ನಿಮ್ ಹತ್ರಾನೂ ಇದೆಯೇನ್ರೀ ಅಂತರ್ ಪಿಶಾಚೀ?

ksna

 ಆ ಕಡೆಗೆ ಹೊಸದಲ್ಲ, ಈ ಕಡೆಗೆ ಹಳೆಯದೂ ಅಲ್ಲ ಎಂಬಂತೆ ಕಾಣುವ ಫುಲ್ ಶರ್ಟು, ಅಂಥದೇ ಒಂದು ಪ್ಯಾಂಟು, ಮೊಗದ ತುಂಬ ಮಗುವಿನ ನಗೆ, ಸುತ್ತಲೂ ಹಳೆಯ, ಹೊಸ ಪತ್ರಿಕೆಗಳು, ಪುಸ್ತಕಗಳು… ಕವಿ ನಿಸಾರ್ ಅಹಮದ್ ಅವರು, ಪದ್ಮನಾಭನಗರದ ತಮ್ಮ ಮನೆಯಲ್ಲಿ ಕಾಣಸಿಗುವುದೇ ಹೀಗೆ. ಅವರೊಂದಿಗೆ ಮಾತಾಡಲು, ಸ್ವಲ್ಪ ಹೆಚ್ಚಿನ ಸಲುಗೆಯಿದ್ದರೆ ಹರಟೆ ಹೊಡೆಯಲು ಇಂಥದೇ ವಿಷಯ ಆಗಬೇಕೆಂದಿಲ್ಲ. ಬೆಂಗಳೂರಿನ ಗಿಜಿಗಿಜಿ ಟ್ರಾಫಿಕ್ನಿಂದ ಹಿಡಿದು ವಿದ್ಯಾರ್ಥಿ ಭವನದ ಮಸಾಲೆ ದೋಸೆಯವರೆಗೆ; ಕಲಾಸಿಪಾಳ್ಯದ ತರಕಾರಿ ಮಾರುಕಟ್ಟೆಯ ವಹಿವಾಟಿನಿಂದ ಆರಂಭಿಸಿ ಈ ಕ್ಷಣದಲ್ಲಿ ಎಲ್ಲರನ್ನೂ ಕಾಡುತ್ತಿರುವ ಜಾಗತಿಕ ಆರ್ಥಿಕ ಬಿಕ್ಕಟ್ಟಿನವರೆಗೆ ತುಂಬ ಆಪ್ತವಾಗಿ ಮಾತಾಡಬಲ್ಲವರು ನಿಸಾರ್ ಅಹಮದ್. ಈ ಮಾತುಕತೆಯ ಮಧ್ಯೆಯೇ ಅವರು ತುಂಬ ಕಾಳಜಿಯಿಂದ ‘ಕೆಲ್ಸ ಹೇಗಿದೆಯಪ್ಪಾ? ಸಂಬಳ ಚೆನ್ನಾಗಿದೆಯಾ? ಈಚೆಗೆ ಪ್ರೊಮೇಷನ್ ಏನಾದ್ರೂ ಆಯ್ತಾ? ಊರಲ್ಲಿ ಅಪ್ಪ-ಅಮ್ಮ ಚೆನ್ನಾಗಿದ್ದಾರಾ? ಮಕ್ಳು ಎಷ್ಟು ನಿಮ್ಗೆ? ಅವರೆಲ್ಲ ಯಾವ ಸ್ಕೂಲಲ್ಲಿ, ಎಷ್ಟನೇ ತರಗತಿಗಳಲ್ಲಿ ಓದ್ತಾ ಇದಾರೆ?’ ಎಂದೆಲ್ಲಾ ವಿಚಾರಿಸಿಕೊಳ್ಳುತ್ತಾರೆ. ಮಧ್ಯೆ ಮಧ್ಯೆ- ಪಾಪ, ಪಾಪ, ಒಳ್ಳೇದಾಗ್ಲಿ, ದೇವರು ಒಳ್ಳೇದು ಮಾಡಲಿ’ ಎಂದು ಹೇಳುತ್ತಲೇ ಇರುತ್ತಾರೆ. ನಂತರ ಬಿಸ್ಸಿ ಬಿಸೀ ಟೀ ತರಿಸಿ, ಜತೆಗೆ ಗುಡ್ಡೇ ಬಿಸ್ಕತ್ ಇಟ್ಟು; ಇವಿಷ್ಟನ್ನೂ ತಿಂದು ಮುಗಿಸಿ. ನಂತರ ಮಾತಾಡೋಣ ಎಂದು ಹುಕುಂ ಜಾರಿ ಮಾಡುತ್ತಾರೆ. ಒಂದೆರಡು ನಿಮಿಷದ ನಂತರ, ತಾವೂ ಒಂದು ಗುಟುಕು ಚಹಾ ಹೀರಿ ಬೆಂಗಳೂರಲ್ಲಿ ಸೈಟು ತಗೊಂಡಿದೀರಾ? ಈಗಲೇ ಒಂದಷ್ಟು ದುಡ್ಡು ಹೊಂದಿಸಿ ತಗೊಳ್ಳಿ. ಕೆಎಚ್ಬಿಯವರು ಅರ್ಜಿ ಕರೆದಾಗ ಟ್ರೈ ಮಾಡಿ. ಅದರಲ್ಲಿ ಪ್ರಯೋಜನ ಆಗದಿದ್ರೆ ಯಾವುದಾದ್ರೂ ಕೋ ಆಪರೇಟಿವ್ ಸೊಸೈಟಿಯಿಂದ ಕಡಿಮೆ ಬಡ್ಡಿಗೆ ಸಾಲ ತಗೊಂಡು ಸೈಟ್ ಮಾಡಿಕೊಳ್ಳಿ. ಆದಷ್ಟು ಬೇಗ ಸೆಟಲ್ ಆಗಿ…’ ಎಂದೆಲ್ಲ ಕಿವಿಮಾತು ಹೇಳುತ್ತಾರೆ. ಮನೆಯ ಹಿರಿಯನಂತೆ! ಮಾತಿನ ಮಧ್ಯೆ ಹಿರಿಯರಾದ ಕುವೆಂಪು, ರಾಜರತ್ನಂ, ಮಾಸ್ತಿ, ಪುತಿನ, ಬೇಂದ್ರೆ, ವಿ.ಸೀ. ಅವರ ವಿಷಯ ಬಂದರಂತೂ ನಿಸಾರ್ ಭಾವಪರವಶರಾಗುತ್ತಾರೆ. ಆ ಹಿರಿಯರ ದೊಡ್ಡತನದ ಬಗ್ಗೆ ಎಷ್ಟು ಹೇಳಿದರೂ ಅವರಿಗೆ ಸಮಾಧಾನವಿಲ್ಲ. ಅವರ ಹೆಸರು ಹೇಳಿದಾಗೆಲ್ಲ ಭಾವುಕರಾಗಿ, ಒಮ್ಮೆ ಮೇಲೆ ನೋಡಿ ಕೈ ಮುಗಿಯುತ್ತಾರೆ…. *** ಎರಡು ತಿಂಗಳ ಹಿಂದೆ, ಹೀಗೆ ಯಾವುದೋ ವಿಷಯದ ಬಗ್ಗೆ ಗಂಭೀರವಾಗಿ ಮಾತಾಡುತ್ತಿದ್ದರು ನಿಸಾರ್ ಅಹಮದ್. ಅದೇ ಸಂದರ್ಭಕ್ಕೆ ಸರಿಯಾಗಿ ನನ್ನ ಮೊಬೈಲು ಒಂದೇ ಸಮನೆ ಚೀರತೊಡಗಿತು. ತಕ್ಷಣವೇ ಮಾತು ನಿಲ್ಲಿಸಿದ ನಿಸಾರ್ ಹೀಗೆಂದರು : ‘ಅಯ್ಯೋ, ನಿಮ್ಮ ಹತ್ರಾನೂ ಇದೆಯೇನ್ರೀ ಈ ಅಂತರ್ ಪಿಶಾಚೀ! ಅಬ್ಬಬ್ಬಾ, ಏನ್ರೀ ಇದರ ಹಾವಳಿ? ಅಡುಗೆ ಮನೇಲಿ ಮೊಬೈಲು, ಸ್ನಾನಕ್ಕೆ ಹೋದ್ರೂ ಮೊಬೈಲು, ಬೆಡ್ರೂಮಲ್ಲೂ ಮೊಬೈಲು! ನನ್ನ ಮಗನ ಹತ್ರ ಎರಡಿದೆ. ಸೊಸೆಯ ಹತ್ರಾನೂ ಒಂದಿದೆ. ಮೊಬೈಲ್ ಇಲ್ಲದವರೇ ಜಗತ್ತಿನಲ್ಲಿ ಇಲ್ಲವೇನೋ ಅನ್ನುವಂತಿದೆ. ಈಗಿನ ಪರಿಸ್ಥಿತಿ. ಹೋಗಲಿ, ಮೊಬೈಲ್ನಲ್ಲಿ ಹೆಚ್ಚಿನವರು ಮಾತಾಡೋದಾದ್ರೂ ಏನು? ಅದೇ ಹಾಯ್ಬಾಯ್, ಗುಡ್ ಮಾರ್ನಿಂಗ್. ಗುಡ್ ಈವನಿಂಗ್, ಊಟ ಆಯ್ತಾ… ಗುಡ್ನೈಟ್… ಇಷ್ಟೇನೇ. ಆದರೆ, ಈ ಮೊಬೈಲು ಎಲ್ಲರ ಸ್ವಾತಂತ್ರ್ಯವನ್ನೂ ಹಾಳು ಮಾಡ್ತಾ ಇದೆ ಅನ್ನೋದು ನನ್ನ ಸ್ಪಷ್ಟ ಅನಿಸಿಕೆ ಕಣ್ರೀ. ನಾನಂತೂ ಅದರ ತಂಟೆಗೆ ಹೋಗಲ್ಲ . ಅದು ಹೊತ್ತು ಗೊತ್ತಿಲ್ಲದೆ ಕಾಟ ಕೊಡುತ್ತೆ. ಹಾಗಾಗಿ ಅದಕ್ಕೆ ‘ಅಂತರ್ ಪಿಶಾಚಿ’ ಅಂತಾನೇ ಹೆಸರಿಟ್ಟಿದ್ದೀನಿ’. *** ತಿಂಗಳ ಹಿಂದೆ, ಪುಸ್ತಕ ಬಿಡುಗಡೆಯ ಆಹ್ವಾನ ಪತ್ರಿಕೆ ಕೊಡಲು ಹೋದಾಗ ಅದೇ ಹಳೆಯ ಪ್ರೀತಿಯಿಂದ ಮಾತಿಗೆ ಕೂತರು ನಿಸಾರ್ ಅಹಮದ್. ಆಗಲೇ, ಮೊಬೈಲ್ಗೆ ಕೆಲವರು ‘ಸಂಚಾರಿ ವಾಣಿ’ ಎಂದು ನಾಮಕರಣ ಮಾಡಿರುವುದೂ ನೆನಪಾಯಿತು. ಅದನ್ನೇ ಹೇಳಿ, ‘ಸಂಚಾರಿ ವಾಣಿ’ ಎಂಬುದಕ್ಕಿಂತ ‘ಅಂತರ್ ಪಿಶಾಚಿ’ ಎಂಬ ಹೆಸರೇ ಚೆನ್ನಾಗಿದೆ ಸಾರ್ ಎಂದೆ. ತಕ್ಷಣವೇ ಏನೋ ನೆನಪಾದವರಂತೆ ತಮ್ಮ ರೂಮಿಗೆ ಹೋಗಿ ಬಂದರು ನಿಸಾರ್. ಹೊರಬಂದವರ ಮೊಗದಲ್ಲಿ ತಿಳಿ ನಗೆಯಿತ್ತು. ದೊಡ್ಡ ಖುಷಿಯಿತ್ತು. ಮತ್ತು ಅವರ ಕೈಲೂ ಒಂದು ಮೊಬೈಲ್ ಇತ್ತು! ‘ಏನ್ಸಾರ್ ಇದೂ, ನಿಮ್ಮ ಹತ್ರಾನೂ ಇದೆ ಅಂತರ್ ಪಿಶಾಚೀ?’ ಅಂದೇಬಿಟ್ಟೆ. ಈ ಮಾತು ಕೇಳಿ ನಸುನಕ್ಕ ನಿಸಾರ್ ಹೇಳಿದರು : ‘ಮಗ ತಂದುಕೊಟ್ಟ ಕಣ್ರಿ. ನಾನು ಬೇಡ ಅಂದ್ರೂ ಕೇಳಲಿಲ್ಲ. ಇನ್ನು ಮಾತೇ ಆಡಂಗಿಲ್ಲ. ಈ ಅಂತರ್ ಪಿಶಾಚಿಯ ಕಾಟವನ್ನು ನಾನೂ ಸಹಿಸಿಕೊಳ್ಳಲೇಬೇಕು. ಇರಲಿ. ನನ್ನ ನಂಬರ್ ಬರೆದುಕೊಳ್ಳಿ : ೯೪೮೦೭…

ನಿಮ್ಮ ಟಿಪ್ಪಣಿ ಬರೆಯಿರಿ