ಇರಬೇಕು ಇರಬೇಕು…
ಚಿತ್ರ ನಗುವ ಹೂವು. ಗೀತೆ ರಚನೆ: ಆರ್.ಎನ್. ಜಯಗೋಪಾಲ್
ಸಂಗೀತ: ಜಿ.ಕೆ. ವೆಂಕಟೇಶ್. ಗಾಯನ: ಆರ್.ಎನ್. ಸುದರ್ಶನ್
ಇರಬೇಕು ಇರಬೇಕು ಅರಿಯದ ಕಂದನ ತರಹ
ನಗಬೇಕು ಅಳಬೇಕು ಇರುವಂತೆ ಹಣೆಬರಹ ||ಪ||
ಇರಬೇಕು ಇರಬೇಕು ತಾವರೆ ಎಲೆಯ ತರಹ
ಕಣ್ಣೀರೋ ಪನ್ನೀರೋ ಯಾರಲಿ ಮಾಡಲಿ ಕಲಹ
ಯಾರಲಿ ಮಾಡಲಿ ಕಲಹ ||೧||
ಇರಬೇಕು ಇರಬೇಕು ಬಾಳಲಿ ಭರವಸೆ ಮುಂದೆ
ನೋವಿರಲಿ ನಲಿವಿರಲಿ ನೋಡಲೆಬಾರದು ಹಿಂದೆ
ನೋಡಲೆ ಬಾರದು ಹಿಂದೆ ||೨||
೧೯೭೧ರಲ್ಲಿ ತೆರೆಕಂಡು, ರಾಷ್ಟ್ರಪ್ರಶಸ್ತಿಗೆ ಪಾತ್ರವಾದ ಚಿತ್ರ ನಗುವ ಹೂವು. ಈ ಚಿತ್ರಕ್ಕೆ ಸಂಬಂಸಿದಂತೆ ಒಂದಿಷ್ಟು ಸ್ವಾರಸ್ಯಗಳಿವೆ. ಏನೆಂದರೆ-ಇದು ಆರೆನ್ನಾರ್ ಕುಟುಂಬದವರ ಚಿತ್ರ. ಹೇಗೆ ಗೊತ್ತಾ? ನಗುವ ಹೂವು ಚಿತ್ರದ ನಿರ್ಮಾಣ ಆರೆನ್ನಾರ್ ಕುಟುಂಬದ್ದು. (ಸಹ ನಿರ್ಮಾಪಕರಾಗಿ ಸೇರಿಕೊಂಡವರು, ಕಾಡಿನ ರಹಸ್ಯ ಚಿತ್ರ ನಿರ್ಮಿಸಿದ ರಂಗಪ್ಪ ಮತ್ತು ಚಿನ್ನಪ್ಪ.) ಚಿತ್ರದ ನಾಯಕ-ಆರ್. ನಾಗೇಂದ್ರರಾವ್ ಅವರ ಕಿರಿಯ ಪುತ್ರ ಆರ್.ಎನ್. ಸುದರ್ಶನ್. ನಾಯಕಿಯಾಗಿದ್ದುದಲ್ಲದೆ, ಚಿತ್ರಕ್ಕೆ ಕಥೆ- ಚಿತ್ರಕಥೆ ಒದಗಿಸಿದವರು ಸುದರ್ಶನ್ ಅವರ ಪತ್ನಿ ಶೈಲಶ್ರೀ. ಸಂಭಾಷಣೆ ಹಾಗೂ ಗೀತೆ ರಚನೆಯ ಹೊಣೆ ಹೊತ್ತವರು ಆರೆನ್ನಾರ್ ಅವರ ಎರಡನೇ ಮಗ ಆರ್.ಎನ್. ಜಯಗೋಪಾಲ್. ಛಾಯಾಗ್ರಹಣದೊಂದಿಗೆ ನಿರ್ದೇಶನದ ಹೊಣೆಯನ್ನೂ ಹೊತ್ತವರು ಅರೆನ್ನಾರ್ ಅವರ ಮೊದಲ ಮಗ ಆರ್.ಎನ್. ಕೃಷ್ಣ ಪ್ರಸಾದ್. ಸುದರ್ಶನ್ ಅವರು ಈ ಚಿತ್ರದ ನಾಯಕನಾಗಿ ಮಾತ್ರವಲ್ಲ, ಗಾಯಕನಾಗಿಯೂ ಮಿಂಚಿದರು ಎಂಬುದು ಮತ್ತೊಂದು ವಿಶೇಷ.
ನಗುವ ಹೂವು-ಕ್ಯಾನ್ಸರ್ ರೋಗಿಯೊಬ್ಬನ ಬದುಕಿನ ಸುತ್ತ ಹೆಣೆದ ಕಥೆ. ಅಂಥ ಕಥೆಯನ್ನೇ ಏಕೆ ಆಯ್ಕೆ ಮಾಡಿಕೊಂಡಿರಿ ಎಂಬ ಪ್ರಶ್ನೆಗೆ ಸುದರ್ಶನ್ ಹೀಗೆಂದರು: ‘ನಮ್ಮ ತಾಯಿಯವರು ಕ್ಯಾನ್ಸರ್‌ನಿಂದ ತೀರಿಕೊಂಡರು. ಅವರ ಅಗಲಿಕೆ ನಮ್ಮ ಕುಟುಂಬಕ್ಕೆ ಎರಗಿದ ಬಹುದೊಡ್ಡ ಆಘಾತ. ಒಂದು ಮನೆಯ ನೆಮ್ಮದಿಯನ್ನೇ ಹಾಳು ಮಾಡುವ ಕ್ಯಾನ್ಸರ್ ಬಗ್ಗೆ ತಿಳಿ ಹೇಳಬೇಕು. ಆ ರೋಗದ ವಿರುದ್ಧ ಜಾಗೃತಿ ಮೂಡಿಸಬೇಕು ಅನ್ನಿಸ್ತು. ಈ ಕಾರಣದಿಂದಲೇ ಕ್ಯಾನ್ಸರ್ ರೋಗಿಯೊಬ್ಬನ ಬದುಕಿನ ಕಥೆ ಹೊಂದಿದ್ದ ಸಿನಿಮಾ ತಯಾರಿಸಲು ನಿರ್ಧರಿಸಿದ್ದೆವು…’
ಸಂಕ್ಷಿಪ್ತವಾಗಿ ಹೇಳುವುದಾದರೆ ‘ನಗುವ ಹೂವು’ ಚಿತ್ರದ ಕಥೆ ಇಷ್ಟು. ಒಂದು ಕ್ಯಾನ್ಸರ್ ಆಸ್ಪತ್ರೆ. ಈ ಆಸ್ಪತ್ರೆಯ ಒಡತಿಯ ಮಗನಿಗೇ ಕ್ಯಾನ್ಸರ್! (ಈತ ಚಿತ್ರದ ಎರಡನೇ ನಾಯಕ) ನಾಯಕ-ನಾಯಕಿ, ಈ ಆಸ್ಪತ್ರೆಯಲ್ಲಿ ಕ್ರಮವಾಗಿ ಡಾಕ್ಟರ್ ಹಾಗೂ ನರ್ಸ್ ಆಗಿರುತ್ತಾರೆ. ನರ್ಸ್ ಮೇಲೆ ಡಾಕ್ಟರ್‌ಗೆ ಮೋಹ. ಆದರೆ ಸಂಕೋಚದ ಕಾರಣದಿಂದ ಆತ ಹೇಳಿಕೊಂಡಿರುವುದಿಲ್ಲ. ಇದೇ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ಗೆ ತುತ್ತಾದ ಮಕ್ಕಳೂ ಇರುತ್ತವೆ. ಆ ಮಕ್ಕಳ ವಾರ್ಡ್‌ಗೆ ದಿನವೂ ಹೋಗಿ ಸಿಹಿ ಹಂಚುತ್ತಿರುತ್ತಾನೆ ಡಾಕ್ಟರ್. ಈ ಮಕ್ಕಳ ಪೈಕಿ ಒಂದು ಮಗು- ಕಥಾ ನಾಯಕ-ನಾಯಕಿಯನ್ನು ತುಂಬಾ ಹಚ್ಚಿಕೊಂಡಿರುತ್ತದೆ. ಅವನನ್ನು ‘ಅಪ್ಪಾ’ ಎಂದೂ, ನಾಯಕಿಯನ್ನು ಅಮ್ಮಾ ಕರೆಯುತ್ತಿರುತ್ತದೆ. ಈ ನಾಯಕ, ಶಸ್ತ್ರ ಚಿಕಿತ್ಸೆ ಯಶಸ್ವಿಯಾದರೆ ಸಾಕು- ಒಂದು ಗುಲಾಬಿ ಹೂ ತಗೊಂಡು ತನ್ನ ಛೇಂಬರ್‌ಗೆ ಹೋಗುತ್ತಿರುತ್ತಾನೆ. ಬಹುಶಃ ಆತ ದೇವರ ಫೋಟೋಗೆ ಇಡಲೆಂದು ಹೂ ಕೊಂಡೊಯ್ಯುತ್ತಾನೆ ಎಂದೇ ಆಸ್ಪತ್ರೆಯ ಅಷ್ಟೂ ಜನ ತಿಳಿದಿರುತ್ತಾರೆ.
ಅದೊಮ್ಮೆ ಡಾಕ್ಟರ್ ಬೇರೊಂದು ಊರಿಗೆ ಹೋಗಿದ್ದ ಸಂದರ್ಭದಲ್ಲಿ ವಾರ್ಡ್‌ನಲ್ಲಿದ್ದ ಮಕ್ಕಳೆಲ್ಲ ಡಾಕ್ಟರ್ ಛೇಂಬರ್‌ಗೆ ನುಗ್ಗುತ್ತವೆ. ಅಲ್ಲಿದ್ದ ಎಲ್ಲಾ ವಸ್ತುಗಳನ್ನೂ ಚಲ್ಲಾಪಿಲ್ಲಿ ಮಾಡುತ್ತವೆ. ಈ ಸಂದರ್ಭದಲ್ಲಿಯೇ ನಾಯಕಿ ಅಲ್ಲಿಗೆ ಬರುತ್ತಾಳೆ. ಡಾಕ್ಟರ್ ಛೇಂಬರಿನಲ್ಲಿ ತನ್ನ ಫೋಟೋ ಇರುವುದೂ, ಅದರ ಪಕ್ಕದಲ್ಲಿಯೇ ಒಂದು ಗುಲಾಬಿ ಇರುವುದೂ ಅವಳ ಗಮನಕ್ಕೆ ಬರುತ್ತದೆ. ಇದೇ ವೇಳೆಗೆ ನಾಯಕನೂ ಅಲ್ಲಿಗೆ ಬರುತ್ತಾನೆ. ಒಬ್ಬರ ಮನಸ್ಸು ಒಬ್ಬರಿಗೆ ಅರ್ಥವಾಗುತ್ತಿದ್ದಂತೆಯೇ ಪ್ರೀತಿ ಚಿಗುರುತ್ತದೆ. ತನ್ನ ಪ್ರೀತಿಯ ಕಾಣಿಕೆಯಾಗಿ ನಾಯಕ ಒಂದು ಉಂಗುರ ತೊಡಿಸುತ್ತಾನೆ.
ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಿ ಇರುತ್ತಾನಲ್ಲ? ಅವನನ್ನು ನಾಯಕಿ (ನರ್ಸ್) ತುಂಬ ಆಪ್ತವಾಗಿ ಉಪಚರಿಸುತ್ತಾಳೆ. ಆತ ಅದನ್ನೇ ತಪ್ಪಾಗಿ ಭಾವಿಸಿ ಅವಳಲ್ಲಿ ಪ್ರೇಮ ನಿವೇದನೆ ಮಾಡಿಬಿಡುತ್ತಾನೆ. ಈ ವಿಷಯ ತಿಳಿದ ನಾಯಕ-‘ಹೇಳಿ ಕೇಳಿ ಆತ ಕ್ಯಾನ್ಸರ್ ರೋಗಿ. ನೀನು ನಿರಾಕರಣೆಯ ಮಾತಾಡಿದರೆ ಆತನಿಗೆ ಶಾಕ್ ಆಗಬಹುದು. ಆ ಶಾಕ್‌ಗೆ ಆತ ಬೇಗನೆ ಸತ್ತೂ ಹೋಗಬಹುದು. ಹಾಗೆ ಮಾಡಬೇಡ. ರೋಗಿಗಳ ಸೇವೆಯೇ ನಮ್ಮ ಪರಮಗುರಿ. ನಿನ್ನ ಮಾತಿಂದ ಆತ ಒಂದಷ್ಟು ದಿನವಾದರೂ ನೆಮ್ಮದಿಯಿಂದ ಇರ್‍ತಾನೆ. ಹಾಗಾಗಿ ಆತನ ಆಹ್ವಾನವನ್ನು ಒಪ್ಪಿಕೋ’ ಎನ್ನುತ್ತಾನೆ. ಬೇರೆ ದಾರಿ ಕಾಣದೆ ನಾಯಕಿ ಒಪ್ಪಿಗೆಯ ಮಾತಾಡಿದರೆ ಒಂದೆರಡೇ ದಿನಗಳಲ್ಲಿ ಮದುವೆ ನಡೆಸುವುದೆಂದು ನಿರ್ಧರಿಸಲಾಗುತ್ತದೆ.
ಮದುವೆಯ ಹಿಂದಿನ ದಿನ, ತನ್ನ ಪರಿಸ್ಥಿತಿ ನೆನೆದು ನಾಯಕಿ ಅಳುತ್ತಿರುತ್ತಾಳೆ. ಅದನ್ನು ಕಂಡ ಒಂದು ಮಗು-‘ಅಮ್ಮಾ ಯಾಕೆ ಅಳ್ತಾ ಇದೀಯ?’ ಎನ್ನುತ್ತದೆ. ಈಕೆ-‘ಎಲ್ಲಾ ನನ್ನ ಹಣೆಬರಹ’ ಎಂದು ಬಿಕ್ಕಳಿಸುತ್ತಾಳೆ. ‘ಹಣೆಬರಹ’ ಅಂದ್ರೆ ಏನಮ್ಮಾ ಎಂದು ಮಗು ಮತ್ತೆ ಕೇಳುತ್ತದೆ.’ ಅದನ್ನು ನಿಮ್ಮ ಅಪ್ಪನ ಬಳಿ ಕೇಳು’ ಅನ್ನುತ್ತಾಳೆ ನಾಯಕ. ಅಮಾಯಕ ಮಗು ನಾಯಕನ ಬಳಿ ಬಂದು ಕೇಳಿದಾಗ-‘ನಾವು ಏನನ್ನು ಬಯಸುತ್ತೇವೆಯೋ, ಅದು ನಡೆಯದೇ ಹೋದರೆ- ಅದನ್ನೇ ಹಣೆಬರಹ’ ಅಂತಾರೆ ಅನ್ನುತ್ತಾನೆ ನಾಯಕ. ನಂತರ-‘ತುಂಬಾ ಹೊತ್ತಾಗಿದೆ. ನಿನ್ನನ್ನು ಮಲಗಿಸಿ ಬರ್‍ತೇನೆ ನಡಿ’ ಎನ್ನುತ್ತಾ ಮಕ್ಕಳ ವಾರ್ಡ್‌ಗೆ ಬರುತ್ತಾನೆ. ಅಲ್ಲಿ ಕೆಲವು ಮಕ್ಕಳು ಮಲಗಿರುತ್ತವೆ. ಕೆಲವು ತಮ್ಮ ಪಾಡಿಗೆ ತಾವು ಕೂತಿರುತ್ತವೆ. ಭವಿಷ್ಯದ ಬಗ್ಗೆ, ಕಣ್ಮುಂದೆಯೇ ಇರುವ ಸಾವಿನ ಬಗ್ಗೆ ಏನೊಂದೂ ಗೊತ್ತಿಲ್ಲದ ಈ ಮಕ್ಕಳು ಎಷ್ಟೊಂದು ನೆಮ್ಮದಿಯಿಂದ ಇದ್ದಾವಲ್ಲ; ಎಲ್ಲರೂ ಹೇಗೇ ಬದುಕಿದರೆ ಚೆಂದ ಅಲ್ಲವೇ ಎಂದುಕೊಂಡು ಆ ಮಕ್ಕಳನ್ನು ನೋಡುತ್ತಾ ಹಾಡುತ್ತಾನೆ: ‘ ಇರಬೇಕು ಇರಬೇಕು ಅರಿಯದ ಕಂದನ ತರಹ/ ನಗಬೇಕು ಅಳಬೇಕು ಇರುವಂತೆ ಹಣೆ ಬರಹ..!
ಪಾಸಿಟಿವ್ ಥಿಂಕಿಂಗ್ ಸಂದೇಶದ ಈ ಹಾಡು ರೂಪುಗೊಂಡ ಬಗೆಯನ್ನು ಸುದರ್ಶನ್ ಅವರು ವಿವರಿಸಿದ್ದು ಹೀಗೆ: ಚಿತ್ರದಲ್ಲಿ ಎಲ್ಲಿ ಹಾಡು ಬರಬೇಕು, ಹಾಡುಗಳು ಹೇಗಿರಬೇಕು ಎಂಬ ಚರ್ಚೆ ಶುರುವಾಗಿತ್ತು. ಆಗ ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್ ಥಟ್ಟನೆ ಹೇಳಿದರು. ಇದು ಮಕ್ಕಳ ಮುಂದೆ ಹೇಳುವ ಹಾಡು. ಹಾಗಾಗಿ ಸರಳವಾಗಿರಲಿ. ಹಾಡಲ್ಲಿ ಶೋಕ ಅಥವಾ ಪ್ರೇಮದ ಸಾಲುಗಳು ಬರುವುದು ಬೇಡ. ಬದಲಿಗೆ, ಬದುಕಲ್ಲಿ ಭರವಸೆ ಮೂಡಿಸುವ ಸಾಲುಗಳಿರಲಿ…’ ಹೀಗೆ ಸಲಹೆ ನೀಡಿದ ಜಿ.ಕೆ.ವಿ. ಮರುಕ್ಷಣವೇ- ಲಲಲಾಲ ಲಲಲಾಲ ಲಲಲಲ ಲಲಲ ಲಾಲ…. ಲಲಲಾಲ ಲಲಲಾಲ ಲಲಲಲ ಲಾಲಲ ಲಲಲ…’ ಎಂದು ಟ್ಯೂನ್ ಕೊಟ್ಟರು. ಈ ಸಂದರ್ಭದಲ್ಲಿ ಜಿ.ಕೆ.ವಿ ಅವರ ಶಿಷ್ಯರಾಗಿದ್ದವರು ಇಳಯರಾಜಾ.
ನಮ್ಮಣ್ಣ ಆರ್. ಎನ್. ಜಯಗೋಪಾಲ್ ಅತ್ಯುತ್ತಮ ವಯಲಿನ್ ವಾದಕನಾಗಿದ್ದ. ಹಾಗಾಗಿ ಅವನಿಗೆ ರಾಗದ ಮೇಲೆ ಒಳ್ಳೆಯ ಹಿಡಿತವಿತ್ತು. ಹಾಡು- ಪ್ರೇಮಗೀತೆಯಾಗಬಾರದು, ಶೋಕ ಗೀತೆಯೂ ಆಗಬಾರದು. ಮಕ್ಕಳ ಗೀತೆಯಂತೆಯೂ ಇರಬಾರದು. ಬದಲಿಗೆ ಮಕ್ಕಳನ್ನು ಸಾಧನೆಯೆಡೆಗೆ ಪ್ರಚೋದಿಸುವಂಥ ಹಾಡಾಗಬೇಕು ಎಂಬ ಜಿ.ಕೆ.ವಿ ಯವರ ಮಾತನ್ನೇ ಮತ್ತೆ ಮತ್ತೆ ನೆನಪಿಸಿಕೊಂಡ ಆತ ಪಲ್ಲವಿ ಮತ್ತು ಮೊದಲ ಚರಣವನ್ನು ಚಕಚಕನೆ ಬರೆದು ಹೇಳಿದ. ‘ತಾವರೆ ನೀರಲ್ಲಿರುತ್ತದೆ. ಆದರೆ ಅದರ ಎಲೆಯ ಮೇಲೆ ಒಂದೇ ಒಂದು ಹನಿಯೂ ನಿಲ್ಲುವುದಿಲ್ಲ. ಅಂತೆಯೇ ಬದುಕೂ ಸಹ. ನಾವು ಸಂತೋಷ ಮತ್ತು ದುಃಖವನ್ನು ಒಂದೇ ಭಾವದಿಂದ ಸ್ವೀಕರಿಸಬೇಕು ಎಂಬುದಕ್ಕೆ ಮೊದಲ ಚರಣ’ ಎಂದು ವಿವರಣೆಯನ್ನೂ ನೀಡಿದ.
‘ಸರಿ, ಎರಡನೇ ಚರಣದಲ್ಲಿ ಮಕ್ಕಳಿಗೆ ಭರವಸೆ ಹೆಚ್ಚಿಸುವಂಥ ಸಾಲುಗಳು ಬೇಕು ಅನ್ನಿಸಿತು. ಚರ್ಚೆಗೆ ಕೂತಿದ್ದ ಎಲ್ಲರೂ ಅದೇ ಮಾತು ಹೇಳಿದೆವು. ಆಗ ಜಯಗೋಪಾಲ್ ಒಂದೆರಡು ನಿಮಿಷ ಯೋಚಿಸಿ- ‘ಇರಬೇಕು, ಇರಬೇಕು ಬಾಳಲಿ ಭರವಸೆ ಮುಂದೆ/ ನೋವಿರಲಿ ನಲಿವಿರಲಿ ನೋಡಲೆ ಬಾರದು ಹಿಂದೆ’ ಎಂಬ ಅಪೂರ್ವ ಕಾಂತಿಯ ಸಾಲುಗಳನ್ನು ಬರೆದುಕೊಟ್ಟ. ಚಿಕ್ಕಂದಿನಲ್ಲೇ ನಾನು ಶಾಸ್ತ್ರೀಯ ಸಂಗೀತ ಕಲಿತಿದ್ದೆ. ಯೌವನದ ದಿನಗಳಲ್ಲಿ ನಾವು ಅರೆನ್ನಾರ್ ಸೋದರರು ಸಂಗೀತ ಕಾರ್ಯಕ್ರಮವನ್ನೂ (ಆರ್‌ಎನ್‌ಜೆ ವಯಲಿನ್, ಕೃಷ್ಣಪ್ರಸಾದ್- ಮೃದಂಗ ವಾದ್ಯ ಪ್ರವೀಣರಾಗಿದ್ದರು) ನೀಡುತ್ತಿದ್ದೆವು. ಈ ವಿಷಯ ಗೊತ್ತಿದ್ದ ಜಿ.ಕೆ. ವೆಂಕಟೇಶ್- ‘ಈ ಹಾಡನ್ನು ನೀನೇ ಹಾಡಯ್ಯ ಚಿನ್ನೂ’ ಅಂದರು. ಪರಿಣಾಮ- ಈ ಹಾಡಿಗೆ ದನಿಯಾಗುವ ಸುಯೋಗ ನನ್ನದಾಯಿತು.
ನಗುವ ಹೂವು ಸಿನಿಮಾ ಗೆದ್ದಿತು. ರಾಷ್ಟ್ರಪ್ರಶಸ್ತಿ ಪಡೆಯಿತು. ಇದಾಗಿ ಎರಡು ದಶಕದ ನಂತರ ಚೆನ್ನೈನ ಒಂದು ರೆಕಾರ್ಡಿಂಗ್ ಸ್ಟುಡಿಯೋಗೆ ಯಾವುದೋ ಕೆಲಸದ ನಿಮಿತ್ತ ಹೋಗಿದ್ದೆ. ಆ ವೇಳೆಗೆ ಖ್ಯಾತಿಯ ತುತ್ತು ತುದಿಯಲ್ಲಿದ್ದ ಇಳಯರಾಜಾ ಅವರೂ ಅಲ್ಲಿಗೆ ಬಂದಿದ್ದರು. ಅವರನ್ನು ಒಮ್ಮೆ ಮಾತಾಡಿಸಬೇಕೆಂಬ ಆಸೆ. ಆದರೆ, ಅವರು ಗುರುತಿಸದಿದ್ದರೆ ಏನು ಮಾಡುವುದು ಎಂಬ ಸಹಜ ಆತಂಕ ನನ್ನದು. ನಾನು ಈ ಚಡಪಡಿಕೆಯಲ್ಲಿದ್ದಾಗಲೇ ಇಳಯ ರಾಜಾ ನನ್ನನ್ನು ನೋಡಿದರು. ತಕ್ಷಣ, ನಿಂತ ಜಾಗದಲ್ಲೇ ಜೋರಾಗಿ- ‘ಇರಬೇಕು, ಇರಬೇಕೂ ಅರಿಯದ ಕಂದನ ತರಹ’ ಎಂದು ಹಾಡುತ್ತ ಹಾಡುತ್ತಲೇ ನನ್ನೆಡೆಗೆ ಬಂದರು. ನನ್ನ ಕೈ ಹಿಡಿದು ಎದೆಗೆ ಒತ್ತಿಕೊಂಡು. ‘ಎಂಥಾ ಒಳ್ಳೆಯ ಹಾಡಲ್ವಾ ಸಾರ್ ಇದೂ? ಈ ಹಾಡಿನ ಮಾಧುರ್ಯಕ್ಕೆ ಸಾಟಿ ಯಾವುದಿದೆ ಹೇಳಿ’ ಎಂದು ಉದ್ಗರಿಸಿದರು. ಅವರ ಮನದ ಮಾತು ಕೇಳಿದಾಗ ಸಂತೋಷ ಹೆಚ್ಚಾಯಿತು. ಆ ಕಾರಣಕ್ಕೆ ಕಣ್ತುಂಬಿಕೊಂಡಿತು…. ಹೀಗೆ ಹೇಳುತ್ತ ಹೇಳುತ್ತಲೇ ಭಾವಪರವಶರಾಗಿ ಮತ್ತೆ ಹಾಡಿದರು ಸುದರ್ಶನ್: ಇರಬೇಕು ಇರಬೇಕು ಅರಿಯದ ಕಂದನ ತರಹ/ ನಗಬೇಕು ಅಳಬೇಕು ಇರುವಂತೆ ಹಣೆ ಬರಹ…’
***
ಸೂಕ್ಷ್ಮವಾಗಿ ಗಮನಿಸಿ: ಈ ಹಾಡು ರಚನೆಯಾಗಿ ನಾಲ್ಕು ದಶಕಗಳೇ ಕಳೆದಿವೆ. ಆದರೆ ಈ ಹಾಡು, ಅದರಲ್ಲಿರುವ ಸಂದೇಶ ಇಂದಿಗೂ ಪ್ರಸ್ತುತ ಎನ್ನುವಂತಿದೆ. ಮುಗಿದು ಹೋಗುತ್ತಿರುವ ವರ್ಷದಲ್ಲಿ ಕೈ ಹಿಡಿದಿದ್ದ ನೋವು, ಸೋಲು, ಯಾತನೆಗಳಿಂದ ಬೇಸರಗೊಂಡವರಿಗೆ- ‘ಇರಬೇಕು ಇರಬೇಕು ಬಾಳಲಿ ಭರವಸೆ ಮುಂದೆ/ ನೋವಿರಲಿ ನಲಿವಿರಲಿ ನೋಡಲೆ ಬಾರದು ಹಿಂದೆ’ ಎಂಬ ಹಾಡಿನ ಸಾಲುಗಳನ್ನೇ ನೆನಪಿಸುತ್ತ- ಹೊಸ ವರ್ಷದ ಶುಭಾಶಯ-ಒಂದು ದಿನ ಮುಂಚಿತವಾಗಿ!
ನಿಮ್ಮದೊಂದು ಉತ್ತರ