಬ್ಲಿಂಗ್ ಯೋಚಿಸಿದ. ಅದನ್ನೇ ತನ್ನ ಜತೆಗಾರರಿಗೆ, ಗೆಳೆಯರಿಗೆ, ಬಂಧುಗಳಿಗೆ ಹೇಳಿದ. ಎಲ್ಲರೂ ಅವನನ್ನು ಅನುಕಂಪದಿಂದ ನೋಡಿದರು. ಆಪ್ತರೆಲ್ಲ ಬಳಿ ಬಂದು ‘ನಿನ್ನದು ಹುಚ್ಚು ಆಲೋಚನೆ ಕಣಯ್ಯ. ಈಸ್ಟ್ ರಿವರ್‌ನ ಆಳ-ಅಗಲ ಬಲ್ಲವರಿಲ್ಲ. ಅದು ವರ್ಷವಿಡೀ ತುಂಬಿ ಹರಿಯುತ್ತದೆ. ಹೀಗಿರುವಾಗ ತೂಗುಸೇತುವೆ ನಿರ್ಮಾಣಕ್ಕೆ ನದಿ ಹರಿವಿನ ಉದ್ದಕ್ಕೂ ಅಲ್ಲಲ್ಲಿ ಪಿಲ್ಲರ್‌ಗಳನ್ನು ಹಾಕಬೇಕಲ್ಲ? ಅಂಥ ಸಂದರ್ಭದಲ್ಲಿ ನದಿಯ ಆಳವೇ ಗೊತ್ತಾಗದಿದ್ದರೆ ಗತಿ ಏನು? ನದಿಯೊಳಗೆ ಪಿಲ್ಲರ್‌ಗಳನ್ನು ನಿಲ್ಲಿಸುವುದಾದರೂ ಹೇಗೆ? ಅಲ್ಲಿ ಕೆಲಸ ಮಾಡುವಾಗ ಯಾರಾದರೂ ಅಯತಪ್ಪಿ ಬಿದ್ದರೆ ನೀರು ಪಾಲಾಗುತ್ತಾರೆ. ಹಾಗಾಗಿ ಇದು ಹುಚ್ಚು ಸಾಹಸ. ಈ ಕೆಲಸದಿಂದ ನಿನಗೆ ಖಂಡಿತ ಒಳ್ಳೆಯ ಹೆಸರು ಬರುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಇಂಥದೊಂದು ಮಹಾಸೇತುವೆ ನಿರ್ಮಾಣಕ್ಕೆ ದಶಕಗಳೇ ಹಿಡಿಯಬಹುದು. ಅಷ್ಟೂ ದಿನ ನೀನು ಬದುಕಿರ್‍ತೀಯ ಅಂತ ಏನು ಗ್ಯಾರಂಟಿ? ಒಂದು ಮಹಾನಗರ ಹಾಗೂ ಒಂದು ದ್ವೀಪದ ಮಧ್ಯೆ ಸಂಪರ್ಕ ಕಲ್ಪಿಸಲು ರಸ್ತೆಗಳಿಂದ ಮಾತ್ರ ಸಾಧ್ಯ. ಹಾಗಿರುವಾಗ ನೀನು ಮೇಲ್ಸುತುವೆಯ ಕನಸು ಕಾಣ್ತಿದ್ದೀ. ಇದು ಹುಚ್ಚಾಟ? ಸುಮ್ಮನೇ ರಿಸ್ಕ್ ತಗೋಬೇಡ’ ಎಂದೆಲ್ಲ ‘ಬುದ್ಧಿ’ ಹೇಳಿದರು.
ಆದರೆ, ರಾಬ್ಲಿಂಗ್‌ನ ಮನಸ್ಸಿನೊಳಗೆ ಕನಸಿತ್ತು. ತೂಗುಸೇತುವೆಯನ್ನು ನಿರ್ಮಿಸಲೇಬೇಕು ಎಂಬ ಹಠವಿತ್ತು. ನಿರ್ಮಿಸಬಲ್ಲೆ ಎಂಬ ಛಲವಿತ್ತು. ಈ ಧೈರ್ಯದಿಂದಲೇ ಆತ ಎಲ್ಲರ ಬುದ್ಧಿಮಾತನ್ನೂ ನಿರ್ಲಕ್ಷಿಸಿ ಹೆಜ್ಜೆ ಮುಂದಿಟ್ಟ. ತಾನು ನಿರ್ಮಿಸಲು ಉದ್ದೇಶಿಸಿರುವ ತೂಗುಸೇತುವೆ, ಅದಕ್ಕೆ ತಗುಲಬಹುದಾದ ಅಂದಾಜು ವೆಚ್ಚ, ಈ ಸೇತುವೆ ನಿರ್ಮಾಣದಿಂದ ಆಗಲಿರುವ ಅನುಕೂಲದ ಸಮಗ್ರ ಮಾಹಿತಿಯನ್ನು ಅಮೆರಿಕ ಸರಕಾರದ ಮುಂದಿಟ್ಟು ಒಪ್ಪಿಗೆಯನ್ನೂ ಪಡೆದುಬಿಟ್ಟ!
ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸುವ ಮುನ್ನ, ತನ್ನ ಕನಸು, ಕಲ್ಪನೆ, ಕನವರಿಕೆ, ಆಕಸ್ಮಿಕವಾಗಿ ಎದುರಾಗಬಹುದಾದ ಸವಾಲುಗಳು ಹಾಗೂ ಅದಕ್ಕೆ ಇರುವ ಪರಿಹಾರಗಳು… ಇವನ್ನೆಲ್ಲ ಹೇಳಿಕೊಳ್ಳಲು ಒಂದು ಆಪ್ತ ಜೀವದ ಅಗತ್ಯ ರಾಬ್ಲಿಂಗ್‌ಗೆ ಇತ್ತು. ಆಗ ಅವನ ಕಣ್ಮುಂದೆ ಕಂಡವನೇ ವಾಷಿಂಗ್‌ಟನ್ ರಾಬ್ಲಿಂಗ್.
ಈ ವಾಷಿಂಗ್ಟನ್ ಬೇರೆ ಯಾರೂ ಅಲ್ಲ. ರಾಬ್ಲಿಂಗ್‌ನ ಏಕೈಕ ಪುತ್ರ. ರಾಬ್ಲಿಂಗ್ ಒಂದು ಮಹಾಯಾತ್ರೆಗೆ ಮುಂದಾಗುವ ವೇಳೆಯಲ್ಲಿ ಈ ವಾಷಿಂಗ್ಟನ್ ಸಿವಿಲ್ ಎಂಜಿನಿಯರಿಂಗ್ ಡಿಪ್ಲೊಮಾದ ಅಂತಿಮ ವರ್ಷದಲ್ಲಿದ್ದ. ಅಪ್ಪನ ಮಾತು, ಮನಸು ಎರಡೂ ಅವನಿಗೆ ಅರ್ಥವಾಗುತ್ತಿದ್ದವು. ಒಂದೆರಡು ನಿಮಿಷ ಅಪ್ಪನನ್ನೇ ದಿಟ್ಟಿಸಿ ನೋಡಿದ ವಾಷಿಂಗ್ಟನ್ ಟಠಿeಜ್ಞಿಜ ಜಿಞmಟooಜಿಚ್ಝಿಛಿ mZmmZ. ಐZಞ ಡಿಜಿಠಿe qsಟ್ಠ. ಎಟ ZeಛಿZb ಅಂದ!
ನೋಡನೋಡುತ್ತಲೇ ಅಪಾರ ಉತ್ಸಾಹ ಹಾಗೂ ಭಾರೀ ಪ್ರಚಾರದೊಂದಿಗೆ ತೂಗುಸೇತುವೆಯ ನಿರ್ಮಾಣ ಕಾಮಗಾರಿ ಆರಂಭವಾಯಿತು. ಈ ಸಂದರ್ಭದಲ್ಲಿ ಮ್ಯಾನ್‌ಹಟನ್ ನಗರದ ಮೀನುಗಾರರು ಪ್ರತಿಭಟನೆಗೆ ನಿಂತರು. ತೂಗುಸೇತುವೆ ನಿರ್ಮಾಣದಿಂದ ತಮ್ಮ ಮೂಲ ಆದಾಯಕ್ಕೆ ಹೊಡೆತ ಬೀಳುತ್ತದೆ. ಹಾಗಾಗಿಬಿಟ್ಟರೆ ತಾವು ಬದುಕುವುದೇ ಕಷ್ಟವಾಗುತ್ತದೆ ಎಂಬ ವಾದ ಅವರದಿತ್ತು. ಈ ಹಂತದಲ್ಲಿ ಇದ್ದ ಬುದ್ಧಿಯನ್ನೆಲ್ಲ ಉಪಯೋಗಿಸಿದ ರಾಬ್ಲಿಂಗ್- ‘ನನ್ನದು ಜನಪರ ಯೋಜನೆಯೇ ವಿನಃ ಜನವಿರೋ ಯೋಜನೆಯಲ್ಲ’ ಎಂದು ಎಲ್ಲರಿಗೂ ಮನವರಿಕೆ ಮಾಡಿಕೊಟ್ಟ.
ನ್ಯೂಯಾರ್ಕ್ ಮತ್ತು ಮ್ಯಾನ್‌ಹಟನ್ ನಗರಗಳ ಮಧ್ಯೆ ಹರಿಯುತ್ತಿದ್ದ ಈಸ್ಟ್ ರಿವರ್‌ನ ಅಗಲವೇ ಎರಡು ಕಿಲೋಮೀಟರ್ ಉದ್ದವಿತ್ತಲ್ಲ? ರಾಬ್ಲಿಂಗ್ ಅಷ್ಟೂ ಉದ್ದದ ತೂಗುಸೇತುವೆ ನಿರ್ಮಿಸಬೇಕಿತ್ತು. ಮೊದಲ ಐದು ತಿಂಗಳ ಕಾಲ ಕಾಮಗಾರಿ ಕೆಲಸ ಅಂದುಕೊಂಡಂತೆಯೇ ನಡೆಯಿತು. ಆದರೆ, ಆರನೇ ತಿಂಗಳ ಮೊದಲ ವಾರ ಆಗಬಾರದ್ದು ಆಗಿಹೋಯಿತು.
ಅದು ಮಳೆಗಾಲದ ಸಂದರ್ಭ. ಕಾಮಗಾರಿ ಪರಿಶೀಲನೆಗೆಂದು ರಾಬ್ಲಿಂಗ್ ಮತ್ತು ವಾಷಿಂಗ್ಟನ್ ಇಬ್ಬರೂ ಬಂದಿದ್ದರು. ಅವರು ಅಕಾರಿಗಳೊಂದಿಗೆ ಮಾತಾಡುತ್ತ ನಿಂತಿದ್ದಾಗಲೇ ಸೇತುವೆಯ ಒಂದು ಭಾಗ ದಿಢೀರ್ ಕುಸಿಯಿತು. ಈ ದುರ್ಘಟನೆ ಜರುಗಿದ್ದು ೧೮೬೯ರಲ್ಲಿ. ಈ ದುರಂತದಲ್ಲಿ ತೀವ್ರವಾಗಿ ಗಾಯಗೊಂಡ ರಾಬ್ಲಿಂಗ್, ಕೆಲವೇ ದಿನಗಳಲ್ಲಿ ಸತ್ತುಹೋದ. ಈ ಕಡೆ ವಾಷಿಂಗ್ಟನ್‌ಗೂ ಭಾರೀ ಪೆಟ್ಟು ಬಿದ್ದಿತ್ತು. ತಂದೆಯ ಕನಸಿನ ಸೇತುವೆ ಕಣ್ಮುಂದೆಯೇ ಕುಸಿದದ್ದು, ತಂದೆ ಸತ್ತೇ ಹೋದದ್ದನ್ನು ಕಂಡು ವಾಷಿಂಗ್ಟನ್ ಆಘಾತಗೊಂಡ. ಈ ಚಿಂತೆಯಲ್ಲಿದ್ದಾಗಲೇ ಅವನಿಗೆ ಸ್ಟ್ರೋಕ್ ಆಯಿತು. ಮಾತು ನಿಂತುಹೋಯಿತು. ಕೈ ಕಾಲುಗಳೆಲ್ಲ ಚಲನೆ ಕಳೆದುಕೊಂಡವು. ಈ ಸಂದರ್ಭದಲ್ಲಿ ವಾಷಿಂಗ್ಟನ್‌ನನ್ನು ಪರೀಕ್ಷಿಸಿದ ವೈದ್ಯರು ಅವನ ಹೆಂಡತಿ ಎಮಿಲಿಯನ್ನು ಕರೆದು ಹೇಳಿದರು : ‘ಮುಂದೆ ಇವರಿಗೆ ಮಾತಾಡಲು ಸಾಧ್ಯವಾಗುತ್ತೋ ಇಲ್ಲವೋ ಹೇಳಲಾಗುವುದಿಲ್ಲ. ಬಹುಶಃ ಸಾಯುವವರೆಗೂ ಇವರು ಇದೇ ಸ್ಥಿತೀಲಿ ಇರ್‍ತಾರೆ ಅನಿಸುತ್ತೆ. ಹುಷಾರಾಗಿ ನೋಡಿಕೊಳ್ಳಿ…’
ಈ ಘಟನೆಯ ನಂತರ ಅಮೆರಿಕದ ಜನ ತಲೆಗೊಂದು ಮಾತಾಡಿದರು. ಕೆಲವರು ಸೇತುವೆ ನಿರ್ಮಾಣದ ಪ್ಲಾನ್ ಸರಿಯಿಲ್ಲ ಎಂದರು. ಕೆಲವರು ಕಳಪೆ ಕಾಮಗಾರಿಯ ಪ್ರತಿಫಲ ಎಂದರು. ಇನ್ನೊಂದಷ್ಟು ಮಂದಿ ಭೂತದ ಕಾಟ ಎಂದು ಹುಯಿಲೆಬ್ಬಿಸಿದರು. ಈ ವೇಳೆಗಾಗಲೇ ಸೇತುವೆ ನಿರ್ಮಾಣದ ಕಾಮಗಾರಿ ಅರ್ಧ ಮುಗಿದಿತ್ತು. ಹಾಗಾಗಿ ಅದನ್ನು ಅಷ್ಟಕ್ಕೇ ಕೈಬಿಡುವಂತಿರಲಿಲ್ಲ. ಈ ಮಹಾಯೋಜನೆಯನ್ನು ಮುಂದುವರಿಸಲು ಯಾರೊಬ್ಬರೂ ಮುಂದೆ ಬರಲಿಲ್ಲ.
ಒಂದು ಕಡೆ ಪರಿಸ್ಥಿತಿ ಹೀಗಿದ್ದಾಗಲೇ ಅದೇ ಮ್ಯಾನ್‌ಹಟನ್ ನಗರದ ಒಂದು ಆಸ್ಪತ್ರೆಯಲ್ಲಿ ವಾಷಿಂಗ್ಟನ್ ರಾಬ್ಲಿಂಗ್ ಚಿಕಿತ್ಸೆ ಪಡೆಯುತ್ತಿದ್ದ. ಗಂಡನನ್ನು ಉಳಿಸಿಕೊಳ್ಳಲೇಬೇಕು ಎಂಬ ಹಟಕ್ಕೆ ಬಿದ್ದಿದ್ದ ಎಮಿಲಿ, ಅವನೊಂದಿಗೆ ಮಾತಾಡುವ ಆಸೆಯಿಂದಲೇ ‘ಮೂಗರ ಭಾಷೆ’ ಕಲಿತಿದ್ದಳು. ಹೀಗೊಂದು ದಿನ ಸಂeಗಳ ಮೂಲಕ ಮಾತಾಡುತ್ತಿದ್ದಾಗಲೇ, ನಾನು ಹೇಳಿದ್ದನ್ನೆಲ್ಲ ಅರ್ಥ ಮಾಡಿಕೊಂಡು, ನೋಟ್ಸ್ ಮಾಡಿಕೊಂಡು ಅದನ್ನೇ ಅಕಾರಿಗಳಿಗೆ ಹೇಳಲು ಸಾಧ್ಯವಾ ಎಂದು ಕೇಳಿದ ವಾಷಿಂಗ್ಟನ್.
ಗಂಡನ ಮಾತು ಕೇಳುತ್ತಿದ್ದಂತೆಯೇ ‘ಈ ಮಹಾಯಾತ್ರೆಗೆ ನಾನು ಸಾರಥಿಯಾಗಬೇಕು ಎಂದು ನಿರ್ಧರಿಸಿದಳು ಎಮಿಲಿ. ನಿಮ್ಮ ಮಾತು ನಡೆಸಿಕೊಡ್ತೀನಿ ಎಂದು ಕಣ್ಣ ಭಾಷೆಯಲ್ಲೇ ಹೇಳಿದಳು. ನಂತರದ ಕೆಲವೇ ದಿನಗಳಲ್ಲಿ ಅವಳು ಸಿವಿಲ್ ಎಂಜಿನಿಯರಿಂಗ್ ಡಿಪ್ಲೊಮಾಗೆ ಸೇರಿಕೊಂಡಳು. ಗಂಡನನ್ನು ಜೋಪಾನವಾಗಿ ನೋಡಿಕೊಳ್ಳುತ್ತಲೇ ಕೋರ್ಸ್ ಮುಗಿಸಿಯೇಬಿಟ್ಟಳು. ಈ ವೇಳೆಗೆ ಅವಳಿಗೂ ಸೇತುವೆ ನಿರ್ಮಾಣ ಕಾಮಗಾರಿಯ ಒಳಗುಟ್ಟುಗಳು ಹಾಗೂ ಅಲ್ಲಿ ಬಳಕೆಯಾಗುವ ತಂತ್ರeನ ಹಾಗೂ ಭಾಷೆಯ ಬಗ್ಗೆ ಅರ್ಥವಾಗಿ ಹೋಗಿತ್ತು.
೧೮೭೨ರಲ್ಲಿ ಎಮಿಲಿಯ ಸಾರಥ್ಯದಲ್ಲಿ ಮಹಾಸೇತುವೆಯ ನಿರ್ಮಾಣ ಕಾರ್ಯ ಮತ್ತೆ ಶುರುವಾಯಿತು. ದಿನಾ ಬೆಳಗ್ಗೆ ವಾಷಿಂಗ್ಟನ್ ಆಸ್ಪತ್ರೆಯ ಬೆಡ್‌ನಲ್ಲಿ ಅಂಗಾತ ಮಲಗಿಕೊಂಡೇ ಕಾಮಗಾರಿ ಕೆಲಸದ ಬಗ್ಗೆ ಸಂeಯ ಮೂಲಕವೇ ಡಿಕ್ಟೇಶನ್ ಕೊಡುತ್ತಿದ್ದ. ಎಮಿಲಿ ಅದನ್ನು ತನ್ನ ಕೈಕೆಳಗಿನ ಎಂಜಿನಿಯರ್‌ಗಳು ಹಾಗೂ ಅಕಾರಿಗಳಿಗೆ ದಾಟಿಸುತ್ತಿದ್ದಳು. ಹೀಗೆ ಶುರುವಾದ ಕೆಲಸ ಸತತ ಹನ್ನೊಂದು ವರ್ಷ ನಡೆದು ಕಡೆಗೂ ಮುಕ್ತಾಯವಾಯಿತು. ರಾಬ್ಲಿಂಗ್ ಕಂಡಿದ್ದ ಕನಸು ಅವನ ಸೊಸೆಯ ಮೂಲಕ ನನಸಾಗಿತ್ತು.
೧೮೮೩, ಮೇ ೨೪ರಂದು ಈ ಸೇತುವೆಯನ್ನು ಪ್ರವೇಶಕ್ಕೆ ತೆರವುಗೊಳಿಸಲಾಯಿತು. ಈ ಸ್ಮರಣೀಯ ಸಂದರ್ಭಕ್ಕೆ ಸಾಕ್ಷಿಯಾಗಲು ಅಮೆರಿಕದ ಅಂದಿನ ಅಧ್ಯಕ್ಷ ಚೆಸ್ಟರ್ ಎ. ಆರ್ಥರ್, ನ್ಯೂಯಾರ್ಕ್‌ನ ಮೇಯರ್ ಫ್ರಾಂಕ್ಲಿನ್ ಎಡಿಸನ್ ಹಾಗೂ ಮ್ಯಾನ್‌ಹಟನ್ ನಗರದ ಮೇಯರ್ ಸೇತ್‌ಲೋ ಬಂದಿದ್ದರು. ಸೇತುವೆಯ ಮೇಲೆ ನ್ಯೂಯಾರ್ಕ್‌ನಿಂದ ಮ್ಯಾನ್‌ಹಟನ್ ಸಿಟಿ ತಲುಪುವ ಮೊದಲ ಅವಕಾಶವನ್ನು ಎಮಿಲಿಗೇ ನೀಡಲಾಯಿತು. ಆಕೆ ಗಮ್ಯ ತಲುಪಿದ ನಂತರ ಒಂದೇ ದಿನದಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಮಂದಿ ತೂಗುಸೇತುವೆಯ ಮೇಲೆ ವ್ಯಾನ್, ಕಾರು, ಬಸ್ಸು, ಬೈಕ್‌ಗಳ ಮೂಲಕ ಪ್ರಯಾಣ ಮಾಡಿ ಖುಷಿಪಟ್ಟರು.
***
ಕತೆ ಇಲ್ಲಿಗೇ ಮುಗಿಯಲಿಲ್ಲ. ಉದ್ಘಾಟನೆಯಾದ ಆರೇ ದಿನಗಳಲ್ಲಿ ಈ ಮಹಾಸೇತುವೆಯ ಒಂದು ಭಾಗ ಮತ್ತೆ ಕುಸಿಯಿತು. ಈ ದುರಂತದಲ್ಲಿ ೧೨ ಮಂದಿ ಸತ್ತರು. ಪರಿಣಾಮವಾಗಿ, ಟೀಕೆ, ಅವಹೇಳನ, ಕೊಂಕುಮಾತು, ಬೆದರಿಕೆ ಎಲ್ಲವೂ ಎಮಿಲಿಯ ಬೆನ್ನು ಬಿದ್ದವು. ಆದರೆ ಎಮಿಲಿ ಹೆದರಲಿಲ್ಲ. ಮೂರೇ ದಿನಗಳಲ್ಲಿ ಅಕಾರಿಗಳು ಹಾಗೂ ಕಾರ್ಮಿಕರೊಂದಿಗೆ ನಡೆದುಹೋಗಿ ಸೇತುವೆಯ ಕುಸಿದಿದ್ದ ಭಾಗದ ರಿಪೇರಿ ಮಾಡಿಸಿಬಿಟ್ಟಳು. ಈ ಬಾರಿ ಸೇತುವೆಯ ಗುಣಮಟ್ಟದ ಬಗ್ಗೆ ಪರೀಕ್ಷಿಸಲು ನಿರ್ಧರಿಸಿದ ಅಮೆರಿಕ ಸರಕಾರ, ಸರ್ಕಸ್‌ನಿಂದ ೨೧ ಆನೆಗಳನ್ನು ಕರೆಸಿ, ಅವುಗಳನ್ನು ಏಕಕಾಲಕ್ಕೆ ಸೇತುವೆಯ ಈ ತುದಿಯಿಂದ ಆ ತುದಿಯವರೆಗೂ ಓಡಿಸಿ ನೋಡಿತು. ಏನೂ ತೊಂದರೆಯಿಲ್ಲ ಎಂದು ಗ್ಯಾರಂಟಿ ಮಾಡಿಕೊಂಡಿತು. ಸಂಚಾರಕ್ಕೆ ತೆರವುಗೊಳಿಸುವ ಮುನ್ನ ಆ ಮಹಾಸೇತುವೆಗೆ ಬ್ರೂಕ್‌ಲೈನ್ ಬ್ರಿಡ್ಜ್ ಎಂಬ ಹೆಸರಿಟ್ಟಿತು.
ರಾಬ್ಲಿಂಗ್‌ನ ಕನಸು, ವಾಷಿಂಗ್ಟನ್‌ನ ದೂರದೃಷ್ಟಿ ಹಾಗೂ ಎಮಿಲಿಯ ತ್ಯಾಗದ ಪ್ರತಿಫಲ ಬ್ರೂಕ್‌ಲೈನ್ ಬ್ರಿಡ್ಜ್. ಇವತ್ತು ಅದರ ಮೇಲೆ ಓಡಾಡುವುದೆಂದರೆ ಪ್ರತಿ ಅಮೆರಿಕನ್ನರಿಗೂ ಹೆಮ್ಮೆ ಖುಷಿ. ‘ಅಕ್ಕ’ ಸಮ್ಮೇಳನದ ನೆಪದಲ್ಲಿ ರಾಬ್ಲಿಂಗ್ ಓಡಾಡಿದ್ದ ನ್ಯೂಜೆರ್ಸಿಯಲ್ಲಿ ಅಡ್ಡಾಡಿದ ನಂತರ, ಬ್ರೂಕ್‌ಲೈನ್ ಬ್ರಿಡ್ಜ್‌ನ ಅಗಾಧತೆಯನ್ನು ಪ್ರತ್ಯಕ್ಷ ಕಂಡ ನಂತರ ನಿಮಗೂ ಈ ಕತೆ ಹೇಳಬೇಕೆನ್ನಿಸಿತು…

ನಾಡಗೀತೆಯಂಥ ಈ ಹಾಡು ಹುಟ್ಟಲು ಅಣ್ಣಾವ್ರ ನೋಟವೇ ಕಾರಣವಾಯ್ತು

ನವೆಂಬರ್ 7, 2010

 

 

 

 

 

 

 

 

ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು

ಚಿತ್ರ: ಆಕಸ್ಮಿಕ. ಸಾಹಿತ್ಯ ಮತ್ತು ಸಂಗೀತ: ಹಂಸಲೇಖ
ಗಾಯನ: ಡಾ. ರಾಜ್‌ಕುಮಾರ್

ಹೇ ಹೇ ಬಾಜೋ. ಟಾಣ ಟಕಟಕಟ.. ಟಾಣ ಟಕಟಕಟ.. ಹೇ ಹೇ..

ಹುಟ್ಟಿದರೇ ಕನ್ನಡ ನಾಡಲ್ ಹುಟ್ಟಬೇಕು
ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು
ಬದುಕಿದು ಜಟಕಾ ಬಂಡಿ,
ಇದು ವಿ ಓಡಿಸುವ ಬಂಡಿ
ಬದುಕಿದು ಜಟಕಾ ಬಂಡಿ
ವಿ ಅಲೆದಾಡಿಸುವಾ ಬಂಡಿ… ||ಪ||

ಕಾಶಿಲಿ ಸ್ನಾನ ಮಾಡು, ಕಾಶ್ಮೀರ ಸುತ್ತಿ ನೋಡು
ಜೋಗದ ಗುಂಡಿ ಒಡೆಯ ನಾನೆಂದು ಕೂಗಿ ಹಾಡು
ಅಜಂತ ಎಲ್ಲೋರವ ಬಾಳಲ್ಲಿ ಒಮ್ಮೆ ನೋಡು
ಬಾದಾಮಿ ಐಹೊಳೆಯ ಚೆಂದಾನ ತೂಕಮಾಡು
ಕಲಿಯೋಕೆ ಕೋಟಿ ಭಾಷೆ, ಆಡೋಕ್ಕೆ ಒಂದೇ ಭಾಷೆ…
ಕನ್ನಡಾ… ಕನ್ನಡಾ… ಕಸ್ತೂರಿ ಕನ್ನಡಾ ||೧||

ಧ್ಯಾನಕ್ಕೆ ಭೂಮಿ ಇದು, ಪ್ರೇಮಕ್ಕೆ ಸ್ವರ್ಗ ಇದು
ಸ್ನೇಹಕ್ಕೆ ಶಾಲೆ ಇದು, ಜ್ಞಾನಕ್ಕೆ ಪೀಠ ಇದು
ಕಾವ್ಯಕ್ಕೆ ಕಲ್ಪ ಇದು, ಶಿಲ್ಪಕ್ಕೆ ತಲ್ಪ ಇದು
ನಾಟ್ಯಕ್ಕೆ ನಾಡಿ ಇದು, ನಾದಾಂತರಂಗವಿದು
ಕುವೆಂಪು ಬೇಂದ್ರೆಯಿಂದ, ಕಾರಂತ ಮಾಸ್ತಿಯಿಂದ
ಧನ್ಯವೀ ಕನ್ನಡ… ಗೋಕಾಕಿನ ಕನ್ನಡಾ. ||೨||

ಬಾಳಿನ ಬೆನ್ನು ಹತ್ತಿ ನೂರಾರು ಊರು ಸುತ್ತಿ
ಏನೇನೋ ಕಂಡ ಮೇಲೂ ನಮ್ಮೂರೇ ನಮಗೆ ಮೇಲು
ಕೈಲಾಸಂ ಕಂಡ ನಮಗೆ ಕೈಲಾಸ ಯಾಕೆ ಬೇಕು?
ದಾಸರ ಕಂಡ ನಮಗೆ ವೈಕುಂಠ ಯಾಕೆ ಬೇಕು?
ಮುಂದಿನ ನನ್ನ ಜನ್ಮ ಬರೆದಿಟ್ಟನಂತೆ ಬ್ರಹ್ಮ
ಇಲ್ಲಿಯೇ… ಇಲ್ಲಿಯೇ…. ಈ ಮಣ್ಣಿನಲ್ಲಿಯೇ
ಎಂದಿಗೂ ನಾನಿಲ್ಲಿಯೇ…. ||೩||

ಇದು ಸಮಸ್ತ ಕನ್ನಡಿಗರ ನೆಚ್ಚಿನ ಹಾಡು, ಮೆಚ್ಚಿನ ಹಾಡು. ಕರುನಾಡ ಪ್ರಭಾವಳಿಗೆ ಸಾಕ್ಷಿ ಹೇಳುವ ಹಾಡು. ಹಸು ಕಂದಮ್ಮಗಳೂ ತಾಳ ಹಾಕುವಂತೆ, ಮುಪ್ಪಾನು ಮುದುಕರನ್ನೂ ಕುಣಿಯುವಂತೆ ಮಾಡುವ ಹಾಡು. ಹೌದು. ಈ ಹಾಡಿನ ಪ್ರತಿ ಅಕ್ಷರದಲ್ಲಿ ಕನ್ನಡದ ಕಂಪಿದೆ. ಕನ್ನಡದ ಇಂಪಿದೆ. ಜನಪದ ಕುಣಿತದ ವೈಭವವಿದೆ. ಈ ಕಾರಣದಿಂದಲೇ, ನಾಡಗೀತೆ ಪಡೆದುಕೊಂಡಷ್ಟೇ ಜನಪ್ರಿಯತೆಯನ್ನು ಈ ಚಿತ್ರಗೀತೆಯೂ ಪಡೆದುಕೊಂಡಿದೆ. ನಿದ್ದೆ ಯಲ್ಲಿ ನಗುವ ಕಂದನ ಮೊಗದಷ್ಟ ಚೆಂದಕ್ಕಿರುವ ಈ ಹಾಡು ಶುರು ವಾಗುವುದು ಹೀಗೆ: ‘ ಹುಟ್ಟಿದರೇ ಕನ್ನಡ ನಾಡಲ್ ಹುಟ್ಟಬೇಕು, ಮೆಟ್ಟಿ ದರೇ ಕನ್ನಡ ಮಣ್ಣ ಮೆಟ್ಟಬೇಕು….’
೧೯೯೩ರಲ್ಲಿ ಡಾ. ರಾಜ್ ಕುಮಾರ್ ಅಭಿನಯದ ‘ ಆಕಸ್ಮಿಕ’ ಚಿತ್ರ ತೆರೆ ಕಂಡ ಸಂದರ್ಭದಲ್ಲಿ ಈ ಹಾಡು ಸೃಷ್ಟಿಸಿದ ಸಂಚಲನದ ಬಗ್ಗೆ ಹೇಳಲೇಬೆಕು. ಉತ್ತರ ಕರ್ನಾಟಕದ ಸೀಮೆಯ ಜನ ಥಿಯೇಟರಿನಲ್ಲಿ ಈ ಹಾಡು ಬಂದಾಕ್ಷಣ ಭಾವುಕರಾಗುತ್ತಿದ್ದರು. ಬೆಳ್ಳಿತೆರೆಗೆ ಪೂಜೆ ಮಾಡಿಸುತ್ತಿದ್ದರು. ತೆರೆಯ ಮೇಲೆ ಥೇಟಾನುಥೇಟ್ ಉತ್ತರ ಕರ್ನಾಟಕದ ಆಸಾಮಿಯಂತೆ ಕುಣಿಯುತ್ತಿದ್ದ ಅಣ್ಣಾವ್ರಿಗೆ ‘ದೃಷ್ಟಿ’ ತೆಗೆಯುತ್ತಿದ್ದರು. ನಂತರ, ಹಾಡಿನುದ್ದಕ್ಕೂ ತಾವೂ ಕುಣಿಯುತ್ತಿದ್ದರು. ಅಷ್ಟೇ ಅಲ್ಲ, ಈ ಹಾಡನ್ನೇ ಇನ್ನೊಂದ್ಸಲ ತೋರಿಸಿ ಎಂದು ಥಿಯೇಟರ್ ಮಾಲೀಕರಿಗೆ ದುಂಬಾಲು ಬೀಳುತ್ತಿದ್ದರು.
ಇಂಥದೊಂದು ಅಪರೂಪದ, ಅಕ್ಕರೆಯ ಹಾಡು ಹುಟ್ಟಿದ್ದಾದರೂ ಹೇಗೆ? ಹಂಸಲೇಖ ಎಂಬ ಅಣ್ಣಯ್ಯನಿಗೆ ಗುಲಾಬಿ ಪಕಳೆಯಂಥ ಪದಗಳು ಹೊಳೆದಿದ್ದಾದರೂ ಹೇಗೆ? ಈ ಹಾಡಿನ ಹಿಂದೆಯೂ ಒಂದು ಕತೆ ಇರಬಹುದೇ? ಇಂಥ ಪ್ರಶ್ನೆಗಳ ಸುತ್ತಲೂ ಗಿರಕಿ ಹೊಡೆಯುತ್ತಿದ್ದಾಗ ‘ಆಕಸ್ಮಿಕ’ವಾಗಿ ಸಾಕ್ಷಾತ್ ಹಂಸಲೇಖ ಅವರೇ ಮಾತಿಗೆ ಸಿಕ್ಕಿಬಿಟ್ಟರು. ಈ ಹಾಡಿನ ಹಿಂದಿರುವ ಕಥೆಯನ್ನು ಅವರು ವಿವರಿಸಿದ್ದು ಹೀಗೆ:
ತ.ರಾ.ಸು. ಅವರ ಆಕಸ್ಮಿಕ-ಅಪರಾ-ಪರಿಣಾಮ ಈ ಮೂರು ಕಾದಂಬರಿಗಳನ್ನು ಆಧರಿಸಿ ತಯಾರಾದ ಚಿತ್ರ ‘ಆಕಸ್ಮಿಕ’. ಅದಕ್ಕೆ ನಾಗಾಭರಣ ಅವರ ನಿರ್ದೇಶನವೆಂಬುದು ಖಚಿತವಾಗಿತ್ತು. ಸಂಗೀತ, ಸಾಹಿತ್ಯ ಒದಗಿಸಲು ನನಗೆ ಕರೆ ಬಂತು. ಚಿ. ಉದಯಶಂಕರ್ ಅವರು ಇದ್ದಾಗಲೂ ಅಣ್ಣಾವ್ರ ಚಿತ್ರಕ್ಕೆ ಹಾಡು ಬರೆಯಲು ಎರಡನೇ ಬಾರಿ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಅಂದುಕೊಂಡೆ. ಆ ಕಥೆಗೆ ತಿಂಗಳಾನುಗಟ್ಟಲೆ ಸ್ಕ್ರಿಪ್ಟ್ ವರ್ಕ್ಸ್ ನಡೆಯಿತು. ಸದಾಶಿವನಗರದಲ್ಲಿದ್ದ ಶಿವರಾಜ್‌ಕುಮಾರ್ ಅವರ ಮನೆಯಲ್ಲಿ ಎಲ್ಲ ಚರ್ಚೆಗಳೂ ನಡೆಯು ತ್ತಿದ್ದವು. ಚರ್ಚೆಯಲ್ಲಿ ಅಣ್ಣಾವ್ರು, ಪಾರ್ವತಮ್ಮ, ವರದಪ್ಪ, ನಾಗಾ ಭರಣ, ಉದಯಶಂಕರ್, ನಾನು, ಸಹಾಯಕ ನಿರ್ದೇಶಕರಾಗಿದ್ದ ಪಿ. ಶೇಷಾದ್ರಿ, ರಾಜಶೇಖರ್, ನರಸಿಂಹನ್…. ಹೀಗೆ ಎಲ್ರೂ ಸೇರಿ ಕೊಳ್ತಿದ್ವಿ. ಆಫೀಸ್ ಟೈಮಿಂಗ್ ಥರಾ ಬೆಳಗ್ಗೆ ಒಂಬತ್ತೂವರೆಯಿಂದ ಸಂಜೆಯವರೆಗೆ ತುಂಬ ಶ್ರದ್ಧೆ, ಶಿಸ್ತಿನಿಂದ ಕೆಲಸ ನಡೀತಿತ್ತು. ಊಟೋಪ ಚಾರದ ಸಂದರ್ಭದಲ್ಲಿ ಅಣ್ಣಾವ್ರೇ ಆತಿಥ್ಯಕ್ಕೆ ನಿಂತುಬಿಡ್ತಿದ್ರು. ಒಂದೊಂದೇ ತಿಂಡಿಯನ್ನು ಮುಂದಿಟ್ಟು- ‘ಇದು ತುಂಬಾ ಚನ್ನಾಗಿರ್‍ತದೆ. ಸ್ವಲ್ಪ ಟೇಸ್ಟ್ ನೋಡಿ. ಸಿನಿಮಾದಲ್ಲಿ ಇಂಟರ್‌ವೆಲ್ ಬಿಟ್ಟಾಗ ಕುರುಕಲು ತಿಂಡಿ ತಗೊಳ್ತೀವಲ್ಲ? ಹಾಗೆ ಇದೂನೂ’ ಎಂದು ನಗುತ್ತಿದ್ದರು.
ಚರ್ಚೆಯ ಸಂದರ್ಭದಲ್ಲಿಯೇ ಯಾವ್ಯಾವ ಸಂದರ್ಭದಲ್ಲಿ ಹಾಡುಗಳು ಬರಬೇಕು ಹಾಗೂ ಅವು ಹೇಗಿರಬೇಕೆಂದು ವರದಪ್ಪ ಹಾಗೂ ನಾಗಾಭರಣ ನನಗೆ ಹೇಳಿದ್ದರು. ಕೆಲವೇ ದಿನಗಳಲ್ಲಿ ಹಾಡು ಬರೆದಿದ್ದಾಯ್ತು. ಟ್ಯೂನ್ ಮಾಡಿದ್ದೂ ಆಯ್ತು. ಭಾವ ಪ್ರಧಾನವಾದ ಆ ಟ್ಯೂನ್ ಹಾಡುಗಳು ಎಲ್ಲರಿಗೂ ಇಷ್ಟವಾದವು. ಆದರೆ, ವರದಪ್ಪ ನವರ ತಲೇಲಿ ಬೇರೊಂದು ಯೋಚನೆ ಓಡಾಡ್ತಾ ಇತ್ತು ಅನ್ಸುತ್ತೆ. ಅದೊಂದು ದಿನ ನಾನು ಚರ್ಚೆಗೆಂದು ಹೋಗುತ್ತಿದ್ದಂತೆಯೇ ಕರೆದು ವರದಪ್ಪ ಹೇಳಿದ್ರು: ‘ಹಂಸ ಲೇಖಾ ಅವ್ರೆ, ಈ ಸಿನಿಮಾಕ್ಕೆ ಒಂದು ಮಾಸ್ ಹಾಡು ಬೇಕು. ಬೇಕೇಬೇಕು. ಅದು ಹೇಗಿರ ಬೇಕು, ಹೇಗಿದ್ರೆ ಚೆಂದ, ಯಾವ ಸಂದರ್ಭದಲ್ಲಿ ಬಳಸಿದ್ರೆ ಚೆಂದ ಅನ್ನೋದನ್ನೆಲ್ಲ ಯೋಚಿಸಿ ಮಾಸ್ ಸಾಂಗ್ ಮಾಡಿಬಿಡಿ. ಅದು ಚಿತ್ರದ ಉಳಿದ ಎಲ್ಲ ಹಾಡುಗಳನ್ನು ಮೀರಿಸುವಂಥ ಹಾಡಾಗಬೇಕು…’
ಈ ಸಿನಿಮಾದಲ್ಲಿ ಮಾಸ್ ಸಾಂಗ್‌ನ ಹೇಗೆ ಸೇರಿಸೋದು? ಅಣ್ಣಾವ್ರಿಗೂ ಕಥೆಗೂ ಸೂಟ್ ಆಗೋ ಹಾಗೆ, ಕಥೆಯ ಓಟಕ್ಕೆ ಧಕ್ಕೆ ಬಾರದ ಹಾಗೆ ಇದನ್ನು ಪ್ಲೇಸ್ ಮಾಡುವುದು ಹೇಗೆ ಎಂದು ಯೋಚಿಸ್ತಾನೇ ಇದ್ದೆ. ಏನೂ ಹೊಳೆದಿರಲಿಲ್ಲ. ಆದರೆ, ವರದಪ್ಪನವರು ಮಾತ್ರ ಬಿಡಲಿಲ್ಲ. ದಿನವೂ ಮಾಸ್ ಸಾಂಗ್ ಬಗ್ಗೆ ಕೇಳ್ತಾನೇ ಇದ್ರು…
ಹೀಗಿದ್ದಾಗಲೇ ಅದೊಂದು ದಿನ ಸ್ವಲ್ಪ ಬೇಗನೇ ಶಿವಣ್ಣನ ಮನೆಗೆ ಹೋದೆ. ವರದಪ್ಪ ಹಾಗೂ ಉದಯಶಂಕರ್ ಆಗಲೇ ಚರ್ಚೆಗೆ ಕೂತಿದ್ರು. ನಾನು ಹೋದ ಸ್ವಲ್ಪ ಹೊತ್ತಿಗೇ ರಾಜಶೇಖರ್ ಹಾಗೂ ನರಸಿಂಹನ್ ಬಂದರು. ಈ ಇಬ್ಬರಿಗೂ ರಾತ್ರಿ ಗುಂಡು ಹಾಕುವ ಅಭ್ಯಾ ಸವಿತ್ತು. ಅವತ್ತು ಅದೇಕೋ ರಾತ್ರಿಯ ಹ್ಯಾಂಗೋವರ್‌ನಲ್ಲೇ ಬಂದು ಬಿಟ್ಟಿದ್ರು. ಮುಖದಲ್ಲಿ ಕಳೆಯೇ ಇರಲಿಲ್ಲ. ಪಕ್ಕದಲ್ಲಿ ಕೂತ ಅವರನ್ನು ಕಡೆಗಣ್ಣಲ್ಲೇ ಗಮನಿಸಿದೆ. ತಲೆಯ ತುಂಬಾ ಮಾಸ್‌ಗೀತೆಯ ಟ್ಯೂನ್ ಮತ್ತು ಸಾಹಿತ್ಯದ ಯೋಚನೆಯೇ ತುಂಬಿತ್ತು. ಅದೇ ಗುಂಗಿನಲ್ಲಿ ಹಾರ್ಮೋನಿಯಂ ಮೇಲೆ ಕೈ ಇಟ್ಟು ಏನೋ ಗುನುಗುತ್ತಿದ್ದೆ.
ಅಣ್ಣಾವ್ರು, ಆಗಷ್ಟೇ ಯೋಗ, ಸ್ನಾನ, ಪೂಜೆ ಮುಗಿಸಿ ಶುಭ್ರ ಬಿಳಿ ಷರ್ಟು ಧರಿಸಿ, ಫುಲ್ ಕೈ ತೋಳನ್ನು ಮಡಿಸುತ್ತಾ ಅದ್ಭುತ ಎಂಬಂಥ ಸ್ಟೈಲ್‌ನಲ್ಲಿ ಹಾಲ್‌ನ ಆ ಕಡೆಯಿಂದ ಬಂದು ನಿಂತರು. ವಾಹ್… ಆ ಪ್ರೊಫೈಲ್ ಆಂಗಲ್‌ನಲ್ಲಿ ಅವರನ್ನು ನೋಡ್ತಿದ್ರೆ ಯಾರಿಗೂ ರೆಪ್ಪೆ ಬಡಿಯಲೂ ಮನಸ್ಸಾಗ್ತಿರಲಿಲ್ಲ. ಅಣ್ಣಾವ್ರ ಆ ಚಿತ್ರವನ್ನು ಕಣ್ಣ ಕ್ಯಾಮೆರಾ ದೊಳಗೆ ಇಟ್ಟುಕೊಂಡೇ ನರಸಿಂಹನ್ ಕಡೆ ತಿರುಗಿ ಮೆಲ್ಲಗೆ ಉದ್ಗರಿಸಿದೆ: ನೋಡಯ್ಯ ಆ ಕಡೆ. ನಾವು ಏನಂತ ಹುಟ್ತೀವೋ… ಹುಟ್ಟಿದ್ರೆ ಅಣ್ಣಾವ್ರ ಥರಾ ಹುಟ್ಟಬೇಕು.
ತಕ್ಷಣವೇ ಮ್ಯಾಜಿಕ್ ನಡೆದೇ ಹೋಯ್ತು. ಮಾಸ್ ಹಾಡಿನ ಗುಂಗ ಲ್ಲಿದ್ದ ನನಗೆ ಅಣ್ಣಾವ್ರ ಆ ಲುಕ್ಕೇ ಸೂರ್ತಿ ಆಗಿಬಿಡ್ತು. ಎಫ್ ಶಾರ್ಪ್ (ನಾಲ್ಕೂವರೆ ಮನೆ ಶ್ರುತಿ) ನನ್ನ ಫೇವರಿಟ್. ಅದರಲ್ಲಿ ಟ್ಯೂನ್‌ನ ಪ್ರಯತ್ನಿಸ್ತಿದ್ದೆ. ಆ ಕ್ಷಣದಲ್ಲೇ ಅದಕ್ಕೆ ಹೊಂದುವಂಥ ಮೊದಲ ಸಾಲು ಹೊಳೆದೇ ಬಿಡ್ತು: ‘ಹುಟ್ಟಿದರೇ ಕನ್ನಡ ನಾಡಲ್ ಹುಟ್ಟಬೇಕು…’ ಅದರ ಹಿಂದೆಯೇ ‘ಮೆಟ್ಟಿದರೇ ಕನ್ನಡ ಮಣ್ಣ ಮೆಟ್ಟಬೇಕು’ ಎಂಬ ಇನ್ನೊಂದು ಸಾಲು ಕೂಡ ತಂತಾನೇ ಬಂದುಬಿಡ್ತು. ವರದಪ್ಪ ಹಾಗೂ ಅಣ್ಣಾವ್ರ ಮುಂದೆ ಆ ಎರಡು ಸಾಲುಗಳನ್ನೇ ಮತ್ತೆ ಮತ್ತೆ ಹೇಳ್ತಾ ಹೋದೆ.
ವಿಲನ್‌ನನ್ನು ಹಿಡಿಯುವ ನೆಪದಲ್ಲಿ ನಾಯಕ ವೇಷ ಮರೆಸಿಕೊಂಡು ಹುಬ್ಬಳ್ಳಿಗೆ ಹೋಗ್ತಾನೆ ಎಂದು ವರದಪ್ಪ ಹಾಗೂ ನಾಗಾಭರಣರು ಹೇಳಿದ್ದ ಮಾತು ಆಗಲೇ ನೆನಪಿಗೆ ಬಂತು. ಆ ಸಂದರ್ಭಕ್ಕೇ ಈ ಹಾಡು ಹಾಕಿದ್ರೆ ಹೇಗೆ ಅನ್ನಿಸ್ತು. ಅದನ್ನೇ ವರದಪ್ಪ ನವರಿಗೆ ಹೇಳುತ್ತಾ- ‘ಸಾರ್, ಹುಬ್ಬಳ್ಳಿಯ ಸಂದರ್ಭದಲ್ಲಿ ಮಾರುವೇಷ, ಜಟಕಾಗಾಡಿ ಎಲ್ಲವನ್ನೂ ಹಾಡಿನ ಮೂಲಕ ತರಬಹುದು. ಅದಕ್ಕೆ ತಕ್ಕಂತೆ ಹಾಡಾಗುತ್ತೆ’ ಅಂದೆ.
ಪಲ್ಲವಿಯ ಮುಂದಿನ ಸಾಲು ಹುಟ್ಟಿದ್ದು ಕೂಡಾ ಸ್ವಾರಸ್ಯಕರವೇ. ‘ಆಕಸ್ಮಿಕ’ ಸಿನಿಮಾದಲ್ಲಿ ವಿ ನಾಯಕನ ಬದುಕಲ್ಲಿ ಏನೆಲ್ಲಾ ಆಟವಾ ಡುತ್ತೆ. ಚಿತ್ರ ತಂಡದವರೆಲ್ಲ ಅದನ್ನೇ ಮತ್ತೆ ಮತ್ತೆ ನೆನಪಿಸಿಕೊಂಡು ಡಿವಿಜಿಯವರ ಬದುಕು ಜಟಕಾ ಬಂಡಿ, ವಿ ಅದರ ಸಾಹೇಬ ಎಂಬ ಸಾಲುಗಳನ್ನೇ ಉದ್ಗರಿಸ್ತಾ ಇದ್ರು. ಪಲ್ಲವಿ ಮುಂದುವರಿಸುವಾಗ ಅಚಾನಕ್ಕಾಗಿ ಎಲ್ಲರ ಮಾತೂ ನೆನಪಾಯ್ತು. ತಕ್ಷಣವೇ ಮತ್ತೇನೋ ಹೊಳೆದಂತಾಗಿ… ‘ಬದುಕಿದು ಜಟಕಾ ಬಂಡಿ, ಇದು ವಿಯೋಡಿ ಸುವಾ ಬಂಡಿ’ ಎಂದು ಹಾಡಿಬಿಟ್ಟೆ. ತಕ್ಷಣವೇ ಅಣ್ಣಾವ್ರು ಫಟ್ಟಂತ ಉದ್ಗರಿಸಿದರು. ‘ತಗುಲ್‌ಕೊಳ್ತಲಾ ನನ್‌ಮಗಂದು..’
ಮುಂದೆ ಸವಾಲು ಅನ್ನಿಸಲೇ ಇಲ್ಲ. ನೋಡನೋಡುತ್ತಲೇ ಆರು ಚರಣಗಳು ರೆಡಿಯಾದವು. ಅದರಲ್ಲಿ ಮೂರನ್ನು ವರದಪ್ಪ ಆಯ್ದುಕೊಂಡರು. ಮುಂದೆ ರೆಕಾರ್ಡಿಂಗ್ ಸಮಯದಲ್ಲಿ ಒಂದು ಮ್ಯಾಜಿಕ್ ನಡೀತು. ನನ್ನ ಹೆಗಲು ತಟ್ಟಿದ ಅಣ್ಣಾವ್ರು-‘ಹಂಸಲೇಖಾ ಅವರೇ, ಒಂದು ಪುಟ್ಟ ಸಲಹೆ. ಹಾಡು ಹೀಗೆ ನೇರವಾಗಿ ಶುರು ಆದ್ರೆ ಜೋಶ್ ಇರೋದಿಲ್ಲ. ಇದಕ್ಕೊಂದು ಭರ್ಜರಿ ಸ್ಟಾರ್ಟ್ ಬೇಕು. ಕುದುರೆ ಓಡಿಸುವಾಗ ಜಟಕಾ ಸಾಬಿಗಳು ದಾರಿ ಬಿಡಿ ಅನ್ನೋಕೆ ‘ಬಾಜೋ’ ಅಂತಾರೆ. ಕುದುರೆಗೆ ಜೋಶ್ ಬರಿಸಲಿಕ್ಕೆ ಅಂತಾನೇ ಚಾವಟಿಯ ಕೋಲನ್ನು ಚಕ್ರಕ್ಕೆ ಕೊಟ್ಟು ಕಟಗುಟ್ಟಿಸ್ತಾರೆ. ಅದನ್ನೂ ಹಾಡಿನ ಭಾಗವಾಗಿ ಬಳಸಿಕೊಂಡ್ರೆ ಹೇಗೆ? ಅಂದರು. ಅಣ್ಣಾವ್ರ ಆ ಆಪ್ತ ಸಲಹೆಯ ಕಾರಣದಿಂದಲೇ ಪಲ್ಲವಿಗೂ ಮೊದಲು ‘ಹೇ ಹೇ ಬಾಜೋ… ಟಾಣ ಟಕಟಕಟ.’ ಎಂಬ ಅನನ್ಯ ಸಾಲು ಸೇರಿ ಕೊಂಡಿತು…’ ನಾಲ್ಕೂವರೆ ನಿಮಿಷದ ಈ ಹಾಡಿಗೆ ಹುಬ್ಬಳ್ಳಿಯ ರಾಣಿ ಚನ್ನಮ್ಮ ಸರ್ಕಲ್ ಹಾಗೂ ಸಿದ್ಧಾ ರೂಢ ಮಠದ ಆವರಣದಲ್ಲಿ ಐದು ದಿನಗಳ ಕಾಲ ಶೂಟಿಂಗ್ ನಡೀತು…’
ಹೀಗೆ ಹಾಡಿನ ಕಥೆ ಹೇಳಿದ ಹಂಸಲೇಖ ಮಾತು ಮುಗಿಸುವ ಮುನ್ನ ಹೇಳಿದರು: ‘ಇದು ನವೆಂಬರ್ ಅಲ್ಲ. ಕನ್ನಡ ಮಾಸ. ಇದನ್ನು ಸಮಸ್ತ ಕನ್ನಡಿಗರಿಗೂ ನೆನಪಿಸಿ…!’

ಕರಿಹೈದನೆಂಬೋರು ಮಾದೇಶ್ವರಾ…

ಅಕ್ಟೋಬರ್ 30, 2010

ಕರಿಹೈದನೆಂಬೋರು ಮಾದೇಶ್ವರಾ…

ಚಿತ್ರ: ಕಾಕನ ಕೋಟೆ. ಗೀತೆರಚನೆ: ಮಾಸ್ತಿ ವೆಂಕಟೇಶ ಅಯ್ಯಂಗಾರ್
ಸಂಗೀತ: ಅಶ್ವತ್ಥ್-ವೈದಿ. ಗಾಯನ: ಬಿ.ವಿ. ಕಾರಂತ.
ಕೋರಸ್: ಜಿ.ಕೆ. ವೆಂಕಟೇಶ್, ಸಿ. ಅಶ್ವತ್ಥ್

ಕರಿಹೈದನೆಂಬೋರು ಮಾದೇಶ್ವರಾ
ಮಾದೇಶ್ವರಗೇ ಶರಣು ಮಾದೇಶ್ವರ
ಮಾದೇಶ್ವರಗೇ ಶರಣು ಮಾದೇಶ್ವರ
ಮಾದೇಶ್ವರ ಗೇ ಶರಣು ಮಾದೇಶ್ವರ ||ಪ||

ಕರಿಹೈದನವ್ವನಾ ಹೆಸರೆಂದು ನಿಲ್ಲಲಿ
ಅವನ ಬಳಿ ಎಂದೆಂದು ಒಳ್ಳಿದನು ಮೆಲ್ಲಲಿ
ಅವನ ಹೆತ್ತಾ ಕಾಡು ಎಂದೆಂದೂ ಚಿಗುರಲಿ ||೧||

ಅವನ ಬಳಿ ಎಂದೆಂದು ಮಿಕ್ಕಿರಲಿ ಹೊಗರಲಿ
ಅವನ ಹಾಡಿಗಳಿರಲಿ ಎಂದೆಂದು ಸೊಗದಲಿ
ಅವನ ಬಳಿಗೆಂದೆಂದು ನಗೆಯಿರಲಿ ಮೊಗದಲಿ ||೨||

ಅವನ ಹೊಗಳುವ ಹಾಡು ಎಂದೆಂದು ಹಾಡಲಿ
ಅವನ ಬಳಿ ಎಂದೆಂದು ಹಬ್ಬವನು ಮಾಡಲಿ
ಕರಿಹೈದ ನಪ್ಪಾಜಿ ಮಾದೇಶ್ವರಾ
ಮಾದೇಶ್ವರಗೆ ಶರಣು ಮಾದೇಶ್ವರಾ ||೩||

ಮೊದಲು ನಾಟಕವಾಗಿ ಜನಮನ್ನಣೆಗಳಿಸಿ, ನಂತರ ಚಲನ ಚಿತ್ರವಾಗಿಯೂ ಯಶಸ್ವಿಯಾದ ಸಿನಿಮಾಗಳ ಪಟ್ಟಿ ದೊಡ್ಡದಿದೆ. ‘ವಸಂತಸೇನಾ’ ‘ಭಕ್ತ ಪ್ರಹ್ಲಾದ‘ ‘ಸದಾ ರಮೆ’ ಸಂಪತ್ತಿಗೆ ಸವಾಲ್…’ ಇವೆಲ್ಲ ಮೊದಲು ರಂಗಭೂಮಿಯಲ್ಲಿ ಮಿಂಚಿ ನಂತರವೇ ಬೆಳ್ಳಿ ತೆರೆಯ ಮೇಲೂ ಬೆಳಗಿದ ಸಿನಿಮಾಗಳು. ಈ ಸಾಲಿಗೆ ಸೇರುವ ಇನ್ನೊಂದು ಸಿನಿಮಾ – ಕಾಕನ ಕೋಟೆ.
ಮೈಸೂರು ಜಿಲ್ಲೆಯ ಹೆಗ್ಗಡದೇವನ ಕೋಟೆ ತಾಲೂಕಿನಲ್ಲಿರುವ ಒಂದು ಸ್ಥಳ ಕಾಕನ ಕೋಟೆ. ಅದು ಮಲೆನಾಡು ಪ್ರದೇಶ. ಅದರ ಸುತ್ತಮುತ್ತಲ ಪ್ರದೇಶವನ್ನು ಕಾಕನಕೋಟೆ ಕಾಡು ಎಂದು ಕರೆಯು ತ್ತಾರೆ. ದಶಕಗಳಿಗೂ ಹಿಂದೆ ಅಲ್ಲಿ ಹೆಚ್ಚಾಗಿ ಕಾಡು ಕುರುಬರೇ ವಾಸಿಸುತ್ತಿದ್ದರಂತೆ. ಈ ಜನ ಆಗ ಹೆಗ್ಗಡದೇವನ ಕೋಟೆಯಲ್ಲಿದ್ದ ಹೆಗ್ಗಡೆಯವರಿಗೆ ಕಪ್ಪ ಕೊಡಬೇಕಿತ್ತಂತೆ. ಅದೊಮ್ಮೆ ಕಪ್ಪ ಸಲ್ಲಿಕೆಯ ವಿಚಾರವಾಗಿಯೇ ಕಾಡು ಕುರುಬರ ನಾಯಕ ಕಾಕ ಎಂಬಾತನಿಗೂ ಹೆಗ್ಗಡೆಯವರಿಗೂ ವೈಮನಸ್ಸು ಉಂಟಾಯಿತಂತೆ. ಆ ಸಂದರ್ಭದಲ್ಲಿ ಮೈಸೂರನ್ನು ಆಳುತ್ತಿದ್ದ ದೊರೆ ರಣರ ಕಂಠೀರವ ನರಸರಾಜ ಒಡೆಯರ್. ಒಂದು ಆಕಸ್ಮಿಕ ಸಂದರ್ಭದಲ್ಲಿ ಮಹಾರಾಜರ ಪ್ರಾಣ ಉಳಿಸುವ ಮೂಲಕ ಅವರ ಒಲವುಗಳಿಸಿದ್ದ ಕಾಕ, ಮಹಾರಾಜರ ಸಹಾಯ ಪಡೆದು ತನ್ನ ಜನರನ್ನು ಕಪ್ಪ ಸಲ್ಲಿಕೆಯ ಸಂಕಟದಿಂದ ಪಾರುಮಾಡಿದನಂತೆ. ಇದಿಷ್ಟೂ ಕಾಕನ ಕೋಟೆ ಚಿತ್ರದ ಕಥಾವಸ್ತು.
‘ಕಾಕನಕೋಟೆ’ ಚಿತ್ರಕ್ಕೆ ಸಂಬಂಸಿದಂತೆ ಕೆಲವು ಸ್ವಾರಸ್ಯಗಳಿವೆ. ಏನೆಂದರೆ, ಇದು ಸಿ.ಆರ್. ಸಿಂಹ ನಿರ್ದೇಶನದ ಮೊದಲ ಚಿತ್ರ. ಸಿ. ಅಶ್ವತ್ಥ್ ಸಂಗೀತ ನಿರ್ದೇಶನದ ಮೊದಲ ಚಿತ್ರವೂ ಇದೇ. ಅಶ್ವತ್ಥ್ ಅವರಿಗೆ ಎಲ್. ವೈದ್ಯನಾಥನ್ ಅವರ ಪರಿಚಯವಾಗಿದ್ದೂ ಈ ಚಿತ್ರ ದಲ್ಲಿಯೇ. (ಮುಂದೆ ಅಶ್ವತ್ಥ್-ವೈದಿ ಜೋಡಿ ತುಂಬ ಜನಪ್ರಿಯವಾ ಯಿತು) ಇವತ್ತು ದಕ್ಷಿಣ ಭಾರತದ ನಂಬರ್ ಒನ್ ಸಂಗೀತ ನಿರ್ದೇಶಕ ಎನ್ನಿಸಿಕೊಂಡಿರುವ ಇಳಯರಾಜಾ, ‘ಕಾಕನಕೋಟೆ’ಯಲ್ಲಿ ಗಿಟಾರ್ ವಾದಕರಾಗಿದ್ದರು. ಅಷ್ಟೇ ಅಲ್ಲ;‘ಕರಿಹೈದನೆಂಬೋರು ಮಾದೇಶ್ವರಾ..’ ಹಾಡನ್ನು ಬಿ.ವಿ. ಕಾರಂತ ಅವರು ಮುಖ್ಯ ಗಾಯಕ ರಾಗಿ ಹಾಡಿದಾಗ ಅವತ್ತಿನ ಮಹಾನ್ ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್, ಕೋರ ಸ್‌ಗೆ ದನಿಯಾಗಿದ್ದರು.
‘ಕಾಕನಕೋಟೆ’ಯ ಹಾಡಿನ ಸಂದರ್ಭ, ಅದರ ಧ್ವನಿಮುದ್ರಣ, ತಮಗೆ ಜಿ.ಕೆ. ವೆಂಕಟೇಶ್, ವೈದ್ಯನಾಥನ್, ಇಳಯರಾಜ ಮುಂತಾದ ವರು ಜೊತೆಯಾದ ಕ್ಷಣಗಳನ್ನು ‘ಕಾಕನಕೋಟೆ’ಯ ನಿರ್ದೇಶಕ ಸಿ.ಆರ್. ಸಿಂಹ ವಿವರಿಸಿದ್ದು ಹೀಗೆ:
ಇದು ೧೯೭೪ರ ಮಾತು. ‘ನಾನು, ಲೋಕೇಶ್, ಸಿ. ಅಶ್ವತ್ಥ್, ವೆಂಕಟರಾವ್, ಶ್ರೀನಿವಾಸ ಕಪ್ಪಣ್ಣ ಮುಂತಾದವರು ಸೇರಿ ‘ನಟರಂಗ’ ಎಂಬ ಒಂದು ನಾಟಕ ತಂಡ ಕಟ್ಟಿದೆವು. ಮೊದಲಿಗೆ ನಾವು ಆಯ್ದುಕೊಂಡದ್ದು ಮಾಸ್ತಿಯವರ ಕಾಕನಕೋಟೆ. ಆ ವೇಳೆಗಾಗಲೇ ‘ರವಿ ಕಲಾವಿದರು’ ತಂಡ ಕಾಕನಕೋಟೆಯನ್ನು ರಂಗಕ್ಕೆ ತಂದಿದ್ದರು. ಅವರಿಗಿಂತ ಭಿನ್ನವಾಗಿ ನಾವು ಈ ನಾಟಕ ಪ್ರದರ್ಶಿಸಬೇಕು ಎಂಬುದು ನನ್ನ ಆಸೆ-ಹಠವಾಗಿತ್ತು. ಅದನ್ನೇ ಜತೆಗಾರರಿಗೆ ಹೇಳಿದೆ. ಎಲ್ಲರೂ ಒಪ್ಪಿದರು. ಪರಿಣಾಮ, ನಮ್ಮ ನಾಟಕ ಅಪಾರ ಜನಪ್ರೀತಿ ಪಡೆಯಿತು. ನೋಡನೋಡುತ್ತಲೇ ಐವತ್ತು ಪ್ರದರ್ಶನಗಳು ಆಗಿಹೋದವು. ಅದೊಮ್ಮೆ ನಮ್ಮ ನಾಟಕ ನೋಡಿದ ವಾದಿರಾಜ್-ಜವಾಹರ್-‘ಈ ಕತೆ ಯನ್ನೇ ಸಿನಿಮಾ ಮಾಡಿ. ನಾವು ನಿರ್ಮಾಪಕರಾಗುತ್ತೇವೆ’ ಅಂದರು.
‘ಸರಿ’ ಅಂದೆ. ನಾಟಕ ನಿರ್ದೇಶಿಸಿದ್ದ ಅನುಭವವಿತ್ತಲ್ಲ? ಅದೇ ಧೈರ್ಯದ ಮೇಲೆ ಸಿನಿಮಾ ನಿರ್ದೇಶನಕ್ಕೂ ಮುಂದಾದೆ. ನಾಟಕಕ್ಕೆ ಸಂಗೀತ ನಿರ್ದೇಶನ ಮಾಡಿದ್ದ ಸಿ. ಅಶ್ವತ್ಥ್, ಸಿನಿಮಾ ಅಂದಾಕ್ಷಣ ಹಿಂದೇಟು ಹಾಕಿದ. ‘ನನ್ನ ಕೈಲಿ ಆಗಲ್ಲಪ್ಪ, ನಾಟಕಕ್ಕೆ ಸಂಗೀತ ನಿರ್ದೇಶನ ಮಾಡುವುದೇ ಬೇರೆ. ಚಿತ್ರ ಸಂಗೀತವೇ ಬೇರೆ. ಸಿನಿಮಾದಲ್ಲಿ ವಾದ್ಯ ಸಂಯೋಜನೆ ಮಾಡಬೇಕು. ಹಿನ್ನೆಲೆ ಸಂಗೀತ ಮಾಡಬೇಕು. ಅವಕ್ಕೆಲ್ಲ ‘ಅರೇಂಜರ್’ ಅಂತ ಇರ್‍ತಾರೆ. ಅಂಥವರು ಯಾರೂ ನನಗೆ ಗೊತ್ತಿಲ್ಲ. ಹಾಗಾಗಿ ಇದು ನನ್ನಿಂದ ಆಗೋದಿಲ್ಲ. ಬೇರೆ ಯಾರಿಂದಲಾದ್ರೂ ಸಂಗೀತ ನಿರ್ದೇಶನ ಮಾಡಿಸಿ’ ಅಂದುಬಿಟ್ಟ.
ಆಗ ನಾನು ಹೇಳಿದೆ: ‘ಅಶ್ವತ್ಥ್, ನಾವು ಕಾಕನಕೋಟೆ ನಾಟಕವನ್ನು ಈಗಾಗಲೇ ಐವತ್ತು ಬಾರಿ ಆಡಿದ್ದಾ ಗಿದೆ. ನಾಟಕಕ್ಕೆ ಅದ್ಭುತ ಸಂಗೀತ ನೀಡಿದವ ನೀನು. ಸಿನಿಮಾಕ್ಕೆ ಆಗೋ ದಿಲ್ಲ ಅಂದ್ರೆ ಹೇಗೆ? ನಿರ್ದೇಶಕನಾಗಿ ನನಗೂ ಇದು ಮೊದಲ ಸಿನಿಮಾ. ನಾನೇ ಹೆದರ್‍ತಾ ಇಲ್ಲ. ಹಾಗಿರುವಾಗ ನೀನ್ಯಾಕೆ ಹಿಂಜರೀತೀಯ? ವಾದ್ಯ ಸಂಯೋಜನೆಗೆ ಅರೇಂಜರ್ ಒಬ್ಬರನ್ನು ಗೊತ್ತು ಮಾಡಿಕೊಂಡರಾಯ್ತು. ಈ ಕಥೆಗೆ ಎಂಥ ಸಂಗೀತ ಬೇಕೆಂದು ನಿನಗೆ ಗೊತ್ತಿದೆ. ಹಾಗಾಗಿ ನೀನೇ ಸಂಗೀತ ನಿರ್ದೇಶನ ಮಾಡು’ ಎಂದು ಧೈರ್ಯ ತುಂಬಿದೆ.
ಈ ಮಾತಿಗೆ ಒಪ್ಪಿದ ಅಶ್ವತ್ಥ್, ನಂತರ ಜಿ.ಕೆ. ವೆಂಕಟೇಶ್ ಅವರಿಗೆ ಫೋನ್ ಮಾಡಿ ಎಲ್ಲ ವಿಷಯ ತಿಳಿಸಿ-‘ಸಾರ್, ನಮಗೆ ಮ್ಯೂಸಿಕ್ ಅರೇಂಜರ್ ಒಬ್ಬರು ಬೇಕು‘ ಅಂದಿದ್ದಾರೆ. ‘ನೀವು ಮದ್ರಾಸ್‌ಗೆ ಬನ್ನಿ, ವ್ಯವಸ್ಥೆ ಮಾಡೋಣ’ ಅಂದಿದ್ದಾರೆ ವೆಂಕಟೇಶ್. ಅದಕ್ಕೆ ಒಪ್ಪಿದ ಅಶ್ವತ್ಥ್, ಮದ್ರಾಸ್‌ನ ಪ್ರಸಾದ್ ಸ್ಟುಡಿಯೋಕ್ಕೆ ಹೋದಾಗ-ಎಲ್. ವೈದ್ಯ ನಾಥನ್ ಹಾಗೂ ಇಳಯರಾಜರನ್ನು ಪರಿಚಯಿಸಿ, ಇವರಿಬ್ಬರೂ ನನ್ನ ಶಿಷ್ಯರು. ನಿಮಗೆ ಮ್ಯೂಸಿಕ್ ಅರೇಂಜರ್ ಆಗಿ ಸಹಾಯ ಮಾಡ್ತಾರೆ. ಯಾರು ಬೇಕೊ ಆಯ್ದುಕೊಳ್ಳಿ ಅಂದರಂತೆ. ನಂತರ ‘ಕಾಕನಕೋಟೆ’ಯ ಕಥೆ ಕೇಳಿ-ಈ ಕಥೆಗೆ ಅಗತ್ಯವಿರೋದು ರಫ್ ಅನ್ನಿಸುವಂಥ ಸಂಗೀತ. ಅದನ್ನು ಅರೇಂಜ್ ಮಾಡೋಕೆ ವೈದೀನೇ ಸರಿ. ಅವರನ್ನೇ ಇಟ್ಕೊಳ್ಳಿ ಅಂದರಂತೆ. ನಂತರ ಪಕ್ಕದಲ್ಲಿದ್ದ ಇಳಯರಾಜ ಅವರತ್ತ ತಿರುಗಿ-‘ನೀನು ಗಿಟಾರ್ ನುಡಿಸು ರಾಜಾ’ ಅಂದರಂತೆ.
‘ಕರಿ ಹೈದನೆಂಬೋರು ಮಾದೇಶ್ವರಾ…’ ಹಾಡಿನ ಸಂದರ್ಭದ ಚಿತ್ರಣದಲ್ಲಿ ನಾಟಕ ಹಾಗೂ ಸಿನಿಮಾಕ್ಕೆ ಒಂದು ವ್ಯತ್ಯಾಸವಿದೆ. ಭೇಟಿಯ ಸಂದರ್ಭದಲ್ಲಿ ಹೆಗ್ಗಡೆಯವರು ತನ್ನನ್ನು ಬಂಸುತ್ತಾರೆ ಎಂಬ ಸುದ್ದಿ ಕಾಕನಿಗೆ ಸಿಕ್ಕಿರುತ್ತದೆ. ಅದರಿಂದ ಪಾರಾಗಲು ಆತ ಒಂದು ಉಪಾಯ ಹೆಣೆದಿರುತ್ತಾನೆ. ‘ಸತ್ತು ಹೋಗಿರುವ ಒಂದು ಹಾವಿನೊಂದಿಗೆ ನೀನು ಮರದ ಮೇಲೆ ಕೂತಿರು. ಹೆಗ್ಗಡೆಯ ಕಡೆಯವರು ನನ್ನನ್ನು ಬಂಸಲು ಬಂದಾಕ್ಷಣ ಅವರ ಮೇಲೆ ಹಾವನ್ನು ಎಸೆದುಬಿಡು’ ಎಂದು ತನ್ನ ಕಡೆಯ ಹುಡುಗನಿಗೆ ಹೇಳಿಕೊಟ್ಟಿರುತ್ತಾನೆ. ಸಂದರ್ಭ ಹಾಗೆಯೇ ಒದಗಿ ಬರುತ್ತದೆ. ಹಾವು ಕಂಡು ಹೆಗ್ಗಡೆ ಕಡೆಯ ಜನ ಹೆದರಿ ಗಲಿಬಿಲಿಗೊಂಡಾಗ, ಕಾಕ ತಪ್ಪಿಸಿಕೊಳ್ಳುತ್ತಾನೆ. ಇದು ನಾಟಕದಲ್ಲಿರುವ ಸನ್ನಿವೇಶ.
ಸಿನಿಮಾ ಮಾಡುವಾಗ, ಹಾವಿನ ಬದಲಿಗೆ ಕಾಡಾನೆ ಹಿಂಡು ಬಂತು ಎಂದು ಕೂಗಿಸಿದರೆ ಚೆಂದ ಅನ್ನಿಸಿತಂತೆ. ಹಾಗೆಯೇ ಮಾಡಿದೆ. ಈ ದೃಶ್ಯಕ್ಕೂ ಮುಂಚೆ, ತಮ್ಮ ಕಾಡಿನ ದೈವವನ್ನು ಆವಾಹಿಸಿಕೊಂಡು ಕಾಕ ಮೈಮರೆಯಬೇಕು. ಅವನನ್ನು ಕಂಡು ಅವನ ಕಡೆಯ ಜನರೆಲ್ಲಾ ಮಾದೇಶ್ವರಾ ಮಾದೇಶ್ವರಾ ಎಂಬ ಆವೇಶದ, ಭಕ್ತಿಯ, ಪ್ರಾರ್ಥನೆಯಂಥ ಹಾಡಿಗೆ ಹೆಜ್ಜೆ ಹಾಕುತ್ತಾರೆ. ಈ ಸಂದರ್ಭದಲ್ಲಿ ಕೇಳಿಬರುವುದೇ ‘ಕರಿಹೈದ ನೆಂಬೋರು ಮಾದೇಶ್ವರಾ…‘ ಹಾಡು.
ಕಾಡಲ್ಲಿರುವ ಜನ ಹಾಡುವ ಗೀತೆ ಅಂದ ಮೇಲೆ ಅದಕ್ಕೆ ಗಡಸುತನ ಬೇಕು. ಅಂಥದೊಂದು ಗಡಸುತನ ಬಿ.ವಿ. ಕಾರಂತ ಅವರ ದನಿಗಿದೆ ಅನ್ನಿಸಿದಾಗ ಅವರಿಂದಲೇ ಹಾಡಿಸಲು ಅಶ್ವತ್ಥ್ ಮುಂದಾದರು. ಹಿಮ್ಮೇಳದ ದನಿಯಾಗಿ ಕೋರಸ್ ಹಾಡುವವರು ಬೇಕು ಅನ್ನಿಸಿದಾಗ, ವೈದ್ಯನಾಥನ್‌ಗೆ ಈ ವಿಷಯ ತಿಳಿಸಲು ಮುಂದಾದರು. ಆಗ ರೀರೆಕಾರ್ಡಿಂಗ್‌ಗೆ ಬಂದಿದ್ದ ಜಿ.ಕೆ. ವೆಂಕಟೇಶ್-‘ನಾನೇ ಕೋರಸ್‌ನಲ್ಲಿ ಹಾಡ್ತೇನೆ’ ಅಂದರಂತೆ. (ಅಂದಿನ ಸಂದರ್ಭದಲ್ಲಿ ದಕ್ಷಿಣ ಭಾರತದ ನಂಬರ್ ಒನ್ ಸಂಗೀತ ನಿರ್ದೇಶಕ ಅನ್ನಿಸಿಕೊಂಡಿದ್ದವರು ಜಿ.ಕೆ. ವೆಂಕಟೇಶ್. ಅಂಥವರು ತಾವೇ ಮುಂದಾಗಿ ಕೋರಸ್ ಹಾಡಿದ್ದು ಅವರ ದೊಡ್ಡತನಕ್ಕೆ ಸಾಕ್ಷಿ.) ಅವರ ಜತೆಗೇ ಅಶ್ವತ್ಥ್ ಕೂಡ ದನಿಗೂಡಿಸಿ ದರು. ಪರಿಣಾಮ, ಮೂವರು ಸಂಗೀತ ನಿರ್ದೇಶಕರು ಒಂದೇ ಹಾಡಿಗೆ ದನಿ ನೀಡಿದಂತಾಯಿತು….’
***
ಈವರೆಗೂ ಓದಿದ್ದು ಸಿಂಹ ಅವರ ಅನುಭವದ ಮಾತು. ‘ಕಾಕನ ಕೋಟೆ’ ಹಾಡಿಗೆ ಸಂಬಂಸಿದ ಇನ್ನೊಂದು ರೋಚಕ ಘಟನೆಯನ್ನು ಅಶ್ವತ್ಥ್ ಅವರೇ ಅದೊಮ್ಮೆ ನೆನಪಿಸಿಕೊಂಡಿದ್ದು ಹೀಗೆ: ಕಾಕನಕೋಟೆಯ ದಟ್ಟ ಅರಣ್ಯದಲ್ಲಿ ‘ಒಂದು ದಿನ ಕರಿಹೈದ ಕಾಡಲ್ಲಿ ಅಲೆದಾನೋ… ಎಂಬ ಇನ್ನೊಂದು ಗೀತೆ ಚಿತ್ರೀಕರಣವಾಗುತ್ತಿತ್ತು, ನಾನು ಹಾಗೂ ನನ್ನ ಮಿತ್ರ ಚಿಂತಾಮಣಿ ಅಲ್ಲಿಗೆ ಹೋಗಿದ್ವಿ. ಸಂಜೆ ಗೆಸ್ಟ್ ಹೌಸ್‌ನಿಂದ ಶೂಟಿಂಗ್ ನಡೆಯುತ್ತಿದ್ದ ಜಾಗಕ್ಕೆ ಹೊರಟೆವು. ನಮಗೆ ಚಿತ್ರೀಕರಣದ ಸ್ಥಳ ಗೊತ್ತಿರಲಿಲ್ಲ, ಸಂಜೆ ೭ರ ಸಮಯ, ಮಬ್ಬು ಕತ್ತಲು, ಆ ಜಾಗಕ್ಕೆ ಹೋಗೋಕೆ ನದಿ ದಾಟಬೇಕಿತ್ತು. ಅಲ್ಲಿದ್ದ ತೆಪ್ಪ ನಡೆಸುವ ನಾವಿಕ, ‘ನನಗೆ ಜಾಗ ಗೊತ್ತು ಸಾರ್, ಕರೆದುಕೊಂಡು ಹೋಗ್ತೇನೆ’ ಅಂದ. ನಾವು ತೆಪ್ಪ ಹತ್ತಿದ್ವಿ. ಮಾರ್ಗ ಮಧ್ಯದಲ್ಲಿ ನದಿ ಉಕ್ಕಿ ಬಂತು, ನಮ್ಮ ನಾವಿಕನಿಗೆ ದಾರಿ ತಪ್ಪಿತು. ಅಲ್ಲಿ ಚಿತ್ರೀಕರಣದ ಜಾಗವೂ ತಿಳಿಯಲ್ಲಾ ಅಂತಾನೆ, ವಾಪಸ್ ಹೋಗುವ ದಾರಿಯೂ ತಿಳಿಯುತ್ತಿಲ್ಲಾ ಅಂತಾನೆ. ನಾವು ಇದೇನಪ್ಪಾ ಗತಿ ಅಂತ ಯೋಚಿಸುತ್ತಿರುವಾಗಲೇ ದೂರದಲ್ಲಿ ‘ಡಿಂಕ್ಟಾಟ ಡಿಂಕ್ಟಾ… ಕರಿಹಯ್ದ..’ ಎಂಬ ದನಿ ಕೇಳಿಸಿತು. ಆ ಹಾಡಿನ ಜಾಡು ಹಿಡಿದು ನಾವು ದಡ ಸೇರಿದೆವು. ನಿಜಕ್ಕೂ ಆವತ್ತು ನಮ್ಮನ್ನು ಕಾಪಾಡಿದ್ದು ಆ ಮಹದೇಶ್ವರನೇ.

ಆರಾಧಿಸುವೆ ಮದನಾರಿ…

ಅಕ್ಟೋಬರ್ 21, 2010

 

 

 

 

 

 

 

 

 

 

ಚಿತ್ರ: ಬಭ್ರುವಾಹನ. ಗೀತೆರಚನೆ: ಹುಣಸೂರು ಕೃಷ್ಣಮೂರ್ತಿ
ಸಂಗೀತ: ಟಿ.ಜಿ. ಲಿಂಗಪ್ಪ. ಗಾಯನ: ಡಾ. ರಾಜ್‌ಕುಮಾರ್

ಆರಾಧಿಸುವೆ ಮದನಾರಿ
ಆರಾಧಿಸುವೆ ಮದನಾರಿ
ಆದರಿಸು ನೀ ದಯೆತೋರಿ, ಆರಾಧಿಸುವೆ ಮದನಾರಿ ||ಪ||

ಅಂತರಂಗದಲ್ಲಿ ನೆಲೆಸಿರುವೇ
ಅಂತರ್ಯ ತಿಳಿಯದೆ ಏಕಿರುವೆ?
ಸಂತತ ನಿನ್ನ ಸಹವಾಸ ನೀಡಿ
ಸಂತತ ನಿನ್ನ ಸಹವಾಸ ನೀಡಿ
ಸಂತೋಷದಿಂದೆನ್ನ ನಲಿಸೆಂದು ಕೋರುವೆ ||೧||

ಮೈದೋರಿ ಮುಂದೆ ಸಹಕರಿಸು
ಆಮಾರ ನೊಲವಣೆ ಪರಿಹರಿಸು
ಪ್ರೇಮಾಮೃತವನು ನೀನುಣಿಸು
ಪ್ರೇಮಾಮೃತವನು ನೀನುಣಿಸು
ತನ್ಮಯಗೊಳಿಸು ಮೈಮರೆಸೂ
ಚಿನ್ಮಯ ಭಾವ ತುಂಬುತ ಜೀವ
ಆನಂದ ಆನಂದ ಆನಂದವಾಗಲಿ
ಆರಾಧಿಸುವೆ ಮದನಾರಿ, ಆರಾಧಿಸುವೆ ಮದನಾರಿ
ಸನಿದಪಮ ಆರಾಧಿಸುವೆ ಮದನಾರಿ

೬೦-೭೦ರ ದಶಕದಲ್ಲಿ ಕನ್ನಡ, ತೆಲುಗು ಹಾಗೂ ತಮಿಳು ಚಿತ್ರರಂಗದ ಎಲ್ಲ ಕೆಲಸವೂ ನಡೆಯುತ್ತಿದ್ದುದು ಮದ್ರಾಸಿನಲ್ಲಿ. ಆ ದಿನಗಳಲ್ಲಿ ತೆಲುಗಿನಲ್ಲಿ ಎನ್.ಟಿ.ಆರ್. ಕೃಷ್ಣ, ಅಕ್ಕಿನೇನಿ ನಾಗೇಶ್ವರರಾವ್ ಇದ್ದರು. ತಮಿಳಿನಲ್ಲಿ ಎಂಜಿಆರ್, ಶಿವಾಜಿ ಗಣೇಶನ್ ಇದ್ದರು. ಕನ್ನಡದ ಪಾಲಿಗೆ ಡಾ. ರಾಜ್‌ಕುಮಾರ್, ಆರ್. ನಾಗೇಂದ್ರರಾವ್, ಕಲ್ಯಾಣ್ ಕುಮಾರ್ ಮುಂತಾದವರಿದ್ದರು.
ಆ ದಿನಗಳಲ್ಲಿ ಕಲಾವಿದರ ಮಧ್ಯೆ ಅಪರೂಪದ ಹೊಂದಾಣಿಕೆಯಿತ್ತು. ಪರಸ್ಪರ ಪ್ರೀತಿ, ವಿಶ್ವಾಸ- ಗೌರವವಿತ್ತು. ಒಂದು ಭಾಷೆಯ ಸಿನಿಮಾ ಬಿಡುಗಡೆಯಾದರೆ, ಅದನ್ನು ಎಲ್ಲ ಕಲಾವಿದರೂ ಒಟ್ಟಿಗೇ ಕೂತು ನೋಡುತ್ತಿದ್ದರು. ಆ ಚಿತ್ರದಲ್ಲಿರುವ ತಾಂತ್ರಿಕ ವೈಭವವನ್ನು, ಸಂದೇಶವನ್ನು ತಮ್ಮ ಚಿತ್ರದಲ್ಲೂ ತರುವ ಪ್ರಯತ್ನ ಮಾಡುತ್ತಿದ್ದರು.
‘ಬಭ್ರವಾಹನ’ ಚಿತ್ರದ ಆರಾಧಿಸುವೆ ಮದನಾರಿ… ಹಾಡಿನಲ್ಲಿ ಡಾ. ರಾಜ್‌ಕುಮಾರ್ ಅವರನ್ನು ಐದು ವಿವಿಧ ಭಂಗಿಗಳಲ್ಲಿ ತೋರಿರುವ ಅಪರೂಪದ ದೃಶ್ಯವೊಂದಿದೆ. ಆ ದೃಶ್ಯದ ಕಲ್ಪನೆ ಬಂದದ್ದು ಹೇಗೆ ಎಂಬುದಕ್ಕೆ ಪೂರಕವಾಗಿ ಮೇಲಿನ ಮಾತುಗಳನ್ನು ಹೇಳಬೇಕಾಯಿತು.
ಹುಣಸೂರು ಕೃಷ್ಣಮೂರ್ತಿಯವರು ತುಂಬ ಇಷ್ಟಪಟ್ಟು ಮಾಡಿದ ಚಿತ್ರ ಬಭ್ರುವಾಹನ. ಅರ್ಜುನನಿಂದ ಆರಂಭವಾಗಿ, ಬಭ್ರುವಾಹನನ ಕಥೆಯನ್ನು ಸಂಪೂರ್ಣವಾಗಿ ತೋರಿಸಿದ ಚಿತ್ರ ಇದು. ಉಲೂಚಿ, ಚಿತ್ರಾಂಗದಾ ಮತ್ತು ಸುಭದ್ರೆಯರೊಂದಿಗೆ ಅರ್ಜುನ ನಡೆಸಿದ ಪ್ರಣಯ ಪ್ರಸಂಗ, ಶೃಂಗಾರ ಲೀಲೆಗಳನ್ನು ಅರಸಿಕನೂ ಮೆಚ್ಚುವಂತೆ ಬೆಳ್ಳಿತೆರೆಯ ಮೇಲೆ ತೋರಿಸಿದ ಸಿನಿಮಾ ಇದು.
ಸಿನಿಮಾದ ಹೆಸರು ‘ಬಭ್ರುವಾಹನ’ ಎಂದಿದ್ದರೂ, ಅರ್ಜುನನ ಪಾತ್ರವನ್ನೂ ಹೈಲೈಟ್ ಮಾಡಬೇಕು ಎಂಬುದು ಹುಣಸೂರು ಕೃಷ್ಣಮೂರ್ತಿಯವರ ಆಸೆಯಾಗಿತ್ತು. ಅರ್ಜುನ ಎಂದರೆ ಕೇವಲ ಬಿಲ್ವಿದ್ಯಾ ಪ್ರವೀಣ ಮಾತ್ರವಲ್ಲ, ಅವನೊಬ್ಬ ಅಪ್ರತಿಮ ಗಾಯಕ, ಸಂಗೀತಗಾರ. ಚೆಲುವಾಂತ ಚೆನ್ನಿಗ, ಮಹಾ ಪ್ರೇಮಿ ಮತ್ತು ರಸಿಕ. ಈ ಎಲ್ಲಾ ವೇಷದಲ್ಲಿಯೂ ಅವನನ್ನು ತೋರಿಸಬೇಕು ಎಂದು ಹುಣಸೂರು ನಿರ್ಧರಿಸಿದ್ದರು. ಉಲೂಚಿ, ಚಿತ್ರಾಂಗದಾ, ಸುಭದ್ರೆಯರೊಂದಿಗಿನ ಪ್ರಣಯದ ಸಂದರ್ಭಗಳಿಗೆಂದೇ ‘ನಿನ್ನ ಕಣ್ಣ ನೋಟದಲ್ಲಿ’, ‘ಈ ಸಮಯಾ ಶೃಂಗಾರಮಯ’, ‘ಆರಾಧಿಸುವೆ ಮದನಾರಿ..’ ಹಾಡುಗಳನ್ನು ಬರೆದಿದ್ದರು.
ಒಂದೊಂದು ಹಾಡನ್ನೂ ತುಂಬ ಭಿನ್ನವಾಗಿ ಚಿತ್ರೀಕರಿಸಬೇಕು ಎಂಬುದು ಹುಣಸೂರು ಅವರ ಅಪೇಕ್ಷೆಯಾಗಿತ್ತು. ಅದನ್ನೇ ಡಾ. ರಾಜ್‌ಕುಮಾರ್ ಅವರಿಗೂ ಹೇಳಿದರು. ಮುಂದುವರಿದು-‘ಅರ್ಜುನ ಸುಭದ್ರೆಯನ್ನು ಮರೆತು, ನಾಗಲೋಕದಲ್ಲಿ ಉಲೂಚಿಯ ಮೋಹದಲ್ಲಿ ಮೈಮರೆತಿರುತ್ತಾನೆ. ಆಗ ಕೃಷ್ಣ ಘಟೋತ್ಕಚನನ್ನು ಕರೆಸಿ, ಅರ್ಜುನನನ್ನು ಮಾಯೆಯಿಂದ ಎತ್ತಿಕೊಂಡು ಬಾ ಎನ್ನುತ್ತಾನೆ. ಘಟೋತ್ಕಚ ಹಾಗೇ ಮಾಡಿದಾಗ, ಮತ್ತೆ ತನ್ನ ‘ಪ್ರಭಾವ’ ತೋರಿ ನಾಗಲೋಕದ ನೆನಪೇ ಅರ್ಜುನನಿಗೆ ಹೋಗಿಬಿಡುವಂತೆ ಮಾಡುತ್ತಾನೆ ಕೃಷ್ಣ. ಜತೆಗೆ, ಅರ್ಜುನನನ್ನು ಕಾವಿಧಾರಿಯನ್ನಾಗಿ ಮಾಡಿಬಿಡುತ್ತಾನೆ. ನಂತರ, ಸುಭದ್ರೆಯನ್ನು ಕರೆದು-‘ಸೋದರಿ, ನಮ್ಮ ಅರಮನೆಗೆ ಸ್ವಾಮೀಜಿಯೊಬ್ಬರು ಬಂದಿದ್ದಾರೆ. ಅವರ ಅಶೀವಾದ ತಗೋ, ಒಳ್ಳೆಯದಾಗುತ್ತೆ’ ಎನ್ನುತ್ತಾನೆ. ಕೃಷ್ಣನ ಸಲಹೆಯಂತೆ ಸುಭದ್ರೆ ಸನ್ಯಾಸಿ ವೇಷದಲ್ಲಿದ್ದ ಅರ್ಜುನನ ಬಳಿ ಬರುತ್ತಾಳೆ. ಆಗ ದೇವರ ಪೂಜೆಗೆ ಸಿದ್ಧವಾಗಿದ್ದ ಅರ್ಜುನ, ಸುಭದ್ರೆಯನ್ನು ಕಂಡು ಮೋಹಗೊಳ್ಳುತ್ತಾನೆ. ದೇವರಿಗೆ ಪುಷ್ಪಾರ್ಚನೆ ಮಾಡುತ್ತಲೇ ಹಾಡಲು ಶುರುಮಾಡುತ್ತಾನೆ. ಆ ಸಂದರ್ಭಕ್ಕೆ ‘ ಆರಾಧಿಸುವೆ ಮದನಾರಿ’ ಹಾಡು ಹಾಕೋಣ ಎಂದೂ ರಾಜ್ ಕುಮಾರ್ ಅವರಿಗೆ ಹೇಳಿದರು.
ಮುಂದೆ ಏನಾಯಿತು? ಒಂದೇ ದೃಶ್ಯದಲ್ಲಿ ಐದು ಭಿನ್ನ ಗೆಟಪ್‌ನಲ್ಲಿ ರಾಜ್‌ಕುಮಾರ್ ಅವರನ್ನು ತೋರಿಸಬೇಕೆಂಬ ಐಡಿಯಾ ಹೇಗೆ ಬಂತು ಎಂಬುದನ್ನು ‘ಬಭ್ರುವಾಹನ’ ಚಿತ್ರದ ಸಹಾಯಕ ನಿರ್ದೇಶಕರಾಗಿದ್ದ ಭಾರ್ಗವ ಅವರು ವಿವರಿಸಿದ್ದು ಹೀಗೆ:
ಹುಣಸೂರು ಕೃಷ್ಣಮೂರ್ತಿಯವರು ನನ್ನ ಚಿಕ್ಕಪ್ಪ. ಅವರ ನಿರ್ದೇಶನದ ಚಿತ್ರಗಳಲ್ಲಿ ನಾನು ಸಹಾಯಕ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿರುತ್ತಿದ್ದೆ. ಬಭ್ರುವಾಹನ ಚಿತ್ರಕ್ಕೆ ಯಾವ ಹಾಡನ್ನು ಹೇಗೆ ಚಿತ್ರಿಸಬೇಕು ಎಂದೆಲ್ಲ ಅವರು ತಲೆಕೆಡಿಸಿಕೊಂಡಿದ್ದರಲ್ಲ? ಅದೇ ಸಂದರ್ಭದಲ್ಲಿ ನನಗೆ ಶಿವಾಜಿ ಗಣೇಶನ್ ಅಭಿನಯದ ತಮಿಳಿನ ಹಳೆಯ ಚಿತ್ರವೊಂದು ನೆನಪಾಯಿತು. ಅದರಲ್ಲಿ ಒಂದು ಹಾಡಿನ ಸನ್ನಿವೇಶದಲ್ಲಿ ಶಿವಾಜಿಯವರು ಐದು ಸಂಗೀತವಾದ್ಯಗಳನ್ನು ನುಡಿಸುವ ದೃಶ್ಯವಿತ್ತು. ಈ ದೃಶ್ಯವನ್ನೇ ‘ಬಭ್ರುವಾಹನ’ದಲ್ಲಿ ಏಕೆ ತರಬಾರದು ಎನ್ನಿಸಿತು. ತಕ್ಷಣವೇ ಇದನ್ನೇ ಹುಣಸೂರು ಅವರಿಗೆ ಹೇಳಿದೆ. ಅವರು- ಅಲ್ಲಯ್ಯಾ, ಇಂಥ ಸಂದರ್ಭ ಆಗಲೇ ತಮಿಳು ಸಿನಿಮಾದಲ್ಲಿ ಬಂದಿದೆ ಅಂತ ನೀನೇ ಹೇಳ್ತಾ ಇದೀಯ. ಅದನ್ನೇ ನಾವು ರಿಪೀಟ್ ಮಾಡೋದು ಸರಿಯಾ? ಅದನ್ನು ಜನ ಒಪ್ತಾರಾ? ಅದಕ್ಕಿಂತ ಮುಖ್ಯವಾಗಿ ಆ ದೃಶ್ಯ ಈ ಪೌರಾಣಿಕ ಸಿನಿಮಾಕ್ಕೆ ಹೊಂದಿಕೆಯಾಗುತ್ತಾ?’ ಎಂದರು.
‘ಅಪ್ಪಾಜಿ, ಆ ದೃಶ್ಯವನ್ನು ಬೇಸ್ ಆಗಿ ಇಟ್ಟುಕೊಳ್ಳೋಣ. ನಾವು ಬೇರೆಯದೇ ರೀತಿಯಲ್ಲಿ ತೆಗೆಯೋಣ. ಆಗ ಜನ ಖಂಡಿತ ಇಷ್ಟಪಡ್ತಾರೆ’ ಅಂದೆ. ಈ ಮಾತು ಹುಣಸೂರು ಅವರಿಗೆ ಒಪ್ಪಿಗೆಯಾಯಿತು. ತಕ್ಷಣವೇ ತಲೆ ಓಡಿಸಿ, ಮೃದಂಗ, ವೀಣೆ, ಕೊಳಲು ಹಾಗೂ ಘಟಂ ನುಡಿಸುವ ನಾಲ್ಕು ಭಿನ್ನ ವೇಷ ಹಾಗೂ ಈ ನಾಲ್ಕೂ ಜನರ ಮಧ್ಯೆ ಸಂಗೀತಗಾರನನ್ನು ಕೂರಿಸಲು; ಅವನು ಹಾಡುತ್ತಾ ಸ್ವರಗಳ ತಾಳ ಹಾಕುತ್ತಾ ಹೋದಂತೆಲ್ಲ ಉಳಿದ ಪಾತ್ರಗಳು ವಾದ್ಯ ಮೇಳದ ಸಾಥ್ ಕೊಡುವಂತೆ ಚಿತ್ರಿಸಲು ಹುಣಸೂರು ನಿರ್ಧರಿಸಿದರು. ರಾಜ್‌ಕುಮಾರ್ ಅವರಿಗೂ ಈ ವಿಷಯ ತಿಳಿಸಿದರು.
ಈ ಪಾತ್ರಗಳ ನಿರ್ವಹಣೆಗೆ ರಾಜ್‌ಕುಮಾರ್ ಅವರು ಮಾಡಿಕೊಂಡ ಸಿದ್ಧತೆಯ ಬಗ್ಗೆ ನಾಲ್ಕು ಮಾತು. ರಾಜ್ ಅವರಿಗೆ ಸಂಗೀತದ ಬಗ್ಗೆ ತುಂಬ ಚನ್ನಾಗಿ ಗೊತ್ತಿತ್ತು. ಆದರೆ ಅವರು ನನಗೆಲ್ಲಾ ಗೊತ್ತಿದೆ ಎಂದು ಸುಮ್ಮನಾಗಲಿಲ್ಲ. ಬದಲಿಗೆ, ಘಟಂ, ಮೃದಂಗ, ವೀಣೆ ಹಾಗೂ ಕೊಳಲು ನುಡಿಸುವವರನ್ನು ಹತ್ತಾರು ಬಾರಿ ಗಮನಿಸಿದರು. ವಾದ್ಯಗಳನ್ನು ಬಾರಿಸುವ ಸಂದರ್ಭದಲ್ಲಿ ಕಣ್ಣಿನ ಚಲನೆ, ಹಣೆಯ ನಿರಿಗೆ ಹಾಗೂ ಕೆನ್ನೆಯ ಅದುರುವಿಕೆಯಲ್ಲಿ ಕಲಾವಿದರು ತೋರಿಸುವ ಭಾವನೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಆಯಾ ವಾದ್ಯಗಳಿಗೆ ತಕ್ಕಂತೆ ಮುಖ ಭಾವ ಪ್ರದರ್ಶನಕ್ಕೆ ತಮ್ಮನ್ನು ಸಿದ್ಧಮಾಡಿಕೊಂಡರು. ನಂತರ -‘ಗುರುಗಳೇ ನಾನೀಗ ರೆಡಿ’ ಎಂದರು. ಆರಾಸುವೆ ಮದನಾರಿ… ಹಾಡಿಗೆ, ಒಂದೊಂದು ಪಾತ್ರಕ್ಕೆ ಒಂದೊಂದು ಬಗೆಯ ಮಾಸ್ಕ್ ತಯಾರಿಸಲಾಗಿತ್ತು. ಬಭ್ರುವಾಹನ ತಯಾರಾಗಿದ್ದು ೧೯೭೪ರಲ್ಲಿ. ಆ ದಿನಗಳಲ್ಲಿ ಕಟ್ ಅಂಡ್ ಪೇಸ್ಟ್ ವಿದ್ಯೆಯಾಗಲಿ, ಗ್ರಾಫಿಕ್ ತಂತ್ರಜ್ಞಾನದ ಹೆಸರಾಗಲಿ ಯಾರಿಗೂ ಗೊತ್ತಿರಲಿಲ್ಲ. ಆಗ ಐದು ಪಾತ್ರದಾರಿಗಳ ಐದು ಮಾಸ್ಕ್ ತಯಾರಿಸಿಕೊಂಡು ಮೂರು ಕ್ಯಾಮರಾ ಬಳಸಿ ಮೂರು ದಿಕ್ಕುಗಳಿಂದ ಶೂಟ್ ಮಾಡಬೇಕಾಗಿತ್ತು.
ಇಷ್ಟೆಲ್ಲ ಸಿದ್ಧತೆಯ ನಂತರ ಒಂದು ದಿನ ಬೆಳಗ್ಗೆ ಎಂಟು ಗಂಟೆಗೇ ಶೂಟಿಂಗ್ ಶುರುವಾಯಿತು. ಆರಂಭದಿಂದಲೂ ಅಪಾರ ಉತ್ಸಾಹದಿಂದ ರಾಜ್ ಅವರು-‘ಗುರುಗಳೇ, ಈ ದೃಶ್ಯ ಬಹಳ ಚನ್ನಾಗಿ ಬರ್‍ತಾ ಇದೆ. ಮುಂದುವರಿಸೋಣ’ ಎನ್ನುತ್ತಲೇ ಎಲ್ಲರನ್ನೂ ಉತ್ತೇಜಿಸಿದರು. ಮಧ್ಯಾಹ್ನ ೧೨ರವರೆಗೂ ನಿರಂತರವಾಗಿ ಶೂಟಿಂಗ್ ನಡೆಸಿ ಸ್ವಲ್ಪ ಹೊತ್ತು ವಿರಾಮ ಘೋಷಿಸಲಾಯಿತು. ನಮಗೋ, ಬೆಳಗಿನಿಂದ ಚಿತ್ರೀಕರಿಸಿದ ದೃಶ್ಯಗಳು ಹೇಗೆ ಬಂದಿವೆಯೋ ಎಂದು ನೋಡುವ ಅವಸರ. ಈ ಆಸೆಯಿಂದಲೇ ರಶಸ್ ನೋಡಲು ಕುಳಿತೆವು.
ಆ ಮಟಮಟ ಮಧ್ಯಾಹ್ನದಲ್ಲಿ ಬಿಟ್ಟಕಣ್ಣು ಬಿಟ್ಟಂತೆಯೇ ರಶಸ್ ನೋಡಲು ಕೂತವರಿಗೆ ಎದೆಯೊಡೆದವಂತಾಯಿತು. ಏಕೆಂದರೆ, ಎಲ್ಲಿ ತಪ್ಪಾಗಿತ್ತೋ ಗೊತ್ತಿಲ್ಲ. ಬೆಳಗಿಂದ ಚಿತ್ರೀಕರಿಸಿದ್ದೆವಲ್ಲ? ಆ ಪೈಕಿ ಒಂದು ದೃಶ್ಯವೂ ಬಂದಿರಲಿಲ್ಲ. ಅಷ್ಟೂ ಹಾಳಾಗಿಹೋಗಿತ್ತು. ಮತ್ತೆ ಮೊದಲಿನಿಂದ ಕೆಲಸ ಶುರುಮಾಡಲೇಬೇಕಿತ್ತು.
ವಿಷಯ ತಿಳಿದ ಹುಣಸೂರು ಕೃಷ್ಣಮೂರ್ತಿಗಳು ಬೇಸರದಿಂದ ಕೂತುಬಿಟ್ಟರು. ರಾಜ್‌ಕುಮಾರ್ ಅವರಿಗೆ ಈ ವಿಷಯ ತಿಳಿಸುವುದು ಹೇಗೆ ಎಂಬುದು ಎಲ್ಲರ ಸಂಕಟವಾಗಿತ್ತು. ನಾನು ಸಂಕೋಚದಿಂದಲೇ ರಾಜ್ ಅವರ ಬಳಿ ಹೋಗಿ ಎಲ್ಲ ವಿಷಯ ತಿಳಿಸಿದೆ. ‘ಸಾರ್, ಹೀಗಾಗಿರುವುದಕ್ಕೆ ದಯವಿಟ್ಟು ಬೇಸರ ಮಾಡಿಕೊಳ್ಳಬೇಡಿ’ಎಂದೂ ಸೇರಿಸಿದೆ.
ಅದಕ್ಕೆ ಅಣ್ಣಾವ್ರು ಹೇಳಿದ್ದೇನು ಗೊತ್ತೆ? ‘ಭಾರ್ಗವ ಅವರೇ, ಕೆಲಸ ಅಂದ ಮೇಲೆ ಇಂಥ ತಪ್ಪುಗಳೆಲ್ಲ ಆಗೋದು ಸಹಜ. ಆಗೋದು ಆಗಿಹೋಗಿದೆ. ಈಗ ನಾನು ಬೇಸರ ಮಾಡಿಕೊಂಡ್ರೂ ಅಷ್ಟೆ. ಮಾಡಿಕೊಳ್ಳದಿದ್ರೂ ಅಷ್ಟೆ. ಅಲ್ಲವೆ? ಈಗ ಹೇಗಿದ್ರೂ ಈ ದೃಶ್ಯದ ಚಿತ್ರೀಕರಣ ಚನ್ನಾಗಿ ಬರ್‍ತಾ ಇದೆ ತಾನೆ? ಅದನ್ನೇ ಇನ್ನೊಮ್ಮೆ ತೆಗೆಯೋಣ. ಬೆಳಗ್ಗೆ ಆಕಸ್ಮಿಕವಾಗಿ ಮಾಡಿರುವ ತಪ್ಪುಗಳನ್ನು ತಿದ್ದಿಕೊಳ್ಳಲು ಈಗ ಒಂದು ಅವಕಾಶ ತಂತಾನೇ ಸಿಕ್ಕಿದೆ. ಅದನ್ನು ಬಳಸಿಕೊಳ್ಳೊಣ. ಮಧ್ಯಾಹ್ನ ಊಟವಾದ ನಂತರ ಬೆಳಗ್ಗೆ ಹಾಕ್ಕೊಂಡು ಬಂದಿದ್ದ ಮಾಸ್ಕ್ ಅನ್ನೇ ಮತ್ತೆ ಹಾಕ್ಕೊಂಡು ಬರ್‍ತೇನೆ. ನೀವೂ ಸಿದ್ಧರಾಗಿ. ಶಿವಾ ಅಂತ ಜಮಾಯಿಸ್‌ಬಿಡೋಣ’ ಎಂದರು.
ರಾಜ್‌ಕುಮಾರ್ ಅವರೇ ಹೀಗೆ ಹೇಳಿದ್ದು ಕೇಳಿ ನಮ್ಮ ಚಿಕ್ಕಪ್ಪನವರಿಗೂ ಉತ್ಸಾಹ ಬಂತು. ಅವರೂ ಗೆಲುವಿನಿಂದ ಎದ್ದು ನಿಂತರು.
ನೋಡನೋಡುತ್ತಲೇ ಶೂಟಿಂಗ್ ಮತ್ತೆ ಶುರುವಾಯಿತು. ಬೆಳಗ್ಗೆ ಆಗಿಹೋದ ಪ್ರಮಾದದ ಬಗ್ಗೆ ಏನೇನೂ ಗೊತ್ತಿಲ್ಲದವರಂತೆ ರಾಜ್‌ಕುಮಾರ್ ಪಾತ್ರದಲ್ಲಿ ಲೀನವಾಗಿ ಹೋದರು. ಮಧ್ಯಾಹ್ನ ಶುರುವಾದ ಹಾಡಿನ ಚಿತ್ರೀಕರಣ ಮುಗಿದಾಗ ರಾತ್ರಿ ಎಂಟುಗಂಟೆಯಾಗಿತ್ತು… ಕಡೆಗೊಮ್ಮೆ ರಶಸ್ ನೋಡಿದಾಗ ಎಲ್ಲರಿಗೂ ಕಣ್ತುಂಬಿಬಂದಿತ್ತು…
ಹಳೆಯ ನೆನಪುಗಳಲ್ಲಿ ಹೀಗೆ ತೇಲಿ ಹೋಗಿ ಖುಷಿಪಟ್ಟರು ಭಾರ್ಗವ…
***
ಹೇಳಲೇಬೇಕಾದ ಮಾತು: ‘ಆರಾಧಿಸುವೆ ಮದನಾರಿ’ ಗೀತೆಯಲ್ಲಿ ರಾಜ್‌ಕುಮಾರ್ ಐದು ಭಿನ್ನ ಗೇಟಪ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಐದೂ ಪಾತ್ರಗಳ ಮುಖಭಾವ ಪ್ರದರ್ಶನವನ್ನು ಪದಗಳಲ್ಲಿ ಹಿಡಿದಿಟಿರುವುದು ಸಾಧ್ಯವೇ ಇಲ್ಲ. ರಾಜ್ ಅವರ ಪರಿಪೂರ್ಣ ನಟನೆ ಸಾಕ್ಷತ್ ಅರ್ಜುನನೂ ಬೆರಗಿನಿಂದ ಚಪ್ಪಾಳೆ ಹೊಡೆದು ವಾಹ್‌ವಾಹ್ ಎಂದು ಉದ್ಗರಿಸುವ ಮಟ್ಟಕ್ಕಿದೆ. ಇಂಥದೊಂದು ಅಪರೂಪದ ದೃಶ್ಯ ಭಾರತದ ಬೇರಾವುದೇ ಭಾಷೆಯ ಚಿತ್ರಗಳಲ್ಲೂ ಈವರೆಗೆ ಬಂದಿಲ್ಲ. ಮುಂದೆ ಬರುತ್ತಾ?ಬಹುಶ: ಇಲ್ಲ.

ಅವಸರ, ಗಡಿಬಿಡಿ, ಧಾವಂತದ ಮಧ್ಯೆಯೇ- ಹೊಸ ಗಾನ ಬಜಾನಾ…

ಅಕ್ಟೋಬರ್ 9, 2010

ಹೊಸ ಗಾನ ಬಜಾನಾ…
ಚಿತ್ರ: ರಾಮ್. ಗೀತೆರಚನೆ: ಯೋಗರಾಜಭಟ್
ಗಾಯನ: ಪುನೀತ್ ರಾಜಕುಮಾರ್, ಸಂಗೀತ: ವಿ. ಹರಿಕೃಷ್ಣ.

ಹೊಸ ಗಾನ ಬಜಾನಾ, ಹಳೇ ಪ್ರೇಮ ಪುರಾಣ
ನೀನು ತುಂಬ ನಿಧಾನ, ಸ್ಪೀಡಾಗಿದೆ ಜಮಾನಾ
ನನ್ನ ಜತೆ ಜೋಪಾನ… ಹೊಸಾ ಗಾನ ಬಜಾನಾ ||ಪ||

ನಿಧಾನವೇ ಪ್ರಧಾನ, ಅದೇ ಸೇಫು ಪ್ರಯಾಣ
ಹೇಳಿಕೊಂಡೇ ಸಾಗೋಣ… ಹಳೇ ಪ್ರೇಮ ಪುರಾಣ
ಯಾಕೋ…ಹ..ಹಾ… ನಂಗೇ….ಹ…ಹಾ
ತುಂಬಾ… ಹೊ…. ಹೋ… ಬೋರೂ… ಹಂಗಾ|?
ಎರಡೇ ಎರಡು ಸ್ಟೆಪ್ಪು ಕುಣಿದು ಬಿಡೋಣಾ
ಹೊಸಾ ಗಾನ ಬಜಾನಾ ||ಅ.ಪ||

ಗಾನಾ… ಸಿಂಗು… ಗಾನಾ…
ಜಾನಿ ಜಾನಿ ಎಸ್ ಪಪ್ಪಾ, ಈಟಿಂಗ್ ಶುಗರ್ ನೋ ಪಪ್ಪಾ
ಕನ್ನಡದಲ್ಲಿ ಹೇಳ್ಬೇಕಪ್ಪ…
ಆ… ಅವಲಕ್ಕಿ ಪವಲಕ್ಕಿ ಡಾಮ್ ಡೂಂ ಟಸ್ಕು ಪುಸ್ಕು
ಪ್ರೀತಿ ಗೀತಿ ಇರಲಿ ಸ್ವಲ್ಪ
ಐ ಲವ್‌ಯೂ ಹೇಳ್ಬೇಕಪ್ಪ, ತುಂಬಾನೇ ಸುಸ್ತಾಗುತ್ತೆ
ನೀನಂತೂ ಸಿಕ್ಕಾಪಟ್ಟೆ ಸೋಂಬೇರಿ ಆಗಿಬಿಟ್ಟೆ
ದೂರ ಕುಳಿತು ನಡುವೆ ಗ್ಯಾಪು ಬಿಡೋಣಾ ||೧||

ಐಯಾಮ್ ಕ್ರೇಜಿ ಎಬೌಟ್ ಯೂ
ಮುತ್ತು ಕೊಡೋ ಬೆಟ್ಟಿಂಗ್ ಕಟ್ಟಿ ಹೆಡ್ಡು ಪುಶ್ಶು ಆಡೋಣಾ ಬಾ
ತುಂಬಾ ಕಾಸ್ಟ್‌ಲಿ ನನ್ನ ಮುತ್ತು
ಯಾವ್ದೋ ಒಂದು ಬೆಟ್ಟ ಹತ್ತಿ ಅಪ್ಪಿಕೊಂಡು ಕೂರೋಣ ಬಾ
ನಂಗೆ ಬೇರೆ ಕೆಲಸಾ ಇತ್ತು
ಈ ಹಾಡು ಹೇಳೋಕಿಂತಾ ಬೇರೊಂದು ಕೆಲ್ಸಬೇಕಾ
ಸಾಕಾಯ್ತು ಥೈಯ್ಯಾಥಕ್ಕ, ಮಾತಾಡು ಕಷ್ಟ ಸುಖ
ಫ್ಯೂಚರ್ರು ಪಾಪುಗೊಂದು ಹೆಸರು ಇಡೋಣ ||೨||

ಮುಂಗಾರು ಮಳೆ’ಯ ಮೂಲಕ ಮನೆಮನೆಯ ಮಾತಾದವರು, ಪ್ರತಿ ಮನದ ಕದ ತಟ್ಟಿದವರು ಯೋಗರಾಜ ಭಟ್. ಮಾತು ಮಾಣಿಕ್ಯ ಎಂಬ ಮಾತಲ್ಲಿ ಅವರಿಗೆ ಅಪಾರ ನಂಬಿಕೆ. ಈ ಕಾರಣಕ್ಕೇ ಇರಬೇಕು: ಅವರ ಎಲ್ಲ ಸಿನಿಮಾಗಳಲ್ಲೂ ಚಿನಕುರುಳಿ ಪಟಾಕಿಯಂಥ ಡೈಲಾಗುಗಳಿರು ತ್ತವೆ. ಒಂದೊಂದು ಸಂಭಾಷಣೆಯೂ ಎದೆಯಾಳದಿಂದ ಎದ್ದು ಬಂದಿರುತ್ತದೆ. ಅನಿಸಿದ್ದನ್ನು ಮುಲಾಜಿಲ್ಲದೆ ಹೇಳಿಬಿಡಬೇಕು ಎಂದು ಗಟ್ಟಿಯಾಗಿ ನಂಬಿರುವ ಯೋಗರಾಜ ಭಟ್, ತಮ್ಮ ಪ್ರತಿಯೊಂದು ಸಿನಿಮಾದಲ್ಲೂ ಹಾಗೇ ಮಾಡಿದ್ದಾರೆ. ತಮ್ಮ ಸಂಭಾಷಣೆಯ ಬಗ್ಗೆ- ಅದರ ಹಸಿ-ಬಿಸಿ ಶೈಲಿಯ ಬಗ್ಗೆ ಟೀಕೆ ಬಂದರೆ ಕತ್ತೆ ಬಾಲ, ಕುದುರೆ ಜುಟ್ಟು ಎಂದುಕೊಂಡೇ ಮಾತು ಹೊಸೆದಿದ್ದಾರೆ. ಆ ಮಾತುಗಳನ್ನು ಎಲ್ಲರಿಗೂ ತಲುಪಿಸಿದ್ದಾರೆ.
ಈ ಸಾದಾ ಸೀದಾ ಕೆಲಸದಿಂದ ಒಂದಷ್ಟು ರೂಮರ್‌ಗಳು ಹುಟ್ಟಿ ಕೊಂಡಿವೆ. ಯೋಗ್ರಾಜ್ ಭಟ್ರು ಸಕತ್ ಸಿಡುಕ ಅಂತೆ. ತುಂಬಾ ಮೂಡಿ ಯಂತೆ. ಒಂದೊಂದ್ಸಲ ಸುಚಿತ್ರಾ ಫಿಲಂ ಸೊಸೈಟಿ ರಸ್ತೇಲಿ ಒಬ್ಬೊಬ್ರೇ ಮಾತಾಡಿಕೊಂಡು ಅಡ್ಡಾಡ್ತಾರಂತೆ. ಎಸ್.ಎಲ್.ವಿ. ಹೋಟೆಲಲ್ಲಿ ಆ ಗಜಿಬಿಜಿಯ ಮಧ್ಯೆಯೇ ಇಡ್ಲಿ ತಿಂದು ಹೋಗ್ತಾರಂತೆ. ಆಮೇಲೆ… ಒಂದು ಸಿನಿಮಾಕ್ಕೆ ಅವರ ಪಡೆಯೋ ಸಂಭಾವನೆ ಐವತ್ ಲಕ್ಷಕ್ಕೂ ಜಾಸ್ತಿಯಂತೆ…. ಮನುಷ್ಯ ಒಂಥರಾ ಅಂತೆ… ಹೀಗೆ ಏನೇನೋ ಮಾತುಗಳು.
ಜನ ಹೀಗೆಲ್ಲ ಮಾತಾಡಿಕೊಂಡ ಸಂದರ್ಭದಲ್ಲೇ ಭಟ್ಟರು ಪದ್ಯ ಬರೆದಿದ್ದಾರೆ. ಅದರ ಹಿಂದೆಯೇ ಸಿನಿಮಾಗಳಿಗೆ ಹಾಡು ಬರೆದಿದ್ದಾರೆ; ಬರೆಯುತ್ತಿದ್ದಾರೆ. ಈ ‘ಅವತಾರಗಳನ್ನೆಲ್ಲ ಜನ ಕುತೂಹಲದಿಂದ ನೋಡುತ್ತಿರುವಾಗಲೇ’ ‘ಲೈಫು ಇಷ್ಟೇನೆ’ ಎಂದು ಘೋಷಿಸಿಬಿಟ್ಟಿದ್ದಾರೆ!
ಇಂತಿಪ್ಪ ಯೋಗರಾಜಭಟ್ಟರು ತೀರಾ ಆಕಸ್ಮಿಕವಾಗಿ ‘ರಾಮ್’ ಚಿತ್ರಕ್ಕೆ ‘ಹೊಸ ಗಾನ ಬಜಾನಾ’ ಎಂಬ ಹಾಡು ಬರೆದರು. ಆ ಸಮಯ- ಸಂದರ್ಭ ಸೃಷ್ಟಿಯಾದದ್ದು ಹೇಗೆ ಎಂಬುದನ್ನು ಭಟ್ಟರ ಮಾತುಗಳಲ್ಲೇ ಕೇಳೋಣ ಬನ್ನಿ:
***
‘ಹೊಸ ಸಿನಿಮಾವೊಂದರ ಕುರಿತು ಪರಭಾಷಾ ನಿರ್ಮಾಪಕರೊಂದಿಗೆ ಚರ್ಚಿಸು ವುದಿತ್ತು. ಈ ಕೆಲಸಕ್ಕೆಂದೇ ಸಂಗೀತ ನಿರ್ದೇಶಕ ಹರಿಕೃಷ್ಣ ಅವರೊಂದಿಗೆ ವಿಜಯನಗರದ ಅಶ್ವಿನಿ ಸ್ಟುಡಿಯೋಗೆ ಹೋದೆ. ಆ ಸಂದರ್ಭದಲ್ಲಿಯೇ ನಾನು ‘ಮನಸಾರೆ’ ಚಿತ್ರದ ಹಾಡುಗಳನ್ನು ಹರಿಕೃಷ್ಣ ಅವರಿಗೆ ಕೇಳಿಸಿದೆ. ಅವರು, ರಾಮ್ ಚಿತ್ರದ ಹಾಡುಗಳನ್ನು ನನಗೆ ಕೇಳಿಸಿದರು, ಹಾಡುಗಳು ಬರುವ ಸಂದರ್ಭವನ್ನೂ ಹೇಳಿದರು. ಅದರಲ್ಲಿ ನಾಯಕ-ನಾಯಕಿ-ಸುಮ್ನೇ ತಮಾಷೆಯಾಗಿ ಹಾಡಿಕೊಳ್ಳುವ ಒಂದು ಹಾಡೂ ಇತ್ತು. ಯಾಕೋ ಆ ಹಾಡಲ್ಲಿ ಜೋಷ್ ಇಲ್ಲ ಅನ್ನಿಸ್ತು. ಅದನ್ನೇ ಹರಿಕೃಷ್ಣ ಅವರಿಗೆ ಹೇಳಿದೆ. ‘ಜಂಗ್ಲಿ’ ಚಿತ್ರದ ನಂತರ ಪ್ರೇಕ್ಷಕರು ಸ್ಪೀಡ್ ಹಾಡುಗಳ ನಿರೀಕ್ಷೆಯಲ್ಲಿದ್ದಾರೆ. ನೀವು ಈ ಹಾಡಿನ ಬದಲಿಗೆ ಅದೇ ಥರದ ಒಂದು ಹಾಡು ಹಾಕಿದ್ರೆ ಚೆಂದ ಎಂಬ ಸಲಹೆಯನ್ನೂ ಕೊಟ್ಟೆ!
ಆಗ ಹರಿಕೃಷ್ಣ ಅವರು ಅಡ್ಡಡ್ಡ ಕತ್ತು ಒಗೆದು-‘ಹಾಗೆ ಮಾಡೋಕೆ ಆಗಲ್ಲ ಸಾರ್. ಯಾಕಂದ್ರೆ ಈ ಹಾಡಿನ ಶೂಟಿಂಗ್‌ಗೆಂದು ಚಿತ್ರತಂಡ ಈಗಾಗಲೇ ಸ್ವೀಡನ್‌ಗೆ ಹೋಗಿಬಿಟ್ಟಿದೆ. ನಾಳೆ ಬೆಳಗ್ಗೆ ಅಲ್ಲಿ ಚಿತ್ರೀಕರಣ ಶುರುವಾಗ್ತಿದೆ’. ಈಗಾಗಲೇ ಚೆನ್ನೈನಲ್ಲಿ ಹಾಡಿನ ರೆಕಾರ್ಡಿಂಗ್ ಕೂಡ ನಡೀತಿದೆ’ ಅಂದರು. ‘ಸರಿ ಹಾಗಾದ್ರೆ. ಹೋಗ್ಲಿ ಬಿಡಿ’ ಎಂದು ನಾನೂ ಮನೆಗೆ ಬಂದೆ.
ಅವತ್ತೇ, ಸಂಜೆ ಏಳು ಗಂಟೆಗೆ ಹರಿಕೃಷ್ಣ ಫೋನ್ ಮಾಡಿದರು: ‘ಏನ್ಸಾರ್?’ ಎಂದೆ. ‘ಬೆಳಗ್ಗೆ ನಿಮ್ಮ ಮಾತು ಕೇಳಿದಾಗಿಂದ ನನಗೂ ತಲೇಲಿ ಹುಳ ಬಿಟ್ಟಂತೆ ಆಗಿದೆ. ಈಗ ಒಂದು ಕೆಲ್ಸ ಮಾಡೋಣ. ರಾತ್ರಿ ೧೦ ಗಂಟೆ ಹೊತ್ತಿಗೆ ಅಶ್ವಿನಿ ಸ್ಟುಡಿಯೋಗೆ ಬನ್ನಿ. ಅಲ್ಲಿ ನಿಮ್ಗೆ ಟ್ಯೂನ್ ಕೇಳಿಸ್ತೇನೆ. ಅದಕ್ಕೆ ಹೊಂದು ವಂತೆ ನೀವೇ ಹಾಡು ಬರೆದುಬಿಡಿ’ ಎಂದರು.
ಇದೊಳ್ಳೆ ಫಜೀತಿ ಆಯ್ತಲ್ಲ, ಸುಮ್ನೇ ಒಂದು ಸಲಹೆ ಕೊಟ್ರೆ ನೀವೇ ಹಾಡು ಬರೀರಿ ಅಂತಿದಾರಲ್ಲ ಅಂದುಕೊಂಡೆ. ನಂತರ ‘ಈಗಾಗ್ಲೇ ರಾತ್ರಿ ಆಗಿದೆ. ನಾಳೆ ಹಾಡಿನ ಚಿತ್ರೀಕರಣ ಶುರುವಾಗುತ್ತೆ ಅಂತ ಬೇರೆ ಹೇಳಿದ್ದೀರಿ. ಹೀಗಿರುವಾಗ ಹೇಗೆ ಸಾರ್ ಹಾಡು ಬರೆಯೋದು?’ ಅಂದೆ.’ ತಂಡಕ್ಕೆ ಈಗಾಗಲೇ ಇ-ಮೇಲ್ ಮೂಲಕ ವಿಷಯ ತಿಳಿಸಿದ್ದೀನಿ. ಸ್ವೀಡನ್, ಭಾರತಕ್ಕಿಂತ ಆರು ಗಂಟೆ ಹಿಂದಿರುತ್ತೆ. ಹಾಗಾಗಿ ನಮಗೆ ಟೈಂ ಇದೆ. ನೀವು ಹತ್ತು ಗಂಟೆಗೆ ಅಶ್ವಿನಿ ಸ್ಟುಡಿಯೋಗೆ ಬನ್ನಿ. ಅಲ್ಲಿ ಟ್ಯೂನ್ ಕೇಳಿಸ್ತೇನೆ. ನೀವು ಬೆಳಗ್ಗೆ ಎಂಟೂವರೆ ಹೊತ್ತಿಗೆ ಹಾಡು ಕೊಟ್ರೂ ಸಾಕು’ ಅಂದರು ಹರಿಕೃಷ್ಣ.
ನಾನು ಸ್ಟುಡಿಯೋ ತಲುಪುವ ವೇಳೆಗೆ ಟ್ಯೂನ್ ಸಿದ್ಧವಾಗಿತ್ತು. ಇಬ್ಬರು ಟ್ರ್ಯಾಕ್ ಸಿಂಗರ್‌ಗಳಿಂದ ಅದನ್ನು ಲಲಲಾಲ, ಲಲಲ, ಲಾಲಲಾ…. ಧಾಟಿಯಲ್ಲಿ ಹಾಡಿಸ್ತಿದ್ರು ಹರಿಕೃಷ್ಣ. ನಂತರ ಆ ಧ್ವನಿಯನ್ನು ರೆಕಾರ್ಡ್ ಮಾಡಿ, ಒಂದು ಸಿ.ಡಿ.ಗೆ ಹಾಕಿ ಕೊಟ್ರು. ಬೆಳಗ್ಗೆ ಹೊತ್ತಿಗೆ ಹಾಡು ಕೊಡಿ ಸಾರ್. ಅದನ್ನು ಟ್ರ್ಯಾಕ್‌ನಲ್ಲಿ ಹಾಡಿಸಿ, ಸ್ವೀಡನ್‌ಗೆ ಮೇಲ್ ಮಾಡ್ತೇನೆ’ ಅಂದರು.
ಸ್ಟುಡಿಯೊದಿಂದ ಹೊರಬಂದ ತಕ್ಷಣ, ಟೆನ್ಷನ್ ಶುರುವಾಯ್ತು. ನಾನು ಏನೂ ಹೇಳದೆ ಇದ್ದಿದ್ರೇ ಚೆನ್ನಾಗಿರ್‍ತಿತ್ತು ಅಂದುಕೊಂಡೆ. ಆದರೆ, ಈಗ ಯೋಚಿಸಿ ಪ್ರಯೋಜನವಿರಲಿಲ್ಲ. ಅಲ್ಲಿಂದ ಸೀದಾ ಗೆಳೆಯ ದುನಿಯಾ ಸೂರಿಯ ಮನೆಗೆ ಹೊರಟೆ. ಸೂರಿ, ಆಗಷ್ಟೇ ಒಂದು ಹೊಸ ಟೇಬಲ್ ತಗೊಂಡಿದ್ದ. ಅದು ಎಷ್ಟೊಂದು ಚೆನ್ನಾಗಿತ್ತು ಅಂದರೆ- ಅದನ್ನು ನೋಡಿದಾಗೆಲ್ಲ ಇಲ್ಲಿ ಕೂತು ಏನಾದ್ರೂ ಬರೀಬೇಕು ಎಂಬ ಆಸೆ ಹುಟ್ಟುತ್ತಿತ್ತು. ನೋಡೋಣ, ಇಲ್ಲಾದರೂ ಹಾಡಿನ ಸಾಲುಗಳು ಹೊಳೆದ್ರೆ ಸಾಕು ಎಂದುಕೊಂಡು ಆ ಟೇಬಲ್ ಮುಂದೆ ಕೂತೆ. ಏನೇ ತಿಪ್ಪರಲಾಗ ಹಾಕಿದ್ರೂ ಒಂದು ಸಾಲೂ ಹೊಳೆಯಲಿಲ್ಲ.
ಬೇಜಾರಾಯ್ತು. ಸೀದಾ ಮನೆಗೆ ಬಂದೆ. ನನ್ನ ಆಗಮನಕ್ಕೇ ಕಾಯುತ್ತಿದ್ದ ಹೆಂಡತಿ-‘ಮರೆತು ಬಿಟ್ಟಿದೀರಾ? ನಾಳೆ ನಿಮ್ಮ ಮಾವನವರ ತಿಥಿ ಇದೆ; ಬೆಳಗ್ಗೆ ಆ ಕೆಲಸಕ್ಕೆ ಹೋಗಲೇಬೇಕು. ಹಾಗಾಗಿ ನಿಮ್ಮ ಸಿನಿಮಾದ ಕೆಲಸಗಳಿಗೆ ನಾಳೆ ರಜೆ ಕೊಡಿ’ ಎಂದಳು.
ಮಾವನವರ ತಿಥಿ ಕಾರ್ಯವನ್ನು ಮಿಸ್ ಮಾಡುವಂತಿರಲಿಲ್ಲ. ಈ ಕಡೆ ಹಾಡು ಬರೆಯುವುದರಿಂದ ತಪ್ಪಿಸಿಕೊಳ್ಳುವಂತೆಯೂ ಇರಲಿಲ್ಲ. ಇರಲಿ, ಬೆಳಗ್ಗೆ ಬೇಗ ಎದ್ದು ಬರೆದು ಬಿಡೋಣ ಅಂದುಕೊಂಡೇ ಮಲಗಿದೆ. ರಾತ್ರಿಯಿಡೀ ಹಾಡು, ಹಾಡು, ಹಾಡು ಎಂದು ಗುನುಗಿಕೊಂಡೆ. ಪರಿಣಾಮ, ಬೆಳಗ್ಗೆ ಐದು ಗಂಟೆಗೇ ಎಚ್ಚರವಾಯಿತು. ಏನು ಬರೆಯೋದು, ಹೇಗೆ ಶುರು ಮಾಡೋದು ಎಂದು ಯೋಚಿಸಿದೆ. ಆಗಲೇ -ಹಿಂದಿನ ದಿನ ಅಶ್ವಿನಿ ಸ್ಟುಡಿಯೋದಲ್ಲಿ ಟ್ರ್ಯಾಕ್ ಸಿಂಗರ್ ಒಬ್ಬನಿಂದ ‘ಐಯಾಮ್ ಕ್ರೇಜಿ ಎಬೌಟ್ ಯೂ’ ಎಂದು ಹರಿಕೃಷ್ಣ ಹಾಡಿಸಿದ್ದು ನೆನಪಾಯಿತು. ಹೇಳಿ ಕೇಳಿ ಅದು ಇಂಗ್ಲಿಷ್ ಸಾಲು. ಇಂಗ್ಲಿಷ್ ಬೇಡ. ಈ ಹಾಡು ಕನ್ನಡದ ಸಾಲಿನಿಂದಲೇ ಶುರುವಾಗಲಿ ಅಂದುಕೊಂಡೆ ನಿಜ. ಆದರೆ, ಒಂದೇ ಒಂದು ಪದವೂ ಹೊಳೆಯುತ್ತಿಲ್ಲ.
ಆಗ ನನ್ನಷ್ಟಕ್ಕೆ ನಾನೇ-‘ ಹೊಸ ಹಾಡಿಗೆ ಯಾವ ಸಾಲು? ಹೊಸ ಹಾಡು, ಹೊಸ ಸಾಲು ಹೊಸರಾಗ… ಎಂದೆಲ್ಲ ಬಡಬಡಿಸಿದೆ. ಆಗಲೇ ತಲೆಯೊಳಗೆ ಟ್ಯೂಬ್ ಲೈಟ್ ಝಗ್ ಎಂದಿರಬೇಕು. ಇದ್ದಕ್ಕಿ ದ್ದಂತೆ-‘ಹೊಸ ಗಾನ ಬಜಾನಾ’ ಎಂಬ ಸಾಲು, ಹೊಳೆಯಿತು. ತಕ್ಷಣ ಅದನ್ನು ಬರೆದಿಟ್ಟುಕೊಂಡೆ. ಇದನ್ನೇ ಮೊದಲ ಸಾಲಾಗಿಸಬೇಕು ಅಂದುಕೊಂಡೆ. ಈ ಹಾಡು ಬರೆಯೋಕೆ ತುಂಬಾ ಸಮಯ ಹಿಡಿಯಿತಲ್ಲ? ಅದನ್ನೇ ನೆಪವಾಗಿಟ್ಟುಕೊಂಡು, ನನ್ನನ್ನು ನಾನೇ ಗೇಲಿ ಮಾಡಿಕೊಂಡು-‘ನೀನು ತುಂಬ ನಿಧಾನ, ಸ್ಪೀಡಾಗಿದೆ ಜಮಾನಾ’ ಎಂದು ಬರೆದೆ. ಇದೇ ಸಂದರ್ಭದಲ್ಲಿ, ಹಿಂದಿನ ದಿನವಷ್ಟೆ ಒಂದು ವಾಹನದ ಹಿಂದೆ ನೋಡಿದ್ದ -‘ನಿಧಾನವೇ ಪ್ರಧಾನ’ ಎಂಬ ಸಾಲು ನೆನಪಾಯ್ತು. ಅದನ್ನೂ ಜತೆಗಿಟ್ಟುಕೊಂಡೆ. ನಂತರ, ಹರಯದ ಜೋಡಿಗಳು ಗುನುಗುವ ಒಂದೊಂದೇ ಹೊಸ ಪದಗಳನ್ನು ನೆನಪಿಸಿಕೊಂಡೆ. ನಂತರದ ಕೆಲವೇ ನಿಮಿಷಗಳಲ್ಲಿ ಇಡೀ ಹಾಡು ಸಿದ್ಧವಾಗಿ ಹೋಯ್ತು.
ಗಡಿಯಾರ ನೋಡಿಕೊಂಡೆ: ಬೆಳಗ್ಗೆ ಎಂಟೂವರೆ. ತಕ್ಷಣವೇ ಹರಿಕೃಷ್ಣ ಅವರಿಗೆ ಫೋನ್ ಮಾಡಿದೆ. ಅವರು ಆಗಲೇ ಚೆನ್ನೈನಲ್ಲಿ, ಮ್ಯೂಸಿಕ್ ರೆಕಾರ್ಡಿಂಗ್‌ನ ಸಿದ್ಧತೆಯಲ್ಲಿದ್ದರು. ಹಾಡಿನ ಸಾಲುಗಳನ್ನು ಫೋನ್‌ನಲ್ಲಿಯೇ ಹೇಳಿದೆ. ತಕ್ಷಣವೇ ಟ್ರಾಕ್ ಹಾಡು ಹಾಗೂ ಮ್ಯೂಸಿಕ್ ಟ್ರ್ಯಾಕ್ ಸಿದ್ಧಪಡಿಸಿ, ಅದನ್ನು ಸ್ವೀಡನ್‌ನಲ್ಲಿದ್ದ ಚಿತ್ರತಂಡಕ್ಕೆ ಮೇಲ್ ಮೂಲಕ ಕಳಿಸಿಬಿಟ್ಟರು ಹರಿಕೃಷ್ಣ.
ಒಂದು ಬಾರಿ ತಿದ್ದುವುದಕ್ಕೂ ಅವಕಾಶವಿಲ್ಲದಂತೆ ಬರೆದ ಹಾಡದು. ಹಾಗಾಗಿ ಚೆನ್ನಾಗಿರಲಿಕ್ಕಿಲ್ಲ ಎಂಬ ಅಂದಾಜು ನನ್ನದಿತ್ತು. ಹಾಗಾಗಿ, ಈ ಬಗ್ಗೆ ವಿಚಾರಿಸುವುದನ್ನೇ ಮರೆತೆ. ಆದರೆ, ಕೆಲ ದಿನಗಳ ನಂತರ ಫೋನ್ ಮಾಡಿದ ಹರಿಕೃಷ್ಣ, ಆಡಿಯೋ ಸಿ.ಡಿ. ಬಿಡುಗಡೆಯಾಗಿದೆ ಸಾರ್ ಅಂದರು. ಹಿಂಜರಿಕೆಯಿಂದಲೇ ಸಿ.ಡಿ. ಖರೀದಿಸಿ ಕೇಳಿದೆ. ತಕ್ಷಣಕ್ಕೇ ಇಷ್ಟವಾಯಿತು. ಮುಂದೆ ಅದೇ ಹಾಡು ಹಿಟ್ ಆದಾಗ ಗಡಿಬಿಡಿಯ ಮಧ್ಯೆ, ಟೆನ್ಷನ್‌ನ ಮಧ್ಯೆ, ತುಂಬ ಅವಸರದ ಮಧ್ಯೆ ಅಂಥದೊಂದು ಹಾಡು ಬರೆದದ್ದಕ್ಕೆ ಸ್ವಲ್ಪ ಜಾಸ್ತಿಯೇ ಖುಷಿಯಾಯಿತು….
ಇಷ್ಟು ಹೇಳಿ ಮಾತು ನಿಲ್ಲಿಸಿದ ಯೋಗರಾಜ ಭಟ್. ನಂತರ ಫಾರ್ ಎ ಛೇಂಜ್ ಎಂಬಂತೆ ನಸುನಕ್ಕು ಹೇಳಿದರು: ಮಾತು ಇಷ್ಟೇನೆ…

ಸಂಪಿಗೆ ಮರದ ಹಸಿರೆಲೆ ನಡುವೆ…

ಅಕ್ಟೋಬರ್ 1, 2010

ಸಂಪಿಗೆ ಮರದ ಹಸಿರೆಲೆ ನಡುವೆ…
ಚಿತ್ರ: ಉಪಾಸನೆ. ಗೀತೆರಚನೆ: ಆರ್.ಎನ್. ಜಯಗೋಪಾಲ್
ಸಂಗೀತ: ವಿಜಯಭಾಸ್ಕರ್. ಗಾಯನ : ಬಿ.ಕೆ. ಸುಮಿತ್ರಾ

ಸಂಪಿಗೆ ಮರದ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತು
ಚಿಕ್ಕವ್ವ… ಚಿಕ್ಕವ್ವ… ಎನ್ನುತ ತನ್ನಯ ಗೆಳೆಯರ ಕರೆದಿತ್ತು
ಅದ ಕೇಳಿ ನಾ ಮೈ ಮರೆತೆ, ಸ್ವರವೊಂದು ಆಗಲೆ ಕಲಿತೆ
ಹಾಡಿದೆ ಈ ಕವಿತೆ ನಾ ಹಾಡಿದೆ ಈ ಕವಿತೆ ||ಪ||

ದೂರದ ಗುಡಿಯಲಿ ಪೂಜೆಯ ವೇಳೆಗೆ ಘಂಟೆಯು ಮೊಳಗಿತ್ತು
ಟಣ್ ಡಣ್ ಟಣ್ ಡಣ್…
ಎನ್ನುತ ಸೇವೆಗೆ ಎಲ್ಲರ ಕರೆದಿತ್ತು
ಅದಕೇಳಿ ನಾ ಮೈಮರೆತೆ, ಸ್ವರವೊಂದು ಆಗಲೆ ಕಲಿತೆ
ಹಾಡಿದೆ ಈ ಕವಿತೆ ನಾ ಹಾಡಿದೆ ಈ ಕವಿತೆ ||೧||

ಹರಿಯುವ ನದಿಯಾ ನೋಡುತ ನಿಂತೆ ಅಲೆಗಳು ಕುಣಿದಿತ್ತು
ಕಲ ಕಲ ಕಲ ಕಲ…
ಮಂಜುಳ ನಾದವು ಕಿವಿಗಳ ತುಂಬಿತ್ತು
ಅದಕೇಳಿ ನಾ ಮೈ ಮರೆತೆ, ಸ್ವರವೊಂದು ಆಗಲೆ ಕಲಿತೆ
ಹಾಡಿದೆ ಈ ಕವಿತೆ ನಾ ಹಾಡಿದೆ ಈ ಕವಿತೆ ||೨||
ಎಪ್ಪತ್ತರ ದಶಕದಿಂದ ಆರಂಭಿಸಿ ಈಗಲೂ ಹಲವರನ್ನು ಬಿಟ್ಟೂ ಬಿಡದೆ ಕಾಡುತ್ತಿರುವ ಗೀತೆ ‘ಸಂಪಿಗೆ ಮರದ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತು…’ ‘ಉಪಾಸನೆ’ ಚಿತ್ರದ ಈ ಗೀತೆ, ಆರ್.ಎನ್.ಜೆ. ಅವರ ಅನುಪಮ ಸೃಷ್ಟಿಗಳಲ್ಲಿ ಒಂದು. ಈ ಹಾಡು ಕೇಳುತ್ತ ಕೂತರೆ, ಗ್ರಾಮೀಣ ಪ್ರದೇಶದಿಂದ ಬಂದ ಪ್ರತಿಯೊಬ್ಬರಿಗೂ ತಂತಮ್ಮ ಊರು ನೆನಪಾಗುತ್ತದೆ. ಪಲ್ಲವಿ ಮುಗಿದು ಮೊದಲ ಚರಣ ಶುರುವಾದ ತಕ್ಷಣ ಊರಲ್ಲಿರುವ ದೇವಸ್ಥಾನ, ಅದರ ಘಂಟಾನಾದ, ಗರ್ಭಗುಡಿಯಲ್ಲಿರುವ ದೇವರ ವಿಗ್ರಹ, ಅದಕ್ಕೆ ಮಂಗಳಾರತಿ ಶುರುವಾಗುತ್ತಿದ್ದಂತೆಯೇ ಭಕ್ತಾದಿಗಳೆಲ್ಲ ಕೈ ಮುಗಿದು, ಕೆನ್ನೆ ಕೆನ್ನೆ ಬಡಿದುಕೊಂಡು ಮೈಮರೆಯುವ ಕ್ಷಣಗಳೆಲ್ಲ ನೆನಪಿಗೆ ಬರುತ್ತವೆ. ಹಿಂದೆಯೇ-ಈ ಹಾಡು ನನಗೆಂದೇ ಬರೆದಿರುವಂತಿದೆ ಎಂಬ ಭಾವ ಎಲ್ಲರನ್ನೂ ಆವರಿಸಿಕೊಳ್ಳುತ್ತದೆ.
ಕೋಗಿಲೆಯೂ ಅಸೂಯೆ ಪಡುವಂತೆ ಈ ಗೀತೆಯನ್ನು ಹಾಡಿದವರು ಬಿ.ಕೆ. ಸುಮಿತ್ರಾ. ಈ ಹಾಡಿನ ಕಥೆಗೆ ಹೊರಳಿಕೊಳ್ಳುವ ಮುನ್ನ ಸುಮಿತ್ರಾ ಅವರ ಗಾನಯಾನದ ಬಗ್ಗೆಯೂ ನಾಲ್ಕು ಮಾತು. ಚಿಕ್ಕಮಗಳೂರು ಜಿಲ್ಲೆಯ ಬಿಳಿಲುಕೊಪ್ಪ ಗ್ರಾಮದವರು ಸುಮಿತ್ರಾ. ಅವರ ತಂದೆ ಪಟೇಲ್ ಕೃಷ್ಣಯ್ಯ. ಊರ ಪಟೇಲರೂ, ಕಾಫಿ ತೋಟದ ಮಾಲೀಕರೂ ಆಗಿದ್ದ ಕೃಷ್ಣಯ್ಯನವರು, ಅರವತ್ತರ ದಶಕದಲ್ಲಿಯೇ ಆಧುನಿಕ ಮನೋಭಾವ ಪ್ರದರ್ಶಿಸಿದ ಮಂತರು. ಹೆಣ್ಣು ಮಕ್ಕಳೂ ಸಹ ಹುಡುಗರಂತೆಯೇ ಓದಿ ದೊಡ್ಡ ಹೆಸರು ಮಾಡಬೇಕು ಎಂಬುದು ಅವರ ಆಸೆಯಾಗಿತ್ತು. ಮುದ್ದಿನ ಮಗಳು ಸುಮಿತ್ರಾ ಅವರಿಗೂ ಹಾಗೆಯೇ ಹೇಳಿದ್ದರು. ಮಗಳಿಗೆ ಸಂಗೀತ ಕಲಿಕೆಯಲ್ಲಿ ಆಸಕ್ತಿಯಿದೆ ಎಂದು ಗೊತ್ತಾದಾಗ-ನಟಿ ಪಂಢರಿಬಾಯಿ ಅವರ ಸೋದರ ಪ್ರಭಾಕರ ಅವರ ಬಳಿ ಸಂಗೀತ ಕಲಿಕೆಗೆ ವ್ಯವಸ್ಥೆ ಮಾಡಿದರು. ಮಗಳು ಕಾಲೇಜು ಓದಲು ಆಸೆಪಟ್ಟಾಗ ಶಿವಮೊಗ್ಗದಲ್ಲಿ ಓದಿಸಿದ್ದರು.
ಕಾಲೇಜು ಶಿಕ್ಷಣದ ನಂತರ, ಹೇಗಿದ್ದರೂ ಸುಗಮ ಸಂಗೀತ ಕಲಿತಿದ್ದಾಗಿದೆ. ಹಾಗಾಗಿ ಚಿತ್ರರಂಗದಲ್ಲಿ ಹಿನ್ನೆಲೆಗಾಯಕಿಯಾಗಿ ಯಾಕೆ ಅದೃಷ್ಟ ಪರೀಕ್ಷಿಸಬಾರದು ಎನ್ನಿಸಿದಾಗ ಅದನ್ನೇ ತಂದೆಯ ಬಳಿ ಹೇಳಿಕೊಂಡರು ಸುಮಿತ್ರಾ. ಇದು ೧೯೬೦-೭೦ರ ದಶಕದ ಮಾತು. ಆಗ ಕನ್ನಡ ಚಿತ್ರರಂಗದ ಸಮಸ್ತ ಚಟುವಟಿಕೆಯೂ ಮದ್ರಾಸ್‌ನಲ್ಲೇ ನಡೆಯುತ್ತಿತ್ತು. ಹಾಗಾಗಿ ಚಿತ್ರರಂಗ ಸೇರುವ ಆಸೆ ಹೊಂದಿದವರು ಸೀದಾ ಮದ್ರಾಸ್‌ಗೇ ಬರಬೇಕಾಗುತ್ತಿತ್ತು. ಮಗಳ ಮಾತು ಕೇಳಿದ ನಂತರ, ತಾವೇ ಮುಂದಾಗಿ ಮದ್ರಾಸ್‌ಗೆ ಬಂದು ಒಂದು ಬಾಡಿಗೆ ಮನೆಯನ್ನು ಗೊತ್ತುಮಾಡಿದರು ಪಟೇಲ್ ಕೃಷ್ಣಯ್ಯ. ನಂತರ ಮಗಳಿಗೆ ಅಡುಗೆ ಮಾಡಲೆಂದೇ ತಮ್ಮ ಊರಿಂದ ಒಂದು ಹುಡುಗಿಯನ್ನೂ ಕರೆತಂದರು. ನಂತರ ಮಗಳ ಮುಂದೆ ನಿಂತು ಹೇಳಿದರಂತೆ: ‘ನೋಡಮ್ಮಾ, ಒಪ್ಪಿಕೊಂಡ ಕೆಲಸವನ್ನು ಶ್ರದ್ಧೆ, ಭಕ್ತಿಯಿಂದ ಮಾಡು. ಆದರೆ, ಅವಕಾಶ ಕೊಡಿ ಎಂದು ಯಾರಲ್ಲೂ ಕೇಳಿಕೊಂಡು ಹೋಗಬೇಡ. ಇಲ್ಲಿ ಒಂದೆರಡು ವರ್ಷ ಇದ್ದು ನೋಡು. ಈ ಕ್ಷೇತ್ರ ನಿನಗೆ ಹಿಡಿಸದಿದ್ದರೆ ಆರಾಮಾಗಿ ಊರಿಗೆ ಬಂದುಬಿಡು…’
‘ಹಾಗೇ ಆಗಲಿ ಅಪ್ಪಾಜೀ’ ಎಂದರು ಸುಮಿತ್ರಾ. ಆದರೆ, ಒಂದೆರಡು ಸಿನಿಮಾಗಳಿಗೆ ಹಾಡಿದ್ದೇ ತಡ, ಇಡೀ ಚಿತ್ರರಂಗ ಅವರ ಸಿರಿಕಂಠದ ಇಂಪನ್ನು ಗುರ್ತಿಸಿತು. ಮೆಚ್ಚಿಕೊಂಡಿತು. ಹಾಡಿ ಹೊಗಳಿತು. ಪರಿಣಾಮ,ಅದುವರೆಗೂ ಬಿಳಿಲು ಕೊಪ್ಪದ ಜನರಿಗೆ ಮಾತ್ರ ಪರಿಚಯವಿದ್ದ ಸುಮಿತ್ರಾ, ಕರ್ನಾಟಕದಾದ್ಯಂತ ಮನೆ ಮಾತಾದರು.
***
ಈಗ, ‘ಉಪಾಸನೆ’ ಚಿತ್ರದಲ್ಲಿ ಈ ಹಾಡು ಬರುವ ಸಂದರ್ಭ ತಿಳಿದುಕೊಂಡು, ಆನಂತರವೇ ಹಾಡಿನ ಹಿಂದಿರುವ ಕಥೆಗೆ ಹೊರಳಿಕೊಳ್ಳೋಣ.
‘ಉಪಾಸನೆ’ ಚಿತ್ರದ ಕಥಾನಾಯಕಿಯ ಹೆಸರು ಶಾರದೆ. ಆಕೆ, ವಕೀಲ ಭೀಮರಾಯರ ಹಿರಿಯ ಮಗಳು. ಶಾರದೆ ಇದ್ದ ಊರಲ್ಲಿಯೇ ಸಂಗೀತ ವಿದ್ವಾನ್ ಅನಂತಶಾಸ್ತ್ರಿಗಳಿರುತ್ತಾರೆ. ಸಂಗೀತದಲ್ಲಿ ಆಸಕ್ತಿ ಹೊಂದಿದ್ದ ಶಾರದೆ, ಶಾಲೆಗೆ ಹೋಗುವಾಗ ಮತ್ತು ಬರುವಾಗ, ಅನಂತ ಶಾಸ್ತ್ರಿಗಳ ಮನೆಯ ಬಾಗಿಲ ಬಳಿ ನಿಂತು ಅವರು ವೀಣೆ ನುಡಿಸುವುದನ್ನೇ ನೋಡುತ್ತ ಖುಷಿ ಪಡುತ್ತಿರುತ್ತಾಳೆ. ಈ ಸಂದರ್ಭದಲ್ಲಿಯೇ ಶಾಸ್ತ್ರಿಗಳನ್ನು ಕಾಣುವ ಭೀಮರಾಯರು, ತಮ್ಮ ಮಗಳಿಗೆ ಸಂಗೀತ ಹೇಳಿಕೊಡುವಂತೆ ಪ್ರಾರ್ಥಿಸುತ್ತಾರೆ. ಅದಕ್ಕೆ ಒಪ್ಪದ ಶಾಸ್ತ್ರಿಗಳು- ‘ನಾನು ಯಾರಿಗೂ ಸಂಗೀತ ಹೇಳಿಕೊಡಲಾರೆ, ಕ್ಷಮಿಸಿ’ ಎನ್ನುತ್ತಾರೆ.
ಹೀಗಿದ್ದಾಗಲೇ ಒಂದು ದಿನ ಶಾಸ್ತ್ರಿಯವರು ವೀಣೆ ನುಡಿಸುತ್ತಿದ್ದಾಗ ಅವರ ಮನೆಗೆ ಬರುತ್ತಾಳೆ ಶಾರದೆ. ಬಂದವಳು ನಮಸ್ಕರಿಸಿ, ವೀಣೆಯನ್ನೇ ಆರಾಧನಾ ಭಾವದಿಂದ ನೋಡುತ್ತಾಳೆ. ಅದನ್ನು ಗಮನಿಸಿದ ಶಾಸ್ತ್ರಿಗಳು-’ಮಗೂ, ನಿಂಗೆ ಹಾಡಲು ಬರುತ್ತಾ? ಒಂದು ಹಾಡು ಹಾಡ್ತೀಯಾ?’ ಅನ್ನುತ್ತಾರೆ. ಆಗ, ಶಾಸ್ತ್ರಿಗಳನ್ನೇ ಪ್ರೀತಿ, ಭಯ-ಭಕ್ತಿಯಿಂದ ನೋಡುತ್ತಾ ಶಾರದೆ ಹಾಡುತ್ತಾಳೆ: ‘ಸಂಪಿಗೆ ಮರದಾ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತು…’
ಈ ಹಾಡು ಹುಟ್ಟಿದ ಸಂದರ್ಭವನ್ನು, ಅದನ್ನು ತಾವು ಮೈಮರೆತು ಹಾಡಿದ ಕ್ಷಣವನ್ನು ಬಿ.ಕೆ. ಸುಮಿತ್ರಾ ಅವರು ನೆನಪು ಮಾಡಿಕೊಂಡದ್ದು ಹೀಗೆ:
‘ತಮ್ಮ ಸಿನಿಮಾಗಳಿಗೆ ಹಾಡು- ಸಂಭಾಷಣೆ ಬರೆಸುವ ಸಂದರ್ಭದಲ್ಲಿ ಪುಟ್ಟಣ್ಣ ಕಣಗಾಲ್ ಅವರು ಸಂಗೀತ ನಿರ್ದೇಶಕ, ಸಂಭಾಷಣೆಕಾರ ಹಾಗೂ ಗೀತೆರಚನೆಕಾರರೊಂದಿಗೆ ಪಿಕ್‌ನಿಕ್‌ಗೆ ತೆರಳುತ್ತಿದ್ದರು. ಸಿನಿಮಾ ಸಂದರ್ಭದ ತೀವ್ರತೆಯನ್ನು ಹೆಚ್ಚಿಸುವ, ಪದ ಪದದಲ್ಲೂ ಮಾಧುರ್ಯವನ್ನೇ ತುಂಬಿಕೊಂಡ ಹಾಡು ಹಾಗೂ ಎಲ್ಲರನ್ನೂ ಮೋಡಿ ಮಾಡುವಂಥ ಟ್ಯೂನ್ ಸಿದ್ಧವಾಗುವವರೆಗೂ ಬಿಡುತ್ತಿರಲಿಲ್ಲ ಪುಟ್ಟಣ್ಣ.
‘ಉಪಾಸನೆ’ಯಲ್ಲಿ ಶಾಲಾ ಬಾಲಕಿಯೊಬ್ಬಳ ದನಿಯಲ್ಲಿ ನಾನು ಹಾಡಬೇಕಿತ್ತು. ಆರ್.ಎನ್. ಜಯಗೋಪಾಲ್ ಅವರು ಬರೆದಿದ್ದ ಹಾಡನ್ನು ನೋಡಿದಾಗ, ನನಗೆ ಆಶ್ಚರ್ಯವಾಯಿತು. ಏಕೆಂದರೆ- ‘ಸಂಪಿಗೆ ಮರದ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತು..’ ಎಂದು ಬರೆದಿದ್ದರು ಆರ್.ಎನ್. ಜೆ.
‘ಕೋಗಿಲೆ ಮಾವಿನ ಚಿಗುರನ್ನು ತಿನ್ನುತ್ತದೆ. ಮಾವಿನ ಮರದಲ್ಲಿ ಕೂತು ಕೂಹೂ, ಕೂಹೂ ಎಂದು ಹಾಡುತ್ತದೆ’ ಎಂದಷ್ಟೇ ನಮ್ಮ ಶಾಲೆಯಲ್ಲಿ ಹೇಳಿಕೊಟ್ಟಿದ್ದರು. ನಾನೂ ಅದನ್ನೇ ನಂಬಿಕೊಂಡಿದ್ದೆ. ನಮ್ಮ ಊರಿನ ಮಾವಿನ ತೋಪುಗಳಲ್ಲಿ ಆಗಿಂದಾಗ್ಗೆ ಕೋಗಿಲೆಗಳು ಹಾಡುವುದನ್ನು ಕೇಳಿಸಿಕೊಂಡಿದ್ದೆ. ಅದು ಒಮ್ಮೆ ಕೂಹೂ ಎಂದರೆ ಸಾಕು, ನಾನು ಅದರ ದನಿಯನ್ನೇ ಅನುಕರಿಸಿ-‘ಕೂಹೂ, ಕೂಹೂ’ ಅನ್ನುತ್ತಿದ್ದೆ. ಆ ಸಂದರ್ಭದಲ್ಲಿ ಕೋಗಿಲೆ ಸ್ಪರ್ಧೆಗೆ ಬಿದ್ದಂತೆ-ಕೂಹೂ ಕೂಹೂ ಎಂದು ಏಳೆಂಟು ಬಾರಿ ಕೂಗಿಬಿಡುತ್ತಿತ್ತು…
ಈ ಕಾರಣದಿಂದಲೇ-‘ಕೋಗಿಲೆ, ಮಾವಿನ ಮರದಲ್ಲಿ ಮಾತ್ರ ಇರುತ್ತದೆ’ ಎಂಬುದು ನನ್ನ ಭಾವನೆಯಾಗಿತ್ತು. ಆದರೆ ಆರ್.ಎನ್.ಜೆ. ಅವರ ಹಾಡಿನಲ್ಲಿ- ಸಂಪಿಗೆ ಮರದಲ್ಲಿ ಕೋಗಿಲೆ ಇತ್ತು! ಅನುಮಾನ ಬಂತು ನೋಡಿ; ಸೀದಾ ಆರ್.ಎನ್. ಜೆ. ಬಳಿ ಹೋಗಿ ‘ಸಾರ್, ಕೋಗಿಲೆ ಮಾವಿನ ಮರದಲ್ಲಿ ಹಾಡುತ್ತೆ. ಸಂಪಿಗೆ ಮರದಲ್ಲೂ ಹಾಡುತ್ತಾ?’ ಎಂದು ಪ್ರಶ್ನೆ ಹಾಕಿದೆ.
ಆಗ ಆರ್.ಎನ್.ಜೆ. ‘ಹೌದಮ್ಮಾ, ಕೋಗಿಲೆ ಸಂಪಿಗೆ ಮರದಲ್ಲೂ ಹಾಡುತ್ತೆ. ಈಗ ನೀನು ಹಾಡು. ಮುಂದೆ ಈ ಹಾಡು ಕೂಡ ಕೋಗಿಲೆಯ ದನಿಯಂತೆಯೇ ಪ್ರಸಿದ್ಧಿ ಪಡೆಯುತ್ತದೆ’ ಅಂದರು.
ಆ ದಿನಗಳಲ್ಲಿ ಧ್ವನಿಮುದ್ರಣ ಅಂದರೆ-ಒಂದು ಹಾಡನ್ನು ಗಾಯಕರು ಮೊದಲಿಂದ ಕಡೆಯವರೆಗೂ ಹೇಳಬೇಕಿತ್ತು. ಆರ್ಕೆಸ್ಟ್ರಾದವರ ಹಿನ್ನೆಲೆ ವಾದ್ಯವೂ ಜತೆಗಿರುತ್ತಿತ್ತು. ಹೀಗೆ ಹಾಡುವಾಗ ಮಧ್ಯೆ ವಾದ್ಯದವರು ಅಥವಾ ಗಾಯಕರು ಚಿಕ್ಕದೊಂದು ತಪ್ಪು ಮಾಡಿದರೂ ಮತ್ತೆ ಮೊದಲಿಂದ ಹಾಡಲು ಶುರುಮಾಡಬೇಕಿತ್ತು. ಈ ಕಾರಣದಿಂದಲೇ ಆಗ ಬೆಳಗ್ಗೆ ೯ ರಿಂದ ಮಧ್ಯಾಹ್ನ ೧ರವರೆಗೆ ಒಂದು ಹಾಡು, ೩ ರಿಂದ ರಾತ್ರಿ ೯ರ ವರೆಗೆ ಇನ್ನೊಂದು ಹಾಡು- ಹೀಗೆ ದಿನಕ್ಕೆ ಎರಡು ಹಾಡುಗಳನ್ನು ಮಾತ್ರ ಹಾಡಿಸುತ್ತಿದ್ದರು. ಒಂದು ಹಾಡು ‘ಓ.ಕೆ. ಆಗಬೇಕಾದರೆ ಎಂಟು, ಹತ್ತು, ಹನ್ನೆರಡು ಟೇಕ್‌ಗಳೂ ಆಗುತ್ತಿದ್ದವು…
ಹಾಡುವ ಮುನ್ನ, ಎರಡೆರಡು ಬಾರಿ ಟ್ಯೂನ್ ಕೇಳಿಸಿಕೊಂಡೆ. (ವಿಜಯ ಭಾಸ್ಕರ್ ಅವರ ಸಂಗೀತದ ಇಂಪನ್ನು ವಿವರಿಸಲು ಕ್ಷಮಿಸಿ-ಪದಗಳಿಲ್ಲ.) ನಂತರ, ಆರ್.ಎನ್.ಜೆ.ಯವರ ಹಾಡನ್ನು ಮನದೊಳಗೇ ಓದಿಕೊಂಡೆ. ಪಲ್ಲವಿಯನ್ನು ಮುಗಿಸಿ, ಮೊದಲ ಚರಣಕ್ಕೆ ಬಂದೆ ನೋಡಿ, ತಕ್ಷಣವೇ ನಮ್ಮೂರು ಬಿಳಿಲುಕೊಪ್ಪ ನೆನಪಾಯಿತು. ಆಗ, ನಮ್ಮ ಮನೆಗೆ ತುಂಬ ಹತ್ತಿರದಲ್ಲೇ ಒಂದು ಮರವಿತ್ತು. ಅದಕ್ಕೆ ಹತ್ತಿರದಲ್ಲೇ ಒಂದು ಝರಿ. (ಇವು ಈಗಲೂ ಇವೆ) ಚಿಕ್ಕಂದಿನಲ್ಲಿ ನಾನು ಈ ಝರಿಯಲ್ಲಿ ಕಾಲುಗಳನ್ನು ಇಳಿಬಿಟ್ಟುಕೊಂಡು ವಾರಿಗೆಯ ಗೆಳತಿಯರೊಂದಿಗೆ ಆಟವಾಡುತ್ತಿದ್ದೆ. ಊರಿಗೆ ಹತ್ತಿರದಲ್ಲೇ ಹರಿಯುತ್ತಿದ್ದ ಚಿಕ್ಕ ನದಿಯನ್ನು ನೋಡುತ್ತಾ ಮೈಮರೆಯುತ್ತಿದ್ದೆ. ದೇವಾಲಯದಲ್ಲಿ ಪೂಜೆ ಶುರುವಾದರೆ ಸಾಕು, ಹೂಗಳೊಂದಿಗೆ ಅಲ್ಲಿಗೆ ಓಡಿ ಹೋಗುತ್ತಿದ್ದೆ. ಅಪ್ಪನ ಜತೆಯಲ್ಲಿ ನಿಂತು ಖುಷಿಯಿಂದ ನೆಗೆನೆಗೆದು ಗಂಟೆ ಹೊಡೆಯುತ್ತಿದ್ದೆ. ನಾನು ಒಂದೊಂದು ಸಾರಿ ಗಂಟೆ ಬಾರಿಸಿದಾಗಲೂ ದೇವಾಲಯದಲ್ಲಿದ್ದ ಮಂದಿ ಕಣ್ಮುಚ್ಚಿಕೊಂಡು ಧ್ಯಾನಿಸುತ್ತಿದ್ದರು. ದೇವರಿಗೆ ಕೈ ಮುಗಿಯುತ್ತಿದ್ದರು…
ಹಾಡಿನ ಸಾಲುಗಳ ಮೇಲೆ ಕಣ್ಣು ಹಾಯಿಸಿದ ತಕ್ಷಣವೇ ನನಗೆ ಇಷ್ಟೆಲ್ಲ ನೆನಪಾಗಿ ಬಿಡ್ತು. ಈ ಹಾಡು ಸಿನಿಮಾಕ್ಕಲ್ಲ, ನನಗೋಸ್ಕರ ಬರೆದಿರೋದು ಅನ್ನಿಸಿಬಿಡ್ತು. ಅದೇ ಕಾರಣದಿಂದ, ಒಂದೊಂದು ಪದವನ್ನೂ ಅನುಭವಿಸಿಕೊಂಡು ಹಾಡಿದೆ. ಹಾಡು, ಮನೆಮನೆಯ ಮಾತಾಯಿತು. ಕನ್ನಡದ ಮನೆಮನೆಯಲ್ಲೂ ನನಗೊಂದು ಜಾಗ ಕಲ್ಪಿಸಿತು… ಹೀಗೆ ಹೇಳುತ್ತ ಹೇಳುತ್ತ ಭಾವುಕರಾಗುತ್ತಾರೆ ಬಿ.ಕೆ. ಸುಮಿತ್ರಾ.
ಮುಗಿಸುವ ಮುನ್ನ ಇದನ್ನಿಷ್ಟು ಓದಿಬಿಡಿ: ಅರವತ್ತರ ದಶಕದಲ್ಲಿ ಕನ್ನಡ ಚಿತ್ರಗೀತೆಗಳು ಪ್ರಸಾರವಾಗುತ್ತಿದ್ದುದು ರೇಡಿಯೊ ಸಿಲೋನ್‌ನಲ್ಲಿ. ಆಗೆಲ್ಲ ನೋಟ್‌ಬುಕ್, ಪೆನ್ ಜತೆಗಿಟ್ಟುಕೊಂಡೇ ರೇಡಿಯೊ ಮುಂದೆ ಕೂರುತ್ತಿದ್ದರಂತೆ ಬಿ.ಕೆ. ಸುಮಿತ್ರಾ. ಹಾಡು ಶುರುವಾದ ತಕ್ಷಣ ಇವರು ಅವಸರದಲ್ಲಿಯೇ ಬರೆದುಕೊಳ್ಳಲು ಆರಂಭಿಸುತ್ತಿದ್ದರು. ಆದರೆ, ಇವರು ಮೂರು ಸಾಲು ಮುಗಿಸುವಷ್ಟರಲ್ಲಿ ಹಾಡು ಮುಗಿದಿರುತ್ತಿತ್ತಂತೆ. ಆಗ, ಮುಂದಿನ ವಾರದವರೆಗೂ ಕಾದಿದ್ದು, ಮತ್ತೆ ಅದೇ ಹಾಡು ಬಂದರೆ ಉಳಿದ ಭಾಗವನ್ನು ಬರೆದುಕೊಂಡು ಅಭ್ಯಾಸ ಮಾಡುತ್ತಿದ್ದರಂತೆ ಸುಮಿತ್ರಾ.
ಗಾನಯಾನದಲ್ಲಿ ಇಂಥ ಕಸರತ್ತು ಮಾಡಿದ್ದರಿಂದಲೇ ಕೋಗಿಲೆಯೂ ಅಸೂಯೆ ಪಡುವಂತೆ ಹಾಡಲಿಕ್ಕೆ ಸುಮಿತ್ರಾ ಅವರಿಗೆ ಸಾಧ್ಯವಾಯಿತು. ಸರಿತಾನೆ?

ಪ್ರಾರ್ಥನೆ

ಸೆಪ್ಟೆಂಬರ್ 25, 2010

kids prayer

ಬೆಂಗಳೂರಿನಲ್ಲಿ ಇರುವ ಜನಕ್ಕೆ ಕತ್ರಿಗುಪ್ಪೆ ಚೆನ್ನಾಗಿ ಗೊತ್ತು. ಕತ್ರಿಗುಪ್ಪೆ ಸಿಗ್ನಲ್‌ನಲ್ಲಿ ಇಳಿದು, ಫುಡ್‌ವರ್ಲ್ಡ್ ದಾಟಿದ್ರೆ ಸಿಗೋದೇ ಅನ್ನ ಕುಟೀರ ಹೋಟೆಲು. ಅದರ ಎದುರಿಗೆ ಬಿಗ್‌ಬಜಾರ್. ಅದೇ ರಸ್ತೇಲಿ ಮುಂದೆ ಹೋಗಿ ಮೊದಲು ಎಡಕ್ಕೆ ತಿರುಗಬೇಕು. ಹಾಗೇ ಐದು ನಿಮಿಷ ನಡೆದರೆ ಎರಡು ಸಂಪಿಗೆ ಮರಗಳು ಸಿಗುತ್ತವೆ. ಆ ಮರದ ಎದುರಿಗಿರೋದೇ ಹರೀಶ-ಭಾರತಿ ದಂಪತಿಯ ಮನೆ. ಡಬಲ್ ಬೆಡ್‌ರೂಂನ ಆ ಮನೆಗೆ ಎರಡು ಲಕ್ಷ ಅಡ್ವಾನ್ಸ್. ಎಂಟು ಸಾವಿರ ಬಾಡಿಗೆ.
ಭಾರತಿ-ಹರೀಶ್ ದಂಪತಿಗೆ ಒಂದು ಮುದ್ದಾದ ಮಗುವಿದೆ. ಅದರ ಹೆಸರು ಸ್ನೇಹಾ. ಹರೀಶನಿಗೆ ಒಂದು ಎಂಎನ್‌ಸಿಯಲ್ಲಿ ಕೆಲಸವಿದೆ. ಎಂಎನ್‌ಸಿ ಕೆಲಸ ಅಂದ ಮೇಲೆ ಹೇಳೋದೇನಿದೆ? ಆ ನೌಕರಿಯಲ್ಲಿ ಒಳ್ಳೆಯ ಸಂಬಳವೇನೋ ಇದೆ ನಿಜ. ಆದರೆ ಆ ದುಡಿಮೆಗೆ ಹೊತ್ತು-ಗೊತ್ತು ಎಂಬುದೇ ಇಲ್ಲ. ಶಿಫ್ಟ್ ಲಿಸ್ಟಿನ ಪ್ರಕಾರ ಬೆಳಗ್ಗೆ ೧೧ ರಿಂದ ಸಂಜೆ ಆರೂವರೆಯವರೆಗೂ ಕೆಲಸ ಅಂತ ಇದೆ ನಿಜ. ಆದರೆ ಹೆಚ್ಚಿನ ದಿನಗಳಲ್ಲಿ ಕೆಲಸ ಮುಗಿಯೋವಷ್ಟರಲ್ಲಿ ರಾತ್ರಿ ಎಂಟು ಗಂಟೆ ದಾಟಿರುತ್ತೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಆಫೀಸಿಂದ ಹೊರಟು ಹರೀಶ ಕತ್ರಿಗುಪ್ಪೆಯ ಮನೆ ತಲುಪಿಕೊಳ್ಳುವುದರೊಳಗೆ ರಾತ್ರಿ ಒಂಭತ್ತೂವರೆ ಆಗಿಬಿಡುತ್ತಿತ್ತು. ಶನಿವಾರ-ಭಾನುವಾರಗಳಂದು ಆಫೀಸಿನ ಗೆಳೆಯರೊಂದಿಗೆ ವೀಕೆಂಡ್ ಪಾರ್ಟಿಗೆಂದು ಆತ ಹಾರಿಬಿಡುತ್ತಿದ್ದ. ಆ ಎರಡು ದಿನಗಳಲ್ಲಿ ಆತ ಮನೆ ತಲುಪುತ್ತಿದ್ದುದು ರಾತ್ರಿ ಹನ್ನೊಂದು, ಹನ್ನೊಂದೂವರೆಗೆ!
ಬೆಳಗ್ಗೆ ಒಂಭತ್ತು ಗಂಟೆಗೆಲ್ಲ ಗಂಡ-ಮಗಳು ಮನೆಯಿಂದ ಹೊರಟುಬಿಡುತ್ತಿದ್ದರು. ಆನಂತರ ಇಡೀ ದಿನ ಮನೇಲಿ ನಾನೊಬ್ಬಳೇ ಎನ್ನಿಸಿದಾಗ ಭಾರತಿಗೆ ಬೋರ್ ಎನ್ನಿಸತೊಡಗಿತು. ಅವಳಾದರೂ ಇಂಗ್ಲಿಷಿನಲ್ಲಿ ಎಂ.ಎ. ಮಾಡಿಕೊಂಡಿದ್ದವಳು. ಇಡೀ ದಿನ ಮನೇಲಿರುವ ಬದಲು ಯಾವುದಾದರೂ ಸ್ಕೂಲ್‌ನಲ್ಲಿ ಟೀಚರ್ ಆಗಿ ಸೇರಬಾರದೇಕೆ ಅಂದುಕೊಂಡಳು. ಅವಳ ಅದೃಷ್ಟಕ್ಕೆ, ಅದೇ ವೇಳೆಗೆ ಸ್ನೇಹಾ ಓದುತ್ತಿದ್ದ ಶಾಲೆಯಲ್ಲಿ ಶಿಕ್ಷಕಿಯರ ಕೊರತೆ ಇದೆ ಎಂಬ ವಿಷಯವೂ ಗೊತ್ತಾಯಿತು. ಒಮ್ಮೆ ಪ್ರಯತ್ನಿಸಿ ನೋಡೋಣ. ಕೆಲಸ ಸಿಕ್ಕಿಬಿಟ್ಟರೆ ಹೋಗೋದು. ಇಲ್ಲವಾದರೆ, ಒಂದು ಸಂದರ್ಶನ ಎದುರಿಸಿದ ಅನುಭವವಂತೂ ಆಗುತ್ತದೆ ಎಂದುಕೊಂಡು ಅರ್ಜಿ ಹಾಕಿಯೇಬಿಟ್ಟಳು ಭಾರತಿ. ಹದಿನೈದೇ ದಿನಗಳಲ್ಲಿ ಆ ಕಡೆಯಿಂದ ಉತ್ತರ ಬಂತು : ‘ಸಹ ಶಿಕ್ಷಕಿಯಾಗಿ ನಿಮ್ಮನ್ನು ನೌಕರಿಗೆ ತೆಗೆದುಕೊಳ್ಳಲಾಗಿದೆ. ಅಭಿನಂದನೆ…’
ಹೆಂಡತಿ ಕೆಲಸಕ್ಕೆ ಹೊರಟು ನಿಂತಾಗ ಹರೀಶ ಎಗರಾಡಿದ. ತಕ್ಷಣವೇ ಭಾರತಿ ಹೇಳಿದಳು : ‘ಯೋಚನೆ ಮಾಡಿ ಹರೀ. ಬೆಳಗ್ಗಿಂದ ಸಂಜೆಯ ತನಕ ಮನೇಲಿ ನಾನೊಬ್ಳೇ ಇರಬೇಕು. ಅದರ ಬದಲು ಟೀಚರ್ ಆಗಿ ಕೆಲಸ ಮಾಡಿದ್ರೆ ತಪ್ಪೇನು? ನಾನು ಹೋಗ್ತಿರೋದು ಮಗು ಓದ್ತಾ ಇರೋ ಸ್ಕೂಲೇ ತಾನೆ? ಇದರಿಂದ ಅವಳಿಗೂ ಒಂದು ಕಂಫರ್ಟ್ ಸಿಕ್ಕ ಹಾಗಾಯ್ತು. ಇನ್ನು ಮುಂದೆ ಪ್ರತಿ ತಿಂಗಳೂ ನಾನೂ ಒಂದಿಷ್ಟು ದುಡ್ಡು ಉಳಿಸ್ತೀನಿ. ಒಂದೈದು ವರ್ಷ ನಾವಿಬ್ರೂ ಕಷ್ಟಪಟ್ಟು ಎಷ್ಟು ಸಾಧ್ಯವೋ ಅಷ್ಟು ಉಳಿಸೋಣ. ಎಲ್ಲವನ್ನೂ ಮರೆತು ದುಡಿಯೋಣ. ಹಾಗೆ ಮಾಡಿದ್ರೆ ಆರನೇ ವರ್ಷದ ಹೊತ್ತಿಗೆ ನಾವೂ ಒಂದು ಸ್ವಂತ ಮನೆ ಮಾಡ್ಕೋಬಹುದೋ ಏನೋ…
ಹೆಂಡತಿಯ ಕಡೆ ಕಡೆಯ ಮಾತುಗಳು ಹರೀಶನಿಗೆ ತುಂಬ ಇಷ್ಟವಾದವು. ತಿಂಗಳು ತಿಂಗಳೂ ನಾನೂ ಒಂದಿಷ್ಟು ದುಡ್ಡು ಉಳಿಸ್ತೀನಿ ಅಂದಳಲ್ಲ? ಅದೊಂದೇ ಕಾರಣದಿಂದ ಅವಳನ್ನು ಕೆಲಸಕ್ಕೆ ಕಳುಹಿಸಲು ಒಪ್ಪಿಕೊಂಡ.
************************
‘ಮಿಸ್ ಭಾರತೀ, ಬನ್ನಿ ಕೂತ್ಕೊಳ್ಳಿ. ನಿಮ್ಗೆ ಒಂದಿಷ್ಟು ಹೆಚ್ಚುವರಿ ಕೆಲ್ಸ ಕೊಡ್ತಾ ಇದೀನಿ. ಐದನೇ ತರಗತಿಗೆ ಕನ್ನಡ ತಗೋತಾರಲ್ಲ? ಅವರಿಗೆ ಚಿಕೂನ್‌ಗುನ್ಯಾ ಅಂತೆ. ಹಾಗಾಗಿ ಅವರು ಒಂದು ವಾರ ರಜೇಲಿದ್ದಾರೆ. ಹೇಗಿದ್ರೂ ನಿಮ್ದು ಎಂ.ಎ. ಇಂಗ್ಲಿಷ್ ತಾನೆ? ಹಾಗಾಗಿ ಒಂದು ವಾರದ ಮಟ್ಟಿಗೆ ಕನ್ನಡ ಪಾಠ ಮಾಡೋದು ನಿಮ್ಗೆ ಕಷ್ಟ ಆಗೋದಿಲ್ಲ ಅನ್ಕೋತೀನಿ. ಈಗ ಮೊದಲು ಒಂದು ಕೆಲ್ಸ ಮಾಡಿ. ಮಂತ್ಲೀ ಟೆಸ್ಟ್‌ದು ಆನ್ಸರ್ ಶೀಟ್‌ಗಳಿವೆ ಇಲ್ಲಿ. ಅದನ್ನು ಚೆಕ್ ಮಾಡಿ, ಮಾರ್ಕ್ಸ್ ಕೊಡಿ. ಈ ವಾರದ ಕೊನೆಯಲ್ಲಿ ಪೇರೆಂಟ್-ಟೀಚರ್ ಮೀಟಿಂಗ್ ಇರೋದ್ರಿಂದ ಈ ಕೆಲಸ ಅರ್ಜೆಂಟಾಗಿ ಆಗಲೇಬೇಕು. ನನಗೆ ನಿಮ್ಮ ಬಗ್ಗೆ, ನಿಮ್ಮ ಕೆಲಸದ ಬಗ್ಗೆ ನಂಬಿಕೆಯಿದೆ. ಈ ಉತ್ತರ ಪತ್ರಿಕೆಗಳನ್ನು ಮನೆಗೇ ತಗೊಂಡು ಹೋಗಿ ವ್ಯಾಲ್ಯುಯೇಷನ್ ಮಾಡ್ಕೊಂಡು ಬನ್ನಿ ಪರ್ವಾಗಿಲ್ಲ…’ ಹೆಡ್‌ಮೇಡಂ ಹೀಗೆ ಹೇಳಿದಾಗ ‘ಸರಿ ಮೇಡಂ’ ಎಂದಷ್ಟೇ ಹೇಳಿ ಸಮ್ಮತಿಸಿದಳು ಭಾರತಿ.
ಕೆಲಸಕ್ಕೆ ಸೇರಿಕೊಂಡ ನಾಲ್ಕೇ ತಿಂಗಳಲ್ಲಿ ಹೀಗೊಂದು ಹೊಸ ಜವಾಬ್ದಾರಿ ಹೆಗಲೇರಿದ್ದು ಕಂಡು ಭಾರತಿಗೆ ಖುಷಿಯಾಗಿತ್ತು. ಉತ್ತರ ಪತ್ರಿಕೆಗಳನ್ನು ಬಂಡಲ್ ಥರಾ ಕಟ್ಟಿಕೊಂಡು ಬ್ಯಾಗ್‌ನೊಳಗೆ ಇಟ್ಟುಕೊಂಡಳು. ಹೊಸದಾಗಿ ಸೇರಿದ್ದ ಕೆಲಸ ತಾನೆ? ಹಾಗಾಗಿಯೇ, ಪ್ರಶ್ನೆಗಳು ಹೇಗಿವೆ ಎಂಬುದನ್ನು ಇಲ್ಲಿಯೇ ನೋಡಿಬಿಡೋಣ ಎಂಬ ಕುತೂಹಲ ಅವಳದು. ಈ ಕಾರಣದಿಂದಲೇ ಒಮ್ಮೆ ಪ್ರಶ್ನೆ ಪತ್ರಿಕೆಯತ್ತ ಕಣ್ಣು ಹಾಯಿಸಿದಳು ಭಾರತಿ. ಅಲ್ಲಿದ್ದ ಒಂದು ಪ್ರಶ್ನೆ ಅವಳಿಗೆ ಬಹಳ ಇಷ್ಟವಾಯಿತು : ‘ದೇವರಲ್ಲಿ ನನ್ನ ಬೇಡಿಕೆ’ ಎಂಬ ವಿಷಯವಾಗಿ ಪ್ರಬಂಧ ಬರೆಯಿರಿ ಎಂಬುದೇ ಆ ಪ್ರಶ್ನೆ. ಇದಕ್ಕೆ ಉತ್ತರವಾಗಿ ಮಕ್ಕಳು ಏನೇನು ಬರೆದಿರಬಹುದೋ ನೋಡೋಣ ಎಂದುಕೊಂಡೇ ಮನೆ ತಲುಪಿದಳು ಭಾರತಿ.
ಒಂದೆರಡು ಸೀರಿಯಲ್ ನೋಡಿಕೊಂಡೇ ಅಡುಗೆ ಕೆಲಸ ಮುಗಿಸುವುದರೊಳಗೆ ಒಂಭತ್ತೂವರೆ ಆಗಿಹೋಯಿತು. ಮಗಳು ಆಗಲೇ ತೂಕಡಿಸುತ್ತಿದ್ದಳು. ಅವಳಿಗೆ ಊಟ ಮಾಡಿಸಿ ಮಲಗಿಸಿ ಉತ್ತರ ಪತ್ರಿಕೆಗಳ ಮುಂದೆ ಕೂತಳು ಭಾರತಿ. ಅದೇ ಸಂದರ್ಭಕ್ಕೆ ಹರೀಶನೂ ಬಂದ. ಅವನಿಗೆ ಸಂಕ್ಷಿಪ್ತವಾಗಿ ವಿಷಯ ತಿಳಿಸಿದಳು. ‘ಸರಿ ಬಿಡು. ನಾನೇ ಹಾಕ್ಕೊಂಡು ಊಟ ಮಾಡ್ತೇನೆ. ನೀನು ಕೆಲ್ಸ ಮುಗಿಸು’ ಎಂದ ಹರೀಶ.
ಮೊದಲ ಆರು ಉತ್ತರ ಪತ್ರಿಕೆಗಳಲ್ಲಿ ಅಂಥ ವಿಶೇಷವೇನೂ ಕಾಣಿಸಲಿಲ್ಲ. ಆದರೆ, ಏಳನೇ ಉತ್ತರ ಪತ್ರಿಕೆ ತಗೊಂಡಳಲ್ಲ, ಆ ನಂತರದಲ್ಲಿ ಅವಳು ಒಂದರ್ಥದಲ್ಲಿ ಮೈಮರೆತಳು. ಒಂದೊಂದೇ ಸಾಲು ಓದುತ್ತಾ ಹೋದಂತೆ ಅವಳ ಮುಖ ಕಳೆಗುಂದಿತು. ಕಂಗಳಲ್ಲಿ ನೀರು ತುಂಬಿಕೊಂಡಿತು. ಒಂದೆರಡು ಹನಿಗಳು ಪೈಪೋಟಿಗೆ ಬಿದ್ದಂತೆ ಕೆನ್ನೆ ಮೇಲಿಂದ ಜಾರಿ ಉತ್ತರ ಪತ್ರಿಕೆಯ ಮೇಲೆ ಬಿದ್ದು ಟಪ್ ಟಪ್ ಎಂದು ಸದ್ದು ಮಾಡಿದವು.
ಹೆಂಡತಿಯ ಈ ವರ್ತನೆಯಿಂದ ಹರೀಶ ಪೆಚ್ಚಾದ. ಸರಸರನೆ ಊಟ ಮುಗಿಸಿ, ಕೈ ತೊಳೆದು ಬಂದವನೇ- ‘ಯಾಕೇ ಭಾರ್‍ತಿ, ಏನಾಯ್ತು? ಯಾಕೆ ಅಳ್ತಾ ಇದೀಯ? ಪೇಪರ್ ನೋಡಿ ನೋಡಿ ಕಣ್ಣು ಉರಿಬಂತಾ?’ ಎಂದು ವಿಚಾರಿಸಿದ.
ಅವನ ಮಾತು ಕೇಳಿಸಲೇ ಇಲ್ಲ ಎಂಬಂತೆ- ‘ಒಂದು ಮಗು ಬರೆದಿರೋ ಪ್ರಬಂಧ ಇದು. ಓದಿ’ ಎಂದಳು ಭಾರತಿ. ಆ ಪ್ರಬಂಧದಲ್ಲಿ ಆ ಮಗುವಿನ ಮಾತು ಹೀಗಿತ್ತು : ‘ಕಾಣದ ದೇವರೇ, ನಿನಗೆ ನಮಸ್ಕಾರ. ನಾನು ನಿನ್ನಲ್ಲೊಂದು ವಿಚಿತ್ರವಾದ ಬೇಡಿಕೆ ಇಡ್ತಾ ಇದೀನಿ. ಏನ್ ಗೊತ್ತಾ? ದಯವಿಟ್ಟು ನನ್ನನ್ನು ಒಂದು ಟಿವಿಯನ್ನಾಗಿ ಮಾಡಿಬಿಡು! ಪ್ಲೀಸ್, ನಮ್ಮ ಮನೇಲಿ ಟೀವಿ ಇದೆಯಲ್ಲ? ಆ ಜಾಗದಲ್ಲಿ ನಾನಿರಬೇಕು. ನಮ್ಮ ಮನೇಲಿ ಟಿವಿಗೆ ಅಂತ ಒಂದು ಜಾಗ ಇದೆ. ಅದೇ ಥರ ನನಗೂ ಒಂದು ಜಾಗ ಕೊಡು ದೇವ್ರೇ, ಪ್ಲೀಸ್…
… ನಮ್ಮ ಮನೇಲಿರೋದು ಮೂರೇ ಜನ. ನಾನು, ಪಪ್ಪ, ಮಮ್ಮಿ… ಪಪ್ಪ ಬೆಳಗ್ಗೇನೆ ಕೆಲಸಕ್ಕೆ ಹೋಗಿಬಿಡ್ತಾರೆ. ಅಮ್ಮನೂ ಅಷ್ಟೆ. ನಾನು ಸಂಜೆ ಸ್ಕೂಲಿಂದ ಬರ್‍ತೀನಲ್ಲ? ಬಂದ ತಕ್ಷಣ- ‘ಹೋಂವರ್ಕ್ ಎಲ್ಲಾ ಮುಗಿಸೇ’ ಅಂತಾರೆ ಅಮ್ಮ. ಎಲ್ಲಾ ಮುಗಿಸಿ, ಆಸೆಯಿಂದ ಓಡಿ ಹೋಗಿ ಕುತ್ತಿಗೇಗೆ ಜೋತುಬಿದ್ರೆ ‘ಅಯ್ಯೋ, ದನ ಬಿದ್ದ ಹಾಗೆ ಮೇಲೆ ಬೀಳ್ತೀಯಲ್ಲೆ? ಅಲ್ಲೇ ನಿಂತ್ಕೊಂಡು ಮಾತಾಡು. ಯಾಕೆ ಹಾಗೆ ಮೈಮೇಲೆ ಬೀಳ್ತೀಯ. ನೀನೇನು ಎಳೇ ಮಗುವಾ?’ ಅಂತಾರೆ. ಯಾವತ್ತಾದ್ರೂ ಒಂದು ದಿನ ‘ಅಮ್ಮಾ, ಸ್ವಲ್ಪ ತಲೆ ನೋಯ್ತಿದೆ’ ಅಂದರೆ- ‘ಓದಬೇಕಾಗ್ತದೆ ಅಂತ ನಾಟಕ ಆಡ್ತಾ ಇದೀಯ’ ಅಂತ ರೇಗ್ತಾರೆ. ‘ಸ್ಕೂಲಲ್ಲಿ ನಿನಗಿಂತ ಚೆನ್ನಾಗಿ ಓದೋರು ಎಂಟು ಜನ ಇದ್ದಾರಂತೆ. ಅವರನ್ನೆಲ್ಲ ಹಿಂದೆ ಹಾಕ್ತೀಯ ನೋಡು, ಅವತ್ತು ನನ್ನ ಹತ್ರ ಬಂದು ಎಷ್ಟು ಬೇಕೋ ಅಷ್ಟು ಮಾತಾಡು, ಮುದ್ದು ಮಾಡು’ ಅಂತಾರೆ. ಯಾವಾಗಲಾದ್ರೂ ಒಂದೈದು ದಿನ ಜ್ವರ ಬಂದು ಮಲಗಿಬಿಟ್ರೆ; ಶೀತ ಆಗಿ ಕೆಮ್ಮು ಶುರುವಾದ್ರೆ- ‘ಆವಾಗವಾಗ ಏನಾದ್ರೂ ಒಂದು ಕಾಯ್ಲೆ ಇದ್ದೇ ಇರ್‍ತದಲ್ಲ ನಿಂಗೆ? ನಮ್ಗೆ ಒಳ್ಳೇ ಪ್ರಾಣ ಸಂಕಟ. ಇದೆಲ್ಲ ಯಾವ ಜನ್ಮದ ಕರ್ಮಾನೋ…’ ಅಂದು ರೇಗಿಬಿಡ್ತಾರೆ…
ಈಗ ಅಪ್ಪನ ವಿಷ್ಯಕ್ಕೆ ಬರ್‍ತೀನಿ. ಬೆಳಗ್ಗೆ ನಾನು ಪೇಸ್ಟ್ ಮಾಡಿ ಬೋರ್ನ್ ವಿಟಾ ಕುಡಿಯೋ ಹೊತ್ತಿಗೆ ಅಪ್ಪ ರೆಡಿಯಾಗಿರ್‍ತಾರೆ. ಲ್ಯಾಪ್‌ಟಾಪಲ್ಲಿ ಮುಳುಗಿಹೋಗಿರ್‍ತಾರೆ. ಅವರದು ಯಾವಾಗ್ಲೂ ಗಡಿಬಿಡೀನೆ. ಅಪ್ಪನ ಜತೆ ಆಟ ಆಡಬೇಕು, ಅವರ ಹತ್ರ ಕತೆ ಹೇಳಿಸ್ಕೋಬೇಕು. ಲೆಕ್ಕ ಹೇಳಿಸ್ಕೋಬೇಕು ಅಂತೆಲ್ಲ ತುಂಬಾ ಆಸೆ ನಂಗೆ. ಆದ್ರೆ ಅದಕ್ಕೆಲ್ಲ ಅವಕಾಶಾನೇ ಇಲ್ಲ. ಅಪ್ಪ, ಒಂದ್ಸಲಾನೂ ನನ್ನ ನೋಟ್ಸ್ ನೋಡಿಲ್ಲ. ರಾತ್ರಿ ಆಪ್ಪನ ಹತ್ರ ಹೋದ್ರೆ ಸಾಕು- ‘ನಂಗೆ ಸುಸ್ತಾಗಿದೆ. ತಲೆ ಸಿಡೀತಾ ಇದೆ. ನೀನು ಮತ್ತೆ ತಲೆ ಕೆಡಿಸಬೇಡಿ. ಏನಿದ್ರು ಅಮ್ಮಂಗೆ ಹೇಳು. ಈಗ ಮಲ್ಕೋ ಹೋಗು’ ಎಂದು ಗದರಿಸಿಬಿಡ್ತಾರೆ ಪಪ್ಪ. ಅದಕ್ಕೇ ನನ್ನನ್ನು ಟಿವಿಯನ್ನಾಗಿ ಮಾಡಿಬಿಡು, ಪ್ಲೀಸ್.
ಯಾಕೆ ಗೊತ್ತ? ಎಷ್ಟೇ ಸುಸ್ತಾಗಿದ್ರೂ, ಜ್ವರ ಬಂದಿದ್ರೂ ಕೂಡ ಅಪ್ಪ, ಮನೆಗೆ ಬಂದ ತಕ್ಷಣ ಟಿವಿ ಹಾಕ್ತಾರೆ. ಆನಂತರ ಟಿವಿ ನೋಡ್ತಾ ನೋಡ್ತಾ ತಮ್ಮಷ್ಟಕ್ಕೆ ತಾವೇ ನಗ್ತಾರೆ, ಮಾತಾಡ್ತಾರೆ. ಹಾಡು ಹೇಳ್ತಾರೆ. ಮಧ್ಯೆ ಮಧ್ಯೆ ನಮ್ಮ ಟೀವಿ ಎಷ್ಟೊಂದು ಚೆನ್ನಾಗಿ ಬರ್‍ತಿದೆ ಅಲ್ವಾ? ಅನ್ನುತ್ತಾರೆ. ಅದನ್ನು ದಿನಕ್ಕೆ ಎರಡು ಬಾರಿ ಒರೆಸ್ತಾರೆ. ಒಂದು ವೇಳೆ ಅದು ಕೆಟ್ಟು ಹೋದ್ರೆ ಐದಾರು ಜನಕ್ಕೆ ಫೋನ್ ಮಾಡಿ ತಕ್ಷಣವೇ ರಿಪೇರಿ ಮಾಡಿಸ್ತಾರೆ. ಆನಂತರ ಮತ್ತೆ ಟಿವಿ ಹಾಕ್ಕೊಂಡು ತಮ್ಮಷ್ಟಕ್ಕೆ ತಾವೇ ಮಾತಾಡ್ತಾ, ಹಾಡು ಕೇಳ್ತಾ ಉಳಿದುಬಿಡ್ತಾರೆ….
ಅಮ್ಮ ಕೂಡ ಅಷ್ಟೆ. ಪಾತ್ರೆ ತೊಳೆಯುವಾಗ, ಅಡುಗೆ ಮಾಡುವಾಗ, ಕಸ ಗುಡಿಸುವಾಗ, ಫೋನ್ ಮಾಡುವಾಗ ಕೂಡ ಅವಳ ಕಣ್ಣು ಟಿವಿ ಕಡೆಗೇ ಇರ್‍ತದೆ. ಒಂದೇ ಮಾತಲ್ಲಿ ಹೇಳಬೇಕು ಅಂದ್ರೆ- ಟೀವಿ ಜತೆ ಅಪ್ಪನಿಗಿದೆಯಲ್ಲ? ಅದಕ್ಕಿಂತ ಹೆಚ್ಚಿನ ಅಟ್ಯಾಚ್‌ಮೆಂಟ್ ಅಮ್ಮನಿಗಿದೆ!
ಅದಕ್ಕೆ ದೇವ್ರೇ, ಪ್ಲೀಸ್, ನನ್ನನ್ನು ಟಿವಿಯನ್ನಾಗಿ ಮಾಡಿಬಿಡು. ನಮ್ಮ ಅಪ್ಪ-ಅಮ್ಮ, ಇಬ್ರೂ ಸಂತೋಷ-ಬೇಸರದ ಸಂದರ್ಭದಲ್ಲೆಲ್ಲ ನನ್ನ ಮುಂದೇನೇ ಕೂತಿರ್ಬೇಕು. ನನ್ನ ಮಾತನ್ನು ಅವರು ಆಸಕ್ತಿಯಿಂದ ಕೇಳಬೇಕು. ನಾನು ಈ ಮನೆಯ ಆಸಕ್ತಿಯ ಕೇಂದ್ರಬಿಂದು ಆಗಬೇಕು. ಆಮೇಲೆ ನಮ್ಮ ಮನೆಯ ಜನ ಪ್ರಶ್ನೆ ಮಾಡದೆ, ಅಡ್ಡಿ ಮಾಡದೆ, ರೇಗದೆ ನನ್ನ ಮಾತು ಕೇಳಿಸ್ಕೋಬೇಕು. ಟಿವಿ ಕೆಟ್ಟು ಹೋದಾಗ ಅದನ್ನು ಎಷ್ಟು ಜೋಪಾನ ಮಾಡ್ತಾರೋ ಅಷ್ಟೇ ಕಾಳಜಿಯನ್ನು ನನ್ನ ವಿಷಯದಲ್ಲೂ ತಗೋಬೇಕು. ಅಮ್ಮ, ತನ್ನ ನೋವನ್ನೆಲ್ಲ ಮರೆಯೋದಕ್ಕೆ ನನ್ನನ್ನು ಉಪಯೋಗಿಸಬೇಕು. ನನ್ನ ಜತೇಲಿರೋದಕ್ಕೋಸ್ಕರ ಎಲ್ರೂ ತಮ್ಮ ಕೆಲಸ ಮರೆತು ಬರ್‍ತಾರೆ ಅಂತ ನಂಗೆ ಅನ್ನಿಸಬೇಕು. ಎಲ್ಲರೂ ನನ್ನ ಮಾತಿಂದ, ಹಾಡಿಂದ, ಆಟದಿಂದ ಖುಷಿ ಪಡಬೇಕು. ಹೌದು ದೇವ್ರೆ, ಇದಿಷ್ಟೂ ನನ್ನ ಪ್ರೀತಿಯ ಕೋರಿಕೆ. ಪ್ಲೀಸ್, ನನ್ನನ್ನು ಒಂದು ಟಿವಿಯನ್ನಾಗಿ ಮಾಡಿಬಿಡು. ನಾನಿರಬೇಕಾದ ಜಾಗದಲ್ಲಿ ಈಗ ಟಿವಿ ಇದೆ…’
***************************
ಇದಿಷ್ಟನ್ನೂ ಓದಿ ಮುಗಿಸಿದ ಹರೀಶ- ‘ಛೀ, ಈ ಮಗುವಿನ ಪೇರೆಂಟ್ಸ್ ಎಷ್ಟೊಂದು ಕ್ರೂರಿಗಳು ಅಲ್ವಾ? ಇರೋ ಒಂದು ಮಗೂನ ಸರಿಯಾಗಿ ನೋಡಿಕೊಳ್ದೇ ಇರೋರು…’ ಎಂದ.
ಭಾರತಿ, ಗಂಡನನ್ನೇ ಅನುಕಂಪದಿಂದ ನೋಡುತ್ತ ಸಂಕಟದಿಂದ ಹೇಳಿದಳು : ‘ಈ ಪ್ರಬಂಧ ಬರೆದಿರೋದು ನಮ್ಮ ಮಗಳು ಕಣ್ರೀ…’
****************************
ಕೆಲಸ, ಸಂಪಾದನೆ, ಪ್ರೊಮೋಷನ್, ಪಾರ್ಟಿ… ಇತ್ಯಾದಿ ಗದ್ದಲದಲ್ಲಿ ಮುಳುಗಿ ಹೋಗಿ ಮಕ್ಕಳನ್ನು ಸುಖ-ದುಃಖ ವಿಚಾರಿಸಲು ಮರೆತ ಎಲ್ಲ ಪೋಷಕರಿಗೆ ಪ್ರೀತಿಯಿಂದ – ಈ ಬರಹ.

‘ನಾದಮಯ…’ ಹಾಡಿನ ವೇಳೆಯಲ್ಲಿ ನಿರ್ದೇಶಕರಿಗೇ ನಿರ್ದೇಶನ ಮಾಡಿದ್ದರು ರಾಜ್!

ಏಪ್ರಿಲ್ 24, 2010

ನಾದಮಯ ಈ ಲೋಕವೆಲ್ಲಾ….

ಚಿತ್ರ: ಜೀವನ ಚೈತ್ರ. ಗೀತೆರಚನೆ:  ಚಿ. ಉದಯ ಶಂಕರ್.

ಸಂಗೀತ: ಎಂ. ರಂಗರಾವ್. ಗಾಯನ: ಡಾ. ರಾಜ್‌ಕುಮಾರ್

ನಾದಮಯ….

ನಾದಮಯ ಈ ಲೋಕವೆಲ್ಲಾ

ಕೊಳಲಿಂದ ಗೋವಿಂದ ಆನಂದ ತಂದಿರಲು

ನದಿಯ ನೀರು ಮುಗಿಲ ಸಾಲು

ಮುರಳಿಯ ಸ್ವರದಿ ಬೆರೆತು ಚಲನೆ ಮರೆತು ನಿಂತಿರಲು

ನಾದಮಯ…

ನಾದಮಯ ಈ ಲೋಕವೆಲ್ಲಾ         ||ಪ||

ಸ್ವರಗಳ ಮಾಧುರ್ಯ ರಾಗದ ಸೌಂದರ್ಯ

ಮೃಗಗಳ ತಣಿಸೆ ಖಗಗಳ ಕುಣಿಸೆ

ಸಡಗರದಿಂದಾ ಗಗನದ ಅಂಚಿಂದ

ಆ….ಆ….ಆ….ಆ…

ಸಡಗರದಿಂದಾ ಗಗನದ ಅಂಚಿಂದ

ಸುರರು ಬಂದು ಹರಿಯ ಕಂಡು ಹರುಷದಿ

ಭುವಿಯೆ ಸ್ವರ್ಗ ಭುವಿಯೆ ಸ್ವರ್ಗ ಎನುತಿರಲು

ನಾದಮಯ ಈ ಲೋಕವೆಲ್ಲಾ

ಕೊಳಲಿಂದ ಗೋವಿಂದ ಆನಂದ ತಂದಿರಲು ||೧||

(ಸ್ವರಗಳು…)

ಸಂಗೀತದ ಪ್ರಾಥಮಿಕ ಜ್ಞಾನ ಇಲ್ಲದವರೂ ಸಹ ತಾಳ ಹಾಕುವಂತೆ, ತಲೆದೂಗುವಂತೆ, ಹಾಡಿನ ಸೊಗಸಿಗೆ ಬೆರಗಾಗುವಂತೆ, ರಾಗದ ಇಂಪಿಗೆ ಮರುಳಾಗುವಂತೆ, ಗಾನ ವೈಭವಕ್ಕೆ ಮನಸೋಲುವಂತೆ, ಕಾಲಿಲ್ಲದವರೂ ಕುಣಿಯಲು ಮುಂದಾಗುವಂತೆ ಮಾಡಿದ ಗೀತೆ- ‘ನಾದಮಯಾ ಈ ಲೋಕವೆಲ್ಲಾ…’

ಸಂಗೀತ ಕ್ಷೇತ್ರದ ಅಷ್ಟೂ ಸೊಬಗನ್ನೂ ಅರಗಿಸಿಕೊಂಡಿರುವ ಈ ಹಾಡು ‘ಜೀವನ ಚೈತ್ರ’ ಚಿತ್ರದ್ದು. ಕೇಂದ್ರ ಸರಕಾರ ಕೊಡಮಾಡುವ ಶ್ರೇಷ್ಠ ಹಿನ್ನೆಲೆಗಾಯಕ ಪ್ರಶಸ್ತಿಯನ್ನು ವರನಟ ಡಾ. ರಾಜ್‌ಕುಮಾರ್ ಅವರಿಗೆ ತಂದುಕೊಟ್ಟಿದ್ದು ಈ ಹಾಡಿನ ಹೆಚ್ಚುಗಾರಿಕೆ. ೧೯೯೨ರಲ್ಲಿ ‘ಜೀವನ ಚೈತ್ರ’ ಬಿಡುಗಡೆಯಾಯಿತಲ್ಲ? ಆನಂತರದ ದಿನಗಳಲ್ಲಿ ಈ ಹಾಡು ಎಷ್ಟೊಂದು ಪಾಪ್ಯುಲರ್ ಆಗಿಹೋಯ್ತು ಅಂದರೆ- ಈ ಹಾಡು ಹೇಳಲೆಂದೇ, ಈ ಒಂದು ಸನ್ನಿವೇಶವನ್ನು ನೋಡಲೆಂದೇ ಜನ ಚಿತ್ರಮಂದಿರಕ್ಕೆ ಧಾವಿಸಿಬರುತ್ತಿದ್ದರು. ಈಗಲೂ ‘ಜೀವನ ಚೈತ್ರ’ ಅಂದರೆ ಹೆಚ್ಚಿನವರಿಗೆ ನೆನಪಾಗುವುದು ‘ನಾದಮಯ’ ಹಾಡೇ…

ಯಾರೂ  ನಂಬಲಾಗದಂಥ ಸತ್ಯವೊಂದಿದೆ. ಕೇಳಿ. ಏನೆಂದರೆ-  ‘ನಾದಮಯ ಈ ಲೋಕವೆಲ್ಲಾ’ ಹಾಡು ಜೀವನ ಚೈತ್ರ ಚಿತ್ರಕ್ಕೆಂದು ಬರೆಸಿದ್ದಲ್ಲ! ಅದು ಬೇರೊಂದು ಚಿತ್ರಕ್ಕೆ ಬರೆಸಿದ್ದ ಹಾಡು. ‘ಜೀವನ ಚೈತ್ರ’ ಸಿನಿಮಾ ತಯಾರಿ ಆರಂಭವಾಯ್ತಲ್ಲ, ಅದಕ್ಕೂ ಎಂಟು ವರ್ಷ ಹಿಂದೆಯೇ ಬರೆಸಿದ್ದ ಹಾಡಿದು ಎಂದರೆ ನಂಬುತ್ತೀರಾ?

ನಂಬಲೇಬೇಕು. ಏಕೆಂದರೆ ಅದು ನಿಜ!

ಅಂದ ಹಾಗೆ, ಬೇರೊಂದು ಚಿತ್ರಕ್ಕೆ ಬರೆಸಿದ್ದ  ಈ ಹಾಡು ‘ಜೀವನ ಚೈತ್ರ’ಕ್ಕೆ ಪ್ರವೇಶ  ಪಡೆದದ್ದೂ ಆಕಸ್ಮಿಕವಾಗಿಯೇ. ಅದನ್ನು ವಿವರವಾಗಿ ಹೇಳಿದವರು ಜೀವನ ಚೈತ್ರ ಚಿತ್ರದ ನಿರ್ದೇಶಕರಲ್ಲಿ ಒಬ್ಬರಾದ ಭಗವಾನ್. ಈ ಹಾಡು ‘ಅಲ್ಲಿಂದ ಇಲ್ಲಿಗೆ’ ಬಂದ ಕಥೆಯನ್ನು ತಿಳಿಯುವ ಮೊದಲು ‘ಜೀವನ ಚೈತ್ರ’ದಲ್ಲಿ ಯಾವ ಸಂದರ್ಭದಲ್ಲಿ ಈ ನಾದದ ಝರಿಯಂಥ ಹಾಡು ಅರಳಿಕೊಳ್ಳುತ್ತದೆ ಎಂಬುದನ್ನು ನೆನಪಿಸಿಕೊಳ್ಳೋಣ…

***

ಅದು-‘ಮೇಡ್ ಫಾರ್ ಈಚ್ ಅದರ್’ ಅಂತಾರಲ್ಲ? ಅಂಥ ಜೋಡಿ. ಅವನಿಗೆ ಅವಳೇ ಜೀವ. ಅವಳಿಗೋ ಅವನೇ ದೈವ! ಇಂತಿಪ್ಪ ದಂಪತಿಗೆ ಮೂವರು ಮುದ್ದು ಮಕ್ಕಳು. ಎಲ್ಲ ತಾಯ್ತಂದೆಯರಂತೆಯೇ ಇವರೂ ಮಕ್ಕಳ ಬಗ್ಗೆ ಏನೇನೋ ಕನಸು ಕಂಡಿರುತ್ತಾರೆ.

ದುರಂತವೆಂದರೆ, ಮೂವರು ಮಕ್ಕಳೂ ಅಪ್ಪ- ಅಮ್ಮನ ನಿರೀಕ್ಷೆಗೆ ವಿರುದ್ಧವಾಗಿಯೇ ನಡೆದುಕೊಳ್ಳುತ್ತಾರೆ. ಈ ಆಘಾತವನ್ನು ಸಹಿಸಲಾಗದೆ ಕಥಾನಾಯಕನ ಪತ್ನಿ ಸತ್ತುಹೋಗುತ್ತಾಳೆ. ಒಂದು ಕಡೆ ಪ್ರೀತಿ ಪಾತ್ರ ಹೆಂಡತಿಯ ಸಾವು, ಇನ್ನೊಂದು ಕಡೆಯಲ್ಲಿ ಮಕ್ಕಳ  ವರ್ತನೆಯಿಂದ ಮನನೊಂದ ಕಥಾ ನಾಯಕ ಸೀದಾ ಹಿಮಾಲಯಕ್ಕೆ ಬಂದು ಬಿಡುತ್ತಾನೆ. ಸನ್ಯಾಸಿಯಂತೆ ಗಡ್ಡ-ಜುಟ್ಟು ಬಿಡುತ್ತಾನೆ.  ಭಿಕ್ಷುಕನಂತೆ ನದಿ ದಡದಲ್ಲಿ ಕೂರುತ್ತಾನೆ. ಕಾವಿಬಟ್ಟೆಯೊಂದನ್ನು ಹೊದ್ದು ಆ ಹಿಮದ ಮಧ್ಯೆ ಮಲಗುತ್ತಾನೆ. ಹಿಮಾಲಯದ ಸಾನಿಧ್ಯದಲ್ಲಿ ಅವನಿಗೆ ಮನೆ-ಮಠ, ಬಂಧು-ಬಳಗ, ಮಕ್ಕಳು, ಊರು ಎಲ್ಲವೂ ಮರೆತುಹೋಗುತ್ತದೆ. ಸಂದರ್ಭ ಹೀಗಿದ್ದಾಗ ಅವನಿಗೆ ಎಲ್ಲವೂ ನೆನಪಾಗಬೇಕು, ಆ ನೆಪದಲ್ಲಿ ಆತ ತನ್ನ ಊರಿಗೆ ಹಿಂತಿರುಗಲು ಕಾರಣವಾಗುವ ಒಂದು ಟ್ವಿಸ್ಟ್ ಕಥೆಗೆ ಸಿಗಬೇಕು… ಇಂಥದೊಂದು ಸಂದರ್ಭಕ್ಕೆ ಪೂರಕವಾಗಿ ಕೇಳಿಬರುತ್ತದೆ ಹಾಡು: ನಾದಮಯಾ…. ಈ ಲೋಕವೆಲ್ಲಾ…. ಈ ಹಾಡು ಹುಟ್ಟಿದ ಕಥೆಯನ್ನು ಭಗವಾನ್ ಅವರು ವಿವರಿಸಿದ್ದು ಹೀಗೆ:

‘ಜೀವನ ಚೈತ್ರ’ದ ಚಿತ್ರಕಥೆ ಕುರಿತು ಚರ್ಚೆ ನಡೆದಿತ್ತು. ಅಲ್ಲಿ ಡಾ. ರಾಜ್, ಪಾರ್ವತಮ್ಮನವರು, ವರದಪ್ಪ, ಚಿ. ಉದಯಶಂಕರ್, ದೊರೆ ಮತ್ತು ನಾನು ಇದ್ದೆವು. ಹಿಮಾಲಯದ ತಪ್ಪಲಿನಲ್ಲಿ ಇರುವ ಕಥಾನಾಯಕನಿಗೆ ನೆನಪು ಮರುಕಳಿಸುವ ಸಂದರ್ಭಕ್ಕೆ ಒಂದು ಹಾಡು ಹಾಕಿದರೆ ಚೆಂದ ಎಂದರು ಡಾ. ರಾಜ್. ಈ ಸಲಹೆ ಎಲ್ಲರಿಗೂ ಹಿಡಿಸಿತು. ಮುಂದೆ, ಹಾಡು ಹೇಗಿದ್ದರೆ ಚೆಂದ ಎಂಬ ಚರ್ಚೆ ಶುರುವಾಯಿತು. ಆಗ, ವರದಪ್ಪನವರು- ‘ಅಣ್ಣಾ, ಎಂಟು ವರ್ಷಗಳ ಹಿಂದೆ ‘ ಅಮೃತವರ್ಷಿಣಿ’ ಅನ್ನೋ ಸಿನಿಮಾಕ್ಕೆ ಒಂದು ಹಾಡು ರೆಕಾರ್ಡ್ ಮಾಡಿಸಿದ್ದೆವಲ್ಲ, ಅದನ್ನೇ ಇಲ್ಲಿ ಬಳಸಿದ್ರೆ ಹೇಗೆ?’ ಎಂದರು.

ಏನಾಗಿತ್ತು ಎಂದರೆ- ೧೯೮೪ರ ಸಮಯದಲ್ಲಿ ರಾಜ್ ಕಂಪನಿಯೇ ‘ ಅಮೃತ ವರ್ಷಿಣಿ’ ಎಂಬ ಹೆಸರಿನ ಚಿತ್ರ ಆರಂಭಿಸಿತ್ತು. ಒಂದಷ್ಟು ಶೂಟಿಂಗೂ  ಆಗಿತ್ತು. ಆ ಚಿತ್ರಕ್ಕೆ ಉದಯಶಂಕರ್ ಅವರಿಂದ ‘ನಾದಮಯ ಈ ಲೋಕವೆಲ್ಲಾ…’ ಹಾಡು ಬರೆಸಲಾಗಿತ್ತು. ಅದಕ್ಕೆ ಎಂ. ರಂಗರಾವ್ ಸಂಗೀತ ನೀಡಿದ್ದರು: ಆ ಹಾಡಿನ ದೃಶ್ಯದ ಚಿತ್ರೀಕರಣ ಕೂಡ ಮುಗಿದಿತ್ತು. ಆದರೆ, ಮುಂದೆ ಯಾವುದೋ ಕಾರಣಕ್ಕೆ ಆ ಚಿತ್ರ ನಿರ್ಮಾಣವನ್ನು ಅಲ್ಲಿಗೇ ಕೈ ಬಿಡಲಾಗಿತ್ತು.

ಇದನ್ನೆಲ್ಲ ನೆನಪು ಮಾಡಿಕೊಂಡ ವರದಪ್ಪನವರು, ‘ಜೀವನ ಚೈತ್ರ’ದ ಕಥೆಯ ಸಂದರ್ಭಕ್ಕೆ ಈ ಹಾಡು ತುಂಬ ಚನ್ನಾಗಿ ಹೊಂದಿಕೆಯಾಗುತ್ತೆ. ಹಾಗಾಗಿ ಅದನ್ನೇ ಬಳಸಿಕೊಳ್ಳೋಣ. ಬೇಕೆನ್ನಿಸಿದರೆ  ಅದಕ್ಕೆ ಅಲ್ಲಲ್ಲಿ ಹೊಸಟಚ್ ಕೊಡೋಣ ಎಂದರು.

ಈ ಮಾತು ರಾಜಕುಮಾರ್ ಅವರಿಗೂ ಇದು ಸರಿ ಅನ್ನಿಸಿತು. ಆ ಹಾಡಿನ ಚಿತ್ರೀಕರಣ ನಡೆಸಿದ್ದೆವಲ್ಲ? ಆ ರೀಲ್‌ಗಳೆಲ್ಲ ಮದ್ರಾಸಿನ ಅರುಣಾಚಲಂ ಸ್ಟುಡಿಯೋದಲ್ಲಿ ಉಳಿದುಹೋಗಿದ್ದವು. ಅವುಗಳನ್ನು ಹುಡುಕಿ ತರಲು ಪ್ರೊಡಕ್ಷನ್ ಮ್ಯಾನೇಜರ್ ವಿಕ್ರಂ ಶ್ರೀನಿವಾಸ್ ಅವರನ್ನು ಕಳಿಸಿದೆವು. ಸ್ಟುಡಿಯೋದ ಅಡ್ರೆಸ್ ಹುಡುಕಿಕೊಂಡು ಹೋದ ಶ್ರೀನಿವಾಸ್ ಪೆಚ್ಚಾದರು. ಏಕೆಂದರೆ- ಆ ವೇಳೆಗೆ ಸ್ಟುಡಿಯೋ ಮುಚ್ಚಿಹೋಗಿತ್ತು. ಇಂಥ ಸಂದರ್ಭದಲ್ಲಿ ಮಾಡುವುದೇನು? ಹ್ಯಾಪುಮೋರೆಯೊಂದಿಗೆ ವಾಪಸ್ ಬರಲು ಶ್ರೀನಿವಾಸ್ ಸಿದ್ಧರಾಗಿದ್ದಾಗಲೇ- ‘ಚಿತ್ರೀಕರಣವಾಗಿರುವ ಎಲ್ಲ ರೀಲ್‌ಗಳನ್ನು ಒಂದು ಕೋಣೆಯಲ್ಲಿ ತುಂಬಿಸಿದ್ದೇವೆ. ಆ ರಾಶಿಯ ಮಧ್ಯೆಯೇ ನಿಮ್ಮ ಹಾಡಿನ ರೀಲ್ ಇರಬಹುದು. ಅದು ಸಿಗುತ್ತೆ ಅಂತ ಗ್ಯಾರಂಟಿ ಕೊಡೋಕಾಗಲ್ಲ. ಅದೃಷ್ಟ ನಿಮ್ಮ ಕಡೆಗಿದ್ರೆ ಸಿಗಬಹುದು. ಯಾವುದಕ್ಕೂ ಒಮ್ಮೆ ಹುಡುಕಿ ನೋಡಿ’ ಎಂದರಂತೆ ಸ್ಟುಡಿಯೋ ಸಿಬ್ಬಂದಿ.

ಅದು ಕತ್ತಲ ಕೋಣೆಯಲ್ಲಿ ಸೂಜಿ ಹುಡುಕಿದಂಥ ಸಾಹಸ. ಬೇರೆ ಯಾರಾದರೂ ಆಗಿದ್ದರೆ ಏನು ಮಾಡುತ್ತಿದ್ದರೋ ಗೊತ್ತಿಲ್ಲ. ಆದರೆ, ವಿಕ್ರಂ ಶ್ರೀನಿವಾಸ್ ಯಾವುದೋ ನಂಬಿಕೆಯಲ್ಲಿ ಹುಡುಕಾಟ ಆರಂಭಿಸಿದರು. ಆ ಕತ್ತಲ ಕೋಣೆಯಲ್ಲಿ ಸತತ ಹದಿನೈದು ದಿನ ಒಂದೊಂದೇ ರೀಲ್ ಪರಿಶೀಲಿಸಿದರು. ಕಡೆಗೊಮ್ಮೆ ಆ ಹಾಡಿನ ರೀಲು ಸಿಕ್ಕಿಯೇ ಬಿಟ್ಟಿತು. ಅದನ್ನು ಒಮ್ಮೆ ಎಲ್ಲರೂ ವೀಕ್ಷಿಸಿದೆವು. ನಂತರ, ಆ ಹಾಡನ್ನು ಮತ್ತೆ ಚಿತ್ರೀಕರಿಸಿಕೊಳ್ಳಲೆಂದು ಹಿಮಾಲಯಕ್ಕೆ ಹೋದೆವು.

ಈ ಸಂದರ್ಭದಲ್ಲಿ ರಾಜ್‌ಕುಮಾರ್ ಅದೆಂಥ ತಾದಾತ್ಮ್ಯ ಸಾಸಿದ್ದರು ಅಂದರೆ, ಹಾಡಿನ ಚಿತ್ರೀಕರಣ ಹೇಗಿದ್ದರೆ ಚೆಂದ ಎಂದು ಅವರೇ ಹೇಳತೊಡಗಿದರು. ಅದು ಹೀಗೆ: ‘ಇಲ್ಲಿ ಕೇಳಿ ಭಗವಾನ್ ಅವರೇ… ನಾಯಕ ತನ್ನನ್ನೇ ತಾನು ಮರೆತಿರುತ್ತಾನೆ. ಬಟ್ಟೆ, ಬರೆ, ಆರೋಗ್ಯ, ಬದುಕು… ಈ ಯಾವುದರ ಕಾಳಜಿಯೂ ಇರೋದಿಲ್ಲ ಅವನಿಗೆ. ಹೀಗೆ ಅವನು ಅನಾಥನಂತೆ ಒಂದು ಕಡೆ ಮಲಗಿದ್ದಾಗಲೇ ಅದೊಮ್ಮೆ ಅವನ ಮುಖದ ಮೇಲೆ ಮಂಜು ಬೀಳುವಂತಾಗಲಿ. ಆಗ ಏನಾಗ್ತದೆ ಹೇಳಿ; ತಕ್ಷಣ ಅವನಿಗೆ ಎಚ್ಚರವಾಗುತ್ತದೆ. ಬೆರಗಿಂದ ಕಣ್ತೆರೆದರೆ ಹಕ್ಕಿಯ ಕಲರವ ಕೇಳಿಸುತ್ತದೆ. ನದಿಯ ಜುಳು ಜುಳು ನಾದ, ಗಿಡಮರಗಳ ತಂಗಾಳಿಯ ಸದ್ದು ಕೇಳಿಬರುತ್ತದೆ. ಆಗಲೇ ಅವನಲ್ಲಿ ಸುಪ್ತವಾಗಿ ಅಡಗಿದ್ದ ಸಂಗೀತಜ್ಞಾನ ಪ್ರಕಟವಾಗಬೇಕು. ತನ್ನ ಸುತ್ತಲಿನ ಸೌಂದರ್ಯವನ್ನು ಆಸ್ವಾದಿಸುತ್ತಾ, ಅದರಲ್ಲೇ ದೇವರನ್ನು ಸಂಗೀತ ಶಾರದೆಯನ್ನು ಕಾಣುತ್ತಾ ಆತ ಹಾಡಲು ಶುರುಮಾಡಬೇಕು …. ನಾವು ಹಾಡನ್ನು ಹೀಗೆಯೇ ಚಿತ್ರೀಕರಿಸಿದರೆ ಚೆಂದ ಅಂತ ನನ್ನ ಭಾವನೆ…’

ರಾಜ್ ಅವರ ಮಾತು ಕೇಳಿ ತುಂಬ ಖುಷಿಯಾಯಿತು. ಹಾಗೇ ಮಾಡೋಣ ಎಂದು ಚಿತ್ರ ತಂಡದವರೆಲ್ಲ  ಒಟ್ಟಾಗಿ  ಹೇಳಿದೆವು. ಹಿಮಾಲಯದ ತಪ್ಪಲಿನಲ್ಲಿ ಈ ಹಾಡನ್ನು ಸತತ ಹದಿನೇಳು ದಿನಗಳ ಕಾಲ ಚಿತ್ರೀಕರಿಸಲಾಯಿತು. ಆ ಪ್ರದೇಶದಲ್ಲೋ ವಿಪರೀತ ಚಳಿ. ನಾವೆಲ್ಲ ಒಂದರ ಮೇಲೊಂದು, ಅದರ ಮೇಲೆ ಇನ್ನೊಂದು ಹೀಗೆ ಮೂರು ಡ್ರೆಸ್ ಹಾಕಿದ್ರೂ ನಡುಗ್ತಾ ಇರ‍್ತಿದ್ವಿ. ಮೂರು ಸಾಕ್ಸ್ ಹಾಕ್ಕೋತಿದ್ವಿ. ಆದರೂ ಕಾಲನ್ನು ಎತ್ತಿಡೋಕೆ ಆಗ್ತಿರಲಿಲ್ಲ. ಆ ಜಾಗದಲ್ಲಿ  ಅಂಥ ಮಂಜು ಬೀಳ್ತಿತ್ತು. ಆದರೆ ರಾಜ್‌ಕುಮಾರ್ ಮಾತ್ರ ಒಂದು ಶರ್ಟ್, ಚಪ್ಪಲಿ ಹಾಕ್ಕೊಂಡು ಶೂಟಿಂಗ್ ಜಾಗಕ್ಕೆ ಬಂದುಬಿಡ್ತಾ ಇದ್ದರು. ಶೂಟಿಂಗ್ ಶುರುವಾಗುವ ಮೊದಲೇ ತಮ್ಮ ಚಪ್ಪಲಿಗಳ ಮೆಲೆ ಐಸ್ ಹಾಕಿ ಮುಚ್ತಾ ಇದ್ರು. ಹಾಗೆ ಮಾಡದಿದ್ದರೆ ಹಾಡಿನ ದೃಶ್ಯದಲ್ಲಿ ಚಪ್ಪಲಿ ಕಾಣಿಸಿ ಆಭಾಸ ಆಗುತ್ತೆ ಎಂಬ ಮುನ್ನೆಚ್ಚರಿಕೆ ಅವರದು. ಶೂಟಿಂಗ್ ಮುಗಿವ ವೇಳೆಗೆ ಆ ಹಾಡಿನ ಅಸಲಿ ತಾಕತ್ತೇನು ಎಂಬುದು ನನಗೆ ಅರ್ಥವಾಗಿಹೋಗಿತ್ತು. ಅಣ್ಣಾವ್ರೇ, ಈ ಹಾಡು ಸೂಪರ್ ಹಿಟ್ ಆಗುತ್ತೆ ಎಂದು ಸಂಭ್ರಮದಿಂದ ಹೇಳಿದ್ದೆ. ಈ ಮಾತು ಕೇಳಿ ಖುಷಿಯಿಂದ ನಕ್ಕಿದ್ದರು ರಾಜ್…

ಇಷ್ಟು ಹೇಳಿ, ಹಾಡಿನ ಕಥೆಗೆ ಮಂಗಳ ಹಾಡಿದರು ಭಗವಾನ್.

ಅಂದ ಹಾಗೆ, ನಾಡಿದ್ದು ಏ. ೨೪ ರಂದು ರಾಜ್ ಜನ್ಮದಿನ. ಆ ಮಧುರ ನೆನಪಲ್ಲಿ  ಖುಷಿ ಪಡಲಿಕ್ಕೆ, ಅಣ್ಣಾವ್ರು ಜತೆಗಿಲ್ಲವಲ್ಲ ಎಂಬ ಕಾರಣದಿಂದ ಕಣ್ತುಂಬಿಕೊಳ್ಳಲಿಕ್ಕೆ ಒಂದು ನೆಪವಾಗಿ ಈ ಹಾಡು, ಈ ಕಥೆ…

 

ಕಾಲಲ್ಲಿ ಬರೆದ ಚಿತ್ರಕ್ಕೆ ಲಕ್ಷ ಲಕ್ಷ!

ಏಪ್ರಿಲ್ 24, 2010

ಮಗು ಮುದ್ದಾಗಿದೆ. ಆರೋಗ್ಯವಾಗಿದೆ. ಎರಡೂವರೆ ಕೆ.ಜಿ. ತೂಕವಿದೆ. ಆದರೆ… ಆದರೆ… ಮಗುವಿಗೆ ಎರಡೂ ಕೈಗಳಿಲ್ಲ! ಇಂಥದೊಂದು ಸುದ್ದಿ ಕೇಳಿದರೆ, ಭಾರತದ ಹೆಚ್ಚಿನ ತಂದೆ-ತಾಯಿಗಳು ಏನು ಮಾಡ್ತಾರೆ ಹೇಳಿ; ಮೊದಲಿಗೆ ಬೆಚ್ಚಿ ಬೀಳುತ್ತಾರೆ. ನಂತರ ಗೋಳಾಡುತ್ತಾರೆ. ದೇವ್ರೆ ಯಾಕಪ್ಪಾ ಹೀಗೆ ಮಾಡ್ದೆ ಎಂದು ಪ್ರಶ್ನೆ ಹಾಕುತ್ತಾರೆ. ಆ ಮೇಲೆ ಚೇತರಿಸಿಕೊಂಡು- ಎಲ್ಲವೂ ಶಿವನಿಚ್ಛೆ, ನಾವು ಪಡೆದುಕೊಂಡು ಬಂದದ್ದೇ ಇಷ್ಟು  ಎಂದು ತಮಗೆ ತಾವೇ ಸಮಾಧಾನ ಹೇಳಿಕೊಳ್ಳುತ್ತಾರೆ. ಯಾವುದೋ ಜನ್ಮದ ತಪ್ಪಿಗೆ ಈ ಜನ್ಮದಲ್ಲಿ ಶಿಕ್ಷೆಯಾಗಿದೆ ಅಂದುಕೊಳ್ಳುತ್ತಾರೆ. ಅಥವಾ ಇದೆಲ್ಲಾ ಮನೆದೇವರ ಶಾಪವಿರಬಹುದು ಎಂಬ ನಿರ್ಧಾರಕ್ಕೆ ಬರುತ್ತಾರೆ. ಮುಂದೆ ಈ ವಿಷಯವಾಗಿಯೇ ಶಾಸ್ತ್ರ ಕೇಳುತ್ತಾರೆ. ಶಾಂತಿ ಹೋಮ ಮಾಡಿಸುತ್ತಾರೆ. ಮಗುವಿಗೆ ಆಗಿರುವ ಅಂಗವೈಕಲ್ಯ ಸರಿಹೋಗಿಬಿಟ್ಟರೆ, ನಿನಗೆ ಇಂತಿಷ್ಟು ದುಡ್ಡು ಕೊಡುತ್ತೇನೆ ಎಂದು ಇಷ್ಟದೈವಕ್ಕೆ ಹರಕೆ ಕಟ್ಟಿಕೊಳ್ಳುತ್ತಾರೆ. ಅಥವಾ ಕಡಿಮೆ ಖರ್ಚಿನಲ್ಲಿ ಆಗಬಹುದಾದ ಪೂಜೆ/ ಕಾಣಿಕೆಯ ಬಗ್ಗೆ ತಿಳಿದುಕೊಂಡು ದೇವರೊಂದಿಗೇ ಚೌಕಾಶಿಗೆ ನಿಲ್ಲುತ್ತಾರೆ!

ದುರಂತವೆಂದರೆ, ಹೆಚ್ಚಿನ ಸಂದರ್ಭದಲ್ಲಿ ಯಾವ ತಾಯ್ತಂದೆಯೂ ಆ ಅಂಗವಿಕಲ ಮಗುವಿನಲ್ಲಿ ಆತ್ಮವಿಶ್ವಾಸ ಬೆಳೆಸುವ ಗೋಜಿಗೇ ಹೋಗಿರುವುದಿಲ್ಲ. ಹುಟ್ಟಿನಿಂದಲೇ ಬರುವ ಅಂಗವೈಕಲ್ಯಗಳು ಹರಕೆ ಕಟ್ಟಿಕೊಂಡರೆ, ಅಥವಾ ಹೋಮ ಮಾಡಿಸಿದರೆ ಸರಿ ಹೋಗುವುದಿಲ್ಲ ಎಂಬ ಪ್ರಾಥಮಿಕ ಅರಿವು ಕೂಡ ಬಹಳ ಜನಕ್ಕೆ ಇರುವುದಿಲ್ಲ. ಪರಿಣಾಮ, ಅಂಗವಿಕಲ ಮಗು ಹುಟ್ಟಿದೆ ಎಂದು ಗೊತ್ತಾದ ನಂತರ -ದೇವರು, ಜಪ, ತಪ, ಪೂಜೆಯ ಕಡೆಗೇ ಹೆಚ್ಚಿನವರು ವಾಲಿಕೊಳ್ಳುತ್ತಾರೆ. ಬಂಧುಗಳು, ಗೆಳೆಯರ ಮುಂದೆ ತಮ್ಮ ಮಗುವಿನ ಅವಸ್ಥೆಯ ಕುರಿತು ಸಂಕಟದಿಂದ ಮಾತಾಡುತ್ತಾರೆ. ಹತ್ತು ಮಂದಿಯ ಅನುಕಂಪ ಬಯಸುತ್ತಾರೆ. ನಂತರ, ಕೈ-ಕಾಲು ಇಲ್ಲದ ಮಕ್ಕಳಿಂದ ಏನೂ ಮಾಡಲು ಸಾಧ್ಯವಾಗುವುದಿಲ್ಲ ಎಂದು ತಾವೇ ಹೇಳಿಕೊಳ್ಳುತ್ತಾರೆ. ಆ ಮಗುವನ್ನು ಬಂಧುಗಳಿಂದ, ಗೆಳೆಯರಿಂದ, ಪರಿಚಿತರಿಂದ ಹಾಗೂ ಶಿಕ್ಷಣದಿಂದ ದೂರವೇ ಉಳಿಸುತ್ತಾರೆ! ಮತ್ತು, ಹೀಗೆ ಮಾಡುವ ಮೂಲಕ ನನ್ನಿಂದ ಯಾವ ಸಾಧನೆಯೂ ಸಾಧ್ಯವಿಲ್ಲ ಎಂಬ ಭಾವನೆ ಅಂಗವಿಕಲ ಮಗುವಿಗೂ ಬಂದುಬಿಡುವಂತೆ ಮಾಡಿಬಿಡುತ್ತಾರೆ! ಪರಿಣಾಮ ಏನಾಗುತ್ತದೆ ಅಂದರೆ- ಅದೆಷ್ಟೋ ಅಂಗವಿಕಲ ಮಕ್ಕಳ ಸುಪ್ತ ಪ್ರತಿಭೆಯ ಪರಿಚಯ ಹೊರಜಗತ್ತಿಗೆ ಆಗುವುದೇ ಇಲ್ಲ! ಅಥವಾ ಒಂದು ವೇಳೆ ಒಂದು ರಾಜ್ಯವೇ ಮೆಚ್ಚುವಂಥ ಸಾಧನೆಯನ್ನು ಅಂಗವಿಕಲನೊಬ್ಬ ಮಾಡಿದರೂ ಅದನ್ನು ತುಂಬ ಸಂಭ್ರಮದಿಂದ ಒಪ್ಪುವಂಥ ಮನಸುಗಳು ನಮ್ಮ ಮಧ್ಯೆಯೂ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲ. ಈ ಕಾರಣದಿಂದಲೇ ಹುಟ್ಟು ಅಂಧನಾಗಿದ್ದರೂ ಭರತನಾಟ್ಯದ ದೊರೆ ಅನ್ನಿಸಿಕೊಂಡಿರುವ ಬುಸೇಗೌಡ, ಎರಡೂ ಕಾಲಿಲ್ಲದೆಯೂ ಮಹತ್ವದ್ದನ್ನು ಸಾಸಿರುವ ನಾಗನರೇಶ್ ಮುಂತಾದವರ ಬಗ್ಗೆ ನೂರು ಮಂದಿಯಲ್ಲಿ ವಿಚಾರಿಸಿದರೂ ಎರಡು ಪುಟಗಳ ಮಾಹಿತಿ ಸಿಗುವುದಿಲ್ಲ.

ಯಾರು ಏನೇ ಹೇಳಲಿ; ಈ ವಿಷಯದಲ್ಲಿ ವಿದೇಶಿಯರು ಅದರಲ್ಲೂ ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯದ ಜನರನ್ನು ನೋಡಿ ಕಲಿಯಬೇಕು. ಅಂಗವಿಕಲನೊಬ್ಬ ಮಹತ್ವದ ಸಾಧನೆಗೆ ತೊಡಗಿದ್ದಾನೆ ಎಂದು ಗೊತ್ತಾದರೆ ಸಾಕು, ಆ ದೇಶಗಳಲ್ಲಿ ಅವನ ಪರವಾಗಿ ಪ್ರಚಾರ ಮಾಡುವ ಜನ ಹುಟ್ಟಿಕೊಳ್ಳುತ್ತಾರೆ. ಅವನ ಚಿಕ್ಕದೊಂದು ಗೆಲುವನ್ನೂ ಮಹತ್ಸಾಧನೆ ಎಂದು ಬಣ್ಣಿಸಲು ಪತ್ರಿಕೆಗಳು ಪಣತೊಡುತ್ತವೆ. ವಿಕಲಾಂಗನೊಬ್ಬ ತನ್ನ ಅಂಗವೈಕಲ್ಯವನ್ನು ಮೆಟ್ಟಿ ನಿಂತದ್ದು ಹೇಗೆ? ಬದುಕಿನ ಹಾದಿನಲ್ಲಿ ಅವನಿಗೆ ಎದುರಾದ ಸಂಕಷ್ಟಗಳು ಎಂಥವು? ಈ ಹೋರಾಟದಲ್ಲಿ ಅವನ ಬೆನ್ನಿಗೆ ನಿಂತವರು ಯಾರು? ಎಂಬಿತ್ಯಾದಿ ವಿವರಗಳೆಲ್ಲ ಪತ್ರಿಕೆ ಹಾಗೂ ವೆಬ್‌ಸೈಟ್‌ಗಳಲ್ಲಿ ಮೇಲಿಂದ ಮೇಲೆ ಪ್ರಕಟವಾಗುತ್ತಲೇ ಇರುತ್ತವೆ. ಪರಿಣಾಮ ಏನಾಗುತ್ತದೆ ಎಂದರೆ, ನಾನು ಅಂಗವಿಕಲ ಎಂಬ ಭಾವನೆ ಅಂಗವಿಕಲ ವ್ಯಕ್ತಿಗೆ ಬರುವುದೇ ಇಲ್ಲ. ಬದಲಿಗೆ, ನಾನು ವಿಶೇಷ ಸಾಧನೆ ಮಾಡಲಿಕ್ಕೆಂದೇ ಹುಟ್ಟಿದವನು. ನಾನು ಯಾರಿಗೇನು ಕಡಿಮೆ ಎಂಬ ಭಾವವೇ ಅಂಗವಿಕಲ ವ್ಯಕ್ತಿಗಳ ರಕ್ತದ ಕಣಕಣದಲ್ಲಿ ತುಂಬಿ ಹೋಗುತ್ತದೆ.

***

ಇಂಗ್ಲೆಂಡಿನ ಹೆಸರಾಂತ ಚಿತ್ರಕಲಾವಿದ ಪೀಟರ್ ಲಾಂಗ್‌ಸ್ಟಫ್‌ನ ಯಶೋಗಾಥೆಯನ್ನು ವಿವರಿಸುವ ಮೊದಲು ಪೂರ್ವಪೀಠಿಕೆಯ ರೂಪದಲ್ಲಿ ಮೇಲಿನ ಮಾತುಗಳನ್ನು ಹೇಳಬೇಕಾಯಿತು. ವಿಶೇಷ ಏನೆಂದರೆ -ಲಾಂಗ್‌ಸ್ಟಫ್ ರಚಿಸಿದ ಕಲಾಕೃತಿಗಳಿಗೆ  ಇಂಗ್ಲೆಂಡಿನಲ್ಲಿ ವಿಪರೀತ ಬೇಡಿಕೆಯಿದೆ. ಒಂದೊಂದು ಕಲಾಕೃತಿಯೂ ಸಾವಿರ ಸಾವಿರ ಡಾಲರ್‌ಗೆ ಮಾರಾಟವಾಗುತ್ತದೆ. ಅರೆ, ಚಿತ್ರಕಲಾವಿದನೊಬ್ಬನ ಆರ್ಟ್‌ವರ್ಕ್‌ಗೆ ಲಕ್ಷ ರೂ.ಗೆ ಮಾರಾಟವಾದರೆ ಅದರಲ್ಲಿ ವಿಶೇಷವೇನು ಬಂತು ಎಂದಿರಾ? ವಿಶೇಷವಿರುವುದೇ ಇಲ್ಲಿ. ಏನೆಂದರೆ ಲಾಂಗ್‌ಸ್ಟಫ್‌ಗೆ ಹುಟ್ಟಿನಿಂದಲೇ ಎರಡೂ ಕೈಗಳಿಲ್ಲ. ಆತ ಕಾಲಿನಿಂದಲೇ ಚಿತ್ರ ಬರೆಯುತ್ತಾನೆ! ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದವನು ಲಾಂಗ್‌ಸ್ಟಫ್. ಆತನ ತಾಯಿಗೆ ಯೌವನದ ದಿನಗಳಿಂದಲೂ ಬೆಳಗ್ಗೆ ಎದ್ದ ತಕ್ಷಣವೇ ತಲೆಸುತ್ತು, ತಲೆನೋವು, ಮೈಕೈ ನೋವು ಕಾಣಿಸಿಕೊಳ್ಳುತ್ತಿತ್ತು. ಈ ಸಂಕಟದಿಂದ ಪಾರಾಗಲು ಅವಳು ಸಿಗರೇಟು ಸೇದಲು ಕಲಿತಳು. ಹಿಂದೆಯೇ ಡ್ರಿಂಕ್ಸ್ ತೆಗೆದುಕೊಳ್ಳಲು ಆರಂಭಿಸಿದಳು. ಇಷ್ಟು ಸಾಲದೆಂಬಂತೆ ತನಗಿದ್ದ ಕಾಯಿಲೆಗೆಂದು ತಪ್ಪದೇ ಮಾತ್ರೆಗಳನ್ನೂ ನುಂಗಿದಳು. ಸಿಗರೇಟು, ಮದ್ಯ ಮತ್ತು ಮಾತ್ರೆ-ಈ ಮೂರರ ಸೈಡ್ ಎಫೆಕ್ಟ್ ಆಕೆಗೆ ಹುಟ್ಟಿದ ಮಗುವಿನ ಮೇಲಾಯ್ತು. ಹುಟ್ಟಿದ ಮಗುವಿಗೆ ಎರಡೂ ಕೈಗಳು ಇರಲಿಲ್ಲ!

ಕುಡುಕಿಯಾದರೇನಂತೆ; ಅವಳೂ ತಾಯಿಯಲ್ಲವೆ? ಮಗನ ಪರಿಸ್ಥಿತಿ ಕಂಡು ಆ  ತಾಯಿ ಕೂಡ ಭೋರಿಟ್ಟು ಅತ್ತಳು. ಒಂದು ಸಂತೋಷ ವೆಂದರೆ  ಈ ಡಿಫ್ರೆಶನ್‌ನಿಂದ ಆಕೆ  ಬೇಗ ಚೇತರಿಸಿಕೊಂಡಳು. ಮಗುವಿಗೆ ಪೀಟರ್ ಲಾಂಗ್‌ಸ್ಟಫ್ ಎಂದು ಹೆಸರಿಟ್ಟಳು. ಕೈಗಳು ಇಲ್ಲ ಅಂದ ಮೇಲೆ, ಕಾಲುಗಳನ್ನೇ ಕೈಗಳ ಥರಾ ಬಳಸಬೇಕು ಎಂದು ಹೇಳಿಕೊಟ್ಟಳು. ಕಾಲ್ಬೆರಳ ಸಹಾಯದಿಂದಲೇ ಬ್ರಷ್ ಮಾಡಿಕೊಳ್ಳಲು, ಬರೆಯಲು, ಕಾಫಿ ಕುಡಿಯಲು, ಜಗ್ ಹಿಡಿದುಕೊಳ್ಳಲು ಕಲಿಸಿದಳು. ಎಲ್ಲಕ್ಕಿಂತ ಹೆಚ್ಚಾಗಿ, ನೀನು ಯಾರಿಗೂ ಕಡಿಮೆಯಿಲ್ಲ ಎಂದು ಪದೇ ಪದೆ ಹೇಳುತ್ತ ಬಂದಳು. ಮಗ ಒಂದೇ ಒಂದು ಒಳ್ಳೆಯ ಕೆಲಸ ಮಾಡಿದರೂ ಅದನ್ನು ಹತ್ತು ಮಂದಿಗೆ ಹೇಳಿಕೊಂಡು ಮೆರೆದಾಡಿದಳು. ಇದರ ಒಟ್ಟು ಪರಿಣಾಮ ಏನಾಯಿತೆಂದರೆ, ನಾನು ಅಂಗವಿಕಲ ಎಂಬ ಭಾವನೆಯೇ ಲಾಂಗ್‌ಸ್ಟಫ್‌ನನ್ನು ಕಾಡಲಿಲ್ಲ. ಅವನು ಕೀಳರಿಮೆಗಳಿಂದ ಮುಕ್ತನಾಗಿ ಬೆಳೆಯುತ್ತಾ ಹೋದ.

ಪ್ರಾಪ್ತ ವಯಸ್ಕನಾಗುವ ವೇಳೆಗೆ ಪೀಟರ್‌ಗೆ ತನ್ನ ಮಿತಿ ಮತ್ತು ದೌರ್ಬಲ್ಯದ ಬಗ್ಗೆ ಖಡಕ್ಕಾಗಿ ಗೊತ್ತಿತ್ತು. ಈ ಮಧ್ಯೆಯೂ ಅವನು ಫುಟ್‌ಬಾಲ್ ಕಲಿತ. ಎರಡೂ ಕೈಗಳು ಇರಲಿಲ್ಲವಲ್ಲ| ಅದೇ ಕಾರಣದಿಂದ ಎದುರಾಳಿ ಆಟಗಾರರ ಮಧ್ಯೆ ದಿಢೀರನೆ ನುಸುಳುವುದು ಅವನಿಗೆ ತುಂಬ ಸುಲಭವಾಯಿತು. ಹೈಸ್ಕೂಲಿನ ದಿನಗಳಲ್ಲಂತೂ ಪೀಟರ್‌ಗೆ ಚೆಂಡು ಸಿಕ್ಕಿದರೆ ಗೋಲ್ ಆಯ್ತು ಎಂದೇ ಭಾವಿಸಲಾಗುತ್ತಿತ್ತು. ಒಂದಷ್ಟು ದಿನಗಳ ನಂತರ ಸ್ವಉದ್ಯೋಗವನ್ನೇಕೆ ಮಾಡಬಾರದು ಎಂಬ ಯೋಚನೆ ಪೀಟರ್‌ಗೆ ಬಂತು. ತಕ್ಷಣವೇ ಆತ ಟ್ರಾಕ್ಟರ್ ಓಡಿಸಲು ಕಲಿತ. ಹಿಂದೆಯೇ ಹಂದಿ ಸಾಗಣೆಯ ಕೋರ್ಸ್‌ಗೆ ಸೇರಿಕೊಂಡ. ಅವರಲ್ಲಿ ಪದವಿ ಪಡೆದ ! ನಂತರ ಹಂದಿ ಸಾಕುವ ಫಾರ್ಮ್ ಆರಂಭಿಸಿದ. ಮುಂದೆ ಹಂದಿಗಳನ್ನು ಟ್ರಾಕ್ಟರ್‌ನಲ್ಲಿ ತುಂಬಿಕೊಂಡು ಮಾರ್ಕೆಟ್‌ಗೆ ಹೋಗಿ ಮಾರಿ ಬರುವುದೇ ಅವನ ಉದ್ಯೋಗವಾಯಿತು.

ಈ ವೃತ್ತಿಯಲ್ಲಿಯೇ ಪೀಟರ್ ಭರ್ತಿ ಇಪ್ಪತ್ತು ವರ್ಷ ಕಳೆದ. ಆದರೆ, ಸ್ವಲ್ಪ ವಯಸ್ಸಾದಂತೆ, ಇನ್ನು ಮುಂದೆ ಈ ಕೆಲಸ ಕಷ್ಟ ಎಂಬುದು ಅವನಿಗೆ ಅರ್ಥವಾಗಿ ಹೋಯಿತು. ಏಕೆಂದರೆ, ಹಂದಿಗಳ ಹಿಂಡನ್ನು ಕಂಟ್ರೋಲ್ ಮಾಡಲು ಅವನಿಗೆ ಕಷ್ಟವಾಗತೊಡಗಿತು. ಜತೆಗೆ, ಮಾರ್ಕೆಟ್‌ನಲ್ಲಿ ಖರೀದಿಗೆ ಬಂದ ಜನ ಕೆಲವೊಮ್ಮೆ ನುಗ್ಗಿ ಬರುತ್ತಿದ್ದರು. ಕೈಗಳೇ ಇರಲಿಲ್ಲವಲ್ಲ? ಆ ಕಾರಣದಿಂದಲೇ ಗುಂಪಾಗಿ ಬಂದವರನ್ನು ಅತ್ತಿತ್ತ ಸರಿಸುವುದೂ ಪೀಟರ್‌ಗೆ ಕಷ್ಟವಾಗುತ್ತಿತ್ತು. ಪರಿಣಾಮ, ಅದೊಂದು ದಿನ ಈ ಕೆಲಸಕ್ಕೆ ಗುಡ್‌ಬೈ ಹೇಳಿ, ಫುಟ್‌ಬಾಲ್ ಕೋಚ್ ಹುದ್ದೆಗೆ ಸೇರಿಕೊಂಡ.

ಒಂದಷ್ಟು ವರ್ಷ ಕೋಚ್ ಆಗಿ ಇಂಗ್ಲೆಂಡಿನ ಹತ್ತಾರು ನಗರಗಳಿಗೆ ತನ್ನ ತಂಡದೊಂದಿಗೆ ಹೋಗಿಬಂದ ಪೀಟರ್. ಅವನ ಕಾಲ್ಬೆರಳ ಚಳಕ, ಫುಟ್‌ಬಾಲ್‌ನಲ್ಲಿ ಅವನಿಗಿರುವ ಪ್ರಾವೀಣ್ಯತೆ ಕಂಡು ಎಲ್ಲರೂ ಬೆರಗಾದರು.

ಆದರೆ, ಕೆಲವೇ ದಿನಗಳಲ್ಲಿ ಈ ಕೋಚ್ ಹುದ್ದೆಯಲ್ಲೂ ಅಂಥ ವಿಶೇಷ ವಿಲ್ಲ ಅನ್ನಿಸಿತು ಪೀಟರ್‌ಗೆ. ಆಗಲೇ ಆತ ಚಿತ್ರಕಲೆಯೆಡೆಗೆ ತಿರುಗಿ ನೋಡಿದ. ಕಾಲ್ಬೆರಳ ಸಹಾಯದಿಂದಲೇ ಬರೆಯಬಹುದು, ಪೇಸ್ಟ್  ಮಾಡಬಹುದು, ಬಾಗಿಲು ತೆಗೆಯಬಹುದು, ಊಟ ಮಾಡಬಹುದು ಎಂದಾದರೆ, ಅದೇ ಕಾಲ್ಬೆರಳ ಸಹಾಯದಿಂದ ಚಿತ್ರ ಬರೆಯಲು ಏಕೆ ಸಾಧ್ಯವಿಲ್ಲ ಎಂದೇ ಆತ ಯೋಚಿಸಿದ. ನಂತರ ಅವನು ತಡಮಾಡಲಿಲ್ಲ. ಲಂಡನ್‌ನಲ್ಲಿರುವ ‘ಅಂಗವಿಕಲರ ಚಿತ್ರಕಲಾ ಕೇಂದ್ರಕ್ಕೆ ವಿದ್ಯಾರ್ಥಿಯಾಗಿ ಸೇರಿಯೇ ಬಿಟ್ಟ.

ಮುಂದಿನದೆಲ್ಲವೂ ಅವನ ಯಶೋಗಾಥೆಯೇ: ಕಲೆಯ ಎಲ್ಲ ಸಾಧ್ಯತೆಗಳನ್ನೂ ಅರ್ಥಮಾಡಿಕೊಂಡ ಪೀಟರ್, ಒಂದೊಂದೇ ಹೊಸ ಚಿತ್ರ ಬರೆಯುತ್ತಾ ಹೋದ. ಅದರಲ್ಲೂ ಪ್ರಕೃತಿಯ ಸೊಬಗನ್ನು ಚಿತ್ರಗಳಲ್ಲಿ ಹಿಡಿದಿಟ್ಟ. ಏಕಾಗ್ರತೆ ಸಾಸಲೆಂದು ಯೋಗ ಕಲಿತ. ಧ್ಯಾನ ಕಲಿತ. ಈ ಹಟಸಾಧನೆಯೆಲ್ಲಾ ಅವನ ಕಲಾಕೃತಿಗಳಲ್ಲಿ ಫಳಫಳಿಸಿತು.

ಈಗ ಪೀಟರ್‌ಗೆ ಭರ್ತಿ ಐವತ್ತೊಂದು ವರ್ಷ. ಅವನಿಗೆ ಹದಿನಾಲ್ಕು ವರ್ಷದ ಮಗನಿದ್ದಾನೆ. ಹೆಂಡತಿ ತೊರೆದು ಹೋಗಿದ್ದಾಳೆ. ಆದರೆ ಆ ಜಾಗಕ್ಕೆ ಹೊಸ ಗರ್ಲ್‌ಫ್ರೆಂಡ್ ಬಂದಿದ್ದಾಳೆ. ಈ ಮಧ್ಯೆ ಕಲಾವಿದನಾಗಿ ಆತ ದೊಡ್ಡ ಎತ್ತರ ತಲುಪಿಕೊಂಡಿದ್ದಾನೆ.  ಕ್ರಿಸ್ ಮಸ್‌ನ ಸಂದರ್ಭದಲ್ಲಿ  ಪೀಟರ್‌ನ ಕಲಾಕೃತಿಗಳು ಬಿಸಿದೋಸೆಗಳಂತೆ ಖರ್ಚಾಗುತ್ತಿವೆ. ಕಾಲಲ್ಲಿ ಬರೆದ ಒಂದೊಂದು ಚಿತ್ರವೂ ಸಾವಿರ ಸಾವಿರ ಡಾಲರ್‌ಗೆ ಮಾರಾಟವಾಗಿದೆ. ಇಂಗ್ಲೆಂಡಿನ ಮಹಾನಗರಗಳಲ್ಲೆಲ್ಲ ಪೀಟರ್‌ನ ಕಲಾಕೃತಿಗಳ ಎಕ್ಸಿಬಿಷನ್ ನಡೆದಿದೆ.

ಇಷ್ಟೆಲ್ಲ ಆದರೂ ಪೀಟರ್ ಅಹಂಕಾರದ ಕೈಗೆ ಬುದ್ದಿ ಕೊಟ್ಟಿಲ್ಲ. ಆತ, ಈಗಲೂ ಸಾಮಾನ್ಯರಲ್ಲಿ ಸಾಮಾನ್ಯನಂತೆಯೇ ಇದ್ದಾನೆ. ಅಂಗವೈಕಲ್ಯದ ನೋವು ನನ್ನೊಳಗೂ ಖಂಡಿತ ಇದೆ. ಆದರೆ, ಈ ವಿಷಯವಾಗಿ ಅಳುತ್ತಾ ಕೂರಲು ನಾನು ಸಿದ್ಧನಿಲ್ಲ, ಇಷ್ಟಕ್ಕೂ ಅಳುತ್ತ ಕೂತರೆ ನನಗೆ ಕೈ ಬಂದು ಬಿಡುತ್ತಾ? ಎಂದು ಪ್ರಶ್ನಿಸುತ್ತಾನೆ ಪೀಟರ್. ಹಿಂದೆಯೇ, ಕೈಗಳಿಲ್ಲ ಎಂಬ ಕೊರಗು ನನಗಂತೂ ಇಲ್ಲ. ಎರಡೂ ಕಾಲುಗಳನ್ನೇ ಎರಡೂ ಕೈಗಳಂತೆ ಬಳಸುವುದನ್ನು ನಾನು ಅಭ್ಯಾಸ ಮಾಡಿಕೊಂಡಿದ್ದೀನಿ. ಈ ಬದುಕಲ್ಲಿ ನಾನಂತೂ ಸುಖಿ ಎನ್ನುತ್ತಾನೆ.

ಅವನ ಸಾಧನೆ, ಛಲ, ಕಷ್ಟವನ್ನು ಎದುರಿಸಿ ಗೆದ್ದ ರೀತಿ ಕಂಡಾಗ ಮನಸ್ಸು ಮೂಕವಾಗುತ್ತದೆ.ಪೀಟರ್.  ಕಾಲಿಲ್ಲದವನ ‘ಚಿತ್ರಕಾವ್ಯ’ಕ್ಕೆ ಕೈ ಮುಗಿಯುವ ಮನಸ್ಸಾಗುತ್ತದೆ. ಅಲ್ಲವೆ?