ಒಂದು ಲೋಟ ಹಾಲು ಮತ್ತು…

ಕೇಳಿ : ಕಥೆಗಳು ಮಕ್ಕಳನ್ನು ರಂಜಿಸುತ್ತವೆ. ಅವರಿಗೆ ಒಳ್ಳೆಯ ಬುದ್ದಿ ಕಲಿಯಲು ಪ್ರೇರೇಪಿಸುತ್ತವೆ. ಸೆಂಟಿಮೆಂಟ್ ಕಥೆಗಳು ಬದುಕಿಡೀ ನೆನಪಿರುತ್ತವೆ. ಒಂದೊಂದು ಹೃದ್ಯ ಕತೆ ಕೂಡ ಒಂದು ಕಂದ ಭವಿಷ್ಯ ಬದಲಿಸುವ ಶಕ್ತಿ ಹೊಂದಿದೆ ಎಂಬ ಮಾತು ಸುಳ್ಳಲ್ಲ. ಅಂಥ ಒಂದು ಕಥೆ ಇಲ್ಲಿದೆ. ನಿಮಗಷ್ಟೇ ಅಲ್ಲ ಮಕ್ಕಳಿಗೂ ಇಷ್ಟವಾಗುತ್ತೆ.
ಅವನು ಬಡವರ, ಅಲ್ಲಲ್ಲ ಕಡು ಬಡವರ ಮನೆಯ ಹುಡುಗ. ಹೆಸರು ಚಂದ್ರಶೇಖರ. ಆತ, ಚಿತ್ರದುರ್ಗಕ್ಕೆ ಸಮೀಪದ ಹಳ್ಳಿಯವನು. ಎಳವೆಯಲ್ಲೇ ಅಪ್ಪ ಅಮ್ಮನನ್ನು ಕಳೆದುಕೊಂಡಿದ್ದ ಅವನಿಗೆ ಓದಬೇಕೆಂಬ ಆಸೆಯೇನೋ ಇತ್ತು ಆದರೆ, ಓದಿಸುವವರು ಯಾರು? ಓದಲು ಹಣ ಕೊಡುವವರು ಯಾರು? ಆದರೂ, ಈ ಹುಡುಗ ಸುಮ್ಮನಾಗಲಿಲ್ಲ. ಮನೆ ಮನೆಗೆ ಪೇಪರ್ ಹಾಕುತ್ತ, ಅದರಿಂದ ಸಿಗುವ ಪುಡಿಗಾಸಿನಲ್ಲಿ ಓದು ಮುಂದುವರಿಸಿದ್ದ.
ಅದೊಂದು ಭಯಂಕರ ಬೇಸಿಗೆಯ ಮಧ್ಯಾಹ್ನ. ಇವನು ಮನೆ ಮನೆಯಿಂದ ತಿಂಗಳ ಬಿಲ್ ವಸೂಲಿಗೆ ಹೊರಟಿದ್ದ. ಬೆಳಗಿನಿಂದ ಏನೂ ತಿಂದಿರಲಿಲ್ಲ. ಹೊತ್ತಾದಂತೆಲ್ಲಾ ಹಸಿವಿನಿಂದ ಕಂಗಾಲಾದ. ಕಡೆಗೆ ‘ಅಮ್ಮಾ, ಒಂದಿಷ್ಟು ತಂಗಳು ಇದ್ರೆ ಕೊಡಿ. ತುಂಬಾ ಹಸಿವಾಗಿದೆ’ ಎಂದು ಕೇಳಿಯೇ ಬಿಡೋಣ ಎಂದುಕೊಂಡೇ ಒಂದು ಮನೆಯ ಬಾಗಿಲು ಬಡಿದ.
ಈ ಹುಡುಗ ನಿರೀಕ್ಷಿಸಿದ್ದು ಮಧ್ಯವಯಸ್ಕ ಹೆಂಗಸನ್ನು. ಆದರೆ, ಬಾಗಿಲು ತೆಗೆದದ್ದು ಅವನಿಗಿಂತ ೧೦-೧೨ ವರ್ಷ ದೊಡ್ಡವಳಿದ್ದ ಹುಡುಗಿ. ‘ಅಮ್ಮಾ, ಏನಾದ್ರೂ ತಂಗಳು ಇದ್ರೆ ಕೊಡಿ ಅನ್ನಬೇಕು ಅಂತಿದ್ದವನು. ಆಕೆಯಲ್ಲಿ ಹಾಗೆ ಕೇಳಲು ಸಂಕೋಚವೆನಿಸಿ, ಒಂದು ಲೋಟ ನೀರು ಕೊಡ್ತೀರ? ಅಂದುಬಿಟ್ಟ. ಒಮ್ಮೆ ಈ ಹುಡುಗನನ್ನೇ ಅಪಾದಮಸ್ತಕ ನೋಡಿದ ಆಕೆ ‘ಸರಿ’ ಎಂದು ಒಳಗೆ ಹೋದಳು. ನೀಡಿದ ಲೋಟ ಕೈಗೆತ್ತಿಕೊಂಡವಳು ತಕ್ಷಣವೇ ಯೋಚಿಸಿದಳು. ‘ಪಾಪ ಆತ ತುಂಬಾ ಹಸಿದಿರುವಂತೆ ಕಾಣುತ್ತಿದ್ದಾನೆ. ಇದು ಊಟದ ಹೊತ್ತು. ಬರೀ ನೀರು ಕೊಟ್ರೆ ಹೊಟ್ಟೆ ತುಂಬುತ್ತಾ?’ ಎರಡು ನಿಮಿಷ ಹೀಗೇ ಯೋಚಿಸಿದ ಆಕೆ ಒಂದು ದೊಡ್ಡ ಲೋಟದೊಂದಿಗೆ ಹೊರಬಂದಳು. ಅದರ ತುಂಬಾ ಹಾಲಿತ್ತು. ಹುಡುಗ ಅವಸರದಿಂದಲೇ ಅದನ್ನು ಪಡೆದ. ಸಂಕೋಚ ಬೇಡ. ಕುಡೀರಿ ಅಂದಳು ಈಕೆ. ಒಂದೊಂದು ಗುಟುಕಿಗೂ ಎರಡೆರಡು ಬಾದಾಮಿ ಸಿಗುತ್ತ ಹೋದಾಗ ಇಷ್ಟೊಂದು ಒಳ್ಳೆಯ ಹಾಲು ಕೊಟ್ಟಿದಾರಲ್ಲ, ಕುಡಿದ ಮೇಲೆ ದುಡ್ಡು ಕೊಡಿ ಅಂದ್ರೆ ಏನು ಮಾಡೋದು ಎಂದು ಯೋಚಿಸುತ್ತಲೇ ಈ ಹುಡುಗ ಹಾಲು ಕುಡಿದು ಮುಗಿಸಿದ. ನಂತರ ‘ನಾ ನಾ… ನಾನು, ಇದಕ್ಕೆ ಎಷ್ಟು ದುಡ್ಡು ಕೊಡಬೇಕು’ ಎಂದು ಕೇಳಿಬಿಟ್ಟ.
ಇದಕ್ಕೆಲ್ಲ ದುಡ್ಡು ಬೇಡ, ಕಷ್ಟದಲ್ಲಿ ಇದ್ದವರಿಂದ ಯಾವತ್ತೂ ದುಡ್ಡು ಪಡೀಬಾರ್‍ದು ಅಂತ ಅಮ್ಮ ಹೇಳಿಕೊಟ್ಟಿದ್ದಾರೆ. ಹೋಗಿ ಬನ್ನಿ ನಿಮಗೆ ಒಳ್ಳೇದಾಗ್ಲಿ, ಬಾಯ್ ಎಂದವಳೇ ಈ ಹುಡುಗಿ ಮನೆಯೊಳಗೆ ಹೋಗಿಯೇ ಬಿಟ್ಟಳು. ಅವಳ ಉದಾರ ಮನಸು ಕಂಡು ಈ ಹುಡುಗ ನಿಂತಲ್ಲೇ ಕಣ್ತುಂಬಿಕೊಂಡ.
******
೨೦ ವರ್ಷಗಳ ನಂತರ, ಏನೇನೋ ಬದಲಾವಣೆ ಆಗಿಹೋಗಿತ್ತು. ಈ ಹುಡುಗಿಗೆ ಮದುವೆಯಾಗಿ, ನಾಲ್ಕೇ ವರ್ಷಗಳಲ್ಲಿ ಗಂಡ ತೀರಿ ಹೋಗಿದ್ದ. ಅದೇ ಕೊರಗಿನಲ್ಲಿದ್ದವಳಿಗೆ ಕ್ಯಾನ್ಸರ್ ಅಮರಿಕೊಂಡಿತ್ತು. ಮೊದ ಮೊದಲು ಈಕೆಗೆ ಕಾಯಿಲೆ ಏನೆಂದೇ ಗೊತ್ತಾಗಲಿಲ್ಲ. ಗೊತ್ತಾಗುವ ವೇಳೆಗೆ ರೋಗ ಉಲ್ಬಣಿಸಿತ್ತು. ತಾಲೂಕು, ಜಿಲ್ಲಾ ಕೇಂದ್ರದ ವೈದ್ಯರು ಕೈ ಚೆಲ್ಲಿದರು. ಕಡೆಗೆ ಬೆಂಗಳೂರಿನ ವೈದ್ಯರು ಚೆನ್ನೈನ ಆಸ್ಪತ್ರೆಯೊಂದರ ವಿಳಾಸ ನೀಡಿ, ಕಾಯಿಲೆ ಕೈ ಮೀರಿ ಹೋಗಿದೆ. ತಕ್ಷಣ ಈ ಆಸ್ಪತ್ರೆಗೆ ಹೋಗಿ. ಹಾಗೆ ಮಾಡಿದರೆ ಮಾತ್ರ ಏನಾದ್ರೂ ಸಹಾಯ ಅದೀತೇನೋ ಎಂದರು. ಒಂದು ಕಾಲಕ್ಕೆ ಗೌರವಾನ್ವಿತ ಕುಟುಂಬವೊಂದರ ಮಗಳಾಗಿದ್ದವಳು ಆಕೆ. ಅಂಥವಳು, ಚಿಕ್ಕ ವಯಸ್ಸಿಗೆ ವೈಧವ್ಯಕ್ಕೆ ಒಳಗಾದಾಗ ಎಲ್ಲರೂ ದೂರವಾಗಿದ್ದರು. ಪತಿಯ ಸಾವಿನ ನಂತರ, ಬಡತನವೆಂಬುದು ಅವಳನ್ನು ಬಾಚಿ ತಬ್ಬಿಕೊಂಡಿತ್ತು. ಅಂಥ ಪರಿಸ್ಥಿತಿಯಲ್ಲಿದ್ದ ಈ ಹೆಂಗಸು ಅದು ಹೇಗೋ, ಯಾರ್‍ಯಾರ ಸಹಾಯದಿಂದಲೋ ಚೆನ್ನೈನ ಅಪೊಲೋ ಆಸ್ಪತ್ರೆ ಸೇರಿಕೊಂಡಳು.
ಅಲ್ಲಿ ಎದುರಿಗಿದ್ದ ಕಿರಿಯ ವೈದ್ಯನಿಗೆ, ಆ ಹಿರಿಯ ವೈದ್ಯರು ಹೇಳಿದರು. ನೋಡಿ ಚಂದ್ರು, ಕರ್ನಾಟಕದಿಂದ ಒಬ್ರು ಪೇಷಂಟ್ ಬಂದಿದಾರೆ. ಆಕೆಗೆ ಕ್ಯಾನ್ಸರ್ ಆಗಿದೆ. ಪೂರ್‌ಫೆಲೋ ಆಕೆ. ಆ ಕೇಸನ್ನು ನೀವೇ ಹ್ಯಾಂಡಲ್ ಮಾಡಿ… ‘ಕರ್ನಾಟಕ ಅಂದಾಕ್ಷಣ ಆ ಯುವ ವೈದ್ಯನ ಕಣ್ಣಲ್ಲಿ ಸಾವಿರ ಮಿಂಚು. ಆಕೆಗೆ ಚಿತ್ರದುರ್ಗ ಗೊತ್ತಿರಬಹುದಾ? ಟ್ರೀಟ್‌ಮೆಂಟ್ ಕೊಡುವಾಗ ಅದನ್ನೊಮ್ಮೆ ಕೇಳಿಬಿಡಬೇಕು ಎಂದುಕೊಂಡ. ತಕ್ಷಣ ಅವನಿಗೆ ತನ್ನ ಬಾಲ್ಯ, ಬಡತನ, ಒಂದು ಮಧ್ಯಾಹ್ನ ತಾನು ನೀರು ಕೇಳಿದಾಗ, ಒಂದು ದೊಡ್ಡ ಲೋಟದಲ್ಲಿ ಹಾಲು ಕೊಟ್ಟ ಆ ಹುಡುಗಿ, ಅವಳ ಮಮತೆ ಎಲ್ಲ ನೆನಪಾಯಿತು. ತಕ್ಷಣ ಆತ ಆ ರೋಗಿಯಿದ್ದ ವಾರ್ಡ್‌ಗೆ ಬಂದವನೇ, ಕ್ಷಣ ನಿಬ್ಬೆರಗಾಗಿ ನಿಂತುಬಿಟ್ಟ. ಅವನಿಗೆ ಅವಳ ಗುರುತಿಸಿತು ಸಿಕ್ಕಿಬಿಟ್ಟಿತು.
ದೇವರೇ, ಈಕೆಯನ್ನು ಉಳಿಸಲಿಕ್ಕಾಗಿ ನಿನ್ನ ಜತೆ ಯುದ್ದ ಮಾಡಲೂ ನಾನು ಸಿದ್ದ ಎಂದು ಮನದೊಳಗೇ ಉದ್ಗರಿಸಿದ ಡಾ. ಚಂದ್ರಶೇಖರ್. ನಂತರ ಆಕೆಯನ್ನು ತುರ್ತು ಚಿಕಿತ್ಸಾ ವಾರ್ಡ್‌ಗೆ ಸೇರಿಸಿದ. ಅಂದಿನಿಂದ ಹದಿನೈದು ದಿನಗಳ ಕಾಲ ತನ್ನ ಅನುಭವವನ್ನೆಲ್ಲಾ ಪಣಕ್ಕಿಟ್ಟು ಹೋರಾಡಿದ, ಇವನ ಶ್ರಮದ ಮುಂದೆ ದೇವರು ಸೋತು ಹೋದ. ಸಕಲೆಂಟು ಮಂದಿಯೂ ಬೆರಗಾಗುವ ರೀತಿಯಲ್ಲಿ ಆಕೆ ಕ್ಯಾನ್ಸರನ್ನು ಜಯಿಸಿದ್ದಳು.
ಚಿಕಿತ್ಸೆಯೆಲ್ಲಾ ಮುಗಿದು ಆಸ್ಪತ್ರೆಯಿಂದ ಡಿಸ್‌ಚಾರ್ಚ್ ಆಗುವ ದಿನ ಬಂದಾಗ ಆಕೆ ಹೆದರಿ ನಡುಗುತ್ತಿದ್ದಳು. ೧೫ ದಿನ ಐಸಿಯುನಲ್ಲಿದ್ದುದು ಆಕೆಗೆ ನೆನಪಿತ್ತು. ಆಕೆಯ ಬಳಿ ಚಿಕ್ಕಾಸೂ ಇರಲಿಲ್ಲ. ಏನೂ ಕೊಡದಿದ್ದರೆ ಆಸ್ಪತ್ರೆಯವರು ಬಿಟ್ಟಾರೆಯೇ? ಹೇಗೆಲ್ಲಾ ರೇಗುತ್ತಾರೋ ಏನೋ? ಕಾಸು ಕಟ್ಟದಿದ್ದರೆ ಜೈಲಿಗೆ ಕಳಿಸಿಬಿಟ್ಟರೆ ಗತಿ ಏನು? ಇಂಥ ಅಪಮಾನದ ಬದಲು ನಾನು ಸತ್ತು ಹೋಗಿದ್ದರೇ ಒಳ್ಳೆಯದಿತ್ತು ಅಂದುಕೊಳ್ಳುತ್ತಾ ಆಕೆ ವಾರ್ಡ್‌ನಲ್ಲಿ ಕುಳಿತಿದ್ದಳು. ಇತ್ತ ಆಕೆಯ ‘ಬಿಲ್ ಬಂತು. ಸಿಬ್ಬಂದಿಯಿಂದ ಬಿಲ್ ಪಡೆದ ಡಾ. ಚಂದ್ರಶೇಖರ್, ಅದರ ಒಂದು ಮೂಲೆಯಲ್ಲಿ ಹಸಿರು ಇಂಕ್‌ನಲ್ಲಿ ಏನೋ ಬರೆದು ಅದನ್ನು ಆಕೆಗೆ ಕಳುಹಿಸಿಕೊಟ್ಟ.
ನರ್ಸ್, ಬಿಲ್‌ನ ಕವರ್ ನೀಡಿದಾಗ ಈ ಹೆಂಗಸು ಮತ್ತೆ ಕಂಪಿಸಿದಳು. ನಡುಗುತ್ತಲೇ ಆ ಕವರ್ ಒಡೆದು ನೋಡಿದಳು. ಬಿಲ್‌ನ ಒಂದು ಬದಿಯಲ್ಲಿ ಒಂದು ಗ್ಲಾಸ್ ಹಾಲಿನ ರೂಪದಲ್ಲಿ ಆಸ್ಪತ್ರೆಯ ಚಿಕಿತ್ಸಾ ವೆಚ್ಚ ಪಾವತಿಯಾಗಿದೆ’ ಎಂದು ಬರೆದಿತ್ತು. ಈಕೆ ಶಾಕ್‌ಗೆ ಒಳಗಾದವಳಂತೆ’ ಕಣ್ತುಂಬಿಕೊಂಡು ಎದ್ದುನಿಂತಳು. ಎದುರಿಗೆ, ಅದೇ ಸ್ಥಿತಿಯಲ್ಲಿ ಡಾ. ಚಂದ್ರಶೇಖರ್ ನಿಂತಿದ್ದ.
****
ಅಂದಹಾಗೆ, ಈ ಬೇಸಿಗೆಯಲ್ಲಿ ನಿಮ್ಮ ಮಕ್ಕಳಿಗೆ ಯಾವ ಕತೆ ಹೇಳಿಕೊಟ್ಟಿರಿ?

ನಿಮ್ಮ ಟಿಪ್ಪಣಿ ಬರೆಯಿರಿ