ಸಂಭಾಷಣೆಯಲ್ಲಿದ್ದ ಒಂದೊಂದೇ ಮಾತು ಸೇರಿ ಒಗಟಿನಂಥ ಹಾಡಾಯಿತು!

v_manohar

ಮಣಿ ಮಣಿ ಮಣಿ ಮಣಿ…
ಚಿತ್ರ: ಜನುಮದ ಜೋಡಿ.
ಸಾಹಿತ್ಯ-ಸಂಗೀತ: ವಿ. ಮನೋಹರ್. ಗಾಯನ: ಶಿವರಾಜ್‌ಕುಮಾರ್, ಮಂಜುಳಾ ಗುರುರಾಜ್
ಮಣಿ ಮಣಿ ಮಣಿ ಮಣಿ ಮಣಿಗೊಂದು ದಾರ
ದಾರದ ಜೊತೆ ಮಣಿ ಸೇರಿ ಚೆಂದದೊಂದು ಹಾರ
ತಾನಿ ತಂದಾನ ತಂದನ ತಂದಾನ ತಂದನ ತಂದಾನ ನ ||ಪ||
ನಿನ್ ಹೆಸರೇನೋ ಮಣಿ ಅಂತ ಗೊತ್ತಾಯ್ತು
ಆದ್ರೆ ಮಣಿ ಜೊತೆ ಇರೊ ದಾರದ ಹೆಸರೆ ಗೊತ್ತಾಗ್ಲಿಲ್ವಲ್ಲೇ
`ಮಣಿ ಜೊತೆ ದಾರ ಇರಲ್ಲ ದಾರದ ಜೊತೆ ಮಣಿ ಇರುತ್ತೆ ಅಂತ ಹೇಳು ಮಣಿ’
`ಗೊತ್ತಾಯ್ತು ಗೊತ್ತಾಯ್ತು ಆದ್ರೆ ದಾರಕ್ಕೊಂದು ಹೆಸರಿರಬೇಕಲ್ಲ
ಒಸಿ ಉದಾರವಾಗಿ ಹೇಳಿದ್ರೆ ಆಗಲ್ವ?’
`ಹೆಣ್ಣು ಮಕ್ಳನ್ ಹೀಗೆ ಗಾಡಿಯಲ್ಲಿ ಕೂರಿಸ್ಕೊಂಡು
ಆಡಬಾರ್‍ದು ಅಂತ ಒಸಿ ಹೇಳೆ ಮಣಿ’
`ಏನೋ ಹೆಸ್ರು ಕೇಳಿದ್ದಕ್ಕೆ ಕೆಸರಲ್ ಬಿದ್ದೋರ್ ಥರ
ಆಡಬಾರ್‍ದು ಅಂತ ಒಸಿ ಹೇಳೆ ಮಣಿ’
`ನನ್ ಹೆಸ್ರು ಮಾತ್ರ ಕೇಳಿ ತಮ್ಮೆಸ್ರು ಹೇಳ್ದಿರೋದು
ಬಲು ಮೋಸ ಅಂತ ಹೇಳೆ ಮಣಿ’ ||೧||

ಕೃಷ್ಣಾ, ಕೃಷ್ಣಾ ಕೃಷ್ಣಾ… ಕೃಷ್ಣಾ…
`ನನ್ ಹೆಸರು ಕೃಷ್ಣಾ ಅಂತ ಹೇಳಮ್ಮ ಮಣಿ’ `ಹಂಗಾದ್ರೆ ಗೋಪಿಕಾ ಸ್ತ್ರೀಯರು ಇದ್ದಾರಾ’
ಅಂತ ಈಗ್ಲೇ ಕೇಳ್ಬಿಡೆ ಮಣಿ
ಛೆ, ಛೆ, ಅದೆಲ್ಲಾ ದ್ವಾಪರ ಯುಗಕ್ಕೆ
ಈ ಕಲಿಯುಗದಾ ಕೃಷ್ಣ ಯಾವ ಕನ್ಯೇನೂ
ಕಣ್ಣೆತ್ತಿ ನೋಡೊಲ್ಲ. ಯಾವ ಕನ್ಯೇನೂ ಕಣ್ಣೆತ್ತಿ ನೋಡಲ್ಲ.
`ನನ್ನೂ ನೋಡೊಲ್ವಾ?’ `ನೋಡ್ತಾನೆ ಇದೀನಲ್ಲ?’
`ಮಾತು ಮಾತಲ್ಲೇ ಮಾತು ಮರೆಸ್ಬೇಡ
ಅಂತ ಹೇಳೆ ಮಣಿ’

`ಇವಾಗಲಾದ್ರೂ ಹೆಸರನು ಹೇಳೆಲೆ ಕನ್ಯಾಮಣಿ’ ||೨||
`ನನ್ ಹೆಸರು ಒಂದು ಹೂವಿನ ಹೆಸರಾಗೆ
ಸೇರ್ಕೊಂಡೈತೆ ಅಂತ ಹೇಳೆ ಮಣಿ’
`ಅದು ಯಾವ ಹೂವು? ನೆಲದ ಮ್ಯಾಲೈತೋ
ಅಂಬರದಾಗೈತೋ, ಗೊತ್ತಾಗ್ಲಿಲ್ವಲ್ಲೆ ಮಣಿ ಕಣ್ಮಣಿ’
`ನೆಲದ ಮೇಲೆ ಹುಟ್ಟಿ ಅಂಬರದಾಗೆ ಚಾಚ್ಕೊಂಡೈತೆ
ಅಂತ ಹೇಳೆ ಮಣಿ, ಬೇಗ ಹೇಳೆ ಮಣಿ’
`ಅಂಬರಕ್ಕೆ ಚಾಚ್ಕೊಂಡೈತೆ!… ಅಂಬರ ಅಂದ್ರೆ ಕನಕಾಂಬರ
ಓ.. ಗೊತ್ತಾಯ್ತು, ಗೊತ್ತಾಯ್ತು… ಕನಕಾ ಕನಕಾ ಕನಕಾ…
ಕನಕ, ಕನಕ ಎಷ್ಟು ಚೆಂದಾಗೈತೆ, ಅಹ ಮುದ್ದಾಗೈತೆ’
`ಹೌದು ಚೆಂದಾಗೈತೆ, ಈಗ ಊರುಹತ್ರ ಬಂದೈತೆ
ಗಾಡಿ ನಿಲ್ಸು ಅಂತ ಹೇಳೆ ಕನಕ’ ||೩||
`ಜನುಮದ ಜೋಡಿ’ ಸಿನಿಮಾದಲ್ಲಿ `ಮಣಿ ಮಣಿ’ ಹಾಡು ಬರುವ ಸಂದರ್ಭವನ್ನು ನೆನಪು ಮಾಡಿಕೊಳ್ಳಿ. ನಾಯಕಿ, ತನ್ನ ಗೆಳತಿಯೊಂದಿಗೆ ಜಾತ್ರೆಗೆ ಬಂದಿರುತ್ತಾಳೆ. ಅವರು ಖುಷಿಯಿಂದ ಅಡ್ಡಾಡುತ್ತಿದ್ದಂತೆಯೇ ಸಂಜೆಯಾಗಿಬಿಡುತ್ತದೆ. ಊರಿಗೆ, ನಡೆದುಕೊಂಡೇ ಹೋದರೆ ಕತ್ತಲಾಗಿಬಿಡುತ್ತೆ ಎಂದು ಅವರಿಬ್ಬರೂ ಪರಿತಪಿಸುತ್ತಿದ್ದಾಗಲೇ, ನಾಯಕಿಯ ಮೇಲೆ ಕಣ್ಣುಹಾಕಿದ್ದ ಊರಿನ ಗೌಡ- `ನನ್ನ ಗಾಡಿಗೆ ಹತ್ಕೊಳ್ಳಿ ,ಕರ್‍ಕೊಂಡು ಹೋಗ್ತೇನೆ’ ಅನ್ನುತ್ತಾನೆ. ನಾಯಕಿ ಖಂಡತುಂಡವಾಗಿ ನಿರಾಕರಿಸುತ್ತಾಳೆ. ಸ್ವಾರಸ್ಯವೆಂದರೆ- ಅದೇ ಜಾತ್ರೆಗೆ ನಾಯಕನೂ ಬಂದಿರುತ್ತಾನೆ. ನಾಯಕಿಯ ಗೆಳತಿಗೆ ಅವನ ಪರಿಚಯವಿರುತ್ತದೆ. `ಅವನು ಒಳ್ಳೆಯವನು. ಬಾ. ಅವನ ಗಾಡೀಲಿ ಹೋಗೋಣ’ ಅನ್ನುತ್ತಾಳೆ ಗೆಳತಿ.
ನೆರೆಹೊರೆಯ ಊರಲ್ಲಿದ್ದರೂ ನಾಯಕ-ನಾಯಕಿಗೆ ಪರಸ್ಪರ ಪರಿಚಯ ಇರಲ್ಲ. ಇಂಥ ಸಂದರ್ಭದಲ್ಲೂ ನಾಯಕನ ಗಾಡಿ ಹತ್ತುತ್ತಾಳೆ ನಾಯಕಿ. ದಾರಿ ಸಾಗಿ.ದಂತೆ ಅವರ ಮಧ್ಯೆ ಪರಿಚಯ ಆಗಬೇಕು. ಆ ಕಾರಣಕ್ಕೇ ಇಬ್ಬರೂ ಮಾತು ಶುರುಮಾಡಬೇಕು. ಅವರು ಮಾತು ಮುಂದುವರಿಸುವಂತೆ ನೋಡಿಕೊಳ್ಳಲು, ಒಂದು ಕೊಂಡಿಯಂತೆ, ಮಧ್ಯವರ್ತಿಯಂತೆ ಇನ್ನೊಂದು ಪಾತ್ರ ಬರಬೇಕು. ಈ ಸಂದರ್ಭದಲ್ಲಿಯೇ ಗಾಡಿಯಲ್ಲಿದ್ದ ಮೂವರ ಮಧ್ಯೆ, ಆ ಮುಸ್ಸಂಜೆಯಲ್ಲಿ, ಹಕ್ಕಿಗಳ ಚಿಲಿಪಿಲಿ ಗಾನದಂತೆ ಹಾಡು ಶುರುವಾಗುತ್ತದೆ; ಮಣಿ ಮಣಿ ಮಣಿ ಮಣಿ ಮಣಿಗೊಂದು ದಾರ…
ಒಂದು ಒಗಟಿನಂತೆ, ಸವಾಲ್-ಜವಾಬ್ ಎಂಬಂತಿರುವ ಈ ಹಾಡು ಸೃಷ್ಟಿಯಾದದ್ದು ಹೇಗೆ? ಅದಕ್ಕೂ ಒಂದು ಚೆಂದದ ಹಿನ್ನೆಲೆ ಇದೆಯಾ ಎಂಬ ಪ್ರಶ್ನೆಯನ್ನು `ಜನುಮದ ಜೋಡಿ’ಯ ನಿರ್ದೇಶಕ ನಾಗಾಭರಣ ಅವರಿಗೇ ಕೇಳಿದರೆ- `ಹೇಳಿದ್ರೆ, ಅದೇ ಒಂದು ದೊಡ್ಡ ಕಥೆ. ನೀವು ನಂಬ್ತೀರಾ? ಮೊದಲು ಆ ಸನ್ನಿವೇಶಕ್ಕೆ ಹಾಡೇ ಇರಲಿಲ್ಲ. ಇದ್ದುದು ಬರೀ ಸಂಭಾಷಣೆ. ಆದರೆ, ಆ ಸಂಭಾಷಣೆಯ ಜಾಗಕ್ಕೆ ಹಾಡು ಬಂದದ್ದು ಹೇಗೆ ಅಂತ ಹೇಳ್ತೀನಿ ಕೇಳಿ’ ಎನ್ನುತ್ತಾ ಆರಂಭಿಸಿಯೇಬಿಟ್ಟರು. ಓವರ್ ಟು ನಾಗಾಭರಣ:
* * *
`ಜನುಮದ ಜೋಡಿ’ಗೆ ಸಂಭಾಷಣೆ ಬರೆದವರು ಡಾ. ಬರಗೂರು ರಾಮಚಂದ್ರಪ್ಪ. ಅದೊಂದು ದಿನ ಚರ್ಚೆಗೆ ಕೂತೆವು. ಅಲ್ಲಿದ್ದವರು ಡಾ. ರಾಜ್‌ಕುಮಾರ್, ವರದಪ್ಪ, ಗೀತ ರಚನೆ ಹಾಗೂ ಸಂಗೀತ ನಿರ್ದೇಶನದ ಹೊಣೆ ಹೊತ್ತಿದ್ದ ಮನೋಹರ್, ಡಾ. ಬರಗೂರು ಮತ್ತು ನಾನು. ಜಾತ್ರೆಯಿಂದ ಗಾಡೀಲಿ ಹೊರಟ ನಾಯಕ-ನಾಯಕಿ ಪರಸ್ಪರ ಪರಿಚಯವಾಗುವ ಸಂದರ್ಭವನ್ನು ಬರಗೂರು ವಿವರಿಸಿದ್ರು. ಒಂದೆರಡು ನಿಮಿಷದ ನಂತರ ಮಾತಾಡಿದ ರಾಜ್- `ಇಲ್ಲ ಕಣ್ರೀ. ಯಾಕೋ ಈ ಸನ್ನಿವೇಶ ಸ್ವಲ್ಪ ಸಪ್ಪೆ ಅನ್ನಿಸ್ತಿದೆ. ಇದು ಇನ್ನೂ ಚೆನ್ನಾಗಿ ಬರ್‍ಬೇಕು’ ಅಂದರು. ವರದಪ್ಪ ಕೂಡ `ಹೌದು, ಹೌದು’ ಎಂದು ದನಿಗೂಡಿಸಿದರು. ತಕ್ಷಣವೇ ನನಗೆ ಗುರುಗಳಾದ ಬಿ.ವಿ. ಕಾರಂತರು ಹೇಳುತ್ತಿದ್ದ- `ಮಾತಾಡಿದರೆ ಹಾಡಿದಂತಿರಬೇಕು. ಹಾಡಿದರೆ ಆಡಿದಂತಿರಬೇಕು’ ಎಂಬ ಮಾತು ನೆನಪಿಗೆ ಬಂತು. ತಕ್ಷಣವೇ- `ಈ ಸನ್ನಿವೇಶಕ್ಕೆ ಆಡುಭಾಷೆಯಲ್ಲಿರುವ ಒಂದು ಹಾಡು ಮಾಡಿಬಿಡೋಣ’ ಎಂದೆ. ರಾಜ್‌ಕುಮಾರ್ ಖುಷಿಯಿಂದ- `ಅದೇ ಸರಿ. ಹಾಡಿಗೆ ಇದು ಒಳ್ಳೇ ಜಾಗ’ ಎಂದರು.
ಆದರೆ, ಅಲ್ಲಿಗೆ ಹಾಡು ತರೋದು ಹೇಗೆ? ಏಕಕಾಲಕ್ಕೆ ಪ್ರಶ್ನೋತ್ತರವೂ, ಸರಸವೂ ಆಗುವಂಥ ಹಾಡು ಬರೆಯೋದು ಹೇಗೆ? ಇಷ್ಟಕ್ಕೂ, ಅಂಥದೊಂದು ಹಾಡು ಬರೆಯಲು ಸಾಧ್ಯವಾ? ಎಂಬ ಅನುಮಾನ ಎಲ್ಲರಿಗೂ ಇತ್ತು. ನಾನು ಮನೋಹರ್ ಕಡೆ ತಿರುಗಿ- `ಈ ದೃಶ್ಯಕ್ಕೆ, ಸಂಭಾಷಣೆಯ ಬದಲಿಗೆ ಹಾಡು ಬೇಕು. ಕೊಡ್ತೀರಾ?’ ಅಂದೆ. ಮನೋಹರ್- `ಓ ಯೆಸ್. ಕೊಡ್ತೀನಿ’ ಎಂದವರೇ- ಎರಡೇ ನಿಮಿಷದಲ್ಲಿ ‘ಮಣಿ ಮಣಿ…’ ಎಂದು ಪಲ್ಲವಿ ಬರೆದೇಬಿಟ್ಟರು.
ಪಲ್ಲವಿ, ಅದರ ಭಾಷೆ, ಹಾಡಿನ ಲಾಲಿತ್ಯ ಡಾ. ರಾಜ್ ಸೋದರರು ಸೇರಿದಂತೆ ಎಲ್ಲರಿಗೂ ತುಂಬಾ ಇಷ್ಟವಾಯಿತು. ನಂತರ ಎಲ್ಲರೂ ಆ ಹಾಡಿಗೆ ಆಡುಭಾಷೆಯ ಪದ ಸೇರಿಸಲು ಕುಳಿತೆವು. ಸಂಭಾಷಣೆಯಲ್ಲಿದ್ದವಲ್ಲ? ಅವೇ ಪದಗಳನ್ನು ಎತ್ತಿಕೊಂಡು, ಎಲ್ಲರೂ ಒಂದಕ್ಕೊಂದು ಜೋಡಿಸ್ತಾ ಹೋದೆವು. ನಾಯಕ-ನಾಯಕಿಯ ಪರಿಚಯ, ಕುತೂಹಲದ ಮಧ್ಯೆಯೇ ಆದಷ್ಟೂ ತಮಾಷೆಯಾಗಿ ಮುಂದುವರಿಯಲಿ ಎಂಬ ಆಸೆ ಎಲ್ಲರಿಗೂ ಇತ್ತು. ಹಾಗೆಂದೇ, ಒಬ್ಬರು ಒಂದು ಪದ ಹೇಳಿದರೆ, ಇನ್ನೊಬ್ಬರು ಅದಕ್ಕೊಂದು ಟ್ವಿಸ್ಟ್ ಕೊಡ್ತಾ ಇದ್ರು. ಸಂಭಾಷಣೆಯಲ್ಲಿದ್ದ ಒಂದೊಂದೇ ಪದ ಸೇರಿಸ್ತಾ ಸೇರಿಸ್ತಾ ಹೋದಂತೆ ದೊಡ್ಡ ಹಾಡೇ ರೆಡಿಯಾಗಿಬಿಡ್ತು. ನಂತರ, ಸಂಗೀತ ನಿರ್ದೇಶಕ ಮನೋಹರ್, ಎಲ್ಲರೂ ಸೇರಿಸಿದ ಸಾಲುಗಳನ್ನು ಸ್ವಲ್ಪ ಪಾಲಿಷ್ ಮಾಡಿ, ಅದಕ್ಕೊಂದು `ಫಿನಿಶಿಂಗ್ ಟಚ್’ ಕೊಟ್ರು. ಈ ಹಾಡನ್ನು ಬೇರೆ ಗಾಯಕರಿಂದ ಹಾಡಿಸಿದ್ರೆ, ತುಟಿ ಚಲನೆಯ ಸಂದರ್ಭದಲ್ಲಿ ವ್ಯತ್ಯಾಸ ಕಾಣಿಸಬಹುದು ಅನ್ನಿಸ್ತು. ಅದೇ ವೇಳೆಗೆ- `ಇಡೀ ಹಾಡು ಸಂಭಾಷಣೆಯ ಧಾಟಿಯಲ್ಲೇ ಇರುವುದರಿಂದ ಅದನ್ನು ಶಿವರಾಜ್‌ಕುಮಾರ್ ಅವರೇ ಹಾಡಲಿ’ ಎಂಬುದು ಎಲ್ಲರ ನಿರ್ಧಾರ ಆಯ್ತು…
ಸಿನಿಮಾದಲ್ಲಿ ಈ ಹಾಡಿನ ಅವಧಿ ೫ ನಿಮಿಷ. ಹಾಡಿನ ಚಿತ್ರೀಕರಣ ನಡೆದದ್ದು ಮಂಡ್ಯ ಸಮೀಪದ ಮಹದೇವಪುರದಲ್ಲಿ. ಹಾಡು ಬರೋದು ಮುಸ್ಸಂಜೆಯ ಹೊತ್ತು ತಾನೆ? ಅದೇ ಕಾರಣದಿಂದ ಪ್ರತೀ ದಿನ ಸಂಜೆ ೫.೩೦ರಿಂದ ೬.೩೦ರ ಮಧ್ಯೆಯೇ, ಸತತ ಒಂದು ವಾರದ ಕಾಲ ಈ ಹಾಡಿನ ಚಿತ್ರೀಕರಣ ನಡೆಸಿದ್ವಿ. ಸೂರ್ಯಾಸ್ತದ ಸಮಯ ಎಲ್ಲಾ ದಿನಗಳಲ್ಲೂ ಒಂದೇ ಥರಾ ಇರಲ್ಲ ನಿಜ. ಆದರೆ, ನಾವು ಏಳು ದಿನ ಶೂಟಿಂಗ್ ನಡೆಸಿದ್ವಿ ಅನ್ನೋದು ಯಾರಿಗೂ ಗೊತ್ತಾಗದಂತೆ ಕ್ಯಾಮರಾದ ಜತೆ ಆಟವಾಡಿ, ಆ ಹಾಡಿನ ಸಂದರ್ಭಕ್ಕೆ ಸುವರ್ಣ ಚೌಕಟ್ಟು ಹಾಕಿಕೊಟ್ಟವರು ಗೌರಿಶಂಕರ್. ಈಗಲೂ ಅಷ್ಟೆ. `ಮಣಿ ಮಣಿ…’ ಹಾಡು ಕೇಳಿದಾಗ ಅಣ್ಣಾವ್ರು ನೀಡಿದ ಪ್ರೋತ್ಸಾಹ, ವರದಪ್ಪನವರ ಮಾರ್ಗದರ್ಶನ, ಬರಗೂರು ಅವರ ಇನ್‌ವಾಲ್ವ್‌ಮೆಂಟ್, ಗೌರಿಶಂಕರ್ ಅವರ ಕ್ಯಾಮೆರಾ ಕೈ ಚಳಕ, ಮನೋಹರ್ ಅವರ ಶ್ರಮ-ಶ್ರದ್ಧೆ ಎಲ್ಲವೂ ನೆನಪಾಗುತ್ತೆ. `ಅಂಥದೊಂದು ಹಾಡಿರುವ ಸಿನಿಮಾವನ್ನು ನಿರ್ದೇಶಿಸಿದೆನಲ್ಲ? ಅದು ನನ್ನ ಹೆಮ್ಮೆ’ ಎಂದು ಮಾತು ಮುಗಿಸಿದರು ನಾಗಾಭರಣ.
ಬಹುಶಃ ಸಂಭಾಷಣೆಯೇ ಹಾಡಾಗಿ ಬದಲಾದ ಉದಾಹರಣೆ ಬೇರೊಂದಿಲ್ಲವೇನೋ… ಅಂದಹಾಗೆ, ಕಾಡುವ ಹಾಡುಗಳೆಲ್ಲ ತಮ್ಮೊಳಗೆ ಒಂದೊಂದು ಕಥೆ ಇಟ್ಕೊಂಡೇ ಇರ್‍ತ. ಯಾಕೋ…

1 Comment »

  1. 1
    ನವೋದಯ ನಾಗರಾಜ್ Says:

    ಅದ್ಭುತವಾದ ವಿವರಣೆ… .. ಮಣಿ..ಮಣಿಕಾಂತ್


RSS Feed for this entry

ನಿಮ್ಮ ಟಿಪ್ಪಣಿ ಬರೆಯಿರಿ