ಚಿತ್ರ: ಧರ್ಮಸೆರೆ ಗೀತೆರಚನೆ: ವಿಜಯ ನಾರಸಿಂಹ
ಸಂಗೀತ: ಉಪೇಂದ್ರ ಕುಮಾರ್ ಗಾಯನ: ಎಸ್.ಪಿ. ಬಾಲಸುಬ್ರಹ್ಮಣ್ಯಂ-ಎಸ್. ಜಾನಕಿ
ಈ ಸಂಭಾಷಣೆ ನಮ್ಮ ಈ ಪ್ರೇಮ ಸಂಭಾಷಣೆ
ಅತಿ ನವ್ಯ ರಸಕಾವ್ಯ ಮಧುರಾ ಮಧುರಾ ಮಧುರಾ||ಪ||
ಪ್ರೇಮಗಾನ ಪದಲಾಸ್ಯ ಮೃದುಹಾಸ್ಯ
ಶೃಂಗಾರ ಭಾವಗಂಗಾ
ಸುಂದರ, ಸುಲಲಿತ, ಮಧುರಾ ಮಧುರಾ ಮಧುರಾ||೧||
ರ ಶರದಿ ಮೆರೆವಂತೆ ಮೊರೆವಂತೆ
ಹೊಸರಾಗ ಧಾರೆಯಂತೆ
ಮಂಜುಳ, ಮಧುಮಯ, ಮಧುರಾ ಮಧುರಾ ಮಧುರಾ||೨||
ಚೈತ್ರ ತಂದ ಚಿಗುರಂತೆ, ಚೆಲುವಂತೆ
ಸೌಂದರ್ಯ ಲಹರಿಯಂತೆ
ನಿರ್ಮಲ, ಕೋಮಲಾ, ಮಧುರಾ ಮಧುರಾ ಮಧುರಾ||೩||
‘ಧರ್ಮಸೆರೆ’ ಚಿತ್ರದ ಹಾಡಿನ ಬಗ್ಗೆ ಹೇಳ್ತೀನಿ ಅಂದಿದ್ದೆ ಅಲ್ವಾ? ಆ ಸ್ವಾರಸ್ಯವನ್ನೇ ಹೇಳ್ತೀನಿ ಕೇಳಿ ಎನ್ನುತ್ತಾ ಮಾತು ಆರಂಭಿಸಿದರು ಪ್ರಣಯರಾಜ ಶ್ರೀನಾಥ್. ಅವರ ಮಾತಿನ ಕಥೆ ಮುಂದುವರಿದಿದ್ದು ಹೀಗೆ:
‘ಇದು ೧೯೭೮-೭೯ರ ಮಾತು. ಆಗ ನಟ ವಜ್ರಮುನಿ ಅವರು ತಮ್ಮ ಸ್ವಂತ ನಿರ್ಮಾಣದಲ್ಲಿ ‘ಗಂಡ ಭೇರುಂಡ’ ಸಿನಿಮಾ ಆರಂಭಿಸಿದ್ದರು. ಇದೇ ಸಂದಭ ದಲ್ಲಿ ಪುಟ್ಟಣ್ಣ ಕಣಗಾಲ್ ಅವರು ‘ಧರ್ಮಸೆರೆ’ ಆರಂಭಿಸಿದ್ದರು. ಎರಡೂ ಚಿತ್ರಗಳಿಗೂ ನಾನೇ ನಾಯಕನಾಗಿದ್ದೆ. ಮೊದಲು ಪುಟ್ಟಣ್ಣ ಅವರ ಸಿನಿಮಾಕ್ಕೆ, ನಂತರ ವಜ್ರಮುನಿಯವರ ಚಿತ್ರಕ್ಕೆ ಕಾಲ್‌ಶೀಟ್ ನೀಡಿದ್ದೆ. ಮೈಸೂರಿನ ಪ್ರೀಮಿಯರ್ ಸ್ಟುಡಿಯೋದಲ್ಲಿ ಹಾಕಿದ್ದ ಸೆಟ್‌ನಲ್ಲಿ ೭-೮ ದಿನಗಳ ಕಾಲ ‘ಧರ್ಮಸೆರೆ’ಯ ಶೂಟಿಂಗ್ ನಡೆಯಿತು.
ಅದೊಂದು ರಾತ್ರಿ ಊಟ ಮುಗಿಸಿಕೊಂಡು ನಾನು ಉಳಿದುಕೊಂಡಿದ್ದ ಹೈವೇ ಹೋಟೆಲಿಗೆ ಬರುವಾಗಲೇ ಯಾಕೋ ಹೊಟ್ಟೆ ತೊಳೆಸಿದಂತಾಯಿತು. ರೂಂಗೆ ಬಂದರೆ ಬಿಟ್ಟೂ ಬಿಡದಂತೆ ವಾಂತಿ-ಬೇ. ಹೌದು. ನನಗೆ ಫುಡ್ ಪಾಯಿಸನ್ ಆಗಿತ್ತು. ಬೆಳಗ್ಗೆ ಆಗುವ ವೇಳೆಗೆ ಹಾಸಿಗೆಯಿಂದ ಮೇಲೇಳಲೂ ಆಗದಷ್ಟು ನಿತ್ರಾಣನಾಗಿ ಹೋಗಿದ್ದೆ. ಸಾಮಾನ್ಯವಾಗಿ ಹೈವೇ ಹೋಟೆಲಿನಲ್ಲಿ ಉಳಿದುಕೊಂಡರೆ, ಬೆಳಗ್ಗೆ ಎದ್ದ ತಕ್ಷಣ ರಿಸೆಪ್ಶನ್‌ಗೆ ಫೋನ್ ಮಾಡಿ ನನ್ನ ಇಷ್ಟದ ಹಾಡು ಹಾಕುವಂತೆ ಹೇಳುತ್ತಿದ್ದೆ. ರೂಂನಲ್ಲಿದ್ದ ಸ್ಪೀಕರ್ ಮೂಲಕ ಹಾಡು ಕೇಳಿ ನಂತರ ಶೂಟಿಂಗ್‌ಗೆ ಹೊರಡುತ್ತಿದ್ದೆ.
ಆದರೆ, ಎಷ್ಟು ಹೊತ್ತಾದರೂ ನನ್ನಿಂದ ‘ಹಾಡುಗಳ ಪ್ರಸಾರ ಕೋರಿ’ ಫೋನ್ ಬಾರದ್ದನ್ನು ಕಂಡು ಅನುಮಾನಗೊಂಡ ನನ್ನ ಆತ್ಮೀಯರೂ, ಹೋಟೆಲಿನ ಮ್ಯಾನೇಜರೂ ಆಗಿದ್ದ ಶಮ್ಮಿಯವರು ತಮ್ಮಲ್ಲಿದ್ದ ಮಾಸ್ಟರ್ ಕೀ ಬಳಸಿ ನನ್ನ ರೂಂ ಬಾಗಿಲು ತೆರೆದಿದ್ದಾರೆ. ಆಗ ನಾನು ಹೊಟ್ಟೆ ನೋವು ತಡೆಯಲಾಗದೆ ಒದ್ದಾಡುತ್ತಿದ್ದೆ. ಶಮ್ಮಿಯವರು ತಕ್ಷಣವೇ ಫೋನ್ ಮಾಡಿ ಡಾಕ್ಟರನ್ನು ಕರೆಸಿ, ಚಿಕಿತ್ಸೆ ಕೊಡಿಸಿದರು.
ಆ ಕ್ಷಣದಲ್ಲಿ ಯಾಕೆ ಹಾಗನ್ನಿಸಿತೋ ಕಾಣೆ. ಮೈಸೂರಲ್ಲಿಯೇ ಇದ್ದರೆ ನಾನು ಉಳಿಯಲಾರೆ ಅನ್ನಿಸಿಬಿಡ್ತು. ಎರಡನೇ ಹೆರಿಗೆಗೆ ಗರ್ಭಿಣಿಯಾಗಿದ್ದ ಹೆಂಡತಿಯ ಚಿತ್ರ ಕಣ್ಮುಂದೆ ಬಂತು. ‘ಶಮ್ಮೀ, ಒಂದೇ ಒಂದ್ಸಲ ನನ್ನ ಹೆಂಡತೀನ ನೋಡಬೇಕು ಅನ್ನಿಸ್ತಿದೆ. ದಯವಿಟ್ಟು ಈಗಲೇ ನನ್ನನ್ನು ಬೆಂಗಳೂರ್‍ಗೆ ಕಳಿಸಿಕೊಡಿ’ ಎಂದು ಕೇಳಿಕೊಂಡೆ. ತಕ್ಷಣವೇ ಒಂದು ಅಂಬಾಸಿಡರ್ ಕಾರನ್ನು ಗೊತ್ತು ಮಾಡಿದ ಶಮ್ಮಿ, ಹಿಂದಿನ ಸೀಟ್‌ನಲ್ಲಿ ಮಲಗಿ ಪ್ರಯಾಣಿಸುವಂತೆ ಸೂಚಿಸಿದರು. ಹೋಟೆಲಿನಿಂದ ದಿಂಬುಗಳನ್ನೂ ಒದಗಿಸಿಕೊಟ್ಟರು.
ಈ ವೇಳೆಗಾಗಲೇ ಬೆಳಗಿನ ಹತ್ತು ಗಂಟೆ ಆಗಿತ್ತು. ಅತ್ತ ಚಿತ್ರೀಕರಣಕ್ಕೆ ಸಿದ್ಧರಾಗಿದ್ದ ಪುಟ್ಟಣ್ಣನವರು-ಶ್ರೀನಾಥ್ ಇನ್ನೂ ಶೂಟಿಂಗ್ ಸ್ಪಾಟ್‌ಗೆ ಬಂದಿಲ್ಲ. ಯಾಕೆ ಅಂತ ತಿಳಿದು ಬಾ’ ಎಂದು ತಮ್ಮ ಸಹಾಯಕನನ್ನು ಕಳಿಸಿದ್ದರು. ನಾನು ಅವರಿಗೆ ನನ್ನ ಅನಾರೋಗ್ಯದ ಬಗ್ಗೆ ವಿವರಿಸಿದೆ. ತುಂಬಾ ನಿಶ್ಶಕ್ತಿ ಆಗಿರುವುದರಿಂದ ಬೆಂಗಳೂರಿಗೆ ಹೋಗ್ತಾ ಇದೀನಪ್ಪಾ. ಗುರುಗಳಿಗೆ ಹಾಗಂತ ಹೇಳಿಬಿಡು’ ಎಂದೂ ಹೇಳಿದೆ.
ವಿಪರ್‍ಯಾಸ ಕೇಳಿ: ಪುಟ್ಟಣ್ಣನವರ ಬಳಿಗೆ ಹೋದ ಆ ‘ಸಹಾಯಕ’ ನನ್ನ ಅನಾರೋಗ್ಯದ ಬಗ್ಗೆ ಹೇಳಲೇ ಇಲ್ಲ. ಬದಲಾಗಿ-‘ಶ್ರೀನಾಥ್ ನಾಟಕ ಮಾಡ್ತಾ ಇದಾರೆ ಸಾರ್. ಬಹುಶಃ ಬೇರೆ ನಿರ್ಮಾಪಕರಿಗೆ ಡೇಟ್ಸ್ ಕೊಟ್ಟಿದಾರೆ ಅನ್ನುತ್ತೆ. ಹಾಗಾಗಿ ಬೆಂಗಳೂರಿಗೆ ಹೊರಟಿದ್ದಾರೆ’ ಅಂದು ಬಿಟ್ಟಿದ್ದಾನೆ!
ಪುಟ್ಟಣ್ಣನವರಿಗೆ ನನ್ನ ಮೇಲೆ ಅಪಾರ ಪ್ರೀತಿ, ನಂಬಿಕೆ. ಅವರು ತಕ್ಷಣವೇ ಅಡ್ಡಡ್ಡ ತಲೆಯಾಡಿಸಿ-ಶ್ರೀನಾಥ್ ನನ್ನ ಪ್ರೀತಿಯ ಶಿಷ್ಯ. ಅವನು ಹಾಗೆ ಮಾಡೋದಿಲ್ಲ’ ಎಂದಿದ್ದಾರೆ. ನಂತರ ಏನಾಗಿದೆ ಅಂತ ನೋಡಿಕೊಂಡು ಬಾಪ್ಪಾ ಎಂದು ಮತ್ತೊಬ್ಬ ಸಹಾಯಕರನ್ನು ಕಳಿಸಿದ್ದಾರೆ. ಬೇರೊಬ್ಬ ಸಹಾಯಕರು ಹೋಟೆಲಿಗೆ ಬರುವ ವೇಳೆಗೆ ನನ್ನ ಕಾರು ಬೆಂಗಳೂರಿನ ಹಾದಿ ಹಿಡಿದಿತ್ತು. ವಾಪಸ್ ಹೋದ ಎರಡನೇ ಸಹಾಯಕ-‘ಸರ್, ಶ್ರೀನಾಥ್ ಅವರು ನನಗೆ ಸಿಗಲಿಲ್ಲ’ ಎಂದು ಬಿಟ್ಟಿದ್ದಾರೆ. ಈ ಸಂದರ್ಭ ಬಳಸಿಕೊಂಡ ಮೊದಲು ಬಂದಿದ್ದ ವ್ಯಕ್ತಿ-‘ನಾನು ಮೊದಲೇ ಹೇಳಲಿಲ್ವ ಸಾರ್? ಶ್ರೀನಾಥ್ ಖಂಡಿತ ನಾಟಕ ಮಾಡ್ತಾ ಇದ್ದಾರೆ. ಅಲ್ಲಿ ಬೇರೆ ಸಿನಿಮಾದ ಶೂಟಿಂಗ್ ಇರಬೇಕು. ಅದಕ್ಕೇ ಅವಸರದಲ್ಲಿ ಹೋಗಿದ್ದಾರೆ’ಎಂದು ಬಿಟ್ಟಿದ್ದಾನೆ.
ಈ ಮಾತು ಕೇಳಿದ ಪುಟ್ಟಣ್ಣ ಕಿಡಿಕಿಡಿಯಾಗಿದ್ದರೆ. ಅವರಿಗೆ ಸಿಟ್ಟು ನೆತ್ತಿಗೇರಿದೆ. ತಕ್ಷಣವೇ ನಿರ್ಮಾಪಕ ಎನ್. ವೀರಾಸ್ವಾಮಿ ಅವರಿಗೆ ಟ್ರಂಕ್ ಕಾಲ್ ಮಾಡಿ ವಿಷಯ ತಿಳಿಸಿ, ಶ್ರೀನಾಥ್‌ಗೆ ನೀವು ಬುದ್ಧಿ ಹೇಳಿ ಎಂದಿದ್ದಾರೆ. ಶ್ರೀನಾಥ್ ನನಗೇ ಹೀಗೆ ಮಾಡಬಹುದಾ ಎಂದೂ ಪ್ರಶ್ನೆ ಹಾಕಿದ್ದಾರೆ. ‘ಛೆ ಛೆ, ಶ್ರೀನಾಥ್ ಅಂಥವರಲ್ಲ’ ಎಂದು ವೀರಾಸ್ವಾಮಿಯವರು ಹೇಳಿದರೂ ಪುಟ್ಟಣ್ಣನವರಿಗೆ ಸಮಾಧಾನವಾಗಿಲ್ಲ. ಇದರಿಂದ ಬೇಸರಗೊಂಡ ವೀರಾಸ್ವಾಮಿಯವರು ನನ್ನನ್ನೇ ಗದರಿಸಿ ಬುದ್ಧಿ ಹೇಳಲು ಮಲ್ಲೇಶ್ವರಂನಲ್ಲಿದ್ದ ನಮ್ಮ ಅತ್ತೆಯ ಮನೆಗೆ ಬಂದರು. ಅಲ್ಲಿ ನಿತ್ರಾಣನಾಗಿ ಮಲಗಿದ್ದ ನನ್ನನ್ನು ಕಂಡು ಆವಾಕ್ಕಾದರು. ಪುಟ್ಟಣ್ಣನವರ ಸಿಟ್ಟು, ಅದಕ್ಕೆ ಕಾರಣ ವಿವರಿಸಿ-‘ಹೆದರಬೇಡ. ಬೇಗ ಹುಶಾರಾಗು’ ಎಂದು ಧೈರ್ಯ ಹೇಳಿದರು. ನಂತರ ಪುಟ್ಟಣ್ಣನವರಿಗೆ ಫೋನ್ ಮಾಡಿ ಎಲ್ಲ ವಿಷಯ ತಿಳಿಸಿದ್ದಾರೆ. ಆದರೆ, ವೀರಸ್ವಾಮಿಯವರ ಮಾತು ನಂಬದ ಪುಟ್ಟಣ್ಣ-‘ ನೀವೂ ಕೂಡ ಶ್ರೀನಾಥ್ ಪರವಾಗಿಯೇ ಮಾತಾಡ್ತಾ ಇದೀರಾ? ಎನ್ನುತ್ತಾ ಪೋನ್ ಕುಕ್ಕಿದ್ದಾರೆ!
ನಾನು ಸಂಪೂರ್ಣ ಗುಣಮುಖನಾಗುವ ವೇಳೆಗೆ ಮೂರು ವಾರ ಕಳೆದುಹೋಗಿತ್ತು. ಆ ವೇಳೆಗೆ ಪುಟ್ಟಣ್ಣ ಅವರಿಗೆ ನೀಡಿದ್ದ ಡೇಟ್ಸ್ ಮುಗಿದಿತ್ತು. ಈ ಕಡೆ ವಜ್ರಮುನಿ ಅವರ ‘ಗಂಡು ಭೇರುಂಡ’ ಸಿನಿಮಾದ ಚಿತ್ರೀಕರಣ ಆರಂಭವಾಗುವುದಿತ್ತು. ಪುಟ್ಟಣ್ಣ ಅವರು-ನನ್ನ ಸಿನಿಮಾದ ಚಿತ್ರೀಕರಣ ಮುಗಿಸದೆ ಹೋಗುವಂತಿಲ್ಲ’ ಎಂದು ಮೊದಲೇ ಹೇಳಿದ್ದರು. ಈ ಸಂದರ್ಭದಲ್ಲಿ ಒಂದು ಕಡೆ ಗುರುಗಳು, ಮತ್ತೊಂದು ಕಡೆ ಪ್ರೀತಿಯ ಗೆಳೆಯ! ಇಬ್ಬರಿಗೂ ನಾನು ನ್ಯಾಯ ಒದಗಿಸಲೇ ಬೇಕಿತ್ತು. ಯಾರನ್ನೂ ಬಿಟ್ಟು ಕೊಡುವ ಹಾಗಿರಲಿಲ್ಲ. ಮುಂದೇನು ಮಾಡುವುದು ಎಂದು ನಾನು ದಿಕ್ಕು ತೋಚದೆ ಕೂತಿದ್ದಾಗ ಮತ್ತೆ ವೀರಾಸ್ವಾಮಿಯವರು ನನ್ನ ಸಹಾಯಕ್ಕೆ ಬಂದರು. ಅವರೇ ಮುಂದೆ ನಿಂತು ಖಾಜಿ ನ್ಯಾಯ ಮಾಡಿದರು. ಅದರಂತೆ ಒಂದೊಂದು ದಿನ ಒಬ್ಬೊಬ್ಬರ ಚಿತ್ರದಲ್ಲಿ ನಾನು ನಟಿಸುವುದೆಂದು ತೀರ್ಮಾನವಾಯಿತು. ಈ ನ್ಯಾಯಕ್ಕೆ ಎರಡೂ ಕಡೆಯವರು ಒಪ್ಪಿದರು. ಉಡುಪಿ-ಕುಂದಾಪುರದ ಮಧ್ಯೆ ಇದ್ದ ಒಂದು ನದಿ ಪ್ರದೇಶದಲ್ಲಿ ‘ಈ ಸಂಭಾಷಣೆ’ ಹಾಡಿನ ಚಿತ್ರೀಕರಣ ಶುರುವಾಯಿತು. ಆಗಷ್ಟೇ ಮದುವೆಯಾದ ಜೋಡಿಯ ಪ್ರಣಯಗೀತೆ ಇದು. ಇದನ್ನು ಪುಟ್ಟಣ್ಣ ವಿಶೇಷ ಆಸಕ್ತಿ ವಹಿಸಿ ಬರೆಸಿದ್ದರು. ಆದರೆ ಚಿತ್ರೀಕರಣ ಶುರುವಾಗುವ ವೇಳೆಗೆ ನಮ್ಮ ಮಧ್ಯೆ ಮುನಿಸು ಬೆಳೆದಿತ್ತು. ಮಾತುಕತೆ ನಿಂತುಹೋಗಿತ್ತು. ನಾನು ಮೇಕಪ್ ಮಾಡಿಸಿಕೊಂಡು ಕೂತಿದ್ದರೆ, ಪುಟ್ಟಣ್ಣನವರು ತಮ್ಮ ಸಹಾಯಕರನ್ನು ಕರೆದು-‘ ಎಲ್ಲಪ್ಪಾ ನಮ್ಮ ಹೀರೋ? ಕರೆಯಪ್ಪಾ ಅವರನ್ನು… ಕ್ಯಾಮರಾ ಮುಂದೆ ನಿಲ್ಲೋಕೆ ಹೇಳಿ ಅವರಿಗೆ…’ ಎಂದು ನನಗೆ ಕೇಳಿಸುವಂತೆಯೇ ಹೇಳುತ್ತಿದ್ದರು. ನಾನು ಒಂದೂ ಮಾತಾಡದೆ ಕ್ಯಾಮರಾ ಮುಂದೆ ನಿಂತರೆ-‘ಅವರಿಗೆ ಹಾಡಿನ ಸಾಲು ಹೇಳಪ್ಪಾ’ ಅನ್ನುತ್ತಿದ್ದರು. ಸಹಾಯಕರು-ಹಾಡಿನ ಸಾಲು ಹೇಳಿ, ಮುಖ ಭಾವ ಹೇಗಿರಬೇಕೆಂದು ವಿವರಿಸಲು ಹೊರಟರೆ-ಹಾಗಲ್ಲಪ್ಪಾ, ಅವರಿಗೆ ಹಾಡಿನ ಸಾಲು ಹೇಳಿದರೆ, ಸಾಕು. ಅವರು ಹೀರೋ! ಅವರಿಗೆ ಉಳಿದಿದ್ದೆಲ್ಲಾ ಅರ್ಥವಾಗುತ್ತೆ’ ಎನ್ನುತ್ತಿದ್ದರು. ಅವರ ಪ್ರತಿ ಮಾತಲ್ಲೂ ಪ್ರೀತಿ, ವ್ಯಂಗ್ಯ, ಸಿಡಿಮಿಡಿ ಇರುತ್ತಿತ್ತು. ತಮ್ಮ ಸಿಟ್ಟನ್ನು ಅವರು ಮಾತಿನ ಮೂಲಕವೇ ತೋರಿಸುತ್ತಿದ್ದರು.
‘ಈ ಸಂಭಾಷಣೆ…’ ಹಾಡನ್ನು ಹೆಚ್ಚಾಗಿ ಕ್ಲೋಸ್ ಅಪ್ ಶಾಟ್‌ನಲ್ಲಿ ಚಿತ್ರಿಸಲಾಗಿದೆ. ಶೂಟಿಂಗ್ ಸಂದರ್ಭದಲ್ಲಿ ನನ್ನ ಮುಂದೆ ಕ್ಯಾಮರಾ, ಅದರ ಹಿಂದೆ ಛಾಯಾಗ್ರಾಹಕ ಮಾರುತಿರಾವ್, ಅವರ ಹಿಂದೆ ಪುಟ್ಟಣ್ಣ ಇರುತ್ತಿದ್ದರು. ಗುರುಗಳ ಮನಸ್ಸು ಗೆಲ್ಲಬೇಕು ಎಂದುಕೊಂಡು ನಾನೂ ತನ್ಮಯವಾಗಿ ಅಭಿನಯಿಸಿದೆ. ತಮ್ಮ ಕಲ್ಪನೆಯಂತೆಯೇ ದೃಶ್ಯ ಮೂಡಿ ಬಂದಾಗ, ಸಿಟ್ಟು ಮರೆತು ನಿಂತಲ್ಲೇ ಕಣ್ತುಂಬಿಕೊಳ್ಳುತ್ತಿದ್ದರು ಪುಟ್ಟಣ್ಣ. ಕೆಲವೊಂದು ಬಾರಿ ಮಾತೇ ಆಡದೆ ‘ಸೂಪರ್’ ಎಂಬಂತೆ ಕೈ ಸನ್ನೆಯ ಮೂಲಕ ತೋರ್ಪಡಿಸಿ ಸಂತೋಷ ಪಡುತ್ತಿದ್ದರು. ನಟಿಸುತ್ತಿದ್ದಾಗಲೇ ಅವರ ಸಂತೋಷ, ಸಂಭ್ರಮವನ್ನು ನಾನು ಸೂಕ್ಷ್ಮವಾಗಿ ಗಮನಿಸುತ್ತಲೇ ಇದ್ದೆ.
ಹಾಡಿನ ಚಿತ್ರೀಕರಣ ಮುಗಿವ ವೇಳೆಗೆ ಗುರುಗಳ ಸಿಟ್ಟು ಇಳಿದಿತ್ತು. ಮಾತಾಡಲು ಶುರು ಮಾಡಿದ್ದರು. ಅದೊಂದು ದಿನ ನಾನು-‘ಗುರುಗಳೇ ನನ್ನ ಅನಾರೋಗ್ಯದಿಂದ ಎಲ್ಲರಿಗೂ ತೊಂದ್ರೆ ಆಯ್ತು. ಕ್ಷಮಿಸಿ. ನಿಮಗೆ ನನ್ನ ಮೇಲೆ ವಿಪರೀತ ಪ್ರೀತಿ, ನಂಬಿಕೆ. ಹಾಗಿದ್ರೂ ಸಿಟ್ಟು ಮಾಡಿಕೊಂಡ್ರಿ. ಮಾತು ಬಿಟ್ಟಿರಿ. ಛೇಡಿಸಿದಿರಿ. ಎಷ್ಟೇ ಸಿಟ್ಟು ಬಂದ್ರೂ ನನ್ನ ಮೇಲಿದ್ದ ಪ್ರೀತಿ ಕಡಿಮೆಯಾಗಲಿಲ್ಲ. ಶೂಟಿಂಗ್ ವೇಳೆಯಲ್ಲಿ ನೀವು ಭಾವುಕರಾದದ್ದನ್ನು, ಕಣ್ಣಲ್ಲೇ ಮೆಚ್ಚುಗೆ ಸೂಚಿಸಿದ್ದನ್ನು ನಾನು ಗಮನಿಸಿ ಸಂತೋಷಪಟ್ಟೆ’ ಎಂದೆ.
ತಕ್ಷಣವೇ ಪುಟ್ಟಣ್ಣನವರು- ‘ಓ… ಅದನ್ನೂ ನೀನು ನೋಡಿಬಿಟ್ಯಾ? ಅಯ್ಯೋ ಮುಂಡೇದೆ, ಅದನ್ನು ನೋಡಿ ಬಿಟ್ಟೆಯಾ ನೀನೂ?’ ಎನ್ನುತ್ತಾ ನಕ್ಕರು. ಮುಂದುವರಿದು-‘ಕಲಿತು ಬಿಟ್ಟಿದ್ದೀಯ ಕಣೋ. ನನ್ನಿಂದ ಎಲ್ಲವನ್ನೂ ಕಲಿತು ಬಿಟ್ಟಿದ್ದೀಯ’ ಎಂದರು. ‘ನಿಮ್ಮ ಶಿಷ್ಯ ಅಂದ ಮೇಲೆ ಕಲಿಯಲೇ ಬೇಕಲ್ವಾ ಗುರುಗಳೇ’ ಅಂದೆ. ಕೆಲ ಸಮಯದ ನಂತರ ಪುಟ್ಟಣ್ಣನವರು ಹೇಳಿದರು: ಶ್ರೀನಾಥ್, ಈ ಸಂಭಾಷಣೆ… ಹಾಡು ಪ್ರೀತಿಸುವ ಗಂಡು-ಹೆಣ್ಣಿಗೆ ಮಾತ್ರ ಸಂಬಂಸಿದ್ದಲ್ಲ. ಅದು ಗೆಳೆಯರ ಮಾತೂ ಆಗಬಹುದು. ಮುನಿದು ಕೂತವರ ಮನಸುಗಳ ಮಾತೂ ಆಗಬಹುದು. ಮಾತಿಲ್ಲದ ಸಂದರ್ಭದಲ್ಲೂ ಜತೆಗಿರುತ್ತೆ ನೋಡು, ಆ ನಂಬಿಕೆಯ ಸಂಭಾಷಣೆಯೂ ಆಗಬಹುದು. ಹಾಗಾಗಿ ಈ ಹಾಡು ಎಲ್ಲರ ಮನಸಿನ ಹಾಡು. ಇದು ಎಲ್ಲ ವಯೋಮಾನದವರಿಗೂ ಇಷ್ಟವಾಗುತ್ತೆ’ ಎಂದರು. ಅವರ ಮಾತು ನಿಜವಾಗಿದೆ. ಈ ಹಾಡಿನ ಚಿತ್ರೀಕರಣದ ವೇಳೆಯಲ್ಲಿ ಒತ್ತಡದ ಕಾರಣದಿಂದ ನಾನು ಗೊಂದಲಕ್ಕೆ ಬೀಳದಂತೆ ನೋಡಿಕೊಂಡ ಪುಟ್ಟಣ್ಣ, ಆರತಿ ಹಾಗೂ ವಜ್ರಮುನಿಯವರಿಗೆ ನಾನು ಎಂದೆಂದೂ ಋಣಿ…’
ಹಾಡಿನ ಕಥೆ ಮುಗಿಸಿ, ಅಗಲಿದ ಗುರುಗಳು ಹಾಗೂ ಗೆಳೆಯನನ್ನು ನೆನೆದು ಕಣ್ತುಂಬಿಕೊಂಡರು ಶ್ರೀನಾಥ್.
tumbane ishta aago drashyagalivu
ನನಗೆ ಇಷ್ಠವಾದವು