ಸ್ನೇಹದ ಕಡಲಲ್ಲೀ, ನೆನಪಿನ ದೋಣಿಯಲೀ
ಚಿತ್ರ: ಶುಭಮಂಗಳ , ಗೀತರಚನೆ: ಚಿ. ಉದಯಶಂಕರ್
ಸಂಗೀತ ವಿಜಯಭಾಸ್ಕರ್. ಗಾಯನ‘ ಎಸ್.ಪಿ. ಬಾಲಸುಬ್ರಹ್ಮಣ್ಯಂ
ಸ್ನೇಹದ ಕಡಲಲ್ಲೀ, ನೆನಪಿನ ದೋಣಿಯಲೀ
ಪಯಣಿಗ ನಾನಮ್ಮಾ, ಪಯಣಿಗ ನಾನಮ್ಮಾ
ಪ್ರೀತಿಯ ತೀರವ, ಸೇರುವುದೊಂದೇ
ಬಾಳಿನ ಗುರಿಯಮ್ಮ, ಬಾಳಿನ ಗುರಿಯಮ್ಮಾ ||ಪ||
ಬಾಲ್ಯದ ಆಟ, ಆ ಹುಡುಗಾಟ ಇನ್ನೂ ಮಾಸಿಲ್ಲ ಆಹಾ…
ಆಟದೆ ಸೋತು ರೋಷದಿ ಕಚ್ಚಿದ
ಗಾಯವ ಮರೆತಿಲ್ಲಾ ಆಹಾ… ಗಾಯವ ಮರೆತಿಲ್ಲ ||೧||
ಶಾಲೆಗೆ ಚಕ್ಕರ್ ಊಟಕೆ ಹಾಜರ್ ಲೆಕ್ಕದಿ ಬರಿಸೊನ್ನೆ
ಎನ್ನುತ ನಾನು ಕೆಣಕಲು ನಿನ್ನ
ಊದಿಸಿದೇ ಕೆನ್ನೇ ಆಹಾ… ನಾನದ ಮರೆಯುವೆನೇ ||೨||
‘ಸ್ನೇಹದ ಕಡಲಲ್ಲೀ… ನೆನಪಿನ ದೋಣಿಯಲೀ…’
ಸಂಗವ ಬಿಟ್ಟು ಜಗಳ ಆಡಿದ ದಿನಾವಾ ಮರೆತಿಲ್ಲ, ಆಹಾ….
ಮರೆಯಲಿ ನನ್ನಾ ಮೋರಿಗೆ ತಳ್ಳಿದ
ತುಂಟಿಯ ಮರೆತಿಲ್ಲ, ಆಹಾ… ಜಾಣೆಯ ಮರೆತಿಲ್ಲ ||೩||
ಈ ಹಾಡು ಕೇಳುತ್ತಿದ್ದಂತೆಯೇ ಬಹುಪಾಲು ಜನರಿಗೆ ತಮ್ಮ ಬಾಲ್ಯ ನೆನಪಾಗುತ್ತದೆ. ಬಾಲ್ಯದ ದಿನಗಳಲ್ಲಿ ತಾವು ಆಡಿದ ತುಂಟಾಟಗಳು, ಮಾಡಿದ ಚೇಷ್ಟೆಗಳು, ತಮಾಷೆಗಳು, ಗೆಳಯರೊಂದಿಗೆ ಆಡಿದ ಆಟ, ಜಗಳ, ಕುಸ್ತಿ…. ಎಲ್ಲವೂ ಒಂದೊಂದಾಗಿ ನೆನಪಿಗೆ ಬರುತ್ತವೆ. ಆ ಸಂದರ್ಭದಲ್ಲಿಯೇ ಎದುರು ಮನೆಯಲ್ಲಿಯೋ, ಪಕ್ಕದ ಬೀದಿಯಲ್ಲಿಯೋ ಇದ್ದ ಗೆಳತಿಯೂ ನೆನಪಾಗುತ್ತಾಳೆ. ಅವಳೊಂದಿಗೆ ಕುಂಟಾಬಿಲ್ಲೆ ಆಡಿದ್ದು, ಕಾಗೆ ಎಂಜಲು ಮಾಡಿಕೊಂಡು ಪೆಪ್ಪರ್‌ಮೆಂಟ್ ತಿಂದದ್ದು, ಯಾವುದೋ ಸಣ್ಣ ಕಾರಣಕ್ಕೆ ‘ಠೂ’ ಬಿಟ್ಟಿದ್ದು, ನಂತರ ಭರ್ತಿ ಎರಡೂವರೆ ತಿಂಗಳು ಮಾತಾಡದೆ ಉಳಿದದ್ದು; ಹಾಗಿದ್ದರೂ ಕದ್ದು ಕದ್ದು ಅವಳ ಬಗ್ಗೆ ವಿಚಾರಿಸಿಕೊಂಡದ್ದು, ಕಡೆಗೊಮ್ಮೆ ಹಬ್ಬದ ನೆಪದಲ್ಲಿ ಮಾತಾಡಿಸಿದ್ದು; ನಂತರ-ನೀನೇ ಮೊದಲು ಮಾತಾಡಿಸಿದ್ದು ಎಂದು ಇಬ್ಬರೂ ಜಂಭ ಹೊಡೆದದ್ದು… ಇಂಥ ಘಟನೆಗಳೆಲ್ಲ ಬಿಟ್ಟೂ ಬಿಡದೆ ನೆನಪಾಗುತ್ತವೆ. ಹಾಗಾಗಿ, ಹಾಡು ಕೇಳುತ್ತಾ ಹೋದಂತೆಲ್ಲ ಅದು ಚಿತ್ರಗೀತೆ ಅನ್ನಿಸುವುದಿಲ್ಲ. ಬದಲಿಗೆ, ನಮ್ಮ ಬದುಕಿನ ಹಾಡು, ಹಾಡಲ್ಲಿರುವುದೆಲ್ಲ ನಮ್ಮದೇ ಪಾಡು ಎನ್ನಿಸಿಬಿಡುತ್ತದೆ.
ಈ ಹಾಡು ಬರೆದವರು ಚಿ. ಉದಯಶಂಕರ್. ‘ಶುಭಮಂಗಳ’ ಚಿತ್ರದಲ್ಲಿ ಬಾಲ್ಯದ ‘ಸ್ನೇಹ’ ಹೊಂದಿದ್ದ ನಾಯಕ-ನಾಯಕಿ ಯೌವ್ವನದ ದಿನಗಳಲ್ಲಿ ಭೇಟಿಯಾಗುತ್ತಾರೆ. ಆಗ ನಾಯಕಿಯನ್ನು ದೋಣಿಯಲ್ಲಿ ಕೂರಿಸಿಕೊಂಡು ಹಾಗೇ ಸುಮ್ಮನೆ ಒಂದು ರೌಂಡ್ ಹೊರಡುತ್ತಾನೆ ನಾಯಕ. ಅವನಿಗೆ ಆ ಕ್ಷಣಕ್ಕೆ ಬಾಲ್ಯದ ಬದುಕು ನೆನಪಾಗುತ್ತದೆ. ಅವಳಿಗೂ ಹಳೆಯ ದಿನಗಳನ್ನು ನೆನಪಿಸಬೇಕು ಎಂಬ ಮಹದಾಸೆಯಿಂದ ಆತ ಹಾಡುತ್ತಾನೆ: ‘ಸ್ನೇಹದ ಕಡಲಲ್ಲೀ… ನೆನಪಿನ ದೋಣಿಯಲೀ… ಪಯಣಿಗ ನಾನಮ್ಮ…’
‘ಬಾಲ್ಯದ ಸ್ನೇಹವೇ ಯೌವ್ವನದಲ್ಲಿ ಪ್ರೇಮವಾಗಿ ಬದಲಾಗುತ್ತದೆ!’ -ಇದು ಎಂಥವರೂ ಒಪ್ಪಲೇಬೇಕಾದ ಕಹಿ ಸತ್ಯ. ಎಷ್ಟೋ ಸಂದರ್ಭದಲ್ಲಿ ಚಿಕ್ಕಂದಿನಿಂದಲೂ ತುಂಬಾ ಸಲುಗೆಯಿದೆ ಎಂಬ ಕಾರಣ ಮುಂದಿಟ್ಟುಕೊಂಡೇ ಹುಡುಗರು ಪ್ರೊಪೋಸ್ ಮಾಡಿಬಿಡುತ್ತಾರೆ. ವಾಸ್ತವ ಹೀಗಿದ್ದರೂ, ಚಂದುಳ್ಳಿ ಚೆಲುವೆಯಂಥ ನಾಯಕಿ ಎದುರಿಗೇ ಇದ್ದಾಗಲೂ ಪ್ರೇಮದ ಹಾಡು ಹೇಳುವ ಬದಲು ಸ್ನೇಹದ ಹಾಡು ಹೇಳುತ್ತಾನೆ. ‘ಅವಳ’ ಸನ್ನಿಯಲ್ಲಿ ‘ಅವನು’ ಸ್ನೇಹವನ್ನೇ ಧ್ಯಾನಿಸುವಂಥ ಹಾಡನ್ನು ಹೇಗೆ ಬರೆದರು ಉದಯಶಂಕರ್? ಈ ಹಾಡು ಸೃಷ್ಟಿಗೆ ಅವರಿಗೆ ಪರೋಕ್ಷವಾಗಿ ನೆರವಿಗೆ ಬಂದ ಅಂಶಗಳಾದರೂ ಯಾವುವು?
ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಹೇಳಿದವರು ‘ಶುಭಮಂಗಳ’ದ ನಾಯಕನೂ ಆಗಿದ್ದ ಪ್ರಣಯ ರಾಜ ಶ್ರೀನಾಥ್. ಆ ಹಾಡಿನ ಕಥೆ ಹೀಗೆ…
ಇದು ೧೯೭೫ರ ಮಾತು. ಆ ವೇಳೆಗೆ ನಾನು ೩೯ ಚಿತ್ರಗಳಲ್ಲಿ ಅಭಿನಯಿಸಿದ್ದೆ. ನಾಯಕ ಅನ್ನಿಸಿಕೊಂಡಿದ್ದೆ ನಿಜ. ಆದರೆ ‘ಸ್ಟಾರ್’ ಅನ್ನಿಸಿಕೊಂಡಿರಲಿಲ್ಲ. ಮನಸ್ಸಿಗೆ ತೃಪ್ತಿಕೊಡುವಂಥ ಪಾತ್ರಗಳು ಸಿಕ್ಕಿರಲಿಲ್ಲ. ಅಂಥ ಸಂದರ್ಭದಲ್ಲಿ ನಿರ್ದೇಶಕ ಕೆ.ಎಸ್.ಎಲ್. ಸ್ವಾಮಿ (ರವೀ) ತಮ್ಮ ರಘುನಂದನ್ ಇಂಟರ್‌ನ್ಯಾಷನಲ್ ಸಂಸ್ಥೆಗಾಗಿ ಒಂದು ಸಿನಿಮಾ ನಿರ್ದೇಶಿಸುವಂತೆ ಪುಟ್ಟಣ್ಣ ಕಣಗಾಲ್ ಅವರನ್ನು ಕೇಳಿಕೊಂಡರು. ಆ ವೇಳೆಗಾಗಲೇ ನಿರ್ದೇಶಕರಾಗಿ, ಅದರಲ್ಲೂ ಕಾದಂಬರಿ ಆಧಾರಿತ ಸಿನಿಮಾಗಳ ನಿರ್ದೇಶನದಿಂದಾಗಿ ಖ್ಯಾತಿಯ ತುತ್ತ ತುದಿಯಲ್ಲಿದ್ದರು ಪುಟ್ಟಣ್ಣ. ರವೀ ಅವರು ಒಂದು ಸಿನಿಮಾ ನಿರ್ದೇಶಿಸಿ ಕೊಡಿ ಎಂದು ಕೇಳಿಕೊಂಡರಲ್ಲ? ಆಗ, ಶ್ರೀಮತಿ ‘ವಾಣಿ’ ಅವರ ‘ಶುಭಮಂಗಳ’ ಕಾದಂಬರಿಯನ್ನು ಕೈಗೆತ್ತಿಕೊಂಡಿದ್ದರು ಪುಟ್ಟಣ್ಣ.
ಆ ಚಿತ್ರಕ್ಕೆ ನಟ ಶಿವರಾಂ ಸಹಾಯಕ ನಿರ್ದೇಶಕರು. ಅವರಿಗೆ ನನ್ನ ಮೇಲೆ ಯಾಕೋ ವಿಶೇಷ ಪ್ರೀತಿ. ನಿರ್ಮಾಪಕ ರವೀ ಅವರಿಗೂ ನನ್ನ ಮೇಲೆ ವಿಪರೀತ ಮಮಕಾರ. ಈ ಹೊಸ ಚಿತ್ರಕ್ಕೆ ಶ್ರೀನಾಥ್ ಅವರನ್ನೇ ನಾಯಕನನ್ನಾಗಿ ತೆಗೆದುಕೊಳ್ಳಿ ಎಂದು ರವೀ ಹಾಗೂ ಶಿವರಾಂ ಇಬ್ಬರೂ ಪುಟ್ಟಣ್ಣ ಅವರಲ್ಲಿ ಕೇಳಿಕೊಂಡಿದ್ದರು. ‘ನನ್ನ ಸಿನಿಮಾದ ನಾಯಕ-ನಾಯಕಿಯ ಬಗ್ಗೆ ನನಗಿರುವ ಅಂದಾಜುಗಳೇ ಬೇರೆ. ನನ್ನ ಕಥೆಗೆ ಒಪ್ಪುವಂತಿದ್ದರೆ ಮಾತ್ರ ಶ್ರೀನಾಥ್‌ನನ್ನು ಹೀರೋ ಮಾಡ್ತೀನಿ’ ಎಂದು ಮೊದಲೇ ಹೇಳಿದ್ದರು ಪುಟ್ಟಣ್ಣ. ನಂತರ, ನನ್ನನ್ನು ಐದಾರು ಬಗೆಯಲ್ಲಿ ‘ಟೆಸ್ಟ್’ ಮಾಡಿದರು. ಕಡೆಗೊಮ್ಮೆ ನಾನು ‘ಶುಭಮಂಗಳ’ದ ಹೀರೋ ಆದೆ.
ಸಿನಿಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಗೀತೆ ರಚನೆಯ ಕೆಲಸ ಶುರುವಾಯಿತು. ಈ ಎಲ್ಲ ಕೆಲಸ ನಡೆದದ್ದು ಮದ್ರಾಸಿನಲ್ಲಿ. ಪುಟ್ಟಣ್ಣನವರ ಸಿನಿಮಾ ಕುರಿತ ಚರ್ಚೆ ಎಂದರೆ, ಅದೊಂಥರಾ ಪಿಕ್‌ನಿಕ್ ಇದ್ದಂತೆ ಇರುತ್ತಿತ್ತು. ಸಿನಿಮಾದ ಚರ್ಚೆಯಲ್ಲಿ ನಾಯಕ, ನಾಯಕಿ, ಸಂಗೀತ ನಿರ್ದೇಶಕ, ಗೀತೆರಚನೆಕಾರ, ಗಾಯಕ…. ಹೀಗೆ ಎಲ್ಲರೂ ಪಾಲ್ಗೊಳ್ಳಬಹುದಿತ್ತು. ನಿರ್ದೇಶಕ ಪುಟ್ಟಣ್ಣ ಕಣಗಾಲ್, ನಿರ್ಮಾಪಕ ರವೀ, ಸಹ ನಿರ್ದೇಶಕ ಶಿವರಾಂ, ಸಂಗೀತ ನಿರ್ದೇಶಕ ವಿಜಯ ಭಾಸ್ಕರ್, ಗೀತ ರಚನೆಕಾರ ಚಿ. ಉದಯಶಂಕರ್… ಇವರೆಲ್ಲಾ ಈ ಸಿನಿಮಾದಿಂದ ಶ್ರೀನಾಥ್‌ಗೆ ಒಳ್ಳೆಯದಾಗಲಿ ಎಂದೇ ಬಯಸಿದ್ದರು.
ಈ ಸಂದರ್ಭದಲ್ಲಿಯೇ- ಸಿನಿಮಾ ಮೊದಲ ಹಾಡು ಹೇಗಿರಬೇಕು ಎಂಬ ಚರ್ಚೆ ಶುರುವಾಯಿತು. ‘ಬಾಲ್ಯವನ್ನು ನೆನಪು ಮಾಡಿಕೊಂಡು ನಾಯಕ ಹಾಡುವಂತಾಗಲಿ. ಇವನ ಹಾಡು ಕೇಳಿ ನಾಯಕಿಗೂ ಬಾಲ್ಯ ನೆನಪಾಗುವಂತೆ ಹಾಡು ಸೃಷ್ಟಿಯಾಗಲಿ’ ಎಂದರು ಪುಟ್ಟಣ್ಣ. ಹೀಗೆ, ಹಾಡಿನ ಸಂದರ್ಭದ ಬಗ್ಗೆ ಹೇಳಿದವರೇ-ತಮ್ಮ ಬಾಲ್ಯದ ಬಗ್ಗೆಯೂ ಹೇಳಿಕೊಂಡರು. ತಾವು ಶಾಲೆಗೆ ಚಕ್ಕರ್ ಹೊಡೆಯುತ್ತಿದ್ದುದು, ತರಲೆ ಮಾಡುತ್ತಿದ್ದುದು, ಕಾಲೇಜು ಮೆಟಟಿಲೇರದೇ ಹೋದದ್ದು… ಎಲ್ಲವನ್ನೂ ನೆನಪಿಸಿಕೊಂಡರು. ಅವರ ಮಾತು ಕೇಳುತ್ತಿದ್ದಂತೆಯೇ ಚಿ. ಉದಯಶಂಕರ್, ಕೆ.ಎಸ್.ಎಲ್. ಸ್ವಾಮಿ, ವಿಜಯಭಾಸ್ಕರ್ ಕೂಡ ಬಾಲ್ಯದ ಬಗ್ಗೆ ತಮ್ಮ ತುಂಟತನದ ಬಗ್ಗೆ ಹೇಳಿಕೊಂಡರು. ಎಲ್ಲರ ಕಥೆ ಕೇಳಿದ ನಂತರ- ‘ಸಾರ್, ನಾಯಕ ಕಡಲಿನಲ್ಲಿ ದೋಣಿ ವಿಹಾರ ಹೋಗ್ತಾ ಇರ್‍ತಾನೆ. ಆಗಲೇ ಹಳೆಯ ನೆನಪಲ್ಲಿ ತೇಲಿ ಹೋಗಿ ಬಾಲ್ಯದ ಮಧುರ ಸ್ನೇಹವನ್ನು ನೆನಪು ಮಾಡಿಕೊಳ್ತಾನೆ ಅಲ್ಲವಾ? ಅಂದರೆ, ಇದು ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಾನ…. ಅಂದರು ಚಿ. ಉದಯಶಂಕರ್.
ಅವರ ಮಾತು ಎಲ್ಲರಿಗೂ ಇಷ್ಟವಾಯಿತು. ಒಪ್ಪಿಗೆಯಾಯತು. ನಂತರದ ಹತ್ತು ನಿಮಿಷದಲ್ಲಿ ಒಬ್ಬರೇ ಕೂತು ಏನನ್ನೋ ಗುಣಗುಣಿಸುತ್ತಾ ಹಾಡಿನ ಪಲ್ಲವಿ ಹಾಗೂ ಚರಣವನ್ನು ಬರೆದರು ಉದಯಶಂಕರ್. ಮೊದಲ ಚರಣದಲ್ಲಿ ಅವರು-‘ಆಟದೆ ಸೋತೂ ರೋಷದಿ ಕಚ್ಚಿದ ಗಾಯವ ಮರೆತಿಲ್ಲ…’ ಎಂದು ಬರೆದರಲ್ಲ? ಅದನ್ನು ನೋಡಿ ಎಲ್ಲರಿಗೂ ಖುಷಿಯಾಯಿತು. ನಗು ಬಂತು. ತಂತಮ್ಮ ಬಾಲ್ಯ ಬಿಟ್ಟೂ ಬಿಡದೆ ನೆನಪಾಯ್ತು. ಪುಟ್ಟಣ್ಣ ಅವರಂತೂ ಆನಂದ ತುಂದಿಲರಾಗಿ-ಇದೇ, ಇದೇ ನನಗೆ ಬೇಕಾಗಿದ್ದುದ್ದು. ಈ ಸಾಲುಗಳಲ್ಲಿ ನಾಯಕ-ನಾಯಕಿ ಇಬ್ರೂ ಸಿಕ್ತಾರೆ. ಹಾಡು ಅವರಿಬ್ಬರದೇ ಅಲ್ಲ, ಎಲ್ಲರದೂ ಆಗುತ್ತೆ. ಇದು ಖಂಡಿತ ಎಲ್ಲರನ್ನೂ ತಲುಪುತ್ತೆ ಎಂದು ಭವಿಷ್ಯ ಹೇಳಿಬಿಟ್ಟರು.
ಈ ಪ್ರೋತ್ಸಾಹದ ಮಾತುಗಳಿಂದ ಸಹಜವಾಗಿಯೇ ಖುಷಿಯಾದ ಉದಯಶಂಕರ್, ಎರಡನೇ ಚರಣದಲ್ಲಿ ಎಲ್ಲರ ಬದುಕಲ್ಲೂ ನಡೆದಿರಬಹುದಾದ ಒಂದು ಅದ್ಭುತ ಸಾಲನ್ನೇ ಹಾಡಾಗಿಸಿದರು. ಅದೇ-ಶಾಲೆಗೆ ಚಕ್ಕರ್, ಊಟಕೆ ಹಾಜರ್ ಲೆಕ್ಕದಿ ಬರಿ ಸೊನ್ನೆ…’ ಇಷ್ಟನ್ನು ಮಾತ್ರ ಕೇಳಿದರೆ-ಅದು, ಹೀರೊ ತನ್ನ ಬಗ್ಗೆಯೇ ಹೇಳಿಕೊಳ್ಳುವ ಮಾತು ಅನ್ನಿಸುವುದುಂಟು. ಆದರೆ ಹಾಡಿನ ಸಾಲನ್ನು ಅಷ್ಟಕ್ಕೇ ಬಿಡಲಿಲ್ಲ ಉದಯಶಂಕರ್… ಎನ್ನುತ ನಾನು ಕೆಣಕಲು ನಿನ್ನ ಊದಿಸಿದೇ ಕೆನ್ನೆ, ಆಹಾ… ನಾನದ ಮರೆಯುವೆನೇ?’ ಎಂಬ ಇನ್ನೊಂದು ಸಾಲು ತಂದಿಟ್ಟರು. ಪರಿಣಾಮ, ಹಾಡಿನ ಮೊದಲ ಸಾಲು ಕೇಳಿದಾಗ ಖುಷಿಯಿಂದ ನಗುವ ನಾಯಕಿ ಹಿಂದೆಯೇ ಬರುವ ಇನ್ನೊಂದು ಸಾಲು ಕೇಳಿದಾಗ ಹುಸಿ ಮುನಿಸಿನಿಂದ ನಾಯಕನಿಗೆ ಹೊಡೆಯಲು ಹೋಗುತ್ತಾಳೆ. ಹಾಡು ನೋಡುತ್ತಾ ಕೂತವರಿಗೆ ಇದೆಲ್ಲಾ ತಮ್ಮದೇ ಬದುಕಿನ, ನೆನಪಿನ ಪುಟ ಎಂದು ಮತ್ತೆ ಮತ್ತೆ ಅನ್ನಿಸುವುದೇ ಆಗ.
ಹೀಗೆ, ಗೆಳೆತನದ ಬಗ್ಗೆ ಸವಿ ಮಾತುಗಳನ್ನು ಆಡಿಕೊಂಡು, ಶ್ರೀನಾಥ್‌ಗೆ ಒಳಿತಾಗಲಿ, ಎಂಬ ಸದಾಶಯದಿಂದಲೇ ಉದಯಶಂಕರ್ ಹಾಡು ಬರೆದರು. ವಿಜಯಭಾಸ್ಕರ್ ಅದಕ್ಕೆ ರಾಗ ಸಂಯೋಜಿಸಿದರು. ಅದೊಂದು ದಿನ ಎಸ್ಪೀಬಿ-ಎದೆ ತುಂಬಿ ಹಾಡಿಯೂ ಬಿಟ್ಟರು.
‘ಶುಭಮಂಗಳ’ದ ಶೂಟಿಂಗ್ ನಡೆಯುತ್ತಿದ್ದುದು ಕಾರವಾರದಲ್ಲಿ ನಾವೆಲ್ಲರೂ ಶೂಟಿಂಗ್‌ನಲ್ಲಿ ‘ಬ್ಯುಸಿ’ಯಾಗಿದ್ದ ಸಂದರ್ಭದಲ್ಲಿಯೇ ಈ ಕಡೆ ಬೆಂಗಳೂರಿನಲ್ಲಿ ನನ್ನ ಪತ್ನಿ ಗೀತಾ, ಹೆರಿಗೆಗೆಂದು ಆಸ್ಪತ್ರೆ ಸೇರಿದ್ದಳು. ೧೯೭೫ರ ನವೆಂಬರ್ ೨೬, ೨೭ ಎಂದು ಡಾಕ್ಟರು ಡೇಟ್ ಕೊಟ್ಟಿದ್ದರು. ಶೂಟಿಂಗ್‌ನಲ್ಲಿದ್ದ ನನಗೆ ಆಗಿಂದಾಗ್ಗೆ ಗೀತಾಳ ನೆನಪಾಗುತ್ತಿತ್ತು. ಚೊಚ್ಚಲು ಹೆರಿಗೆಯ ಸಂದರ್ಭದಲ್ಲಿ ನಾನು ದೂರ ಇದ್ದೇನಲ್ಲ? ಅವಳಿಗೆ ಗಾಬರಿಯಾಯ್ತೋ ಏನೋ ಎಂದೆಲ್ಲಾ ಚಡಪಡಿಸುತ್ತಿದ್ದೆ. ಒಂದು ದಿನ ಸಂದರ್ಭ ನೋಡಿ ಪುಟ್ಟಣ್ಣ ಅವರಿಗೂ ಈ ವಿಷಯ ತಿಳಿಸಿದೆ’. ಒಂದೆರಡು ದಿನ ರಜೆ ಕೊಡಿ ಸಾರ್, ಹೋಗಿ ಒಮ್ಮೆ ನೋಡಿಕೊಂಡು ಬರ್‍ತೇನೆ’ ಎಂದೆ. ಪುಟ್ಟಣ್ಣ ಒಪ್ಪಿದರು. ‘ನೀನು ವಾಪಸ್ ಬಂದ ನಂತರವೇ ಹಾಡಿನ ಚಿತ್ರೀಕರಣ ನಡೆಸೋಣ. ಖುಷಿಯಾಗಿ ಹೋಗಿ ಬಾ ಮರೀ’ ಅಂದರು.
ಬೆಂಗಳೂರಿಗೆ ಬಂದವನೇ ಆಸ್ಪತ್ರೆಯಲ್ಲಿದ್ದ ಗೀತಾಗೆ ಹೊಸ ಸಿನಿಮಾದ ಎಲ್ಲ ವಿಷಯ ತಿಳಿಸಿದೆ. ಡಾಕ್ಟರು ಹೇಳಿದ್ದ ದಿನಾಂಕದಲ್ಲಿ ಹೆರಿಗೆ ಆಗಲಿಲ್ಲ. ಆಗ ಗೀತಾ ಹೇಳಿದ್ಲು: ‘ನನ್ನನ್ನು ಹುಷಾರಾಗಿ ನೋಡಿಕೊಳ್ಳಲು ಇಲ್ಲಿ ಜನ ಇದ್ದಾರೆ. ನನ್ನ ಬಗ್ಗೆ ಚಿಂತೆ ಬೇಡ. ಈ ಸಿನಿಮಾ ನಿಮಗೆ ಒಂಥರಾ ಛಾಲೆಂಜ್ ಇದ್ದ ಹಾಗೆ. ಅಲ್ಲಿ ಇಡೀ ಚಿತ್ರತಂಡವೇ ನಿಮಗಾಗಿ ಕಾಯುತ್ತಿದೆ. ನೀವು ಹೋಗದಿದ್ರೆ ನಿರ್ಮಾಪಕರಿಗೆ ತೊಂದರೆ ಆಗುತ್ತೆ. ನಿಮ್ಮ ಯಶಸ್ಸು ಬಯಸುವ ಅವರೆಲ್ಲರ ಗೆಳೆತನಕ್ಕೆ ಬೆಲೆ ಕಟ್ಟಲು ಆಗೋದಿಲ್ಲ. ನೀವು ತಕ್ಷಣ ಹೊರಡಿ…’
ಸರಿ, ತಕ್ಷಣವೇ ಕಾರವಾರಕ್ಕೆ ವಾಪಸ್ ಬಂದೆ. ಶೂಟಿಂಗ್ ಶುರುವಾಯಿತು. (ನಾನು ಕಾರವಾರ ತಲುಪಿದ ನಂತರ ಡಿಸೆಂಬರ್ ೨ರಂದು ಬೆಂಗಳೂರಲ್ಲಿ ಮಗ ಹುಟ್ಟಿದ ಸುದ್ದಿ ಬಂತು.) ಇಲ್ಲಿ ಮುಖ್ಯವಾಗಿ ಇನ್ನೂ ಒಂದು ಮಾತು ಹೇಳಬೇಕು. ಆರತಿ ನನಗೆ ಆಗ (ಮತ್ತು ಈಗಲೂ) ಆಪ್ತ ಗೆಳತಿ. ಎಲ್ಲ ವಿಷಯವನ್ನೂ ಆಕೆ ನನ್ನೊಂದಿಗೆ ಮುಕ್ತವಾಗಿ ಮಾತಾಡುತ್ತಿದ್ದಳು. ಚಿತ್ರತಂಡದವರ ಒಡನಾಟ, ಆರತಿಯ ಆಪ್ತ ಮಾತು, ಪುಟ್ಟಣ್ಣನವರ ಹಾರೈಕೆ, ಬಾಳಸಂಗಾತಿ ಗೀತಾಳ ಹಿತವಚನ… ಇದೆಲ್ಲವನ್ನೂ ಮತ್ತೆ ಮತ್ತೆ ನೆನಪಿಸಿಕೊಂಡೇ ಚಿತ್ರೀಕರಣದಲ್ಲಿ ಪಾಲ್ಗೊಂಡೆ. ಆ ಹಾಡಲ್ಲಿ ನನ್ನ ಮುಖಭಾವ ತುಂಬ ಆಪ್ತವಾಗಿ ಕಾಣಲು ಇದೂ ಒಂದು ಕಾರಣ ಆಗಿರಬೇಕು….
*****
‘ಸ್ನೇಹದ ಕಡಲಲ್ಲೀ…’ ಎಂದು ಮತ್ತೆ ಮತ್ತೆ ಗುನುಗುತ್ತಲೇ ಈ ಕಥೆ ಹೇಳಿದ ಶ್ರೀನಾಥ್, ‘ಶುಭಮಂಗಳ’ದ ಮೂಲಕ ನಾನೂ ‘ಸ್ಟಾರ್’ ಅನ್ನಿಸಿಕೊಂಡೆ ಎಂದು ಹೆಮ್ಮೆಯಿಂದ ಹೇಳಿದರು. ಅಷ್ಟಕ್ಕೇ ಸುಮ್ಮನಾಗದೆ ‘ಧರ್ಮಸೆರೆ’ ಚಿತ್ರದ ‘ ಈ ಸಂಭಾಷಣೆ ನಮ್ಮ ಈ ಪ್ರೇಮ ಸಂಭಾಷಣೆ’ ಹಾಡಿನ ಕಥೆಯನ್ನೂ ಹೇಳಿದರು. ಆ ಗಂಧರ್ವ ಗೀತೆಯ ಕಥೆ ಮುಂದಿನವಾರ!
ನಿಮ್ಮದೊಂದು ಉತ್ತರ