ನಾಡ ಚರಿತೆ ನೆನಪಿಸುವಾ ವೀರಗೀತೆಯಾ
ಚಿತ್ರ: ತಾಯಿಯ ಹೊಣೆ. ಗೀತೆರಚನೆ: ಸಿ.ವಿ. ಶಿವಶಂಕರ್.
ಸಂಗೀತ: ಸತ್ಯಂ. ಗಾಯನ: ಪಿ. ಸುಶೀಲ, ಬೆಂಗಳೂರು
ಲತಾ, ಬಿ.ಆರ್. ಛಾಯಾ, ಕೋರಸ್
ನಾಡ ಚರಿತೆ ನೆನಪಿಸುವಾ ವೀರಗೀತೆಯಾ
ಹಾಡು ನೀನು ಕನ್ನಡಿಗಾ ದೇಶಗೀತೆಯಾ ||ಪ||
ವೀರರಾದ ನಾಡವರ ಸಾಹಸದಾ ನಾಡಿದು
ನಾಡಪ್ರೇಮಿ ಕೆಂಪೇಗೌಡ ಮೆರೆದ ನಾಡಿದು
ಚಿತ್ರದುರ್ಗ ವೀರರ ಪೌರುಷದಾ ನಾಡಿದು
ಕೆಳದಿಯಾ ನಾಯಕರು ಆಳಿದಂಥ ನಾಡಿದು ||೧||
ಬೃಂದಾವನ ಚೆಲುವಲಿ ನಲಿವಂಥ ನಾಡಿದು
ವಿಶ್ವೇಶ್ವರಯ್ಯ ಹುಟ್ಟಿದಂಥ ನಾಡಿದು
ಹನುಮಂತಯ್ಯ ಕಟ್ಟಿದ ವಿಧಾನ ಸೌಧ ನೋಡಿದು
ಸ್ವಾಭಿಮಾನಿ ಪ್ರಜೆಗಳಾ ಸಂತಸದಾ ನಾಡಿದು ||೨||
ತಾಯಿನಾಡ ರಕ್ಷಿಸಲು ವೀರಮರಣ ಅಪ್ಪಿದ
ಸಂಗೊಳ್ಳಿ ರಾಯಣ್ಣನ ತ್ಯಾಗಭೂಮಿ ನಮ್ಮದು
ನೇಗಿಲ್ಹೊತ್ತ ರೈತರ ಪುಣ್ಯ ಭೂಮಿ ನಮ್ಮದು
ಎಂದೆಂದೂ ಅಳಿಯದಾ ಇತಿಹಾಸ ನಮ್ಮದು ||೩||
ಕನ್ನಡ ನಾಡು-ನುಡಿಯ ಮಹತ್ವ ಸಾರುವ ಗೀತೆಗಳ ರಚನೆಯಲ್ಲಿ ಸಿ.ವಿ. ಶಿವಶಂಕರ್ ಅವರಿಗೆ ಅಗ್ರಸ್ಥಾನ. ಬದುಕಿನುದ್ದಕ್ಕೂ ಕನ್ನಡದ ವೈಭವವನ್ನೇ ಧ್ಯಾನಿಸುತ್ತ, ಪ್ರೀತಿಸುತ್ತ, ಆರಾಸುತ್ತ ಬಂದವರು ಶಿವಶಂಕರ್. ‘ತಾಯಿಯ ಹೊಣೆ’ ಚಿತ್ರದಲ್ಲಿ ಶಾಲಾ ಮಕ್ಕಳು ಹಾಡುವ ಸಂದರ್ಭಕ್ಕೆಂದು ಅವರು ಬರೆದ ಸುಂದರ ಗೀತೆ: ‘ನಾಡಚರಿತೆ ನೆನಪಿಸುವಾ ವೀರಗೀತೆಯಾ/ ಹಾಡು ನೀನು ಕನ್ನಡಿಗಾ ದೇಶಗೀತೆಯಾ…’ ಸೃಷ್ಟಿಯಾದ ಸಂದರ್ಭದಲ್ಲಿ ನಡೆದ ಸ್ವಾರಸ್ಯಕರ ಸಂಗತಿಗಳು ಒಂದೆರಡಲ್ಲ. ಅವುಗಳನ್ನು ಶಿವಶಂಕರ್ ಅವರೇ ರಸವತ್ತಾಗಿ ವಿವರಿಸಿದ್ದು ಹೀಗೆ:
‘ಇದು ೧೯೮೫ರ ಮಾತು. ನಿರ್ಮಾಪಕ ಅಬ್ಬಯ್ಯ ನಾಯ್ಡು ಅವರು ‘ತಾಯಿಯ ಹೊಣೆ’ ಚಿತ್ರದ ನಿರ್ಮಾಣ ಆರಂಭಿಸಿದ್ದರು. ತಮ್ಮ ನಿರ್ಮಾಣದ ಸಿನಿಮಾದಲ್ಲಿ ನಾಡು-ನುಡಿಯ ಮಹತ್ವ ಸಾರುವ ಸನ್ನಿವೇಶವಿದ್ದರೆ, ಅದಕ್ಕೆ ನನ್ನಿಂದಲೇ ಹಾಡು ಬರೆಸಬೇಕೆಂಬ ಹಟ ಅವರದಾಗಿತ್ತು. ಅದಕ್ಕೆ ಕಾರಣವೂ ಇಲ್ಲದಿರಲಿಲ್ಲ. ಅಬ್ಬಯ್ಯ ನಾಯ್ಡು ನಿರ್ಮಾಣದ ಮೊದಲ ಚಿತ್ರ ‘ಹೂವು-ಮುಳ್ಳು’. ಆ ಚಿತ್ರದ ಹಂಚಿಕೆ ಪಡೆಯಲು ಯಾರೂ ಮುಂದೆ ಬಂದಿರಲಿಲ್ಲ. ಆಗ, ನನ್ನ ಪರಿಚಯದ ಹಂಚಿಕೆದಾರರನ್ನು ಪುಸಲಾಯಿಸಿ ಅಬ್ಬಯ್ಯನಾಯ್ಡು ಅವರ ಸಿನಿಮಾದ ಹಂಚಿಕೆ ಪಡೆಯುವಂತೆ ಮನವೊಲಿಸಿದ್ದೆ. ಹೂವು-ಮುಳ್ಳು ಸಿನಿಮಾ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿತ್ತು. ಈ ಸೆಂಟಿಮೆಂಟನ್ನೇ ಜತೆಗಿಟ್ಟುಕೊಂಡಿದ್ದ ಅಬ್ಯಯ್ಯ ನಾಯ್ಡು, ನನ್ನ ಸಿನಿಮಾಕ್ಕೆ ಹಾಡು ಬರೆಯಿರಿ ಎಂದು ಸಿಕ್ಕಾಗಲೆಲ್ಲ ಒತ್ತಾಯಿಸುತ್ತಿದ್ದರು. ಅವರ ಒತ್ತಾಯಕ್ಕೆ ಕಟ್ಟುಬಿದ್ದು ‘ತಾಯಿಯ ಮಡಿಲಲ್ಲಿ’ ಚಿತ್ರಕ್ಕೆ ‘ಕನ್ನಡದಾ ರವಿ ಮೂಡಿ ಬಂದಾ…’ ಗೀತೆ ಬರೆದಿದ್ದೆ.
ಅದನ್ನೇ ನೆಪ ಮಾಡಿಕೊಂಡ ಅಬ್ಬಯ್ಯ ನಾಯ್ಡು, ತಾಯಿಯ ಹೊಣೆ ಚಿತ್ರಕ್ಕೂ ಒಂದು ಹಾಡು ಬರೆಯಿರಿ. ಉಳಿದ ಹಾಡುಗಳನ್ನು ಉದಯಶಂಕರ್ ಬರೀತಾರೆ ಅಂದ್ರು. ಸ್ವಾರಸ್ಯವೇನೆಂದರೆ, ಚಿ. ಉದಯ ಶಂಕರ್ ಮತ್ತು ನಾನು, ಒಂದೇ ಊರಿನವರು. (ತುಮಕೂರು ಜಿಲ್ಲೆ, ಗುಬ್ಬಿ ತಾಲೂಕಿನ ಚಿಟ್ಟನಹಳ್ಳಿ ನಮ್ಮ ಊರು), ಈ ಮೊದಲು ‘ತಾಯಿಯ ಮಡಿಲಲ್ಲಿ’ ಚಿತ್ರಕ್ಕೆ ನಾನು ಒಂದು ಹಾಡು ಬರೆದಾಗಲೂ, ಬಾಕಿ ಹಾಡುಗಳನ್ನು ಉದಯಶಂಕರ್ ಬರೆದಿದ್ದರು. ಉದಯಶಂಕರ್, ಅಪಾರ ಪ್ರತಿಭೆಯ ಗೀತೆರಚನೆಕಾರ. ಅವರ ಹಾಡು ಗಳು ‘ಅದ್ಭುತ’ ಎಂಬಂತಿರುತ್ತವೆ. ಅವುಗಳನ್ನು ಸರಿಗಟ್ಟುವಂಥ ಒಂದು ಹಾಡು ಬರೆಯಬೇಕು. ಹೇಗೆ ಶುರುಮಾಡುವುದು ಎಂದೆಲ್ಲಾ ಯೋಚಿ ಸುತ್ತಿದ್ದೆ. ಅದೇ ವೇಳೆಗೆ ಅಬ್ಬಯ್ಯ ನಾಯ್ಡು ಅವರು ಹಾಡು ಬರೆಯಲು ಮದ್ರಾಸಿಗೆ ಬರುವಂತೆ ರಿಸರ್ವೇಶನ್ ಟಿಕೆಟ್ ಕಳಿಸಿದರು.
ಶಾಲಾ ಮಕ್ಕಳು ಹಾಡಿ ಕುಣಿಯುವ ಸಂದರ್ಭಕ್ಕೆ ನೀವು ಹಾಡು ಬರೆಯಬೇಕು ಎಂದು ಅಬ್ಬಯ್ಯ ನಾಯ್ಡು ಮೊದಲೇ ತಿಳಿಸಿದ್ದರು. ಶಾಲಾ ಮಕ್ಕಳ ಗೀತೆ ಅಂದ ಮೇಲೆ, ಅದು ನಾಡಿನ ವೈಭವ ಸಾರು ವಂತೆಯೇ ಇರಲಿ ಎಂದು ನಿರ್ಧರಿಸಿದೆ. ಪಲ್ಲವಿ ಹೇಗಿರಬೇಕು? ಚರಣದಲ್ಲಿ ಏನೇನೆಲ್ಲ ಬರಬೇಕು ಎಂದು ಯೋಚಿಸುತ್ತ, ಮನದಲ್ಲೇ ಏನೇನೋ ಲೆಕ್ಕ ಹಾಕುತ್ತ ಮದ್ರಾಸಿನ ಬಸ್ ಹತ್ತಿದೆ.
ಬಸ್‌ನಲ್ಲಿ ಪಕ್ಕ ಕೂತಿದ್ದವರೊಬ್ಬರು ತುಂಬ ವಿಶ್ವಾಸದಿಂದ ಮಾತಾ ಡಿಸಿದರು. ‘ಶಿವಶಂಕರ್ ಅವರೇ, ನಿಮ್ಗೆ ನಾಡು-ನುಡಿಯ ಬಗ್ಗೆ ವಿಪ ರೀತ ಅಭಿಮಾನ ಅನ್ಸುತ್ತೆ. ಅದೇ ಕಾರಣದಿಂದ ಪ್ರತಿ ಚಿತ್ರದಲ್ಲೂ ನಾಡಿನ ಹಿರಿಮೆ ಸಾರುವ ಹಾಡುಗಳನ್ನು ಬರೆದಿದ್ದೀರಿ ಅನ್ಸುತ್ತೆ. ನಿಮ್ಮ ಗೀತೆಯಾತ್ರೆ ಹೀಗೆಯೇ ಸಾಗಲಿ. ಕನ್ನಡನಾಡಿನ ವೈಭವ ಹಾಡುಗಳ ಮೂಲಕ ಮನೆ ಮನೆ ತಲುಪಲಿ’ ಎಂದರು.
ಆ ಅನಾಮಿಕ ಜತೆಗಾರ, ಸಹ ಪ್ರಯಾ ಣಿಕನ ಈ ಅಭಿಮಾನದ ಮಾತು ಕೇಳಿ ದಾಗಲೇ ಹಾಡಿನ ಮೊದಲ ಸಾಲು ಹೊಳೆ ದುಬಿಟ್ಟಿತು. ತಕ್ಷಣವೇ, ಪ್ರಯಾಣದ ಸಂದ ರ್ಭದಲ್ಲಿ ಓದಲೆಂದು ಇಟ್ಟುಕೊಂಡಿದ್ದ ನ್ಯೂಸ್ ಪೇಪರಿನ ಮೇಲೆ ‘ನಾಡಚರಿತೆ ನೆನಪಿಸುವಾ ವೀರಗೀತೆಯಾ…’ ಎಂದು ಬರೆದುಕೊಂಡೆ. ಈ ಗೀತೆ ಹಾಡುವವರು ಕನ್ನಡದ ಕಂದಮ್ಮಗಳು ತಾನೆ ಅಂದುಕೊಂ ಡಾಗ-‘ಹಾಡು ನೀನು ಕನ್ನಡಿಗಾ ದೇಶ ಗೀತೆಯಾ’ ಎಂಬ ಇನ್ನೊಂದು ಸಾಲು ಹೊಳೆಯಿತು! ಬಸ್ಸಿನೊಳಗೇ ಹಾಡಿನ ಪಲ್ಲವಿ ಸಿದ್ಧವಾಗಿಹೋಯಿತು.
ಕನ್ನಡದ ಇತಿಹಾಸವನ್ನು, ಕನ್ನಡಕ್ಕೆ ಕೋಡು ಮೂಡಿಸಿದ ಮಹಾನು ಭಾವರ ಚರಿತ್ರೆಯನ್ನು ಚರಣಗಳಲ್ಲಿ ಹೇಳಬೇಕು ಅಂದುಕೊಂಡೆ. ಆಗಲೇ ಕಿತ್ತೂರು ಚೆನ್ನಮ್ಮ, ಮದಕರಿ ನಾಯಕ, ಕೆಂಗಲ್ ಹನುಮಂತಯ್ಯ, ಸರ್. ಎಂ. ವಿಶ್ವೇಶ್ವರಯ್ಯ, ಸಂಗೊಳ್ಳಿ ರಾಯಣ್ಣ ಮುಂತಾದ ಮಹಾಮಹಿಮರ ನೆನಪು ಬಂತು. ಅವರ ಸಾಧನೆಯ ಸಾಲುಗಳನ್ನೂ ಚರಣದಲ್ಲಿ ತಂದೆ. ಇದೆಲ್ಲಾ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿಯೇ ನಡೆದುಹೋಯಿತು.
ಮರುದಿನ ಚೆನ್ನೈನ ಜೆಮಿನಿ ಸ್ಟುಡಿಯೋಗೆ ಬಂದ ಸಂಗೀತ ನಿರ್ದೇ ಶಕ ಸತ್ಯಂ, ಕೆಲ ಸಮಯದ ನಂತರ ಅದ್ಭುತ ಎಂದು ಉದ್ಗರಿಸುವಂಥ ಟ್ಯೂನನ್ನೇ ಕೊಟ್ಟರು ನಿಜ. ಆದರೆ ಒಂದು ಯಡವಟ್ಟಾಗಿ ಹೋಗಿತ್ತು. ಚರಣದಲ್ಲಿ ‘ಹನುಮಂತಯ್ಯ ಕಟ್ಟಿದ ವಿಧಾನ ಸೌಧ ನೋಡಿದು’ ಎಂಬ ಸಾಲೊಂದಿತ್ತು. ಅದರಲ್ಲಿ ಹನುಮಂತಯ್ಯ ಎಂಬ ಪದ ರಾಗಕ್ಕೆ ಹೊಂದುತ್ತಿಲ್ಲ ಎಂದುಕೊಂಡು ‘ಯ್ಯ’ ಎಂಬುದನ್ನು ಕಿತ್ತುಹಾಕಿ ಹಾಡಿನ ಸಾಲಲ್ಲಿ ‘ಹನುಮಂತ’ ಎಂದಷ್ಟೇ ಬಳಸಿಬಿಟ್ಟಿದ್ದರು ಸತ್ಯಂ. ಆ ಪ್ರಕಾರವೇ ಹೋಗಿದ್ದರೆ ‘ಹನುಮಂತ ಕಟ್ಟಿದ ವಿಧಾನಸೌಧ ನೋಡಿದು’ ಎಂದು ಹಾಡಬೇಕಿತ್ತು. ಈ ವಿಷಯ ತಿಳಿದು ನನಗೆ ಶಾಕ್ ಆಯ್ತು. ತಕ್ಷಣವೇ ಸತ್ಯಂ ಅವರನ್ನು ಉದ್ದೇಶಿಸಿ ಹೇಳಿದೆ: ‘ಸಾರ್, ನೀವು ನೆರೆರಾಜ್ಯದವರು. ನಿಮಗೆ ಕನ್ನಡ ನಾಡಿನ ಗಣ್ಯರ ಹೆಸರೇ ಗೊತ್ತಿಲ್ಲ. ಹೀಗಿರುವಾಗ ನನ್ನ ಹಾಡಿನ ಸಾಲನ್ನೇ ವಿರೂಪಗೊಳಿಸುವುದು ಎಷ್ಟು ಸರಿ? ‘ಹನು ಮಂತಯ್ಯ ಕಟ್ಟಿದ ವಿಧಾನಸೌಧ ನೋಡಿದು’ ಎಂದು ನಾನು ಬರೆದರೆ ಅದನ್ನು ‘ಹನುಮಂತ ಕಟ್ಟಿದ ವಿಧಾನ ಸೌಧ ನೋಡಿದು’ ಅಂತ ಬದಲಿ ಸಿದ್ದೀರಲ್ಲ? ನೆನಪಿಟ್ಟುಕೊಳ್ಳಿ. ಹನುಮಂತ ಲಂಕೆಗೆ ಸೇತುವೆ ಕಟ್ಟಿದ. ನಮ್ಮ ಹನುಮಂತಯ್ಯ ವಿಧಾನಸೌಧ ಕಟ್ಟಿದ’ ಎಂದು ಜೋರು ಮಾಡಿದೆ.
ಆಗ ತಕ್ಷಣವೇ ಸತ್ಯಂ ಹೀಗೆಂದರು: ‘ನೀವು ಬರೆದಿರುವ ಸಾಲು ತಾಳಕ್ಕೆ ಹೊಂದಿಕೆಯಾಗುತ್ತಿಲ್ಲ. ಹಾಗಾಗಿ ಬೇರೆ ಬರೆದುಕೊಡಿ…’ ಸತ್ಯಂ ಅವರ ಮಾತನ್ನು ಅಲ್ಲೇ ಇದ್ದ ನಿರ್ದೇಶಕ ವಿಜಯ್ ಕೂಡಾ ಅನುಮೋದಿಸಿದರು. ಈ ಮಾತನ್ನು ನಾನು ಬಿಲ್‌ಕುಲ್ ಒಪ್ಪಲಿಲ್ಲ. ‘ನಾನು ಬರೆದಿರೋದು ಕನ್ನಡ ನಾಡು ಸದಾ ನೆನಪಿಡಬೇಕಾದವರ ಹೆಸರಗಳನ್ನು. ಅದನ್ನು ಬದಲಿಸಲಾರೆ. ಈಗ ಹನುಮಂತಯ್ಯ ಎಂಬುದನ್ನು ಬದಲಿಸಿದೆ ಅಂದುಕೊಳ್ಳಿ: ಅದಕ್ಕೂ ಮೊದಲೇ ವಿಶ್ವೇಶ್ವರಯ್ಯ ಎಂಬ ಪದ ಇದೆ. ಅದನ್ನೂ ಬದಲಿಸಿ ಅಂತೀರ ನೀವು. ಹೀಗೆ ಮಾಡಿದ್ರೆ ಹಾಡಿಗೆ ಯಾವ ಅರ್ಥ ಇರುತ್ತೆ? ಈ ಒಂದು ಹಾಡಿಗೆ ಮಾತ್ರ, ಸಾಹಿತ್ಯ ನೋಡಿಕೊಂಡೇ ಟ್ಯೂನ್ ಹಾಕಿ’ ಎಂದೆ.
ನನ್ನ ಮಾತನ್ನು ಸತ್ಯಂ ಒಪ್ಪಲೇ ಇಲ್ಲ. ಸರಿ, ಈ ವಿಷಯಕ್ಕೆ ನಮ್ಮ ನಮ್ಮಲ್ಲಿ ಜಗಳವೇ ಶುರುವಾಗಿಹೋಯಿತು. ಆ ವೇಳೆಗೆ ಮಧ್ಯೆ ಪ್ರವೇಶಿಸಿದವರು ಗಾಯಕಿ ಬಿ.ಆರ್. ಛಾಯಾ. ಅವರು, ‘ತಾಯಿಯ ಹೊಣೆ’ ಚಿತ್ರಕ್ಕೆ ಹಾಡಲೆಂದು ಮದ್ರಾಸಿಗೆ ಬಂದಿದ್ದರು. ಅವರು ರಿಹರ್ಸಲ್ ಆರಂಭಿಸುವ ಮೊದಲೇ ನಮ್ಮ ಜಗಳ ಶುರುವಾಗಿತ್ತು. ವಿಷಯ ಏನೆಂದು ತುಂಬ ಬೇಗ ಅರ್ಥಮಾಡಿಕೊಂಡ ಛಾಯಾ- ‘ಹನುಮಂತಯ್ಯ’ ಎಂಬ ಪದವನ್ನು ತಾಳಕ್ಕೆ ಸರಿಯಾಗಿ ಹೊಂದಿಸಿ ಕೊಂಡು ಹಾಡಬಹುದು ಎಂದು ತೋರಿಸಿಬಿಟ್ಟರು.
ಈ ಹಾಡನ್ನು ಪಿ. ಸುಶೀಲ, ಬೆಂಗಳೂರು ಲತಾ ಹಾಗೂ ಬಿ.ಆರ್. ಛಾಯಾರಿಂದ ಹಾಡಿಸುವುದೆಂದು ತೀರ್ಮಾನಿಸಲಾಗಿತ್ತು. ಬಿ.ಆರ್. ಛಾಯಾ ಕನ್ನಡತಿ. ಆಕೆಗೆ ನಮ್ಮ ನಾಡಿನ ಸಂಸ್ಕೃತಿಯ ಬಗ್ಗೆ ಚೆನ್ನಾಗಿ ಗೊತ್ತಿದೆ. ಹಾಗಾಗಿ ಆಕೆಯೇ ಮೊದಲಿಗಳಾಗಿ ಹಾಡಲಿ ಎಂದು ನಾನು ವಾದಿಸಿದೆ. ಪಿ. ಸುಶೀಲಾ ತುಂಬಾ ಹಿರಿಯ ಗಾಯಕಿ. ಹಾಗಾಗಿ ಅವರೇ ಮೊದಲು ಶುರುಮಾಡಲಿ ಎಂದು ಸತ್ಯಂ ಪಟ್ಟು ಹಿಡಿದರು. ಈ ಬಾರಿ ನಾನೇ ಸೋತೆ.
ಕೆಲ ದಿನಗಳ ನಂತರ, ಈ ಹಾಡಿನ ಚಿತ್ರೀಕರಣ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆಯುತ್ತಿದೆ ಎಂದು ತಿಳಿಯಿತು. ಕುತೂಹಲ ದಿಂದಲೇ ಅಲ್ಲಿಗೆ ಹೋದೆ. ಹೋದವನೇ, ಎದುರಿಗೆ ಕಂಡ ದೃಶ್ಯ ನೋಡಿ ತತ್ತರಿಸಿಹೋದೆ. ಏಕೆಂದರೆ, ನಿರ್ದೇಶಕ ವಿಜಯ್ ಅವರು, ಬಾಲನಟಿ ಬೇಬಿ ರೇಖಾಗೆ ರಾಣಿ ಚೆನ್ನಮ್ಮನ ವೇಷ ಹಾಕಿದ್ದರು. ಆ ವೇಷ ಹೇಗಿತ್ತು ಗೊತ್ತೆ? ಚೆನ್ನಮ್ಮನ ವೇಷಧಾರಿಯು ಹಣೆಯಲ್ಲಿ ಕುಂಕುಮವಿತ್ತು. ಕೊರಳಲ್ಲಿ ತಾಳಿಯಿತ್ತು!
ತಕ್ಷಣವೇ ನಿರ್ದೇಶಕ ವಿಜಯ್ ಅವರನ್ನು ಕರೆಸಿ ಕೇಳಿದೆ: ‘ ಸಾರ್, ರಾಣಿ ಚೆನ್ನಮ್ಮ ವಿಧವೆಯಾದ ನಂತರ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಇಳೀತಾಳೆ. ವಿಷಯ ಹೀಗಿರುವಾಗ ನೀವು ಆಕೆಯ ಪಾತ್ರಧಾರಿಗೆ ಹಣೆ ಯಲ್ಲಿ ಕುಂಕುಮ ಇಟ್ಟಿದ್ದೀರಿ. ಕೊರಳಲ್ಲಿ ತಾಳಿಯನ್ನೂ ಹಾಕಿದ್ದೀರಿ. ಹೀಗೇ ಚಿತ್ರೀಕರಿಸಿದರೆ ಅದು ನೋಡುವವರಿಗೆ ಆಭಾಸ ಅನ್ನಿಸು ವುದಿಲ್ಲವೇ?’
ವಿಜಯ್ ತಕ್ಷಣವೇ ತಪ್ಪು ಒಪ್ಪಿಕೊಂಡರು. ನನಗೆ ನಿಮ್ಮ ನಾಡಿನ ಇತಿಹಾಸದ ಬಗ್ಗೆ ಗೊತ್ತಿಲ್ಲ. ಹಾಗಾಗಿ ತಪ್ಪಾಗಿದೆ, ಕ್ಷಮಿಸಿ’ ಎಂದರು. ಆಗ ಅಲ್ಲಿದ್ದ ಅಬ್ಬಯ್ಯ ನಾಯ್ಡು ಅವರಿಗೆ ಹೇಳಿದೆ: ‘ಈ ಹಾಡಲ್ಲಿ ಮದಕರಿ ನಾಯಕ, ಸಂಗೊಳ್ಳಿ ರಾಯಣ್ಣ, ವಿಶ್ವೇಶ್ವರಯ್ಯ, ಕೆಂಗಲ್ ಹನುಮಂತಯ್ಯನವರ ಪ್ರಸ್ತಾಪವೂ ಬರುತ್ತದೆ. ಅವರ ವೇಷಭೂಷಣ ನೈಜವಾಗಿದ್ದರೆ ಆ ಸಂದರ್ಭ ಕಳೆ ಕಟ್ಟುತ್ತದೆ….’
ಈ ಮಾತು ಕೇಳಿದ ವಿಜಯ್-‘ ಈ ಹಾಡಿನ ನೃತ್ಯ ನಿರ್ದೇಶನವನ್ನು ನೀವೇ ಮಾಡಿಬಿಡಿ ಶಿವಶಂಕರ್’ ಎಂದರು. ಈ ಮಾತಿಗೆ ಅಬ್ಬಯ್ಯ ನಾಯ್ಡು ಕೂಡ ದನಿಗೂಡಿಸಿದರು. ಪರಿಣಾಮ, ಸುಮ್ಮನೇ ಶೂಟಿಂಗ್ ನೋಡಲೆಂದು ಹೋಗಿದ್ದ ನಾನು, ಹಾಡೊಂದರ ನೃತ್ಯ ನಿರ್ದೇಶನ ಮಾಡಿ ಬಂದೆ. ನಾಡಿನ ಹಿರಿಮೆ ಬಣ್ಣಿಸುವ ಹಾಡೊಂದನ್ನು ಬರೆದದ್ದು ಮಾತ್ರವಲ್ಲದೆ ಅದಕ್ಕೆ ನೃತ್ಯ ನಿರ್ದೇಶನವನ್ನೂ ಮಾಡಿದ ಹೆಮ್ಮೆ ನನಗಿದೆ…’
ಇಷ್ಟು ಹೇಳಿ ಹಾಡಿನ ಕಥೆಗೆ ‘ಶುಭಂ’ ಹೇಳಿದರು ಶಿವಶಂಕರ್…
ನಿಮ್ಮದೊಂದು ಉತ್ತರ